Sunday, September 21, 2025

ಗೌಡ ಸಂಸ್ಕೃತಿ- ಮದುವೆ(ದಿಬ್ಬಣ ಹೊರಡುವುದು)

 ದಿಬ್ಬಣ ಹೊರಡುವುದು : ನಿಗದಿತ ಸಮಯಕ್ಕೆ ಸರಿಯಾಗಿ ಧಾರಾ ಚಪ್ಪರಕ್ಕೆ ಮದುಮಗನ ಕಡೆಯ ದಿಬ್ಬಣ ಹೊರಡುವುದು. ದಿಬ್ಬಣ ಹೊರಡುವ ಮೊದಲು ಹಸೆಮಣೆಯ ಎದುರು ಕಾಲುದೀಪ ಹಚ್ಚಿ ಮದುಮಗನನ್ನು ಹಸೆಚಾಪೆಯಲ್ಲಿ ಕುಳ್ಳರಿಸಿ ಹಾಲುತುಪ್ಪ ಶಾಸ್ತ್ರ ಮಾಡುವುದು. ನಂತರ ಕುಡಿಯಲು ಹಾಲು ಕೊಡಬೇಕು. ಹಾಲು ಕುಡಿದ ಲೋಟಕ್ಕೆ ಎಲೆ ಅಡಿಕೆ ಹಾಕುವರು. ಇದಾದ ನಂತರ ಸೋದರ ಮಾವ ಊರು ಗೌಡರೆ ಒಕ್ಕಣೆಯೊಂದಿಗೆ ಮುಸುಕಿನ ಬಟ್ಟೆಯ ಬಲದ ಬದಿಯ ತುದಿಗೆ ಪಾವಲಿಯನ್ನು ಕಟ್ಟಬೇಕು. ಊರುಗೌಡರು ಒಕ್ಕಣೆಯೊಂದಿಗೆ ವರರನ್ನು ಎಬ್ಬಿಸುವರು. ನಂತರ ಹಿರಿಯರ ಪಾದ ಮುಟ್ಟಿ ಆಶೀರ್ವಾದ ಪಡೆಯಬೇಕು. ಮನೆಯ ಯಜಮಾನ ವರರನ್ನು ಮೆಟ್ಟಿಲಿಳಿಸಿ ದೇವ ಸಭೆಯ ಮೇಲ್ಕಟ್ಟಿನಡಿಯಲ್ಲಿ ಊರುಗೌಡರಿಗೆ ಹಸ್ತಾಂತರಿಸುವರು. ಬಣ್ಣ ಬಂಗಾರದ ಸಹಿತವಾಗಿ ಮದುವೆ ಕಾರ್ಯವನ್ನು ಸಂಪೂರ್ಣ ಯಶಸ್ವಿಗೊಳಿಸಲು ಅಧಿಕಾರ ವಹಿಸಿ ಕೊಡುತ್ತಾರೆ. ವಾಲಗ ಗರ್ನಾಲುನೊಂದಿಗೆ ದಿಬ್ಬಣ ಹೊರಡುವುದು.

ದಿಬ್ಬಣ ಚಪ್ಪರಕ್ಕೆ ಬಂದು ತಲುಪಿದಾಗ ವಧುವಿನ ಮನೆಯವರು ವಾಲಗದೊಂದಿಗೆ ಸ್ವಾಗತಿಸುತ್ತಾರೆ. ದಿಬ್ಬಣ ಚಪ್ಪರದ ಮುಖ ತೋರಣಕ್ಕೆ ಬಂದಾಗ ಮುತ್ತೈದೆಯರು ಸೋಬಾನೆಯೊಂದಿಗೆ ಕುರ್ದಿ ಆರತಿ ಮಾಡಬೇಕು. ಕಾಲಿಗೆ ನೀರು ಎರೆದು ದೃಷ್ಟಿ ತೆಗೆಯಬೇಕು. (ಆರತಿ ಎತ್ತಿದ ಹರಿವಾಣಕ್ಕೂ ನೀರು ಎರೆದ ತಂಬಿಗೆಗೂ ಎಲೆ, ಅಡಿಕೆ, ಪಾವಲಿಯನ್ನು ಹಾಕಬೇಕು ಮದುಮಗಳ ದಿಬ್ಬಣವಾದರೆ ಮನೆ ಒಳಗೆ ಹಸೆ ಚಾಪೆಯಲ್ಲಿ ಕುಳ್ಳಿರಿಸಬೇಕು. ಮದುಮಗನದಾದರೆ ಚಪ್ಪರದ ಬದಿಯಲ್ಲಿ ಪ್ರತ್ಯೇಕ ಆಸನ ಇರಿಸಿ ಕುಳ್ಳಿರಿಸುವರು.) (ಮದುಮಗನ ಮನೆಯಲ್ಲಿ ಮದುವೆಯಾದರೆ ಮದುಮಗ ಹೊರಗೆ ಹೋಗಿ ಪ್ರತ್ಯೇಕ ಸ್ಥಳದಲ್ಲಿ ಕುಳಿತುಕೊಳ್ಳಬೇಕು.)

No comments:

Post a Comment