ಧಾರಾಕಾರ್ಯ
ಪರಿಕರಗಳು : ಕಾಲುದೀಪ, ಮಣೆ 2, ತಂಬಿಗೆ ನೀರು, ತೆರೆ ಹಿಡಿಯಲು ಶುಭ್ರ ಬಟ್ಟೆ, 10 ವೀಳ್ಯದೆಲೆ, 2 ಅಡಿಕೆ, ಕಂಚಿನಕ್ಕಿ, ಕೊಂಬು ಗಿಂಡಿ, ಹಿಂಗಾರದ ಮಾಲೆ 2. ದಾರೆ ಎರೆಯಲು ಕಂಚಿನ ಬಟ್ಟಲು 1, ತಾಳಿ ಕಂಠಿ,
ಕಂಚಿಮೆಯೊಂದಿಗೆ ಸೋದರ ಮಾವ ಮದುಮಗಳನ್ನು ಧಾರಾಮಂಟಪಕ್ಕೆ ಮೊದಲು ಕರೆತರಬೇಕು. (ಧಾರಾಮಂಟಪಕ್ಕೆ ಮದುಮಗ ಯಾ ಮದುಮಗಳನ್ನು ಕರೆದುಕೊಂಡು ಬರುವಾಗ ಮಡಿವಾಳರು ಮಡಿ ಬಟ್ಟೆ ಹಾಕುವ ಕ್ರಮವಿದೆ.) ಹಾಗೇ ಬರುವ ಮೊದಲು ಸೋದರ ಕಡೆಯ ಬಾವ ಮೈದುನರು ಶುಭ್ರ ಬಟ್ಟೆಯಿಂದ ತೆರೆಹಿಡಿಯಬೇಕು. ಆನಂತರ ಮದುಮಗನನ್ನು ಕರೆದುಕೊಂಡು ಬರಬೇಕು. ಮದುಮಗ ಮತ್ತು ಮದುಮಗಳು ಧಾರಾ ಮಣೆಯ ಮೇಲೆ ನಿಂತಿರಬೇಕು. ಇತ್ತಂಡದ 5 ಜನ ಮುತ್ತೈದೆಯರು ಕಂಚಿಮೆಗೆ ಅಕ್ಕಿ ಹಾಕಿ ಕೈ ಮುಗಿಯಬೇಕು. (ಹುಡುಗಿ ಕಡೆಯ ಕಂಚಿಮೆಗೆ ಹುಡುಗನ ಕಡೆಯವರು, ಹುಡುಗನ ಕಡೆಯ ಕಂಚಿಮೆಗೆ ಹುಡುಗಿ ಕಡೆಯವರು ಪರಸ್ಪರ ಕೈ ಮುಗಿಯುವರು) ಇತ್ತಂಡದ ಊರುಗೌಡರುಗಳು ಕೊಂಬುಗಿಂಡಿಯಲ್ಲಿದ್ದ ಹಾಲನ್ನು ವರನ ಕಡೆಯ ಕೊಂಬು ಗಿಂಡಿಯಿಂದ ಹಾಗೂ ವಧುವಿನ ಕಡೆಯ ಕೊಂಬು ಗಿಂಡಿಯಿಂದ ಮೂರು ಮೂರು ಸಲ ಹೊಯ್ದುಕೊಳ್ಳಬೇಕು. (ಆದಲು-ಬದಲು ಮಾಡಿಕೊಳ್ಳುವುದು) ಕಂಚಿನಕ್ಕಿ (ಕಂಚಮೆ) ಮೇಲಿದ್ದ ತೆಂಗಿನ ಕಾಯಿಯನ್ನು ತೆಗೆದು ಅದನ್ನು ಕೂಡ ಅದಲು ಬದಲು ಮಾಡಿಕೊಳ್ಳಬೇಕು. ನಂತರ ಧಾರಾ ಸಮಯಕ್ಕೆ ಸರಿಯಾಗಿ ವಧುವಿನ ತಂದೆ ಇತ್ತಂಡದ ಕೊಂಬುಗಿಂಡಿಯಲ್ಲಿದ್ದ ಹಾಲನ್ನು ಧಾರೆ ಎರೆಯುವ ತಂಬಿಗೆಗೆ ಹಾಕಿಸಿಕೊಂಡು ಕಾಳಿಕಂಠಿಯನ್ನು ಇಟ್ಟು ಸಭೆಯಲ್ಲಿ ಹೋಗುವರು. ಇದನ್ನು ಸಭಿಕರೆಲ್ಲರೂ ಶುಭ ಹಾರೈಕೆಯೊಂದಿಗೆ ಮುಟ್ಟಿ ನಮಸ್ಕರಿಸುವರು. ಊರುಗೌಡರ ಒಕ್ಕಣೆಯೊಂದಿಗೆ (ಒಕ್ಕಣೆ 3 ಸಲ) ಮೊದಲು ಮದುಮಗಳು ಹಿಂಗಾರದ ಮಾಲೆಯನ್ನು ಮಧುಮಗನ ಕೊರಳಿಗೆ ಹಾಕಬೇಕು. ಮದುಮಗ ಕೂಡ ಹಾಗೇನೆ ಅವಳ ಕೊರಳಿಗೆ ಹಾಕುವನು. ಈ ಎಲ್ಲಾ ಕಾರ್ಯಗಳು ಆದ ನಂತರ ವರನ ತಂದೆ ಧಾರಾ ಬಟ್ಟಲಿನೊಂದಿಗೆ (ಕಂಚಿನಬಟ್ಟಲು, ತಯಾರಿರಬೇಕು. ವರನ ಕೈಯಲ್ಲಿ 5 ವೀಳ್ಯದೆಲೆ, 1 ಅಡಿಕೆ ವಧುವಿನ ಕೈಯಲ್ಲಿ ಕೂಡ ಅದೇ ರೀತಿ ಕೊಟ್ಟು ವರನ ಹಸ್ತದ ಮೇಲೆ ವಧುವಿನ ಹಸ್ತವನ್ನಿಟ್ಟು ಊರುಗೌಡರು ಹತ್ತು ಕುಟುಂಬ ಹದಿನೆಂಟು ಗೋತ್ರದ ಬಂಧು-ಬಾಂಧವರು, ನೆಂಟರಿಷ್ಟರು, ಗುರುಮನೆ, ಕಟ್ಟೆಮನೆ, ಸೀಮೆಮನೆ, ಮಾಗಣಮನೆ ಗೋತ್ರದ .... ಹೆಸರಿನ ವರನಿಗೆ..... ಗೋತ್ರದ ಹೆಸರಿನ ವಧುವಿನ ಕೈ ಮುಟ್ಟಿ ಕನ್ಯಾಧಾರೆ ಎರೆದು ಕೊಡುತ್ತೇವೆಂದು 3 ಸಲ ಹೇಳಬೇಕು (ವಧುವಿನ ತಂದೆ ಧಾರೆಯೆರೆಯುವರು ಅಥವಾ ಅವರು ಇಲ್ಲದಿದ್ದ ಪಕ್ಷದಲ್ಲಿ ಚಿಕ್ಕಪ್ಪ ಅಥವಾ ಸೋದರಮಾವ). ಸಭಿಕರು ಒಳ್ಳೆ ಕಾರ್ಯಂತ ಹೇಳಬೇಕು.
ಕು. ಮೊದಲು ಹುಡುಗಿ ಕೈ ಮೇಲೆ, 2ನೇ ಸಲ ಹುಡುಗಿ ಕೈ ಕೆಳಗಿರಬೇಕು. 3ನೇ ಸಲ ಹುಡುಗಿ ಕೈ ಮೇಲಿಟ್ಟು ಧಾರೆ ನೀರಿನೊಂದಿಗೆ ಎಲೆ ಅಡಿಕೆಯನ್ನು ಮದುಮಕ್ಕಳು ಧಾರಾ ಬಟ್ಟಲಿಗೆ ಬಿಡಬೇಕು. (ಧಾರೆ ನೀರನ್ನು ಫಲ ಬರುವ ಮರದ ಬುಡಕ್ಕೆ ವರನ ಕಡೆಯವರು ಹಾಕುವರು) ನಂತರ ಊರುಗೌಡರ ಒಕ್ಕಣೆಯೊಂದಿಗೆ ಮದುಮಗ-ಮದುಮಗಳ ಕುತ್ತಿಗೆಗೆ ಮಾಂಗಲ್ಯ ಕಟ್ಟಬೇಕು. (ಒಕ್ಕಣೆ 3 ಸಲ ಹೇಳುವುದು). ವರನ ಕಡೆಯ ಕಂಚಿನಕ್ಕೆ ಬಟ್ಟಲಿನಲ್ಲಿಟ್ಟ (ಕಂಚಿಮೆ) ಕುಂಕುಮ ಕರಡಿಗೆಯಿಂದ ಕುಂಕುಮ ತೆಗೆದು ವಧುವಿನ ಹಣೆಗೆ ವರನು ತಿಲಕವಿಡಬೇಕು. ಆನಂತರ ವರನ ಶಲ್ಯಕ್ಕೆ ವಧುವಿನ ಸೀರೆ ಸೆರಗನ್ನು ಕಟ್ಟಬೇಕು. ವಧುವಿನ ತಂದೆ ವರನ ಕೈ ಹಿಡಿದು ಧಾರಾ ಮಂಟಪದಲ್ಲಿ 3 ಸುತ್ತು ಬರಬೇಕು. (ವಧುವಿನ ತಂದೆತಾಯಿ, ವರನ ತಂದೆತಾಯಿ ಧಾರಾ ಮಂಟಪಕ್ಕೆ ಇತ್ತಂಡದ ಕಂಚಿಮೆ ಸಹಿತ ಸುತ್ತು ಬರಬೇಕು.) ಕಲ್ಯಾಣಮಂಟಪದಲ್ಲಿ ಮದುವೆಯಾದರೆ ವಧುವಿನ ಕೋಣೆಗೆ ವಧು-ವರನನ್ನು ಕರೆದುಕೊಂಡು ಹೋಗಬೇಕು. ವಧುವಿನ ಮನೆಯಲ್ಲಿ ಮದುವೆಯಾದರೆ ವಧುವಿನ ಮನೆಯೊಳಗೆ ಕರಕೊಂಡು ಹೋಗುವರು.