ಹುಡುಗಿ ನೋಡುವ ಕ್ರಮ :
ಹುಡುಗ/ಹುಡುಗಿ ಪ್ರಾಪ್ತ ವಯಸ್ಸಿಗೆ ಬಂದಾಗ ಹಿರಿಯರು ಅವರಿಗೆ ಮದುವೆ ಮಾಡಲು ಆಲೋಚಿಸುತ್ತಾರೆ. ನೆಂಟರಿಷ್ಟರಲ್ಲಿ ಗಂಡು-ಹೆಣ್ಣನ್ನು ಹುಡುಕಲು ಹಿರಿಯರು ಸೂಚಿಸುತ್ತಾರೆ. ಶಕ್ತ ಮನೆತನದ ಸೂಕ್ತ ಬಳಿಯ ಕನ್ಯ ಗೊತ್ತಾದ ನಂತರ ಹುಡುಗಿ ನೋಡುವ ಶಾಸ್ತ್ರಕ್ಕೆ ದಿನ ನಿಗದಿ ಮಾಡುತ್ತಾರೆ.
ಹಿಂದಿನ ಕಾಲದಲ್ಲಿ ಹುಡುಗಿ ನೋಡಲು ಹುಡುಗ ಹೋಗುವ ಕ್ರಮವಿರಲಿಲ್ಲ. ಇಂದು ಹುಡುಗನೇ ನೋಡಿದ ಹುಡುಗಿಯನ್ನು ನೋಡಲು ಹಿರಿಯರು ಹೋಗುವುದು ಬಂದುಬಿಟ್ಟಿದೆ. ಮೊದಲಿನಿಂದಲೂ ಹುಡುಗ ಹುಡುಗಿಯರನ್ನು ನಿಶ್ಚಯಿಸುವಲ್ಲಿ ಉಭಯ ಕಡೆಯ ಪರಿಚಯಸ್ಥರೊಬ್ಬರು ಮಧ್ಯವರ್ತಿಯಾಗಿ ಸಹಕರಿಸುತ್ತಿದ್ದರು.
ಹುಡುಗಿ ನೋಡುವ ಶಾಸ್ತ್ರ ನಿಗದಿಯಾದ ಶುಭದಿನ ಹೇಳಿಕೆಯಾದ ಪ್ರಕಾರ ಕುಟುಂಬದ ಮತ್ತು ಬಂಧುಗಳಲ್ಲಿ 5ರಿಂದ 7ಜನ ಹಿರಿಯರು ಪೂರ್ವಾಹ್ನದ ಹೊತ್ತಿಗೆ ಹುಡುಗಿ ಮನೆ ತಲುಪಲೇಬೇಕೆನ್ನುವ ಹಿನ್ನೆಲೆಯಲ್ಲಿ ತಲುಪುತ್ತಾರೆ. (ಅಪರಾಹ್ನ ಹುಡುಗಿ ನೋಡುವ ಶಾಸ್ತ್ರ ಮಾಡಬಾರದೆನ್ನುವ ನಂಬಿಕೆ ಇದೆ.) ಹುಡುಗಿ ನೋಡುವ ಶಾಸ್ತ್ರದ ದಿನ ಹುಡುಗಿ ಮನೆಯಲ್ಲೂ ಕುಟುಂಬದ ಹಿರಿಯ ಪ್ರಮುಖರು ಸೇರುತ್ತಾರೆ. ಹುಡುಗನ ಕಡೆಯವರು ಹುಡುಗಿ ಮನೆಗೆ ಬಂದಾಗ ಕೈಕಾಲು ತೊಳೆಯಲು ನೀರು ಕೊಡುವುದು ಪದ್ಧತಿ. ಬಂದ ನೆಂಟರನ್ನು ಮನೆ ಚಾವಡಿಯಲ್ಲಿ ಕುಳ್ಳಿರಿಸಿ ಬೆಲ್ಲ-ನೀರು ಕೊಟ್ಟು ಸತ್ಕರಿಸಬೇಕು. ಮುತ್ತೈದೆಯರಿಗೆ ನೆತ್ತಿಗೆಣ್ಣೆ, ಹಣೆಗೆ ಕುಂಕುಮ, ಮುಡಿಗೆ ಹೂವು ಕೊಡಬೇಕು. ಬಂದ ಹಿರಿಯರೊಬ್ಬರಿಗೆ ಹರಿವಾಣದಲ್ಲಿ ಕವಳೆ ವೀಳ್ಯದೊಂದಿಗೆ ಅಡಿಕೆಗಳನ್ನಿಟ್ಟು ಗೌರವಿಸುವುದು ನಡೆದು ಬಂದ ಸಂಗತಿ. ಉಪಾಹಾರವನ್ನಿತ್ತು ಬಂದ ಹುಡುಗನ ಕಡೆಯವರಿಗೆ ಸತ್ಕರಿಸುವುದು
ಪರಸ್ಪರ ಕುಶಲೋಪರಿ ಬಳಿಕ ಹುಡುಗಿ ನೋಡುವ ಕ್ರಮ ಜರಗುತ್ತದೆ. ಹುಡುಗನ ಕಡೆಯಿಂದ ಬಂದ ಸ್ತ್ರೀಯರು ಮನೆಯೊಳಗೆ ಹೋಗಿ ಹುಡುಗಿಯನ್ನು ನೋಡುತ್ತಾರೆ. ಹುಡುಗಿಯನ್ನು ಮಾತಾಡಿಸುತ್ತಾರೆ. ಇದರ ಹೊರತಾಗಿಯೂ ಬಂದ ನೆಂಟರಿಗೆ ಹುಡುಗಿಯೇ ಬಾಯಾರಿಕೆ ಕೊಡುವ ನೆಪದಲ್ಲಿ ಹುಡುಗಿಯನ್ನು ನೋಡುವ ಶಾಸ್ತ್ರ ಮಾಡುವುದುಂಟು. ಪುರುಷರು ಹುಡುಗಿಯನ್ನು ನೋಡಬೇಕೆನ್ನುವ ಹಿನ್ನೆಲೆಯಲ್ಲಿ ಜೊತೆಗೆ ಹುಡುಗಿಯಲ್ಲಿ ಏನಾದರೂ ಊನ ಇದೆಯಾ ಎಂದು ಪರೀಕ್ಷಿಸುವ ದ್ರಷ್ಟಿಯಲ್ಲಿ ಹುಡುಗಿಯ ಕೈಯಲ್ಲಿ ಕೊಡಪಾನ ಕೊಟ್ಟು ನೀರು ತರ ಹೇಳುವುದೂ ಇದೆ. ಹಾಗೆಯೇ ಮನೆ ನೋಡುವೆ ನೆಪದಲ್ಲಿ ಒಳ ಹೋಗಿ ಹುಡುಗಿಯನ್ನು ಮಾತಾಡಿಸುತ್ತಾರೆ.
ಹುಡುಗಿಯ ರೂಪ ಗುಣ ನಡತೆ ಒಪ್ಪಿಗೆಯಾದರೆ, ಸತ್ಕಾರ ಸ್ವೀಕರಿಸಿ ಹೊರಟು ಬರುವ ಹುಡುಗನ ಕಡೆಯವರು ಇನ್ನು ಜಾತಕ ಕೂಡಿ ಬಂದರೆ ಹೇಳಿ ಕಳುಹಿಸುತ್ತೇವೆಂದು ಹೇಳುವುದು ವಾಡಿಕೆ ಅಥವಾ ಉಭಯಸ್ಥರು ಪಕ್ಕದ ಜೋಯಿಸರಲ್ಲಿ ಹೋಗಿ ಹುಡುಗ- ಹುಡುಗಿಯ ಜಾತಕ ತೋರಿಸುವುದುಂಟು. ಜಾತಕ ಕೂಡಿ ಬಾರದೇ ಹೋದರೆ ನೆಂಟಸ್ಥಿಗೆಮುಂದುವರಿಯುವುದಿಲ್ಲ. ಹುಡುಗಿ ನೋಡುವ ಕ್ರಮದಲ್ಲಿ ಜಾತಕ ಇಲ್ಲದಿದ್ದರೆ ಇತ್ತಂಡಗಳು ದೇವಸ್ಥಾನದಲ್ಲಿ ಅರ್ಚಕರ ಮೂಲಕ ತುಂಬೆ ಹೂವಿನಲ್ಲಿ ಪುಷ್ಪ ಪರೀಕ್ಷೆ ನಡೆಸುತ್ತಾರೆ. ಹುಡುಗನ ಕಡೆಯವರಿಗೆ ಸಂಬಂಧ ಕೂಡಿ ಬಂದರೆ ಹುಡುಗಿ ಮನೆಯವರನ್ನು ಆಹ್ವಾನಿಸುತ್ತಾರೆ. ನಿಗದಿತ ದಿನ ಹುಡುಗನ ಮನೆಗೆ ಬರುವ ಹುಡುಗಿ ಕಡೆಯವರಿಗೆ ಸಮ್ಮಾನದೂಟ ಮಾಡಿಸಿ ಕಳುಹಿಸಿ ಕೊಡಲಾಗುತ್ತದೆ. ವೀಳ್ಯಶಾಸ್ತ್ರ ನಡೆಸುವ ದಿನವನ್ನು ಪರಸ್ಪರರು ಸಂವಾದಿಸಿ ಈ ದಿನ ನಿಗದಿಪಡಿಸುತ್ತಾರೆ.
No comments:
Post a Comment