Saturday, October 26, 2024

ಗೌಡ ಸಂಸ್ಕೃತಿ-ಶವ ಸಂಸ್ಕಾರ

 ಮನುಷ್ಯನಿಗೆ ಹುಟ್ಟು ಮತ್ತು ಸಾವು ಇವೆರಡು ಜೀವನದ ಸಹಜ ಕ್ರಿಯೆಗಳೆಂದು ಹೇಳಬಹುದು. ಹುಟ್ಟಿನಿಂದ ಆರಂಭಿಸಿ ಬದುಕಿನುದ್ದಕ್ಕೂ ಆತ ಪಡುವ ಸುಖದಃಖಗಳ ಮಧ್ಯೆ ತನ್ನ ಬದುಕನ್ನು ಗಟ್ಟಿಗೊಳಿಸಿ ಒಬ್ಬ ವ್ಯಕ್ತಿಯಾಗಿ ಸಮಾಜದ ಮಧ್ಯೆ ಬೆಳೆಯುತ್ತಾನೆ. ಬಾಲ್ಯ, ವಿದ್ಯಾಭ್ಯಾಸ, ಯೌವನ, ಉದ್ಯೋಗ, ಮದುವೆ, ಮಕ್ಕಳು ಇವುಗಳ ಮಧ್ಯೆ ಬದುಕುತ್ತಾ ಕೊನೆಗೊಂದು ದಿನ ಮರಣ ಹೊಂದುತ್ತಾನೆ. ಬದುಕಿನ ಸಂಸ್ಕೃತಿಯಲ್ಲಿ ಮರಣದೊಂದಿಗೆ ವ್ಯಕ್ತಿ ಜಗತ್ತಿನ ಎಲ್ಲಾ ಸಂಬಂಧಗಳನ್ನು ಕಳೆದುಕೊಳ್ಳುತ್ತಾನೆ. ಮರಣದ ನಂತರದ ಸಂಸ್ಕಾರ, ಸೂತಕಗಳ ಬಗ್ಗೆ ನಡೆಸುವ ಕ್ರಿಯೆಗಳಿರುತ್ತವೆ. ವಿಭಿನ್ನ ಕಾಲ ಘಟ್ಟಗಳಲ್ಲಿ ಮರಣವಾಗುವ ವ್ಯಕ್ತಿಗಳಿಗೆ ಭಿನ್ನ ಭಿನ್ನ ಬಗೆಯ ಸಂಸ್ಕಾರ ಕ್ರಿಯೆಗಳಿರುತ್ತವೆ. ಬಾಲ್ಯ ಶವ ಸಂಸ್ಕಾರ, ಅವಿವಾಹಿತ ಶವ ಸಂಸ್ಕಾರ, ವಿವಾಹಿತ ಅಥವಾ ಆಯುಷ್ಯ ಮುಗಿದು ತೀರಿಕೊಂಡವರಿಗೆ ಸಂಬಂಧಿಸಿದ ಸಂಸ್ಕಾರ ಕ್ರಿಯೆಗಳನ್ನು ಇಲ್ಲಿ ಪ್ರತ್ಯೇಕವಾಗಿ ದಾಖಲಿಸಲಾಗಿದೆ. ಎಲ್ಲಾ ಸಂಸ್ಕಾರ ಕ್ರಿಯೆಗಳು ಊರಗೌಡರ ನೇತೃತ್ವದಲ್ಲಿ ನಡೆಯುವುದು

ಬಾಲ್ಯ ಶವ ಸಂಸ್ಕಾರ ಕ್ರಿಯೆ : ಅಪ್ರಾಪ್ತ ಮಕ್ಕಳು ಮೃತರಾದರೆ ಅವರಿಗೆ ಮಾಡುವ ಸಂಸ್ಕಾರದಲ್ಲಿ ಭಿನ್ನತೆ ಇರುತ್ತದೆ. ಶವವನ್ನು ದಫನ ಮಾಡುತ್ತಾರೆ ಸುಡುವುದಿಲ್ಲ. ಮೃತ ಮಗುವನ್ನು ಸ್ನಾನ ಮಾಡಿಸಿ ದಕ್ಷಿಣ ದಿಕ್ಕಿಗೆ ತಲೆ ಬರುವಂತೆ ಮಲಗಿಸುವುದು, ಸ್ನಾನ ಮಾಡಿಸಿದ ನಂತರ ಮಡಿಬಟ್ಟೆಯನ್ನು ತೊಡಿಸಿ ಬಿಳಿ ಬಟ್ಟೆಯನ್ನು ಹೊದಿಸಿ ಚಾಪೆ ಹಾಸಿ ಮಲಗಿಸಬೇಕು. ಗಂಧದ ತಿಲಕವಿಡಬೇಕು (ಬೊಟ್ಟು), ಹಾಲು ನೀರು ಮಿಶ್ರ ಮಾಡಿ ಸ್ವಲ್ಪ ಬೆಳ್ಳಿಗೆ ಅಕ್ಕಿ ಹಾಕಿ ಒಟ್ಟಿಗೆ ತುಳಸಿ ಕೊಡಿಯನ್ನು ಕಂಚಿನ ಬಟ್ಟಲಲ್ಲಿ ಇಡಬೇಕು. ದೀಪ ಹಚ್ಚಿ ಅಗರಬತ್ತಿ ಹಚ್ಚಿಡಬೇಕು. ನಂತರ ಪ್ರತಿಯೊಬ್ಬರ ಶವದ ಬಾಯಿಗೆ ನೀರು ಕೊಡಬೇಕು. ಈ ಎಲ್ಲಾ ಕ್ರಮ ಮುಗಿದ ನಂತರ ಮಗುವನ್ನು ದಫನ ಸ್ಥಳಕ್ಕೆ ಬಿಳಿ ಬಟ್ಟೆಯಲ್ಲಿ ಸುತ್ತಿ ಕೈಯಲ್ಲಿ ಎತ್ತಿಕೊಂಡು ಹೋಗಬೇಕು (ಚಟ್ಟ ಉಪಯೋಗಿಸುವಂತಿಲ್ಲ) ದಫನ ಮಾಡುವ ಸ್ಥಳದಲ್ಲಿ ಉತ್ತರ-ದಕ್ಷಿಣವಾಗಿ ಕನಿಷ್ಠ 5 ಅಡಿ ಆಳದ ಹೊಂಡ ಮಾಡಿರಬೇಕು. ಮಗುವಿನ ತಂದೆಯೂ, ಹತ್ತಿರದ ಸಂಬಂಧಿಕರು ಮಗುವನ್ನು ದಕ್ಷಿಣಕ್ಕೆ ತಲೆ ಬರುವಂತೆ ತೋಡಿದ ಹೊಂಡದಲ್ಲಿ ಮಲಗಿಸಬೇಕು. ನಂತರ ಸ್ವಲ್ಪ ಹಾಲು ಹೊಯ್ದು ಹೂ ಹಾಕಿ ಪ್ರತಿಯೊಬ್ಬರೂ 3 ಹಿಡಿಯಷ್ಟು ಮಣ್ಣನ್ನು ಶವದ ಮೇಲೆ ಹಾಕಬೇಕು. ಪೂರ್ತಿ ಮಣ್ಣು ಹಾಕಿ ಹೊಂಡ ಮುಚ್ಚಿ ನೆಲದಿಂದ ಎತ್ತರ ಬರುವಂತೆ ಮಣ್ಣು ಹಾಕಿ ದಫನ ಕಾರ ಮುಗಿಸಬೇಕು. ಇದರ ಮೇಲೆ 3 ಕಲ್ಲುಗಳನ್ನಿಡಬೇಕು. (ತಲೆ ಮಧ್ಯ ಕಾಲು ಭಾಗಕ್ಕೆ ಬರುವಂತೆ). ನಂತರ ಎಲ್ಲರೂ ಸ್ನಾನ ಮಾಡಬೇಕು. 3ನೇ ದಿನದಲ್ಲಿ ದೂಪೆ ಇದ್ದಲ್ಲಿಗೆ ಹೋಗಿ ಇಟ್ಟಂತಹ ಕಲ್ಲುಗಳನ್ನು ತೆಗೆದು ಹಾಲು ಹೊಯ್ದು, ಸುತ್ತು ಬಂದು, ಸರಳಿ ಸೊಪ್ಪಿನ ಕಣೆಯನ್ನು ಕುತ್ತಿ ಹಾಲು-ಅನ್ನವನ್ನು ಗೆರಟೆಯಲ್ಲಿಡಬೇಕು. ಒಂದು ಎಳನೀರು ಕೆತ್ತಿ ಇಡಬೇಕು. ನಂತರ ಸ್ನಾನ ಮಾಡಿ ಮನೆಗೆ ಬಂದ ಮೇಲೆ ದೇವಸ್ಥಾನದಿಂದ ತಂದ ಪುಣ್ಯಾರ್ಚನೆಯನ್ನು ಹಾಕಿ ಶುದ್ಧ ಮಾಡಿಕೊಳ್ಳಬೇಕು. 10 ದಿನದವರೆಗೆ ಸೂತಕ ಆಚರಣೆ ಮಾಡಬೇಕು. 11ನೇ ದಿನದಲ್ಲಿ ದೂಫೆ ಇದ್ದಲ್ಲಿಗೆ ಹೋಗಿ ನೆನೆಬತ್ತಿ ಹಾಗೂ ಅಗರಬತ್ತಿ ಹೊತ್ತಿಸಿ ಇಟ್ಟು ಹುರುಳಿ, ಬಾಳೆಕಾಯಿ, ಕುಂಬಳಕಾಯಿ ಪದಾರ್ಥ ಮಾಡಿ ಜೊತೆಗೆ ಅನ್ನ ಮತ್ತು ಅಕ್ಕಿ ಪಾಯಸ, ಸಿಹಿ ತಿಂಡಿಗಳು, ಹಾಲು, ಎಳನೀರು ಇಟ್ಟು ಬರಬೇಕು.

ಅವಿವಾಹಿತ ಶವಸಂಸ್ಕಾರ ಕ್ರಿಯೆ:ಅವಿವಾಹಿತರಾಗಿದ್ದು ಮೃತರಾದರೆ ಶವ ಸಂಸ್ಕಾರದ ಎಲ್ಲಾ ಸಂಪ್ರದಾಯಗಳನ್ನು ಮಾಡುವುದು. (ಆದರೆ ಕಾಟದ ಅಡಿಯಲ್ಲಿ ಚಿಕ್ಕ ಹೊಂಡವನ್ನು ಮಾಡಿಕೊಳ್ಳಬೇಕು).

ಮರಣಕ್ಕೆ ನಡೆಸುವ ಸಂಸ್ಕಾರ ಕ್ರಿಯೆಗಳು:
ಸಹಜವಾಗಿ ವ್ಯಕ್ತಿ ಮರಣವಾದಾಗ ಕುಟುಂಬದ ಸದಸ್ಯರಿಗೆ, ಮೃತನ ಆಪ್ತರಿಗೆ ಮತ್ತು ಊರಿನ ಪ್ರಮುಖರಿಗೆ ಸುದ್ದಿ ತಿಳಿಸಬೇಕು. (ಆಕಾಶಕ್ಕೆ 2 ಗುಂಡುಗಳನ್ನು ಹಾರಿಸುವುದರ ಮೂಲಕ ಕೂಡಾ ನೆರೆ-ಕರೆಯವರಿಗೆ ಸತ್ತ ಸೂಚನೆಯನ್ನು ನೀಡುವುದುಂಟು.) ಮರಣವಾದಾಗ ಚಾಪೆಯ ಮೇಲೆ ಶವವನ್ನು ದಕ್ಷಿಣಕ್ಕೆ ತಲೆ ಇರುವಂತೆ ಮಲಗಿಸಿ ಬಿಳಿ ಬಟ್ಟೆಯನ್ನು ಹೊದಿಸಬೇಕು. ಕಂಚಿನ ಬಟ್ಟಲಲ್ಲಿ ಬೆಳ್ತಿಗೆ ಅಕ್ಕಿ, ತುಳಸಿಯ ತುದಿ, ನೀರನ್ನು ಹಾಕಿಡಬೇಕು. ಶವದ ಎಡಭಾಗದಲ್ಲಿ ತಲೆಯಪಕ್ಕ ಕಾಲುದೀಪ ಹಚ್ಚಿಡಬೇಕು. ಶವದ ಬಾಯಿಗೆ ಕಂಚಿನ ಬಟ್ಟಲಲ್ಲಿದ್ದ ತುಳಸಿ ತುದಿಯಿಂದ ನೀರು ಬಿಡಬೇಕು. ಒಂದು ಮಣ್ಣಿನ ಮಡಕೆಯಲ್ಲಿ ಕೆಂಡಹಾಕಿ ಒಡೆದ ಕೊಬ್ಬರಿ ಹಾಗೂ ಗಂಧಧೂಪ ಹಾಕಿ ಹೊಗೆಬರುವಂತೆ ಮಾಡಬೇಕು. ಮನೆಯವರು ತೆಂಗಿನಕಾಯಿ ಒಡೆದು ತಲೆಯ ಹತ್ತಿರ ಹಾಗೂ ಕಾಲಿನ ಹತ್ತಿರ ಇಟ್ಟು ಅದಕ್ಕೆ ಎಣ್ಣೆ ಹಾಕಿ ನೆನೆಬತ್ತಿ ಹಚ್ಚಿಡಬೇಕು. ಪೂರ್ವಪದ್ಧತಿ ಪ್ರಕಾರ ಮಾಡು (ಛಾವಣಿ) ತೂತು ಮಾಡಿ ಒಂದು ದೊಣ್ಣೆಯನ್ನು ಆ ತೂತಿನಲ್ಲಿ ದಾಟಿಸುವುದು ಕ್ರಮ. [ಈ ತೂತಿನ ಮೂಲಕ ಸತ್ತವನ ಆತ್ಮ ಆಕಾಶ ಮಾರ್ಗವಾಗಿ ಹೋಗುವುದೆನ್ನುವ ನಂಬಿಕೆ]. ಹತ್ತಿರದ ಬಂಧುಗಳು ಹಣೆಗೆ ನಾಣ್ಯ (ಪಾವಲಿ) ವನ್ನಿಟ್ಟು ತುಳಸಿ ತುದಿಯಿಂದ ಬಲಗೈ ಸೇರಿಸಿ, ಎಡಗೈಯಲ್ಲಿ ಸ್ವರ್ಗಕ್ಕೆ ಹೋಗು ಎಂದು 3 ಸಲ ನೀರು ಬಿಡುವರು. ತೀರಿಕೊಂಡವರು ಹಿರಿಯರಾದರೆ ಕಾಲುಮುಟ್ಟಿ ನಮಸ್ಕರಿಸುವರು, ಕಿರಿಯರಾದರೆ ತಲೆಮುಟ್ಟಿ ನಮಸ್ಕರಿಸುವುದು ಪೂರ್ವಪದ್ಧತಿ. ನೀರು ಕೊಟ್ಟ ಮೇಲೆ ಅಪ್ರದಕ್ಷಿಣೆಯಾಗಿ ಸುತ್ತು ಬರುವರು. (ಹಣೆಗೆ ನಾಣ್ಯ ಇಡುವುದು, ಹೆಣಕ್ಕೆ ಬಟ್ಟೆ ಹಾಕುವುದು ಸತ್ತವನ ಋಣಮುಕ್ತನಾಗುವ ಉದ್ದೇಶದಿಂದ ಎಂಬ ನಂಬಿಕೆಯಿದೆ). ಕುಟುಂಬಸ್ಥರು ಹಾಗೂ ಹತ್ತಿರದ ಸಂಬಂಧಿಕರು ಬಂದ ಮೇಲೆ ಹೆಣವನ್ನು ಸ್ನಾನ ಮಾಡಿಸಲು ತಯಾರಿ ನಡೆಸುವರು. ಮನೆ ಒಳಗೆ ಮಣ್ಣಿನ ಮಡಕೆಯಲ್ಲಿ ಸ್ನಾನಕ್ಕೆ ಬೇಕಾದಷ್ಟು ನೀರನ್ನು ಉಗುರು ಬಿಸಿಯಾಗುವಂತೆ ಕಾಯಿಸುವರು. ಸ್ನಾನ ಮಾಡುವ ಜಾಗವನ್ನು ಗುರುತಿಸಿ ಹಲಗೆಯನ್ನು ಉತ್ತರ-ದಕ್ಷಿಣವಾಗಿ ಇಡುವರು. ಒಂದು ಗೆರಟೆಯಲ್ಲಿ ಎಣ್ಣೆ ಅರಿಶಿನದ ಮಿಶ್ರಣದೊಂದಿಗೆ ತುದಿ ಗರಿಕೆ, ನೀರು ಹಾಕುವುದಕ್ಕೆ ತೂತು ಇದ್ದ ಗೆರಟೆ, ಸೀಗೆ, ಬಾಗೆಗಳನ್ನು ಜೋಡಿಸಿಡಬೇಕು. ಕುಟುಂಬಸ್ಥರು ಹೆಣವನ್ನು ಕೈಯಲ್ಲಿ ಎತ್ತಿಕೊಂಡು ಕಾಲು ಮುಂದಾಗಿ ಹೊರಬರುವಂತೆ ಸ್ನಾನ ಮಾಡಿಸುವ ಜಾಗಕ್ಕೆ ತರುತ್ತಾರೆ. ದಕ್ಷಿಣಕ್ಕೆ ತಲೆ ಬರುವಂತೆ ಹಲಗೆಯಲ್ಲಿ ಹೆಣವನ್ನು ಮಲಗಿಸುವರು. ಪುರುಷರಾದರೆ ಕ್ಷೌರ ತೆಗೆಯುವ ಕ್ರಮವಿದೆ

ಸ್ನಾನ ಮಾಡಿಸುವ ಕ್ರಮ ಹಾಗೂ ಶವಶೃಂಗಾರ
ಸತ್ತ ವ್ಯಕ್ತಿಯನ್ನು ಸ್ನಾನ ಮಾಡಿಸುವಾಗ ಮೊದಲು ಹಿರಿಯರು ನಂತರ ಉಳಿದವರು ಸ್ನಾನ ಮಾಡಿಸುತ್ತಾರೆ. ಸ್ನಾನ ಮಾಡಿಸುವುದಕ್ಕೂ ಒಂದು ಕ್ರಮವಿದೆ ಅಪ್ರದಕ್ಷಿಣೆ ನೀರು ಹಾಕಿ ಎಡಗೈಯಲ್ಲಿ ಸ್ನಾನ ಮಾಡಿಸಬೇಕು. ಸ್ನಾನ ಮಾಡಿಸಿ ಮುಗಿದ ನಂತರ ಅವನು ಉಟ್ಟುಕೊಂಡಿರುವ ಬಟ್ಟೆ ಹಾಗೂ ಉಡಿದಾರವನ್ನು ಅಲ್ಲೇ ಬಿಚ್ಚಿಡಬೇಕು. ನಂತರ ಮೈ ಒರೆಸಿ ಶುದ್ಧ ವಸ್ತ್ರಗಳನ್ನು ತೊಡಿಸಿ ತಲೆಗೆ ಮುಂಡಾಸು ಕಟ್ಟಿ ಶಾಲು ಹಾಕಿ, ಗಂಧದ ತಿಲಕವನ್ನಿಡಬೇಕು. (ಮದುಮಗನಿಗೆ ಯಾವ ರೀತಿ ಸಿಂಗಾರ ಮಾಡುತ್ತಾರೋ ಅದೇ ರೀತಿ.) ಆದರೆ ಅಂಗಿಯನ್ನು ತಿರುಗಿಸಿ ಹಾಕಬೇಕು. ಮುತ್ತೈದೆ ಹೆಂಗಸರು ತೀರಿ ಹೋದರೆ ಸ್ನಾನ ಮಾಡಿಸಿದ ನಂತರ ಧಾರೆ ಸೀರೆ ಉಡಿಸಿ ಹೂ-ಹಿಂಗಾರ ಇಟ್ಟು ಕುಂಕುಮ ಇಟ್ಟು ಮದುಮಗಳಿಗೆ ಯಾವ ರೀತಿ ಸಿಂಗಾರ ಮಾಡುತ್ತಾರೋ ಅದೇ ರೀತಿ ಸಿಂಗರಿಸುವರು. ವಿಧವೆಯಾಗಿದ್ದರೆ ಬಿಳಿ ಸೀರೆ ಉಡಿಸಿ ಹಣೆಗೆ ಗಂಧ ಹಚ್ಚುವರು. ಉಳಿದಂತೆ ಮೇಲಿನ ಕ್ರಮದ ಹಾಗೆ ಸ್ನಾನ ಮಾಡಿಸಿದ ನಂತರ ಮಡಿಕೆಯನ್ನು ಮಗುಚಿ ಹಾಕಿ ಬರಬೇಕು.(ಸ್ನಾನ ಮಾಡಿಸಿದ ಜಾಗವನ್ನು ನಂತರ ಯಾರೂ ದಾಟಬಾರದು). ಮನೆ ಒಳಗೆ ಚೌಕಿ (ಪಡಸಾಲೆ) ಯಲ್ಲಿ ಚಾಪೆ ಹಾಸಿ ಶವವನ್ನುುತ್ತರ ದಕ್ಷಿಣವಾಗಿ ಮಲಗಿಸುವರು. ಬಿಳಿ ಬಟ್ಟೆ ಹಾಕಿದ ನಂತರ ಗಂಡ ತೀರಿಕೊಂಡರೆ ಹೆಂಡತಿಯ ಧಾರೆ ಸೀರೆಯ ಅರ್ಧ ಭಾಗವನ್ನು ಮೊದಲು ಶವಕ್ಕೆ ಹೊದಿಸಬೇಕು. ನಂತರ 3 ಮೀಟರ್ ಉದ್ದದ ಬಿಳಿ ಬಟ್ಟೆಯನ್ನು ಶವದ ಮೇಲೆ ಹಾಕಬೇಕು. (ಈ ಬಟ್ಟೆ ಅಕ್ಕಿ ಭತ್ತ ಕಟ್ಟಲು ಉಪಯೋಗಿಸಬೇಕು). ಆ ನಂತರ ಬಂಧುಗಳು ತಂದಿರುವ ಬಿಳಿ ಬಟ್ಟೆಗಳನ್ನು ಶವದ ಮೇಲೆ ಹಾಕಬೇಕು.

ಕಾಟದ ತಯಾರಿ :
ಗೊತ್ತುಪಡಿಸಿದ ಜಾಗವನ್ನು ಸಮತಟ್ಟು ಮಾಡಿ ಸೌದೆಯನ್ನು ಜೋಡಿಸಿಡುವರು. ಮೂಲದವರಿಗೆ ಹೇಳಿಕೆಕೊಟ್ಟ ಪ್ರಕಾರ ಕಾಟ ಸಿದ್ದಪಡಿಸುವರು, ಸೌದೆಯ ಗಾತ್ರ, ಹೆಣದ ಅಳತೆಗಿಂತ 2 ಅಡಿಯಷ್ಟು ಉದ್ದವಿರಬೇಕು. ಪೂರ್ವ ಪಶ್ಚಿಮವಾಗಿ ದಪ್ಪದ ಎರಡು ಮರದ ದಂಡುಗಳನ್ನು (ಅಡಿಮರ) ಕೆಳಗಡೆ ಹಾಕಿ ಮೇಲೆ ಉತ್ತರ ದಕ್ಷಿಣವಾಗಿ ಸೌದೆ ಇರಿಸುವರು. (ಕಾಟಕ್ಕೆ ಸೌದೆ ಒಟ್ಟುವಾಗ - 2ಮಂದಿ ಸೌದೆಹಿಡಿದು ಒಟ್ಟತಕ್ಕದ್ದು)

ಚಟ್ಟದ ತಯಾರಿ :
ನೆರೆಹೊರೆಯವರು ಬಿದಿರು ಜೋಡಣೆಯಿಂದ ಚಟ್ಟ ತಯಾರು ಮಾಡುತ್ತಾರೆ. 2 ಬಿದಿರು (ಅಂದಾಜು 10 ಅಡಿ ಉದ್ದವಿರಬೇಕು)ಗಳನ್ನು ಸಮಾನಾಂತರವಾಗಿಟ್ಟು ತಟ್ಟೆಗಳನ್ನು (ಭಾಗ ಮಾಡಿದ ಬಿದಿರು) ಕತ್ತರಿ ಆಕಾರದಲ್ಲಿಟ್ಟು ಒಂದು ತುದಿ ಕೆಳಗಿನಿಂದ ಒಂದು ತುದಿ ಮೇಲಿನಿಂದ ಕಟ್ಟಬೇಕು. ಚಾಳೆ ಪಾಂದಾಳ ಕೊತ್ತಳಿಗೆಯ ಮೇಲಾಗಿದ ಬಳ್ಳಿ ಅಥವಾ ನಾರಣೆ ಬಳ್ಳಿಯಲ್ಲಿ ಕಟ್ಟುವರು.) ಚಟ್ಟ ಕಟ್ಟಿ ಆದ ಮೇಲೆ ಮನೆ ಎದುರುಗಡೆ ಮೆಟ್ಟಿಲ ಹತ್ತಿರ ಉತ್ತರ ದಕ್ಷಿಣವಾಗಿ ಇಡುವರು.

ಸೂಕರ - ತೆಂಗಿನ ಕೊತ್ತಳಿಗೆ ಅಥವಾ ಬಿದಿರನ್ನು ಭಾಗ ಮಾಡಿ ಅದರಲ್ಲಿ ಮಣ್ಣಿನ ಮಡಿಕೆಯನ್ನಿಟ್ಟು ಕಟ್ಟುವುದು

ಶವ ತೆಗೆಯುವ ಕ್ರಮ :
ಶವ ತೆಗೆಯುವ ಮೊದಲು ತೆಂಗಿನ ಗರಿಯ ಕಡ್ಡಿಗೆ 5 ವೀಳ್ಯದೆಲೆಯನ್ನು (ಪಂಚೋಲಿ ) ಪೋಣಿಸಿ ಶವದ ಎದೆ ಮೇಲೆ (ಬಟ್ಟೆ ಒಳಗಡೆ) ಇಡುವರು. (ಪೂರ್ವ ಪದ್ಧತಿ ಪ್ರಕಾರ ಪುರುಷರಿಗೆ ಸಾಂಕೇತಿಕವಾಗಿ ಹಾಲೆ ಮರದ ನೇಗಿಲ ಆಕೃತಿಯನ್ನು ಕುತ್ತಿಗೆಗೆ ನೇತು ಹಾಕುವರು). ಶವ ನೋಡಲು ಬಂದ ಜನರು ಶವದ ಮೇಲೆ ಬಟ್ಟೆ ಹೊದಿಸಿ ಬಾಯಿಗೆ ನೀರು ಕೊಡುವರು. ಕರ್ಮಕ್ಕೆ ನಿಂತವನು ಮೊದಲು 3 ಮೀಟರ್ ಉದ್ದದ ಬಟ್ಟೆಯಲ್ಲಿ ತಲೆ ಭಾಗಕ್ಕೆ 5 ಕುಡ್ತೆ ಅಕ್ಕಿಯನ್ನು ಕಾಲಿನ ಭಾಗಕ್ಕೆ 5 ಕುಡ್ತೆ  ಭತ್ತವನ್ನು ಹಾಕಬೇಕು. ನಂತರ ಸುಲಿದ ತೆಂಗಿನ ಕಾಯಿಯನ್ನು ಎಡ ಕೈಯಲ್ಲಿ ಹಿಡಿದು ಅಡಿಕೆ ಮತ್ತು ವೀಳ್ಯದೆಲೆಯನ್ನು  ಮೆಟ್ಟಿಲಲ್ಲಿ ಇಟ್ಟು ಗುದ್ದಿ ಪುಡಿ (ಹುಡಿ ಸಣ್ಣದಾಗಿ) ಮಾಡಬೇಕು. ಆದಾದ ನಂತರ ತೆಂಗಿನ ಕಾಯಿಯನ್ನು ಮೆಟ್ಟಲಿಗೆ ಎಡಗೈಯಲ್ಲಿ ಗುದ್ದಿ 2 ಭಾಗ ಮಾಡಬೇಕು. (ಎಲೆ ಅಡಿಕೆ ಹುಡಿಯನ್ನು ಪ್ರತ್ಯೇಕ ವೀಳ್ಯದ ಎಲೆಯಲ್ಲಿ ಸುತ್ತಿಟ್ಟುಕೊಳ್ಳಬೇಕು.) ಒಡೆದ ತೆಂಗಿನಕಾಯಿಯ ಗಂಡು ಗಡಿಯನ್ನು ಭತ್ತದ ಮೇಲೆ ಹೆಣ್ಣು ಗಡಿಯನ್ನು ಅಕ್ಕಿ ಮೇಲೆ ಇಡಬೇಕು. ಅದರಲ್ಲಿ ಎಣ್ಣೆ ಹಾಕಿ ಬತ್ತಿಯನ್ನು ಹಚ್ಚಿಡಬೇಕು. ಹಿರಿಯರು ಎಡಕೈಯಿಂದ ತಲೆಭಾಗ ಮಟ್ಟಿ ಹಾಗೂ ಕಿರಿಯರು ಎಡಗೈಯಿಂದ ಕಾಲಿನ ಭಾಗವನ್ನು ಮುಟ್ಟಿ ನಮಸ್ಕರಿಸುತ್ತಾ ನಾರಾಯಣ...... ನಾರಾಯಣ ನಾರಾಯಣ ಎಂದು ಹೇಳುತ್ತಾ ಅಪ್ರದಕ್ಷಿಣೆಯಾಗಿ ಸುತ್ತು ಬರುವರು. ಅಕ್ಕಿ ಮೇಲೆ ಇದ್ದ ತೆಂಗಿನ ಗಡಿಯಲ್ಲಿರುವ ನೆನೆ ಬತ್ತಿಯನ್ನು ನಂದಿಸಿ ಗಂಧದ ದೂಪದ ಮಡಿಕೆಗೆ ಹಾಕಬೇಕು. ಆ ತೆಂಗಿನ ಕಾಯಿ ಗಡಿಯನ್ನು ಪೂರ್ವ ಬಾಗಿಲಿನ ಮಾಡಿನ ಸೆರೆಯಲ್ಲಿಡಬೇಕು. (ಈಗ ತಾರಸಿ ಮನೆಗಳಿರುವ ಕಾರಣ ಅನುಕೂಲವಾದ ಜಾಗದಲ್ಲಿ ಜಾಗ್ರತೆಯಾಗಿ ತೆಗೆದಿಡುವುದು ಸೂಕ್ತ) ನಂತರ ಕರ್ಮಕ್ಕೆ ನಿಂತವನು ಮೊಣಕಾಲೂರಿ ಅಕ್ಕಿ ಮತ್ತು ಭತ್ತವನ್ನು ಪ್ರತ್ಯೇಕ ಪ್ರತ್ಯೇಕವಾಗಿ ಕಟ್ಟಬೇಕು. ಚಾಪೆ ಸಮೇತ ಶವವನ್ನು ಎತ್ತಿ ಹೊರಗೆ ತಂದು (ಕಾಲು ಮೊದಲು ಹೊರಗೆ ಬರುವಂತೆ) ಚಟ್ಟದ ಮೇಲೆ ತಲೆ ದಕ್ಷಿಣ ಭಾಗಕ್ಕೆ ಬರುವಂತೆ ಮಲಗಿಸಬೇಕು. ಒಳಗಡೆ ಹೆಣ ಮಲಗಿಸಿದ್ದಲ್ಲಿ ಹಾಲೆ ಮರ ತೊಗಟೆ (ಕೆತ್ತೆಯಿಂದ) ಸೆಗಣಿ ಹಾಕಿ ಸಾರಿಸಬೇಕು. (ಸೊಸೆ ಅಥವಾ ಯಾರಾದರೂ ಹತ್ತಿರದ ಸಂಬಂಧಿಗಳು). ಹೊದಿಸಿದ ಬಟ್ಟೆಯನ್ನು ಹರಿದು ಕಾಲಿನ ಹಾಗೂ ಕೈ ಹೆಬ್ಬೆರಳಗಳನ್ನು ಜೋಡಿಸಿ ಕಟ್ಟಬೇಕು. ಆಮೇಲೆ ಶವವನ್ನು ಚಟ್ಟದಲ್ಲಿ ಭದ್ರವಾಗಿ ಕಟ್ಟುವರು. ಒಳಗೆ ಇದ್ದ ಗಂಧ ದೂಪದ ಬೆಂಕಿಯನ್ನು ಅಂಗಳದಲ್ಲಿಟ್ಟ ಸೂಕರದಲ್ಲಿ ಹಾಕುವರು. ಆ ನಂತರ ಕಾಲಿನ ಕಡೆಯಿಂದ ಕುಟುಂಬಸ್ಥರು ತಲೆ ಕಡೆಯಿಂದ ಊರವರು ಚಟ್ಟ ಎತ್ತಿ ನಾರಾಯಣ. ನಾರಾಯಣ ನಾರಾಯಣ ಹೇಳುತ್ತಾ ಹೋಗುವರು. [ಹೋಗುವಾಗ ಸೂಕರವನ್ನು ಊರವರು ಮುಂದೆ ಹಿಡಿದು ಹೋಗುವರು]. ಅಲ್ಲದೇ ಬಾಯಿಗೆ ನೀರು ಕೊಟ್ಟ ಕಂಚಿನ ಬಟ್ಟಲು, 5 ವೀಳ್ಯದೆಲೆ, 1 ಅಡಿಕೆ, ಗುದ್ದಿ ಹುಡಿ ಮಾಡಿದ ಎಲೆ ಅಡಿಕೆ, ಒಂದು ಎಳನೀರು, ಒಂದು ಬಟ್ಟಲಲ್ಲಿ ಗಂಜಿನೀರು, ಹೆಣಕ್ಕೆ ಹಾಕಿದ ನಾಣ್ಯ, ಒಣಗಿದ ಗೋಟು ಕಾಯಿ ಇತ್ಯಾದಿಗಳನ್ನು ಕೂಡ ಕೊಂಡೊಯ್ಯಬೇಕು. ಅರ್ಧ ದಾರಿಗೆ ಬಂದಾಗ ಚಟ್ಟ ಕೆಳಗಿಳಿಸಿ ತಂದ 5 ವೀಳ್ಯದೆಲೆ 1 ಅಡಿಕೆಯನ್ನು ಕರ್ಮಕ್ಕೆ ನಿಂತವನು ಮೊಣಕಾಲೂರಿ ಒಂದು ಕಲ್ಲಿನ ಅಡಿಗೆ ಇಡಬೇಕು. (ಕ್ರಮ : ಹೋಗುವ ದಾರಿಗೆ ವಿಮುಖವಾಗಿ ಮಂಡಿಯೂರಿ ಕುಳಿತು ಹಿಂಬಾಗದಲ್ಲಿರುವ ಕಲ್ಲಿನಡಿಗೆ ಕೈಯನ್ನು ಬೆನ್ನಹಿಂದೆ ತಂದು ಇಡಬೇಕು) ಅಲ್ಲಿಂದ ನಂತರ ಚಟ್ಟವನ್ನು ತಿರುಗಿಸಿ ತಲೆ ಮುಂದಾಗಿಕೊಂಡು ಹೋಗುವರು. (ತಲೆಮುಂದಾಗಿ ಕೊಂಡು ಹೋಗುವ ಉದ್ದೇಶ ದೇಹಕ್ಕೆ ಮತ್ತೆ ಜೀವ ಬರುವ ಸಂಭವವಿರುತ್ತದೆನ್ನುವ
ಹಿಂದಿನವರ ನಂಬಿಕೆಗಾಗಿ ಈ ಕ್ರಮವನ್ನು ಅನುಸರಿಸುತ್ತಾರೆ. ಆದರೆ ಕೆಲ ಭಾಗಗಳಲ್ಲಿ ಈ
ಕ್ರಮವಿರುವುದಿಲ್ಲ) ಸೂಕರ ಸಮೇತವಾಗಿ ಕಾಟಕ್ಕೆ 3 ಸುತ್ತು ಅಪ್ರದಕ್ಷಿಣೆಯಾಗಿ ಬಂದು
ಚಟ್ಟವನ್ನು ಕೆಳಗಿಡಬೇಕು. ಹಲಸಿನ ಸೊಪ್ಪು, ಮಾವಿನ ಸೊಪ್ಪು, ಇಡಿ ಬೂದಿ ಬಾಳೆಲೆಯನ್ನು
ದಂಡು ಸಮೇತ ಕಾಟದ ಮೇಲಿಡಬೇಕು. ಬಾಳೆಲೆ ಕೆಳಮುಖವಾಗಿದ್ದು ಎಲೆಯ ತುದಿ ಭಾಗ ತಲೆಯ ಕಡೆಗಿರಬೇಕು. (ಊರುಗೌಡರು ಮಾವಿನಸೊಪ್ಪಿನಿಂದ ಎಳನೀರನ್ನು ಕಾಟದ
ಮೇಲೆ ಚಿಮುಕಿಸಿ ಶುದ್ಧ ಮಾಡಿದ ನಂತರ ಶವ ಇಡಬೇಕು). ಚಟ್ಟದಲ್ಲಿ ಚಾಪೆಯನ್ನು
ಉಳಿಸಿ ಶವವನ್ನು ದಕ್ಷಿಣಕ್ಕೆ ತಲೆ ಮಾಡಿ ಕಾಟದ ಮೇಲೆ ಮಲಗಿಸಬೇಕು. ಶವ ತಂದ
ಚಾಪೆ ಮತ್ತು ಚಟ್ಟವನ್ನು ತುಂಡು ಮಾಡಿ ಎಸೆಯಬೇಕು. ಮನೆಯವರು ಕೊನೆಯದಾಗಿ
ಶವದ ಬಾಯಿಗೆ ತುಳಸಿ ನೀರು ಬಿಡುವರು. (ಇಲ್ಲಿ ನೀರು ಕೊಡುವ ಬಟ್ಟಲಿಗೆ ಸ್ವಲ್ಪ
ಎಳನೀರು ಹಾಕಬೇಕು. ತಡವಾಗಿ ಬಂದವರಿಗೆ ಶವದ ಬಾಯಿಗೆ ನೀರು ಕೊಡಲು ಅವಕಾಶ
ಕೊಡಬೇಕು). ನಂತರ ಮನೆಯವರು ಗಂಜಿ ತೆಳಿಯನ್ನು ಕೊಡಬೇಕು. ಎಳ ನೀರಿನಿಂದ
ಮುಖ ತೊಳೆದು ಗುದ್ದಿ ತಂದ ತಾಂಬೂಲವನ್ನು (ಮನೆಯ ಹೆಂಗಸರು) ಬಾಯಿಗಿಡುವರು.
ನಂತರ ಎಳನೀರಿನಿಂದ ಮುಖ ತೊಳೆದು ಬಾಯಿ ಸ್ವಚ್ಛ ಮಾಡಬೇಕು.
ಮೃತರು ಗಂಡಸಾದರೆ ಮೃತರ ಹೆಂಡತಿಯ ಸಹೋದರರು (ಅವರು ಇಲ್ಲದಿದ್ದಲ್ಲಿ ಗೋತ್ರದವರು) ಬಂದು (ಪೂರ್ವ ಪದ್ಧತಿ ಪ್ರಕಾರ) ತಾಳಿ, ಬಳೆ, ಮೂಗುತಿ, ಬೆಂಡು, ಕಾಲುಂಗುರವನ್ನು ತೆಗೆದು ಕಂಚಿನ ಬಟ್ಟಲಿಗೆ (ಹೆಣಕ್ಕೆ ನೀರು ಕೊಟ್ಟ ಕಂಚಿನ ಬಟ್ಟಲು) ಹಾಕುವರು. (ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆ ಸ್ವಇಚ್ಛೆಯಿಂದ ಮನೆಯಲ್ಲೆ ಈ ಶಾಸ್ತ್ರವನ್ನು ಮಾಡುವುದೆಂಬ ಸಮಾಜದ ಅಭಿಪ್ರಾಯವಾಗಿದೆ. ನಂತರ ತೆಗೆದುಕೊಂಡು ಹೋಗಿ ಸ್ನಾನ ಮಾಡಿಸಿದ ಮಡಕೆಯ ಅಡಿಯಲ್ಲಿಡಬೇಕು. ಇದನ್ನು 3ರ ಶುದ್ಧ ದಿನ ತೆಗೆಯುವುದು ಕ್ರಮ). ಸೋದರದವರು ತಾಳಿಯ ತುದಿಯಿಂದ ಸಣ್ಣ ತುಂಡನ್ನು ತೆಗೆದು ತುಳಸಿ ಕೊಡಿಯಲ್ಲಿಟ್ಟು ಮೃತನ ನಾಲಗೆಯ ಅಡಿಯಲ್ಲಿ ಇಡುವುದು. ಕೊನೆಯದಾಗಿ ಮೃತನ ಹೆಂಡತಿ ಹೆಣದ ಬಾಯಿಗೆ ನೀರು ಕೊಡಬೇಕು. ನಂತರ ಕುಂಠಿ ಹರಿಯುವುದು ಮಾಡಬೇಕು. [ಮೃತಳು ಹೆಂಗಸಾಗಿದ್ದರೆ ಶವ ಸ್ನಾನದ ನಂತರ ಶೃಂಗಾರ ಆಗಿ ಮನೆ ಒಳಗೆ ಉತ್ತರ ದಕ್ಷಿಣವಾಗಿ ಮಲಗಿಸಿ ಬಿಳಿ ಬಟ್ಟೆಯನ್ನು ಹೊದಿಸಿ, ಮುತ್ತೈದೆಯಾಗಿದ್ದರೆ ಬಿಚ್ಚಿದ ತಾಳಿಕಂಠಿಯನ್ನು ಎದೆಮೇಲೆ ಇಡಬೇಕು (ಸ್ನಾನ ಮಾಡಿಸುವಾಗ ಚಿನ್ನಾಭರಣ, ಉಡಿದಾರ ಬಿಚ್ಚಿಡಬೇಕು) ನಂತರ ಅರ್ಧ ದಾರೆ ಸೀರೆಯನ್ನು ಹೊದಿಸಬೇಕು. ಕಾಟದಲ್ಲಿ ಮನೆಯ ಕೊನೆಯ ವ್ಯಕ್ತಿ ನೀರು ಕೊಟ್ಟಮೇಲೆ ತಾಳಿ ಕಂಠಿಯನ್ನು ಬಟ್ಟಲಿಗೆ ತೆಗೆದು ಹಾಕಿ, ಬರುವಾಗ ಮನೆಗೆ ತರುವರು

ಕುಂಠಿ ಹರಿಯುವ ಕ್ರಮ:
ಊರುಗೌಡರು ಅಕ್ಕಿ ಭತ್ತ ಕಟ್ಟಿದ ಬಟ್ಟೆಯನ್ನು ಬಿಚ್ಚಿ ಬಟ್ಟೆಯ ಒಂದು ತುದಿಯಿಂದ ಕುಂಠಿಹರಿಯಬೇಕು. ಕುಂಠಿ ಹರಿಯುವಾಗ 2 ಕುಂಠಿ ಹರಿಯಬೇಕು. ಒಂದು ಕುಂಠಿ ಕರ್ಮಕ್ಕೆ ನಿಂತವರಿಗೆ ಹಾಗೂ ಒಂದು ಊರು ಗೌಡರಿಗೆ. (ಊರುಗೌಡರು ಸ್ನಾನ ಮಾಡಿದ ಮೇಲೆ ಮನೆಯ ಛಾವಣಿಗೆಗೆ (ಮಾಡು) ಎಸೆದು ಬೂದಿ ಮುಚ್ಚುವ ದಿನ ತೆಗೆದುಕೊಂಡು ಕೈಯಲ್ಲಿಟ್ಟುಕೊಳ್ಳುತ್ತಾರೆ. ಸ್ನಾನ ಮಾಡಿದ ಮೇಲೆ ಪುನಃ ತೆಗೆದುಕೊಂಡು ದೂಪೆ ಕೆಲಸ ಮುಗಿದ ಮೇಲೆ ಮನೆಯ ಛಾವಣಿಗೆಗೆ ಹಾಕುತ್ತಾರೆ- ಸೂತಕದ ಮನೆಯೆಂದು ತಿಳಿಯಲು) ಕರ್ಮಕ್ಕೆ ನಿಂತವನಿಗೆ ಹಾಗೂ ಸತ್ತವನಿಗೆ ಪತ್ನಿ ಇದ್ದರೆ ಅವರಿಗೆ ಎರಡೆರಡು ಬಟ್ಟೆಗಳನ್ನು ಶವದ ಮೇಲಿನಿಂದ ತೆಗೆದುಕೊಡಬೇಕು. ಇದಾದ ನಂತರ ಅಕ್ಕಿ ಭತ್ತವನ್ನು ಕಾಲು ಕಡೆಯಿಂದ ಕರ್ಮಕ್ಕೆ ನಿಂತವನು ತಲೆ ಕಡೆಯಿಂದ ಊರವರು ಒಟ್ಟಿಗೆ ಶವದ ಮೇಲೆ ಬರುವಂತೆ (ಮಿಶ್ರವಾಗಿ) ಸೇರಿಸಬೇಕು. ಹಲಸಿನ ಸೊಪ್ಪು, ಮಾವಿನ ಸೊಪ್ಪ ಶವದ ಮೇಲೆ ಇಟ್ಟು ಉಳಿದ 5 ಬಟ್ಟೆ ಶವದ ಮೇಲೆ ಬಿಟ್ಟು ಉಳಿದ ಬಟ್ಟೆಯನ್ನು ಸೌದೆ ತಯಾರು ಮಾಡಿದ ಹಾಗೂ ಪರಿಕಂತಂದ ಮೂಲದವನಿಗೆ ಕೊಡುವುದು ಪೂರ್ವಪದ್ಧತಿ.) ಮೊದಲೆ ಸಿದ್ಧಪಡಿಸಿದ 2. ಸೂಟೆಗಳಿಗೆ ಸೂಕರದಿಂದ ಬೆಂಕಿ ಹಚ್ಚಿ ಒಂದು ಸೂಟೆಯನ್ನು ಊರವರೂ, ಇನ್ನೊಂದನ್ನು ಕರ್ಮಕ್ಕೆ ನಿಂತವನ ಕೈಯಲ್ಲಿ ಕೊಟ್ಟು ಸೂಕರ ಹಿಡಿದವರು ಮುಂದೆ ಅವನ ಹಿಂದಿನಿಂದ ಊರಗೌಡರು, ಮೃತನ ಕುಟುಂಬದವರು, ನಾರಾಯಣ....ನಾರಾಯಣ.ನಾರಾಯಣ ಹೇಳುತ್ತಾ ಅಪ್ರದಕ್ಷಿಣೆಯಾಗಿ ಸುತ್ತು ಬರುವಾಗ ಕಾಟದ 4 ಮೂಲೆಗಳಿಗೆ ಮುಟ್ಟಿಸಿಕೊಂಡು ಬರಬೇಕು. ಹೀಗೆ 3 ಸುತ್ತು ಬಂದ ಮೇಲೆ ತಲೆ ಕಡೆಯಿಂದ ಊರವರು, ಕಾಲಿನ ಕಡೆಯಿಂದ ಕರ್ಮಕ್ಕೆ ನಿಂತವರು ಹಾಗೂ ಸಹೋದರರು ಬೆಂಕಿ ಕೊಡುವರು. ಎರಡೂ ಕಡೆಯಿಂದ ಬೆಂಕಿ ಕೂಡಿದ ಮೇಲೆ ಕತ್ತರಿ ಕುಂಟೆ ಜೋಡಿಸಿಡುವರು. (ಉದ್ದವಾದ ಮರದ ತುಂಡುಗಳು). ಇದಾದ ನಂತರ ಪೂರ್ವ ದಿಕ್ಕಿನಿಂದ ಊರವರು ಕತ್ತಿಯನ್ನು ಹಾಗೂ ಪಶ್ಚಿಮ ದಿಕ್ಕಿನಿಂದ ಮೂಲದವರು ಮಚ್ಚನ್ನು ಕಾಟದ ಮೇಲಿನಿಂದ ಎಸೆಯಬೇಕು. ಕುಟುಂಬದವರು ಈ ಮಚ್ಚನ್ನು ಹೆಕ್ಕಿ ತಂದು ಶವ ಸ್ನಾನ ಮಾಡಿಸಿದಲ್ಲಿ ಇಡುವರು(ಅಲ್ಲಿಗೆ ಸೌದೆ ಕಡಿಯಲು ಉಪಯೋಗಿಸಿದ ಎಲ್ಲಾ ಪರಿಕರಗಳನ್ನು ಒಂದು ಕಡೆ ಇಡುವರು. ಮೂರರ ಶುದ್ಧ ದಿನ ಪುಣ್ಯಾರ್ಚನೆ ಹಾಕಿ ಉಪಯೋಗಕ್ಕೆ ತೆಗೆದುಕೊಳ್ಳುವರು.) ನಂತರ ಎಲ್ಲರೂ ಸ್ನಾನಕ್ಕೆ ಹೋಗುವರು. ಮೊದಲು ಸರಳಿಸೊಪ್ಪಿನಿಂದ ಮೂರುಸಲ ತಲೆಗೆ ನೀರು ಚುಮುಕಿಸಿಕೊಂಡು ಸ್ನಾನ ಮಾಡುವರು. ಆ ದಿನ ರಾತ್ರಿಯಿಂದ ಶವ ಮಲಗಿಸಿದ ಸ್ಥಳದಲ್ಲಿ ಮಣೆ ಇಟ್ಟು ದಕ್ಷಿಣಾಭಿಮುಖವಾಗಿ ದೀಪ ಹಚ್ಚಿ ಒಂದು ತಂಬಿಗೆ ನೀರನ್ನು 10ರ ರಾತ್ರಿಯವರೆಗೆ ಕರ್ಮಕ್ಕೆ ನಿಂತವನು ಇಡಬೇಕು.

ಪಾಳಿಗೆ (ಕರ್ಮಕ್ಕೆ) ನಿಲ್ಲುವುದು :
ಮೃತರ ಮಗ ಅಥವಾ ಮಗನ ಸಮಾನರಾದವರು ಸತ್ತವರಿಗೆ ಗಂಡು ಸಂತತಿ ಇಲ್ಲದ ಪಕ್ಷದಲ್ಲಿ ಕುಟುಂಬದ ಸಹೋದರನ ಮಕ್ಕಳು, ಅವಿವಾಹಿತರು ತೀರಿ ಹೋದಲ್ಲಿ ಸಹೋದರನ ಮಕ್ಕಳು ಸತ್ತವನ ಕ್ರಮಕ್ಕೆ ನಿಲ್ಲುವುದು.

ಪಾಳಿಗೆ (ಕರ್ಮಕ್ಕೆ) ನಿಂತವರು ಆಚರಿಸುವ ಕ್ರಮಗಳು:
ಶುದ್ಧ ಕಾರ್ಯವಾಗುವವರೆಗೆ ಕರ್ಮಕ್ಕೆ ನಿಂತ ವ್ಯಕ್ತಿಯು ಪ್ರತಿದಿನ ತಣ್ಣೀರಿನಲ್ಲಿ ಬೆಳಿಗ್ಗೆ ಮತ್ತು ರಾತ್ರಿ ಸ್ನಾನ ಮಾಡಬೇಕು. ಸ್ನಾನ ಮಾಡದೇ ಊಟ ಮಾಡುವಂತಿಲ್ಲ. ಮಧ್ಯಾಹ್ನ ಗಂಜಿ ಮತ್ತು ತೆಂಗಿನಕಾಯಿ, ಎಣ್ಣೆ ಹಾಕದ ಉಪ್ಪು ಇಲ್ಲದ ಪದಾರ್ಥ ತೆಗೆದುಕೊಳ್ಳಬಹುದು ಬೆಳಿಗ್ಗೆ ಮತ್ತು ರಾತ್ರಿ ರಾಗಿ ಮಣ್ಣಿ ತಿನ್ನಬೇಕು. ಹಾಲು ಹಾಕಿದ ಕಾಫಿ, ಚಹಾ ಕುಡಿಯುವಂತಿಲ್ಲ.ವೀಳ್ಯಕ್ಕೆ ಸುಣ್ಣ ಬಳಸಬಾರದು, ಚಾಪೆಯಲ್ಲಿ ಮಲಗಬೇಕು. ಸಾಮಾನ್ಯ ಮನೆ ಬಿಡುವ ಹಾಗಿಲ್ಲ. ಗಡ್ಡ ಮೀಸೆ ತೆಗೆಯುವಂತಿಲ್ಲ, ಮೈಗೆ ಅಂಗಿ ಹಾಕುವಂತಿಲ್ಲ, ಸ್ನಾನ ಮಾಡುವಾಗ ಸಾಬೂನು ಕೂಡ ಹಾಕುವಂತಿಲ್ಲ. ಶವ ಸಂಸ್ಕಾರದ ದಿನ ಕೊಟ್ಟಂತಹ ಮಡಿಗಳನ್ನು ಉಟ್ಟುಕೊಳ್ಳಬೇಕು. ಹೆಗಲಲ್ಲಿ ಒದ್ದೆ ಕುಂಠಿ ಇರಬೇಕು.

ಪಾಸ ಹಿಡಿಯುವುದು :
ಶವ ಸಂಸ್ಕಾರ ಮಾಡಿ ಸ್ನಾನ ಮಾಡಿದ ಬಳಿಕ ಕುತ್ತಿಗೆಗೆ ಕುಂಠಿಯನ್ನು ಹಾಕಿ ಮನೆಯ ಮೆಟ್ಟಲಲ್ಲಿ ಅಂಗಳಕ್ಕೆ ಮುಖ ಮಾಡಿ ಕುಳಿತು ಹಲಸಿನ ಎಲೆಯನ್ನು ಗೊಂಡೆಯ ಹಾಗೆ ಮಾಡಿ ಅದರಲ್ಲಿ ಗಂಜಿಯ ತೆಲಿಯನ್ನು 3 ಸಲ ಕುಡಿಯಬೇಕು

ಕೊಳ್ಳಿ ಕೂಡಿಸುವುದು:
ಮಾರನೆಯ ದಿನ ಊರು ಗೌಡರು, ಮನೆಯವರು ಹಾಗೂ ಕುಟುಂಬಸ್ಥರು ಪ್ರಾತಃಕಾಲ ಸೇರಿ ಕೊಳ್ಳಿ ಕೂಡಿಸುವರು. ಹೊತ್ತದೆ ಇರುವ ಕೊಳ್ಳಿಗಳನ್ನು ಸೇರಿಸಿ ಬೆಂಕಿ ಕೊಡುವರು. ಹಾಲು ತುಪ್ಪ ಹೊಯ್ಯುವರು. ಆಮೇಲೆ ಸ್ನಾನ ಮಾಡಿ ಮನೆಗೆ ಹೋಗುವರು.

ಮೂರರ ಶುದ್ಧ:
ಶವ ಸಂಸ್ಕಾರದ ಮೂರನೇ ದಿನ ಊರುಗೌಡರು, ಕುಟುಂಬಸ್ಥರು ಮತ್ತು ಬಂಧು ಬಳಗದವರು ಮೃತನ ಮನೆಯಲ್ಲಿ ಸೇರುತ್ತಾರೆ. ಈ ಮೊದಲೇ ಹೇಳಿಕೆ ಕೊಟ್ಟ ಪ್ರಕಾರ ಕ್ಷೌರಿಕ ಅಥವಾ ಮಡಿವಾಳರು ಈ ದಿನ ಬರುತ್ತಾರೆ. ಇವರು ಎಳನೀರನ್ನು ಚಿತಾ ಭಸಕ್ಕೆ ಸಿಂಪಡಿಸುತ್ತಾರೆ. ಚಿತೆಯ ಮಧ್ಯಭಾಗಕ್ಕೆ ಸಾಕಷ್ಟು ನೀರು ಹಾಕಿ ಬಿಸಿಯನ್ನು ತಣ್ಣಗೆ ಮಾಡುತ್ತಾರೆ. ನಂತರ ಕರ್ಮಕ್ಕೆ ನಿಂತವನು ಎಡ ಕೈಯಲ್ಲಿ ಹಾರೆ ಹಿಡಿದು ಚಿತಾಭಸ್ಮವನ್ನು ಕಾಲು, ಮಧ್ಯ ಹಾಗೂ ತಲೆ ಇವುಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ ಗುರುತು ಮಾಡುತ್ತಾನೆ. ಕುಟುಂಬಸ್ಥರು ಕಾಲು, ಮಧ್ಯ ಹಾಗೂ ತಲೆ ಭಾಗದ ಬೂದಿಯನ್ನು ಪ್ರತ್ಯ ಪ್ರತ್ಯೇಕವಾಗಿ ರಾಶಿ ಮಾಡುತ್ತಾರೆ. ಮಧ್ಯದಲ್ಲಿ ಒಂದು ಹೊಂಡವನ್ನು ತೆಗೆಯುತ್ತಾರೆ. (ಸಾಕಷ್ಟು ದೊಡ್ಡದು ಇರಬೇಕು). ಕರ್ಮಕ್ಕೆ ನಿಂತವನು ಎಡಗೈಯಲ್ಲಿ ಹಾರೆ ಹಿಡಿದು ಮೊದಲು ಕಾಲಿನ ಭಾಗದ ಬೂದಿಯನ್ನು ತೆಗೆದು ಹೊಂಡಕ್ಕೆ ಹಾಕಿ ನೀರು ಹಾಕಬೇಕು. ನಂತರ ಮಧ್ಯಭಾಗ, ಕೋನೆಗೆ ತಲೆಭಾಗದ ಬೂದಿಯನ್ನು ಹಾಕಿ ಕುಟುಂಬದವರೆಲ್ಲರೂ ಹಾಲು-ತುಪ್ಪ ಹೊಯ್ಯುವರು. ಇದಾದ ನಂತರ ಸುತ್ತಲೂ ಇದ್ದ ಮಣ್ಣನ್ನು ಕೆರೆದು ತೆಗೆದು ಸಾಕಷ್ಟು ನೀರು ಹಾಕಿ ಎತ್ತರವಾಗಿ ಧೂಪೆ ಮೆತ್ತುವರು. ಉತ್ತರ ಭಾಗಕ್ಕೆ ಒಂದು ಸಣ್ಣ ಮೆಟ್ಟಿಲು ಮಾಡಬೇಕು. ಸೋದರದವರು ಮೊದಲು ಸರಳಿ ಕಣೆಯನ್ನು ಧೂಪೆಯ ಮುಂಬಾಗದಲ್ಲಿ ಕುತ್ತಬೇಕು. ನಂತರ ಕರ್ಮ ಹಿಡಿದವ ಹಾಗೂ ಕುಟುಂಬದವರು ಮತ್ತು ನೆಂಟರಿಷ್ಟರು ಧೂಪೆಯ ಸುತ್ತ ಸರಳಿ ಕಣೆ ಕುತ್ತುವರು. (ಇದನ್ನು ಹಗ್ಗದಿಂದ ಭದ್ರವಾಗಿ ಕಟ್ಟಬೇಕು.) ಎಳನೀರು ತೂತು ಮಾಡಿ ಇಡುವರು. ಸ್ನಾನ ಮಾಡಿ ಬಂದು ದೇವಸ್ಥಾನದಿಂದ ಊರವರು ತಂದ ಪುಣ್ಯಾರ್ಚನೆಯನ್ನು ಹಾಕಿಕೊಳ್ಳುವರು. ಶವ ಸ್ನಾನ ಮಾಡಿಸಿದಲ್ಲಿಗೆ, ಸೌದೆ ಮಾಡಿದ ಪರಿಕರಗಳಿಗೆ, ಕೊಟ್ಟು ಪಿಕ್ಕಾಸುಗಳಿಗೆ ಹಾಗೂ ಮನೆಗೂ ಪುಣ್ಯಾರ್ಚನೆ ಹಾಕಬೇಕು. ಊರವರು ಮಾಡಿದ ಫಲಾಹಾರ ಮುಗಿಸಿದ ನಂತರ ತಿಥಿ ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆಸುವರು.

ಸರಕು ಪದ್ಧತಿ (ತಾಯಿ/ತಂದೆ ಸತ್ತಾಗ ಕೊಟ್ಟ ಹೆಣ್ಣು ಮಕ್ಕಳು ಸರಕು ಕಳುಹಿಸುವುದು) :
ಮುಡಿ ಅಕ್ಕಿ, ಒಂದು ಕುಂಬಳಕಾಯಿ, ಬೂದಿ ಬಾಳೆಗೊನೆ, ತೆಂಗಿನಕಾಯಿ, ಅಡಿಗೆಗೆ ಬೇಕಾಗುವ ಎಲ್ಲಾ ಸಾಮಾನುಗಳನ್ನು (ಬೆಳ್ಳುಳ್ಳಿ ಮತ್ತು ಸಾಸಿವೆಯನ್ನು ಹೊರತುಪಡಿಸಿ). ಅಲ್ಲದೇ ಅಡಿಕೆ, ವೀಳ್ಯದೆಲೆ, ಸುಣ್ಣ, ಹೊಗೆಸೊಪ್ಪು, ಬಾಳೆಲೆ ಎಲ್ಲವನ್ನು ಒಂದು ಬುಟ್ಟಿಯಲ್ಲಿ ಇರಿಸಿ ಮೂಲದವರನ್ನು ಕರೆದು ಆತನಿಗೆ ತಲೆಗೆ ಎಣ್ಣೆ ಕೊಟ್ಟು, ಹೊಟ್ಟೆ ತುಂಬಾ ಊಟ ಕೊಟ್ಟು, ಖರ್ಚಿಗೆ ಹಣ ಕೊಟ್ಟು ವಾಲಗದೊಂದಿಗೆ ತವರು ಮನೆಗೆ ಕಳುಹಿಸುವರು. (ಮಗಳು ಒಂದು ತಂಬಿಗೆಯಲ್ಲಿ ಎಣ್ಣೆ ಹಿಡಿದುಕೊಂಡು ಬಿಳಿ ಸೀರೆ ಉಟ್ಟು ಸರಕಿನೊಟ್ಟಿಗೆ ತವರು ಮನೆಗೆ ತರುವುದು ಪದ್ಧತಿ.) ತವರು ಮನೆಯ ಚಪ್ಪರದಡಿಯಲ್ಲಿ ಸರಕನ್ನು ಇಡಬೇಕು. ತವರು ಮನೆಯಲ್ಲಿ ಕೂಡ ವಾಲಗ ಗರ್ನಾಲುನೊಂದಿಗೆ ಸ್ವಾಗತಿಸುವುದು ಪದ್ಧತಿ. ಸರಕನ್ನು ಹೊತ್ತುತಂದ ಮೂಲದವನಿಗೆ ಇಲ್ಲಿ ಕೂಡ ತಲೆಗೆ ಎಣ್ಣೆ ಕೊಟ್ಟು ಅರ್ಧ ಸೇರು ಅಕ್ಕಿ, ಎಲೆ, ಅಡಿಕೆ, ಖರ್ಚಿಗೆ ಹಣ ಕೊಟ್ಟು ಸತ್ಕರಿಸಿ ಕಳುಹಿಸುತ್ತಾರೆ. ಪೂರ್ವ ಪದ್ಧತಿಯಂತೆ ಊರಿನವರು ಕೂಡ ಸರಕು ಕಳುಹಿಸುವ ಕ್ರಮವಿರುತ್ತಿತ್ತು. ಇಲ್ಲಿ ಕೂಡ 5 ಸೇರು ಕುಚುಲು ಅಕ್ಕಿ, 2 ಸೇರು ಬೆಳ್ಳಿಗೆ,(ಶಕ್ತಾನುಸಾರ) 7 ತೆಂಗಿನಕಾಯಿ, ಕುಂಬಳಕಾಯಿ, ಬಾಳೆಗೊನೆ, ಬಾಳೆಲೆ, ವೀಳ್ಯದೆಲೆ, ಅಡಿಕೆ ಹಾಗೂ ಅಡುಗೆಗೆ ಬೇಕಾದ ಎಲ್ಲಾ ಸಾಮಾನುಗಳನ್ನು ಕಳುಹಿಸುವುದು ವಾಡಿಕೆ.

ಹತ್ತರ ಕ್ರಮ (ನೀರು ನೆರಳು) :
ಬಂದು ಬಳಗದವರು ಕುಟುಂಬಸ್ಥರು 10ರ ರಾತ್ರಿ ಬಂದು ಸೇರುವರು. ಕರ್ಮಕ್ಕೆ ನಿಂತವನು ಸ್ನಾನ ಮಾಡಿ ಬರಬೇಕು ಊಟವಾದ ನಂತರ ಚಪ್ಪರದಡಿಯಲ್ಲಿ ಊರುಗೌಡ ದಕ್ಷಿಣಾಭಿಮುಖವಾಗಿ ಕುಟುಂಬಸ್ಥರು ಅವರ ಎದುರಾಗಿ ಊರುಗೌಡರು, ಸೋದರದವರು, ಊರವರು ಹಾಗೂ ನೆಂಟರಿಷ್ಟರು ನಿಲ್ಲುವರು. ಈಗ ಕರ್ಮಕ್ಕೆ ನಿಂತವನು ಎಡಗೈ ನೀಡಿ ಬಲಗೈಯಿಂದ ಎಡಗೈಯನ್ನು ಮುಟ್ಟಿ 3 ಸಲ ಕೈಯನ್ನು ಆರತಿ ಎತ್ತಿದ ಹಾಗೆ ಮಾಡಿ ನೀರು ನೆರಳು ಇಡಲು ಹಾಗೂ ನಾಳೆ ನಡೆಯುವ ಶುದ್ಧ ಕಾಠ್ಯಕ್ರಮಗಳಿಗೆ ಅನುವು ಕೊಡಬೇಕು ಎಂದು ಊರವರಲ್ಲಿ ಕೇಳಿಕೊಳ್ಳಬೇಕು. ನೀರು ನೆರಳು ಇಡುವಲ್ಲಿ ಸರಕು ತಂದ ಎಲ್ಲಾ ವಸ್ತುಗಳನ್ನು ಸ್ವಲ್ಪ ಸ್ವಲ್ಪ ತಂದಿಡಬೇಕು. ಅಲ್ಲದೇ ಒಂದು ಎಳನೀರು, ಒಂದು ತಂಬಿಗೆ ನೀರು, ಎರಡು ಮಣೆ, ಕಾಲುದೀಪ, ಅರಿಶಿನ ಕೊಂಬು, ನೂಲು ಉಂಡೆ, ಮಸಿ ತುಂಡು. ಅಕ್ಕಿ ಹುಡಿ ಅಥವಾ ಬೂದಿ, 1 ಜರಡಿ ಇಷ್ಟೆಲ್ಲವನ್ನು ತಂದಿಟ್ಟುಕೊಳ್ಳಬೇಕು. ಒಂದು ಮಣೆಯಲ್ಲಿ ಕಾಲುದೀಪ ಹಚ್ಚಿಡಬೇಕು. ಇನ್ನೊಂದು ಮಣೆಯಲ್ಲಿ ನೀರು ಹಾಗೂ ಕೆತ್ತಿ ತೂತು ಮಾಡಿದ ಎಳನೀರು ಇಡಬೇಕು. ಇದಕ್ಕೆ ಮೇಲಿನಿಂದ ದಾರವನ್ನು ಇಳಿ ಬಿಟ್ಟು ಒಂದು ತುದಿಗೆ ಅರಿಶಿನ ಕೊಂಬು ಇನ್ನೊಂದು ತುದಿಗೆ ಮಸಿ ತುಂಡನ್ನು (ಎಳನೀರಿಗೆ ಅರಿಶಿನ ತುಂಡು, ತಂಬಿಗೆಗೆ ಮಸಿ ತುಂಡು) ನೀರಿನ ಸಮಾನಾಂತರ ನಿಲ್ಲುವಂತೆ ಕಟ್ಟಿ ಬಿಡಬೇಕು. ತದನಂತರ ದೀಪದ ಎದುರುಗಡೆಯಲ್ಲಿ ದೊಡ್ಡದೊಂದು ಬಾಳೆಲೆಯನ್ನು ಹಾಕಿ ಸರಕಿನ ಎಲ್ಲಾ ಸಾಮಾನುಗಳನ್ನು ಅದರ ಮೇಲೆ ಇಡುವರು. ಮನೆಯ ಮುಂಭಾಗಕ್ಕೆ ಬಂದು ಮೆಟ್ಟಿಲ ಮುಂದೆ ಮೊಣಕಾಲೂರಿ ಕುಂಬಳಕಾಯಿ ಇಟ್ಟು ಎಡಗೈಯಲ್ಲಿ ಕತ್ತಿ ಹಿಡಿದು ಸತ್ತವರ ಸಂಬಂಧ ಹೇಳಿ ಕುಂಬಳಕಾಯಿ ಕಡಿಯುತ್ತೇನೆ ಎಂದು 3 ಸಲ ಹೇಳಿ ತುಂಡು ಮಾಡಬೇಕು. ನಂತರ ಕುಂಬಳಕಾಯಿ ತುಂಡುಗಳನ್ನು ಸರಕು ಸಾಮಾನು ಬಳಸುವುದರ ಜೊತೆ ಇರಿಸಬೇಕು.
[ಪ್ರಸ್ತುತ ಹತ್ತಿರ ನೀರು ನೆರಳು ಇಡುವ ದಿನ ರಾತ್ರಿ ಕುಂಬಳಕಾಯಿ ಕಡಿಯಬಹುದು ಅಥವಾ ಮಾರನೇ ದಿನ ಕೂಡ (ಶುದ್ಧದ ದಿನ) ಕುಂಬಳಕಾಯಿ ಕಡಿಯುವುದನ್ನು ಮಾಡಬಹುದೆಂದು ಊರುಗೌಡರ ಸಭೆಯಲ್ಲಿ ಒಮ್ಮತಕ್ಕೆ ಬರಲಾಗಿದೆ.)

ಇದರ ಜೊತೆ ಒಂದು ಪಾಡ ಬಾಳೆಕಾಯಿಯನ್ನು ಬಾಳೆಲೆಯಲ್ಲಿಡುವರು. (ಇದರಲ್ಲಿ ಒಂದು ತುಂಡು ಕುಂಬಳಕಾಯಿ, ಒಂದು ಪಾಡ ಬಾಳೆಕಾಯಿಯನ್ನು, ಹನ್ನೊಂದನೆ ದಿನದ ಕ್ರಮಕ್ಕೆ ಕ್ಷೌರಿಕ, ಮಡಿವಾಳರಿಗೆ ತೆಗೆದಿಡುವರು.) ಅಕ್ಕಿ ಅಥವಾ ಬೂದಿಯನ್ನು ನೀರು ನೆರಳಿನ ಸ್ಥಳದ ಸುತ್ತ ಜರಡಿಗೆ ಹಾಕಿ ಚೆಲ್ಲಬೇಕು. (ಸತ್ತವನ ಆತ್ಮ ನೀರು ಕುಡಿಯಲು ಬಂದಿದೆ ಎಂಬ ಸಂಕೇತವನ್ನು ತಿಳಿಯುವ ಉದ್ದೇಶಕ್ಕಾಗಿ ಹಾಕುವ ಕ್ರಮ). ಎಲ್ಲರೂ ಹೊರಗೆ ಬಂದ ನಂತರ ಕರ್ಮ ಹಿಡಿದವರು ಹೊರಗೆ ಬಂದು ಮನೆಯ ಎದುರು ಭಾಗದ ಮಾಡಿನ ಅಡಿಯಲ್ಲಿ (ಸೂರಡಿ) ಒಂದು ತಂಬಿಗೆ ನೀರನ್ನು ಇಟ್ಟು ಒಂಟಿ ಕಾಲಲ್ಲಿ ನಿಂತು ತಲೆಗೆ ಎರಡು ಕೈ (ಅಂಗೈ ಮೇಲೆ) ಇಟ್ಟು ತೀರಿ ಹೋದವರ ಸಂಬಂಧ ಹೇಳುವು ನೀರು ನೆರಳಿಗೆ ಇಟ್ಟಿದ್ದೇವೆ ನೀವು ಬಂದು ನೀರು ಕುಡಿದು ಹೋಗಿ ಅಂತ ಮೂರು ಸಲ ಕರೆದು ಹೇಳಬೇಕು. (ಈ ಹೊತ್ತಿನಲ್ಲಿ ಗರ್ನಾಲು ಹೊಡೆಯುವರು). ಸತ್ತವರ ಉಳಿದ ಮಕ್ಕಳು ಕೂಡ ಇದೇ ರೀತಿ ಮಾಡಬೇಕು. ನಂತರ ಎಲ್ಲರೂ ನಿಶ್ಯಬ್ದವಾಗಿರುವುದು. ಕಾಲುದೀಪ ಹೊರತುಪಡಿಸಿ ಉಳಿದೆಲ್ಲ ಬೆಳಕುಗಳನ್ನು ಆರಿಸಬೇಕು (ಸುಮಾರು 5ರಿಂದ 10 ನಿಮಿಷದ ಸಮಯ). ನಂತರ ಒಳಗೆ ಹೊರಗೆ ಇರುವ ಎಲ್ಲಾ ಸರಕು ಸಾಮಾನುಗಳನ್ನು ಅಡುಗೆಗೆ ಉಪಯೋಗಿಸುವರೇ ಅಲ್ಲಿಂದ ಅಡುಗೆ ಕೋಣೆಗೆ ಕಳುಹಿಸುವರು. (ನೀರುನೆರಳು ಇರಿಸಿದಲ್ಲಿಟ್ಟ ಅರ್ಧ ಕುಂಬಳಕಾಯಿ ಹಾಗೂ ಒಂದು ಪಾಡ ಬಾಳೆಕಾಯಿ ಕ್ಷೌರಿಕ ಹಾಗೂ ಮಡಿವಾಳರಿಗಾಗಿ ತೆಗೆದಿರಿಸುವರು) ಊರವರು ಹಾಗೂ ನೆಂಟರಿಷ್ಟರು 11ರ ತಿಥಿಯೂಟಕ್ಕೆ ತಯಾರಿ ನಡೆಸುವರು. (ಮನೆಯವರು ಮತ್ತು ಕುಟುಂಬಸ್ಥರು ಅಡುಗೆ ಮಾಡುವುದು ನಿಷಿದ್ಧ. ಕರ್ಮಕ್ಕೆ ನಿಂತವನು ಈಗ ಫಲಾಹಾರ ಮಾಡಬೇಕು).

11ರ ದಿನದ ತಿಥಿ/ಬೊಜ್ಜ :

ಎಲ್ಲಾ ಕಾಠ್ಯಕ್ರಮಗಳು ಊರುಗೌಡರ ನೇತೃತ್ವದಲ್ಲಿ ನಡೆಯುತ್ತವೆ. ಹೇಳಿ ಕಳುಹಿಸಿದಂತೆ ಮಡಿವಾಳರು ಮತ್ತು ಕ್ಷೌರಿಕರು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಬರುತ್ತಾರೆ. ಕುಟುಂಬಸ್ಥರೆಲ್ಲ ಬಂದ ಮೇಲೆ ಗಣಪತಿಗೆ ಸ್ವಸ್ತಿಕ ಇಟ್ಟು ಕ್ಷೌರಿಕರು ಕ್ಷೌರ ಮಾಡಲು ಆರಂಭಿಸುತ್ತಾರೆ. ಕುಟುಂಬಸ್ಥರು ಹೆಣ್ಣು ತೆಗೆದುಕೊಂಡು ಹೋದ ಅಳಿಯಂದಿರು ಹಾಗೂ ಸೋದರ ಅಳಿಯಂದಿರು ಇವರೆಲ್ಲ ಮೀಸೆ ಸಹಿತ ಮುಖ ಕ್ಷೌರ ಮಾಡಿಸಿಕೊಳ್ಳುತ್ತಾರೆ. ಇವರೆಲ್ಲರ ಕ್ಷೌರ ಆದ ನಂತರ ಮನೆಯ ಎದುರು ಮೆಟ್ಟಿಲ ಹತ್ತಿರ ಕ್ಷೌರಿಕನು ಬಂದು ಮಣೆಯ ಮೇಲೆ ಕಾಲುದೀಪ ಹಚ್ಚಿ ಬೆಂಡು ಕುಕ್ಕೆಯಲ್ಲಿ ಒಂದು ಸೇರು ಕುಚ್ಚಲು ಅಕ್ಕಿ, ಒಂದು ತೆಂಗಿನಕಾಯಿ, 5 ವೀಳ್ಯದೆಲೆ, 1 ಅಡಿಕೆ, 1 ಪಾವಲಿ ಮತ್ತು ಒಂದು ತಂಬಿಗೆ ನೀರು ಇಡುತ್ತಾನೆ. ದೀಪ ದಕ್ಷಿಣಾಭಿಮುಖವಾಗಿ ಹಚ್ಚಿಡಬೇಕು. ಕರ್ಮಕ್ಕೆ ನಿಂತವರು ಮತ್ತು ಮನೆಯವರು ದೀಪಕ್ಕೆ ಎದುರು ನಿಲ್ಲುತ್ತಾರೆ. ಅವರೆದುರಾಗಿ ಊರುಗೌಡರು ಮತ್ತು ಊರವರು ಹಾಗೂ ಕ್ಷೌರಿಕ ನಿಲ್ಲುತ್ತಾರೆ. ಈ ಮೊದಲೇ ಕತ್ತಿ, ಕೊಡಪಾನ ಮತ್ತು ಹಾರೆ ತಂದಿಡಬೇಕು. ಕರ್ಮಕ್ಕೆ ನಿಂತವನು ಎಡಗೈ ಮುಂದೆ ಮಾಡಿ ಬಲಗೈ ಮುಟ್ಟಿಕೊಂಡು ಅಪ್ರದಕ್ಷಿಣೆಯಾಗಿ ದೀಪಕ್ಕೆ ಆರತಿ ಎತ್ತಿ ದೂಪೆ ಕೆಲಸ ಹಾಗೂ ಪಾಳಿ  ತೆಗೆಯಲು ಊರವರೊಟ್ಟಿಗೆ ಅನುವು ಕೇಳುವನು. ನಂತರ ದೀಪದ ಎದುರು ಕುಂಠಿಯನ್ನು ನೆಲದಲ್ಲಿ ಹಾಕಿ ಅದರ ಮೇಲೆ ಮೊಣಕಾಲೂರಿ (ಮಂಡಿಯೂರಿ) ಕುಳಿತುಕೊಳ್ಳುವನು. ಕ್ಷೌರಿಕ ಕೂಡ ಪೌಳಿ ತೆಗೆಯಲು ಊರವರೊಟ್ಟಿಗೆ ಅನುವು (ಒಪ್ಪಿಗೆ) ಕೇಳುತ್ತಾನೆ. ಒಪ್ಪಿಗೆ ಪಡೆದ ನಂತರ ಶಾಸ್ತ್ರಕ್ಕಾಗಿ ಸ್ವಲ್ಪ ತಲೆಕೂದಲನ್ನು ತುದಿ ಬಾಳೆಲೆ ಇಟ್ಟು ಅದಕ್ಕೆ ಬೀಳುವಂತೆ ತೆಗೆಯುತ್ತಾನೆ. ನಂತರ ಅದನ್ನು ಮುದ್ದೆ ಮಾಡಿ ಕೂದಲು ತೆಗೆಯುವ ಸ್ಥಳಕ್ಕೆ ಕೊಂಡು ಹೋಗುತ್ತಾನೆ. (ಬಾಳೆಲೆಯನ್ನು ನೀರಲ್ಲಿ ಬಿಡಬೇಕು). ಪೂರ್ತಿ ತಲೆಕೂದಲು ಮತ್ತು ಗಡ್ಡ-ಮೀಸೆಗಳನ್ನು ತೆಗೆಯುತ್ತಾನೆ. ಈ ಮೊದಲೇ ಊರುಗೌಡರ ಸಮೇತ ಕುಟುಂಬಸ್ಥರು ಧೂಪೆ ಕೆಲಸಕ್ಕೆ ಹೋಗಿರುತ್ತಾರೆ. ಕರ್ಮಕ್ಕೆ ನಿಂತವನು ಕ್ಷೌರ ಆದ ತಕ್ಷಣ ಒಂದು ಕೊಡ ನೀರನ್ನು ತಲೆಗೆ ಹೊಯ್ದುಕೊಂಡು ಇನ್ನೊಂದು ಕೊಡ ನೀರನ್ನು ತೆಗೆದುಕೊಂಡು ಧೂಪೆ ಕೆಲಸಕ್ಕೆ ಹೋಗಬೇಕು. ಮೂರರ ಶುದ್ಧದಂದು ದೂಪೆ ಸುತ್ತ ಕುತ್ತಿದ ಸರಳಿ ಕಣೆಗಳನ್ನು ತೆರವುಗೊಳಿಸಬೇಕು. ನಂತರ ಸರಳಿ ಕಣೆ ಅಟ್ಟಳಿಕೆ ಹಾಕಬೇಕು. ಅಟ್ಟಳಿಗೆಗೆ ಹಾಕಿದ ತೋಳುಗಳ ಮೇಲ್ಬಾಗದ ಅಡ್ಡಗಳು ಪೂರ್ವ-ಪಶ್ಚಿಮವಾಗಿರಬೇಕು. ಊರುಗೌಡರು ಹಾಗೂ ಸೋದರದವರು ಮೊದಲು ಸರಳಿಕಣೆ ಕುತ್ತಬೇಕು. ಅನುಕೂಲಸ್ಥರಾದರೆ ಜಾಲಗೂಡು ಅಥವಾ ಗುರ್ಜಿ ಮಾಡುತ್ತಾರೆ. (ಜಾಲಗೂಡು ವಿವರಣೆ ಮುಂದೆ ನೀಡಲಾಗಿದೆ).  ಮೇಲೆ ಅಲಂಕಾರದ ಚಪ್ಪರ ಹಾಕಬೇಕು. ಮಾವಿನ ಸೊಪ್ಪು ತಳಿರುತೋರಣ, ಎರಡು ಗೊನೆ ಹಾಕಿದ ಬೂದಿಯ ಅಥವಾ ಗಾಳಿ ಬಾಳೆ ಗಿಡವನ್ನು ಎದುರಿಗೆ ಕಟ್ಟಬೇಕು. ಚಪ್ಪರದ ಸುತ್ತಲೂ ಬಿದಿರಿನ ತಟ್ಟೆ ಕಟ್ಟುವುದು, ತುದಿ (ಕೊಡಿ) ಬಿದಿರಿನ ಕೆಳಭಾಗವನ್ನು 3 ಸೀಳಾಗಿ ಮಾಡಿ ಧೂಪೆಗೆ ಕುತ್ತಬೇಕು. ಅದರ ಮೇಲೆ ತೆಂಗಿನ ಹಿಂಗಾರವನ್ನು ಅರಳಿಸಿಡಬೇಕು. ಧೂಪೆ ಕೆಲಸ ಮುಗಿದ ಮೇಲೆ ಪ್ರತಿಯೊಬ್ಬರೂ ಸ್ನಾನ ಮಾಡಬೇಕು. ಊರಗೌಡರು ಧೂಪೆ ಕೆಲಸಕ್ಕೆ ಹೋಗುವಾಗ 3ರ ಶುದ್ಧದ ದಿನ ಇಟ್ಟ ಕುಂಠಿಯನ್ನು ಮಾಡಿನಿಂದ ತೆಗೆದು ಕೈಯಲ್ಲಿ ಹಿಡಿದುಕೊಂಡು ಇರುತ್ತಾರೆ. ಸ್ನಾನ ಮಾಡಿದ ನಂತರ ಅದನ್ನು ನೀರಿನಲ್ಲಿ ಬಿಡಬೇಕು. ಪ್ರತಿಯೊಬ್ಬರೂ ಸ್ನಾನವಾದ ನಂತರ ಅಂಗಳಕ್ಕೆ ಬರುವಲ್ಲಿ ಅಂಗಳದ ಬದಿಯಲ್ಲಿ 2 ಮಣ್ಣಿನ ಮಡಿಕೆಯಲ್ಲಿ ನೀರು ತುಂಬಿಸಿ ಬೈಹುಲ್ಲಿನ ಸಿಂಬೆಯ ಮೇಲೆ ಇಟ್ಟಿರುತ್ತಾರೆ. ಧೂಪೆ ಕೆಲಸಕ್ಕೆ ಹೋದ ಪ್ರತಿಯೊಬ್ಬರೂ ಮಡಕೆಯಲ್ಲಿಟ್ಟ ನೀರನ್ನು ಎಡಕೈಯಿಂದ 3 ಸಲ ತಲೆಗೆ ಚಿಮುಕಿಸಿಕೊಳ್ಳಬೇಕು. (ಮಾವಿನ ಸೊಪ್ಪನಿಟ್ಟ ಮಡಕೆಯಲ್ಲಿದ್ದ ನೀರನ್ನು ಊರವರು ಹಾಗು ನೆಂಟರು, ಹಲಸಿನ ಸೊಪ್ಪನ್ನಿಟ್ಟ ಮಡಕೆಯಲ್ಲಿದ್ದ ನೀರನ್ನು ಕುಟುಂಬಸ್ಥರು ಚಿಮುಕಿಸಿಕೊಳ್ಳುವರು.) ಇದಾದ ನಂತರ ಮೊದಲೇ ತಯಾರಿಸಿದ ಅನ್ನದ 3 ಮುದ್ದೆಗಳಲ್ಲಿ ಒಂದರಲ್ಲಿ ಅರಿಶಿನ ಹುಡಿ ಮಿಶ್ರಿತ, ಇನ್ನೊಂದರಲ್ಲಿ ಮಸಿ ಹುಡಿ ಮಿಶ್ರಿತವಾಗಿರಬೇಕು.
ಇದನ್ನು ಕರ್ಮಕ್ಕೆ ನಿಂತವನ ಹೆಂಡತಿ ಅಥವಾ ತಾಯಿಗೆ ಸಮಾನರಾದವರು ಬಿಳಿ ಸೀರೆ ಉಟ್ಟು ಮುಡಿ ಬಿಚ್ಚಿಸಿಕೊಂಡು ತರಬೇಕು. ಕರ್ಮಕ್ಕೆ ನಿಂತವನ್ನು ಮಸಿಹುಡಿ ಮಿಶ್ರಿತ ಮುದ್ದೆಯನ್ನು ಎಡಕೈಯಲ್ಲಿ ಹಿಡಿದು ಅಪ್ರದಕ್ಷಿಣೆಯಾಗಿ (ಅವನು ಉತ್ತರ ದಕ್ಷಿಣವಾಗಿ ನಿಂತಿರಬೇಕು) 3 ಸುತ್ತು ತಂದು ಹಿಂಬದಿಗೆ ಎಸೆಯಬೇಕು. ಆಗ ಆತನ ಕೈಗೆ ಮಡಿವಾಳ ನೀರು ಹಾಕಿ ಶುದ್ಧಮಾಡುತ್ತಾನೆ. ಅದೇ ರೀತಿ ಊರಿನವನು ಅರಿಶಿನ ಹುಡಿ ಮಿಶ್ರಿತ ಮುದ್ದೆಯನ್ನು ಮಾಡಬೇಕು. ಕೊನೆಗೆ ಮುದ್ದೆ ತಂದ ಹೆಂಗಸು ಉಳಿದ ಬಿಳಿ ಮುದ್ದೆಯನ್ನು ಕರ್ಮಕ್ಕೆ ನಿಂತವನ ಸ್ಥಳದಲ್ಲೇ ನಿಂತು ಬಾಳೆ ಎಲೆ ಸಮೇತ ಅಪ್ರದಕ್ಷಿಣೆಯಾಗಿ 3 ಸುತ್ತು ತಂದು ಎಡಕೈಯಲ್ಲೇ ಹಿಂಬದಿಗೆ ಎಸೆಯಬೇಕು. ಆಗ ಅವಳ ತಲೆಗೆ ಒಂದು ಕೊಡಪಾನ ನೀರನ್ನು ಮನೆಯವರು ಹೊಯ್ಯುವರು. ನಂತರ ಕರ್ಮಕ್ಕೆ ನಿಂತವನು ಬೆಂಡು ಕುಕ್ಕೆಯಲ್ಲಿ 1ಸೇರು ಕುಚ್ಚಲು ಅಕ್ಕಿ ಹಾಕಿ ತಲೆ ಮೇಲೆ ಹಿಡಿದು ಮೆಟ್ಟಲಿನ (ಮಾಡಿನ ಅಡಿಯಲ್ಲಿ) ಹತ್ತಿರ ಬಾಗಿ ನಿಲ್ಲಬೇಕು. ಮುದ್ದೆ ದಾಟಿಸಿದ ಹೆಂಗಸು ಒದ್ದೆ ಬಟ್ಟೆಯಲ್ಲಿ 1 ತಂಬಿಗೆ ನೀರನ್ನು ಆತನ ತಲೆಯ ಮೇಲೆ ಇದ್ದ ಅಕ್ಕಿಗೆ ಹೊಯ್ಯುತ್ತಾಳೆ. ನೀರು ಬಿದ್ದ ಕೂಡಲೇ ಬೆಂಡು ಕುಕ್ಕೆಯನ್ನು ಕೆಳಗೆ ಹಿಡಿಯಬೇಕು. ತಲೆಗೆ ನೀರು ಹೊಯ್ಯಬೇಕು. ತಲೆಯಿಂದ ಬಿದ್ದ ನೀರು ಬೆಂಡು ಕುಕ್ಕೆಗೆ ಬೀಳುವ ಹಾಗೆ ಮಾಡಿ ಅಕ್ಕಿ ಪೂರ್ತಿ ಒದ್ದೆಯಾಗುವಂತೆ ಮಾಡಬೇಕು. ಮೊದಲೇ ಮಡಿವಾಳ ನೀರು ನೆರಳಿಟ್ಟ ಸ್ಥಳದಲ್ಲಿ ಒಂದು ಮಣೆಯಲ್ಲಿ ದೀಪ ಹಚ್ಚಿಟ್ಟು ಇನ್ನೊಂದು ಮಣೆಯ ಮೇಲೆ ಬಿಳಿ ವಸ್ತ್ರ ಹಾಕಿ ಅದರ ಮೇಲೆ ಕಂಚಿನ ಬಟ್ಟಲು ಇಟ್ಟಿರುತ್ತಾರೆ. ಕರ್ಮಕ್ಕೆ ನಿಂತವನು ನೆಲದಲ್ಲಿ ಕುಂಠಿ ಹಾಕಿ ಮಂಡಿಯೂರಿ ಬಟ್ಟಲಿಗೆ ಕುಕ್ಕೆಯಿಂದ ಸಂಪೂರ್ಣ ಅಕ್ಕಿಯನ್ನು ಸುರಿಯುತ್ತಾನೆ. ಅದಕ್ಕೆ ಮಡಿವಾಳನು ಎರಡು ಬಾಳೆಲೆ, ಅರಿಶಿನ ಹುಡಿ, ಊದುಬತ್ತಿ, ನೆನೆಬತ್ತಿ, ಬೆಂಕಿ ಪೊಟ್ಟಣ, 5 ವೀಳ್ಯದೆಲೆ, 1ಅಡಿಕೆ ಇಡಬೇಕು. ಈ ಬಟ್ಟಲನ್ನು ಕರ್ಮಕ್ಕೆ ನಿಂತವನು ಮಡಿವಾಳ ಹಾಕಿದ ಬಟ್ಟೆಯಿಂದ ಕಟ್ಟುತ್ತಾನೆ. ಕುಂಠಿಯನ್ನು ಎಡ ಹೆಗಲಿಗೆ ಹಾಕಿ ಏಳಬೇಕು ನಂತರ ಕರ್ಮಕ್ಕೆ ನಿಂತವನ ಸಮೇತ ಕುಟುಂಬಸ್ಥರೆಲ್ಲಾ ನಾರಾಯಣ....ನಾರಾಯಣ. ನಾರಾಯಣ ಹೇಳುತ್ತಾ ಅದಕ್ಕೆ ಅಪ್ರದಕ್ಷಿಣೆಯಾಗಿ 3 ಸುತ್ತು ಬರುತ್ತಾರೆ. ನಂತರ ಅಕ್ಕಿ ಕಟ್ಟಿದ ಕಂಚಿನ ಬಟ್ಟಲನ್ನು ಕುಟುಂಬದ ಯಜಮಾನ ಕರ್ಮಕ್ಕೆ ನಿಂತವನ ಎಡ ಹೆಗಲಿಗೆ ಇಡುತ್ತಾರೆ. ಈಗ ಎಲ್ಲರೂ ಧೂಪೆಯ ಹತ್ತಿರ ಹೊರಡುವರು. ಮಡಿವಾಳ ಮಾಡಿದ ನಿಶಾನೆಯನ್ನು ಹಿಡಿದು ಊರವರು ಮುಂದಿನಿಂದ ಹೋಗಬೇಕು. ಕರ್ಮಕ್ಕೆ ನಿಂತವನ ತಲೆ ಮೇಲೆ ಬರುವಂತೆ ಕುಟುಂಬಸ್ಥರು ಹಿಡಿದುಕೊಂಡು ಅವರ ಹಿಂದಿನಿಂದ ಹೋಗುತ್ತಾರೆ. (ನಿಶಾನೆ ಎಂದರೆ ಬಿದಿರು ತಟ್ಟಿಗಳಿಗೆ ಮಡಿ ಬಟ್ಟೆಯನ್ನು ಕಟ್ಟಿ ಅಗಲವಾಗಿ ಹರವಿ ಬರುವಂತೆ ಕಟ್ಟಬೇಕು ಕಡ್ಡಿಗೆ ಬಾಳೆಕಾಯಿ ಕುಂಬಳ  ಕಾಯಿಗಳ ತುಂಡು, ವೀಳ್ಯದೆಲೆ, ಅಡಿಕೆ ಇವನ್ನು ಪೋಣಿಸಿ ಕಟ್ಟಬೇಕು). ಅಷ್ಟರಲ್ಲಿ ಬಂಧು ಬಳಗದವರು ತಂದಿರುವ ಸಿಹಿತಿಂಡಿಗಳನ್ನು ಅಲ್ಲದೆ ಮೂರು ಬಗೆಯ ಅಕ್ಕಿ ಹಿಟ್ಟು(ಚಪ್ಪೆ, ಖಾರ, ಉಪ್ಪು ಸೇರಿಸಿರಬೇಕು ). ಭೋಜನಕ್ಕೆ ತಯಾರಿಸಿದ ಎಲ್ಲ ಭಕ್ಷ್ಯಗಳನ್ನು  
 ಹೆಣ್ಣು ಗೆರಟೆಯಲ್ಲಿ ತೆಗೆದುಕೊಂಡು ಹೋಗುವರು. ದಾರಿಯಲ್ಲಿ ಮೊದಲಿಟ್ಟ ಎಲೆ ಅಡಿಕೆಯನ್ನು 
 ಕುಂಠಿಗೆ ನಿಂತವ ಬದಲಿಸುವುದು. (ಹೆಣ ಕೊಂಡುಹೋದಾಗ ಇಟ್ಟ ಎಲೆ ಅಡಿಕೆ) ಧೂಪೆಗೆ ಅಪ್ರದಕ್ಷಿಣೆಯಾಗಿ ಎಲ್ಲರೂ ನಾರಾಯಣ ನಾರಾಯಣ ಎಂದು ಹೇಳುತ್ತಾ ಮೂರು ಸುತ್ತು ಬಂದು ನಿಶಾನೆಯನ್ನು ಮುರಿದು ಬಿಸಾಡಬೇಕು. ತಂದ ತಿಂಡಿ, ಎಳನೀರು, ಭಕ್ಷ್ಯಗಳನ್ನು ಧೂಪೆಯ ಸುತ್ತಲೂ ಇಡುತ್ತಾರೆ. ಮಡಿವಾಳರು ಬಿಳಿ ವಸ್ತ್ರವನ್ನು ಧೂಪೆಯ ಮೇಲೆ ಹಾಕುವರು. ಕರ್ಮಕ್ಕೆ ನಿಂತವನು ಧೂಪೆಯ ಎದುರಿಗೆ ಕುಂಠಿಯನ್ನು ಹಾಕಿ ಅದರ ಮೇಲೆ ಮೊಣಕಾಲೂರಿ ಕುಳಿತು ಕಟ್ಟಿ ತಂದ ಕಂಚಿನ ಬಟ್ಟಲನ್ನು ಇಟ್ಟು ಕಟ್ಟು ಬಿಚ್ಚಬೇಕು. ತಂದಿರುವ 2 ಬಾಳೆಲೆಗಳನ್ನು ಅಟ್ಟಳಿಗೆಯ ಮೇಲೆ ಹಾಸಿ ಹಿಮ್ಮುಖ ಕೈ ಹಿಡಿದಾಗ (ಬೆನ್ನ ಹಿಂದೆ) ಮಡಿವಾಳ ನೀರು ಹಾಕುತ್ತಾರೆ. ಬೊಗಸೆ ತುಂಬಾ ಅಕ್ಕಿಯನ್ನು ಹಿಡಿದು ಹಾಸಿದ ಬಾಳೆಲೆಗೆ ಬಡಿಸಬೇಕು. ಪುನಃ ಮೊದಲಿನ ಹಾಗೆ ಕೈ ತೊಳೆದು ಹಿಂಗೈಯಲ್ಲಿ (ಬೊಗಸೆ ಮಗುಚಿ ಹಿಡಿದ ಹಾಗೆ) ಅಕ್ಕಿ ಹಾಕಬೇಕು. ಪುನಃ ಕೈತೊಳೆದು ಬೊಗಸೆಯಲ್ಲಿ ಹಾಕಬೇಕು. 1 ಎಳನೀರು, 5 ವೀಳ್ಯದೆಲೆ, 1ಅಡಿಕೆ ಹಾಗೂ ನೆನೆಬತ್ತಿ ಹಚ್ಚಿಡುತ್ತಾರೆ. ಉಳಿದ ಅಕ್ಕಿಗೆ ಕಟ್ಟಿ ತಂದ ಅರಿಶಿನ ಹುಡಿ ಹಾಕಿ ಮಿಶ್ರಣ ಮಾಡುತ್ತಾರೆ. ಈ ಹೊತ್ತಿನಲ್ಲಿ ಒಡೆದ ಗೆರಟೆಗಳಲ್ಲಿ ನೆನೆಬತ್ತಿಯನ್ನು ಸುತ್ತಲೂ ಇಡುತ್ತಾರೆ. ಕರ್ಮಕ್ಕೆ ನಿಂತವನು ಕುಂಠಿಯನ್ನು ಬಲದ ಹೆಗಲಿಗೆ ಹಾಕಿ ಎದ್ದು ಬಟ್ಟಲನ್ನು ಬಲದ ಹೆಗಲಿನಲ್ಲಿ ಇಟ್ಟು ಕುಟುಂಬಸ್ಥರೆಲ್ಲರೂ ಅದರಿಂದ ಅಕ್ಕಿಯನ್ನು ತೆಗೆದುಕೊಂಡು ನಾರಾಯಣ... ನಾರಾಯಣ...... ನಾರಾಯಣ ಹೇಳುತ್ತಾ ದೂಪೆಗೆ ಎಡಕೈಯಲ್ಲಿ ಅಕ್ಕಿಯನ್ನು ಹಾಕುತ್ತಾ 3 ಸುತ್ತು ಅಪ್ರದಕ್ಷಿಣೆಯಾಗಿ ಬರುತ್ತಾರೆ. ಕರ್ಮಕ್ಕೆ ನಿಂತವನು ಖಾಲಿ ಬಟ್ಟಲನ್ನು ಧೂಪೆಯ ಎದುರು ನೆಲಕ್ಕೆ ಕವುಚಿ ಹಾಕಿ, ಕುಂಠಿಯನ್ನು ಅಡ್ಡ ಹಾಕಿ ಮೊಣಕಾಲೂರಿ ತಲೆಮೇಲೆ ಕೈ ಹೆಣೆದು ಅಂಗೈ ಮೇಲೆ ಬರುವಂತೆ ಕುಳಿತುಕೊಳ್ಳಬೇಕು. ಮಡಿವಾಳರು ಊರ ಗೌಡರಿಗೆ, ನೆಂಟರಿಷ್ಟರಿಗೆ ಕೈಗೆ ನೀರು ಕೊಟ್ಟು ಬೆಳ್ತಿಗೆ ಅಕ್ಕಿ ಕೊಡುತ್ತಾನೆ. ಈಗ ಊರಗೌಡರು ಅಥವಾ ತಿಳಿದವರು ಸ್ವರ್ಗಕ್ಕೆ ಸಂದಾಯ ಮಾಡುವ ಮಾತುಗಳನ್ನು ಹೇಳುತ್ತಾರೆ. ಕೊನೆಗೆ ಎಲ್ಲರೂ ಸ್ವರ್ಗಕ್ಕೆ ಹೋಗಿ ಎಂದು 3 ಸಲ ಹೇಳುತ್ತಾ ಅಕ್ಕಿಯನ್ನು ದೂಪೆಯ ಮೇಲೆ ಹಾಕುತ್ತಾರೆ. ಕರ್ಮಕ್ಕೆ ನಿಂತವನು ಸಂಬಂಧ ಹೇಳಿ 3 ಬಾರಿ ನೆಲಕ್ಕೆ ಕೈ ಬಡಿದು ಸ್ವರ್ಗಕ್ಕೆ ಹೋಗಿ ಎಂದು ಹೇಳಬೇಕು. ಉಳಿದ ಮಕ್ಕಳೂ ಕೂಡಾ ಅದೇ ರೀತಿ ಮಾಡುಬೇಕು. ನಂತರ ಅವರನ್ನು ಎಬ್ಬಿಸಬೇಕು. ಹರಿವಾಣ ಹಾಗು ದೂಪೆಯ ಮೇಲೆ ಹಾಕಿದ ಬಟ್ಟೆಯನ್ನು ನುಡಿವಾಳ ತೆಗೆದುಕೊಳ್ಳುತ್ತಾನೆ. ನಂತರ ಎಲ್ಲರೂ ಸ್ನಾನಕ್ಕೆ ತೆರಳುತ್ತಾರೆ. ಸ್ನಾನ ಮಾಡುವಾಗಿ ಸರಳಿ ಸೊಪ್ಪು ಹಿಡಿದು 3 ಸಲ ತಲೆಗೆ ಚಿಮುಕಿಸಿಕೊಂಡು ನೀರಲ್ಲಿ ಮುಳುಗುವುದು ಕ್ರಮ ಸ್ನಾನದ ನಂತರ ಎಲ್ಲರೂ ಅಂಗಳಕ್ಕೆ ಬಂದು ಮನೆಯವರು ಮತ್ತು ಕುಟುಂಬಸ್ಥರು ಮನೆಗೆ ಎದುರಾಗಿ, ನೆಂಟರು ಮತ್ತು ಊರವರು ಅವರ ಎದುರು ಮುಖಮಾಡಿ ನಿಲ್ಲಬೇಕು. ಮಧ್ಯದಲ್ಲಿ ಮಡಿವಾಳನು ಒಂದು ಮಣೆ, ಒಂದು ತಂಬಿಗೆ ನೀರು, ದಲ್ಯ (ಮಡಿಬಟ್ಟೆ) ಇಡುತ್ತಾನೆ. ಮೊದಲು ಊರವರಿಗೆ ಕಾಲು ಮತ್ತು ತಲೆ ಭಾಗಕ್ಕೆ ನೀರು ಮತ್ತು ಅಕ್ಕಿಯನ್ನು ಚಿಮುಕಿಸುತ್ತಾರೆ. ಕೊನೆಯ ಸುತ್ತು ಅವರ ಹಿಂದಿನಿಂದ ಬಂದು ಅದೇ ರೀತಿ ಮಾಡುತ್ತಾನೆ. ಮಡಿವಾಳ ಊರುಗೌಡರಿಗೆ ದಲ್ಯವನ್ನು ನೀಡುತ್ತಾನೆ. ನಂತರ ಮನೆಯವರನ್ನು ಶುದ್ಧಮಾಡುತ್ತಾನೆ. ದಲ್ಯವನ್ನು ತಲೆಯ ಮೇಲೆ ಹೊದಿಸುತ್ತಾ ಬರುತ್ತಾನೆ. ಅಷ್ಟರಲ್ಲಿ ಊರ ಗೌಡರು ಪುಣ್ಯಾರ್ಚನೆ ಚಿಮುಕಿಸುತ್ತಾರೆ. ಇನ್ನೊಬ್ಬರು ಗಂಧ ದೂಪ ಮತ್ತು ತೇದ ಗಂಧವನ್ನು ಕೊಡುತ್ತಾ ಬರುತ್ತಾರೆ. ಇವರಂತೆ ಮನೆಯವರಿಗೂ ಮಾಡಬೇಕು. ಪುಣ್ಯಾರ್ಚನೆಯನ್ನು ಮನೆಯ ಒಳಗಡೆ, ಅಡಿಗೆ ಮನೆ, ಬಾವಿಗೆ ಚಿಮುಕಿಸಿ, ಪ್ರಸ್ತುತ ಕಾರ್ಯಕ್ರಮದ ಅಡುಗೆ ಮನೆಗೆ ಚಿಮುಕಿಸಬೇಕು. ಈಗ ಮಡಿವಾಳ ದಲ್ಯವನ್ನು ಮೆಟ್ಟಿಲಿಗೆ ಹಾಕುತ್ತಾರೆ. ಮನೆಯವರೆಲ್ಲರೂ ಒಳಗೆ ಹೋಗುವಾಗ ದಲ್ಯ ಮೆಟ್ಟಿಕೊಂಡು ಹೋಗುತ್ತಾರೆ. ಬಳಿಕ ನೀರು ನೆರಳಿಗೆ ಇಟ್ಟ ಜಾಗದಲ್ಲಿ ಮಣೆ ಇಟ್ಟು ದೀಪ ಹಚ್ಚಿಡುತ್ತಾರೆ. ಒಂದು ಸಣ್ಣ ಪಾತ್ರೆಯಲ್ಲಿ (ಗಿಣ್ಣಾಲು) ತೆಂಗಿನೆಣ್ಣೆ ಇರಬೇಕು. 3 ಸೇರು ಕುಚ್ಚಲಕ್ಕಿ, 10 ವೀಳ್ಯದೆಲೆ, 2 ಅಡಿಕೆ, 2 ಪಾವಲಿ ಕೂಡಾ ಇರಬೇಕು.

ಸಲಾಯಿ ಅಳೆಯುವ ಕ್ರಮ
ಕರ್ಮಕ್ಕೆ ನಿಂತವನು ಕುಂಠಿಯನ್ನು ಅಡ್ಡಹಾಕಿ ದಕ್ಷಿಣಾಭಿಮುಖವಾಗಿ ಮೊಣಕಾಲೂರಿ ಕುಳಿತುಕೊಳ್ಳುತ್ತಾನೆ. ಅವನ ಎದುರಿಗೆ ಸೇರು ತಂದಿಡುತ್ತಾರೆ. ಅದಕ್ಕೆ ಬಂದ ನೆಂಟರಿಷ್ಟರು ಊರಿನವರು ದುಡ್ಡನ್ನು ಹಾಕುತ್ತಾರೆ. ನಂತರ ಸೇರಿನಿಂದ ಹಣವನ್ನು ನೆಲಕ್ಕೆ ಸುರಿದು ಎರಡು ಕೈ ಜೋಡಿಸಿ ಮಧ್ಯದಿಂದ ಹಣವನ್ನು ಪಾಲು ಮಾಡಬೇಕು. ಎಡಗಡೆಯ ಭಾಗವನ್ನು ಮನೆಗೂ, ಬಲಗಡೆಯ ಪಾಲನ್ನು ಮತ್ತೂ ಎರಡು ಭಾಗ ಮಾಡಿ ಒಂದು ಪಾಲನ್ನು ಮಡಿವಾಳನಿಗೂ ಮತ್ತೊಂದು ಪಾಲನ್ನು ಕ್ಷೌರಿಕನಿಗೂ ಕೊಡಬೇಕು. ಎಡಗಡೆ ಪಾಲನ್ನು 2 ವಿಭಾಗ ಮಾಡಿ ಒಂದನ್ನು ಮೂಲದವನಿಗೂ ಉಳಿದ ಪಾಲನ್ನು ಮನೆಯವರಿಗೆ ನೀಡುವುದು ಪದ್ಧತಿ.

ಇನ್ನೊಂದು ಪದ್ಧತಿ ಪ್ರಕಾರ: ಅಕ್ಕಿಯನ್ನು ದೀಪದ ಎದುರು ನೆಲಕ್ಕೆ ಸುರಿಯುತ್ತಾರೆ

ಅಕ್ಕಿಯನ್ನು ಎಡಬಲಗಳಿಗೆ ಒಂದೊಂದು ಸೇರು ಅಳೆದು ಹಾಕಬೇಕು. ನಂತರ ಸೇರು ಕವಚಿ ಹಾಕಿ ಹಿಂಬದಿಯಲ್ಲಿ ಕೂಡಾ ಅದೇ ರೀತಿ ಹಾಕಬೇಕು (ಎಡಬಲಗಳಿಗೆ). ಉಳಿದ ಅಕ್ಕಿಯನ್ನು ಪೂರ್ತಿಯಾಗಿ ರಾಶಿ ಮಾಡಿ ಎಡದ ಕೈಯಿಂದ 2 ಪಾಲು ಮಾಡಿ ನಂತರ ಎಡ ಬಲಕ್ಕೆ ಸಮವಾಗಿ ಹಾಕಬೇಕು. 2 ರಾಶಿಗೂ 5 ವೀಳ್ಯದೆಲೆ, 1 ಅಡಿಕೆ, 1 ನಾಣ್ಯ ಇಡಬೇಕು. ಈಗ ಕೊಟ್ಟಹೆಣ್ಣು ಮಕ್ಕಳು ಈ ರಾಶಿ ಮೇಲೆ ಕಾಣಿಕೆ ಇಡುವ ಪದ್ಧತಿ. ಇದನ್ನು ಸಲಾಯಿ ಅಳೆಯುವುದು ಎನ್ನುವರು. ಇದಾದ ನಂತರ ಕ್ಷೌರಿಕನು ಊರ ಗೌಡರ ಅನುಮತಿ ಕೇಳಿ ಕರ್ಮಕ್ಕೆ ನಿಂತವನಿಗೆ ಗರಿಕೆ ಹುಲ್ಲಿನಿಂದ ಮೊಣಕಾಲಿನಿಂದ ತಲೆವರೆಗೆ ಎಣ್ಣೆ ಸವರಿ ಮಡಿವಾಳ ಕೊಟ್ಟ ಬೈರಾಸನ್ನು ಮುಂಡಾಸು ಕಟ್ಟುತ್ತಾನೆ. ಈಗ ಮಡಿವಾಳ ಕರ್ಮಕ್ಕೆ ನಿಂತವನನ್ನು ಕೈ ಮುಟ್ಟಿ ಎಬ್ಬಿಸುತ್ತಾನೆ. (ಏಳುವಾಗ ಕುಂಠಿಯನ್ನು ನೆಲದಲ್ಲಿ ಬಿಡಬೇಕು.) ಮಡಿವಾಳ ಕೊಡುವ ಬಿಳಿ ಬಟ್ಟೆಯನ್ನು ಉಟ್ಟು, ಉಟ್ಟುಕೊಂಡಿದ್ದ ಒದ್ದೆ ಬಟ್ಟೆಯನ್ನು ಅಲ್ಲಿಯೇ ಬಿಚ್ಚಿ ಬಿಡಬೇಕು. ಈಗ ಎರಡು ರಾಶಿಗಳಿಂದ ಚಿಟಿಕೆ ಅಕ್ಕಿಯನ್ನು ಸೇರಿಗೆ ಹಾಕಿ ಕೈ ಮುಗಿಯುತ್ತಾನೆ. ಸೇರು ಮಣೆ, ದೀಪವನ್ನು ಕನ್ನಿಕಂಬದ ಬುಡದಲ್ಲಿಡಬೇಕು. (ಅಥವಾ ಅನುಕೂಲ ಸ್ಥಳದಲ್ಲಿ ಇಡಬೇಕು)

ಇದಾದ ಬಳಿಕ ತಿಥಿ ಊಟದ ಕಾರ್ಯಕ್ರಮ ನಡೆಯುತ್ತದೆ. ಈಗ ಮನೆಯವರು ಪೂರ್ವಾಭಿಮುಖವಾಗಿ ಮೊದಲನೇ ಪಂಕ್ತಿಯಲ್ಲಿ ಕುಳಿತು ಊಟ ಮಾಡುತ್ತಾರೆ. ಊಟ ಮಾಡುವಾಗ ಕೊಟ್ಟ ಹೆಣ್ಣು ಮಕ್ಕಳು ಎಲ್ಲರಿಗೂ ವೀಳ್ಯದೆಲೆ, ಅಡ್ಡ ಒಡೆದ ಅಡಿಕೆ ಹೋಳು ಮತ್ತು ತಲೆಗೆ ಎಣ್ಣೆ ಕೊಡುವುದು ಪದ್ಧತಿ. ಊಟದಲ್ಲಿ ಮುಖ್ಯವಾಗಿ ಹುರುಳಿ ಬಾಳೆಕಾಯಿಪಲ್ಯ, ಹುರುಳಿ ಕುಂಬಳಕಾಯಿ ಸಾಂಬಾರು, ಅಕ್ಕಿ ಪಾಯಸ ಇತ್ಯಾದಿ ಇರಬೇಕು. ಇದು ಪದ್ದತಿ.

1ರ ಅಗೇಲು/ಮಿಂಚಿಲ್ ಊಟ :

ಕರ್ಮಕ್ಕೆ ನಿಂತವನು ಸಂಜೆ ಹೊತ್ತು ಸ್ನಾನ ಮಾಡಿ ಹೆಂಟೆ ಲಾಕಿಯನ್ನು ಕೊಂದು ಅಡಿಗೆ ತಯಾರಿಸಬೇಕು. (ಕೊಟ್ಟ ಹೆಣ್ಣು ಮಕ್ಕಳಲ್ಲಿ ಹಿರಿಮಗಳು ಒಂದು ಕೋಳಿ ತಂದರೆ - ಸಾಕು. ಒಂದೇ ಅಗೇಲು ಹಾಕುವ ಪದ್ಧತಿ), ಕುಟುಂಬದವರು ಮತ್ತು ಕೊಟ್ಟ ಹೆಣ್ಣು ಮಕ್ಕಳು ಕಡುಬು ತಯಾರಿಸುತ್ತಾರೆ. (ಉದ್ದಕ್ಕೆ ಕಡುಬು ಮಾಡುವುದು ಕ್ರಮ). ರಾತ್ರಿ ಹೊತ್ತಿಗೆ ಅಗೇಲು ಹಾಕಬೇಕು. ಕನ್ನಿಕಂಬದ ಹತ್ತಿರ ಅಥವಾ ಅನುಕೂಲ ಸ್ಥಳದಲ್ಲಿ (ನಡುಮನೆ) ಸಾಮಾನ್ಯವಾಗಿ ಅಗೇಲು (ಎಡೆ) ಹಾಕುವುದು. ಚಾಪೆ ಹಾಸಿ ಅದರ ಮೇಲೆ ಮಡಿವಾಳ ಕೊಟ್ಟ ಮಡಿಬಟ್ಟೆ ಹಾಸಿ ಮಣೆ ಇಟ್ಟು ದೀಪ ಹಚ್ಚಿ ಊದು ಬತಿ ಹಚ್ಚಿಡಬೇಕು. ತೇದ ಗಂಧವಿರಬೇಕು. ಅದರಲ್ಲಿ ಜೋಡು ಬಾಳೆಲೆ ಹಾಕಿ ಕಡುಬು ಹಚ್ಚಿಸುವುದು. ಕರ್ಮಕ್ಕೆ ನಿಂತವನು ಎಲೆ ಸುತ್ತಲೂ 11 ಕಡುಬು ಹಾಗು ಕೋಳಿ ಪದಾಥ ಮುಖ್ಯಭಾಗಗಳನ್ನು ಬಡಿಸಬೇಕು. ಮಣೆಯ ಮೇಲೆ 5 ವೀಳ್ಯದೆಲೆ, 1 ಅಡಿಕೆ, ಎಳನೀರು, ಅಮಲು ಪದಾರ್ಥ ಇಡಬೇಕು. ನೆಂಟರಿಷ್ಟರಿಗೆ ನೀರು ಕೊಡಬೇಕು. ಪ್ರತಿಯೊಬ್ಬರಿಗು ನಮಕೊಟ್ಟು ಪ್ರಾರ್ಥನೆ ಮಾಡಲು ಕೇಳಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಬೆಳೆಗೆ ಅಕ್ಕಿ ನೀಡಬೇಕು. ಪ್ರಾರ್ಥನೆ ಸಲ್ಲಿಸಿ ನಂತರ ಎಲ್ಲರೂ ಹೊರಗೆ ಬರಬೇಕು. ಸ್ವಲ್ಪ ಹೊತ್ತಿನೆ ಬಳಿಕ ಅಗೇಲಿಗೆ ನೀರು ಚಿಮುಕಿಸಿ ಅಗೇಲು ಎಳೆಯಬೇಕು. ಇದರ ಅರ್ಧಭಾಗವನ್ನು ಮಡಿವಾಳನಿಗೂ ಉಳಿದರ್ಧ ಬಾಗವನ್ನು ಕೊಟ್ಟ ಹೆಣ್ಣುಮಗಳಿಗೂ ಕೊಡಬೇಕು.

ಕೈಪೆ ಕಳೆಯುವುದು (ಬಾಯಿ ಚಪ್ಪೆ ತೆಗೆಯುವುದು) :

ಹಾಕಿದ ಅಗೇಲಿನಿಂದ ಕರ್ಮಕ್ಕೆ ನಿಂತವನ ಹೆಂಡತಿ ಕೋಳಿಯ ಮುಖ್ಯ ಭಾಗ (ಕರಿಯಡ)ವನ್ನು ತೆಗೆದು ಒಂದು ಎಲೆಯಲ್ಲಿ ಹಾಕಬೇಕು. ಕರ್ಮಕ್ಕೆ ನಿಂತವನು ಅಂಗಳದ ಒಂದು ಬದಿಯಲ್ಲಿ ನಿಂತು ಅದರ ಸಣ್ಣ ತುಂಡನ್ನು ಬಾಯಿಗೆ ಹಾಕಿ ಜಗಿದು ಉಗುಳಬೇಕು. ನಂತರ ಬಾಯಿ ಮುಕ್ಕಳಿಸಬೇಕು. ಹೀಗೆ 3 ಸಲ ಮಾಡಬೇಕು. ಇದಾದ ನಂತರ ಸೇರಿದವರಿಗೆ ಭೋಜನ ವ್ಯವಸ್ಥೆ ಇರುತ್ತದೆ.

16 ರ ಅಗೇಲು :

ಈ ದಿನ ನೆಂಟರಿಷ್ಟರು, ಊರು ಗೌಡರು, ಬಂಧು ಬಳಗದವರು ಬರುತ್ತಾರೆ. ಸತ್ತು 16 ನೇ ದಿನದಲ್ಲಿ ರಾತ್ರಿ ಕೊಲೆಗೆ ಸೇರಿಸುವ ಕ್ರಮವಿದೆ. ಸಂಜೆ ಹೊತ್ತು ಹೆಂಟೆ ಲಾಕಿಯನ್ನು ಕೊಂದು, ನೀರು ದೋಸೆ ಮಾಡಿ ಅಗಲು ಹಾಕಿ ಗಂಧ ಚಿಮುಕಿಸಬೇಕು. (ಗುರು ಕಾರ್ನೋರಿಗೆ)

ಅಗೇಲು ಬಡಿಸುವ ಕ್ರಮ :

ಅಗೇಲಿಗೆ ಕೊಟ್ಟ ಹೆಣ್ಣು ಮಕ್ಕಳೆಲ್ಲಾ ಸೇರಿ ಒಂದು ಹೇಂಟೆ ಲಾಕಿ ತರುವುದು ಪದ್ಧತಿ. ಒಂದು ಮಣೆಯ ಮೇಲೆ ಕಾಲು ದೀಪ ಉರಿಸಿರಬೇಕು. ಮತ್ತೊಂದು ಮಣೆಯ ಮೇಲೆ ಮೃತರು ಉಪಯೋಗಿಸುತ್ತಿದ್ದ ಪ್ರಮುಖ ವಸ್ತುಗಳನ್ನಿಡಬೇಕು. ದೀಪದ ಎದುರು ಬಿಳಿ ಬಟ್ಟೆ ಹಾಸಿ ಜೋಡು ಬಾಳೆಲೆ ಹಾಕಬೇಕು. ಕರ್ಮಕ್ಕೆ ನಿಂತವನು ಒಂದರ ಮೇಲೆ ಒಂದರಂತೆ 5 ನೀರು ದೋಸೆ ಬಡಿಸಬೇಕು. ಅದರ ಮೇಲೆ ಕೋಳಿ ಪದಾರ್ಥದ ಮುಖ್ಯ ಭಾಗಗಳನ್ನು ಬಡಿಸಬೇಕು. 5 ಎಲೆ 1 ಅಡಿಕೆ ಇರಿಸಿರಬೇಕು. ಎಳನೀರು, ಅಮಲು ಪದಾರ್ಥಗಳನ್ನಿಡಬೇಕು. ಸಣ್ಣ ಸಣ್ಣ ಹದಿನಾರು ಕೊಡಿ ಬಾಳೆಲೆಗಳನ್ನು ಕೆಳ ಪಕ್ಕದಲ್ಲಿ ಸಾಲಿಗೆ ಹಾಕಿ ಇನ್ನೊಂದು ಸಣ್ಣಕೊಡಿ ಬಾಳೆಯನ್ನು, ಪ್ರತ್ಯೇಕವಾಗಿ ಎದುರಿಗೆ ಅಡ್ಡಸಾಲಿನಲ್ಲಿ ಹಾಕಬೇಕು. ಈ ಎಲ್ಲಾ ಎಲೆಗಳಿಗೆ ದೋಸೆಯ ಚಿಕ್ಕ ಚಿಕ್ಕ ತುಂಡುಗಳನ್ನು ಹಾಗೂ ಕೋಳಿ ಸಾರನ್ನು ಬಡಿಸಬೇಕು. ಪ್ರತಿ ಅಗೇಲಿಗೆ 1ಎಲೆ, 1ಅಡಿಕೆ ಹೋಳು ಇಡಬೇಕು. ಆಮೇಲೆ ಬಾಳೆಲೆಗೆ ನೆನೆಬತ್ತಿಗಳನ್ನಿಡಬೇಕು. ಗಂಧ ಸಿಂಪಡಿಸಬೇಕು. ಕಾರ್ನೂರಿಗೆ ಬಡಿಸಿದೆ ಎಲೆಗಳಿಗೂ ನೆನೆಬತ್ತಿಗಳನ್ನು ಹಚ್ಚಿ ಗಂಧ ಸಿಂಪಡಿಸಬೇಕು. ಸೇರಿದ ಎಲ್ಲರಿಗೂ ಬೆಳ್ಳಿಗೆ ಅಕ್ಕಿ ಕೊಡಬೇಕು. ತಿಳಿದವರು ಪ್ರಾರ್ಥನೆ ಮಾಡಿದ ನಂತರ ಕರ್ಮಕ್ಕೆ ನಿಂತವನು 16ರ ಅಗೇಲಿನಲ್ಲಿ 1 ಅಗೇಲನ್ನು ಸಾಲಿನಿಂದ ಎಳೆದು ಹೊರಗಿದ್ದ ಅಗೇಲನ್ನು ಎಳೆದ ಜಾಗಕ್ಕೆ 3 ಸಲ ಸಂಬಂದ ಹೇಳಿ ಸೇರಿಸಬೇಕು. ಈಗ ಎಲ್ಲರೂ ಅಕ್ಕಿ ಹಾಕಿ ಕೈಮುಗಿಯಬೇಕು. ಬಳಿಕ ಸೇರಿದವರೆಲ್ಲರಿಗೂ ಭೋಜನವನ್ನು ವಿತರಿಸುವರು.

ಮನೆ ಬದಲಿಸುವ ಕ್ರಮ :

ಮೃತನ 16 ಕ್ರಮ ಆದ ಮೂರನೇ ದಿನಕ್ಕೆ ಕರ್ಮಕ್ಕೆ ನಿಂತವನನ್ನು ಸೋದರ ಮಾವಂದಿರ ಕಡೆಯವರು ಕರೆದುಕೊಂಡು ಹೋಗುವುದು ಕ್ರಮ.

ದೇಲಗೂಡು :

ವಿಶ್ವಕರ್ಮರಿಂದ ಅಥವಾ ಕಬ್ಬಿಣ ಕೆಲಸ ಮಾಡುವವರಿಂದ ಮಾಡಿಸುತ್ತಾರೆ.

ಮೊದಲೇ ತಿಳಿಸಿದಂತೆ ಒಂದು ಆಳು ಕೈ ಎತ್ತರದ (6-7 ಅಡಿ) 4 ಬಿದಿರು ಅಥವಾ ಅಡಿಕೆ ಮರದ ಕಂಬಗಳಿಗೆ ಸುಮಾರು ಮೇಲಿನಿಂದ 2 ಅಡಿ ಬರುವಷ್ಟು ಕತ್ತರಿ ಚೌಕವನ್ನು ಬಿದಿರಿನ ತಟ್ಟೆಯಿಂದ ಜೋಡಿಸಿ 4 ಕಂಬಗಳ ತುದಿ ಒಂದು ಮುಗುಳಿಯಲ್ಲಿ ಜೋಡಿಸಿ ಪೊಂಗಾರೆ ಮರದಿಂದ ಮಾಡಿದ ತೆಳು ಹಲಗೆಗಳನ್ನು ಕಾರೆಮುಳ್ಳು, ಅಬ್ಬಳಿಗೆ ಮುಳ್ಳುಗಳಿಂದ ಹೊಡೆದು ಜೋಡಿಸುತ್ತಾರೆ. (ಕಬ್ಬಿಣದ ಆಣಿ ಉಪಯೋಗಿಸುವಂತಿಲ್ಲ) ಅದಕ್ಕೆ ಸುಣ್ಣ ಮಿಶ್ರಿತ ಅರೆದ ಅರಿಶಿಣವನ್ನು ಲೇಪಿಸಿ ಬಂಗಾರದ ಬಣ್ಣ ಬರುವಂತೆ ಮಾಡುತ್ತಾರೆ. 4 ಕಂಬಗಳಿಗೆ ಬಾಳೆಕಾಯಿ ಹೋಳು, ಕುಂಬಳಕಾಯಿ ಹೋಳು, ಒಗ್ಗಿಹಾಕಿದ ಕೆಳಗಿನ ದೂಪೆಗೆ ಸರಳಿ ಕಣೆ ಕುತ್ತಿ ಮಡಿವಾಳರು ಬಿಳಿ ಬಟ್ಟೆಯನ್ನು ಹೊದಿಸಿ ಸಿಂಗಾರ ಮಾಡುತ್ತಾರೆ.

ದಂಡಿಗೆ : ಇದು ಕೂಳು ಅಕ್ಕಿ ಕೊಂಡು ಹೋಗಲು ಗುರ್ಜಿ ಅಥವಾ ದೇಲಗೂಡು ಮಾಡಿಸಿದವರು ಮಾಡುವ ಕ್ರಮ. 6 ಅಡಿ ಉದ್ದ ಬರುವಷ್ಟು ಉದ್ದದ ಒಂದು ಬಿದಿರು ಅದರ ಮಧ್ಯಕ್ಕೆ ಸುಮಾರು ಒಂದೂವರೆ ಅಡಿಯಷ್ಟು ಚೌಕ ಅಗಲ ಬರುವಂತೆ ಬಿದಿರು ತಟ್ಟೆಯಿಂದ ಮಾಡಿದ ಒಂದು ಚೌಕವನ್ನು ಜೋಡಿಸುತ್ತಾರೆ. ಮೇಲಿನಿಂದ ಕಮಾನು ಬರುವಂತೆ ಬಿದಿರಿನ ತಟ್ಟೆ ಬಗ್ಗಿಸಿ ಕಟ್ಟಿ ಅದಕ್ಕೆ ಬಿಳಿ ಬಟ್ಟೆ ಹೊದಿಸಿ (ಮಡಿವಾಳ) ತೆಂಗಿನ ಹಿಂಗಾರದಿಂದ ಸಿಂಗರಿಸುತ್ತಾರೆ. ಅವರ ಸಂಭಾವನೆಯಾಗಿ 2 ಸೇರು ಅಕ್ಕಿ, ಒಂದು ತೆಂಗಿನಕಾಯಿ, 5 ಎಲೆ, ಒಂದು ಅಡಿಕೆ, ಒಂದು ಪಾವಲಿ ಹಣ ಇಟ್ಟು ಬೆಂಡುಕುಕ್ಕೆಯಲ್ಲಿ ಕೊಡುವುದು.

ತೀರಿಕೊಂಡವರಿಗೆ ಸ್ವರ್ಗಕ್ಕೆ ಸಂದಿಸುವುದು :

ಇಂದು. ತಿಂಗಳಲ್ಲಿ .ಇವರ 11ನೇ ತಿಥಿ ದಿನ. 9 ತಿಂಗಳು ಹೊಟ್ಟೆಯಲ್ಲಿದ್ದು 10ನೇ ತಿಂಗಳಲ್ಲಿ ..ಇವರ ಮಗನಾಗಿ/ಮಗಳಾಗಿ ಹುಟ್ಟಿ 16ನೇ ದಿನದಂದು ತೆಂಗಿನಕಾಯಿಯನ್ನು ಕಟ್ಟುತ್ತಾರೆ. ತೆಂಗಿನ ಹೊಂಬಾಳೆಯಿಂದ ಸಾಧ್ಯವಾದಷ್ಟು ಸಿಂಗರಿಸಿ ಹೆಸರು ಪಡೆದೆ. ಬಾಲ್ಯದಲ್ಲಿ ತನ್ನ ಆಟೋಟದಲ್ಲಿ ಹಿರಿಯರನ್ನು ತಂದೆ ತಾಯಿಯರನ್ನು ಸಂತೋಷಗೊಳಿಸಿಕೊಂಡು ಗುರುಗುಂಡನ್ನೇ ವಲಂತ ವಿದ್ಯಾಭ್ಯಾಸ ಪಡೆದು ತಾರುಣ್ಯದಲ್ಲಿ ಹೆಣ್ಣನ್ನು/ಗಂಡನ್ನು ವರಿಸಿ ಗೃಹಸ್ಥಾಶ್ರಮವನ್ನು ಸ್ವೀಕರಿಸಿ ಮಕ್ಕಳನ್ನು ಪಡೆದು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಿ. ಮೈಗೂಡಿಸಿಕೊಳ್ಳುವಂತೆ ಮಾಡಿ ಸಂಸಾರಿಕ ಜೀವನದಲ್ಲಿಯೂ ಸಾರ್ವಜನಿಕ ಕ್ಷೇತ್ರದಲ್ಲಿಯೂ ಒಬ್ಬ ಸಭ್ಯರಾಗಿ ಮೆರೆದು ಹಸಿದವನಿಗೆ ಅನ್ನಕೊಟ್ಟು ಬರಿ ಮೈಯಲ್ಲಿ ಬಂದವನಿಗೆ ತೊಡಲು ಬಟ್ಟೆ ಕೊಟ್ಟು ತಲೆಗೆ ಎಣ್ಣೆ ಕೊಟ್ಟು ಒಬ್ಬ ಸಜ್ಜನ ಗೃಹಸ್ಥರಾಗಿ ಬಾಳಿ ಬದುಕಿದಿರಿ."ಮರ ಹುಟ್ಟಿದಲ್ಲಿ ಮನುಷ್ಯ ಹೋದಲ್ಲಿ" ಎಂಬ ಮಾತಿನಂತೆ ಚಿಗುರೆಲೆ ಕಾಯಿ ಎಲೆಯಾಗಬೇಕು. ಕಾಯಿ ಎಲೆ ಹಣ್ಣೆಲೆ ಆಗಬೇಕು, ಹಣ್ಣೆಲೆ ಉದುರಲೇಬೇಕು ಎಂಬ ಪ್ರಕೃತಿ ನಿಯಮದಂತೆ ನೀವು ಮೊನ್ನೆಯ ದಿನ ಇಹಲೋಕವನ್ನು ತ್ಯಜಿಸಿ ಪರಲೋಕ ವಾಸಿಯಾದಿರಿ. ಆ ಸಮಯದಲ್ಲಿ ನಿಮ್ಮ ಮನೆಯವರು ಕೊನೆಯ ಕೈ ನೀರೆಂಬಂತೆ ಕಂಚಿನ ಬಟ್ಟಲಲ್ಲಿ ಅಕ್ಕಿ ನೀರು ಹಾಕಿ ತುಳಸಿ ಕೊಡಿಯಿಂದ ನೀರು ಕೊಟ್ಟು ಬಿಳಿ ಬಟ್ಟೆ ಹೊದಿಸಿ ಕಾಯಿ ಒಡೆದು ತಲೆ ಕಾಲು ಕಡೆಯಲ್ಲಿ ದೀಪ ಹಚ್ಚಿ ಇಟ್ಟು ಊರಿಗೆ ತಿಳಿಯಲೆಂದು ಜೋಡು ಗುಂಡು ಹಾರಿಸಿದ ವಿಷಯ ತಿಳಿದ ಊರ ಪ್ರಮುಖರು ಮೂಲದವನನ್ನು ಕರೆದು ಕತ್ತಿ ಮಚ್ಚಿ ಕೊಟ್ಟು ನೆರೆಕರೆಯವರನ್ನು ಕರೆದು ಆಚೆ ಗುಡ್ಡೆಯಿಂದ ಮಾವು ಈಚೆ ಗುಡ್ಡೆಯಿಂದ ಹಲಸು ಕಾಷ್ಟಗಳನ್ನು ತಂದು ಚಿತೆಯನ್ನು ಮಾಡಿಸಿದರು. ಸ್ನಾನ ಮಾಡಿಸಿ, ಮನೆಯ ಒಳಗೆ ಮಲಗಿಸಿ ಅಕ್ಕಿ ಭತ್ತ ಕಟ್ಟಿ ತಲೆ ಕಡೆಯಿಂದ ಊರವರು ಕಾಲಿನ ಕಡೆಯಿಂದ ಮನೆಯವರು ಚಟ್ಟದಲ್ಲಿ ಹೊತ್ತು ತಂದು ಚಿತೆಯಲ್ಲಿಟ್ಟು ಸಂಸ್ಕಾರಗಳನ್ನು ಮುಗಿಸಿ ಕಾಲು ಕಡೆಯಿಂದ ಮನೆಯರು ತಲೆ ಕಡೆಯಿಂದ ಊರವರು ಅಗ್ನಿ ಸ್ಪರ್ಶ ಮಾಡಿದರು. ಕಳೇಬರಹ ಅಗ್ನಿಗೆ ಆಹುತಿಯಾಗಿ ಬೂದಿಯಲ್ಲಿ ಮಣ್ಣಿಗೆ ಮಣ್ಣಾಯಿತು. ಉರಿದ ಹೊಗೆ ಮೋಡವಾಗಿ ಆತ್ಮವು ಪರಮಾತ್ಮನಲ್ಲಿ ಲೀನವಾಯಿತು. ಮಾರನೇ ದಿನ ಕೊಳ್ಳಿ ಕೂಡಿ ಹಾಲು ತುಪ್ಪ ಎರೆದು 3ನೇ ದಿನ ಊರ ಪದ್ದತಿಯಂತೆ ಕ್ಷೌರಿಕನನ್ನು ಅಥವಾ ಮಡಿವಾಳನನ್ನು ಕರೆದು ಬೂದಿ ಶುದ್ಧ ಮಾಡಿ ದೂಫೆ ಮೆತ್ತಿ ಸೋದರ ಮನೆಯವರು ನೆರಳಿಗಾಗಿ ಸರಳಿ ಕಣೆ ಕುತ್ತಿ ತಂಪು ಮಾಡಿದೆವು. ಪಾಳಿಗೆ ನಿಂತವ ಕುಂಬಳಕಾಯಿ ಕಡಿದು ನೀರು ನೆರಳಿಗಿಟ್ಟು ನಿಮ್ಮನ್ನು ಆಹ್ವಾನಿಸಿದೆವು. ನಾವು ಕಂಡ ಕುರುಹುಗಳಲ್ಲಿ ನೀವು ಬಂದು ಬಾಯಾರಿಕೆಯನ್ನು ಸ್ವೀಕರಿಸಿದ್ದೀರಿ ಅಂತ ನಂಬಿದೆವು. ಇಂದು 11ನೇ ದಿನ ನಿಮ್ಮ ಇಷ್ಟ ಮಿತ್ರರು, ಬಂಧು ಬಳಗದವರು ಬಂದು ಸೇರಿ ನಿಮಗೆ ಇಷ್ಟವಾದ ತಿಂಡಿ ತಿನಿಸಿಗಳನ್ನು ತಂದು ಇಟ್ಟಿದ್ದೇವೆ. ನೀವು ಇದರ ಹವಿರ್ ಭಾಗಗಳನ್ನು ಸ್ವೀಕರಿಸಿಕೊಂಡು ಇಹ ಲೋಕದ ಎಲ್ಲಾ ಆಸೆಗಳನ್ನು ತ್ಯಜಿಸಿ ನಿಮ್ಮ ಜೀವನದಲ್ಲಿ ಏನಾದರೂ ಗೊತ್ತು ಗುರಿ ಇಲ್ಲದೆ ಮಾಡಿದ ತಪ್ಪುಗಳು ಇದ್ದಲ್ಲಿ ಕುಂಠಿಗೆ ನಿಂತವನು 10 ದಿನ ವೃತಸ್ಥನಾಗಿ ನಿಂತು, ಪಾಳಿ ತೆಗೆದು ಮಾಡಿದ ಕರ್ಮ ಸೇವೆಯಲ್ಲಿಯೂ ಮುಂದೆ ಶ್ರೀ ಸನ್ನಿಧಿಯಲ್ಲಿ ಮಾಡುವ ಪಿಂಡ ಪ್ರಧಾನ ಕಾರ್ಯದಲ್ಲಿಯೂ ಪರಿಹಾರವಾಗಿ ಯಾವುದೇ ಎಡ ಶಕ್ತಿಗಳ ಕೊಪವಾಗದೇ, ಅಗಸನ ಕಲ್ಲಾಗದೇ, ಗಾಣದ ಎತ್ತಾಗದೇ, ಕ್ಷೌರಿಕನ ಮುಟ್ಟಾಗದೇ, ಹಾರವನ ಆಳಾಗದೇ, ದಾರಿಯ ಮುಳ್ಳಾಗದೆ ಬಾಳೇ ಪಾಲದಲ್ಲಿ ನೂಲಿನ ಕೈತಾಂಗದಲ್ಲಿ, ಶ್ರೀ ಮನ್ನಾರಾಯಣನ ಪಾದದಡಿಯಲ್ಲಿ ಸ್ವರ್ಗ ಸೇರಿ ಎಂದು ನಾವೆಲ್ಲಾ ಹೇಳುವುದು ನೀವು ಸ್ವರ್ಗಕ್ಕೆ ಹೋಗಿ... ಸ್ವರ್ಗಕ್ಕೆ ಹೋಗಿ... ಎಂದು ಎಲ್ಲರು 3 ಸಲ ಹೇಳುವುದು.

ಅವಲಕ್ಕಿ ಹಾಕುವುದು

ದೀಪಾವಳಿ ಹಬ್ಬದ ದಿನ ಆಚರಿಸುವ ಕ್ರಮ. ಹೆಂಗಸರು ಮೃತರಾದರೆ ಅಮವಾಸ್ಯೆಯ ದಿನ ಹಾಗು ಗಂಡಸರು ಮೃತರಾದರೆ ಬಲಿಪಾಡ್ಯದ ದಿನ ಮುಂಜಾನೆ ಅಂದಾಜು 4 ಗಂಟೆಯ ಹೊತ್ತಿಗೆ ಅವಲಕ್ಕಿ ಹಾಕುವ ಕ್ರಮವಿದೆ. ಹತ್ತಿರದ ಸಂಬಂಧಿಗಳು, ಕುಟುಂಬಸ್ಥರು, ಊರುಗೌಡರು ಇವರೆಲ್ಲ ಬಂದು ಸೇರುತ್ತಾರೆ. ಹೇಂಟೆ ಲಾಕಿ ಕೋಳಿ ಕೊಂದು ಪದಾರ್ಥ ಮಾಡಬೇಕು. ನಂತರ ಕಾರ್ನೂರಿಗೆ ಬಡಿಸುವ ಕ್ರಮವಿದೆ. ಮಣೆ ಮೇಲೆ ಕಾಲು ದೀಪ ಹಚ್ಚಿ ಊದುಬತ್ತಿ ಹಚ್ಚಿಡಬೇಕು. ಮಣೆಯ ಮೇಲೆ ಮೃತರು ಉಪಯೋಗಿಸುತ್ತಿದ್ದ ಅಗತ್ಯ ವಸ್ತುಗಳನ್ನು ಇಡಬೇಕು. ಚಾಪೆ ಹಾಕಿ ಮಡಿವಾಳ ಕೊಟ್ಟ ದಲ್ಯವನ್ನು ಹಾಕಬೇಕು. ಅದರ ಮೇಲೆ ಜೋಡಿ ಬಾಳೆಎಲೆ ಹಾಕಿ ಅದರ ಮೇಲೆ 5 ಹುಳಿ ದೋಸೆ, ಕೋಳಿಯ ಮುಖ್ಯ ಭಾಗಗಳನ್ನು ಬಡಿಸಬೇಕು. 5 ವೀಳ್ಯದೆಲೆ, ಅಡಿಕೆ, 1 ಎಳೆನೀರು ಇಡಬೇಕು ಹೊಸ ಚಾಪೆ ಮೇಲೆ ಮಡಿವಾಳ ಕೊಟ್ಟ ಮಡಿ ಬಟ್ಟೆ ಹಾಸಿ ಸ್ವಲ್ಪ ದೊಡ್ಡದಾದ ಜೋಡು ತುದಿ ಬಾಳೆಲೆಯಲ್ಲಿ ಅವಲಕ್ಕಿ ಬಡಿಸಿ ತೆಂಗಿನ ಕಾಯಿ ಹಾಲನ್ನು ಬಡಿಸಿ ಅದರ ಸುತ್ತಲೂ 5 ಬಾಳೆ ಹಣ್ಣನ್ನು ಸುಲಿದು ಇಡಬೇಕು. ಒಟ್ಟಿಗೆ ಒಂದು ತುಂಡು ಬೆಲ್ಲ ಇರಿಸಬೇಕು. ಕುಟುಂಬಸ್ಥರು ಅಲ್ಲೇ ಇರಿಸಿದ ಅವಲಕ್ಕಿ ಬೆಲ್ಲ ಕಾಯಿ ಹಾಲನ್ನು ಅಗೆಲಿಗೆ ಬಡಿಸುವರು. ತದ ನಂತರ ನೆಂಟರಿಷ್ಟರು ಅವರವರೇ ತಂದ ಅವಲಕ್ಕಿ ಬೆಲ್ಲ ಬಾಳೆಹಣ್ಣನ್ನು ಬಡಿಸುವರು. (ಸಾಮಾನ್ಯವಾಗಿ ನೆಂಟರಿಷ್ಟರು ಬರುವಾಗ 1 ಸೇರು ಅವಲಕ್ಕಿ, 1 ಅಚ್ಚು ಬೆಲ್ಲ, 1 ಪಾಡ ಬಾಳೆಹಣ್ಯ, 1 ತೆಂಗಿನಕಾಯಿ ತರುವುದು. ಕುಟುಂಬಸ್ಥರು ತರುವ ಕ್ರಮವಿಲ್ಲ) ತಿಳಿದವರು ಪ್ರಾರ್ಥನೆ ಮಾಡಿಕೊಳ್ಳಬೇಕು. ಮಧ್ಯಾಹ್ನಕ್ಕೆ ಮೊದಲು ಅಗೇಲು ಜಾರಿಸಬೇಕು.

ಅಗೇಲು ಎಳೆಯುವುದು: ಅಗೇಲು ಬಡಿಸಿದವರೇ ಅಗೇಲಿಗೆ ನೀರು ಹಾಕಿ ಜಾರಿಸುವುದು
ಮಾಡಬೇಕು. ಬಂದವರಿಗೆಲ್ಲ ಯಥೋಪಚಾರ ಮಾಡಿ ಕಳುಹಿಸುವುದು ಕ್ರಮ (ಬಡಿಸಿದ ಅರ್ಧ ಭಾಗವನ್ನು ಮಡಿವಾಳನಿಗೆ ಕೊಡುವ ಕ್ರಮವಿದೆ.)

ಕಾವೇರಿ ಸಂಕ್ರಮಣದ ಹಿಂದೆ ಮೃತಪಟ್ಟವರಿಗೆ ಇದೇ ವರ್ಷದಲ್ಲಿಯೂ ತದನಂತರ ಮೃತಪಟ್ಟವರಿಗೆ ಮುಂದಿನ ದೀಪಾವಳಿಯಲ್ಲಿ ಅವಲಕ್ಕಿ ಹಾಕುವ ಕ್ರಮವಿದೆ. (16 ಕಳೆದಿರಬೇಕು.)















Monday, October 14, 2024

ಗೌಡ ಸಂಸ್ಕೃತಿ-ಬಯಕೆ ಮದುವೆ (ಸೀಮಂತ)

 ಕನ್ಯ ಗರ್ಭವತಿಯಾದಾಗ ವರನ ಮನೆಯವರು ಹೆಣ್ಣಿನ ಮನೆಗೆ ಸಮಾಚಾರ ಮುಟ್ಟಿಸುತ್ತಾರೆ. ಮಗಳು ಗರ್ಭವತಿಯಾದ ವಿಚಾರವನ್ನು ತಿಳಿದ ತವರು ಮನೆಯವರು ಮಗಳನ್ನು ಏಳನೇ ತಿಂಗಳಲ್ಲಿ ಬಂದು ಕರೆದುಕೊಂಡು ಹೋಗುವರು. ದೇವರ ದೀಪ ಹಚ್ಚಿ ಹಿರಿಯರ ಆಶೀರ್ವಾದ ಪಡೆದು ಹೊರಡುವ ಪದ್ಧತಿ. ನಂತರ ತವರು ಮನೆಯಲ್ಲಿ ಬಯಕೆ ಮದುವೆ ಮಾಡುವ ಕ್ರಮವಿದೆ. ನಿಶ್ಚಿತ ಶುಭದಿನದಂದು ಬಯಕೆ ಮದುವೆಯನ್ನು ಮಾಡುವರು. ಚೊಚ್ಚಲ ಹೆರಿಗೆಯಲ್ಲಿ ಗರ್ಭಿಣಿಗೆ ಬಹಳಷ್ಟು ಬಯಕೆಗಳಿರುತ್ತವೆ. ಬಯಕೆ ಮದುವೆ ಮಾಡುವ ಸಮಯಕ್ಕೆ ಮುಂಚೆ ಕದಳಿ ಬಾಳೆಹಣ್ಣು, ಹೊದಳು, ಅವಲಕ್ಕಿ, ಬೆಲ್ಲ, ತೆಂಗಿನಕಾಯಿ, ಬಾಳೆಎಲೆ, ಎಲೆಅಡಿಕೆ. ಏಳನೇ ತಿಂಗಳಾದರೆ ಏಳು ಬಗೆಯ ಸಿಹಿತಿಂಡಿ ಹಾಗೇನೆ ಏಳು ಬಗೆಯ ಹೂಗಳನ್ನು ಶೇಖರಿಸಿಡಬೇಕು. ನೆರೆಹೊರೆಯವರನ್ನು, ನೆಂಟರಿಷ್ಟರನ್ನು ಹಾಗೂ ಗಂಡ ಮತ್ತು ಅವನ ಮನೆಯವರನ್ನು ಆಹ್ವಾನಿಸಬೇಕು. ಪತಿಯ ಮನೆಯಿಂದ ಬರುವಾಗ ಹೊಸ ಹಸಿರು ಸೀರೆ, ರವಿಕೆ, ಹಸಿರು ಬಲೆ, ಆಭರಣ, ಹೂ, ಹಿಂಗಾರ ಸಿಹಿತಿಂಡಿಗಳನ್ನು ತರುವರು.

ಗಂಡಿನ ಕಡೆಯಿಂದ ತಂದ ವಸ್ತಾಭರಣಗಳಿಂದ ಗರ್ಭಿಣಿಯನ್ನು ಶೃಂಗರಿಸುತ್ತಾರೆ. ನಂತರ ಗರ್ಭಿಣಿಯನ್ನು ಮತ್ತು ಅವರ ಪತಿಯನ್ನು ತುಳಸಿಕಟ್ಟೆಯ ಹತ್ತಿರ ಕರೆದುಕೊಂಡು ಹೋಗಿ ಗರ್ಭಿಣಿಯ ತಂದೆ ತಾಯಿ ಅವಳ ಕೈಯಲ್ಲಿ 5 ವೀಳ್ಯದೆಲೆ, 1 ಅಡಿಕೆ ಕೊಟ್ಟು ಕುಲದೇವರ ಹೆಸರು ಹೇಳಿ 5 ಸಲ ಭೂಮಿಗೆ ನೀರು ಬಿಡುವರು. (ಪಂಚಭೂತಗಳಿಗೆ ಅರ್ಪಣೆಮಾಡುವ ಕ್ರಮ) ಇಲ್ಲಿ ಕೋಳಿ(ಹೆಂಟೆ ಲಾಕಿ) ಮರಿಯನ್ನು ಗರ್ಭಿಣಿಯ ತಂದೆ ಅಥವಾ ಹಿರಿಯರು ಕೈಯಲ್ಲಿ ಹಿಡಿದು ಗರ್ಭಿಣಿಯ ತಲೆಸುತ್ತ ತಂದು ಬೆಳ್ಳಿಗೆ ಅಕ್ಕಿಯನ್ನು ಅದಕ್ಕೆ ತಿನ್ನಿಸಿ ನೀರು ಕುಡಿಸಿ ಬಿಟ್ಟುಬಿಡುವರು. ಒಳಗೆ ಬಂದು ನಡುಮನೆಯಲ್ಲಿ (ಕನ್ನಿಕಂಬದ ಹತ್ತಿರ) ಜಾಜಿ ಹಾಸಿ ಗರ್ಭಿಣಿಯನ್ನು ಮತ್ತು ಅವಳ ಪತಿಯನ್ನು ಹತ್ತಿರ ಕುಳ್ಳಿರಿಸುವರು. ಕಾಲುದೀಪ ಹಚ್ಚಿಡಬೇಕು. ಗಂಧ, ಅರಸಿನ, ಕುಂಕುಮ ಒಂದು ಮಣೆಯ ಮೇಲಿಡಬೇಕು. ಹರಿವಾಣದಲ್ಲಿ ಅಕ್ಕಿ ಹಾಗೂ ತಂಬಿಗೆ ನೀರು ಇಟ್ಟಿರಬೇಕು. ಮುತ್ತೈದೆಯರು ಗರ್ಭಿಣಿಗೆ ಉಡಿ ಅಕ್ಕಿ ತುಂಬಿಸುವರು. (ಒಂದು ಸೇರು ಬೆಳ್ತಿಗೆ ಅಕ್ಕಿ, 1 ತೆಂಗಿನಕಾಯಿ, 5 ವೀಳ್ಯದೆಲೆ, 1 ಅಡಿಕೆ, 1 ಅಚ್ಚುಬೆಲ್ಲ) ಇವೆಲ್ಲವನ್ನು ಮೊರದಿಂದ (ತಡೆ) ಮಡಿಲಿಗೆ ಹಾಕುವುದು ಕ್ರಮ. ಹಿರಿಯರು ಅರಿಶಿನ ಕುಂಕುಮ ಹಚ್ಚಿ ಅಕ್ಷತೆ ಹಾಕಿ ಹರಸುವರು ಗರ್ಭಿಣಿ ಪಕ್ಕದಲ್ಲಿ 1 ಗಂಡು ಮಗುವನ್ನು ಗಂಡನ ಪಕ್ಕದಲ್ಲಿ 1 ಹೆಣ್ಣು ಮಗುವನ್ನು ಕುಳ್ಳಿರಿಸಿ ಅವರೆಲ್ಲರ ಎದುರಿಗೆ ಬಾಳೆಲೆ ಹಾಕುವರು. ಗರ್ಭಿಣಿಯ ತಾಯಿ ಮೊದಲು ಹೊದುಳು ಅವಲಕ್ಕಿ, ಬಾಳೆಹಣ್ಣು, ಕಾಯಿಹಾಲು ಬಡಿಸುವರು, ಇದನ್ನು ಕಲಸಿ ಒಂದು ಉಂಡೆಯನ್ನು ಗರ್ಭಿಣಿ ತನ್ನ ಪಕ್ಕದಲ್ಲಿರುವ ಗಂಡುಮಗುವಿಗೂ ಪತಿಯು ಹೆಣ್ಣು ಮಗುವಿಗೂ ಕೊಡುತ್ತಾರೆ. ತಂದಂತಹ ಸಿಹಿತಿಂಡಿ ಮುಂತಾದ ಪದಾರ್ಥಗಳನ್ನು ಅವರಿಗೆ ಬಡಿಸುವರು. ಊಟವಾದ ನಂತರ ಗರ್ಭಿಣಿಯನ್ನು ಗಂಡನ ಮನೆಗೆ ಕರೆದುಕೊಂಡು ಹೋಗುವರು. ಪುನಃ ನಿಗದಿಪಡಿಸಿದ ದಿನದಂದು ತಾಯಿ ಮನೆಗೆ ಕರೆತರುವರು.

ಪರಿಕರಗಳು : ಕದಳಿ ಬಾಳೆಹಣ್ಣು, ಹೊದುಳು, ಅವಲಕ್ಕಿ, ಬೆಲ್ಲ, ತೆಂಗಿನಕಾಯಿ 1, ಬೆಳ್ತಿಗೆ ಅಕ್ಕಿ 1 ಸೇರು, ಬಾಳೆಲೆ 5, ವೀಳ್ಯದೆಲೆ 5, ಅಡಿಕೆ 1, 7 ಬಗೆಯ ಹೂಗಳು ಹಾಗೂ ಸಿಹಿತಿಂಡಿಗಳು, ಕಾಯಿ ಹಾಲು

ಪತಿಮನೆಯಿಂದ ತರುವ ವಸ್ತುಗಳು : ಹೊಸ ಹಸಿರು ಸೀರೆ, ರವಿಕೆ, ಆಭರಣ, ಹೂ ಹಿಂಗಾರ, ಸಿಹಿತಿಂಡಿಗಳು



Thursday, October 10, 2024

ಗೌಡ ಸಂಸ್ಕೃತಿ- ಮದುವೆ.

 ಗೌಡ ಸಮುದಾಯದಲ್ಲಿ ಮದುವೆಯೆನ್ನುವುದು ಬಹುಮುಖ್ಯ ಘಟ್ಟ. ಕುಟುಂಬ/ವಂಶವಾಹಿನಿ ಬೆಳೆದು ಬರಲು 'ಮದುವೆ' ಎನ್ನುವ ನಿಯೋಜಿತ ವ್ಯವಸ್ಥೆ ನಡೆಯಲೇ ಬೇಕು ಎನ್ನುವ ಕಟ್ಟಳೆ ನಮ್ಮ ಹಿರಿಯರಿಂದ ನಿರ್ಮಿತವಾದುದಾಗಿದೆ. ಈ ಮದುವೆ ಎನ್ನುವ ವ್ಯವಸ್ಥೆ ಗೌಡರಲ್ಲಿ ಬಳಿ ನೋಡುವಲ್ಲಿಂದ ಆರಂಭವಾಗುತ್ತದೆ. ಮದುವೆಯಲ್ಲಿ ಹುಡುಗಿ ನೋಡುವ ಶಾಸ್ತ್ರ, ವೀಳ್ಯ ಶಾಸ್ತ್ರ, ಮದುವೆ ದಿನದ ಕ್ರಮಗಳಲ್ಲಿ ಹಾಗೆಯೇ ನಂತರದ ಕ್ರಮಗಳಲ್ಲಿ ಹಲವು ಕಟ್ಟಳೆಗಳಿರುತ್ತವೆ. ಗೌಡರಲ್ಲಿ 'ಬಳಿ' ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. 'ಬಳಿ' ಗೌಡರಲ್ಲಿ ಸ್ವಕುಟುಂಬಿಕ ನೆಲೆಯನ್ನು ಪ್ರತಿನಿಧಿಸುತ್ತದೆಯಾದ್ದರಿಂದ ಒಂದೇ 'ಬಳಿ'ಯಲ್ಲಿ 'ಮದುವೆ' ನಡೆಯಬಾರದೆನ್ನುವ ನಿಷೇಧವನ್ನು ಇಟ್ಟುಕೊಳ್ಳಲಾಗಿದೆ. ರಕ್ತ ಸಂಬಂಧಿಗಳಲ್ಲಿ ಮದುವೆ ನಡೆಯುವುದು ಯಾವ ದೃಷ್ಟಿಯಿಂದಲೂ ಯೋಗ್ಯವಲ್ಲ ಎನ್ನುವುದನ್ನು ನಮ್ಮ ಹಿರಿಯರು ಕಂಡುಕೊಂಡಿದ್ದಾರೆನ್ನುವುದನ್ನು ಇದು ಸೂಚಿಸುತ್ತದೆ. ಹೀಗಿದ್ದೂ ತಂದೆಯ ಸಹೋದರಿ ಅಥವಾ ತಾಯಿಯ ಸಹೋದರರ ಕಡೆ 'ಬಳಿ'ಗಳಲ್ಲಿ ಮದುವೆ ನಡೆಯಬಹುದು. ಗೌಡರಲ್ಲಿ ಇರುವ ವಿಭಿನ್ನ 'ಬಳಿ'ಗಳಲ್ಲಿ 'ಮದುವೆ' ನಡೆಯುವುದು ಸಂಪ್ರದಾಯ. ಜಾತಿ ಪದ್ಧತಿ ಪ್ರಕಾರ ಅಲ್ಲದೇ ವೈದಿಕ ಕ್ರಮಗಳಲ್ಲಿ ಕೂಡಾ ಮದುವೆ ನಡೆಸಬಹುದು.