ಜಾತಿ ಬಾಂಧವರ ರಕ್ಷಣೆಗಾಗಿ ಜಾತಿ ಪದ್ಧತಿಯ ಆಚಾರ, ಕಟ್ಟು, ಕಟ್ಟಳೆಗಳನ್ನು ಕ್ರಮಬದ್ಧ ರೀತಿಯಲ್ಲಿ ನಡೆಸುವುದಕ್ಕಾಗಿ ಹತ್ತು ಕುಟುಂಬ ಹದಿನೆಂಟು ಗೋತ್ರದ ಜನ ಸುಳ್ಯ ಮತ್ತು ಪಂಜ ಸೀಮೆಗಳಿಗೆ ಸಂಬಂಧಪಟ್ಟಂತೆ ಕೂಜುಗೋಡು ಕಟ್ಟೆಮನೆಯನ್ನು ಒಪ್ಪಿಕೊಂಡರು. (ಪುತ್ತೂರು ಭಾಗದಲ್ಲಿ ಬಲ್ನಾಡು ಕಟ್ಟೆಮನೆ ಆ ಭಾಗದ ಗೌಡರುಗಳಿಗೆ ಸೀಮಿತವಾಗಿದೆ)
ಕಟ್ಟೆ ಮನೆಯ ನಿರ್ದೇಶನದಂತೆ ಜಾತಿ ಪದ್ಧತಿಯಲ್ಲಿ ನಡೆಯುವ ಹುಟ್ಟಿನಿಂದ ಸಾವಿನ ತನಕ ನಡೆಯಬೇಕಾದ ಸಂಸ್ಕಾರ ವಿಧಿಗಳನ್ನು ನಿರ್ಣಯಿಸಿ ಕಾರರೂಪಕ್ಕೆ ತರುವಲ್ಲಿ ಕಟ್ಟೆಮನೆ ಮಹತ್ತರ ಪಾತ್ರವಹಿಸಿದೆ. ಕೆಳಗಿನ ಹಂತಗಳಲ್ಲಿ ನ್ಯಾಯ ನಿರ್ಣಯಗಳನ್ನು ತೀರಿಸಲು ಅಸಾಧ್ಯವಾದಾಗ ಕೂಜುಗೋಡು ಕಟ್ಟೆಮನೆಯವರು ದೂರನ್ನು ಸ್ವೀಕರಿಸಿ ಪರಿಹರಿಸುತ್ತಿದ್ದರು. ಇಲ್ಲೂ ಅಸಾಧ್ಯವಾದಾಗ ಮಾತ್ರ ಶೃಂಗೇರಿ ಗುರುಗಳ ಬಳಿ ನಿರ್ಣಯಿಸಲ್ಪಡುತ್ತಿತ್ತು. ಅಲ್ಲದೆ ಮದುವೆ ಕಾವ್ಯದಲ್ಲಿ ತೆಗೆದಿಟ್ಟ ತೆರವಿನ ಹಣದ ಒಂದು ಪಾಲನ್ನು ಶೃಂಗೇರಿ ಮಠಕ್ಕೆ ಕಳುಹಿಸಿ ಕೊಡುವ ಕೆಲಸ ಕಟ್ಟೆಮನೆಯವರದ್ದಾಗಿತ್ತು.
ಸೀಮೆಮನೆ: ಹತ್ತು ಕುಟುಂಬ ಹದಿನೆಂಟು ಗೋತ್ರದ ಜಾತಿ ಬಾಂಧವರಿಗೆ ಸುಳ್ಯ ಮತ್ತು ಪಂಜ ಸೀಮೆಗಳಿರುತ್ತವೆ. ಸೀಮೆಗಳ ವ್ಯಾಪ್ತಿಗೊಳಪಟ್ಟಂತೆ ನ್ಯಾಯ ತೀರ್ಮಾನಗಳು ಆಯಾಯ ಸೀಮೆ ಮನೆಯವರಿಗೆ ವಹಿಸಿಕೊಡಲಾಗುತ್ತದೆ. ಇಲ್ಲೂ ಆಗದೆ ಇರುವ ಸಮಸ್ಯೆಗಳನ್ನು ಕಟ್ಟೆಮನೆಗೆ ಕೊಂಡು ಹೋಗುತ್ತಾರೆ.
ಮಾಗಣೆ ಮನೆ : ನಾಲ್ಕು ಊರುಕಟ್ಟುಗಳಿಗೆ ಒಂದು ಮಾಗಣೆ ಎಂದು ಕರೆಯುತ್ತಾರೆ. ಊರುಕಟ್ಟುಗಳಲ್ಲಿ ನ್ಯಾಯ ತೀರ್ಮಾನಗಳನ್ನು ಪರಿಹರಿಸುತ್ತಾರೆ. ಇಲ್ಲಿ ಆಗದೇ ಇದ್ದಾಗ ಸೀಮೆ ಮನೆಯವರಿಗೆ ಜವಾಬ್ದಾರಿ ವಹಿಸುತ್ತಾರೆ.
ಊರುಗೌಡ: ಊರುಕಟ್ಟುಗೊಬ್ಬ ಊರುಗೌಡ. ದೊಡ್ಡ ಗ್ರಾಮಗಳಲ್ಲಿ ಬಯಲು ವ್ಯಾಪ್ತಿಗೊಬ್ಬ ಊರುಗೌಡ ಇರುತ್ತಾರೆ. ಗೌಡ ಸಮಾಜದಲ್ಲಿ ಸ್ವಜಾತಿ ನೀತಿಯನ್ನು ಕಾಪಾಡು ಉದ್ದೇಶದಿಂದ ಹಿಂದಿನಿಂದಲೂ ಗ್ರಾಮಗಳಿಗೆ ಸಂಬಂಧಪಟ್ಟಂತೆ ಇವರೇ ಕಾರ್ಯನಿರ್ವಹಿಸುತ್ತಿದ್ದರು. ಹುಟ್ಟಿನಿಂದ ಮೊದಲ್ಗೊಂಡು ಸಾವಿನ ತನಕದ ಎಲ್ಲಾ ಕಾರ್ಯಗಳು ಊರುಗೌಡರುಗಳ ನೇತೃತ್ವದಲ್ಲಿ ನಡೆಯಲ್ಪಡುತ್ತಿದ್ದವು. ಮದುವೆ ಮತ್ತು ಸತ್ತವರ ಕರ್ಮಾದಿಗಳಲ್ಲಿ ಇವರ ಮಾರ್ಗದರ್ಶನ ಅತ್ಯಂತ ಪ್ರಾಮುಖ್ಯ. ಹೀಗಾಗಿ ಮದುವೆ ಕಾರವೊಂದನ್ನು ಇಲ್ಲಿ ಉದಾಹರಿಸಿದರೆ ಹೆಣ್ಣು ನೋಡುವಲ್ಲಿಂದ ಆಟಿ ಕೂರುವವರೆಗೆ ಊರುಗೌಡರುಗಳ ಅವಶ್ಯಕತೆಯಿದೆ. ಈ ಎಲ್ಲಾ ಅಂಶಗಳಿಂದ ಇಂದಿನ ಕಾಲ ಘಟ್ಟದಲ್ಲಿ ಅವರ ಎಲ್ಲಾ ಸಮಯಗಳು ಕೂಡ ಇಂತಹ ಸಂದರ್ಭಗಳಿಗೆ ಉಪಯೋಗವಾಗುವುದರಿಂದ ಅವರ ಮನೆ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಅವರು ಎಲ್ಲಾಕಾರ್ಯಗಳಿಗೆ ಹೋಗಬೇಕಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಗೌರವಧನ ಕೊಡುವುದು ಸಮಂಜಸವೆನ್ನುವುದು ಊರುಗೌಡರುಗಳ ಸಮಾವೇಶಗಳಲ್ಲಿ ಸ್ವಜಾತಿ ಬಾಂಧವರ ಅಭಿಪ್ರಾಯವಾಗಿರುತ್ತದೆ. ಇಂದು ವೈಭವಯುತವಾಗಿ ಮದುವೆ ಕಾವ್ಯಗಳನ್ನು ನಡೆಸಿ ದುಂದು ವೆಚ್ಚ ಮಾಡುವ ನಮ್ಮ ಸಮಾಜ ಬಂಧುಗಳು ಈ ವಿಷಯಗಳನ್ನು ಗಂಭೀರವಾಗಿ ಚಿಂತಿಸಬೇಕಾಗಿದೆ. ಅವರ ಶ್ರಮಕ್ಕೆ ತಕ್ಕುದಾದ ಗೌರವಧನ ನೀಡಬೇಕು. ಈ ಹಣ ಕನಿಷ್ಠವಾಗಿ ಇಂದಿನ ಪರಿಸ್ಥಿತಿಯಲ್ಲಿ ಒಂದು ಸಾವಿರವಾದರೂ ಇರಬೇಕು ಎಂಬುದು ಸಮಾಜದವರ ಒಟ್ಟು ಅಭಿಪ್ರಾಯವಾಗಿದೆ
ಒತ್ತು ಗೌಡ (ಊರು ಗೌಡರ ಸಹಾಯಕ) ಊರುಗೌಡರುಗಳಿಗೆ ಸೂತಕ ಬಂದಾಗ ಊರುಗೌಡರ ಮನೆಗಳಲ್ಲೂ ಅಲ್ಲದೇ ಅವರ ಕುಟುಂಬಸ್ಥರ ಮನೆಗಳಲ್ಲೂಕಾರ್ಯಕ್ರಮಗಳನ್ನು ಮಾಡುವ ಸಂದರ್ಭಗಳಲ್ಲಿ ಹೆಚ್ಚಿನ ಮನೆಗಳಲ್ಲೂ ಒಂದೇ ದಿನಗಳಲ್ಲಿ ಕಾರ್ಯಕ್ರಮಗಳು ಇದ್ದಾಗ ಒತ್ತು ಗೌಡರು
ಕಾರ್ಯನಿರ್ವಹಿಸುತ್ತಾರೆ.
No comments:
Post a Comment