Friday, May 3, 2024

ಗೌಡ ಸಂಸ್ಕೃತಿ--- ಹುಟ್ಟು : (ಜನನ)

ಹಿಂದಿನ ಕಾಲದಲ್ಲಿ ಮಗು ಹುಟ್ಟಿದಾಗ ಕಂಚಿನ ಬಟ್ಟಲು ಹೊಡೆಯುವ ಸಂಪ್ರದಾಯವಿತ್ತು. ಶಬ್ದ ಕೇಳಿದಲ್ಲಿಂದ ಮಗು ಭೂಮಿಗೆ ಬಿದ್ದ ಘಳಿಗೆಯೆಂದು ನಿರ್ಧರಿಸಿ ಮಗುವಿನ ಜಾತಕದ ಗ್ರಹ ಸ್ಪುಟಗಳನ್ನು ಜ್ಯೋತಿಷ್ಯರು ಬರೆದಿಡುತ್ತಿದ್ದರು. ಹಿಂದಿನ ಕಾಲದ ಪದ್ಧತಿ ಪ್ರಕಾರ ಮಗು ಹುಟ್ಟಿದ ತಕ್ಷಣ ಬಜೆಯನ್ನು ಒಂದು ಹನಿ ಜೇನಿನಲ್ಲಿ ಅರೆದು ಮಗುವಿನ ನಾಲಗೆಗೆ ಮುಟ್ಟಿಸುವುದು ಕ್ರಮ.

ಸೂತಕ : ಜನನ ಮರಣ ಋತು ಶಾಂತಿ ಸೂತಕಗಳು 16 ದಿನ ಆಗಿರುತ್ತದೆ.

ಸೂತಕದ ದಿನಗಳಲ್ಲಿ ಮನೆಯ ದೇವರಿಗೆ ದೀಪ ಇಡುವಂತಿಲ್ಲ.

ಅಮೆ : ಹಿಂದಿನ ಕಾಲದಿಂದಲೂ 3ರ ಅಮೆ, 5ರ ಅಮೆ, 7ರ ಅಮೆಯೆಂದು ಶುದ್ದಿ ಕ್ರಿಯೆಯನ್ನು ಆಚರಿಸುತ್ತಿದ್ದರು. ಈ ಪ್ರಕಾರ ಮನೆಯನ್ನು ಆ ದಿನ ಸ್ವಚ್ಛ ಮಾಡುತ್ತಾರೆ. ನಿಗದಿಪಡಿಸಿದ ದಿನ ಊರ ಮಡಿವಾಳಗಿತ್ತಿ ಮನೆಗೆ ಬಂದು ಸ್ನಾನದ ನಂತರ ಬಾಣಂತಿಗೆ ಪುಣ್ಯಾರ್ಚನೆಯನ್ನು ಹಾಕಿ ಮನೆಯ ಪ್ರತಿ ಕೋಣೆಗೆ, ಬಚ್ಚಲು ಮನೆಗೆ, ಬಾವಿಗೆ ಕೂಡ ಹಾಕಿ ಮನೆ ಮಂದಿಗೆಲ್ಲ ಸಂಪ್ರೋಕ್ಷಣೆ ಆದ ಮೇಲೆ ತುಳಸಿ ಕಟ್ಟೆಯಲ್ಲಿಡುತ್ತಾರೆ. (ಕುಟುಂಬದವರು ಬೇಕಾದರೆ ಅಲ್ಲಿಂದ ಕೊಂಡು ಹೋಗಬಹುದು).

ಪೂರ್ವ ಪದ್ಧತಿ ಪ್ರಕಾರ ಮಗುವನ್ನು ಅಮೆ ದಿನದವರೆಗೆ ಹಾಳೆಯಲ್ಲಿ ಮಲಗಿಸಲಾಗುತ್ತಿತ್ತು.ಅಮೆ ದಿನದಿಂದ ಚಾಪೆಯಲ್ಲಿ ಮಗುವನ್ನು ಮಲಗಿಸುವುದು ರೂಢಿ. ಮಗುವನ್ನು ಸ್ನಾನಮಾಡುವ ಮೊದಲು ಎಣ್ಣೆ ತಿಕ್ಕಿ ಚಕ್ಕಳ ( ಜಿಂಕೆ ಅಥವಾ ಕಾಡುಕುರಿ ಚರ್ಮ)ದಲ್ಲಿ ಅಥವಾ ಒಲಿಯ ಸಣ್ಣ ಚಾಪೆಯಲ್ಲಿ ಮಲಗಿಸುತ್ತಿದ್ದರು. ಅನಂತರ  ಸ್ನಾನಮಾಡಿಸುವುದು ವಾಡಿಕೆ. ಅಮೆ ದಿನ ನರೆಹೊರೆಯ ಮನೆಯವರಿಗೆಲ್ಲ ಆಮಂತ್ರಿಸುವುದು ಕಮ ನೆರೆಹೊರೆಯವರು ಬರುವಾಗ 1 ಕುಡ್ಲೆ ಎಣ್ಣೆ ತರುವುದು ವಾಡಿಕೆಯಾಗಿತ್ತು. (ಬರಿ ಕೈಯಲ್ಲಿ ಬರುವ ಬದಲು ಇದೊಂದು ಸಂಪ್ರದಾಯ). 

ಅಮೆ ಕ್ರಮ : (3, 5 ಅಥವಾ 7ನೇ ದಿನಗಳಲ್ಲಿ ಮಾಡಬಹುದು) ಮಡಿವಾಳಗಿತ್ತಿಗೆ ಹೇಳಿಕೆ ಕೊಡಬೇಕು. ಮಡಿವಾಳಗಿತ್ತಿ ಬೆಳಿಗ್ಗೆ ಬಂದು ಶುದ್ಧಿ ಕ್ರಿಯೆಯನ್ನು ಆರಂಭಿಸಬೇಕು. ಹತ್ತಿರದ ದೇವಸ್ಥಾನದಿಂದ ಕುಟುಂಬದಲ್ಲದವರು ಪುಣ್ಯಾರ್ಚನೆ ತರಬೇಕು. ಮಡಿವಾಳಗಿತ್ತಿ ತಾಯಿ ಮತ್ತು ಮಗುವನ್ನು ಸ್ನಾನ ಮಾಡಿಸಿ ನಡುಮನೆಯಲ್ಲಿ ದೀಪ ಹಚ್ಚಿ ಗಣಪತಿಗೆ ಇಟ್ಟು, ಮಗುವನ್ನು ತಾಯಿ ಮಡಿಲಲ್ಲಿ ಮಲಗಿಸಿ (ಪೂರ್ವಾಭಿಮುಖವಾಗಿ) ಸೋದರ ಮಾವನೊಂದಿಗೆ (ಮಗುವಿನ ತಾಯಿಯ ಅಣ್ಣ ಅಥವಾ ತಮ್ಮ) ಪಟ್ಟೆನೂಲು ಕಟ್ಟುತ್ತೇನೆ ಎಂದು ಕೇಳಿಕೊಂಡ ಬಳಿಕ ಪಟ್ಟೆನೂಲನ್ನು ಉಡಿದಾರವಾಗಿ ಸೊಂಟಕ್ಕೆ ಕಟ್ಟುವಳು. ನಂತರ ಮಧ್ಯಾಹ್ನ ಬಂದವರಿಗೆ ಬೋಜನ ವ್ಯವಸ್ಥೆ ಮಾಡಬೇಕು (ಸಿಹಿಯೂಟ)

 ತೊಟ್ಟಿಲಿಗೆ ಹಾಕುವ ಕ್ರಮ : (ನಾಮಕರಣ, ಜೋಗುಳ ಹಾಡುಗಳು) : ಪೂರ್ವ ಪಶ್ಚಿಮವಾಗಿತೊಟ್ಟಿಲನ್ನು ಕಟ್ಟಿರಬೇಕು. ಕಿನ್ನೆರ್ ಬಳ್ಳಿಯನ್ನು ತೊಟ್ಟಿಲು ಸುತ್ತ ಸುತ್ತಿರಬೇಕು. ಹರಿದ ‌ಮೀನಿನ ಬಲೆಯನ್ನು ತೊಟ್ಟಿಲು ಸುತ್ತ ಕಟ್ಟುವುದು ವಾಡಿಕೆ. ಹೂವಿನಿಂದ ಸಿಂಗರಿಸಬಹುದು. 16ನೇ ದಿನದಲ್ಲಿ ಮಗುವನ್ನು ತೊಟ್ಟಿಲು ಹಾಕುವ ಸಂಪ್ರದಾಯ ಮಾಡಬೇಕು. ಮಣೆ ಮೇಲೆ ದೀಪ ಹಚ್ಚಿಡಬೇಕು. ಹಾಲು ಹಾಕಿದ ಅನ್ನವನ್ನು ಅರೆದು ಕೊಡಿ ಬಾಳೆಲೆಯಲ್ಲಿಡಬೇಕು. ಚಿನ್ನದ ಉಂಗುರವನ್ನು ಬಳಸಿ ಅನ್ನಪ್ರಾಶನ ಮಾಡಿಸುವರು (ಈ ದಿನಕ್ಕೆ ಜ್ಯೋತಿಷ್ಯ ಕೇಳುವ ಅಗತ್ಯವಿಲ್ಲ). 16ರ ದಿನ ಮಾಡಲು ಸಾಧ್ಯವಾಗದೇ ಇದ್ದಾಗ ಜ್ಯೋತಿಷ್ಯರಲ್ಲಿ ದಿನ ನಿಶ್ಚಯಿಸಿ ನಾಮಕರಣ ಮಾಡುತ್ತಾರೆ. ಮಗುವಿನ ಜನನ ನಕ್ಷತ್ರ ಹೊಂದಿಕೆಯಾಗುವ ಹೆಸರುಗಳನ್ನಿಡುವುದು. ನೆಂಟರಿಷ್ಟರಿಗೆ ಊರ ಬಂಧುಗಳಿಗೆ ಹೇಳಿಕೆ ಕೊಡಬೇಕು. ಆ ದಿನ ಕೂಡ ಪುಣ್ಯಾರ್ಚನೆಯನ್ನು ದೇವಸ್ಥಾನದಿಂದ ತರಬೇಕು. ಆ ದಿನ ನಾಮಕರಣ ಮಾಡಿದ ಮೇಲೆ ಸೋದರಮಾವ ಮಗುವಿಗೆ ಅನ್ನ ಪ್ರಾಶನ ಮಾಡಿ ಸಿಂಗರಿಸಿದ ತೊಟ್ಟಿಲಿಗೆ ಮುತ್ತೈದೆಯರು ಮಗುವನ್ನು ಮಲಗಿಸಬೇಕು. ಮಗುವಿನ ತಂದೆ ಅಥವಾ ತಂದೆಯ ಕಡೆಯವರು ನಾಮಕರಣ ಅಥವಾ ಹೆಸರಿಡಬೇಕು. ಮುತ್ತೈದೆಯರು ಮಗುವನ್ನು ತೊಟ್ಟಿಲಲ್ಲಿ ಹಾಕುವಾಗ ಜೋಗುಳ ಹಾಡಬೇಕು. ಸಿಹಿ ತಿಂಡಿ ಹಂಚಬೇಕು. ಬಳಗದವರು ಉಡುಗೊರೆ ಕೊಟ್ಟು ಹರಸುವುದು ಕ್ರಮ. ನಂತರ ಭೋಜನ ವ್ಯವಸ್ಥೆಯಿರುತ್ತದೆ. ಹಿಂದಿನ ಕಾಲದಲ್ಲಿ ಗೋಧೂಳಿ ಲಗ್ನದಲ್ಲಿ ಮಗುವಿನ ನಾಮಕರಣ ಮಾಡುತ್ತಿದ್ದರು.

40ನೇ ದಿನದ ಕ್ರಮ : 40ನೇ ದಿನದಲ್ಲಿ ತಾಯಿ ಮತ್ತು ಮಗುವನ್ನು ಎಣ್ಣೆ ಹಾಕಿ ಸ್ನಾನ ಮಾಡಿಸುತ್ತಾರೆ. ತಾಯಿಯ ಸ್ನಾನದ ನಂತರ ಕೊನೆಯಲ್ಲಿ 40 ಚೆಂಬು (ಒರಂಕು, ಒಣಕು ಅಂದರೆ ಗೆರಟೆಯಿಂದ ಮಾಡಿದ ತಂಬಿಗೆಯ ಆಕೃತಿಯ ಪಾತ್ರೆ, ಅದಕ್ಕೆ ಉದ್ದದ ಮರದ ಹಿಡಿಯಿರುತದೆ. ಅಥವಾ ತಾಮ್ರದ ಕೈಯಿರುವ ಚೆಂಬುವಿನಿಂದ ನೀರನ್ನು ರಭಸವಾಗಿ ಬಾಣಂತಿಗೆ ಹಾಕುತ್ತಿದ್ದರು) ನೀರು ಹೊಯ್ಯುವ ಕ್ರಮವಿದೆ. ಅನಂತರ 5 ಎಲೆ 1 ಅಡಿಕೆಯನ್ನು ಬಾಣಂತಿ ಮಂಡೆಯೊಳಗಡೆ ಹಾಕಿ ಕೈ ಮುಗಿದು ಮಂಡೆಯನ್ನು ಕೆಳಗಿಳಿಸಿ ಕವುಚಿ ಹಾಕಬೇಕು  ನಂತರ ಸೀದಾ ಮನೆಯೊಳಗಡೆ ಬಂದು ದೀಪ ಹೊತ್ತಿಸಿ ಕೈ ಮುಗಿದು ಹಿರಿಯರ ಕಾಲು ಹಿಡಿದು ಆಶೀರ್ವಾದ ಪಡೆಯಬೇಕ. 40 ದಿನ ಉಪಚಾರ ಮಾಡಿದ ನೆನಪಿಗಾಗಿ ಬಾಣಂತಿಯನ್ನು ಆರೈಕೆ ಮಾಡಿದ ಹೆಂಗಸಿಗೆ ಉಡುಗೊರೆ ನೀಡಬೇಕು. ತದನಂತರ ಹಟ್ಟಿಗೆ ಹೋಗಿ ಗೋಪೂಜೆ ಸಲ್ಲಿಸಿ ಮನೆಗೆ ಬಂದು ಹಣೆಗೆ ಕುಂಕುಮ ಇಟ್ಟು ಸೀರೆ ಉಡುವುದು. ಅದೇ ದಿನ ದೇವಸ್ಥಾನಕ್ಕೆ ಮಗುವನ್ನು ಕರಕೊಂಡು ಹೋಗಿ ಬರುವುದು ವಾಡಿಕೆ.

ಬಾಣಂತಿ ಬಚ್ಚಲು ಮನೆ : ಹಿಂದಿನ ಪದ್ಧತಿ ಪ್ರಕಾರ ಬಾಣಂತಿಗೆ ಬಚ್ಚಲು ಮನೆಯನ್ನು ಪ್ರತ್ಯೇಕವಾಗಿ ಮಾಡುತ್ತಿದ್ದರು. ಬಾಣಂತಿಯ ಬಚ್ಚಲು ಮನೆಗೆ ಇತರರು ಹೋಗುವಂತಿಲ್ಲ. ಬಚ್ಚಲು ಮನೆಗೆ ಬೈನೆಗಿಡದ ಸೋಗೆ, ಕಾಸರಕನ ಗೆಲ್ಲು, ನೆಕ್ಕಿ ಗೆಲ್ಲುಗಳನ್ನು ಸಿಕ್ಕಿಸಿ ಅದನ್ನು ಬಂದೋಬಸ್ತು ಮಾಡುತ್ತಾರೆ. (ದುಷ್ಟ ಶಕ್ತಿಗಳು ಬಾರದ ಹಾಗೆ).

ಮಗುವಿಗೆ ಕಿವಿಚುಚ್ಚುವ ಕ್ರಮ : 16ನೇ ದಿನದಿಂದ 5 ವರ್ಷದ ಒಳಗೆ ಮಗುವಿಗೆ ಕಿವಿ ಚುಚ್ಚುವುದು ಮಾಡುತ್ತಿದ್ದರು. ಹೆಣ್ಣು ಮಗುವಿಗೆ 5 ವರ್ಷದಿಂದ ಮೈ ನೆರೆಯುವ ಒಳಗೆ ಮೂಗು ಚುಚ್ಚುವುದು ಮಾಡುತ್ತಿದ್ದರು. (ಮುಹೂರ್ತ ಮತ್ತು ದಿನ ನೋಡಿ)

ಪ್ರಥಮ ಚವಲ (ಕೂದಲು) ತೆಗೆಸುವುದು : ಮುಹೂರ್ತ ಮತ್ತು ದಿನ ನೋಡಿ ಸೋದರ ಮಾವ ಚವಲ ತೆಗೆಯುವುದು. (ದೇವಸ್ಥಾನದಲ್ಲಿ ಕೂಡ ಮಾಡಬಹುದು)

ಮಗುವಿನ ತೊಟ್ಟಿಲು ಕಳುಹಿಸುವ ಕ್ರಮ : ನಿಗದಿಪಡಿಸಿದ ದಿನದಂದು ತವರು ಮನೆಯಿಂದ ಗಂಡನ ಮನೆಗೆ ತಾಯಿ ಮಗುವನ್ನು ಕಳುಹಿಸಿ ಕೊಡುವುದು ಸಂಪ್ರದಾಯ, ಹಿಂದಿನ ದಿನ ರಾತ್ರಿ ಗುರು ಕಾರಣರಿಗೆ ಅಗೇಲು ಬಳಸುವ ಕ್ರಮ. ತಾಯಿ ಹಾಗೂ ಮಗುವಿನ ಬಗ್ಗೆ ಪ್ರಾರ್ಥನೆ ಮಾಡಿ ಗುರುಕಾರಣರ ಆಶೀರ್ವಾದ ಪಡೆದು ಮಾರನೇ ದಿನ ಬೆಳಗ್ಗೆ ದೇವರ ದೀಪ ಹಚ್ಚಿ ಕೈಮುಗಿದು ಗುರು ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ ತೊಟ್ಟಿಲು ಮತ್ತು ಮಗುವನ್ನು ತವರು ಮನೆಯ ಹಿರಿಯರು ಗಂಡನ ಮನೆಯವರಿಗೆ ಒಪ್ಪಿಸುತ್ತಾರೆ.(ತೊಟ್ಟಿಲು ತೆಗೆದುಕೊಂಡು ಹೋಗುವಾಗ ಮಧ್ಯ ದಾರಿಯಲ್ಲಿ ಚೂರಿಮುಳ್ಳು, ಕಲ್ಲು ಇಟ್ಟು ಬಿಡಬೇಕು. ತವರು ಮನೆಯ ಭೂತ ಪ್ರೇತಗಳು ಜೊತೆಯಲ್ಲಿ ಬಾರದ ಹಾಗೆ.)
ಗಂಡನ ಮನೆಯ ಕ್ರಮ : ಗಂಡನ ಮನೆಗೆ ಬಂದ ತಾಯಿ ಹಾಗೂ ಮಗುವನ್ನು ಮುತ್ತೈದೆಯರು ಆರತಿ ಎತ್ತಿ ದೃಷ್ಟಿ ತೆಗೆದು ಕುರ್ದಿ ನೀರನ್ನು ಕಾಲಿಗೆ ಹೊಯ್ದು ನಂತರ ಶುದ್ಧ ನೀರಿನಿಂದ ಕಾಲು ತೊಳೆದು ಮನೆಯ ಒಳಗೆ ಕರಕೊಂಡು ಬರಬೇಕು. ನಡುಮನೆಯಲ್ಲಿ ಹಚ್ಚಿಟ್ಟ ದೀಪಕ್ಕೆ ಕೈ ಮುಗಿದು ಹಾಸಿದ ಒಲಿ ಚಾಪೆಯಲ್ಲಿ ಕುಳ್ಳಿರಿಸಿ (ಕನ್ನಿ ಕಂಬದ ಮನೆಯಲ್ಲಿ ಕಂಬದ ಎಡಭಾಗದಲ್ಲಿ ಅಥವಾ ಸೂಕ್ತ ಜಾಗದಲ್ಲಿ) ತಾಯಿ ಮಡಿಲಲ್ಲಿ ಮಗುವನ್ನು ಮಲಗಿಸಿ ತಾಯಿಗೆ ಕುಡಿಯಲು ಹಾಲು ಕೊಡಬೇಕು. ಆ ವೇಳೆಗೆ ಕೋಣೆಯಲ್ಲಿ ತೊಟ್ಟಿಲನ್ನು ಶಾಸ್ರೋಕ್ತವಾಗಿ ಕಟ್ಟುವುದು. ತಾಯಿಯ ಮಡಿಲಲ್ಲಿ ಮಲಗಿಸಿದ ಮಗುವನ್ನು ಮನೆಯ ಹಿರಿಯ ಮುತ್ತೈದೆಯರು ತೊಟ್ಟಿಲಲ್ಲಿ ಮಲಗಿಸುವರು.



No comments:

Post a Comment