ಪಂಚ ಪರ್ವಗಳು : ಒಂದು ಕಾಲದಲ್ಲಿ ಕೂಡು ಕುಟುಂಬವಿದ್ದ ಗೌಡರ ತರವಾಡು ಮನೆಯಲ್ಲಿ ಪಂಚಪರ್ವಗಳನ್ನು ಕುಟುಂಬದ ಹಿರಿಯರು ಮಾಡುತ್ತಿದ್ದರು
1. ಸೋಣ ಶನಿವಾರ : ಸೋಣ ತಿಂಗಳ ಒಂದು ಶನಿವಾರ ವೆಂಕಟ್ರಮಣ ದೇವರ ಮುಡಿಪು ಶುದ್ದೀಕರಿಸಿ ಕಾಣಿಕೆ ಹಾಕಿ ಕೈಮುಗಿದ ನಂತರ ಮಧ್ಯಾಹ್ನದ ಊಟ ಮಾಡುವ ಸಂಪ್ರದಾಯ
2. ಹೊಸ್ತು ಕಾರ್ಯಕ್ರಮ : ನಿರ್ನಾಲ ತಿಂಗಳಿನ ಮೊದಲ ಅಮವಾಸ್ಯೆ ಕಳೆದ ಬಳಿಕ ಹೊಸ್ತು ಊಟಮಾಡುವುದು.
3. ಕಾವೇರಿ ಸಂಕ್ರಮಣ : ಕನ್ಯಾ ಸಂಕ್ರಮಣದ ಮುಂದಿನ ನಿಶ್ಚಿತ ದಿನಮಾನದಲ್ಲಿ ತಲಕಾವೇರಿಯ ಜಾತ್ರೋತ್ಸವದ ಪುಣ್ಯ ತೀರ್ಥ ಮಿಂದು ನಮ್ಮ ಗುರುಕಾರ್ನೋರು ಅಗೋಚರವಾಗಿ ಬರುವುದರಿಂದ ಅದರ ಮಾರನೇ ದಿನ ತಡ್ಡೆಯಲ್ಲಿ 32 ಎಲೆ ತುಂಡಿನಲ್ಲಿ ಅನ್ನ ನೈವೇದ್ಯ ದೀಪವಿರಿಸಿ (ಅನ್ನ, ಅಲಸಂಡೆ ಪದಾರ್ಥ, ಗದ್ದೆ ಮೀನು ಸಾರು ಮಾಡಿ ಬಡಿಸಿ) ಬೈಹುಲ್ಲಿನ ರಾಶಿ ಮೇಲೆ ಇಡುವುದು.
4. ವಿಷು ಸಂಕ್ರಮಣ : ( ಕಣಿ ಇಡುವುದು)
5. ಬೇಷ ಪತ್ತನಾಜೆ : ದೈವ ಕಾರ್ಯಗಳ ಬಳಿಕ ಗುರು ಕಾರ್ನೋರಿಗೆ ಎಡೆ ಹಾಕುವುದು
ಮನೆ ತುಂಬಿಸುವುದು :
ಆಟಿ ತಿಂಗಳಿನಲ್ಲಿ ಮನೆಯ ಅಟ್ಟ ಗುಡಿಸಿ, ಧೂಳು ತೆಗೆದು ಕಳೆದ ವರ್ಷ ಕಟ್ಟಿದ ಕದಿರನ್ನು ತೆಗೆದು ಮನೆ ಸ್ವಚ್ಛ ಮಾಡಬೇಕು. ಚೌತಿಯಿಂದ ಹಿಡಿದು ತಲಕಾವೇರಿ ಸಂಕ್ರಮಣದವರೆಗೆ ಯಾವಾಗ ಬೇಕಾದರೂ ಮನೆ ತುಂಬಿಸುವುದು ಮಾಡಬಹುದು.
ಮನೆ ತುಂಬಿಸುವ ವಸ್ತುಗಳು : ನಕ್ಷತ್ರಕ್ಕೆ ಅನುಗುಣವಾಗಿ ವಸ್ತುಗಳಿರಬೇಕು. ಆಶ್ವತ್ತ, ಮಾವು ಹಲಸು, ಬಿದಿರು, ಗೊಳಿ (ದೊಡ್ಡ ಗೋಳಿ, ಸಣ್ಣ ಗೋಳಿ) ನಾಯಿ ಕರುಂಬು, ಪೊಲಿ ಬಳ್ಳಿ, ಇಟ್ಟೋ ಸೊಪ್ಪು, ಗಬ್ಬಲ ಮರದ ಬಳ್ಳಿ, ಕವುಂತೆ ಬಳ್ಳಿ ಸೊಪ್ಪು ಇವುಗಳು ಮುಖ್ಯವಾದವುಗಳು. ಮನೆ ತುಂಬಿಸುವ ಮೊದಲಿನ ದಿನ ಮೇಲಿನ ವಸ್ತುಗಳನ್ನು ಸಂಗ್ರಹಿಸಿ ಯಾರೂ ಮುಟ್ಟದ ಜಾಗದಲ್ಲಿ ತಂದಿಡಬೇಕು. ಮಾರನೇ ದಿನ ಮನೆಯ ಯಜಮಾನ ಸ್ನಾನ ಮಾಡಿ ಮಡಿಯುಟ್ಟು ಕದಿರು ತೆಗೆಯಲು ಗದ್ದೆಗೆ ಹೋಗುತ್ತಾರೆ. ಹೋಗುವಾಗ ಮನೆಯ ಇತರ ಸದಸ್ಯರು ವಿಷಮ ಸಂಖ್ಯೆಯಲ್ಲಿ ಒಟ್ಟಿಗೆ ಹೋಗುತ್ತಾರೆ. ಹೋಗುವಾಗ 5 ಎಲೆ 1 ಅಡಿಕೆ 1 ತುದಿಬಾಳೆ ಎಲೆ ತೆಗೆದುಕೊಂಡು ಗದ್ದೆಗೆ ಹೋಗಿ ಇಡುವರು. ತೆನೆ ತೆಗೆಯುವಾಗ ಮೊದಲು ಕೈ ಮುಗಿಯಬೇಕು. ಅನಂತರ ಪೊಲಿಯೇ. ಬರುವಾಗ ಪೊಲಿ.. ಪೊಲಿ.. ಹೇಳುತ್ತಾ ಕದಿರು ತೆಗೆಯುತ್ತಾರೆ. ತೆಗೆದುಕೊಂಡು ಬರುವಾಗ ಪೊಲಿ.ಹೇಳುತ್ತಾ ಕದಿರು ತರಬೇಕು. ಅಂಗಳಕ್ಕೆ ಬಂದ ಮೇಲೆ ಮುಂದಿನ ದಿನ ಸಂಗ್ರಹಿಸಿದ್ದ ಎಲ್ಲಾ ವಸ್ತುಗಳನ್ನು ಮನೆಯಲ್ಲಿದ್ದವರು 1 ಗೆರಸೆ (ತಡಪೆ)ಯಲ್ಲಿಟ್ಟಿರುತ್ತಾರೆ.
ತಡಪೆಯಲ್ಲಿದ್ದ ವಸ್ತುಗಳು ಮತ್ತು ಕದಿರನ್ನು ಹಿಡಿದುಕೊಂಡು ತುಳಸಿ ಕಟ್ಟೆಗೆ ಸುತ್ತು ಬರುತ್ತಾ ಪೊಲಿ ಪೊಲಿ ಹೇಳಬೇಕು. ಮನೆ ಒಳಗೆ ಹೋಗುವ ಮೊದಲು ಮುತ್ತೈದೆಯರು ಕಾಲಿಗೆ ನೀರು ಹಾಕುವರು. ಮತ್ತು ಕುಡಿಯಲು ಹಾಲು ಕೊಡುವರು. ದೇವರ ಕೋಣೆ ಅಥವಾ ಕನ್ನಿ ಕಂಬದ ಹತ್ತಿರ ಮನೆಯ ಯಜಮಾನ ಮೊದಲೇ ದೀಪ ಹಚ್ಚಿ ಗಣಪತಿಗೆ ಇಟ್ಟಿರುತ್ತಾರೆ. (5 ಎಲೆ 1 ಅಡಿಕೆ) ತಂದ ಕದಿರ ಸಮೇತ ಎಲ್ಲಾ ವಸ್ತುಗಳನ್ನು ಅಲ್ಲಿಡುತ್ತಾರೆ. ತಂದ ಕದಿರಿನಿಂದ ಭತ್ತ ತೆಗೆದು ಮನೆಯ ಯಜಮಾನ ನಂತರ ಎಲ್ಲರೂ ದೀಪಕ್ಕೆ ಹಾಕಿ ಕೈ ಮುಗಿಯುತ್ತಾರೆ. ಇದಾದ ನಂತರ ಕಿರಿಯರು ಹಿರಿಯರ ಕಾಲು ಹಿಡಿದು ಆರ್ಶಿವಾದ ಪಡೆಯುತ್ತಾರೆ. ಸಂಗ್ರಹಿಸಿದ ಎಲ್ಲಾ ಎಲೆಗಳನ್ನು ಒಂದರ ಮೇಲೊಂದು ಜೋಡಿಸಿ ಅದರೊಳಗೆ 2 ಕದಿರನ್ನು ಇಟ್ಟು ಮೇಲೆ ಗಬ್ಬಳ ಬಳ್ಳಿಯಿಂದ ಸುತ್ತುತ್ತಾರೆ. ಮೊದಲು ದೇವರ ಕೋಣೆಗೆ ಕಟ್ಟಿದ ನಂತರ ದೈವಸ್ಥಾನಕ್ಕೆ ಕಟ್ಟಬೇಕು. ನಂತರ ಮನೆಯ ಮುಖ್ಯ ಭಾಗಗಳಿಗೆ ಕಟ್ಟಬೇಕು. ಮನೆಯ ಎದುರಿನ (ದಾರಂದಕ್ಕೆ ಮಾವಿನಎಲೆ, ಆಶ್ವಥ ಎಲೆ, ಮಾಲೆ ಮಾಡಿ ಮಧ್ಯೆ ಮಧ್ಯೆ ಕದಿರನ್ನು ಕಟ್ಟಿರಬೇಕು.) ನೊಗ, ನೇಗಿಲು, ಅಡಿಕೆ ಮರ, ತೆಂಗಿನ ಮರ, ಹಟ್ಟಿ, ವಾಹನ ಇತ್ಯಾದಿಗಳಿಗೆ ಕದಿರು ಕಟ್ಟುತ್ತಾರೆ.
ಹೊಸ ಅಕ್ಕಿ ಊಟ : (ಐನ್ ಮನೆಯಲ್ಲಿ ಆಚರಣೆ ಮಾಡುವ ಕ್ರಮ) ಸಂಕ್ರಮಣಕ್ಕೆ ಮೊದಲು ಹೊಸ ಅಕ್ಕಿ ಊಟ ಮಾಡುವ ಕ್ರಮವಿದೆ. ಮುತೈದೆಯರು ಸ್ನಾನ ಮಾಡಿ ಮಡಿಯುಟ್ಟು ಗಂಗೆ ಪೂಜೆ ಮಾಡಿ ನೀರು ತಂದು ಹೊಸ ಅನ್ನಕ್ಕೆ ನೀರು ಇಡುವರು.ಅಟ್ಟದಿಂದ ಮಣ್ಣಿನ ಮಡಕೆಯನ್ನು ತೆಗೆದು ಚೆನ್ನಾಗಿ ತೊಳೆದು ಮಡಕೆಗೆ ಗಂಧ ಹಚ್ಚಿ ನೀರು ಸೌತೆಯ ಬಳ್ಳಿಯನ್ನು ಸುತ್ತಲೂ ಕಟ್ಟುತ್ತಾರೆ. (ಪೂರ್ವ ಕಾಲದ ಮನೆ ಒಳಗೆ ಸೆಗಣಿ ಸಾರಿಸಿ ಶುದ್ಧ ಮಾಡುವ ಕ್ರಮವಿತ್ತು) ಹಿರಿಯರೊಡನೆ ಹೊಸ ಅಕ್ಕಿಗೆ ನೀರು ಇಡುತ್ತೇವೆಂದು 3 ಸಲ ಹೇಳಿ ನೀರಿಡುತ್ತಾರೆ. ಹೊಸ ಅಕ್ಕಿ ಬೆಳ್ಳಿಗೆಯನ್ನು ಚೆನ್ನಾಗಿ ತೊಳೆದು ಹಾಕಬೇಕು. ಅಕ್ಕಿ ಬೆಂದಾಗ ತುರಿದ ತೆಂಗಿನ ಕಾಯಿಯನ್ನು ಕಡೆದು (ಆರೆದು) ಹಾಕಬೇಕು. ಒಟ್ಟಿಗೆ 3. 4 ಅರಿಶಿನ ಸೊಪ್ಪಿನ ಎಲೆ ಹಾಕಬೇಕು. ಬೆಂದ ನಂತರ ಹೊಸ ಅಕ್ಕಿ ಇಳಿಸುತ್ತೇವೆಂದು 3 ಸಲ ಹೇಳಿ ಇಳಿಸಬೇಕು. ಊಟಕ್ಕೆ ಸಾಮಾನ್ಯವಾಗಿ ಗುದ್ದಿದ ಉಪ್ಪು ಶುಂಠಿ, ನೀರು ಸೌತೆಕಾಯಿ ಪಚ್ಚೆಡಿ, ಕೆಸು ಮತ್ತು ಹರಿವೆ ದಂಟಿನ ಸಾಂಬಾರು ಈ 3 ಮುಖ್ಯ ಪದಾರ್ಥಗಳು ಅಲ್ಲದೆ ತರಕಾರಿ ಪಲ್ಯ ಗೇರು ಬೀಜ ಬೆಂಡಿನ ಪಲ್ಯ ಒಟ್ಟಿನಲ್ಲಿ ವಿಷಮ ಸಂಖ್ಯೆಯ ಪದಾರ್ಥಗಳಿರಬೇಕು.
ನೆನೆ ಅಕ್ಕಿ : ಬೆಳ್ತಿಗೆ ಅಕ್ಕಿಯನ್ನು ನೆನೆಸಿ ನೀರು ಬಸಿದು ರುಚಿಗೆ ತಕ್ಕ ಬೆಲ್ಲ, ಎಳ್ಳು, ಸುಟ್ಟ ಗೇರು ಬೀಜದ ಬೆಂಡು ಇವುಗಳನ್ನು ಪಾಕ ಮಾಡಿ ಬಳಸುವರು.
ಬಳಸುವ ಕ್ರಮ : ನಡುಮನೆ ಅಥವಾ ಕನ್ನಿ ಕಂಬದ ಹತ್ತಿರ ಗಣಪತಿಗೆ ಇಡಬೇಕು ಮಣೆ ಮೇಲೆ ಜೊಡು ಬಾಳೆ ಎಲೆ ಹಾಕಿ ಮೊದಲು ನೆನೆ ಅಕ್ಕಿ ಬಡಿಸಬೇಕು. ನಂತರ ತೆಂಗಿನಕಾಯಿ ಹಾಕಿದ ಗಂಜಿ ಮತ್ತು ಎಲ್ಲಾ ಪದಾರ್ಥಗಳನ್ನು ಬಡಿಸುವುದು ಕ್ರಮ. ಕೈ ಮುಗಿದು ಕುಲದೇವರಿಗೆ ಪ್ರಾರ್ಥನೆ ಮಾಡಿಕೊಳ್ಳಬೇಕು. (ತಟ್ಟೆಯಲ್ಲಿ 16 ಚಿಕ್ಕ ತುದಿ ಬಾಳೆಲೆಗಳನ್ನು ಇಟ್ಟು ಎಲ್ಲಾ ಬಾಳೆಲೆಗೆ ಸ್ವಲ್ಪ ಸ್ವಲ್ಪ ಮಾಡಿದ ಪದಾರ್ಥಗಳನ್ನು ಬಡಿಸಿ ನೆನೆಬತ್ತಿ ಹಚ್ಚಿಟ್ಟು ಅಟ್ಟದಲ್ಲಿ ಕೊಲೆಗೆ ಇಡುವ ಕ್ರಮವಿದೆ.
ಮಗುವಿಗೆ ನವಾನ್ನ ಬೋಜನ, ಅನ್ನ ಪ್ರಾಶನ :- ಮಗುವಿಗೆ ಹೊಸತು ಕೊಡುವುದು. ಅನ್ನ ಪ್ರಾಶನಕ್ಕೆ ತಾಯಿಯ ಮಡಿಲ ಮೇಲೆ ಮಗುವನ್ನು ಕುಳ್ಳಿರಿಸಿಕೊಳ್ಳುತ್ತಾರೆ. ಹೊಸ ಅಕ್ಕಿ ಅನ್ನವನ್ನು ತುದಿ ಬಾಳೆಲೆಯಲ್ಲಿ ತಂದು ಇಡುತ್ತಾರೆ. ಸ್ವಲ್ಪ ಹಾಲು ಹಾಕಿ ತೆಳ್ಳಗೆ ಮಾಡಿಕೊಳ್ಳಬೇಕು. ಮಗುವಿಗೆ ಹಿರಿಯರಿಂದ ಮೊದಲ್ಗೊಂಡು ಎಲ್ಲರೂ ಬೆರಳಿನಿಂದ ಹನಿ ಹನಿ ಬಾಯಿಗೆ ನೆಕ್ಕಿಸುತ್ತಾರೆ.)
ಇದಾದ ನಂತರ ಎಲ್ಲರೂ ಊಟಕ್ಕೆ ಕುಳಿತುಕೊಳ್ಳುತ್ತಾರೆ. ಎಲ್ಲರೂ ಸಂಬಂಧ ಹೇಳುತ್ತಾ ಹೊಸ ಅಕ್ಕಿ ಊಟ ಮಾಡುತ್ತೇವೆ ಎಂದು ಕೇಳುತ್ತಾ ಊಟ ಮಾಡುವರು. ಆಮೇಲೆ ಎಲ್ಲರೂ ಎಲೆ ಅಡಿಕೆ ಮೆಲ್ಲುವ ಕ್ರಮವಿದೆ. ಹೊಸತು ಗಂಜಿಯನ್ನು ಮಾರನೇ ದಿನ ಅಂಗಾರ ಕಲ್ಲಿಗೆ ಬಡಿಸುವ ಪದ್ಧತಿ. ಕಾಯಿ ಒಡೆದು ನೆನೆ ಬತ್ತಿ ಹಚ್ಚಿಡಬೇಕು. ಅಂಗಾರನಿಗೆ ಮುಡಿಸಿದ ಮೇಲೆ ಅರ್ಧ ಗಂಜಿಯನ್ನು ದನಕರುಗಳಿಗೆ ಕೊಟ್ಟು ಉಳಿದವನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸುತ್ತಾರೆ.
ಗುರು ಕಾರ್ನೂರಿಗೆ ಬಡಿಸುವ ಕ್ರಮ :- ನಮ್ಮ ಪೂರ್ವಜರು ಶೃಂಗೇರಿಯಿಂದ ಬರುವಾಗ ತಮ್ಮ ಮಾರ್ಗ ದರ್ಶನಕ್ಕಾಗಿ ಅಲ್ಲಿಂದ ಕಳುಹಿಸಿಕೊಟ್ಟ ಪ್ರಮುಖರೆ ಗುರುಕಾನೂರು 2 ಮಣೆ ಇಟ್ಟು ಬಲಗಡೆಯಿರುವ ಮಣೆಯಲ್ಲಿ ದೀಪ ಹಚ್ಚಿ ಗಂಧದ ಕಡ್ಡಿ ಉರಿಸಿಟ್ಟು ತೇದ ಗಂದವನ್ನು ತುದಿ ಬಾಳೆಲೆಯಲ್ಲಿಡಬೇಕು. ಇನ್ನೊಂದು ಮಣೆಯಲ್ಲಿ ಬಾಳೆಲೆಯನ್ನು ಒಂದರ ಮೇಲೊಂದು ಇಟ್ಟು ನೀರು ಹಾಕಿ ಬಾಳೆಲೆ ಉಜ್ಜಿ 5 ನೀರು ದೋಸೆ ಮತ್ತು ಹೆಂಟೆ ಕೋಳಿ ಸಾಂಬಾರಿನ ಮುಖ್ಯ ಭಾಗಗಳನ್ನು ಬಳಸಬೇಕು. ಅದಕ್ಕೆ 5 ಎಲೆ ಅಡಿಕೆ, ನೆನೆಬತ್ತಿ ಹಚ್ಚಿಡಬೇಕು. ಪ್ರಾರ್ಥನೆ ಮಾಡಿಕೋಳ್ಳಬೇಕು.
ಭಿನ್ನಃ ಮಾಡಿಕೊಳ್ಳುವುದು : ಸ್ವಾಮಿ ಇಂದು ಕೋಳಿ ಕೊಂದು ಅಡಿಗೆ ಮಾಡಿ ಅಗೇಲು ಹಾಕಿದ್ದೇವೆ. ಸ್ವಲ್ಪ ದಿನ ಹಿಂದು ಮುಂದಾದರೂ ಇಂದು ದಿನ ಕೂಡಿ ಬಂದಿದ್ದು ಎಲ್ಲಿಯಾದರೂ ವಿಷ ಘಳಿಗೆ ಇದ್ದಲ್ಲಿ ಅದನ್ನು ಅಮೃತ ಘಳಿಗೆ ಎಂದು ತಿಳಿದು ಮಿಂದ ನೀರಲ್ಲಿ ಕೊಂದ ಕೋಳಿಯಲ್ಲಿ ಮಾಡಿದ ಅಡುಗೆಯಲ್ಲಿ ಸಾವಿರ ತಪ್ಪುಗಳಿದ್ದರೂ ಅದನ್ನು ಒಪ್ಪು ಮಾಡಿಕೊಂಡು ಈ ಒಂದು ಸಂಸಾರವನ್ನಾಗಲಿ, ಬಿತ್ತಿದ ಬೆಳೆಗಾಗಲಿ, ದನ ಕರುಗಳಿಗಾಲಿ ಬೆಳೆ ಭಾಗ್ಯಕ್ಕಾಗಲಿ ಏನೊಂದು ತೊಂದರೆ ಬಾರದ ಹಾಗೆ ಬಂದ ವಿಘ್ನಗಳನ್ನು ಪರಿಹರಿಸಿಕೊಂಡು ಬರುವ ಕೀರ್ತಿ ನಾವು ನಂಬಿದ ಗುರು ಕಾರ್ನರಿಗೆ ಸೇರಿದ್ದು ಎಂತ ನಾವೆಲ್ಲ ಇದ್ದು ಕೈ ಮುಗಿಯುತ್ತಿದ್ದೇವೆ.
ಪಾಷಾಣ ಮೂರ್ತಿಗೆ ಬಡಿಸುವ ಕ್ರಮ : ಸಾಮಾನ್ಯವಾಗಿ ಬೆಸ ತಿಂಗಳಲ್ಲಿ ಅಥವಾ
ವರ್ಷದ ಇತರ ದಿನಗಳಲ್ಲಿಯೂ ಪಾಷಾಣ ಮೂರ್ತಿಗೆ ಬಡಿಸುವುದು ಮಾಡಬಹುದು. ಹೇಂಟೆ ಕೋಳಿ ಕೊಂದು ಮನೆಯ ಯಜಮಾನ ಸ್ನಾನ ಮಾಡಿ ಅನ್ನದ ಅಡುಗೆ ಮಾಡಬೇಕು. (ಕೆಲವು ಭಾಗಗಳಲ್ಲಿ ರೊಟ್ಟಿ, ದೋಸೆ ಮಾಡುವ ಪದ್ಧತಿ ಇದೆ.).
ಕ್ರಮ : 2 ಅಥವಾ 5 ಅಥವಾ 7 ಅಗೇಲು ಹಾಕುತ್ತಾರೆ. ಕಾಲು ದೀಪ ಹಚ್ಚಿ ಊದು ಬತ್ತಿ ಹಚ್ಚಿಡಬೇಕು ಅಗೇಲು ಹಾಕುವಾಗ ಅನ್ನ ಅಥವಾ ರೊಟ್ಟಿ ಬಡಿಸಿ ಒಂದರಲ್ಲಿ ಕೋಳಿಯ ಮುಖ್ಯ ಭಾಗಗಳು ಉಳಿದವುಗಳಲ್ಲಿ ಕೋಳಿಯ ತುಂಡುಗಳನ್ನು ಬಡಿಸುತ್ತಾರೆ. ಎಲೆಗೆ ನೆನೆ ಬತ್ತಿ ಹಚ್ಚಿಡಬೇಕು. ಅರಶಿನ ಕುರ್ದಿ ಬೆಲ್ಲದ ಕುರ್ದಿ (ಹೆಂಡದ ಕುರ್ದಿ ಮಸಿ ಕುರ್ದಿ) ತೇದ ಗಂಧ 5 ಎಲೆ 1 ಅಡಿಕೆ ಮಣೆ ಮೇಲೆ ಇಡಬೇಕು. ಧೂಪದ ಆರತಿ ಮಾಡಬೇಕು ಪ್ರಾರ್ಥನೆ ಮಾಡುವಾಗ ಬೆಳ್ತಿಗೆ ಅಕ್ಕಿ ಉಪಯೋಗಿಸಬೇಕು.
No comments:
Post a Comment