Saturday, October 26, 2024

ಗೌಡ ಸಂಸ್ಕೃತಿ-ಶವ ಸಂಸ್ಕಾರ

 ಮನುಷ್ಯನಿಗೆ ಹುಟ್ಟು ಮತ್ತು ಸಾವು ಇವೆರಡು ಜೀವನದ ಸಹಜ ಕ್ರಿಯೆಗಳೆಂದು ಹೇಳಬಹುದು. ಹುಟ್ಟಿನಿಂದ ಆರಂಭಿಸಿ ಬದುಕಿನುದ್ದಕ್ಕೂ ಆತ ಪಡುವ ಸುಖದಃಖಗಳ ಮಧ್ಯೆ ತನ್ನ ಬದುಕನ್ನು ಗಟ್ಟಿಗೊಳಿಸಿ ಒಬ್ಬ ವ್ಯಕ್ತಿಯಾಗಿ ಸಮಾಜದ ಮಧ್ಯೆ ಬೆಳೆಯುತ್ತಾನೆ. ಬಾಲ್ಯ, ವಿದ್ಯಾಭ್ಯಾಸ, ಯೌವನ, ಉದ್ಯೋಗ, ಮದುವೆ, ಮಕ್ಕಳು ಇವುಗಳ ಮಧ್ಯೆ ಬದುಕುತ್ತಾ ಕೊನೆಗೊಂದು ದಿನ ಮರಣ ಹೊಂದುತ್ತಾನೆ. ಬದುಕಿನ ಸಂಸ್ಕೃತಿಯಲ್ಲಿ ಮರಣದೊಂದಿಗೆ ವ್ಯಕ್ತಿ ಜಗತ್ತಿನ ಎಲ್ಲಾ ಸಂಬಂಧಗಳನ್ನು ಕಳೆದುಕೊಳ್ಳುತ್ತಾನೆ. ಮರಣದ ನಂತರದ ಸಂಸ್ಕಾರ, ಸೂತಕಗಳ ಬಗ್ಗೆ ನಡೆಸುವ ಕ್ರಿಯೆಗಳಿರುತ್ತವೆ. ವಿಭಿನ್ನ ಕಾಲ ಘಟ್ಟಗಳಲ್ಲಿ ಮರಣವಾಗುವ ವ್ಯಕ್ತಿಗಳಿಗೆ ಭಿನ್ನ ಭಿನ್ನ ಬಗೆಯ ಸಂಸ್ಕಾರ ಕ್ರಿಯೆಗಳಿರುತ್ತವೆ. ಬಾಲ್ಯ ಶವ ಸಂಸ್ಕಾರ, ಅವಿವಾಹಿತ ಶವ ಸಂಸ್ಕಾರ, ವಿವಾಹಿತ ಅಥವಾ ಆಯುಷ್ಯ ಮುಗಿದು ತೀರಿಕೊಂಡವರಿಗೆ ಸಂಬಂಧಿಸಿದ ಸಂಸ್ಕಾರ ಕ್ರಿಯೆಗಳನ್ನು ಇಲ್ಲಿ ಪ್ರತ್ಯೇಕವಾಗಿ ದಾಖಲಿಸಲಾಗಿದೆ. ಎಲ್ಲಾ ಸಂಸ್ಕಾರ ಕ್ರಿಯೆಗಳು ಊರಗೌಡರ ನೇತೃತ್ವದಲ್ಲಿ ನಡೆಯುವುದು

ಬಾಲ್ಯ ಶವ ಸಂಸ್ಕಾರ ಕ್ರಿಯೆ : ಅಪ್ರಾಪ್ತ ಮಕ್ಕಳು ಮೃತರಾದರೆ ಅವರಿಗೆ ಮಾಡುವ ಸಂಸ್ಕಾರದಲ್ಲಿ ಭಿನ್ನತೆ ಇರುತ್ತದೆ. ಶವವನ್ನು ದಫನ ಮಾಡುತ್ತಾರೆ ಸುಡುವುದಿಲ್ಲ. ಮೃತ ಮಗುವನ್ನು ಸ್ನಾನ ಮಾಡಿಸಿ ದಕ್ಷಿಣ ದಿಕ್ಕಿಗೆ ತಲೆ ಬರುವಂತೆ ಮಲಗಿಸುವುದು, ಸ್ನಾನ ಮಾಡಿಸಿದ ನಂತರ ಮಡಿಬಟ್ಟೆಯನ್ನು ತೊಡಿಸಿ ಬಿಳಿ ಬಟ್ಟೆಯನ್ನು ಹೊದಿಸಿ ಚಾಪೆ ಹಾಸಿ ಮಲಗಿಸಬೇಕು. ಗಂಧದ ತಿಲಕವಿಡಬೇಕು (ಬೊಟ್ಟು), ಹಾಲು ನೀರು ಮಿಶ್ರ ಮಾಡಿ ಸ್ವಲ್ಪ ಬೆಳ್ಳಿಗೆ ಅಕ್ಕಿ ಹಾಕಿ ಒಟ್ಟಿಗೆ ತುಳಸಿ ಕೊಡಿಯನ್ನು ಕಂಚಿನ ಬಟ್ಟಲಲ್ಲಿ ಇಡಬೇಕು. ದೀಪ ಹಚ್ಚಿ ಅಗರಬತ್ತಿ ಹಚ್ಚಿಡಬೇಕು. ನಂತರ ಪ್ರತಿಯೊಬ್ಬರ ಶವದ ಬಾಯಿಗೆ ನೀರು ಕೊಡಬೇಕು. ಈ ಎಲ್ಲಾ ಕ್ರಮ ಮುಗಿದ ನಂತರ ಮಗುವನ್ನು ದಫನ ಸ್ಥಳಕ್ಕೆ ಬಿಳಿ ಬಟ್ಟೆಯಲ್ಲಿ ಸುತ್ತಿ ಕೈಯಲ್ಲಿ ಎತ್ತಿಕೊಂಡು ಹೋಗಬೇಕು (ಚಟ್ಟ ಉಪಯೋಗಿಸುವಂತಿಲ್ಲ) ದಫನ ಮಾಡುವ ಸ್ಥಳದಲ್ಲಿ ಉತ್ತರ-ದಕ್ಷಿಣವಾಗಿ ಕನಿಷ್ಠ 5 ಅಡಿ ಆಳದ ಹೊಂಡ ಮಾಡಿರಬೇಕು. ಮಗುವಿನ ತಂದೆಯೂ, ಹತ್ತಿರದ ಸಂಬಂಧಿಕರು ಮಗುವನ್ನು ದಕ್ಷಿಣಕ್ಕೆ ತಲೆ ಬರುವಂತೆ ತೋಡಿದ ಹೊಂಡದಲ್ಲಿ ಮಲಗಿಸಬೇಕು. ನಂತರ ಸ್ವಲ್ಪ ಹಾಲು ಹೊಯ್ದು ಹೂ ಹಾಕಿ ಪ್ರತಿಯೊಬ್ಬರೂ 3 ಹಿಡಿಯಷ್ಟು ಮಣ್ಣನ್ನು ಶವದ ಮೇಲೆ ಹಾಕಬೇಕು. ಪೂರ್ತಿ ಮಣ್ಣು ಹಾಕಿ ಹೊಂಡ ಮುಚ್ಚಿ ನೆಲದಿಂದ ಎತ್ತರ ಬರುವಂತೆ ಮಣ್ಣು ಹಾಕಿ ದಫನ ಕಾರ ಮುಗಿಸಬೇಕು. ಇದರ ಮೇಲೆ 3 ಕಲ್ಲುಗಳನ್ನಿಡಬೇಕು. (ತಲೆ ಮಧ್ಯ ಕಾಲು ಭಾಗಕ್ಕೆ ಬರುವಂತೆ). ನಂತರ ಎಲ್ಲರೂ ಸ್ನಾನ ಮಾಡಬೇಕು. 3ನೇ ದಿನದಲ್ಲಿ ದೂಪೆ ಇದ್ದಲ್ಲಿಗೆ ಹೋಗಿ ಇಟ್ಟಂತಹ ಕಲ್ಲುಗಳನ್ನು ತೆಗೆದು ಹಾಲು ಹೊಯ್ದು, ಸುತ್ತು ಬಂದು, ಸರಳಿ ಸೊಪ್ಪಿನ ಕಣೆಯನ್ನು ಕುತ್ತಿ ಹಾಲು-ಅನ್ನವನ್ನು ಗೆರಟೆಯಲ್ಲಿಡಬೇಕು. ಒಂದು ಎಳನೀರು ಕೆತ್ತಿ ಇಡಬೇಕು. ನಂತರ ಸ್ನಾನ ಮಾಡಿ ಮನೆಗೆ ಬಂದ ಮೇಲೆ ದೇವಸ್ಥಾನದಿಂದ ತಂದ ಪುಣ್ಯಾರ್ಚನೆಯನ್ನು ಹಾಕಿ ಶುದ್ಧ ಮಾಡಿಕೊಳ್ಳಬೇಕು. 10 ದಿನದವರೆಗೆ ಸೂತಕ ಆಚರಣೆ ಮಾಡಬೇಕು. 11ನೇ ದಿನದಲ್ಲಿ ದೂಫೆ ಇದ್ದಲ್ಲಿಗೆ ಹೋಗಿ ನೆನೆಬತ್ತಿ ಹಾಗೂ ಅಗರಬತ್ತಿ ಹೊತ್ತಿಸಿ ಇಟ್ಟು ಹುರುಳಿ, ಬಾಳೆಕಾಯಿ, ಕುಂಬಳಕಾಯಿ ಪದಾರ್ಥ ಮಾಡಿ ಜೊತೆಗೆ ಅನ್ನ ಮತ್ತು ಅಕ್ಕಿ ಪಾಯಸ, ಸಿಹಿ ತಿಂಡಿಗಳು, ಹಾಲು, ಎಳನೀರು ಇಟ್ಟು ಬರಬೇಕು.

ಅವಿವಾಹಿತ ಶವಸಂಸ್ಕಾರ ಕ್ರಿಯೆ:ಅವಿವಾಹಿತರಾಗಿದ್ದು ಮೃತರಾದರೆ ಶವ ಸಂಸ್ಕಾರದ ಎಲ್ಲಾ ಸಂಪ್ರದಾಯಗಳನ್ನು ಮಾಡುವುದು. (ಆದರೆ ಕಾಟದ ಅಡಿಯಲ್ಲಿ ಚಿಕ್ಕ ಹೊಂಡವನ್ನು ಮಾಡಿಕೊಳ್ಳಬೇಕು).

ಮರಣಕ್ಕೆ ನಡೆಸುವ ಸಂಸ್ಕಾರ ಕ್ರಿಯೆಗಳು:
ಸಹಜವಾಗಿ ವ್ಯಕ್ತಿ ಮರಣವಾದಾಗ ಕುಟುಂಬದ ಸದಸ್ಯರಿಗೆ, ಮೃತನ ಆಪ್ತರಿಗೆ ಮತ್ತು ಊರಿನ ಪ್ರಮುಖರಿಗೆ ಸುದ್ದಿ ತಿಳಿಸಬೇಕು. (ಆಕಾಶಕ್ಕೆ 2 ಗುಂಡುಗಳನ್ನು ಹಾರಿಸುವುದರ ಮೂಲಕ ಕೂಡಾ ನೆರೆ-ಕರೆಯವರಿಗೆ ಸತ್ತ ಸೂಚನೆಯನ್ನು ನೀಡುವುದುಂಟು.) ಮರಣವಾದಾಗ ಚಾಪೆಯ ಮೇಲೆ ಶವವನ್ನು ದಕ್ಷಿಣಕ್ಕೆ ತಲೆ ಇರುವಂತೆ ಮಲಗಿಸಿ ಬಿಳಿ ಬಟ್ಟೆಯನ್ನು ಹೊದಿಸಬೇಕು. ಕಂಚಿನ ಬಟ್ಟಲಲ್ಲಿ ಬೆಳ್ತಿಗೆ ಅಕ್ಕಿ, ತುಳಸಿಯ ತುದಿ, ನೀರನ್ನು ಹಾಕಿಡಬೇಕು. ಶವದ ಎಡಭಾಗದಲ್ಲಿ ತಲೆಯಪಕ್ಕ ಕಾಲುದೀಪ ಹಚ್ಚಿಡಬೇಕು. ಶವದ ಬಾಯಿಗೆ ಕಂಚಿನ ಬಟ್ಟಲಲ್ಲಿದ್ದ ತುಳಸಿ ತುದಿಯಿಂದ ನೀರು ಬಿಡಬೇಕು. ಒಂದು ಮಣ್ಣಿನ ಮಡಕೆಯಲ್ಲಿ ಕೆಂಡಹಾಕಿ ಒಡೆದ ಕೊಬ್ಬರಿ ಹಾಗೂ ಗಂಧಧೂಪ ಹಾಕಿ ಹೊಗೆಬರುವಂತೆ ಮಾಡಬೇಕು. ಮನೆಯವರು ತೆಂಗಿನಕಾಯಿ ಒಡೆದು ತಲೆಯ ಹತ್ತಿರ ಹಾಗೂ ಕಾಲಿನ ಹತ್ತಿರ ಇಟ್ಟು ಅದಕ್ಕೆ ಎಣ್ಣೆ ಹಾಕಿ ನೆನೆಬತ್ತಿ ಹಚ್ಚಿಡಬೇಕು. ಪೂರ್ವಪದ್ಧತಿ ಪ್ರಕಾರ ಮಾಡು (ಛಾವಣಿ) ತೂತು ಮಾಡಿ ಒಂದು ದೊಣ್ಣೆಯನ್ನು ಆ ತೂತಿನಲ್ಲಿ ದಾಟಿಸುವುದು ಕ್ರಮ. [ಈ ತೂತಿನ ಮೂಲಕ ಸತ್ತವನ ಆತ್ಮ ಆಕಾಶ ಮಾರ್ಗವಾಗಿ ಹೋಗುವುದೆನ್ನುವ ನಂಬಿಕೆ]. ಹತ್ತಿರದ ಬಂಧುಗಳು ಹಣೆಗೆ ನಾಣ್ಯ (ಪಾವಲಿ) ವನ್ನಿಟ್ಟು ತುಳಸಿ ತುದಿಯಿಂದ ಬಲಗೈ ಸೇರಿಸಿ, ಎಡಗೈಯಲ್ಲಿ ಸ್ವರ್ಗಕ್ಕೆ ಹೋಗು ಎಂದು 3 ಸಲ ನೀರು ಬಿಡುವರು. ತೀರಿಕೊಂಡವರು ಹಿರಿಯರಾದರೆ ಕಾಲುಮುಟ್ಟಿ ನಮಸ್ಕರಿಸುವರು, ಕಿರಿಯರಾದರೆ ತಲೆಮುಟ್ಟಿ ನಮಸ್ಕರಿಸುವುದು ಪೂರ್ವಪದ್ಧತಿ. ನೀರು ಕೊಟ್ಟ ಮೇಲೆ ಅಪ್ರದಕ್ಷಿಣೆಯಾಗಿ ಸುತ್ತು ಬರುವರು. (ಹಣೆಗೆ ನಾಣ್ಯ ಇಡುವುದು, ಹೆಣಕ್ಕೆ ಬಟ್ಟೆ ಹಾಕುವುದು ಸತ್ತವನ ಋಣಮುಕ್ತನಾಗುವ ಉದ್ದೇಶದಿಂದ ಎಂಬ ನಂಬಿಕೆಯಿದೆ). ಕುಟುಂಬಸ್ಥರು ಹಾಗೂ ಹತ್ತಿರದ ಸಂಬಂಧಿಕರು ಬಂದ ಮೇಲೆ ಹೆಣವನ್ನು ಸ್ನಾನ ಮಾಡಿಸಲು ತಯಾರಿ ನಡೆಸುವರು. ಮನೆ ಒಳಗೆ ಮಣ್ಣಿನ ಮಡಕೆಯಲ್ಲಿ ಸ್ನಾನಕ್ಕೆ ಬೇಕಾದಷ್ಟು ನೀರನ್ನು ಉಗುರು ಬಿಸಿಯಾಗುವಂತೆ ಕಾಯಿಸುವರು. ಸ್ನಾನ ಮಾಡುವ ಜಾಗವನ್ನು ಗುರುತಿಸಿ ಹಲಗೆಯನ್ನು ಉತ್ತರ-ದಕ್ಷಿಣವಾಗಿ ಇಡುವರು. ಒಂದು ಗೆರಟೆಯಲ್ಲಿ ಎಣ್ಣೆ ಅರಿಶಿನದ ಮಿಶ್ರಣದೊಂದಿಗೆ ತುದಿ ಗರಿಕೆ, ನೀರು ಹಾಕುವುದಕ್ಕೆ ತೂತು ಇದ್ದ ಗೆರಟೆ, ಸೀಗೆ, ಬಾಗೆಗಳನ್ನು ಜೋಡಿಸಿಡಬೇಕು. ಕುಟುಂಬಸ್ಥರು ಹೆಣವನ್ನು ಕೈಯಲ್ಲಿ ಎತ್ತಿಕೊಂಡು ಕಾಲು ಮುಂದಾಗಿ ಹೊರಬರುವಂತೆ ಸ್ನಾನ ಮಾಡಿಸುವ ಜಾಗಕ್ಕೆ ತರುತ್ತಾರೆ. ದಕ್ಷಿಣಕ್ಕೆ ತಲೆ ಬರುವಂತೆ ಹಲಗೆಯಲ್ಲಿ ಹೆಣವನ್ನು ಮಲಗಿಸುವರು. ಪುರುಷರಾದರೆ ಕ್ಷೌರ ತೆಗೆಯುವ ಕ್ರಮವಿದೆ

ಸ್ನಾನ ಮಾಡಿಸುವ ಕ್ರಮ ಹಾಗೂ ಶವಶೃಂಗಾರ
ಸತ್ತ ವ್ಯಕ್ತಿಯನ್ನು ಸ್ನಾನ ಮಾಡಿಸುವಾಗ ಮೊದಲು ಹಿರಿಯರು ನಂತರ ಉಳಿದವರು ಸ್ನಾನ ಮಾಡಿಸುತ್ತಾರೆ. ಸ್ನಾನ ಮಾಡಿಸುವುದಕ್ಕೂ ಒಂದು ಕ್ರಮವಿದೆ ಅಪ್ರದಕ್ಷಿಣೆ ನೀರು ಹಾಕಿ ಎಡಗೈಯಲ್ಲಿ ಸ್ನಾನ ಮಾಡಿಸಬೇಕು. ಸ್ನಾನ ಮಾಡಿಸಿ ಮುಗಿದ ನಂತರ ಅವನು ಉಟ್ಟುಕೊಂಡಿರುವ ಬಟ್ಟೆ ಹಾಗೂ ಉಡಿದಾರವನ್ನು ಅಲ್ಲೇ ಬಿಚ್ಚಿಡಬೇಕು. ನಂತರ ಮೈ ಒರೆಸಿ ಶುದ್ಧ ವಸ್ತ್ರಗಳನ್ನು ತೊಡಿಸಿ ತಲೆಗೆ ಮುಂಡಾಸು ಕಟ್ಟಿ ಶಾಲು ಹಾಕಿ, ಗಂಧದ ತಿಲಕವನ್ನಿಡಬೇಕು. (ಮದುಮಗನಿಗೆ ಯಾವ ರೀತಿ ಸಿಂಗಾರ ಮಾಡುತ್ತಾರೋ ಅದೇ ರೀತಿ.) ಆದರೆ ಅಂಗಿಯನ್ನು ತಿರುಗಿಸಿ ಹಾಕಬೇಕು. ಮುತ್ತೈದೆ ಹೆಂಗಸರು ತೀರಿ ಹೋದರೆ ಸ್ನಾನ ಮಾಡಿಸಿದ ನಂತರ ಧಾರೆ ಸೀರೆ ಉಡಿಸಿ ಹೂ-ಹಿಂಗಾರ ಇಟ್ಟು ಕುಂಕುಮ ಇಟ್ಟು ಮದುಮಗಳಿಗೆ ಯಾವ ರೀತಿ ಸಿಂಗಾರ ಮಾಡುತ್ತಾರೋ ಅದೇ ರೀತಿ ಸಿಂಗರಿಸುವರು. ವಿಧವೆಯಾಗಿದ್ದರೆ ಬಿಳಿ ಸೀರೆ ಉಡಿಸಿ ಹಣೆಗೆ ಗಂಧ ಹಚ್ಚುವರು. ಉಳಿದಂತೆ ಮೇಲಿನ ಕ್ರಮದ ಹಾಗೆ ಸ್ನಾನ ಮಾಡಿಸಿದ ನಂತರ ಮಡಿಕೆಯನ್ನು ಮಗುಚಿ ಹಾಕಿ ಬರಬೇಕು.(ಸ್ನಾನ ಮಾಡಿಸಿದ ಜಾಗವನ್ನು ನಂತರ ಯಾರೂ ದಾಟಬಾರದು). ಮನೆ ಒಳಗೆ ಚೌಕಿ (ಪಡಸಾಲೆ) ಯಲ್ಲಿ ಚಾಪೆ ಹಾಸಿ ಶವವನ್ನುುತ್ತರ ದಕ್ಷಿಣವಾಗಿ ಮಲಗಿಸುವರು. ಬಿಳಿ ಬಟ್ಟೆ ಹಾಕಿದ ನಂತರ ಗಂಡ ತೀರಿಕೊಂಡರೆ ಹೆಂಡತಿಯ ಧಾರೆ ಸೀರೆಯ ಅರ್ಧ ಭಾಗವನ್ನು ಮೊದಲು ಶವಕ್ಕೆ ಹೊದಿಸಬೇಕು. ನಂತರ 3 ಮೀಟರ್ ಉದ್ದದ ಬಿಳಿ ಬಟ್ಟೆಯನ್ನು ಶವದ ಮೇಲೆ ಹಾಕಬೇಕು. (ಈ ಬಟ್ಟೆ ಅಕ್ಕಿ ಭತ್ತ ಕಟ್ಟಲು ಉಪಯೋಗಿಸಬೇಕು). ಆ ನಂತರ ಬಂಧುಗಳು ತಂದಿರುವ ಬಿಳಿ ಬಟ್ಟೆಗಳನ್ನು ಶವದ ಮೇಲೆ ಹಾಕಬೇಕು.

ಕಾಟದ ತಯಾರಿ :
ಗೊತ್ತುಪಡಿಸಿದ ಜಾಗವನ್ನು ಸಮತಟ್ಟು ಮಾಡಿ ಸೌದೆಯನ್ನು ಜೋಡಿಸಿಡುವರು. ಮೂಲದವರಿಗೆ ಹೇಳಿಕೆಕೊಟ್ಟ ಪ್ರಕಾರ ಕಾಟ ಸಿದ್ದಪಡಿಸುವರು, ಸೌದೆಯ ಗಾತ್ರ, ಹೆಣದ ಅಳತೆಗಿಂತ 2 ಅಡಿಯಷ್ಟು ಉದ್ದವಿರಬೇಕು. ಪೂರ್ವ ಪಶ್ಚಿಮವಾಗಿ ದಪ್ಪದ ಎರಡು ಮರದ ದಂಡುಗಳನ್ನು (ಅಡಿಮರ) ಕೆಳಗಡೆ ಹಾಕಿ ಮೇಲೆ ಉತ್ತರ ದಕ್ಷಿಣವಾಗಿ ಸೌದೆ ಇರಿಸುವರು. (ಕಾಟಕ್ಕೆ ಸೌದೆ ಒಟ್ಟುವಾಗ - 2ಮಂದಿ ಸೌದೆಹಿಡಿದು ಒಟ್ಟತಕ್ಕದ್ದು)

ಚಟ್ಟದ ತಯಾರಿ :
ನೆರೆಹೊರೆಯವರು ಬಿದಿರು ಜೋಡಣೆಯಿಂದ ಚಟ್ಟ ತಯಾರು ಮಾಡುತ್ತಾರೆ. 2 ಬಿದಿರು (ಅಂದಾಜು 10 ಅಡಿ ಉದ್ದವಿರಬೇಕು)ಗಳನ್ನು ಸಮಾನಾಂತರವಾಗಿಟ್ಟು ತಟ್ಟೆಗಳನ್ನು (ಭಾಗ ಮಾಡಿದ ಬಿದಿರು) ಕತ್ತರಿ ಆಕಾರದಲ್ಲಿಟ್ಟು ಒಂದು ತುದಿ ಕೆಳಗಿನಿಂದ ಒಂದು ತುದಿ ಮೇಲಿನಿಂದ ಕಟ್ಟಬೇಕು. ಚಾಳೆ ಪಾಂದಾಳ ಕೊತ್ತಳಿಗೆಯ ಮೇಲಾಗಿದ ಬಳ್ಳಿ ಅಥವಾ ನಾರಣೆ ಬಳ್ಳಿಯಲ್ಲಿ ಕಟ್ಟುವರು.) ಚಟ್ಟ ಕಟ್ಟಿ ಆದ ಮೇಲೆ ಮನೆ ಎದುರುಗಡೆ ಮೆಟ್ಟಿಲ ಹತ್ತಿರ ಉತ್ತರ ದಕ್ಷಿಣವಾಗಿ ಇಡುವರು.

ಸೂಕರ - ತೆಂಗಿನ ಕೊತ್ತಳಿಗೆ ಅಥವಾ ಬಿದಿರನ್ನು ಭಾಗ ಮಾಡಿ ಅದರಲ್ಲಿ ಮಣ್ಣಿನ ಮಡಿಕೆಯನ್ನಿಟ್ಟು ಕಟ್ಟುವುದು

ಶವ ತೆಗೆಯುವ ಕ್ರಮ :
ಶವ ತೆಗೆಯುವ ಮೊದಲು ತೆಂಗಿನ ಗರಿಯ ಕಡ್ಡಿಗೆ 5 ವೀಳ್ಯದೆಲೆಯನ್ನು (ಪಂಚೋಲಿ ) ಪೋಣಿಸಿ ಶವದ ಎದೆ ಮೇಲೆ (ಬಟ್ಟೆ ಒಳಗಡೆ) ಇಡುವರು. (ಪೂರ್ವ ಪದ್ಧತಿ ಪ್ರಕಾರ ಪುರುಷರಿಗೆ ಸಾಂಕೇತಿಕವಾಗಿ ಹಾಲೆ ಮರದ ನೇಗಿಲ ಆಕೃತಿಯನ್ನು ಕುತ್ತಿಗೆಗೆ ನೇತು ಹಾಕುವರು). ಶವ ನೋಡಲು ಬಂದ ಜನರು ಶವದ ಮೇಲೆ ಬಟ್ಟೆ ಹೊದಿಸಿ ಬಾಯಿಗೆ ನೀರು ಕೊಡುವರು. ಕರ್ಮಕ್ಕೆ ನಿಂತವನು ಮೊದಲು 3 ಮೀಟರ್ ಉದ್ದದ ಬಟ್ಟೆಯಲ್ಲಿ ತಲೆ ಭಾಗಕ್ಕೆ 5 ಕುಡ್ತೆ ಅಕ್ಕಿಯನ್ನು ಕಾಲಿನ ಭಾಗಕ್ಕೆ 5 ಕುಡ್ತೆ  ಭತ್ತವನ್ನು ಹಾಕಬೇಕು. ನಂತರ ಸುಲಿದ ತೆಂಗಿನ ಕಾಯಿಯನ್ನು ಎಡ ಕೈಯಲ್ಲಿ ಹಿಡಿದು ಅಡಿಕೆ ಮತ್ತು ವೀಳ್ಯದೆಲೆಯನ್ನು  ಮೆಟ್ಟಿಲಲ್ಲಿ ಇಟ್ಟು ಗುದ್ದಿ ಪುಡಿ (ಹುಡಿ ಸಣ್ಣದಾಗಿ) ಮಾಡಬೇಕು. ಆದಾದ ನಂತರ ತೆಂಗಿನ ಕಾಯಿಯನ್ನು ಮೆಟ್ಟಲಿಗೆ ಎಡಗೈಯಲ್ಲಿ ಗುದ್ದಿ 2 ಭಾಗ ಮಾಡಬೇಕು. (ಎಲೆ ಅಡಿಕೆ ಹುಡಿಯನ್ನು ಪ್ರತ್ಯೇಕ ವೀಳ್ಯದ ಎಲೆಯಲ್ಲಿ ಸುತ್ತಿಟ್ಟುಕೊಳ್ಳಬೇಕು.) ಒಡೆದ ತೆಂಗಿನಕಾಯಿಯ ಗಂಡು ಗಡಿಯನ್ನು ಭತ್ತದ ಮೇಲೆ ಹೆಣ್ಣು ಗಡಿಯನ್ನು ಅಕ್ಕಿ ಮೇಲೆ ಇಡಬೇಕು. ಅದರಲ್ಲಿ ಎಣ್ಣೆ ಹಾಕಿ ಬತ್ತಿಯನ್ನು ಹಚ್ಚಿಡಬೇಕು. ಹಿರಿಯರು ಎಡಕೈಯಿಂದ ತಲೆಭಾಗ ಮಟ್ಟಿ ಹಾಗೂ ಕಿರಿಯರು ಎಡಗೈಯಿಂದ ಕಾಲಿನ ಭಾಗವನ್ನು ಮುಟ್ಟಿ ನಮಸ್ಕರಿಸುತ್ತಾ ನಾರಾಯಣ...... ನಾರಾಯಣ ನಾರಾಯಣ ಎಂದು ಹೇಳುತ್ತಾ ಅಪ್ರದಕ್ಷಿಣೆಯಾಗಿ ಸುತ್ತು ಬರುವರು. ಅಕ್ಕಿ ಮೇಲೆ ಇದ್ದ ತೆಂಗಿನ ಗಡಿಯಲ್ಲಿರುವ ನೆನೆ ಬತ್ತಿಯನ್ನು ನಂದಿಸಿ ಗಂಧದ ದೂಪದ ಮಡಿಕೆಗೆ ಹಾಕಬೇಕು. ಆ ತೆಂಗಿನ ಕಾಯಿ ಗಡಿಯನ್ನು ಪೂರ್ವ ಬಾಗಿಲಿನ ಮಾಡಿನ ಸೆರೆಯಲ್ಲಿಡಬೇಕು. (ಈಗ ತಾರಸಿ ಮನೆಗಳಿರುವ ಕಾರಣ ಅನುಕೂಲವಾದ ಜಾಗದಲ್ಲಿ ಜಾಗ್ರತೆಯಾಗಿ ತೆಗೆದಿಡುವುದು ಸೂಕ್ತ) ನಂತರ ಕರ್ಮಕ್ಕೆ ನಿಂತವನು ಮೊಣಕಾಲೂರಿ ಅಕ್ಕಿ ಮತ್ತು ಭತ್ತವನ್ನು ಪ್ರತ್ಯೇಕ ಪ್ರತ್ಯೇಕವಾಗಿ ಕಟ್ಟಬೇಕು. ಚಾಪೆ ಸಮೇತ ಶವವನ್ನು ಎತ್ತಿ ಹೊರಗೆ ತಂದು (ಕಾಲು ಮೊದಲು ಹೊರಗೆ ಬರುವಂತೆ) ಚಟ್ಟದ ಮೇಲೆ ತಲೆ ದಕ್ಷಿಣ ಭಾಗಕ್ಕೆ ಬರುವಂತೆ ಮಲಗಿಸಬೇಕು. ಒಳಗಡೆ ಹೆಣ ಮಲಗಿಸಿದ್ದಲ್ಲಿ ಹಾಲೆ ಮರ ತೊಗಟೆ (ಕೆತ್ತೆಯಿಂದ) ಸೆಗಣಿ ಹಾಕಿ ಸಾರಿಸಬೇಕು. (ಸೊಸೆ ಅಥವಾ ಯಾರಾದರೂ ಹತ್ತಿರದ ಸಂಬಂಧಿಗಳು). ಹೊದಿಸಿದ ಬಟ್ಟೆಯನ್ನು ಹರಿದು ಕಾಲಿನ ಹಾಗೂ ಕೈ ಹೆಬ್ಬೆರಳಗಳನ್ನು ಜೋಡಿಸಿ ಕಟ್ಟಬೇಕು. ಆಮೇಲೆ ಶವವನ್ನು ಚಟ್ಟದಲ್ಲಿ ಭದ್ರವಾಗಿ ಕಟ್ಟುವರು. ಒಳಗೆ ಇದ್ದ ಗಂಧ ದೂಪದ ಬೆಂಕಿಯನ್ನು ಅಂಗಳದಲ್ಲಿಟ್ಟ ಸೂಕರದಲ್ಲಿ ಹಾಕುವರು. ಆ ನಂತರ ಕಾಲಿನ ಕಡೆಯಿಂದ ಕುಟುಂಬಸ್ಥರು ತಲೆ ಕಡೆಯಿಂದ ಊರವರು ಚಟ್ಟ ಎತ್ತಿ ನಾರಾಯಣ. ನಾರಾಯಣ ನಾರಾಯಣ ಹೇಳುತ್ತಾ ಹೋಗುವರು. [ಹೋಗುವಾಗ ಸೂಕರವನ್ನು ಊರವರು ಮುಂದೆ ಹಿಡಿದು ಹೋಗುವರು]. ಅಲ್ಲದೇ ಬಾಯಿಗೆ ನೀರು ಕೊಟ್ಟ ಕಂಚಿನ ಬಟ್ಟಲು, 5 ವೀಳ್ಯದೆಲೆ, 1 ಅಡಿಕೆ, ಗುದ್ದಿ ಹುಡಿ ಮಾಡಿದ ಎಲೆ ಅಡಿಕೆ, ಒಂದು ಎಳನೀರು, ಒಂದು ಬಟ್ಟಲಲ್ಲಿ ಗಂಜಿನೀರು, ಹೆಣಕ್ಕೆ ಹಾಕಿದ ನಾಣ್ಯ, ಒಣಗಿದ ಗೋಟು ಕಾಯಿ ಇತ್ಯಾದಿಗಳನ್ನು ಕೂಡ ಕೊಂಡೊಯ್ಯಬೇಕು. ಅರ್ಧ ದಾರಿಗೆ ಬಂದಾಗ ಚಟ್ಟ ಕೆಳಗಿಳಿಸಿ ತಂದ 5 ವೀಳ್ಯದೆಲೆ 1 ಅಡಿಕೆಯನ್ನು ಕರ್ಮಕ್ಕೆ ನಿಂತವನು ಮೊಣಕಾಲೂರಿ ಒಂದು ಕಲ್ಲಿನ ಅಡಿಗೆ ಇಡಬೇಕು. (ಕ್ರಮ : ಹೋಗುವ ದಾರಿಗೆ ವಿಮುಖವಾಗಿ ಮಂಡಿಯೂರಿ ಕುಳಿತು ಹಿಂಬಾಗದಲ್ಲಿರುವ ಕಲ್ಲಿನಡಿಗೆ ಕೈಯನ್ನು ಬೆನ್ನಹಿಂದೆ ತಂದು ಇಡಬೇಕು) ಅಲ್ಲಿಂದ ನಂತರ ಚಟ್ಟವನ್ನು ತಿರುಗಿಸಿ ತಲೆ ಮುಂದಾಗಿಕೊಂಡು ಹೋಗುವರು. (ತಲೆಮುಂದಾಗಿ ಕೊಂಡು ಹೋಗುವ ಉದ್ದೇಶ ದೇಹಕ್ಕೆ ಮತ್ತೆ ಜೀವ ಬರುವ ಸಂಭವವಿರುತ್ತದೆನ್ನುವ
ಹಿಂದಿನವರ ನಂಬಿಕೆಗಾಗಿ ಈ ಕ್ರಮವನ್ನು ಅನುಸರಿಸುತ್ತಾರೆ. ಆದರೆ ಕೆಲ ಭಾಗಗಳಲ್ಲಿ ಈ
ಕ್ರಮವಿರುವುದಿಲ್ಲ) ಸೂಕರ ಸಮೇತವಾಗಿ ಕಾಟಕ್ಕೆ 3 ಸುತ್ತು ಅಪ್ರದಕ್ಷಿಣೆಯಾಗಿ ಬಂದು
ಚಟ್ಟವನ್ನು ಕೆಳಗಿಡಬೇಕು. ಹಲಸಿನ ಸೊಪ್ಪು, ಮಾವಿನ ಸೊಪ್ಪು, ಇಡಿ ಬೂದಿ ಬಾಳೆಲೆಯನ್ನು
ದಂಡು ಸಮೇತ ಕಾಟದ ಮೇಲಿಡಬೇಕು. ಬಾಳೆಲೆ ಕೆಳಮುಖವಾಗಿದ್ದು ಎಲೆಯ ತುದಿ ಭಾಗ ತಲೆಯ ಕಡೆಗಿರಬೇಕು. (ಊರುಗೌಡರು ಮಾವಿನಸೊಪ್ಪಿನಿಂದ ಎಳನೀರನ್ನು ಕಾಟದ
ಮೇಲೆ ಚಿಮುಕಿಸಿ ಶುದ್ಧ ಮಾಡಿದ ನಂತರ ಶವ ಇಡಬೇಕು). ಚಟ್ಟದಲ್ಲಿ ಚಾಪೆಯನ್ನು
ಉಳಿಸಿ ಶವವನ್ನು ದಕ್ಷಿಣಕ್ಕೆ ತಲೆ ಮಾಡಿ ಕಾಟದ ಮೇಲೆ ಮಲಗಿಸಬೇಕು. ಶವ ತಂದ
ಚಾಪೆ ಮತ್ತು ಚಟ್ಟವನ್ನು ತುಂಡು ಮಾಡಿ ಎಸೆಯಬೇಕು. ಮನೆಯವರು ಕೊನೆಯದಾಗಿ
ಶವದ ಬಾಯಿಗೆ ತುಳಸಿ ನೀರು ಬಿಡುವರು. (ಇಲ್ಲಿ ನೀರು ಕೊಡುವ ಬಟ್ಟಲಿಗೆ ಸ್ವಲ್ಪ
ಎಳನೀರು ಹಾಕಬೇಕು. ತಡವಾಗಿ ಬಂದವರಿಗೆ ಶವದ ಬಾಯಿಗೆ ನೀರು ಕೊಡಲು ಅವಕಾಶ
ಕೊಡಬೇಕು). ನಂತರ ಮನೆಯವರು ಗಂಜಿ ತೆಳಿಯನ್ನು ಕೊಡಬೇಕು. ಎಳ ನೀರಿನಿಂದ
ಮುಖ ತೊಳೆದು ಗುದ್ದಿ ತಂದ ತಾಂಬೂಲವನ್ನು (ಮನೆಯ ಹೆಂಗಸರು) ಬಾಯಿಗಿಡುವರು.

Monday, October 14, 2024

ಗೌಡ ಸಂಸ್ಕೃತಿ-ಬಯಕೆ ಮದುವೆ (ಸೀಮಂತ)

 ಕನ್ಯ ಗರ್ಭವತಿಯಾದಾಗ ವರನ ಮನೆಯವರು ಹೆಣ್ಣಿನ ಮನೆಗೆ ಸಮಾಚಾರ ಮುಟ್ಟಿಸುತ್ತಾರೆ. ಮಗಳು ಗರ್ಭವತಿಯಾದ ವಿಚಾರವನ್ನು ತಿಳಿದ ತವರು ಮನೆಯವರು ಮಗಳನ್ನು ಏಳನೇ ತಿಂಗಳಲ್ಲಿ ಬಂದು ಕರೆದುಕೊಂಡು ಹೋಗುವರು. ದೇವರ ದೀಪ ಹಚ್ಚಿ ಹಿರಿಯರ ಆಶೀರ್ವಾದ ಪಡೆದು ಹೊರಡುವ ಪದ್ಧತಿ. ನಂತರ ತವರು ಮನೆಯಲ್ಲಿ ಬಯಕೆ ಮದುವೆ ಮಾಡುವ ಕ್ರಮವಿದೆ. ನಿಶ್ಚಿತ ಶುಭದಿನದಂದು ಬಯಕೆ ಮದುವೆಯನ್ನು ಮಾಡುವರು. ಚೊಚ್ಚಲ ಹೆರಿಗೆಯಲ್ಲಿ ಗರ್ಭಿಣಿಗೆ ಬಹಳಷ್ಟು ಬಯಕೆಗಳಿರುತ್ತವೆ. ಬಯಕೆ ಮದುವೆ ಮಾಡುವ ಸಮಯಕ್ಕೆ ಮುಂಚೆ ಕದಳಿ ಬಾಳೆಹಣ್ಣು, ಹೊದಳು, ಅವಲಕ್ಕಿ, ಬೆಲ್ಲ, ತೆಂಗಿನಕಾಯಿ, ಬಾಳೆಎಲೆ, ಎಲೆಅಡಿಕೆ. ಏಳನೇ ತಿಂಗಳಾದರೆ ಏಳು ಬಗೆಯ ಸಿಹಿತಿಂಡಿ ಹಾಗೇನೆ ಏಳು ಬಗೆಯ ಹೂಗಳನ್ನು ಶೇಖರಿಸಿಡಬೇಕು. ನೆರೆಹೊರೆಯವರನ್ನು, ನೆಂಟರಿಷ್ಟರನ್ನು ಹಾಗೂ ಗಂಡ ಮತ್ತು ಅವನ ಮನೆಯವರನ್ನು ಆಹ್ವಾನಿಸಬೇಕು. ಪತಿಯ ಮನೆಯಿಂದ ಬರುವಾಗ ಹೊಸ ಹಸಿರು ಸೀರೆ, ರವಿಕೆ, ಹಸಿರು ಬಲೆ, ಆಭರಣ, ಹೂ, ಹಿಂಗಾರ ಸಿಹಿತಿಂಡಿಗಳನ್ನು ತರುವರು.

ಗಂಡಿನ ಕಡೆಯಿಂದ ತಂದ ವಸ್ತಾಭರಣಗಳಿಂದ ಗರ್ಭಿಣಿಯನ್ನು ಶೃಂಗರಿಸುತ್ತಾರೆ. ನಂತರ ಗರ್ಭಿಣಿಯನ್ನು ಮತ್ತು ಅವರ ಪತಿಯನ್ನು ತುಳಸಿಕಟ್ಟೆಯ ಹತ್ತಿರ ಕರೆದುಕೊಂಡು ಹೋಗಿ ಗರ್ಭಿಣಿಯ ತಂದೆ ತಾಯಿ ಅವಳ ಕೈಯಲ್ಲಿ 5 ವೀಳ್ಯದೆಲೆ, 1 ಅಡಿಕೆ ಕೊಟ್ಟು ಕುಲದೇವರ ಹೆಸರು ಹೇಳಿ 5 ಸಲ ಭೂಮಿಗೆ ನೀರು ಬಿಡುವರು. (ಪಂಚಭೂತಗಳಿಗೆ ಅರ್ಪಣೆಮಾಡುವ ಕ್ರಮ) ಇಲ್ಲಿ ಕೋಳಿ(ಹೆಂಟೆ ಲಾಕಿ) ಮರಿಯನ್ನು ಗರ್ಭಿಣಿಯ ತಂದೆ ಅಥವಾ ಹಿರಿಯರು ಕೈಯಲ್ಲಿ ಹಿಡಿದು ಗರ್ಭಿಣಿಯ ತಲೆಸುತ್ತ ತಂದು ಬೆಳ್ಳಿಗೆ ಅಕ್ಕಿಯನ್ನು ಅದಕ್ಕೆ ತಿನ್ನಿಸಿ ನೀರು ಕುಡಿಸಿ ಬಿಟ್ಟುಬಿಡುವರು. ಒಳಗೆ ಬಂದು ನಡುಮನೆಯಲ್ಲಿ (ಕನ್ನಿಕಂಬದ ಹತ್ತಿರ) ಜಾಜಿ ಹಾಸಿ ಗರ್ಭಿಣಿಯನ್ನು ಮತ್ತು ಅವಳ ಪತಿಯನ್ನು ಹತ್ತಿರ ಕುಳ್ಳಿರಿಸುವರು. ಕಾಲುದೀಪ ಹಚ್ಚಿಡಬೇಕು. ಗಂಧ, ಅರಸಿನ, ಕುಂಕುಮ ಒಂದು ಮಣೆಯ ಮೇಲಿಡಬೇಕು. ಹರಿವಾಣದಲ್ಲಿ ಅಕ್ಕಿ ಹಾಗೂ ತಂಬಿಗೆ ನೀರು ಇಟ್ಟಿರಬೇಕು. ಮುತ್ತೈದೆಯರು ಗರ್ಭಿಣಿಗೆ ಉಡಿ ಅಕ್ಕಿ ತುಂಬಿಸುವರು. (ಒಂದು ಸೇರು ಬೆಳ್ತಿಗೆ ಅಕ್ಕಿ, 1 ತೆಂಗಿನಕಾಯಿ, 5 ವೀಳ್ಯದೆಲೆ, 1 ಅಡಿಕೆ, 1 ಅಚ್ಚುಬೆಲ್ಲ) ಇವೆಲ್ಲವನ್ನು ಮೊರದಿಂದ (ತಡೆ) ಮಡಿಲಿಗೆ ಹಾಕುವುದು ಕ್ರಮ. ಹಿರಿಯರು ಅರಿಶಿನ ಕುಂಕುಮ ಹಚ್ಚಿ ಅಕ್ಷತೆ ಹಾಕಿ ಹರಸುವರು ಗರ್ಭಿಣಿ ಪಕ್ಕದಲ್ಲಿ 1 ಗಂಡು ಮಗುವನ್ನು ಗಂಡನ ಪಕ್ಕದಲ್ಲಿ 1 ಹೆಣ್ಣು ಮಗುವನ್ನು ಕುಳ್ಳಿರಿಸಿ ಅವರೆಲ್ಲರ ಎದುರಿಗೆ ಬಾಳೆಲೆ ಹಾಕುವರು. ಗರ್ಭಿಣಿಯ ತಾಯಿ ಮೊದಲು ಹೊದುಳು ಅವಲಕ್ಕಿ, ಬಾಳೆಹಣ್ಣು, ಕಾಯಿಹಾಲು ಬಡಿಸುವರು, ಇದನ್ನು ಕಲಸಿ ಒಂದು ಉಂಡೆಯನ್ನು ಗರ್ಭಿಣಿ ತನ್ನ ಪಕ್ಕದಲ್ಲಿರುವ ಗಂಡುಮಗುವಿಗೂ ಪತಿಯು ಹೆಣ್ಣು ಮಗುವಿಗೂ ಕೊಡುತ್ತಾರೆ. ತಂದಂತಹ ಸಿಹಿತಿಂಡಿ ಮುಂತಾದ ಪದಾರ್ಥಗಳನ್ನು ಅವರಿಗೆ ಬಡಿಸುವರು. ಊಟವಾದ ನಂತರ ಗರ್ಭಿಣಿಯನ್ನು ಗಂಡನ ಮನೆಗೆ ಕರೆದುಕೊಂಡು ಹೋಗುವರು. ಪುನಃ ನಿಗದಿಪಡಿಸಿದ ದಿನದಂದು ತಾಯಿ ಮನೆಗೆ ಕರೆತರುವರು.

ಪರಿಕರಗಳು : ಕದಳಿ ಬಾಳೆಹಣ್ಣು, ಹೊದುಳು, ಅವಲಕ್ಕಿ, ಬೆಲ್ಲ, ತೆಂಗಿನಕಾಯಿ 1, ಬೆಳ್ತಿಗೆ ಅಕ್ಕಿ 1 ಸೇರು, ಬಾಳೆಲೆ 5, ವೀಳ್ಯದೆಲೆ 5, ಅಡಿಕೆ 1, 7 ಬಗೆಯ ಹೂಗಳು ಹಾಗೂ ಸಿಹಿತಿಂಡಿಗಳು, ಕಾಯಿ ಹಾಲು

ಪತಿಮನೆಯಿಂದ ತರುವ ವಸ್ತುಗಳು : ಹೊಸ ಹಸಿರು ಸೀರೆ, ರವಿಕೆ, ಆಭರಣ, ಹೂ ಹಿಂಗಾರ, ಸಿಹಿತಿಂಡಿಗಳು



Thursday, October 10, 2024

ಗೌಡ ಸಂಸ್ಕೃತಿ- ಮದುವೆ.

 ಗೌಡ ಸಮುದಾಯದಲ್ಲಿ ಮದುವೆಯೆನ್ನುವುದು ಬಹುಮುಖ್ಯ ಘಟ್ಟ. ಕುಟುಂಬ/ವಂಶವಾಹಿನಿ ಬೆಳೆದು ಬರಲು 'ಮದುವೆ' ಎನ್ನುವ ನಿಯೋಜಿತ ವ್ಯವಸ್ಥೆ ನಡೆಯಲೇ ಬೇಕು ಎನ್ನುವ ಕಟ್ಟಳೆ ನಮ್ಮ ಹಿರಿಯರಿಂದ ನಿರ್ಮಿತವಾದುದಾಗಿದೆ. ಈ ಮದುವೆ ಎನ್ನುವ ವ್ಯವಸ್ಥೆ ಗೌಡರಲ್ಲಿ ಬಳಿ ನೋಡುವಲ್ಲಿಂದ ಆರಂಭವಾಗುತ್ತದೆ. ಮದುವೆಯಲ್ಲಿ ಹುಡುಗಿ ನೋಡುವ ಶಾಸ್ತ್ರ, ವೀಳ್ಯ ಶಾಸ್ತ್ರ, ಮದುವೆ ದಿನದ ಕ್ರಮಗಳಲ್ಲಿ ಹಾಗೆಯೇ ನಂತರದ ಕ್ರಮಗಳಲ್ಲಿ ಹಲವು ಕಟ್ಟಳೆಗಳಿರುತ್ತವೆ. ಗೌಡರಲ್ಲಿ 'ಬಳಿ' ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. 'ಬಳಿ' ಗೌಡರಲ್ಲಿ ಸ್ವಕುಟುಂಬಿಕ ನೆಲೆಯನ್ನು ಪ್ರತಿನಿಧಿಸುತ್ತದೆಯಾದ್ದರಿಂದ ಒಂದೇ 'ಬಳಿ'ಯಲ್ಲಿ 'ಮದುವೆ' ನಡೆಯಬಾರದೆನ್ನುವ ನಿಷೇಧವನ್ನು ಇಟ್ಟುಕೊಳ್ಳಲಾಗಿದೆ. ರಕ್ತ ಸಂಬಂಧಿಗಳಲ್ಲಿ ಮದುವೆ ನಡೆಯುವುದು ಯಾವ ದೃಷ್ಟಿಯಿಂದಲೂ ಯೋಗ್ಯವಲ್ಲ ಎನ್ನುವುದನ್ನು ನಮ್ಮ ಹಿರಿಯರು ಕಂಡುಕೊಂಡಿದ್ದಾರೆನ್ನುವುದನ್ನು ಇದು ಸೂಚಿಸುತ್ತದೆ. ಹೀಗಿದ್ದೂ ತಂದೆಯ ಸಹೋದರಿ ಅಥವಾ ತಾಯಿಯ ಸಹೋದರರ ಕಡೆ 'ಬಳಿ'ಗಳಲ್ಲಿ ಮದುವೆ ನಡೆಯಬಹುದು. ಗೌಡರಲ್ಲಿ ಇರುವ ವಿಭಿನ್ನ 'ಬಳಿ'ಗಳಲ್ಲಿ 'ಮದುವೆ' ನಡೆಯುವುದು ಸಂಪ್ರದಾಯ. ಜಾತಿ ಪದ್ಧತಿ ಪ್ರಕಾರ ಅಲ್ಲದೇ ವೈದಿಕ ಕ್ರಮಗಳಲ್ಲಿ ಕೂಡಾ ಮದುವೆ ನಡೆಸಬಹುದು.

Sunday, September 15, 2024

ಬಾಗಿಲ ತಡೆಯುವ ಹಾಡುಗಳು-3

 ಮಾವಿನ ತೋರಣಕಾಗಿ ಬಂದ-ಗಂಡನ ತಂಗಿ।
ತೆಂಗು ಬಾಳೆ-ಯಾ ಅಡಕೇಯಾ॥
ವನಕಾಗಿ ಬಂದು ಬಾಗಿಲನು ತಡೆದಾಳು||
ಜಗಲೀಲಿ ನಿಂದು ಹತ್ತು ಬೆರಳು ನೊಂದಾವು 
ನೆತ್ತೀಯಾ ದಂಡೆ-ಜರಿದಾವು| ತಂಗ್ಯಮ್ಮಾ ನೀ 
ತಡೆದಾ ಬಾಗಿಲನು ಬಿಡು ನಮಗೆ||
ಆನೆಗಾನೆ ಕೊಡುವೆ ಆನೆ ಮರಿಗಳ-ಕೊಡುವೇ
 ಕಂಠೀಸರ ಕೊಡುವೆ ಜೊರಳಿಗೆ|| ತಂಗ್ಯಮ್ಮ ನೀ 
ತಡೆದಾ ಬಾಗಿಲನು ಬಿಡು ನಮಗೆ||
ಆನೆಗಳು ನಮಗುಂಟು ಆನೆಮರಿಗಳು ಉಂಟು 
ಕಂಠೀಸರವುಂಟು-ಕೊರಳಿಗೆ ಅಣ್ಣಯ್ಯ ನಾ 
ತಡೆದಾ-ಬಾಗಿಲ ಬಿಡಲಾರೆ||
ಕಲ್ಮೇಲೆ ಕಲ್ಲೊಡ್ಡಿ-ಹೂವ ಬಿಡಿಸುವ ಜಾಣೆ! 
ತಂಗ್ಯಮ್ಮ ಬಾಗಿಲ ಬಿಡಲಾರ-ಳು|| ಅವಳೊಂದು 
ಮಾತಿಗೆ ಬಾಗಿಲ ತಡೆದವಳೆ||
ಅತ್ತಿಗೆ-ಅತ್ತಿಗೆ ಅಡಿಕೆ ಜೂಜಾಡೊವೆರಡು 
ಮುತ್ತೀನ ಜೂಜು ಸರಜೂಜು॥ ಅತ್ತಿಗೆ
 ಹೆತ್ತಹೆಣ್ಣಾ ಜೂಜು ಮಗನೀಗೆ||
ನಾನು ಹೆಣ್ಣೆತ್ತಾಗ ನೀನು ಗಂಡ್ಡೆತ್ತಾಗ 
ಸಣ್ಣಕ್ಕಿ ಬಯಲು ಬೆಳೆದಾಗ-ನಾದುನಿ- 
ಮಾಡಿಕೊಳ್ಳೋಣಾ-ಮದುವೇಯಾ॥
ಶ್ರೀ ಗಿರಿ ಪರ್ವತಕೆ ಹೋದೋದೊಂದುಂಟಾದ್ರೆ
 ಶಿವ-ನ ದಯದಿಂದಾ ಮಗನಾದ್ರೆ|| 
ನಾದುನಿ ಮಗನಿಗೆ ಧಾರೆ ಎರೆವೇನು||
ಮನೆಯಾ ಮುಂದಿರುವಾ- ಹೊನ್ನರಳಿಮರವೆ
ಅಣ್ಣಾನ ಮನೆಗೆ ಹೆಣ್ಣಿಗೆ ಬರುತ್ತೇನೆ–ಅತ್ತಿಗಮ್ಮಾ- 
ನಿನ್ನ ಸಾಕ್ಷಿಯಾಗಿ ಬಾಗೀಲ ಬಿಡುತೇನೆ-ಅತ್ತಿಗಮ್ಮಾ 
ಬಾಗಿ-ದಾಟಿ-ಒಳಗೋಗು||

Saturday, September 14, 2024

ಬಾಗಿಲ ತಡೆಯುವ ಹಾಡುಗಳು-2

 ಅಂಗನ ಮಣಿಯೆ ರಂಗ ಬಂದಾ। 
ಬಿಡಿರೆ ಬಾಗಿಲಾ- ತೆಗೆಯಿರಿ ಕದಗಳಾ| 
ರಂಗ ರುಕ್ಕಿಣಿ ಬಂದಾಗಾಯ್ತು! 
ಬಿಡಿರೆ ಬಾಗಿಲಾ ತೆಗೆಯಿರಿ ಕದಗಳಾ|
ತಂದೆ ತಾಯರ ಬಿಟ್ಟು ಬಂದೆ. 
ಅಣ್ಣ ತಮ್ಮಂದಿರಾ ಆಟ ಬಿಟ್ಟು-ಬಂದೆ  ನಾ ಬಿಡಿರೆ ಬಾಗಿಲಾ- 
ಅಕ್ಕತಂಗಿಯರ ಕೂಟ ಬಿಟ್ಟು-ಬಂದೆ-II 
ಬಂದೆ ನಾ ಬಿಡಿರಿ ಬಾಗಿಲಾ-ತೆಗೆಯಿರಿ ಕದಗಳಾ-1

ರಂಗ ರುಕ್ಕಿಣಿ ಬಂದಾಗಾಯ್ತು-ಬಿಡಿರಿ ಬಾಗಿಲಾ|| 
ಅತ್ತೆ ಮಾವರ ಗುಣ ಕಂಡು| 
ಬಾವ ಮೈದುನರ ಆಟ ಕಂಡು|
 ಅತ್ತಿಗೆ ನಾದಿನಿಯರ ಹಿತ ಕಂಡು!
 ಬಂದೆ ನಾ ಬಿಡಿರಿ ಬಾಗಿಲಾ-ತೆಗೆಯಿರಿ ಕದಗಳಾ||

ಬಾಗಿಲ ತಡೆಯುವ ಹಾಡುಗಳು-1

 ಅಂದು ಗೋಕುಲದಿಂದಾ-ಬಂದ-ನಾರಾಯಣ ಕೃಷ್ಣಾ-1
ಮಂಟಪದ ನಡುಗಾಗಿ-ಬರುವ ಹಾಗೆನಣ್ಣಯ್ಯಾ!
 ಮಡದಿ ಬೆಡಗೆಂದು ಬರುತಾರೆ||
 ಮಡದಿ ಬೆಡಗೆಂದು ಬರುವಾಗ ಅಣ್ಣಯ್ಯಾ-I
 ತಂಗಿಯ ಕದಗಳಾ ತಡೆದಾಳು-–ತಂಗ್ಯಮ್ಮ
ನೀ-ತಡೆದಾ ಕದವಾ-ಬಿಡುಬೇಗಾ॥ ನಾ ತಡೆ ಕದಾ ಬಿಡಲಾರೆ! ಪ್ರತಿಯೊಂದು-ಮಾತು ನುಡಿಬೇಗಾ|| 
ದೇಶ ಉಂಬಳಿ ಕೊಡುವೆ! ಶೇಷ-ಉಪ್ಪರಿಗೆ ಕೊಡುವೆ- 
ನೀ ತಡೆದ ಕದಗಳಾ-ಬಿಡು ಬೇಗಾ||
ದೇಶ ಉಂಬಳಿ ನನಗುಂಟು! ಶೇಷ ಉಪ್ಪರಿಗೆ
 ನನಗುಂಟು! ಎನ್ನುವ ನೀನ ನನಗೆ-ಕೊಡುವೆನ್ನಮ್ಮಾ
 ಪ್ರೀತಿಗೊಂದು ಮಾತು ನುಡಿಬೇಗಾ||

Thursday, September 12, 2024

ತುಪ್ಪ ತೆಗೆದುಕೊಂಡು ಬರುವಾಗ (ಶೋಭಾನೆ ಹಾಡು) -2

 ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದ ಶ್ರೀಗಂಧ ಪರಿಮಳವು 
ಲೇಸಾಗಿ ಪದ್ಮ ಹಾವಿಗೆಯನ್ನು ಧರಿಸಿದ ವಾಸುದೇವನಿಗೂ
ಕಾಲಲ್ಲಿ ಕಿರುಗೆಜ್ಜೆ ನೀಲದ ಬಾವುಲಿ ನೀಲವರ್ಣದ 
ನಾಟಕಳ್ಹಾಕುವ ನಮ್ಮ ಭಾವಜನಯ್ಯ ಬಾಲ ಗೋಪಾಗೆ 
ನೀಲವರ್ಣನಿಗೆ ವನಿತೆ ಶ್ರೀಲಕ್ಷ್ಮೀಗೂ ನೀಲದಾರತೀಯಾ ಬೆಳಗೀರೆ ಶೋಭಾನೆ 
ಕುಂಕುಮ ಕಸ್ತೂರಿ ಪರಿ ಪರಿ ನಾಮ ಶಂಕ ಚಕ್ರವನ್ನೇ ಧರಿಸಿದ
 ನಮ್ಮ ಬಿಂಕದಿಂದಲಿ ನಾಟ್ಯವ ನಾಡುತಾಡುವ 
ಪಂಕಜ ನಾಭಗೆ ವನಿತೆ ಶ್ರೀಲಕ್ಷ್ಮೀಗೆ ಕುಂಕುಮಧಾರತೀಯಾ ಬೆಳಗೀರೆ ಶೋಭಾನೆ.
 ಹದಿನಾರು ಸಾವಿರ ಸ್ತ್ರೀಯರನೊಡಗೊಂಡು 
ಚದುರಂಗ ಪಗಡೆಯ ನಾಡಿದ ನಮ್ಮ ಮದನ ಮೋಹನ 
ದೇವ ಎಡೆಯಲಿ ಕೌಸ್ತುಭ ಮಧುಸೂದನನಿಗೆ 
ವನಿತೆ ಶ್ರೀಲಕ್ಷ್ಮೀ ಸುದತಿಯಾರತಿಯಾ ಬೆಳಗೀರೆ ಶೋಭಾನೆ 
ತೆತ್ತಿಸಕೋಟ ದೇವರ್ಕಳ ನೋಡಗೊಂಡು ಹಸ್ತವ 
ತಾರದೊಳಾಡಿದ ನಮ್ಮ ಸತ್ಯಭಾಮೆ ಪ್ರಿಯ ಪುರಂಧರ ವಿಠಲಗೆ 
ನಿತ್ಯೋತಮನಿಗೆ ವನಿತೆ ಶ್ರೀಲಕ್ಷ್ಮೀಗೆ ಮುತ್ತಿನಾರತಿಯಾ ಬೆಳಗೀರೆ ಶೋಭಾನೆ.
 ವನಿತೆ ಶ್ರೀಲಕ್ಷ್ಮೀಗೂ ಬಾಸಿಂಗದಾರತಿಯಾ ಬೆಳಗೀರೆ ಶೋಭಾನೆ