Monday, March 4, 2024

ಗೌಡ ಸಂಸ್ಕೃತಿ - ಪುಸ್ತಕ

 

ಮುನ್ನುಡಿ    - ಪ್ರೊ|| ಕೋಡಿ ಕುಶಾಲಪ್ಪ ಗೌಡ

ಬೇಸಾಯ ವೃತ್ತಿಯ, ಕಠಿಣ ಪರಿಶ್ರಮಿಗಳೂ, ಸ್ವಾವಲಂಬಿಗಳೂ, ಸ್ವಾಭಿಮಾನಿಗಳೂ, ನೀತಿ ನಿಯಮಪಾಲಕರು ಆದವರು ಗೌಡರು. ಗೌಡ ఎంబ ಪದದ ವ್ಯುತ್ಪತ್ತಿತ ಬಗ್ಗೆ ನಾನಾ ರೀತಿಯ ಊಹೆಗಳು ನಡೆದಿವೆ. ಇವರು ಮೂಲತಃ ಬಂಗಾಳದವರು, ಅಲ್ಲಿ ಕಬ್ಬು ಬೆಳೆಸಿ, ಬೆಲ್ಲ ತಯಾರಿಕೆಯ ಉದ್ಯೋಗ ಪ್ರಮುಖವಾಗಿತ್ತು. ಬೆಲ್ಲಕ್ಕೆ ಆರ್ಯನ್ ಭಾಷೆಯಲ್ಲಿ ಗುಡ ಎನುತ್ತಾರೆ, ಹಾಗೆ ಪ್ರಧಾನವಾಗಿ  ಬೆಲ್ಲ ತಯಾರಿಯಾಗುವ ನಾಡನ್ನು ಗೌಡ ದೇಶವೆಂದು ಗುರುತಿಸಿದುದರಿಂದ ಬಂಗಾಳಕ್ಕೆ ಆ ಹೆಸರಾಯಿತು ಸಹಜವಾಗಿ ಗೌಡ ದೇಶದ ಜನರು ಗೌಡರು ಎಂದಾದರು.

ಕಲ್ಲಾಗಿರಬೇಕು ಕಠಿಣ ಭವ ತೊರೆಯೊಳಗೆ, ಬೆಲ್ಲವಾಗಿರಬೇಕು ಬಲ್ಲವರೊಡನೆ' ಎಂಬ ಮಾತಿಗನುಸರಿಸಿಯೇ ಹೆಚ್ಚಿನ ಗೌಡರ ವರ್ತನೆ ಕಂಡು ಬರುವುದೇನೋ ನಿಜವಾದರೂ ದಾಖಲೆಯ ಆಧಾರವಿಲ್ಲದೆ ಇರುವುದರಿಂದ ಇದನ್ನು ನಿಜವೆಂದು ಒಪ್ಪಲು ಸಾಧ್ಯವಿಲ್ಲ. ಇನ್ನೊಬ್ಬರು ದೊಡ್ಡ ಸಂಸ್ಕೃತ ವಿದ್ವಾಂಸರಾದ ದಿ|| ಕಡವ ಶಂಭು ಶರ್ಮರು ಗೌಡರು ಹಿಂದೆ ಗೋಪಾಲಕರಾಗಿದ್ದರು. ಗೋ + ಆಟ- ಗೋವಾಟ-ಗೌಡ ಎಂದಾಗಿರಬೇಕು ಎಂದು ಹೇಳಿದ್ದರು. ಇದೂ ಊಹೆಯ ನೆಲೆಯಲ್ಲಿಯೇ ನಿಲ್ಲುತ್ತದೆ.ಮುದುಕ ಎಂಬ ಶುದ್ಧ ಕನ್ನಡ ಪದವನ್ನು 'ಮುದಂ ಕರೋತಿ  ಮುದುಕಃ ಎಂದು ಹೇಳುವ ಸಂಸ್ಕೃತ ಪ್ರಿಯರು ಇದ್ದಾರೆ. ಪ್ರಾಚೀನ ಕನ್ನಡ ಶಾಶನಗಳಲ್ಲಿ ಸಾಮಾಜಿಕ ವ್ಯವಸ್ಥೆಯ ಅಧಿಕಾರ ಸ್ಥಾನವನ್ನು ಕುರಿತು ಹೇಳುವಾಗ 'ಗ್ರಾಮ ವೃದ್ಧ' ಎಂಬ ಪದ ಹಲವೆಡೆ ಕಂಡು ಬರುತ್ತದೆ. ಗ್ರಾಮದ ಹಿರಿಯ ಎಂಬ ಒಂದು ಅಧಿಕಾರ ಸ್ಥಾನವನ್ನು ನಿರ್ದೇಶಿಸುವ ಈ ಸಂಸ್ಕೃತ ಪದ ಪ್ರಾಕೃತ  ಭಾಷೆಯಲ್ಲಿ ಗ್ರಾಮ ವುಡ್ದ ಎಂದಾಗಿ ಮುಂದೆ  ಗ್ರಾಮುಡ್ಡ: ಗಾಮು೦ಡ, ಗಾವುಂಡ, ಗವುಂಡ, ಗೌಡ ಎಂಬ ರೂಪಗಳು ಕಾಲ ಕ್ರಮದಲ್ಲಿ ಕಂಡು ಬರುತ್ತವೆ. ಇವೆಲ್ಲ ಶಿಲಾಶಾಸನಗಳಲ್ಲಿ ಕಂಡು ಬರುವ ರೂಪಗಳು . ಗಾಮದ ಒಂದು ಅಧಿಕಾರವನ್ನು ಸೂಚಿಸುವಂಥದ್ದು ಮತ್ತೆ ಆ ಸಂತತಿ ಯವರಿಗೆಲ್ಲ ಅನ್ವಯಿಸಿ ಒಂದು ಜಾತಿಯ ಹೆಸರಾಗಿ ಬಳಕೆಗೆ ಬಂದಿದೆ. 

ಆರ್ಯನ್  ವರ್ಗದ ಜನರಲ್ಲಿ ಋಷಿಗಳ ಮೂಲಕ  ಗೋತ್ರಗಳನ್ನು ಗುರುತಿಸುತ್ತಾರೆ, ಗೋತ್ರ ಅಂದರೆ ಗೋವುಗಳ ರಕ್ಷಣೆಗಿರುವ ಸ್ಥಳ ಗೋ ಸಮೂಹ ಎಂದೆಲ್ಲ ಅರ್ಥವಿದೆ. ಆರ್ಯರು ತಮ್ಮ ಸಂಪತ್ತಾದ ಅಥವಾ ಜೀವನಾಧಾರವಾದ, ಗೋ ಸಮೂಹಗಳನ್ನು ಹೊಡೆದುಕೊಂಡು ಮೇವಿರುವೆಡೆಗೆಲ್ಲ ಸಂಚರಿಸುತ್ತಿದ್ದ ಮಂದಿ. ಹೊ. ಇಂತಹ ಒಂದು ಗುಂಪು ಒಂದು ಗೋತ್ರವೇನಿಸುತ್ತಿತ್ತು. ಆ ಗುಂಪು ಯಾರಿಗೆ ಸ್ವಂತವಾಗಿದೆಯೋ ಅದು ಅವನ ಹೆಸರಿನ ಗೋತ್ರವೆನಿಸುತ್ತಿತ್ತು. ಗೌಡರಲ್ಲಿ ಈ ವ್ಯವಸ್ಥೆಯಿರಲಿಲ್ಲವಾದುದರಿಂದ 'ಗೋತ್ರ' ಎಂದು ನಾವು ಹೇಳಿಕೊಳ್ಳುವ ಹತ್ತುಕುಟುಂಬ, ಹದಿನೆಂಟು ಗೋತ್ರ'ವೆಂಬಲ್ಲಿ  ಗೋತ್ರವೆಂಬುದರ  ಅರ್ಥ ಬಳಿ'ಯೆಂಬುದರಷ್ಟು ಹೊಂದಿಕೊಳ್ಳುವುದಿಲ್ಲ.ಆದರೆ ಮಾತಿನಲ್ಲಿ ಹೇಗೋ ಬಂದುಬಿಟ್ಟಿದೆ. ಬಳಿ (ಬ) ಎಂಬುದಕ್ಕೆ 'ಹತ್ತಿರ' 'ಸಮೀಪ  “ಮುಂದುವರಿವ' ಎಂಬಿತ್ಯಾದಿ ಮೂಲಾರ್ಥವಿದ್ದರೂ  ಸಂಸ್ಕೃತ ಪದ “'ಗೋತ್ರ ' “ವಂಶ” “ಕುಲ ಎಂಬ ಸಾಮಾನ್ಯ ಅರ್ಥವನ್ನೇ  ನಾವೂ ನಮ್ಮ ವಾಡಿಕೆಯಲ್ಲಿ ಬಳಸುತಿದ್ದೇವೆ. 

ಗೌಡರು ಏನೋ ಕಾರಣದಿಂದ ಐಗೂರು ಸೀಮೆಯಿಂದ ಘಟ್ಟವಿಳಿದು ತುಳುನಾಡಿನ  ಕಡೆಗೆ ವಲಸೆ ಬಂದರು. ಹಾಗೆ ವಲಸೆ ಬಂದವರು ಹತ್ತು ಕುಟುಂಬಕ್ಕೆ ಸೇರಿದ ಜನರು . ಈ ಹತ್ತು ಕುಟುಂಬಗಳಲ್ಲಿ ಮೊದಲು ಹತ್ತು ಬಳಿಗಳೆ  ಇದ್ದಿರಬಹುದು  ತಮ್ಮ ಸಮೂಹಕ್ಕೆ ಇತರ ಕೆಲವರನ್ನು ಸೇರಿಸಿಕೊಳ್ಳಬೇಕಾದ ಅಗತ್ಯ ತೋರಿ ಬಂತು, ಹಾಗೆ ಹೊಸಬರನ್ನೂ  ಒಂದೊಂದು ವ್ಯವಸ್ಥಿತ  ಗುಂಪುಗಳಾಗಿ ಮಾಡಿ ಅದಕ್ಕೊಂದು ಹೆಸರನ್ನು ಕೊಟ್ಟು ತಮ್ಮ ಜಾತಿಯ  ಪರಿಧಿಯಲ್ಲಿ ಸೇರಿಸಿಕೊಂಡು ವಿಸ್ತರಿಸಿದ ಸಮಾಜದಲ್ಲಿ ಗೋತ್ರ ಹತ್ತು ಇದ್ದದ್ದು ಹದಿನೆಂಟಾಗಿ ವಿಸ್ತರಿಸಿತು. ವಲಸೆ ಬಂದವರು ಹೊಸ ಜಾಗದಲ್ಲಿ ಪರಕೀಯರಂತಿರುತಾರೆ ಸ್ಥಳೀಯರಾದವರಿಂದ ದಬ್ಬಾಳಿಕೆಯನ್ನು ಎದುರಿಸುವ ಸಂಧರ್ಭವು ಇರಬಹುದು. ಹೀಗಿದ್ದರೆ ತಮ್ಮಲ್ಲಿ ತಕ್ಕಷ್ಟು ಸಂಖ್ಯಾಬಲವು ಬೇಕಾಗುತದೆ ಈ ಕಾರಣದಿಂದ ವಿಸ್ತರಿಸಿದ ಆಗಿನ ಕಾಲದ ನಮ್ಮ ಸಮಾಜದವರು ಸಾಮಾಜಿಕ ನಡವಳಿಕೆಗಳನ್ನು ರೂಪಿಸಿಕೊಳ್ಳಲು ಶೃಂಗೇರಿಯ ಗುರುಪೀಠವನ್ನೇ ಅವಲಂಬಿಸಿದರು. ಆ ಬಹುಜನ ಸಮುದಾಯಗಳಿಗೆಲ್ಲ ಇದ್ದ ಏಕೈಕ ಗುರುಪೀಠ ಶೃಂಗೇರಿ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣಕರ್ತರಾದ ಮಹಾಪುರುಷ ಮಾಧವಾಚಾರ್ಯರೇ ವಿದ್ಯಾರಣ್ಯರೆಂಬ ಹೆಸರಿನ ಯತಿಗಳಾಗಿ ಮುಂದೆ ಶೃಂಗೇರಿಯ ಗುರುಪೀಠವನ್ನೇರಿದರೆಂಬ ಪ್ರತೀತಿಯಿದೆ. ವಿಜಯನಗರದ ಪ್ರತಿಯೊಬ್ಬ ಅರಸನೂ ಶೃಂಗೇರಿಪೀಠಕ್ಕೆ ದತ್ತಿದಾನಗಳನ್ನು ಕೊಟ್ಟು ಗೌರವಿಸಿದ್ದಾನೆ. ಈಗಲಾದರೆ ಜಾತ್ಯತೀತವೆಂದು ಕರೆದುಕೊಳ್ಳುವ ನಮ್ಮ ದೇಶದಲ್ಲಿ ಒಂದೊಂದು ಜಾತಿಗೆ ಒಂದೊಂದು ಗುರುಪೀಠ ಬೇಕೆಂದು ಮಾಡಿಕೊಂಡಿರುವುದು ಕಂಡು ಬರುತ್ತದೆ.

ಸ್ವಜಾತಿಗೇ ಮೀಸಲಾದ ಗುರುಪೀಠವಿಲ್ಲದಾಗ ಶೃಂಗೇರಿ ಪೀಠದ ಗುರುಗಳೇ ನಿರ್ದೇಶಿಸಿದ ಗೌಡರ ಸಾಮಾಜಿಕ ನಡವಳಿಕೆಗಳನ್ನೂ ಹಿಂದಿನಿಂದಲೂ ನಮ್ಮವರು ಪಾಲಿಸುತ್ತ ಬಂದಿದ್ದಾರೆ. ಮುಖ್ಯವಾಗಿ 'ಬಳಿ' ಅಥವಾ 'ಗೋತ್ರ' ನಿಯಮಾನುಸಾರ, ಒಂದೇ ಗೋತ್ರಕ್ಕೆ ಸೇರಿದವರೊಳಗೆ ಮದುವೆ ನಡೆಯಬಾರದೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತ ಬಂದಿದ್ದರೂ ಒಂದೆರಡು ಕಡೆಗಳಲ್ಲಿ ಅತಿಕ್ರಮಣವಾದ ಸಂಗತಿಗಳು ಕಂಡು ಬರುತ್ತವೆ. ಈಗ ಹೊಸ ಕಾಲ. ವಿದ್ಯಾಭ್ಯಾಸ ಹೆಚ್ಚಿದೆ. ಶ್ರೀಮಂತಿಕೆಯೂ ಬಂದಿದೆ. ಈಗ ಎದ್ದು ಕಾಣುವ ಸಂಗತಿಯೆಂದರೆ ಯಾರಿಗೂ ಯಾವುದಕ್ಕೂ ಸಮಯವಿಲ್ಲದಾಗಿರುವುದು. ಹೀಗಾಗಿ ಮದುವೆಯೆಂಬುದು ಹಿಂದೆ ಮೂರು-ನಾಲ್ಕು ದಿನಗಳ ಸಂಭ್ರಮವಾದರೆ, ಈಗ ಸಿನೆಮಾದಲ್ಲಾದಂತೆ, ಯಾವುದೋ ಒಂದು ಕಲ್ಯಾಣಮಂಟಪದಲ್ಲಿ ಒಂದೆರಡು ಗಂಟೆಗಳಲ್ಲಿ ಮುಗಿದು ಹೋಗುತ್ತದೆ. ಅನೇಕ ಆಚರಣೆಗಳು ಅನಗತ್ಯವೆಂದು ತೊಡೆದು ಹಾಕಿ ಬಿಡುತ್ತಾರೆ.

ಹೀಗೆ ವಲಸೆ ಬಂದ ಗೌಡರಲ್ಲಿ ಎರಡು ಪಾಲಾಯ್ತು. ಒಂದು ಗುಂಪು ಪಶ್ಚಿಮಾಭಿಮುಖವಾಗಿ ಈಗ ದಕ್ಷಿಣ ಕನ್ನಡವೆಂದು ಕರೆಯುವ ಸೀಮೆಯ ಕಡೆಗೆ ಹರಿಯಿತು. ಇನ್ನೊಂದು ಪೂರ್ವಾಭಿಮುಖವಾಗಿ ಕೊಡಗು ಸೀಮೆಯ ಕಡೆಗೆ ಹರಿಯಿತು. ಕೊಡಗು ಸೀಮೆಯಲ್ಲಿ ಜನವಸತಿ ಕಡಿಮೆ. ಕಾಡು ಹೆಚ್ಚು. ಆಗಿನ ಕಾಲದ ಅರಸರು ಇಲ್ಲಿಗೆ ಜನರು ಬಂದು ನೆಲೆಸುವುದನ್ನು ಪ್ರೋತ್ಸಾಹಿಸಿ ಸಹಾಯ ಕೊಡುತ್ತಿದ್ದರು. ಇಲ್ಲಿಗೆ ಬಂದವರು ಕಾಡನ್ನು ಕಡಿದು ಗದ್ದೆ-ತೋಟಗಳನ್ನು ಮಾಡಿ ಸ್ವಂತ ಭೂ ಹಿಡುವಳಿದಾರರಾದರು. ಸಿರಿ ಸಂಪನ್ನರೂ ಆದರು. ದಕ್ಷಿಣಕನ್ನಡದ ಕಡೆಗೆ ಹೋದವರಿಗೆ ಈ ಸೌಲಭ್ಯ ದೊರೆಯದೆ ಅಲ್ಲಿ ಮೊದಲೇ ನೆಲೆಸಿದ್ದ ದೊಡ್ಡ ಭೂ ಮಾಲಿಕರಿಂದ ಹಿಡುವಳಿಗಳನ್ನು ಗೇಣಿಗೆ ಪಡೆದು ಬೇಸಾಯಗಾರರಾದರು. ಸ್ಥಳೀಯ ಪ್ರಬಲ ಭಾಷೆಯಾದ ತುಳುವಿನ ಪ್ರಭಾವಕ್ಕೆ ಒಳಗಾಗಿ, ಒಂದೆರಡು ತಲೆಮಾರು ಕಳೆಯುವಷ್ಟರಲ್ಲಿ ತುಳುವೇ ಅವರಿಗೆ ಮಾತೃಭಾಷೆಯಾಯಿತು.

ಹೀಗೆ ಗೌಡರಲ್ಲಿ ತುಳು ಮಾತಾಡುವವರು ಮತ್ತು ಕನ್ನಡದ ಒಂದು ಪ್ರಭೇದವನ್ನು ಅರೆಬಾಸೆ ಮಾತಾಡುವವರೆಂದು ಎರಡು ವಿಭಾಗಿಸಿದಂತೆ ತೋರಿದರೂ ಸಾಮಾಜಿಕ ಕಟ್ಟುಪಾಡುಗಳು ಆಚರಣೆಗಳು, ಸಂಪ್ರದಾಯಗಳಲ್ಲಿ ಏನೊಂದೂ ಭೇದ ಕಾಣಿಸಲಿಲ್ಲ. ಆಂತರಿಕ ಸಾಮಾಜಿಕ ವ್ಯವಸ್ಥೆಯನ್ನು ಗುರುಪೀಠದಿಂದ ನಿಯುಕ್ತರಾದ ಅಧಿಕಾರಿ ವರ್ಗದವರು, ಎಲ್ಲ ಕಡೆಯೂ ಸರಿಯಾಗಿ ತಮ್ಮ ಕರ್ತವ್ಯ ಪಾಲಿಸಿದ್ದೇ ಹೀಗಿರಲು ಕಾರಣವಾಗಿರಬೇಕು. ತೋರ ಮಟ್ಟಿಗೆ ಹೋಗಿದ್ದರೂ ಕೆಲವು ಅನಿವಾರ್ಯ ಕಾರಣಗಳಿಂದ ಅಲ್ಲಲ್ಲಿ ಕೆಲವು ವ್ಯತ್ಯಾಸಗಳು ಆಚರಣೆಯಲ್ಲಿ ಸಂಪ್ರದಾಯದಲ್ಲಿ ಕಂಡು ಬರುತ್ತವೆ ಎಂದು ಗೌಡ ಯುವ ಸೇವಾ ಸಂಘದ ಗ್ರಾಮ ಸಭೆಗಳು ಸುಮಾರು 30 ಕಡೆ ನಡೆದಾಗ ಆ ಊರುಗಳ ಮುಂದಾಳುಗಳು ಯುವ ಸೇವಾ ಸಂಘದವರ ಗಮನಕ್ಕೆ ತಂದಾಗ ಹಿಂದಿನ ಕ್ರಮಗಳು ಅಳಿಸಿ ಹೋಗದಂತೆ ಅಥವಾ ಮುಂದಿನ ತಲೆಮಾರಿಗೆ ಸರಿಯಾದ ಕ್ರಮ ಯಾವುದೆಂದು ತಿಳಿಸಿ ಕೊಡಲು ಎಲ್ಲವನ್ನೂ ಒಂದು ನಿರ್ಧಿಷ್ಟ ಸೀಮೆಗೆ ಅಳವಡಿಸಿ ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಶ್ಲಾನ್ಯ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ ಎಂಬುದನ್ನು ನಾನು (ಅವರನ್ನು) ಹಾರ್ದಿಕವಾಗಿ ಅಭಿನಂದಿಸುತ್ತೇನೆ. ಬೇರೆಡೆಯಲ್ಲಿ ಭೇದ ಕಂಡು ಬಂದರೆ ಅಲ್ಲಿಯ ಬಂಧುಗಳು ಸೇರಿ, ಹೀಗೆಯೇ ಒಂದು ಪ್ರಕಟಣೆಯನ್ನು ಹೊರತರಬೇಕು. ಆ ಮೇಲೆ ಅಂಥ ಎಲ್ಲ ಆಕರಗಳನ್ನು ಪರಿಶೀಲಿಸಿ (Standard) ಕೈಫಿಡಿ ಹೊರ ಬರುವಂತಾಗಬೇಕು. ಗೌಡ ಯುವ ಸಂಘ ಇಡುವ ಈ ಮೊದಲ ಹೆಜ್ಜೆ - ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ಬಹುದೂರ ಸಾಗಲಿ. ಕುಲಬಾಂಧವರು ಅಭಿಮಾನದಿಂದ ಅವರ ಉತ್ಸಾಹವನ್ನು ಪ್ರೋತ್ಸಾಹಿಸಲಿ. ಮುನ್ನುಡಿ ರೂಪದಲ್ಲಿ ಬರೆದ ಈ ನಾಲ್ಕು ಮಾತುಗಳಲ್ಲಿ ಒಳಗೆ ಏನೇನಿದೆಯೆಂದು ವಿಮರ್ಶಾಪೂರ್ವಕ ಬಯಲು ಮಾಡಲಿಲ್ಲ. ಎಲ್ಲವೂ (ಹುಟ್ಟಿನಿಂದ ಸಾವಿನವರೆಗಿನದು) ಇವೆ. ನೀವೇ ಓದಿ ನೋಡಿ ಎಂದು ವಿನಂತಿಸಿ, ನನ್ನಿಂದ ಈ ನುಡಿಗಳನ್ನು ಬರೆಸಿದ ಸಂಘದ ಸದಸ್ಯರಿಗೆ ವಂದಿಸಿ, ಎಲ್ಲರಿಗೂ ಶುಭ ಕೋರಿ ಮುಗಿಸುತ್ತೇನೆ

ಭದ್ರಂ ಶುಭಂ ಮಂಗಳಂ

ಪ್ರೊ. ಕೋಡಿ ಕುಶಾಲಪ್ಪ ಗೌಡ

Page1

ತುಳುನಾಡಿಗೆ ಗೌಡರ ವಲಸೆಯು ಕ್ರಿ.ಶ. 1450 ರಿಂದ 1520 ರ ಅವಧಿಯಲ್ಲಿ ಹಂತ ಹಂತವಾಗಿ ಆಗಿರಬಹುದೆಂದು ಇತಿಹಾಸ ತಜ್ಞರ ಅಭಿಮತವಾಗಿದೆ. ಗೌಡ ಜನಾಂಗವು ಸುಳ್ಯ, ಪುತ್ತೂರು, ಬೆಳ್ತಂಗಡಿ, ವಿಟ್ಲ, ಬಂಟ್ವಾಳ ತಾಲೂಕುಗಳಲ್ಲಿ ಸಾಮಾನ್ಯವಾಗಿಯೂ ಕಾಸರಗೋಡಿನ ಬಂದಡ್ಕ ಕಡೆ ವಿರಳವಾಗಿಯೂ ನೆಲೆಸಿದ್ದಾರೆ. ಕೊಡಗಿನಲ್ಲಿ ಕೊಡಗರಸರ ಕಾಲದಲ್ಲಿ "ಕುಳ ನಷ್ಟವಾಗಿದ್ದು" ಜಮ್ಮಾ ಹಿಡಿದು ನೆಲೆಯಾಗಿದ್ದಾರೆ. ಮುಖ್ಯವಾಗಿ ಇವರು ಬಯಲು ಸೀಮೆಯಿಂದ ಹಾಸನದ ಐಗೂರು ಸೀಮೆ ಹಾಗೂ ಸರಹದ್ದುಗಳಿಂದ ವಲಸೆ ಬಂದರೆಂಬ ಪ್ರತೀತಿಯಿದೆ. ಪರಂಪರೆಯ ಮಾತಿನಲ್ಲಿ ಚಿನ್ನದ ಹೆಸರಿನ ಹರಿಯುವ ನೀರಿನ ಆಶ್ರಯದ - ಚಿನ್ನದಂತಹ ಬೆಳೆ ಭಾಗ್ಯ ಪಡೆಯುತ್ತಿದ್ದು ಚಿನ್ನದ ನಾಮಾಂಕಿತ ಹೊಂದಿದ ಶಕ್ತಿ ಆರಾಧನೆಯ ಚಿನ್ನದ ಹೆಸರನ್ನು ಧರಿಸುವ ಅನುಭವಿಸುವ ನಾಡು ಎಂದಾಗಿದೆ. ಇದು ಹೇಮಾವತಿ ನದಿ ಪರಿಸರ ಹಾಗೂ “ಹೊಸಕೋಟೆ ಕೆಂಚಮ್ಮ” ಸಾನಿಧ್ಯವೆನಿಸಿದೆ. ಇಂತಹ ಸುಭಿಕ್ಷ ಕಾಲದಲ್ಲಿ ಒಮ್ಮೆ ಅತೀವ ಬರಗಾಲ ಬಂದು ಹೇಮಾವತಿ ನದಿ ಬತ್ತಿ ಹೋಗಿ ಕೃಷಿ ಕಾಯಕಕ್ಕೆ ಸಾಧ್ಯವಾಗದೆ ಗೋವುಗಳ ಪಾಲನೆಗೆ ತೊಡಕಾಗಿ ಜೀವಿಸಲು ಜನಗಳಿಗೆ ಕಷ್ಟವಾಯಿತು. ಅಲ್ಲದೆ ಅಂದಿನ ಪಾಳೇಗಾರ ರಂಗಪ್ಪನಾಯಕನೆನ್ನುವ ಐಗೂರು ಸೀಮೆಯ ಆಡಳಿತದಾರನು ಕ್ರೂರವಾಗಿ ವರ್ತಿಸಿದ್ದರಿಂದ ಒಕ್ಕಲುತನ ಮಾಡಲು ಅಸಾದ್ಯವಾಯಿತು ಎನ್ನಲಾಗಿದೆ. ತುಳುನಾಡಿನಲ್ಲಿ
ಕೃಷಿಕಾಯಕಕ್ಕೆ ವಿಫುಲ ಸ್ಥಳಾವಕಾಶಗಳಿದ್ದು ಇಲ್ಲಿಯ ಮೇಲ್ವರ್ಗದ ಊಳಿಗಕ್ಕಾಗಿ ಬಂದಿದ್ದು ಮುಂದೆ ಅನುಕೂಲ ವಾತಾವರಣದಲ್ಲಿ ಹೊಂದಿಕೊಂಡರು. ಇಲ್ಲಿ ಬೇಸಾಯದೊಂದಿಗೆ ರಾಗಿ ಬೆಳೆಯಲ್ಲಿ ಪ್ರಸಿದ್ಧರಾದರು. ಮುಂದೆ ಮಾತೃ ಭಾಷೆಯ ಪರಿವರ್ತನೆಯಾಗಿ ಅರೆಭಾಷೆ ಎನಿಸಿತು. ಇಲ್ಲಿಯ ಪರಿಸರ ಭಾಷೆ ತುಳು ಅಗತ್ಯವೆನಿಸಿತ್ತಾದರೂ ಈ ಪರಿಸರದಲ್ಲಿಯ ಪರಿಸ್ಥಿತಿಗೆ ನಿಧಾನವಾಗಿ ಹೊಂದಿಕೊಳ್ಳಬೇಕಾಯಿತು. ಇಲ್ಲಿಯ “ಮಾತೃಪ್ರಧಾನ” ಪರಂಪರೆಯಲ್ಲಿ ತನ್ನತನ ಉಳಿಸಿ ಬೆಳೆಸಬೇಕಾಗಿತ್ತು.

ತುಳುನಾಡಿನಲ್ಲಿ ಭಂಗರಸರ ಸಂಸ್ಥಾನದಲ್ಲಿ ಹೆಚ್ಚಾಗಿ ಈ ಒಕ್ಕಲಿಗರು ತಮ್ಮ ನೆಲೆಯನ್ನು ಸ್ಥಾಪಿಸಿಕೊಂಡರು. ಹೆಚ್ಚಿನ ಕೃಷಿ ಭೂಮಿ ಮೇಲ್ವರ್ಗದವರ ಸ್ವಾಧೀನವಿದ್ದು ಉಳುಮೆಗಾಗಿ ಪಡಕೊಂಡು ಮುಂದುವರಿದರು. ಗೌಡ ಜನಾಂಗಕ್ಕೆ ಪೂರ್ಣ ಅನುಕೂಲವಾಗಿ ಕೆಳದಿ ನಾಯಕರ ಅಧಿಕಾರದಲ್ಲಿ ತುಳುನಾಡು ಇತ್ತಲ್ಲದೆ, ಕೆಳದಿಯರಸರು ಗೌಡ ಸಮುದಾಯದವರಾಗಿದ್ದು ವಿಜಯನಗರದರಸರ ಮೂಲಕ ಕೆಳದಿಯ ನಾಯಕರು ಆಡಳಿತ ನಡೆಸುತ್ತಿದ್ದರು.

ಮೂಲದಲ್ಲಿ ಒಕ್ಕಲಿಗ, ಲಿಂಗಾಯ್ತ ಮತಸ್ಥರಾಗಿ ಗುರುತಿಸಿಕೊಂಡು ನಂತರ ಗೌಡರಾಗಿ ಪರಿವರ್ತನೆಯಾದ ಐತಿಹ್ಯಗಳು ಇವೆ. ಕೂಡು ಕುಟುಂಬದವರಾಗಿ ಭೂಮಿ ಸಂಬಂಧ ಕೃಷಿ ಉದ್ದೇಶದಲ್ಲಿ ಹಿಂದೆ ಇಲ್ಲಿಯವರು ದೈವ ದೇವರ ಆರಾಧನೆ ಮಾಡುತ್ತಿದ್ದು ಹಂತ ಹಂತವಾಗಿ ಊರಿನ ಅಧಿಕಾರಗಳು ಲಭಿಸುವಂತಾಯಿತು. ಹಿಂದೆ ಸಾಮಾಜಿಕ ನೆಲೆಗಟ್ಟಿಗೆ ವ್ಯವಸ್ಥೆ ಇದ್ದ ಸ್ಥಳ ಮನೆ (ಗುರು ಮನೆ- ಪುರೋಹಿತ ವರ್ಗ) ನಡುಮನೆ (ಆಡಳಿತ ವರ್ಗ), ದೊಡ್ಡ ಮನೆ (ಆಡಳಿತ ನಡೆಸುವ), ಮುಂತಾದ ಸ್ಥಾನ ಮಾನಗಳಲ್ಲಿ ದೊಡ್ಡಮನೆ ಸಂಪ್ರದಾಯವು ಗೌಡ ಕುಟುಂಬಗಳಿಗೂ ಬಂತು. ನಂತರದ ಕಾಲದಲ್ಲಿ ಬದಲಾವಣೆಗೊಂಡು ಶೃಂಗೇರಿ ಮಠದ ಆಜ್ಞಾನುವರ್ತಿಗಳಾದರು (ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧ ಪಟ್ಟ ಆಧಾರ ಗ್ರಂಥ -ಪರ್ಲ ಆನಂದ ಗೌಡರು).

Page 2
ಗೌಡರು ತುಳುನಾಡಿನಲ್ಲಿ ಸಾಮಾಜಿಕವಾಗಿ ಬಳಿ ಸಂಪ್ರದಾಯ ಹೊಂದಿದವರಾಗಿದ್ದು ಭಿನ್ನ ಬಳಿಗಳಲ್ಲಿ ಮದುವೆ ಮುಂತಾದ ಸಂಬಂಧಗಳು ನಡೆಯುತಿದ್ದು ತುಳುನಾಡಿನಲ್ಲಿ ಮಾತ್ರ ಮೂಲದಿಂದ ಕುಟುಂಬ ನೆಲೆಯಲ್ಲಿದ್ದು ಮುಖ್ಯವಾಗಿ ಗೌಡರಿಗೆ ಪಿತೃ ಮೂಲವಾಗಿದ್ದು ಸಾಮಾಜಿಕತೆಗೆ ಬಳಿ ಭಾಂಧವ್ಯವೇ ಬೇಕಾಗಿದ್ದು ಅರಮನೆ ಅಧಿಕಾರದಿಂದ ಪಡೆಯಲಾಯಿತು. ಶೃಂಗೇರಿ ಗುರುಪೀಠದ ಆಣತಿಯಂತೆ ದೇವಾಲಯಗಳ ಮೂಲಕ ಇಲ್ಲಿಯ ಸಾರಯಿತು ಶ್ವಾಹ್ಮಣರಲ್ಲಿ ಆಚಾರ-ವಿಚಾರ ಹಕ್ಕು ತಪ್ಪು-ಒಪ್ಪು ಕಾಣಿಕೆ ಮುಂತಾದ ನೈತಿಕ ಕಟ್ಟು ನಾಡುಗಳಿದ್ದವು. ಅಂತಯೇ ಶೃಂಗೇರಿ ಗುರುಪೀಠದ ಆಣತಿಯಂತೆ ಗೌಡ ಜನಾಂಗದ ಉನ್ನತಿಗಾಗಿ ನೈತಿಕತೆಯ, ಉಳಿವಿಗಾಗಿ, ಗೌಡ ಆಚಾರ-ವಿಚಾರಗಳ ಹಕ್ಕು, ದೀಪಾರಾಧ್ಯರಿಂದ ಹಕ್ಕು. ಮದುವೆಚರಣ ಹಕ್ಕು, ಹಾಗೂ ತಪ್ಪು - ಒಪ್ಪು ಕಾಣಿಕೆ, ಮುಂತಾದ ವ್ಯವಸ್ಥೆಯು ಮೂಡು ಕಟ್ಟೆ ಮನೆ, ಪಡು ಕಟ್ಟೆಮನೆಯ ಗೌಡರಿಗೂ ಅವರಿಂದ ಮಾಗಣೆ ಗೌಡರಿಗೂ ಊರುಗೌಡರಿಗೂ, ಒತ್ತು ಗೌಡರಿಗೂ ಅಧಿಕಾರ ಹಾಗೂ ನೇಮಕ ಮಾಡಿ ಕಟ್ಟೆ ಮನೆ ಗೌಡರಿಗೆ 'ಸನದು' ಕೊಡಿಸಲಾಯಿತು. ಮುಂದೆ ಗೌಡ ಸಮಾಜಕ್ಕೆ ಭದ್ರ ನೆಲೆಯಾಯಿತು.

ಮನೆಯ ಕ್ಷೇತ್ರ ಸಂಬಂಧವಾಗಿ ವರ್ಣರ ಪಂಜುರ್ಲಿ, ಕೃಷಿಕಾಯುವ ಸಂಬಂಧ ಕುಪ್ಪೆ ಪಂಜುರ್ಲಿ (ಮನಿಪಾಂತಿ ಪಂಜುರ್ಲಿ), ಮನೆಯೊಳಗಿನ ದೈವ ಪಾಷಾಣ ಮೂರ್ತಿ, ಕೃಷಿ ಸಂಪತ್ತು ಪಶುಸಂಪತ್ತು, ಐಶ್ವರ್ಯ ಆರೋಗ್ಯಕ್ಕಾಗಿ ನಾಗಾರಾಧನೆ, ಮುಂತಾದುವುಗಳನ್ನು, ಜನನ ದೈವ (ಕುಟುಂಬದ ಹುಟ್ಟು) ರುದ್ರ ಚಾಮುಂಡಿ-ಶಿರಾಡಿ ಹಾಗು ದೊಡ್ಡ ಹಿಡುವಳಿ ಸಂಬಂಧ ರಕೇಶ್ವರಿ-ಚಾಮುಂಡಿ ವಗೈರೆ ದೈವಗಳನ್ನು ಗೌಡ ಮಟ್ಟದಲ್ಲಿ ಆರಾದನೆಯೊಂದಿಗೆ ದೇವಾಲಯ ಸಂಬಂಧಗಳನ್ನು ಹೊಂದಿಕೊಂಡರು. ಮೂಲತಃ ತಮ್ಮ ಹಿರಿಯರಿಂದ ಆರಾಧಿಸುತ್ತಿದ್ದ ಹೊಸಕೋಟೆ ಕೆಂಚಮ್ಮ ವನಗೂರು ಸಬ್ಬಮ್ಮ ಶಕ್ತಿಯನ್ನು ಆರಾಧಿಸಿದರು. ಅಲ್ಲದೇ ರಾಜಾಜ್ಞೆಯಂತೆ ಶ್ರೀ ತಿರುಪತಿ ವೆಂಕಟರಮಣ ದೇವರ ಮುಡಿಪು ಸೇವೆ ಆರಾಧಿಸಲು ಆರಂಭಿಸಿದರು.

ಕೂಜುಗೋಡು, ಕಟ್ಟೆಮನೆ ಸಂತತಿ ನಕ್ಷೆಯ ಪ್ರಕಾರ ಅಪ್ಪಯ್ಯ ಗೌಡರ ಕಾಲದಲ್ಲಿ ಶೃಂಗೇರಿ ಸ್ವಾಮಿಗಳು ಸುಬ್ರಹ್ಮಣ್ಯಕ್ಕೆ ಬಂದಾಗ ಕಟ್ಟೆಮನೆಯ ಹಿರಿಯರನ್ನು ಕರೆಯಿಸಿ ನಿಮ್ಮ ಈ ಊರಿನಲ್ಲಿ ಗೌಡರ ಸಂಖ್ಯೆ ಹೆಚ್ಚಾಗಿರುವುದರಿಂದ ನಮ್ಮ ಮಠಕ್ಕೆ ಬಂದು "ಸನದು" ಪಡೆದು ಗೌಡ ಸಮಾಜಕ್ಕೆ ನೀವುಗಳು ಕಟ್ಟೆಮನೆ ಗೌಡರಾಗಬೇಕು ಹಾಗೂ ಗುರುಮಠಕ್ಕೆ ಶಿಷ್ಯರಾಗಬೇಕೆಂದು ಹೇಳಿದಕ್ಕೆ ಅಪ್ಪಯ್ಯ ಗೌಡರು ಒಪ್ಪಿಕೊಂಡರು. ಆ ಪ್ರಕಾರ ಅಪ್ಪಯ್ಯ ಗೌಡರು ಶೃಂಗೇರಿಗೆ ತೆರಳಿ ಸ್ವಾಮಿಯಿಂದ ಆಶೀರ್ವಾದ ಮತ್ತು "ಸನದು" ಪಡೆದುಕೊಂಡು ಮಠದ ಸ್ವಾಮಿಗಳ ಸೂಚನೆಯಂತೆ ಒಪ್ಪಿಕೊಂಡು ಊರಿಗೆ ಹಿಂತಿರುಗಿದರು. ಸ್ವಾಮಿಗಳ ಸೂಚನೆಯ ಪ್ರಕಾರ ಪ್ರತಿಯೊಂದು ಊರಿನಿಂದಲೂ ಗೌಡರುಗಳನ್ನು ಕರೆಸಿ ಅವರ ಪೈಕಿ ಒಬ್ಬರನ್ನು ಊರು ಗೌಡರೆಂತಲೂ, ಮಾಗಣೆ ಗೌಡರೆಂತಲೂ ನೇಮಕ ಮಾಡಿದರು

(ಆಧಾರ-ಮಲ್ಲಯ್ಯ ಗೌಡ ಕಟ್ಟೆಮನೆ- ಹಿರಿಯ ಯಜಮಾನ)
ಹೀಗೆ ಆ ಕಾಲದಲ್ಲಿ ನೇಮಕಗೊಂಡ ಊರುಗೌಡರುಗಳು ಪ್ರತಿ ಮನೆ ಮನೆಗೆ ತೆರಳಿ ಶೃಂಗೇರಿ ಮಠಕ್ಕೆ ಕಾಣಿಕೆ ವಸೂಲು ಮಾಡಿಕೊಂಡು ಊರುಗಳಲ್ಲಿ ನಡೆಯುವ ವಾದ ವಿವಾದಗಳನ್ನು ಪರಿಹರಿಸಿ ತೀರ್ಮಾನಿಸುವುದು, ಊರಿನಲ್ಲಿ ನಡೆಯುವ ಶುಭಕಾರ್ಯಗಳ ಉಸ್ತುವಾರಿ ವಹಿ, ನಡೆಸಿಕೊಡುವುದು ಊರುಗೌಡರುಗಳ ಕೆಲಸಗಳಾಗಿವೆ.

ಅಪ್ಪಯ್ಯ ಗೌಡರ ನಂತರ ಕಟ್ಟೆಮನೆಯ ಜವಾಬ್ದಾರಿ ದೇವಣ್ಣ ಗೌಡರಿಗೆ ಬಂತು. ಅವರ ಕಾಲದ ನಂತರ ಸಾಂತಪ್ಪ ಗೌಡರ ಕಾಲಕ್ಕಾಗುವಾಗ ಕೂಜುಕೋಡು ಕಟ್ಟೆಮನೆಯ ಅಧಿಕಾರ ಕ್ಷೀಣಿಸುತ್ತಾ ಬಂತು. ಸಾಂತಪ್ಪ ಗೌಡರಿಗೆ ಶೃಂಗೇರಿಗೆ ಜಗದ್ಗುರುಗಳು ಕೊಟ್ಟ ಹಕ್ಕು ಪತ್ರದ ದಾಖಲೆ ಕೂಡ ಇದೆ. ಆದರೆ ಅವರಿಂದ ನಂತರ ಈ ಜವಾಬ್ದಾರಿ ನಿರ್ವಹಣೆಯಾದ ದಾಖಲೆಗಳಿಲ್ಲ.
ಗೌಡ ಜನಾಂಗವು ಪೂರ್ವದಿಂದಲೂ ಕೃಷಿ ಕಾಯಕವಾದ ಜೀವನ ನಡೆಸುತ್ತಿದುದರಿಂದ ಉಳುವುದು, ಬೆಳೆಕೊಯ್ಯುವುದು ಮುಂತಾದುವುಗಳನ್ನು ಮಾಡುತ್ತಿದ್ದರು. ಪ್ರಾಯಶಃ ಈ ಕಾರಣದಿಂದ ಪರಸ್ಪರ ಒಬ್ಬರಿಂದ ಒಬ್ಬರಿಗೆ ಸಹಕಾರದ ಅಗತ್ಯವಿತ್ತು. ಅಲ್ಲದೇ ಊರಲ್ಲಿ ನಡೆಯುವ ಆಚಾರ ವಿಚಾರಗಳತ್ತ ಅವರು ಗಮನಹರಿಸಿದರು. ತಾವು ಕೂಡಾ ಸ್ವಜಾತಿ ಭಾಂದವರ ರಕ್ಷಣೆ ಹಾಗೂ ಆಚಾರ ವಿಚಾರಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಕಟ್ಟುಪಾಡುಗಳನ್ನು ರಚಿಸಿಕೊಂಡರು. ಹೀಗೆ ಮೊದಲಿಗೆ ಏಕ ಘಟಕವಾಗಿದ್ದು ಅವಿಚ್ಛಿನ್ನ ಪರಂಪರೆಯನ್ನು ಹೊಂದಿದ ನಮ್ಮ ಜನಾಂಗದವರು ನಂತರ ಸಂಖ್ಯಾ ಬಾಹುಳ್ಯತೆಯಿಂದ ವಿಸ್ತಾರ ಪ್ರದೇಶದಲ್ಲಿ ಹರಡಿ ಹೋದರು. ಪ್ರಾದೇಶಿಕ ವೈಪರೀತ್ಯದಿಂದಾಗಿ ನಮ್ಮ ಆಚಾರ ವಿಚಾರ ಪದ್ದತಿ ಜೀವನ ಕ್ರಮಗಳಲ್ಲಿ ಭಿನ್ನತೆಯ ಲಕ್ಷಣಗಳನ್ನು ಕಾಣುವಂತಾಯ್ತು. ಪ್ರಾದೇಶಿಕ ಭಿನ್ನತೆಗಳಿಂದಾಗಿ ಒಂದೇ ಜಾತಿಗೆ ಸೇರಿದ ಗೌಡ ಸಮುದಾಯದ ಜೀವನ ಶೈಲಿ, ಭಾಷೆ, ಆಹಾರ ಪದ್ದತಿ, ವೇಷ ಭೂಷಣಗಳು, ಆಚಾರ ವಿಚಾರಗಳಲ್ಲಿ ತೀವ್ರ ತರಹದ ವ್ಯತ್ಯಾಸಗಳು ಸೃಷ್ಟಿಯಾದವು. ವಿವಾಹ ವಿಧಿಗಳು, ಮರಣ ನಂತರದ ಸಂದರ್ಭಗಳು, ಹಬ್ಬ ಹರಿದಿನಗಳ ನಂತರದ ಆಚರಣೆಗಳಲ್ಲಿ ಪ್ರಾದೇಶಿಕ ಭಿನ್ನತೆಯು ಉಂಟಾಗಿದೆ.

ಹತ್ತು ಕುಟುಂಬ ಹದಿನೆಂಟು ಗೋತ್ರದವರೆಂದು ನಾವು ನಮ್ಮನ್ನು ಕರೆಸಿಕೊಳ್ಳುತ್ತಿದ್ದರೂ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋದಾಗ ಆಚರಣೆ ಕ್ರಮದಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ.

ನಮ್ಮ ಜನಾಂಗದವರಲ್ಲಿ ಹಿಂದೆ ಒಂದು ವ್ಯವಸ್ಥಿತವಾದ ಜೀವನ ಕ್ರಮವಿತ್ತು ಎಂದು ತಿಳಿದು ಬರುತ್ತದೆ. "ಊರಿಗೊಬ್ಬ ಗೌಡ ನಾಡಿಗೊಬ್ಬ ದೊರೆ" ಎಂಬ ನಾಣ್ಣುಡಿಯಂತೆ ಊರ ಗೌಡರಿಗೆ ಅತ್ಯಂತ ಪ್ರಾಧಾನ್ಯತೆಯಿತ್ತು. ಗೌಡರ ನೇತೃತ್ವದಲ್ಲಿ ಎಲ್ಲಾ ಕಾರ್ಯಗಳು ನಡೆಯುತ್ತಿದ್ದವು. ಅದಕ್ಕೆ ಪೂರಕವೆಂಬಂತೆ ಜಾತಿ ಬಾಂಧವರ ರಕ್ಷಣೆಗಾಗಿ ಹಾಗೂ ಜಾತಿ ಪದ್ದತಿಯ ಆಚಾರ ವಿಚಾರಗಳನ್ನೂ ನೋಡಿಕೊಳ್ಳುವುದಕ್ಕಾಗಿ ಸುಳ್ಯ ಭಾಗದ ವಾತೆ ಕೂಜುಗೋಡು ಕಟ್ಟೆಮನೆ ಇದ್ದಂತೆ ಪುತ್ತೂರು ಭಾಗದವರಿಗೆ ಬಲ್ನಾಡು ಕಟ್ಟೆಮನೆಗಳೆಂದು ನಿರ್ಣಯಿಸಿಕೊಂಡಿದ್ದರು. ಕಟ್ಟೆಮನೆಯ ನಂತರ ಸೀಮೆ ಮನೆ, ಮಾಗಣೆ ಮನೆ, ಅನಂತರ ಊರುಗೌಡರು ಅವರ ಕೆಳಗಿನ ಒತ್ತು ಗೌಡರು (ಬುದ್ಧಿವಂತ) ಹೀಗೆ ಒಂದು ವ್ಯವಸ್ಥಿತವಾದ ಕ್ರಮದಲ್ಲಿ ನಮ್ಮವರು ಇದ್ದರು ಎಂದು ದಾಖಲೆಗಳಿಂದ ತಿಳಿದು ಬರುತ್ತದೆ.
ಶೃಂಗೇರಿ  ಗುರುಪೀಠವಾಗಿ, ಕುಲದೇವರಾಗಿ ತಿರುಪತಿ ವೆಂಕಟರಮಣ ದೇವರನ್ನು ಆರಾಧನೆ ಮಾಡುವವರಾಗಿದ್ದೇವೆ ಹೀಗಾಗಿ ಇಂತಹ ಭವ್ಯ ಪರಂಪರೆಯನ್ನು ಹೊಂದಿದ ನಮ್ಮ ಜನಾಂಗದ ಅಳಿದು ಹೋದ ಪರಂಪರೆಯನ್ನು ಮತ್ತೆ ತರುವ ಪ್ರಯತ್ನವಾಗಬೇಕೆಂದು ನಮ್ಮ ಯುವಸೇವಾ ಸಂಘದ ಪ್ರತಿ ಗ್ರಾಮ ಸಭೆಗಳಲ್ಲಿ ನಮ್ಮ ಜನಾಂಗದವರಿಂದ ಸಲಹೆಗಳು ವ್ಯಕ್ತವಾಗುತ್ತಿದ್ದವು. ನಮ್ಮ ಸಂಘವು ಈಗಾಗಲೇ ಅನೇಕ ಮಹತ್ತರವಾದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದು ಈ ವಿಚಾರದ ಚಿಂತನೆಗಳು ನಮ್ಮಲ್ಲಿ ಸಂಚಲನವನ್ನುಂಟು ಮಾಡಿದವು ಎಂದೇ ಹೇಳಬಹುದು. ಈಗಾಗಲೇ ಮಹತ್ತರವಾದ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಂಡು ಅದರಲ್ಲಿ ಯಶಸ್ವಿಯಾಗಿ ಬಡವರ ಆಶಾಕಿರಣವಾದ ಶ್ರೀ ವೆಂಕಟರಮಣ ಕೋ ಅಪರೇಟಿವ್ ಸೊಸೈಟಿ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ ನಮ್ಮ ಸಂಘವು ಸುಳ್ಯದ ಕೊಡಿಯಾಲ್ ಬೈಲಿನಲ್ಲಿ ಸ್ವಂತದ್ದಾದ 6'/ ಎಕ್ರೆ ಜಾಗವನ್ನು ಹೊಂದಿದ್ದು ಅಲ್ಲಿ ಮಲ್ನಾಡ್ ಪ್ರೌಢಶಾಲೆಯನ್ನು ತೆರೆದು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತುಕೊಟ್ಟಿದೆ. 2 ಬೃಹತ್ ಸಮಾವೇಶಗಳನ್ನು ನಡೆಸಿ ನಮ್ಮ ಅಸ್ತಿತ್ವವನ್ನು ಹೆಚ್ಚಿಸಿಕೊಂಡೆವೆಂದು ಹೇಳಬಹುದು. ಹೀಗಾಗಿ ದಿನಾಂಕ : 26.09.2009 ರಂದು ಆಗಿನ ಸಂಘದ ಅಧ್ಯಕ್ಷರಾದ ಶ್ರೀ ಪಿ.ಸಿ ಜಯರಾಮ ಅಧ್ಯಕ್ಷತೆಯಲ್ಲಿ ಸುಳ್ಯದ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಪದಾಧಿಕಾರಿಗಳು ಸಭೆ ಸೇರಿ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನ ಬಾಂಧವರ ಆಚಾರ ಪದ್ಧತಿ ಸಂಸ್ಕೃತಿಗಳನ್ನು ಏಕ ರೂಪವಾಗಿ ಕ್ರೋಢೀಕರಿಸುವ ದೃಷ್ಟಿಯಿಂದ ಸಮಿತಿ ಯೊಂದನ್ನು ರಚಿಸಲಾಯಿತು ಪುಸ್ತಕವನ್ನು ಹೊರ ತರುವ ದೃಷ್ಟಿಯಿಂದ ಸಮಿತಿಗೆ ಸಂಘದ ಉಪಾಧ್ಯಕ್ಷರಾದ ಶ್ರೀ ದೊಡ್ಡಣ್ಣ ಬರೆಮೇಲುರವರನ್ನು ಪುಸ್ತಕ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಉಳಿದಂತೆ ಸದಸ್ಯರುಗಳಾಗಿ ಶ್ರೀ ಮದುವೆಗದ್ದೆ ಬೋಜಪ್ಪ ಗೌಡ ಶ್ರೀ. ಕೆ.ಸಿ ನಾರಾಯಣ ಗೌಡ ಕುಯಿಂತೋಡು, ಶ್ರೀ ಬಿ.ಸಿ ವಸಂತ ಕಲ್ಮಕಾರು, ಪುರುಷೋತ್ತಮ ಅಮೈ, ಎಸ್‌. ಆರ್ ಸೂರಯ್ಯ ಗೌಡ ಸೂಂತೋಡು, ಎ.ಸಿ ಹೊನ್ನಪ್ಪ ಗೌಡ ಅಮಚೂರು, ಜಗದೀಶ್ ಕುಯಿಂತೋಡು ಇವರನ್ನು ಆಯ್ಕೆ ಮಾಡಲಾಯಿತು. ನಮ್ಮ ಸಮಿತಿ ಸುಮಾರು 30ಕ್ಕಿಂತಲೂ ಹೆಚ್ಚು ಬಾರಿ ಸಭೆ ಸೇರಿ ಚರ್ಚಿಸಿ ಈ ಪುಸ್ತಕ ಹೊರ ತರುವಲ್ಲಿ ಪ್ರಯತ್ನಿಸಿದೆ.