Friday, February 27, 2026

ಗೌಡ ಸಂಸ್ಕೃತಿ- ಮದುವೆ(ವರನ ಮನೆ ಪ್ರವೇಶ )

 ವರನ ಮನೆ ಪ್ರವೇಶ :

ವಧುವಿನ ಮನೆಯಿಂದ ವರನ ಮನೆಯ ಚಪ್ಪರದಡಿಗೆ ಬಂದಾಗ (ವಧುವಿನ ಕೈಯಲ್ಲಿ ಒಗ್ಗಿ ಹಾಕಿದ ಜೋಡು ತೆಂಗಿನಕಾಯಿ ಹಾಗೂ ಧಾರಾ ಸೀರೆ ಹೆಗಲಲ್ಲಿ ಇರಬೇಕು) ಮುತ್ತೈದೆಯರು ಸೋಬಾನೆಯೊಂದಿಗೆ ಕುರ್ದಿ ಆರತಿ ಎತ್ತಿ ದೃಷ್ಟಿ ತೆಗೆಯುವರು. ಕಿರಿಯರು ಕಾಲಿಗೆ ನೀರು ಹೊಯ್ದು ಕಾಲು ತೊಳೆಯುವುದು ಕ್ರಮ. ಈ ಸಂದರ್ಭದಲ್ಲಿ ಮದುಮಗ 5 ವೀಳ್ಯದೆಲೆ, 1 ಅಡಿಕೆ ಹಾಗೂ ಪಾವಲಿಯನ್ನು ಇಬ್ಬರಿಗೂ ಕಾಣಿಕೆ ಕೊಡಬೇಕು. ಅಲ್ಲಿಂದ ಮೇಲ್ಕಟ್ಟಿನಡಿಗೆ ಬಂದು ಊರುಗೌಡರು ವಧು-ವರರನ್ನು ಹಾಗೂ ಕುರುಂಟುವನ್ನು ಮನೆಯ ಯಜಮಾನರಿಗೆ ಒಪ್ಪಿಸುವರು. ಮನೆಯ ಹಿರಿಯ ಮುತ್ತೈದೆಯರು ವಧು- ವರರನ್ನು ಸಾಂಪ್ರದಾಯಿಕವಾಗಿ ಮನೆಯ ಒಳಗೆ ಬರಮಾಡಿಕೊಂಡು ಊರುಗೌಡರು ಒಕ್ಕಣೆಯೊಂದಿಗೆ ಹಸೆ ಚಾಪೆ ಮೇಲೆ ಕುಳ್ಳಿರಿಸುವರು. 5 ಜನ ಮುತ್ತೈದೆಯರಿಂದ ಹಾಲು ತುಪ್ಪದ ಶಾಸ್ತ್ರ ಮುಗಿಸಿ ಮನೆಯ ಹಿರಿಯ ಮುತ್ತೈದೆ ಕೊಟ್ಟಂತ ಹಾಲನ್ನು ಕುಡಿದು ವಧು-ವರರು 5 ವೀಳ್ಯದೆಲೆ, 1 ಅಡಿಕೆಯ ಗೌರವದೊಂದಿಗೆ ಲೋಟವನ್ನು ಹಿಂತಿರುಗಿಸುವರು. ನಂತರ ಊರುಗೌಡರು ಒಕ್ಕಣೆಯೊಂದಿಗೆ ವಧು-ವರರನ್ನು ಎಬ್ಬಿಸುವರು. ತದನಂತರ ವಧು-ವರರು ಹಿರಿಯರ ಆಶೀರ್ವಾದ ಪಡೆಯುವರು.

ಗೌಡ ಸಂಸ್ಕೃತಿ- ಮದುವೆ- ಕುರುಂಟು (ಸಂಗಾತಿ) ಕಳುಹಿಸುವುದು

 ಕುರುಂಟು (ಸಂಗಾತಿ) ಕಳುಹಿಸುವುದು

ವರನ ಮನೆಗೆ ದಿಬ್ಬಣ ಹೊರಡುವಾಗ ವಧುವಿನೊಂದಿಗೆ ಕಳುಹಿಸಿ ಕೊಡುವ ಪ್ರಾಯದ ಹೆಂಗಸು ಅಥವಾ ಸಣ್ಣ ವಯಸ್ಸಿನ ಹುಡುಗಿಯನ್ನು ಕುರುಂಟು ಎಂದು ಕರೆಯುವರು.

ಗೌಡ ಸಂಸ್ಕೃತಿ- ಮದುವೆ-(ಸೇರು ತುಪ್ಪ ತರುವ ಕ್ರಮ )

 ವಧು-ವರರೊಂದಿಗೆ ವರನ ಕಡೆಯ ನೆಂಟರಿಷ್ಟರು ಚಪ್ಪರದಡಿಯಿಂದ ಹೊರಗೆ ಬರುವರು. [ಚಪ್ಪರದ ಹೊರಗೆ ವಧು-ವರರು ಹಾಗೂ ನೆಂಟರಿಷ್ಟರಿಗೆ ಆಸನದ ವ್ಯವಸ್ಥೆ ಮಾಡಿರುತ್ತಾರೆ.] ಇಲ್ಲಿ ವಿಶ್ರಮಿಸಿದ ನಂತರ ನೆಂಟರಿಷ್ಟರು, ವಧು-ವರರು ವಧುವಿನ ಬಲಕೈಯಲ್ಲಿ ಸೇರು ತುಪ್ಪ, ಎಡ ಕೈಯಲ್ಲಿ ಒಗ್ಗಿ ಹಾಕಿದ ಜೋಡಿ ತೆಂಗಿನಕಾಯಿ, ಬಲ ಹೆಗಲಲ್ಲಿ ಧಾರೆ ಸೀರೆಯೊಂದಿಗೆ ಚಪ್ಪರದ ಮೂಡಣ ತೋರಣದಡಿಗೆ ಬರುವರು. ಇವರನ್ನು ವಧುವಿನ ಕಡೆಯ ಮುತ್ತೈದೆಯರು ಕುರ್ದಿ ಆರತಿ ಎತ್ತಿ ಎಡಕೈಯಿಂದ ವಧು-ವರರ ಹಣೆಗೆ ಕುರ್ದಿ ಬೊಟ್ಟನ್ನಿಟ್ಟು ಕಾಲಿನ ಪಕ್ಕಕ್ಕೆ ಕುರ್ದಿ ನೀರನ್ನು ಚೆಲ್ಲುವರು. ಈ ಹರಿವಾಣಕ್ಕೆ ವರನು ಹಣದೊಂದಿಗೆ 5 ವೀಳ್ಯದೆಲೆ, 1 ಅಡಿಕೆಯೊಂದಿಗೆ ಗೌರವ ಸೂಚಿಸುವರು. ಈಗ ಹುಡುಗಿಯ ಕಿರಿಯ ಸಹೋದರ ಅಥವಾ ಕಿರಿಯರು ಯಾರಾದರೂ ಒಂದು ತಂಬಿಗೆ ನೀರನ್ನು ಕಾಲಿಗೆ ಹೊಯ್ಯುವರು. ಈ ತಂಬಿಗೆಗೂ ವರನು ಹಣದೊಂದಿಗೆ 5 ವೀಳ್ಯದೆಲೆ ಒಂದು ಅಡಿಕೆಯೊಂದಿಗೆ ಗೌರವ ನೀಡಬೇಕು. ವಧುವಿನ ಮನೆಯ ಹಿರಿಯ ಮುತ್ತೈದೆಯರು ವಧು-ವರರನ್ನು ಕೈಹಿಡಿದು ಪದ್ಧತಿಯಂತೆ ಮನೆ ಒಳಗೆ ಕರೆದುಕೊಂಡು ಹೋಗಿ, ಹಸೆ ಚಾಪೆಯ ಪಕ್ಕ ಇರಿಸಿದ ಮಣೆಯ ಮೇಲೆ ಉರಿಯುತ್ತಿರುವ ನಂದಾದೀಪದ ಎಡಬಲದಲ್ಲಿ ತುಪ್ಪದ ತಂಬಿಗೆ ಹಾಗೂ ತೆಂಗಿನಕಾಯಿ ಇರಿಸುವರು. ಒಕ್ಕಣೆಯೊಂದಿಗೆ ಊರು ಗೌಡರು ಹಸೆ ಚಾಪೆಯಲ್ಲಿ ಕುಳ್ಳಿರಿಸಿದ ನಂತರ ವಧು-ವರರ ಕೈಗೆ 5 ಎಲೆ, 1 ಅಡಿಕೆ ಕೊಡಬೇಕು. ವಧು-ವರರಿಗೆ ಕನಿಷ್ಟ 5 ಜನ ಮುತ್ತದೆಯರು ಹಾಲು ತುಪ್ಪ ಕುಡಿಸಿದ ನಂತರ ವಧುವಿನ ತಾಯಿ ಅಥವಾ ಮನೆಯ ಹಿರಿಯ ಮುತ್ತೈದೆ ಅವರಿಗೆ ಕುಡಿಯಲು ಹಾಲನ್ನು ನೀಡುವರು. ಈ ಪಾತ್ರೆಗೆ ವಧು- ವರರು 5 ವೀಳ್ಯದೆಲೆ ಅಡಿಕೆ ಹಾಕಿ ಗೌರವದೊಂದಿಗೆ ಹಿಂತಿರುಗಿಸುವರು. ಕುಳಿತಲ್ಲಿಂದಲೇ ಪಾದ ಮುಟ್ಟಿ ನಮಸ್ಕರಿಸುವರು. ಈಗ ಊರುಗೌಡರ ಒಕ್ಕಣೆಯೊಂದಿಗೆ ಎಬ್ಬಿಸುವರು. ನಂತರ ವಧುವಿನ ಕಡೆಯ ಊರುಗೌಡರು ವರನ ಕಡೆಯ ಊರುಗೌಡರಿಗೆ ಮನೆಯ ಯಜಮನರಿಂದ ನೀರು ಕೊಡಿಸಿ ತುಪ್ಪದ ತಂಬಿಗೆ ಬಿಚ್ಚಲು ಕರೆಯುವರು. ಇಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಕಟ್ಟಿದ ತುಪ್ಪದ ತಂಬಿಗೆಯನ್ನು ಬಿಚ್ಚುವರು. (ತಂಬಿಗೆ ಕಟ್ಟಿದ ರೀತಿ ತಪ್ಪಿದಲ್ಲಿ ತಪ್ಪು ಕೇಳಿಸುತ್ತಾರೆ) ಬಿಚ್ಚಿದ ತುಪ್ಪವನ್ನು ವಧು/ವರರು ನಂದಾದೀಪಕ್ಕೆ ಹಾಕಿ ಕೈ ಮುಗಿಯುವರು.ಉಳಿದ ತುಪ್ಪವನ್ನು ಮನೆಯ ಒಡತಿ ಖಾಲಿ ಮಾಡಿ ಹೊದುಳು ಬಾಳೆಹಣ್ಣು, ಬೆಲ್ಲ, ವೀಳ್ಯದೆಲೆ, 1ಅಡಿಕೆ ಹಾಕಿ ಯಥಾ ಪ್ರಕಾರ ತಂಬಿಗೆಯ ಬಾಯಿ ಕಟ್ಟಿ ಮಣೆಯ ಮೇಲಿಡುತ್ತಾರೆ. ಹೊರಡುವ ಮೊದಲು ವರನ ಮನೆಯಲ್ಲಿ ನಡೆಯುವ ನಾಗೋಳಿಶಾಸ್ತ್ರಕ್ಕೆ ವಧುವಿನ ಕಡೆಯ ನಂಟರಿಷ್ಟರಿಗೆ ವರನ ಕಡೆಯವರು ಹರಿವಾಣದಲ್ಲಿ ಸೂಡಿ ವೀಳ್ಯದೆಲೆ, 10 ಅಡಿಕೆ ಇಟ್ಟು ಹೇಳಿಕೆ ಕೊಡಬೇಕು. ವಧು-ವರರು ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ, ತಾಯಿ ಎತ್ತಿ ಕೊಟ್ಟ ತುಪ್ಪದ ತಂಬಿಗೆಯನ್ನು ಬಲಕೈಯಲ್ಲಿ ಪಡಕೊಂಡು ಹೆಗಲಲ್ಲಿ ಧಾರೆ ಸೀರೆ ಹಾಕಿಕೊಂಡು ವರನೊಂದಿಗೆ ಮನೆಯಿಂದ ಹೊರಡುವರು. ಮನೆಯವರು ಸೂಚಿಸಿದ ಕುರುಂಟುವನ್ನು ಊರುಗೌಡರು ವರನ ಕಡೆಯ ಊರುಗೌಡರಿಗೆ ಹಸ್ತಾಂತರಿಸುವರು. ಈಗ ಊರುಗೌಡರ ನೇತೃತ್ವದಲ್ಲಿ ವರನ ದಿಬ್ಬಣ ಹಿಂತಿರುಗುವುದು (ದಿಬ್ಬಣ ಹೊರಡುವಾಗ ತಿಂಡಿ ತಿನಿಸುಗಳಿರುವ ಬುತ್ತಿ ಕೊಟ್ಟು ಕಳಿಸುವರು)

Saturday, February 14, 2026

ಗೌಡ ಸಂಸ್ಕೃತಿ- ಮದುವೆ(ಹೆಣ್ಣು ಇಳಿಸಿ ಕೊಡುವ ಕ್ರಮ)

 ಹೆಣ್ಣು ಇಳಿಸಿ ಕೊಡುವ ಕ್ರಮ : ವಧುವಿಗೆ ಕೊಡುವ ಬಳುವಳಿಯೊಂದಿಗೆ ತಾಯಿ- ತಂದೆಯರು ವಧು-ವರರು ಹಾಗೂ ಕುಟುಂಬಸ್ಥರು ಮೇಲ್ಕಟ್ಟಿನಡಿಯಲ್ಲಿ ಪೂರ್ವಾಭಿಮುಖವಾಗಿ ನಿಲ್ಲುವರು. ವಧುವಿನ ಬಲ ಹೆಗಲಲ್ಲಿ ಧಾರಾ ಸೀರೆ ಇರಬೇಕು. ಪರಿಣಿತರು ಹೆಣ್ಣು ಇಳಿಸಿ ಕೊಡುವ ಸೋಬಾನೆಯನ್ನು ಹೇಳುವರು. ಒಕ್ಕಣೆಯೊಂದಿಗೆ ವಧುವಿನ ತಂದೆ ವಧು-ವರರ ಕೈಯೆತ್ತಿ ವರನ ತಂದೆ ಅಥವಾ ಊರುಗೌಡರಿಗೆ ವಧು- ವರರನ್ನು ಒಪ್ಪಿಸುವರು. ತದನಂತರ ವಧುವರರು ವಧುವಿನ ತಾಯಿ-ತಂದೆಗೆ ಸೀರೆ ಹಾಗೂ ದೋತಿಯನ್ನು ಉಡುಗೊರೆಯಾಗಿ ನೀಡುವರು. (ಉಡುಗೊರೆಗಳನ್ನು ವರನ ಮನೆಯವರೇ ವ್ಯವಸ್ಥೆ ಮಾಡುವುದು. ವಧು ತಾಯಿಗೂ ವರನು ಮಾವನಿಗೂ ಕೊಡಬೇಕು). ನಂತರ ವಧು-ವರರು ತಾಯಿ-ತಂದೆ ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುವರು.

Saturday, January 24, 2026

ಗೌಡ ಸಂಸ್ಕೃತಿ- ಮದುವೆ(ಶೇಷೋಪಚಾರ)

 ಶೇಷೋಪಚಾರ: 

ಪರಿಕರಗಳು : ಕಾಲುದೀಪ 1, ನೆನೆಬತ್ತಿ, ಎಳ್ಳೆಣ್ಣೆ, ಹರಿವಾಣ 2, ಬೆಳ್ತಿಗೆ ಅಕ್ಕಿ, ವೀಳ್ಯದೆಲೆ 20, ಅಡಿಕೆ 4, ತಂಬಿಗೆ ನೀರು.(ಶೇಷೋಪಚಾರಕ್ಕೆ ಬೆಳ್ತಿಗೆ ಅಕ್ಕಿಯನ್ನು ಉಪಯೋಗಿಸಬೇಕು)
ಈಗ ವಧು-ವರರು ವಸ್ತ್ರ ಬದಲಿಸಿ ಶೇಷೋಪಚಾರಕ್ಕೆ ಅಡೋಳಿಯ ಜೊತೆ ಮೇಲ್ಕಟ್ಟಿನಡಿಯಲ್ಲಿ ಬರಬೇಕು. ಹಾಕಿದ ಚಪ್ಪರದ ಮೇಲ್ಕಟ್ಟಿನಡಿಯಲ್ಲಿ ಪೂರ್ವಾಭಿಮುಖವಾಗಿ ಇರಿಸಿದ ಆಸನಗಳಿಗೆ ಮಡಿವಾಳನು ಮೇಲ್ವಸ್ತ್ರವನ್ನು ಹೊದಿಸುತ್ತಾರೆ. ಆಸನದ ಎದುರು ಬಲಬದಿಯಲ್ಲಿ ಸರಮಾಲೆ ದೀಪ ಹಚ್ಚಿಟ್ಟಿರಬೇಕು. ಹಾಗೇನೆ ಆಸನದ ಮುಂಭಾಗದಲ್ಲಿ ಮಣೆಗಳ ಮೇಲೆ ಒಂದು ಹರಿವಾಣದಲ್ಲಿ ಬೆಳ್ಳಿಗೆ ಅಕ್ಕಿ ಹಾಗೂ 5 ವೀಳ್ಯದೆಲೆ, 1 ಅಡಿಕೆ (ಶೇಷೆ ಹಾಕಲು) ಇನ್ನೊಂದು ಹರಿವಾಣದಲ್ಲಿ ಒಂದು ಮುಷ್ಟಿ ಬೆಳ್ತಿಗೆ ಅಕ್ಕಿ (ನಗದು ರೂಪದ ಉಡುಗೊರೆ ಇಡಲು) ಹಾಗೂ 5 ವೀಳ್ಯದೆಲೆ. 1 ಅಡಿಕೆಯನ್ನು ಜೋಡಿಸಿಟ್ಟಿರಬೇಕು. ಒಕ್ಕಣೆಯೊಂದಿಗೆ – ಊರುಗೌಡರು ಶೇಷೋಪಚಾರಕ್ಕೆ ಕುಳ್ಳಿರಿಸಿ ವಧು-ವರರ ಕೈಯಲ್ಲಿ 5 ವೀಳ್ಯದೆಲೆ 1 ಅಡಿಕೆಯನ್ನು ಕೊಟ್ಟು ಶೇಷೆ ಹಾಕುವರು. ಮನೆಯ ಯಜಮಾನ ನೆಂಟರಿಷ್ಟರನ್ನು ಒಂದು ತಂಬಿಗೆ ನೀರಿನೊಂದಿಗೆ ಶೇಷೋಪಚಾರಕ್ಕೆ ಆಹ್ವಾನಿಸುತ್ತಾರೆ.

ವಧುವಿನ ತಾಯಿ-ತಂದೆ ಮೊದಲು ಶೇಷೆ (ಅಕ್ಷತೆ) ಹಾಕಿ ಆಶೀರ್ವದಿಸುವರು.ನಂತರ ವರನ ತಂದೆ ತಾಯಿ, ತದನಂತರ ನೆಂಟರಿಷ್ಠರು ಶೇಷೆ ಹಾಕಿ ಆಶೀರ್ವಾದ ಮಾಡುವರು ಹಾಗೂ ಉಡುಗೊರೆ ಇದ್ದಲ್ಲಿ ವಧು-ವರರಿಗೆ ನೀಡಿ, ಅಲ್ಲದೇ ನಗದು ರೂಪದ ಉಡುಗೊರೆಯನ್ನು ಎದುರು ಇರಿಸಿದ ಬಟ್ಟಲಿಗೆ ಹಾಕುವರು.
ಶೇಷೋಪಚಾರ ಮುಗಿದ ತಕ್ಷಣ ಕನಿಷ್ಠ 5 ಜನ ಮುತ್ತೈದೆಯರು ಸೋಬಾನೆಯೊಂದಿಗೆ ಶೇಷೋಪಚಾರಕ್ಕೆ ಕುಳಿತಲ್ಲಿಯೇ ಶೇಷೆಗೆ ಉಪಯೋಗಿಸಿದ ಅಕ್ಕಿಯಲ್ಲಿ ಆರತಿ (5 ನೆನಬತ್ತಿ ಮಾವಿನ ಸೊಪ್ಪಲ್ಲಿಟ್ಟು) ಮಾಡಿ ಹರಿವಾಣದಲ್ಲಿದ್ದ ಅಕ್ಕಿಯನ್ನು ಪೂರ್ತಿ ಮುಗಿಸಬೇಕು. ಮದುಮಕ್ಕಳ ಕೈಯಲ್ಲಿದ್ದ ವೀಳ್ಯದೆಲೆ, ಅಡಿಕೆಯನ್ನು ಆರತಿ ತಟ್ಟೆಗೆ ಹಾಕುವರು.
(ಶೇಷೋಪಚಾರ ಹಾಕುವ ಸಂದರ್ಭದಲ್ಲಿ ಪಾದರಕ್ಷೆಗಳನ್ನು ನಿಷೇದಿಸಬೇಕು)
ಅನಂತರ ಊರುಗೌಡರ ಒಕ್ಕಣೆಯೊಂದಿಗೆ ವಧು-ವರರನ್ನು ಶೇಷೋಪಚಾರದಿಂದ ಏಳಿಸುವರು. ಹರಿವಾಣದಲ್ಲಿರುವ ನಗದು ಉಡುಗೊರೆಯನ್ನು ಊರುಗೌಡರು ಒಕ್ಕಣೆಯೊಂದಿಗೆ ಮನೆಯ ಯಜಮಾನನ ತಲೆ ಮೇಲೆ ಇರಿಸುವರು. (ಹರಿವಾಣವನ್ನು ಬಿಳಿ ವಸ್ತ್ರದಿಂದ ಕಟ್ಟುವುದು). ಪಟ್ಟಬಾಸಿಂಗ ಬಿಚ್ಚಿದ ನಂತರ ವಧು-ವರರು ಊರುಗೌಡರು, ಅಡೋಳಿ, ಕಂಚಿಮೆ ಇವರೆಲ್ಲ ಒಟ್ಟಾಗಿ ಕುಳಿತು ಊಟ ಮಾಡಬೇಕು.

ಗೌಡ ಸಂಸ್ಕೃತಿ- ಮದುವೆ (ವಧುವಿನ ಮನೆಗೆ ಗೃಹ ಪ್ರವೇಶ)

 ವಧುವಿನ ಮನೆಗೆ ಗೃಹ ಪ್ರವೇಶ:

ಧಾರಾಕಾರ್ಯ ಮುಗಿದ ನಂತರ ವಧು-ವರರನ್ನು ತಾಯಿ ತಂದೆಯವರು ಬಲ ಕಾಲು ಮುಂದಿಟ್ಟು ಒಳ ಕರೆದುಕೊಂಡು ಹೋಗಿ ಹಸೆ ಚಾಪೆಯ ಹತ್ತಿರ ನಿಲ್ಲಿಸುವರು. ಊರುಗೌಡರು ಒಕ್ಕಣೆಯೊಂದಿಗೆ ಹಸೆ ಚಾಪೆಯಲ್ಲಿ ಕುಳ್ಳಿರಿಸುವರು. ಕನಿಷ್ಠ 5 ಜನ ಮುತ್ತೈದೆಯರು ವಧು-ವರರಿಗೆ ಹಾಲು ತುಪ್ಪ ಕುಡಿಸುವರು. ತದನಂತರ ವಧುವಿನ ತಾಯಿ ಅಥವಾ ಮನೆಯ ಹಿರಿಯ ಮುತ್ತೈದೆಯರು ಕುಡಿಯಲು ಹಾಲು ಕೊಡುವರು. ಹಾಲು ಕೊಟ್ಟ ಪಾತ್ರೆಗೆ 5 ವೀಳ್ಯದೆಲೆ. 1 ಅಡಿಕೆಯೊಂದಿಗೆ ಮರ್ಯಾದೆ ಹಾಕಿ ಹಿಂತಿರುಗಿಸುವರು. ಒಕ್ಕಣೆಯೊಂದಿಗೆ ವಧು-ವರರನ್ನು ಊರುಗೌಡರು ಹಸೆ ಚಾಪೆಯಿಂದ ಏಳಿಸುವರು. ವಧು-ವರರು ಹಿರಿಯರ ಪಾದ ಮುಟ್ಟಿ ಆಶೀರ್ವಾದ ಪಡೆಯುವರು.

Sunday, December 14, 2025

ಗೌಡ ಸಂಸ್ಕೃತಿ- ಮದುವೆ(ಧಾರಾಕಾರ್ಯ)

ಧಾರಾಕಾರ್ಯ 

ಪರಿಕರಗಳು : ಕಾಲುದೀಪ, ಮಣೆ 2, ತಂಬಿಗೆ ನೀರು, ತೆರೆ ಹಿಡಿಯಲು ಶುಭ್ರ ಬಟ್ಟೆ, 10 ವೀಳ್ಯದೆಲೆ, 2 ಅಡಿಕೆ, ಕಂಚಿನಕ್ಕಿ, ಕೊಂಬು ಗಿಂಡಿ, ಹಿಂಗಾರದ ಮಾಲೆ 2. ದಾರೆ ಎರೆಯಲು ಕಂಚಿನ ಬಟ್ಟಲು 1, ತಾಳಿ ಕಂಠಿ,

ಕಂಚಿಮೆಯೊಂದಿಗೆ ಸೋದರ ಮಾವ ಮದುಮಗಳನ್ನು ಧಾರಾಮಂಟಪಕ್ಕೆ ಮೊದಲು ಕರೆತರಬೇಕು. (ಧಾರಾಮಂಟಪಕ್ಕೆ ಮದುಮಗ ಯಾ ಮದುಮಗಳನ್ನು ಕರೆದುಕೊಂಡು ಬರುವಾಗ ಮಡಿವಾಳರು ಮಡಿ ಬಟ್ಟೆ ಹಾಕುವ ಕ್ರಮವಿದೆ.) ಹಾಗೇ ಬರುವ ಮೊದಲು ಸೋದರ ಕಡೆಯ ಬಾವ ಮೈದುನರು ಶುಭ್ರ ಬಟ್ಟೆಯಿಂದ ತೆರೆಹಿಡಿಯಬೇಕು. ಆನಂತರ ಮದುಮಗನನ್ನು ಕರೆದುಕೊಂಡು ಬರಬೇಕು. ಮದುಮಗ ಮತ್ತು ಮದುಮಗಳು ಧಾರಾ ಮಣೆಯ ಮೇಲೆ ನಿಂತಿರಬೇಕು. ಇತ್ತಂಡದ 5 ಜನ ಮುತ್ತೈದೆಯರು ಕಂಚಿಮೆಗೆ ಅಕ್ಕಿ ಹಾಕಿ ಕೈ ಮುಗಿಯಬೇಕು. (ಹುಡುಗಿ ಕಡೆಯ ಕಂಚಿಮೆಗೆ ಹುಡುಗನ ಕಡೆಯವರು, ಹುಡುಗನ ಕಡೆಯ ಕಂಚಿಮೆಗೆ ಹುಡುಗಿ ಕಡೆಯವರು ಪರಸ್ಪರ ಕೈ ಮುಗಿಯುವರು) ಇತ್ತಂಡದ ಊರುಗೌಡರುಗಳು ಕೊಂಬುಗಿಂಡಿಯಲ್ಲಿದ್ದ ಹಾಲನ್ನು ವರನ ಕಡೆಯ ಕೊಂಬು ಗಿಂಡಿಯಿಂದ ಹಾಗೂ ವಧುವಿನ ಕಡೆಯ ಕೊಂಬು ಗಿಂಡಿಯಿಂದ ಮೂರು ಮೂರು  ಸಲ ಹೊಯ್ದುಕೊಳ್ಳಬೇಕು. (ಆದಲು-ಬದಲು ಮಾಡಿಕೊಳ್ಳುವುದು) ಕಂಚಿನಕ್ಕಿ (ಕಂಚಮೆ) ಮೇಲಿದ್ದ ತೆಂಗಿನ ಕಾಯಿಯನ್ನು ತೆಗೆದು ಅದನ್ನು ಕೂಡ ಅದಲು ಬದಲು ಮಾಡಿಕೊಳ್ಳಬೇಕು. ನಂತರ ಧಾರಾ  ಸಮಯಕ್ಕೆ ಸರಿಯಾಗಿ ವಧುವಿನ ತಂದೆ ಇತ್ತಂಡದ ಕೊಂಬುಗಿಂಡಿಯಲ್ಲಿದ್ದ ಹಾಲನ್ನು ಧಾರೆ ಎರೆಯುವ ತಂಬಿಗೆಗೆ ಹಾಕಿಸಿಕೊಂಡು ಕಾಳಿಕಂಠಿಯನ್ನು ಇಟ್ಟು ಸಭೆಯಲ್ಲಿ ಹೋಗುವರು. ಇದನ್ನು ಸಭಿಕರೆಲ್ಲರೂ ಶುಭ ಹಾರೈಕೆಯೊಂದಿಗೆ ಮುಟ್ಟಿ ನಮಸ್ಕರಿಸುವರು. ಊರುಗೌಡರ ಒಕ್ಕಣೆಯೊಂದಿಗೆ (ಒಕ್ಕಣೆ 3 ಸಲ) ಮೊದಲು ಮದುಮಗಳು ಹಿಂಗಾರದ ಮಾಲೆಯನ್ನು ಮಧುಮಗನ ಕೊರಳಿಗೆ ಹಾಕಬೇಕು. ಮದುಮಗ ಕೂಡ ಹಾಗೇನೆ ಅವಳ ಕೊರಳಿಗೆ ಹಾಕುವನು. ಈ ಎಲ್ಲಾ ಕಾರ್ಯಗಳು  ಆದ ನಂತರ ವರನ ತಂದೆ ಧಾರಾ ಬಟ್ಟಲಿನೊಂದಿಗೆ (ಕಂಚಿನಬಟ್ಟಲು, ತಯಾರಿರಬೇಕು. ವರನ ಕೈಯಲ್ಲಿ 5 ವೀಳ್ಯದೆಲೆ, 1 ಅಡಿಕೆ ವಧುವಿನ ಕೈಯಲ್ಲಿ ಕೂಡ ಅದೇ ರೀತಿ ಕೊಟ್ಟು ವರನ ಹಸ್ತದ ಮೇಲೆ ವಧುವಿನ ಹಸ್ತವನ್ನಿಟ್ಟು ಊರುಗೌಡರು ಹತ್ತು ಕುಟುಂಬ ಹದಿನೆಂಟು ಗೋತ್ರದ ಬಂಧು-ಬಾಂಧವರು, ನೆಂಟರಿಷ್ಟರು, ಗುರುಮನೆ, ಕಟ್ಟೆಮನೆ, ಸೀಮೆಮನೆ, ಮಾಗಣಮನೆ ಗೋತ್ರದ .... ಹೆಸರಿನ ವರನಿಗೆ..... ಗೋತ್ರದ ಹೆಸರಿನ ವಧುವಿನ ಕೈ ಮುಟ್ಟಿ ಕನ್ಯಾಧಾರೆ ಎರೆದು ಕೊಡುತ್ತೇವೆಂದು 3 ಸಲ ಹೇಳಬೇಕು (ವಧುವಿನ ತಂದೆ ಧಾರೆಯೆರೆಯುವರು ಅಥವಾ ಅವರು ಇಲ್ಲದಿದ್ದ ಪಕ್ಷದಲ್ಲಿ ಚಿಕ್ಕಪ್ಪ ಅಥವಾ ಸೋದರಮಾವ). ಸಭಿಕರು ಒಳ್ಳೆ ಕಾರ್ಯಂತ  ಹೇಳಬೇಕು.
ಕು. ಮೊದಲು ಹುಡುಗಿ ಕೈ ಮೇಲೆ, 2ನೇ ಸಲ ಹುಡುಗಿ ಕೈ ಕೆಳಗಿರಬೇಕು. 3ನೇ ಸಲ ಹುಡುಗಿ ಕೈ ಮೇಲಿಟ್ಟು ಧಾರೆ ನೀರಿನೊಂದಿಗೆ ಎಲೆ ಅಡಿಕೆಯನ್ನು ಮದುಮಕ್ಕಳು ಧಾರಾ ಬಟ್ಟಲಿಗೆ ಬಿಡಬೇಕು. (ಧಾರೆ ನೀರನ್ನು ಫಲ ಬರುವ ಮರದ ಬುಡಕ್ಕೆ ವರನ ಕಡೆಯವರು ಹಾಕುವರು) ನಂತರ ಊರುಗೌಡರ ಒಕ್ಕಣೆಯೊಂದಿಗೆ ಮದುಮಗ-ಮದುಮಗಳ ಕುತ್ತಿಗೆಗೆ ಮಾಂಗಲ್ಯ ಕಟ್ಟಬೇಕು. (ಒಕ್ಕಣೆ 3 ಸಲ ಹೇಳುವುದು). ವರನ ಕಡೆಯ ಕಂಚಿನಕ್ಕೆ ಬಟ್ಟಲಿನಲ್ಲಿಟ್ಟ (ಕಂಚಿಮೆ) ಕುಂಕುಮ ಕರಡಿಗೆಯಿಂದ ಕುಂಕುಮ ತೆಗೆದು ವಧುವಿನ ಹಣೆಗೆ ವರನು ತಿಲಕವಿಡಬೇಕು. ಆನಂತರ ವರನ ಶಲ್ಯಕ್ಕೆ ವಧುವಿನ ಸೀರೆ ಸೆರಗನ್ನು ಕಟ್ಟಬೇಕು. ವಧುವಿನ ತಂದೆ ವರನ ಕೈ ಹಿಡಿದು ಧಾರಾ ಮಂಟಪದಲ್ಲಿ 3 ಸುತ್ತು ಬರಬೇಕು. (ವಧುವಿನ ತಂದೆತಾಯಿ, ವರನ ತಂದೆತಾಯಿ ಧಾರಾ ಮಂಟಪಕ್ಕೆ ಇತ್ತಂಡದ ಕಂಚಿಮೆ ಸಹಿತ ಸುತ್ತು ಬರಬೇಕು.) ಕಲ್ಯಾಣಮಂಟಪದಲ್ಲಿ ಮದುವೆಯಾದರೆ ವಧುವಿನ ಕೋಣೆಗೆ ವಧು-ವರನನ್ನು ಕರೆದುಕೊಂಡು ಹೋಗಬೇಕು. ವಧುವಿನ ಮನೆಯಲ್ಲಿ ಮದುವೆಯಾದರೆ ವಧುವಿನ ಮನೆಯೊಳಗೆ ಕರಕೊಂಡು ಹೋಗುವರು.