ಕ್ರಮಗಳು:
1. ತಲೆಗೆ ನೀರು ಹೊಯ್ಯುವುದು
2. ಮಡಿಕೆ ಹಿಡಿಸುವುದು
3. ಋತುಶಾಂತಿ (ನೆರ್ದ ಮದುವೆ)
1. ತಲೆಗೆ ನೀರು ಹೊಯ್ಯುವುದು : ಹುಡುಗಿ ಬೆಳೆದು ದೊಡ್ಡವಳಾಗುತ್ತಾ ಶಾರೀರಿಕ ಬೆಳವಣಿಗೆಯೊಂದಿಗೆ ಒಂದು ಹಂತದಲ್ಲಿ ಋತುಮತಿಯಾಗುತ್ತಾಳೆ. ಆ ದಿನ ಹುಡುಗಿಯ ಕೈಯಲ್ಲಿ ಒಂದು ಚಿಕ್ಕ ಕತ್ತಿಯನ್ನು ಕೊಟ್ಟು ಫಲ ಬರುವ ಮರದಡಿಯಲ್ಲಿ ಕುಳ್ಳಿರಿಸುತ್ತಾರೆ. ತದನಂತರ ನೆರೆಮನೆಯ ಮುತ್ತೈದೆಯರನ್ನು ಕರೆಸಿ ಒಗ್ಗಿ ಹಾಕಿದ 5 ತೆಂಗಿನಕಾಯಿ ಮೇಲೆ ಕುಳ್ಳಿರಿಸಿ 5 ವೀಳ್ಯದೆಲೆ ಮತ್ತು 1 ಅಡಿಕೆ ಹಿಡಿದು ಐದು ಬಿಂದಿಗೆಗಳಲ್ಲಿ ತುಂಬಿಸಿಟ್ಟ ನೀರನ್ನು ಹುಡುಗಿಯ ತಲೆಗೆ ಹೊಯ್ಯುವರು ಮತ್ತೆ ಹುಡುಗಿಯನ್ನು ಸ್ನಾನ ಮಾಡಿಸಿ, ಬಟ್ಟೆ ಉಡಿಸಿ ಕೊಟ್ಟಿಗೆ ಅಥವಾ ಪ್ರತ್ಯೇಕ ಕೋಣೆಯಲ್ಲಿ ಕುಳ್ಳಿರಿಸುತ್ತಾರೆ. ನಂತರ ನಾಲ್ಕು ದಿನಗಳ ಮಟ್ಟಿಗೆ ತಿಂಡಿ ಹಾಗೂ ಆಹಾರವನ್ನು ಅಲ್ಲಿಗೆ ವ್ಯವಸ್ಥೆ ಮಾಡಬೇಕು.
2. ಮಡಿಕೆ ಹಿಡಿಸುವುದು : ಈ ಕ್ರಮವನ್ನು ಋತುಶಾಂತಿ ಲಗ್ನವನ್ನು ಮಾಡಿಸಲು ಅನಾನುಕೂಲ ಇರುವವರು ಮಾಡುತ್ತಾರೆ. ಹುಡುಗಿ ಮೈನೆರೆದ 5ನೇ ದಿನದಲ್ಲಿ ನೆರೆಮನೆಯ ಮುತ್ತೈದೆಯರನ್ನುಕರೆಯುತ್ತಾರೆ. ಮೊದಲೇ ತಿಳಿಸಿದಂತೆ ಮಡಿವಾಳಗಿತ್ತಿಯು ಬಂದು ಹುಡುಗಿಯನ್ನು ಸ್ನಾನ ಮಾಡಿಸಿ ಮಡಿ ಬಟ್ಟೆ ಉಡಿಸಿ ದೇವಸ್ಥಾನದಿಂದ ತಂದ ಪುಣ್ಯಾರ್ಚನೆಯನ್ನು ಮದುಮಗಳಿಗೆ ಹಾಗೂ ಮನೆಯೊಳಗೆ ಚಿಮುಕಿಸಿ ಶುದ್ಧಗೊಳಿಸುತ್ತಾರೆ. ಮುಂದೆ ನಡುಮನೆಯಲ್ಲಿ ಕಾಲುದೀಪ ಹಚ್ಚಿ, ಗಣಪತಿಗೆ ಇಟ್ಟು ಚಾಪೆ ಹಾಸಿ ಮನೆಯ ಅಡುಗೆಯ ಪರಿಕರಗಳನ್ನು, ಒನಕೆ, ತಡ್ಲೆ, ಕುಕ್ಕೆ ಇತ್ಯಾದಿಗಳನ್ನು ಜೋಡಿಸಿ ಇಡುತ್ತಾರೆ. ಹುಡುಗಿ ದೇವರಿಗೆ ಕೈ ಮುಗಿದು ಎಲ್ಲಾ ಪರಿಕರಗಳಿಗೆ ಅಕ್ಕಿ ಹಾಕಿ ಕೈ ಮುಗಿಯುತ್ತಾಳೆ. ಗುರುಹಿರಿಯರಿಗೆ ನಮಿಸಿ ಆಶೀರ್ವಾದ ಪಡೆಯುತ್ತಾಳೆ ನಂತರ ದನದ ಕೊಟ್ಟಿಗೆಗೆ ಹೋಗಿ ಗೋವುಗಳಿಗೆ ಹುಲ್ಲು ಕೊಟ್ಟು ನಮಸ್ಕರಿಸುತ್ತಾಳೆ. ಮುಂದೆ ಫಲ ಬರುವ ಮರಗಳಿಗೆ ಕೈ ಮುಗಿಯುವಳು. ಹುಡುಗಿ ದೇವಸ್ಥಾನಗಳಂತಹ ವಿಶೇಷ ಸ್ಥಳಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಕಡೆಗೆ ಹೋಗಬಹುದು.
ಮೈ ನೆರೆದ ಹುಡುಗಿಗೆ ಸಂಬಂಧಿಕರು ಎಲ್ಲಾ ತರಹದ ವಿಶೇಷ ಸಿಹಿ ತಿಂಡಿಗಳನ್ನು ತರುವ ಪದ್ಧತಿ ಕೂಡಾ ಚಾಲ್ತಿಯಲ್ಲಿರುತ್ತದೆ.
3. ಋತುಶಾಂತಿ ಲಗ್ನ: ಒಳ್ಳೆಯ ಮುಹೂರ್ತ ನೋಡಿ ದಿನ ಗೊತ್ತುಪಡಿಸಿ ನೆಂಟರಿಷ್ಟರನ್ನು ಕರೆಯಿಸಿ ತುಂಬಾ ಅದ್ಧೂರಿಯಾಗಿ ಆಚರಿಸುವುದು ಪದ್ಧತಿ. ಅಂದು ಬೆಳಿಗ್ಗೆ ಮಡಿವಾಳಗಿತ್ತಿಯು ಬಂದು ಹುಡುಗಿಯನ್ನು ಸ್ನಾನ ಮಾಡಿಸಿ ಮಡಿ ಬಟ್ಟೆ ಉಡಿಸಿ ಚಪ್ಪರದಡಿಯಲ್ಲಿ ಒನಕೆ ಇರಿಸಿ ಅಕ್ಕಿ ಹುಡಿಯಿಂದ ರಂಗೋಲಿ ಬರೆಯುತ್ತಾಳೆ. ಅದರ ಮಧ್ಯ ಒಂದು ಕೊಡಿ ಬಾಳೆ ಎಲೆ ಇಟ್ಟು ಅದರಲ್ಲಿ ಹುಡುಗಿಯನ್ನು ನಿಲ್ಲಿಸಿ ನಂತರ ಮಡಿವಾಳಗಿತ್ತಿ ಬಲಕಾಲ ಹೆಬ್ಬೆರಳಿನಿಂದ ತಲೆ ಮೇಲಿಂದ ಎಡಕಾಲ ಹೆಬ್ಬೆರಳಿಗೆ ಬಿಳಿ ನೂಲು ಹಾಕುತ್ತಾಳೆ. ಅದರಲ್ಲಿ ಬೆಳ್ಳಿ ಕಡಗವನ್ನು 3 ಸಲ ಆಚೆ-ಈಚೆ ದಾಟಿಸುತ್ತಾಳೆ. ಹುಡುಗಿಯ ಅತ್ತಿಗೆ, ನಾದಿನಿಯವರು ತಿನ್ನಲು ತಾಂಬೂಲ ಕೊಡುತ್ತಾರೆ. ಹುಡುಗಿ ತಾಂಬೂಲ ತಿಂದು ಎಲೆಯ ಮಧ್ಯಭಾಗಕ್ಕೆ ಉಗಿಯುತ್ತಾಳೆ. ಹೆಬ್ಬೆರಳಿಗೆ ಕಟ್ಟಿದ ನೂಲು ಸಮೇತ ಹುಡುಗಿಯ ತಾಯಿ ತೆಗೆದುಕೊಂಡು ಹೋಗಿ ನೀರಲ್ಲಿ ಬಿಡುತ್ತಾಳೆ. ಬರುವಾಗ ತಾಯಿ ಸ್ನಾನ ಮಾಡಿ ಬರಬೇಕು. (ಇದು ಪಿಲೆ ತೆಗೆಯುವುದು).
ಮುಂದೆ ತೆಂಗಿನ ಮರದಡಿಯಲ್ಲಿ ಹೊಸ ಚಾಪೆ ಹಾಸಿ ಅತ್ತಿಗೆ/ನಾದಿನಿಯವರು ಅದರಲ್ಲಿ 2 ಕುಚಗಳ ರೂಪವನ್ನು ಮಣ್ಣಿನಿಂದ ಮಾಡಿಟ್ಟಿರುತ್ತಾರೆ. ಚಾಪೆಯಲ್ಲಿ ಕೊಡಿ ಬಾಳೆಎಲೆ ಹಾಕಿ ನನ್ಯಕ್ಕಿ ಎಡೆಯಿಟ್ಟು, ಎಲೆ ಅಡಿಕೆ ಇಟ್ಟು 3ಸಲ ಪ್ರದಕ್ಷಿಣೆ ಬಂದು ಕೈ ಮುಗಿದು ಒಂದು ಎಲೆಯನ್ನು ಗಂಡು ಮಗುವಿಗೆ ಮತ್ತು ಇನ್ನೊಂದನ್ನು ಹೆಣ್ಣು ಮಗುವಿಗೆ ಕೊಡುತ್ತಾರೆ.
ಮತ್ತೆ 1 ಮಣ್ಣಿನ ಕುಂಭದಲ್ಲಿ ನೀರು ತುಂಬಿ ಅದರ ಮೇಲೆ ನೀರು ತುಂಬಿದ ತಂದಿಗೆಯಲ್ಲಿ ಮಾವಿನ ಎಲೆ, ಹಿಂಗಾರ, ತೆಂಗಿನ ಕಾಯಿ ಇಟ್ಟು ಸೋಗೆ ಸಿಂಬೆಯೊಂದಿಗೆ ಹೊತ್ತು ತರುತ್ತಾಳೆ. ನಡು ಮನೆಯಲ್ಲಿ ದೀಪ ಹಚ್ಚಿ ಗಣಪತಿಗೆ ಇಟ್ಟು ಒಲಿ ಚಾಪೆ ಹಾಸಿರುತ್ತಾರೆ. ಹುಡುಗಿ ಹೊತ್ತು ತಂದ ನೀರಿನ ಕುಂಭವನ್ನು ಹುಡುಗಿಯ ತಾಯಿ ತೆಗೆದು ನಡುಮನೆಯಲ್ಲಿಡುತ್ತಾಳೆ. ಹುಡುಗಿ ದೇವರಿಗೆ ಕೈ ಮುಗಿದು ಹಿರಿಯರ ಕಾಲಿಗೆ ನಮಸ್ಕರಿಸಿ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಾಳೆ. ಮುಂದೆ ಹೊಸ ಬಟ್ಟೆ ಉಡಿಸಿ ಚಾಪೆಯಲ್ಲಿ ಕೂರಿಸುತ್ತಾರೆ. ಬಂದ ನೆಂಟರಿಷ್ಟರು ಹುಡುಗಿಗೆ ಉಡುಗೊರೆಗಳನ್ನು ಕೊಡುತ್ತಾರೆ. ಊಟದ ನಂತರ ಹುಡುಗಿಯ ಸೋದರ ಮಾವನ ಮನೆಯವರು ಹುಡುಗಿಯನ್ನು ಕರೆದುಕೊಂಡು ಹೋಗುತ್ತಾರೆ. ತದನಂತರ ಸ್ವಲ್ಪ ದಿನಗಳಲ್ಲಿ ಹುಡುಗಿಯ ತಾಯಿ ಅಲ್ಲಿಂದ ಮಗಳನ್ನು ಕರೆದುಕೊಂಡು ಬರುತ್ತಾರೆ.
ಹುಡುಗಿ ಮೈನೆರೆಯುವುದು : ಕ್ರಮ :- ಊರ ಮಡಿವಾಳಗಿತ್ತಿಯ ಮುಂದಾಳುತನದಲ್ಲಿ ಕ್ರಮ ನಡೆಯುವುದು.
ಬೇಕಾಗುವ ಪರಿಕರಗಳು:
1) ಸಾಧಾರಣ ಸಣ್ಣ ಮಣ್ಣಿನ ಮಡಿಕೆ 1 :- ಮಡಿಕೆ ಒಳಗೆ ಸ್ವಲ್ಪ ಹಾಲು ಹಾಕಬೇಕು. ಮಡಿಕೆಯ ಬಾಯಿ ಸುತ್ತ ಒಳಗೆ ಮಾವು, ಹಲಸು ಸೊಪ್ಪುಗಳನ್ನು ಇಟ್ಟು ಅದರ ಮೇಲೆ ಒಂದು ತಂಬಿಗೆ ಇಡಬೇಕು.
2) ಕಲಶ : ಸ್ಟೀಲ್ ಅಥವಾ ಹಿತ್ತಾಳೆದ್ದಾಗಿರಬೇಕು. ತಂಬಿಗೆ ಒಳಗೆ ಸುತ್ತ ಮಾವು ಸೊಪ್ಪು
ಅದರ ಮಧ್ಯೆ ತೆಂಗಿನ ಕಾಯಿ ಇಡಬೇಕು.
3) ಸ್ಟೀಲಿನ ಅಥವಾ ಹಿತ್ತಾಳೆಯ ತಂಬಿಗೆ 5 : ಪ್ರತೀ ತಂಬಿಗೆಯ ಒಳಗೆ ವೀಳ್ಯದೆಲೆ, ಮಾವು, ಹಲಸು ಸೊಪ್ಪು ಒಂದೊಂದು ಅಡಿಕೆ ಹಾಕಿಡಬೇಕು. ಅದರ ಒಳಗೆ ಸ್ವಲ್ಪ ನೀರು ಇರಬೇಕು.
4) ದೇವಸ್ಥಾನದಿಂದ ತಂದ ಪುಣ್ಯಾರ್ಚನೆ.
5) ಕಾಲುದೀಪ
6) ಮರದ ಮಣೆ : ಮಣೆಯ ಮೇಲೆ ಸೀರೆ, ರವಿಕೆ, ಹಿಂಗಾರ ಇಟ್ಟಿರಬೇಕು.
7) ಐದು ಬಗೆಯ ಹೂವುಗಳಿರಬೇಕು : ಉದಾ : ಮಲ್ಲಿಗೆ, ತುಂಬೆ ಹೂ, ಸೇವಂತಿಗೆ ಇತ್ಯಾದಿ.
8) ತುಂಬೆ ಹೂವು : ತೆಂಗಿನ ಗರಿಯ ಕಡ್ಡಿಗೆ ಕನಿಷ್ಟ 5 ತುಂಬೆ ಹೂ ಪೋಣಿಸಿಡಬೇಕು.
9) ಬಾಚಣಿಗೆ
10) ಕುಂಕುಮ ಕರಡಿಗೆ
11) ಕಂಚಿನ ಬಟ್ಟಲು -2
ಒಂದನೇ ಬಟ್ಟಲಿನಲ್ಲಿ ಒಂದು ಸೇರು ಬೆಳ್ತಿಗೆ ಅಕ್ಕಿ, ಕುಂಕುಮ ಕರಡಿಗೆ, ಐದು ಬಳೆ ಐದು ಅಡಿಕೆ ಒಂದು ತೆಂಗಿನಕಾಯಿ, ಒಂದು ನೂಲಿನ ಉಂಡೆ, ಬಾಚಣಿಗೆ, ಒಂದು ಕಡಗ ಇಡಬೇಕು.
2ನೇ ಬಟ್ಟಲಿನಲ್ಲಿ ಬೆಳ್ಳಿಗೆ ಅಕ್ಕಿ ಒಂದು ಸೇರು, 5 ಎಲೆ, 1 ಅಡಿಕೆ, ಅಕ್ಕಿ ಮೇಲೆ ಒಂದು ಚೆಂಬು, ಚೆಂಬು ಸುತ್ತ ಹಲಸಿನ ಎಲೆ ಮಧ್ಯ ಒಂದು ತೆಂಗಿನಕಾಯಿ ಇರಬೇಕು.( ಇದನ್ನು ಮಂಡಲ ಬರೆದ ದೀಪದ ಹತ್ತಿರ ಇಡಬೇಕು) ತುಳಸಿ ಕಟ್ಟೆಯ ಹತ್ತಿರ ಒಂದು ಬದಿಯಲ್ಲಿ ಅಕ್ಕಿ ಹುಡಿಯಲ್ಲಿ ಮಂಡಲ ಬರೆಯಬೇಕು.
ಮಡಿವಾಳಗಿತ್ತಿ ಕೊಟ್ಟ ಸೀರೆಯನ್ನು ಉಡಿಸಿ ಶೃಂಗರಿಸಿ, ಕಲಶ ಕನ್ನಡಿ ಸಹಿತ ಪಿಲೆ ತೆಗೆಯುವ ಸ್ಥಳಕ್ಕೆ ಹುಡುಗಿಯನ್ನು ಕರೆದುಕೊಂಡು ಬರಬೇಕು. ಹಿರಿಯ ಮುತ್ತೈದೆಯರು ಪಿಲೆ ತೆಗೆಯುವ ಕ್ರಮ ಮಾಡಬೇಕು.
ಕ್ರಮ : ಮಂಡಲದ ಒಳಗೆ ಹಾಕಿಟ್ಟ ಎಲೆ ಮೇಲೆ ಹುಡುಗಿಯನ್ನು ನಿಲ್ಲಿಸಬೇಕು. ಬಲ ಹೆಬ್ಬೆರಳಿನಿಂದ ತಲೆ ಮೇಲೆ ತಂದು ಎಡ ಹೆಬ್ಬೆರಳಿಗೆ ಬರುವಂತೆ ನೂಲನ್ನು ಸೇರಿಸಿಡಬೇಕು. ಆ ನಂತರ ನೂಲಿನ ಮೂಲಕ 3 ಸಲ ಕಡಗವನ್ನು ದಾಟಿಸಬೇಕು. ನಂತರ ಜಗಿಯಲು ಎಲೆ ಅಡಿಕೆ ಕೊಟ್ಟು ಜಗಿದ ನಂತರ ಎಲೆ-ಅಡಿಕೆಯನ್ನು ಎದುರಿನ ಎಲೆಗೆ ಉಗಿಯಬೇಕು. ಇದಾದ ನಂತರ ತಲೆ ಮೇಲೆ ಮಡಿವಾಳಗಿತ್ತಿ ಬಿಳಿ ಬಟ್ಟೆ ಹಿಡಿಯುತ್ತಾರೆ. ಮಂಡಲದ ಒಳಗೆ ಇದ್ದ 5 ತಂಬಿಗೆಗೆಗಳನ್ನು 5 ಜನ ಮುತ್ತೈದೆಯರು ತೆಗೆದುಕೊಂಡು ನೀರು ಹಾಕಬೇಕು. ಮತ್ತೆ ಅದರ ಒಳಗಿದ್ದ ಎಲೆ ಕೂಡ ಹಾಕಬೇಕು. ಈ ಕ್ರಮ ಆದ ನಂತರ ಮಡಿವಾಳಗಿತ್ತಿ ಪುಣ್ಯಾರ್ಚನೆ ಹಾಕಬೇಕು. ನಂತರ ಹುಡುಗಿಯನ್ನು ಸಿಂಗರಿಸಿ ಹಣೆಗೆ ಗಂಧ ಹಚ್ಚಬೇಕು. ಈ ಎಲ್ಲಾ ಕ್ರಮ ಮುಗಿದ ಮೇಲೆ ಪಿಲೆ ತೆಗೆದ ಮುತ್ತೈದೆ ಸ್ಥಳ ಶುದ್ಧ ಮಾಡಬೇಕು.
ಗುಂಭ ಪೂಜೆ
ಬೇಕಾಗುವ ವಸ್ತುಗಳು : ಮಣ್ಣಿನ ಮಡಿಕೆ, ಕಲಶ ಕನ್ನಡಿ, 1 ತಂಬಿಗೆ, 1 ತೆಂಗಿನಕಾಯಿ, ಬೆಲ್ಲ ಅವಲಕ್ಕಿ, ಬಾಳೆಹಣ್ಣು, ಬಾಳೆಲೆ, ಚಾಪೆ.
ಬಾವಿಯ ಹತ್ತಿರ ಹೋಗಿ ಕಟ್ಟೆಬಳಿ ಪೂರ್ವಾಭಿಮುಖವಾಗಿ ಚಾಪೆ ಹಾಕಿ ಅದರ ಮೇಲೆ 5 ಬಾಳೆಲೆ ಹಾಕಿಡಬೇಕು. ಆ ಎಲೆಗಳಿಗೆ ಅವಲಕ್ಕಿ ಬೆಲ್ಲ, ಬಾಳೆಹಣ್ಣು ಬಡಿಸಬೇಕು. ಹುಡುಗಿ ಕೈಯಿಗೆ ಒಂದು ತೆಂಗಿನಕಾಯಿ ಕೊಟ್ಟು ಕೈ ಮುಗಿದು ತೆಂಗಿನಕಾಯಿಯನ್ನು ಎರಡು ಭಾಗ ಮಾಡಿ ಎಲೆಗಳಿಗೆ ಆರತಿ ಎತ್ತಿದ ಹಾಗೆ ಮಾಡಿ ಎಲೆಗಳ ಮಧ್ಯ ಗಡಿಗಳನ್ನು ಇಡಬೇಕು. ಧೂಪದಾರತಿ ಮಾಡಿಸಬೇಕು. ಪ್ರಾರ್ಥಿಸಿ ಆದ ಮೇಲೆ ಹುಡುಗಿ ಕೈಯಿಂದ ಆ ಎಲೆಗಳನ್ನು ಸ್ವಲ್ಪ ಎದುರು ಎಳೆಯಬೇಕು. ನಂತರ ಅವಲಕ್ಕಿ ಬೆಲ್ಲ ಸೇರಿಸಿ ಪಂಚಕಜ್ಜಾಯ ಮಾಡಿಸಬೇಕು. 5 ಜನ ಮುತ್ತೈದೆಯರು ಅಲ್ಲಿದ್ದ ಮಡಕೆಯನ್ನು ಎತ್ತಿ ಹುಡುಗಿ ತಲೆ ಮೇಲೆ ಇಡುತ್ತಾರೆ. ಹುಡುಗಿ ಬಾವಿಗೆ ಸುತ್ತು ಬರಬೇಕು.ನಂತರ ಮನೆ ಎದುರು ಮೆಟ್ಟಿಲ ಹತ್ತಿರ ಬಂದು ನಿಲ್ಲಬೇಕು. ಈಗ 5 ಜನ ಮುತ್ತೈದೆಯರು ಒಂದು ಕಂಚಿನ ಬಟ್ಟಲಿಗೆ ಕುರ್ದಿ ನೀರು ಹಾಕಿ, ಆರತಿ ಎತ್ತಿ, ಸೋಭಾನೆ ಹಾಡಿ, ಕುರ್ದಿ ನೀರನ್ನು ಕಾಲಿನ ಎರಡು ಬದಿಗೆ ಎರೆಯಬೇಕು. ನಂತರ ಒಳಗೆ ಕರೆದುಕೊಂಡು ಹೋಗಬೇಕು. ಕನ್ನಿಕಂಬದ ಹತ್ತಿರ ಹುಡುಗಿಯನ್ನು ದೇಸೆಗೆ ಕುಳ್ಳಿರಿಸಬೇಕು. ಆರಂಭಕ್ಕೆ ಮನೆ ಮುತ್ತೈದೆಯರು ದೇಸೆ ಹಾಕಬೇಕು. ನಂತರ ಪ್ರತಿಯೊಬ್ಬರೂ ದೇಸೆ ಹಾಕುವರು. (ಉಡುಗೊರೆ ಕೊಡುವುದಿದ್ದರೆ ಕೊಡಬಹುದು) ನಂತರ ಹೊರಗೆ ಬಂದು ತುಳಸಿಕಟ್ಟೆ ಮುಂಭಾಗದಲ್ಲಿ ದೇವರಿಗೆ ನೀರು ಇಡುವ ಕ್ರಮ ಮಾಡಬೇಕು. ಹುಡುಗಿ ಕೈಯಲ್ಲಿ 5 ಎಲೆ 1 ಅಡಿಕೆ ಕೊಡಬೇಕು. ಮನೆ ಯಜಮಾನ 5 ದೇವರುಗಳ ನೆನೆದು ಎಲೆ ಅಡಿಕೆಯ ಕೈ ಮೇಲೆ ನೀರು ಹೊಯ್ಯುವುದು ಮಾಡಬೇಕು. ಇದಾದ ನಂತರ ಒಳಗೆ ಹೋಗಿ ಅಟ್ಟಕ್ಕೆ “ಕೈ ಮುಗಿಯಬೇಕು. ಹೊರಗೆ ಬಂದು ಮರ ಗಿಡಗಳಿಗೆ, ಒನಕೆ, ದನಗಳಿಗೆ ಕೈ ಮುಗಿಯುವ ಶಾಸ್ತ್ರ ಮಾಡಬೇಕು. ಈ ಎಲ್ಲಾ ಕ್ರಮ ಮುಗಿದ ಮೇಲೆ ಹಿರಿಯರ ಪಾದ ಮುಟ್ಟಿ ನಮಸ್ಕರಿಸುವ ಶಾಸ್ತ್ರ ಮಾಡಬೇಕು. ಬಂದವರಿಗೆಲ್ಲಾ ಭೋಜನದ ವ್ಯವಸ್ಥೆ ಮಾಡಬೇಕು. ಭೋಜನದ ನಂತರ ಸೋದರದವರು ಹುಡುಗಿಯನ್ನು ಕರೆದುಕೊಂಡು ಹೋಗಬೇಕು. ಅಲ್ಲಿ ರಾತ್ರಿ ಗುರುಕಾರಣರಿಗೆ ಬಡಿಸುವ ಕ್ರಮ ಮಾಡಬೇಕು. ಮರು ದಿನ ಮನೆಯವರು ಕರಕೊಂಡು ಬರುವುದು
No comments:
Post a Comment