ನರಕ ಚತುರ್ದಶಿ:
ಆಶ್ವಯುಜ ಮಾಸದ ಅಮಾವಾಸ್ಯೆಯ ಮೊದಲ ದಿನ ದೀಪಾವಳಿ ಹಬ್ಬ ಆರಂಭವಾಗುತ್ತದೆ. ಅಂದು ನರಕ ಚತುರ್ದಶಿ ದಿನ. ಬಿಸಿ ನೀರ ಹಂಡೆಯನ್ನು ತೊಳೆದು ಅದರ ಮೇಲೆ ಚಿತ್ತಾರ ಬಿಡಿಸಿ ನೀರು ತುಂಬಿಸಿಡಬೇಕು. ಮರುದಿನ ಮುಂಜಾನೆ ಎದ್ದು ನೀರು ಬಿಸಿ ಮಾಡಿ ಮನೆ ಮಂದಿಯೆಲ್ಲಾ ತಲೆಗೆ ಮೈಗೆ ಎಣ್ಣೆ ಹಾಕಿ ಸ್ಥಾನ ಮಾಡಬೇಕು. ನಂತರ ಬಾಳೆಹಣ್ಣು ರಸಾಯನ ಮತ್ತು ಹುಳಿ ದೋಸೆ ತಯಾರಿಸಿ ತಿನ್ನುತ್ತಾರೆ.
ಮನೆಯಲ್ಲಿನ ಕೃಷಿ ಸಾಮಾಗ್ರಿಗಳನ್ನೆಲ್ಲಾ ತೊಳೆದು ಶುದ್ಧಗೊಳಿಸಿ ಮನೆಯಂಗಳದ ನಿರ್ದಿಷ್ಟ ಸ್ಥಳದಲ್ಲಿ ಓರಣವಾಗಿ ಜೋಡಿಸಿಡುತ್ತಾರೆ. ದನಗಳ ಹಟ್ಟಿ, ತುಳಸಿಕಟ್ಟೆ, ಅಂಗಳದ ಕಡೆಯೆಲ್ಲಾ ಗುಡಿಸಿ ಸ್ವಚ್ಛಗೊಳಿಸಬೇಕು.
ಅಮಾವಾಸ್ಯೆಯ ದಿನ ಬೆಳಿಗ್ಗೆ ಎದ್ದು ಬಾಳೆಹಣ್ಣು ರಸಾಯನದೊಂದಿಗೆ ಹುಳಿ ದೋಸೆ ತಿಂದು ಮನೆಯ ಯಜಮಾನ ಮತ್ತು ಇತರರು ಹಾಲೆಮರದ (ಪಾಲೆಮರ) 3 ಕಂಬಗಳನ್ನು ಮತ್ತು ಅದರೊಟ್ಟಿಗೆ 2-3 ಸಣ್ಣ ಸಣ್ಣ ಕಂಬಗಳನ್ನು ಕಡಿದು ತರುತ್ತಾರೆ.
ಅಮಾವಾಸ್ಯೆ ರಾತ್ರಿ ಮನೆಯ ಯಜಮಾನ ಅಥವಾ ಹಿರಿಯರು ಅಂಗಳದ ನಿರ್ಧಿಷ್ಟ ಸ್ಥಳದಲ್ಲಿ (ಅಥವಾ ತುಳಸಿ ಕಟ್ಟೆಯ ಹತ್ತಿರ ಅಥವಾ ಕೆಲವು ಭಾಗದಲ್ಲಿ ದೈವಸ್ಥಾನದ ಎದುರು ಹಾಕುತ್ತಾರೆ.) 3 ಗುಂಡಿಗಳನ್ನು ತೆಗೆದು ತಂದಿಟ್ಟ ಹಾಲೆಮರದ 3 ಕಂಬಗಳನ್ನು ಹಾಕಬೇಕು. ಕೆಲವು ಭಾಗಗಳಲ್ಲಿ 1 ಅಥವಾ 2 ಕಂಬಗಳನ್ನು ಹಾಕಿ ಶ್ರಂಗರಿಸುತ್ತಾರೆ. ನಂತರ ಸ್ನಾನ ಮಾಡಿ ಮರದ ತುದಿಭಾಗದಲ್ಲಿ ದೀಪ ಇಟ್ಟು ನೆನೆಬತ್ತಿ ಹಚ್ಚಬೇಕು. 1 ವೀಳ್ಯದೆಲೆ, 1 ಅಡಿಕೆ ಹೋಳು ಇಡಬೇಕು. ನೆನೆಬತ್ತಿ ಆರತಿ ಬಾಳೆಲೆ ತುದಿಯಲ್ಲಿಡಬೇಕು ಹಾಗೂ ಕೈಮುಗಿಯಬೇಕು. ಮಾರನೆ ದಿನ ಬೆಳಗ್ಗೆ ಅಂದರೆ ಪಾಡ್ಯದ ದಿನ ಬಾಳೆಲೆ ತೆಗೆದು ಫಲಬರುವ ಮರದ ಬುಡಕ್ಕೆ ಹಾಕಿ ಸ್ಥಳ ಸ್ವಚ್ಛಮಾಡಬೇಕು.
ಪಾಡ್ಯ :
ಪಾಡ್ಯದಿನ ಬೆಳಿಗ್ಗೆ ಅಥವಾ ಮಧ್ಯಾಹ್ನದ ಒಳಗೆ ಧರ್ಮದೈವ ಮತ್ತು ಇತರ ದೈವಗಳ ತಂಬಿಲ ನಡೆಯುತ್ತದೆ. ಆ ದಿನ ಬೆಳಿಗ್ಗೆ ದೇವಸ್ಥಾನದಿಂದ ಪುಣ್ಯಾರ್ಚನೆ ತಂದು ದೈವಸ್ಥಾನ ಮತ್ತು ತರವಾಡು ಮನೆಗಳಿಗೆ ಹಾಕಿ ಶುದ್ಧ ಮಾಡಬೇಕು. ಕುಟುಂಬದವರೆಲ್ಲಾ ಸೇರಿದ ಮೇಲೆ ದೈವಸ್ಥಾನದಲ್ಲಿ ಸ್ವಸ್ತಿಕ ಇಟ್ಟು ಪ್ರತಿ ದೈವಗಳಿಗೆ ಅಗಲು ಬಡಿಸುವ ಕ್ರಮವಿದೆ. ತಂಬಿಲದ ಬಾಬು 8 ದಿನ ಮೊದಲು ಗೊನೆ ಕಡಿಯುವ ಕ್ರಮವಿದೆ. ಅಗಲು ಬಡಿಸಲು ಅವಲಕ್ಕಿ, ಹೊದಳು (ಅರಳು), ಬಾಳೆಹಣ್ಣು ಉಪಯೋಗಿಸಬೇಕು. ತೆಂಗಿನಕಾಯಿ ಒಡೆಯುವ ಕ್ರಮವಿದೆ. ಇದಾದನಂತರ ತಿಳಿದವರು ಪ್ರಾರ್ಥನೆ ಮಾಡಿಕೊಳ್ಳಬೇಕು. ತರವಾಡು ಮನೆಗಳಲ್ಲಿ ಲಕ್ಷ್ಮೀಪೂಜೆ ಮಾಡುವ ಕ್ರಮವಿದೆ.
ಗೋಪೂಜೆ :
ಸಂಜೆಯಾಗುತ್ತಿದಂತೆ ದನಕರುಗಳಿಗೆ ಸ್ನಾನಮಾಡಿಸಬೇಕು. ಹಟ್ಟಿಯಲ್ಲಿ ಗೋಪೂಜೆ ಮಾಡಬೇಕು.
ಕ್ರಮ : ಒಂದು ಹರಿವಾಣಕ್ಕೆ ಬೆಳ್ತಿಗೆ ಅಕ್ಕಿ ಹಾಕಿ ಅದರೊಂದಿಗೆ ಸಣ್ಣ ದೀಪ ಹಚ್ಚಿಡಬೇಕು. ತೇದಗಂಧ, 5 ಎಲೆ, 1ಅಡಿಕೆ, ಇಟ್ಟಿರಬೇಕು. ಒಂದು ಬೆಂಡು ಕುಕ್ಕೆಯಲ್ಲಿ ಸಂಗ್ರಹಿಸಿದ ಕಾಡುಹೂಗಳಿಂದ (ಗೋವಿಂದ ಹೂ, ಕುರುಡೂ ಹೂ, ಹಿಂಗಾರ ಇತ್ಯಾದಿ) ಗೋವುಗಳಿಗೆ ಅರ್ಚನೆ ಮಾಡಬೇಕು. ಕುತ್ತಿಗೆಗೆ ಹೂಮಾಲೆ ಹಾಕಬೇಕು. ಅರ್ಚನೆ ಮಾಡುವಾಗ ಪ್ರತಿ ದನಗಳ ಹೆಸರು ಹೇಳಿ ಬಾಳು..... ಬಾಳು.... ಎಂದು ಹೇಳಿ ಕೊನೆಯದಾಗಿ ಕೂ ಹೇಳಿ ಅರ್ಚನೆ ಮಾಡಬೇಕು. ಕೆಲವು ಭಾಗಗಳಲ್ಲಿ ತಡೆಯಲ್ಲಿ (ಗೆರಸೆ) ಬೆಳ್ತಿಗೆ ಅಕ್ಕಿ, ಭತ್ತ, ಅವಲಕ್ಕಿಯನ್ನು 3 ಸಾಲು ಹಾಕಿ 5 ಚಿಬಲಿ ದೀಪ (ಮಣ್ಣಿನ ಚಿಬಲಿ) ಇಟ್ಟು ಗೋವಿಂದ ಹೂ, ಕುರುಡೂ ಹೂ, ಹಿಂಗಾರ ಇಟ್ಟು ಆರತಿ ಮಾಡುತ್ತಾರೆ. ಗಂಧ ಕುಂಕುಮ ಗೋವುಗಳಿಗೆ ಇಟ್ಟು ಹೂ ಮಾಲೆ ಹಾಕುತ್ತಾರೆ. ದನಗಳಿಗೆ ತಿನ್ನಲು ಹಿಟ್ಟು, ಬಾಳೆಹಣ್ಣು ಕೊಡಬೇಕು. ಗೋಪೂಜೆ ಮುಗಿಸಿ ಹೊರ ಬಂದ ಮೇಲೆ ಹಾಲೆ ಮರದ ಸಣ್ಣ ಕೋಲನ್ನು ಗೊಬ್ಬರದ ಮೇಲೆ ಊರಬೇಕು. ಅಲ್ಲಿಗೂ ಅಗೇಲು ಹಾಕಿ ನೆನೆಬತ್ತಿ ಹಚ್ಚಿಡಬೇಕು. (ಗದ್ದೆಗೆ ಕೂಡ ಹಾಲೆಮರದ ಕಂಬ ಹಾಕುವ ಕ್ರಮವಿದೆ)
ಮರದ ಶೃಂಗಾರ :
ಬಲಿಯೇಂದ್ರ ಮರಕ್ಕೆ ಬಿದಿರು ಅಥವಾ ಸಲಾಕೆಗಳನ್ನಿಟ್ಟು ಪೋಣಿಸಿ ಕಟ್ಟಬೇಕು. ಸಲಾಕೆಗಳು ವಿಷಮ ಸಂಖ್ಯೆಯಲ್ಲಿರಬೇಕು. (5 ಅಥವಾ 7) 2 ಉದ್ದವಾದ ಸಲಾಕೆಗಳನ್ನು ಗುಣಿತಾಕಾರ ಬರುವಂತೆ ಕಂಬಗಳಿಗೆ ಕಟ್ಟಬೇಕು. ನಂತರ ಬಲಿಯೇಂದ್ರ ಮರವನ್ನು ಕಾಡು ಹೂಗಳಿಂದ ಅಲಂಕರಿಸುವರು. (ಗೋವಿಂದ ಹೂ, ತುಂಬೆ ಹೂ, ಕುರುಡು ಹೂ, ಅಂಬಳಕಾಯಿ, ಪಾರೆ ಹೂ, ಹಿಂಗಾರ, ಎಕ್ಕೆಹೂ, ಕಾಡುಕೇನೆ ಇತ್ಯಾದಿ) ನಾಯಿ ಕಬ್ಬನ್ನು ಗುಣಿತಾಕಾರದಲ್ಲಿ ಕಟ್ಟಿರುವ ಸಲಾಕೆಯ 4 ಮೂಲೆಗಳಿಗೂ ಚುಚ್ಚಿರಬೇಕು. ಚೆಂಡು ಹೂ, ಮಲ್ಲಿಗೆ ಹೂ ಗಳನ್ನು ಕೂಡ ಇಟ್ಟು ಮರವನ್ನು
ಶೃಂಗರಿಸಬೇಕು. ಮರದ ಮೇಲೆ ಒಂದು ಕೊಡೆಯನ್ನು ಕಟ್ಟಬೇಕು. ಕೊಡೆಯ ಪ್ರತೀ ಕಡ್ಡಿಗೆ ಒಂದು ವೀಳ್ಯದೆಲೆ, 1 ಅಡಿಕೆಯನ್ನು ನೂಲಿನ ಸಹಾಯದಿಂದ ಪೋಣಿಸಬೇಕು. ಆಗೇಲು ಬಡಿಸಲು ಮರದಿಂದ ಒಂದು ಅಡಿಯಷ್ಟು ಎದುರು 2 ಸಣ್ಣ ಕಂಬ ಹಾಕಿ ಅದರ ಮೇಲೆ ಹಲಗೆ ಇಡಬೇಕು. (ಅಗಲು ನೆಲದಲ್ಲಿ ಕೂಡ ಹಾಕಬಹುದು) ಕೃಷಿ ಸಾಮಾಗ್ರಿ ಹಾಗೂ ಕೋವಿಯನ್ನು ಕೂಡ ತಂದಿಡಬೇಕು. ಹಲಗೆಯ ಮೇಲೆ ಅಥವಾ ನೆಲದಲ್ಲಿ ತುದಿ ಬಾಳೆಲೆಯಲ್ಲಿ 3 ಅಗೇಲು ಹಾಕಬೇಕು. ಅದರ ಮೇಲೆ ಅವಲಕ್ಕಿ, ಹೊದುಳು ಬಡಿಸಬೇಕು. ಬಾಳೆ ಹಣ್ಣು ಸುಲಿದು ಇಡಬೇಕು. 1 ವೀಳ್ಯದೆಲೆ, 1 ಅಡಿಕೆ ಹೋಳು ಬಾಳೆಲೆ ತುದಿಯಲ್ಲಿಡಬೇಕು. ಅದಕ್ಕೆ ತೇದ ಗಂಧ ಹಚ್ಚಬೇಕು.. ಊದುಬತ್ತಿ ಹಚ್ಚಿಡಬೇಕು. 2 ತೆಂಗಿನಕಾಯಿ ಒಡೆದು ಬಲಿಯೇಂದ್ರ ಮರಕ್ಕೆ ಆರತಿ ಮಾಡಬೇಕು. ಕೃಷಿ ಸಾಮಾಗ್ರಿಗಳನ್ನಿಟ್ಟ ಸ್ಥಳದಲ್ಲಿ ಕೂಡ ಒಂದು ಅಗೇಲು ಹಾಕಿ ಅದಕ್ಕೂ ತೆಂಗಿನಕಾಯಿ ಒಡೆದು ಆರತಿ ಮಾಡಬೇಕು. ಕೊನೆಯದಾಗಿ ದೀಪದಾರತಿ ಮಾಡಬೇಕು
ಬಲಿಯೇಂದ್ರ ಪೂಜೆ ಮಾಡುವಾಗ ಹೇಳುವ ಕ್ರಮಗಳು : ಪ್ರತೀಯೊಬ್ಬರಿಗೂ ಅವಲಕ್ಕಿ ಹೊದುಳು ಕೊಡಬೇಕು, ನಂತರ
ಹರ ಹರ ಬಲಿಯೇಂದ್ರ
ಸಿರಿ ಸಿರಿ ಬಲಿಯೇಂದ್ರ
ಕೂ ಬಲಿಯೇಂದ್ರ ಕೂ ಬಲಿಯೇಂದ್ರ
ಈ ಊರ ಕಲಿ ಕೊಂಡು ಪೋ ಬಲೀಂದ್ರ
ಆ ಊರ ಪೊಲಿ ಕೊಂಡು ಬಾ ಬಲೀಂದ್ರ
ಕೂ....... ಕೂ...... ಕೂ.......ಎಂದು ಹೇಳಬೇಕು
ನಂತರ ಎಲ್ಲರಿಗೂ ತೇದ ಗಂಧ ವಿತರಿಸಬೇಕು. ಬರುವ ಹುಣ್ಣಿಮೆ ದಿನ ಹಾಲೆಮರವನ್ನು ಕಿತ್ತು ಹರಿಯುವ ನೀರಿನ ಬದಿಯಲ್ಲಿಡಬೇಕು. ಕೆಲವು ಭಾಗಗಳಲ್ಲಿ 3 ದಿನಗಳ ನಂತರ ಮರ ತೆಗೆಯುತ್ತಾರೆ. ದೀಪಾವಳಿಯಲ್ಲಿ ಸೂತಕ ಬಂದರೆ ಬರುವ ಹುಣ್ಣಿಮೆಗೆ ದೀಪಾವಳಿ ಆಚರಣೆ ಮಾಡಬಹುದು
******************************