Friday, April 11, 2025

ಗೌಡ ಸಂಸ್ಕೃತಿ- ಮದುವೆ(ಚೌಕಿ ವೀಳ್ಯ)

 ಚೌಕಿ ವೀಳ್ಯ


ಚೌಕಿಯಲ್ಲಿ ಕುಳಿತವರೆಲ್ಲ ಗಂಧವನ್ನು ಹಚ್ಚಿಕೊಳ್ಳಬೇಕು. ವರನ ಕಡೆಯ ಊರುಗೌಡರು. ಒಂದು ಹರಿವಾಣದಲ್ಲಿ ಸೂಡಿ ಎಲೆ, 5 ಅಡಿಕೆ ಇಟ್ಟು ವಧುವಿನ ಕಡೆಯ ಊರುಗೌಡರಿಗೆ ಅವರು ಬಂದ ಜಿಲ್ಲೆ, ತಾಲೂಕು, ನಾಡು, ಗ್ರಾಮ ಮತ್ತು ಇಂತವರ ಅನುಮತಿ ಮೇರೆಗೆ ಹುಡುಗನ ಮನೆಯ ಯಜಮಾನನ ಹೆಸರು ಹೇಳುವುದು.. ..ಹುಡುಗಿಯ ಕಡೆಯ ಪೂರ್ಣ ವಿವರ ಮತ್ತು ಯಜಮಾನನ ಹೆಸರು ಹೇಳಿ ಅವರ ಅನುಮತಿ ಮೇರೆಗೆ ವೀಳ್ಯಶಾಸ್ತ್ರ ನಡೆಸುವುದಕ್ಕೆ ಬಂದ ನೆಂಟರು ನಾವು. ನಮ್ಮ ಸಂಸ್ಕೃತಿ, ಪದ್ಧತಿ, ಕಟ್ಟಳೆಗಳಿಗೆ ಸರಿಯಾಗಿ ನಮ್ಮ ಇಂದಿನ ವೀಳ್ಯಶಾಸ್ತ್ರವನ್ನು ಮುಂದಿನ ದಿಬ್ಬಣ, ಮದುವೆ ಕಾಠ್ಯಕ್ರಮವನ್ನೆಲ್ಲಾ ಮನೆಯವರ ಒಪ್ಪಿಗೆ ಮೇರೆಗೆ ಸುಧಾರಿಸಿ ಕೊಡಬೇಕು ಅಂತ ಕೇಳಿಕೊಳ್ಳುತ್ತಾರೆ. ಊರು ಗೌಡರು ಮನೆಯ ಯಜಮಾನರ ಒಪ್ಪಿಗೆ ಪಡೆದು ಕಾರ್ಯಕ್ರಮ ಮುಂದುವರಿಸುತ್ತಾರೆ. ಕುಟುಂಬದ ಸರ್ವರಲ್ಲಿಯೂ, ಸೋದರದವರಲ್ಲಿಯೂ ಒಪ್ಪಿಗೆ ಇದೆಯೋ ಎಂದು ಕೇಳುವರು. ಎಲ್ಲರೂ ಒಪ್ಪಿಗೆ ಸೂಚಿಸುವರು.

1. ಚೌಕಿ ವೀಳ್ಯ ಜೋಡಿಸಿಡುವ ಕ್ರಮ : ವಧುವಿನ ಕಡೆಯವರು ಮಣೆಯ ಮೇಲೆ ಇರಿಸಿದ ಹರಿವಾಣದಲ್ಲಿ-ವರನ ಕಡೆಯವರು ಹರಿವಾಣದ ಸುತ್ತಲೂ ವೀಳ್ಯದ ಎಲೆಯ ಕವಳೆಯ ತುದಿ ಹೊರಗೆ ಬರುವಂತೆ ಇಡಬೇಕು. (ಸಾಮಾನ್ಯವಾಗಿ 5 ಕವಳೆ ಅಥವಾ ಕವಳೆ ವಿಷಮ ಸಂಖ್ಯೆಯಲ್ಲಿರಬೇಕು) ಮಧ್ಯದಲ್ಲಿ ಕವಳೆ ಸಂಖ್ಯೆಯಷ್ಟೆ ಅಡಿಕೆಯಿರಬೇಕು ಹಾಗೂ ಅಡಿಕೆ ಹೋಳು ಹಾಗೂ ಸ್ವಲ್ಪ ಬೆಳ್ತಿಗೆ ಅಕ್ಕಿ ಇರಬೇಕು.

ಚೌಕಿ ವೀಳ್ಯ ಕೊಡುವ ಕ್ರಮ : ವರನ ಕಡೆಯ ಗುರುಮನೆ, ಕಟ್ಟೆಮನೆ, ಸೀಮೆಮನೆ, ಮಾಗಣೆಮನೆ ಊರುಗೌಡರು ಎದ್ದು ನಿಂತು ಗೋತ್ರದ ಹೆಸರಿನ ವರನಿಂದ ಸ್ವಜಾತಿ ಬಾಂಧವರ ಸಮ್ಮುಖದಲ್ಲಿ ಚೌಕಿ ವೀಳ್ಯ ಎತ್ತಿ ಕೊಡುತ್ತೇವೆ ಎಂದು ಹೇಳಿ ವಧುವಿನ ಕಡೆಯ ಊರುಗೌಡರಿಗೆ ಕೊಟ್ಟಾಗ ಅವರು ಕೂಡ ಹಾಗೇನೆ ಎದ್ದು ನಿಂತು ಒಕ್ಕಣೆಯೊಂದಿಗೆ ಸ್ವೀಕಾರ ಮಾಡುತ್ತಾರೆ. (ಪ್ರತಿಯೊಬ್ಬರು ವೀಳ್ಯ ಬದಲಾಯಿಸಿಕೊಳ್ಳುವಾಗ ಇತ್ತಂಡದವರು ತಂಬಿಗೆಯಲ್ಲಿರುವ ನೀರನ್ನು ಮುಟ್ಟಿಕೊಳ್ಳಬೇಕು) ನಂತರ ಇದನ್ನು ಬಳಿಯಲ್ಲಿ ಕುಳಿತವರಿಗೆ ಪ್ರದಕ್ಷಿಣೆ ಬರುವಂತೆ ಕೊಡಬೇಕು. ಎಲ್ಲರೂ ಗೌರವಸೂಚಕವಾಗಿ ನಮಸ್ಕರಿಸಿ ವಧುವಿನ ಕಡೆಯ ಊರುಗೌಡರು ಮಣೆಯ ಮೇಲಿಡುತ್ತಾರೆ.

ಗೌಡ ಸಂಸ್ಕೃತಿ- ಮದುವೆ(ವೀಳ್ಯ ಕೊಡುವ ಕ್ರಮ)

ವೀಳ್ಯ ಕೊಡುವ ಕ್ರಮ :

ಹರಿವಾಣದಲ್ಲಿ ವೀಳ್ಯ ಕೊಡುವಾಗ ವೀಳ್ಯದೆಲೆಯ ತುದಿ ಹಾಗು ಅಡಿಕೆ ತೊಟ್ಟು ತೆಗೆದುಕೊಳ್ಳುವ ಭಾಗಕ್ಕಿರಬೇಕು. ತೆಗೆದುಕೊಂಡ ಮೇಲೆ ಅದರಲ್ಲಿ ವೀಳ್ಯದೆಲೆ ಹಾಗೂ ಅಡಿಕೆ ಹೋಳು ಶಾಸ್ತ್ರಕ್ಕೆ ತೆಗೆದುಕೊಂಡು ಮತ್ತೆ ಅವರು ಕೂಡಾ ತಿರುಗಿಸಿ ಕೊಡಬೇಕು

ವೀಳ್ಯ ಶಾಸ್ತ್ರ ದಿನದ ವೀಳ್ಯಗಳು


2. ದೇವರ ವೀಳ್ಯ

3. ಗುರು ವೀಳ್ಯ

4. ಸಲಾವಳಿ ವೀಳ್ಯ

5. ಮಾತು ಕರಾರು ವೀಳ್ಯ

6. ವೀಳ್ಯ ಶಾಸ್ತ್ರದ ವೀಳ್ಯ

7. ಲಗ್ನ ವೀಳ್ಯ

8. ತಾಯಿ ವೀಳ್ಯ

9 ತಂದೆ ವೀಳ್ಯ

ಪರಿಚಯಾತ್ಮಾಕ ವೀಳ್ಯ:

Thursday, April 10, 2025

ಗೌಡ ಸಂಸ್ಕೃತಿ- ಮದುವೆ( ಊರು ಗೌಡರ((ದಿಬ್ಬಣದ ಮುಖ್ಯಸ್ಥ) ಉಡುಗೆ ತೊಡುಗೆಗಳು)

 ಊರು ಗೌಡರ ಉಡುಗೆ ತೊಡುಗೆಗಳು :

ಬಿಳಿ ಶರ್ಟ್, ಬಿಳಿ ಮುಂಡು, ಬಿಳಿ ಶಾಲು ಧರಿಸಿರಬೇಕು. ಕಾರ್ಯಕ್ರಮ ನಡೆಸಿಕೊಡುವಾಗ ಮುಂಡಾಸು ಕಟ್ಟಿರಲೇಬೇಕು. (ಪ್ರತೀ ಬೈಲಿಗೊಬ್ಬ ಊರುಗೌಡ, ಒತ್ತು ಗೌಡ ಇರುತ್ತಾರೆ. ಊರು ಗೌಡರ ನಂತರ ಅವರ ಮಕ್ಕಳ ಕಾಲಕ್ಕಾಗುವಾಗ ಊರುಗೌಡತ್ತಿಗೆ ಮಾಡಲು ಸಾಧ್ಯವಾಗದ ಪಕ್ಷದಲ್ಲಿ ಸಂಪ್ರದಾಯ ರೀತಿ ರಿವಾಜುಗಳ ಬಗ್ಗೆ ತಿಳಿದವರನ್ನು ಆಯಾ ಊರಿನ ಹಿರಿಯರು ಚರ್ಚಿಸಿ ನೇಮಕ ಮಾಡಬಹುದು.)

ಮದುವೆ ಕಾರ್ಯಕ್ಕೆ ಸಂಬಂದಪಟ್ಟಂತೆ ಊರು ಗೌಡರಿಗೆ ಅವರ ಮನೆಗೆ ಹೋಗಿ ! ಸೂಡಿ ವೀಳ್ಯದೆಲೆ, 5 ಅಡಿಕೆ, ಅಡಿಕೆಹೋಳು ಹರಿವಾಣದಲ್ಲಿ ಇಟ್ಟು ಮದುವೆ ಕಾರ್ಯವನ್ನುಬಂದು ಸುಧಾರಿಸಿಕೊಡಲು ಕೇಳಿಕೊಳ್ಳಬೇಕು.

Wednesday, April 9, 2025

ಗೌಡ ಸಂಸ್ಕೃತಿ- ಮದುವೆ(ವೀಳ್ಯಶಾಸ್ತ್ರ (ವಧುವಿನ ಮನೆಯಲ್ಲಿ))

 ವೀಳ್ಯಶಾಸ್ತ್ರ (ವಧುವಿನ ಮನೆಯಲ್ಲಿ)


ಪರಿಕರಗಳು : ಕಾಲುದೀಪ,ಎಳ್ಳೆಣ್ಣೆ, ನೆಣೆಬತ್ತಿ, ಅಗರಬತ್ತಿ. ಚಾಪೆ 4, ಮಣೆ 2, ತಂಬಿಗೆ ನೀರು, ಹರಿವಾಣ 1, ವೀಳ್ಯದೆಲೆ 5, ಅಡಿಕೆ 1, ಹಿಡಿ ಬೆಳ್ಳಿಗೆ ಅಕ್ಕಿ, ತೇದ ಗಂಧ ಹಾಗೂ ತುಂಬೆ ಹೂ, ತುದಿ ಬಾಳೆಲ, ಉದ್ದಕ್ಕೆ ಒಡೆದ ಸ್ವಲ್ಪ ಅಡಿಕೆಹೋಳು

ಮದುವೆಗೆ ಸುಮಾರು ಒಂದು ವಾರ ಅಥವಾ ಹದಿನೈದು ದಿನಗಳ ಒಳಗೆ ವೀಳ್ಯಶಾಸ್ತ್ರವನ್ನು ಊರು ಗೌಡರ ಗಮನಕ್ಕೆ ತಂದು ನಿಶ್ಚಯ ಮಾಡಿಕೊಳ್ಳಬೇಕು. (ಅನಿವಾರ್ಯ ಕಾರಣಗಳಲ್ಲಿ ಮದರಂಗಿ ಶಾಸ್ತ್ರದ ದಿನ ವೀಳ್ಯಶಾಸ್ತ್ರ ಇಟ್ಟುಕೊಳ್ಳಬಹುದು. ವೀಳ್ಯಶಾಸ್ತ್ರವನ್ನು ಬೆಳಗಿನ ಸಮಯ ಮಾಡುವುದು ಸೂಕ್ತ)

ಉಭಯಸ್ತರು ನಿಶ್ಚಯಿಸಿದ ದಿನ ವಧುವಿನ ಮನೆಯಲ್ಲಿ ವೀಳ್ಯ ಶಾಸ್ತ್ರಕ್ಕೆ ಏರ್ಪಾಡು ಮಾಡಬೇಕು. ವಧುವಿನ ಮನೆಯವರು ಬಂಧು-ಬಾಂಧವರಿಗೆ, ಊರುಗೌಡರಿಗೆ 1 ಸೂಡಿ ವೀಳ್ಯದೆಲೆ, 5 ಅಡಿಕೆ ಹರಿವಾಣದಲ್ಲಿಟ್ಟು ವೀಳ್ಯಶಾಸ್ತ್ರಕ್ಕೆ ಕೇಳಿಕೊಳ್ಳಬೇಕು. ಅದರಂತೆ ವರನ ಕಡೆಯಿಂದಲೂ ಅವರ ಬಂಧು-ಬಾಂಧವರಿಗೆ, ಊರು ಗೌಡರಿಗೆ ವೀಳ್ಯ ಕೊಟ್ಟು ವೀಳ್ಯ ಶಾಸ್ತ್ರಕ್ಕೆ ಬರುವಂತೆ ಹೇಳಬೇಕು. (ವೀಳ್ಯಶಾಸ್ತ್ರಕ್ಕೆ ಹುಡುಗ ಹೋಗುವ ಕ್ರಮವಿರಲಿಲ್ಲ)

ವೀಳ್ಯಶಾಸ್ತ್ರದ ದಿನ ಸೋದರಮಾವ, ಊರು ಗೌಡರು, ಕುಟುಂಬಸ್ಥರು, ನೆಂಟರು ಇವರೆಲ್ಲ ಸಮಯಕ್ಕೆ ಮುಂಚಿತವಾಗಿ ಬಂದು ವರನ ಮನೆಯಲ್ಲಿ ಸೇರುತ್ತಾರೆ. ವೀಳ್ಯ ಕಟ್ಟಲು ಒಂದು ಕೈ ಚೀಲದಲ್ಲಿ ವೀಳ್ಯದೆಲೆ ಅದಕ್ಕೆ ನೀಟವಾಗಿ ಒಡೆದ ಅಡಕೆ ಹೋಳು, 2 ಹರಿವಾಣಗಳಿರಬೇಕು. ಹೊರಡುವ ಮೊದಲು ಮನೆಯ ಹಿರಿಯರು ದೇವರಿಗೆ ದೀಪ ಹಚ್ಚಿ ಕೈ ಮುಗಿದು ಮನೆಯಿಂದ ಹೊರಡಬೇಕು.

ವಧುವಿನ ಮನೆಯಲ್ಲಿ ಆಗಮಿಸಿದ ನೆಂಟರಿಗೆ ಕೈಕಾಲು ಮುಖ ತೊಳೆಯಲು ನೀರುಕೊಟ್ಟು ಸತ್ಕರಿಸುತ್ತಾರೆ. ನಂತರ ವೀಳ್ಯ ಶಾಸ್ತ್ರಕ್ಕೆ ತಯಾರಿ ಮಾಡುತ್ತಾರೆ. ವಧುವಿನ ಕಡೆಯ ಊರುಗೌಡರ ಉಸ್ತುವಾರಿಯಲ್ಲಿ ಚೌಕಿ ಹಾಸಿ (ಚೌಕಾಕಾರವಾಗಿ ನಾಲ್ಕು ದಿಕ್ಕಿನಿಂದ ನಾಲ್ಕು ಚಾಪೆ ಹಾಸುವುದು) ಮಧ್ಯೆ 2 ಮಣೆ, ತಂಬಿಗೆ ನೀರು, 1 ಹರಿವಾಣದಲ್ಲಿ 5 ವೀಳ್ಯದೆಲೆ 1 ಅಡಿಕೆ ಒಂದು ಹಿಡಿ ಬೆಳ್ತಿಗೆ ಅಕ್ಕಿ ಹಾಕಿಡಬೇಕು. ಕಾಲುದೀಪವನ್ನು ಪೂರ್ವಾಭಿಮುಖವಾಗಿ ಒಂದು ಹಿಡಿ ಬೆಳಗಿಸಬೇಕು. ತೇದ ಗಂಧ ಮತ್ತು ತುಂಬೆ ಹೂ ಕೊಡಿ (ತುದಿ) ಬಾಳೆ ಎಲೆಯಲ್ಲಿಡಬೇಕು. ಇದಾದ ನಂತರ ವಧುವಿನ ಮನೆಯ ಹಿರಿಯರು ಮತ್ತು ಊರುಗೌಡರು ತಂಬಿಗೆ ನೀರು ಹಿಡಿದು ವರನ ಕಡೆಯವರನ್ನು ಚೌಕಿಗೆ ಕುಳಿತುಕೊಳ್ಳಲು ಆಹ್ವಾನಿಸಿ ವಧುವಿನ ಕಡೆಯ ಊರು ಗೌಡರ ಸಮೇತ ಪೂರ್ವಾಭಿಮುಖವಾಗಿ ಕುಳಿತುಕೊಳ್ಳುವರು. ವರನ ಕಡೆಯ ಊರುಗೌಡರು ಚೌಕಿ ಬಳಿ ಬಂದು ಸೀಮೆ, ಗ್ರಾಮ ಮತ್ತು ಊರು, ಮನೆ ಹಾಗೂ ಮನೆ ಯಜಮಾನನ ಹೆಸರು ಹೇಳಿ ಇತ್ತಂಡದವರ ಒಪ್ಪಿಗೆ ಮೇರೆಗೆ ನಾವು ವೀಳ್ಯಶಾಸ್ತ್ರಕ್ಕಾಗಿ ಬಂದಿರುತ್ತೇವೆ, ಚೌಕಿಗೆ ಬರಲು ಮತ್ತು ಕುಳಿತುಕೊಳ್ಳಲು ಅನುಮತಿ ಕೊಡಿ ಎಂದು ಕೇಳುತ್ತಾರೆ. ಒಪ್ಪಿಗೆ ಪಡೆದು ತಂಬಿಗೆ ನೀರು ಮುಟ್ಟಿ ದೀಪಕ್ಕೆ ನಮಸ್ಕರಿಸಿ ಪಶ್ಚಿಮ ಭಾಗಕ್ಕೆ ಮುಖ ಮಾಡಿ ಕುಳಿತುಕೊಳ್ಳುವರು. ಉಳಿದವರು ಅವರವರ ಭಾಗಕ್ಕೆ ತಕ್ಕಂತೆ ಚೌಕಿ ಸುತ್ತ ಕುಳಿತುಕೊಳ್ಳುವರು. (ಉಭಯ ಕಡೆಗಳಿಂದ ಕನಿಷ್ಠ 5 ಜನರಿರಬೇಕು; ಮತ್ತು ಎಲ್ಲರೂ ತಲೆಗೆ ರುಮಾಲು ಸುತ್ತಬೇಕು. ತೇದ ಗಂಧವನ್ನು ಹಾಕಿಕೊಳ್ಳಬೇಕು).

1) ಕುಟುಂಬದ ಯಜಮಾನ, 2) ಸೋದರ ಮಾವ, 3) ಊರುಗೌಡರು 4) ಒತ್ತುಗೌಡರು ಇಲ್ಲದ ಪಕ್ಷದಲ್ಲಿ ಯಾರಾದರು. 5) ಊರಿನವರು. 

Thursday, April 3, 2025

ಗೌಡ ಸಂಸ್ಕೃತಿ-ದೀಪಾವಳಿ ಹಬ್ಬದ ಆಚರಣೆಗಳು

 ನರಕ ಚತುರ್ದಶಿ:

ಆಶ್ವಯುಜ ಮಾಸದ ಅಮಾವಾಸ್ಯೆಯ ಮೊದಲ ದಿನ ದೀಪಾವಳಿ ಹಬ್ಬ ಆರಂಭವಾಗುತ್ತದೆ. ಅಂದು ನರಕ ಚತುರ್ದಶಿ ದಿನ. ಬಿಸಿ ನೀರ ಹಂಡೆಯನ್ನು ತೊಳೆದು ಅದರ ಮೇಲೆ ಚಿತ್ತಾರ ಬಿಡಿಸಿ ನೀರು ತುಂಬಿಸಿಡಬೇಕು. ಮರುದಿನ ಮುಂಜಾನೆ ಎದ್ದು ನೀರು ಬಿಸಿ ಮಾಡಿ ಮನೆ ಮಂದಿಯೆಲ್ಲಾ ತಲೆಗೆ ಮೈಗೆ ಎಣ್ಣೆ ಹಾಕಿ ಸ್ಥಾನ ಮಾಡಬೇಕು. ನಂತರ ಬಾಳೆಹಣ್ಣು ರಸಾಯನ ಮತ್ತು ಹುಳಿ ದೋಸೆ ತಯಾರಿಸಿ ತಿನ್ನುತ್ತಾರೆ.

ಮನೆಯಲ್ಲಿನ ಕೃಷಿ ಸಾಮಾಗ್ರಿಗಳನ್ನೆಲ್ಲಾ ತೊಳೆದು ಶುದ್ಧಗೊಳಿಸಿ ಮನೆಯಂಗಳದ ನಿರ್ದಿಷ್ಟ ಸ್ಥಳದಲ್ಲಿ ಓರಣವಾಗಿ ಜೋಡಿಸಿಡುತ್ತಾರೆ. ದನಗಳ ಹಟ್ಟಿ, ತುಳಸಿಕಟ್ಟೆ, ಅಂಗಳದ ಕಡೆಯೆಲ್ಲಾ ಗುಡಿಸಿ ಸ್ವಚ್ಛಗೊಳಿಸಬೇಕು.

ಅಮಾವಾಸ್ಯೆಯ ದಿನ ಬೆಳಿಗ್ಗೆ ಎದ್ದು ಬಾಳೆಹಣ್ಣು ರಸಾಯನದೊಂದಿಗೆ ಹುಳಿ ದೋಸೆ ತಿಂದು ಮನೆಯ ಯಜಮಾನ ಮತ್ತು ಇತರರು ಹಾಲೆಮರದ (ಪಾಲೆಮರ) 3 ಕಂಬಗಳನ್ನು ಮತ್ತು ಅದರೊಟ್ಟಿಗೆ 2-3 ಸಣ್ಣ ಸಣ್ಣ ಕಂಬಗಳನ್ನು ಕಡಿದು ತರುತ್ತಾರೆ.

ಅಮಾವಾಸ್ಯೆ ರಾತ್ರಿ ಮನೆಯ ಯಜಮಾನ ಅಥವಾ ಹಿರಿಯರು ಅಂಗಳದ ನಿರ್ಧಿಷ್ಟ ಸ್ಥಳದಲ್ಲಿ (ಅಥವಾ ತುಳಸಿ ಕಟ್ಟೆಯ ಹತ್ತಿರ ಅಥವಾ ಕೆಲವು ಭಾಗದಲ್ಲಿ ದೈವಸ್ಥಾನದ ಎದುರು ಹಾಕುತ್ತಾರೆ.) 3 ಗುಂಡಿಗಳನ್ನು ತೆಗೆದು ತಂದಿಟ್ಟ ಹಾಲೆಮರದ 3 ಕಂಬಗಳನ್ನು ಹಾಕಬೇಕು. ಕೆಲವು ಭಾಗಗಳಲ್ಲಿ 1 ಅಥವಾ 2 ಕಂಬಗಳನ್ನು ಹಾಕಿ ಶ್ರಂಗರಿಸುತ್ತಾರೆ. ನಂತರ ಸ್ನಾನ ಮಾಡಿ ಮರದ ತುದಿಭಾಗದಲ್ಲಿ ದೀಪ ಇಟ್ಟು ನೆನೆಬತ್ತಿ ಹಚ್ಚಬೇಕು. 1 ವೀಳ್ಯದೆಲೆ, 1 ಅಡಿಕೆ ಹೋಳು ಇಡಬೇಕು. ನೆನೆಬತ್ತಿ ಆರತಿ ಬಾಳೆಲೆ ತುದಿಯಲ್ಲಿಡಬೇಕು ಹಾಗೂ ಕೈಮುಗಿಯಬೇಕು. ಮಾರನೆ ದಿನ ಬೆಳಗ್ಗೆ ಅಂದರೆ ಪಾಡ್ಯದ ದಿನ ಬಾಳೆಲೆ ತೆಗೆದು ಫಲಬರುವ ಮರದ ಬುಡಕ್ಕೆ ಹಾಕಿ ಸ್ಥಳ ಸ್ವಚ್ಛಮಾಡಬೇಕು.

ಪಾಡ್ಯ :

ಪಾಡ್ಯದಿನ ಬೆಳಿಗ್ಗೆ ಅಥವಾ ಮಧ್ಯಾಹ್ನದ ಒಳಗೆ ಧರ್ಮದೈವ ಮತ್ತು ಇತರ ದೈವಗಳ ತಂಬಿಲ ನಡೆಯುತ್ತದೆ. ಆ ದಿನ ಬೆಳಿಗ್ಗೆ ದೇವಸ್ಥಾನದಿಂದ ಪುಣ್ಯಾರ್ಚನೆ ತಂದು ದೈವಸ್ಥಾನ ಮತ್ತು ತರವಾಡು ಮನೆಗಳಿಗೆ ಹಾಕಿ ಶುದ್ಧ ಮಾಡಬೇಕು. ಕುಟುಂಬದವರೆಲ್ಲಾ ಸೇರಿದ ಮೇಲೆ ದೈವಸ್ಥಾನದಲ್ಲಿ ಸ್ವಸ್ತಿಕ ಇಟ್ಟು ಪ್ರತಿ ದೈವಗಳಿಗೆ ಅಗಲು ಬಡಿಸುವ ಕ್ರಮವಿದೆ. ತಂಬಿಲದ ಬಾಬು 8 ದಿನ ಮೊದಲು ಗೊನೆ ಕಡಿಯುವ ಕ್ರಮವಿದೆ. ಅಗಲು ಬಡಿಸಲು ಅವಲಕ್ಕಿ, ಹೊದಳು (ಅರಳು), ಬಾಳೆಹಣ್ಣು ಉಪಯೋಗಿಸಬೇಕು. ತೆಂಗಿನಕಾಯಿ ಒಡೆಯುವ ಕ್ರಮವಿದೆ. ಇದಾದನಂತರ ತಿಳಿದವರು ಪ್ರಾರ್ಥನೆ ಮಾಡಿಕೊಳ್ಳಬೇಕು. ತರವಾಡು ಮನೆಗಳಲ್ಲಿ ಲಕ್ಷ್ಮೀಪೂಜೆ ಮಾಡುವ ಕ್ರಮವಿದೆ.

ಗೋಪೂಜೆ :
ಸಂಜೆಯಾಗುತ್ತಿದಂತೆ ದನಕರುಗಳಿಗೆ ಸ್ನಾನಮಾಡಿಸಬೇಕು. ಹಟ್ಟಿಯಲ್ಲಿ ಗೋಪೂಜೆ ಮಾಡಬೇಕು.
ಕ್ರಮ : ಒಂದು ಹರಿವಾಣಕ್ಕೆ ಬೆಳ್ತಿಗೆ ಅಕ್ಕಿ ಹಾಕಿ ಅದರೊಂದಿಗೆ ಸಣ್ಣ ದೀಪ ಹಚ್ಚಿಡಬೇಕು. ತೇದಗಂಧ, 5 ಎಲೆ, 1ಅಡಿಕೆ, ಇಟ್ಟಿರಬೇಕು. ಒಂದು ಬೆಂಡು ಕುಕ್ಕೆಯಲ್ಲಿ ಸಂಗ್ರಹಿಸಿದ ಕಾಡುಹೂಗಳಿಂದ (ಗೋವಿಂದ ಹೂ, ಕುರುಡೂ ಹೂ, ಹಿಂಗಾರ ಇತ್ಯಾದಿ) ಗೋವುಗಳಿಗೆ ಅರ್ಚನೆ ಮಾಡಬೇಕು. ಕುತ್ತಿಗೆಗೆ ಹೂಮಾಲೆ ಹಾಕಬೇಕು. ಅರ್ಚನೆ ಮಾಡುವಾಗ ಪ್ರತಿ ದನಗಳ ಹೆಸರು ಹೇಳಿ ಬಾಳು..... ಬಾಳು.... ಎಂದು ಹೇಳಿ ಕೊನೆಯದಾಗಿ ಕೂ ಹೇಳಿ ಅರ್ಚನೆ ಮಾಡಬೇಕು. ಕೆಲವು ಭಾಗಗಳಲ್ಲಿ ತಡೆಯಲ್ಲಿ (ಗೆರಸೆ) ಬೆಳ್ತಿಗೆ ಅಕ್ಕಿ, ಭತ್ತ, ಅವಲಕ್ಕಿಯನ್ನು 3 ಸಾಲು ಹಾಕಿ 5 ಚಿಬಲಿ ದೀಪ (ಮಣ್ಣಿನ ಚಿಬಲಿ) ಇಟ್ಟು ಗೋವಿಂದ ಹೂ, ಕುರುಡೂ ಹೂ, ಹಿಂಗಾರ ಇಟ್ಟು ಆರತಿ ಮಾಡುತ್ತಾರೆ. ಗಂಧ ಕುಂಕುಮ ಗೋವುಗಳಿಗೆ ಇಟ್ಟು ಹೂ ಮಾಲೆ ಹಾಕುತ್ತಾರೆ. ದನಗಳಿಗೆ ತಿನ್ನಲು ಹಿಟ್ಟು, ಬಾಳೆಹಣ್ಣು ಕೊಡಬೇಕು. ಗೋಪೂಜೆ ಮುಗಿಸಿ ಹೊರ ಬಂದ ಮೇಲೆ ಹಾಲೆ ಮರದ ಸಣ್ಣ ಕೋಲನ್ನು ಗೊಬ್ಬರದ ಮೇಲೆ ಊರಬೇಕು. ಅಲ್ಲಿಗೂ ಅಗೇಲು ಹಾಕಿ ನೆನೆಬತ್ತಿ ಹಚ್ಚಿಡಬೇಕು. (ಗದ್ದೆಗೆ ಕೂಡ ಹಾಲೆಮರದ ಕಂಬ ಹಾಕುವ ಕ್ರಮವಿದೆ)

ಮರದ ಶೃಂಗಾರ :
ಬಲಿಯೇಂದ್ರ ಮರಕ್ಕೆ ಬಿದಿರು ಅಥವಾ ಸಲಾಕೆಗಳನ್ನಿಟ್ಟು ಪೋಣಿಸಿ ಕಟ್ಟಬೇಕು. ಸಲಾಕೆಗಳು ವಿಷಮ ಸಂಖ್ಯೆಯಲ್ಲಿರಬೇಕು. (5 ಅಥವಾ 7) 2 ಉದ್ದವಾದ ಸಲಾಕೆಗಳನ್ನು ಗುಣಿತಾಕಾರ ಬರುವಂತೆ ಕಂಬಗಳಿಗೆ ಕಟ್ಟಬೇಕು. ನಂತರ ಬಲಿಯೇಂದ್ರ ಮರವನ್ನು ಕಾಡು ಹೂಗಳಿಂದ ಅಲಂಕರಿಸುವರು. (ಗೋವಿಂದ ಹೂ, ತುಂಬೆ ಹೂ, ಕುರುಡು ಹೂ, ಅಂಬಳಕಾಯಿ, ಪಾರೆ ಹೂ, ಹಿಂಗಾರ, ಎಕ್ಕೆಹೂ, ಕಾಡುಕೇನೆ ಇತ್ಯಾದಿ) ನಾಯಿ ಕಬ್ಬನ್ನು ಗುಣಿತಾಕಾರದಲ್ಲಿ ಕಟ್ಟಿರುವ ಸಲಾಕೆಯ 4 ಮೂಲೆಗಳಿಗೂ ಚುಚ್ಚಿರಬೇಕು. ಚೆಂಡು ಹೂ, ಮಲ್ಲಿಗೆ ಹೂ ಗಳನ್ನು ಕೂಡ ಇಟ್ಟು ಮರವನ್ನು
ಶೃಂಗರಿಸಬೇಕು. ಮರದ ಮೇಲೆ ಒಂದು ಕೊಡೆಯನ್ನು ಕಟ್ಟಬೇಕು. ಕೊಡೆಯ ಪ್ರತೀ ಕಡ್ಡಿಗೆ ಒಂದು ವೀಳ್ಯದೆಲೆ, 1 ಅಡಿಕೆಯನ್ನು ನೂಲಿನ ಸಹಾಯದಿಂದ ಪೋಣಿಸಬೇಕು. ಆಗೇಲು ಬಡಿಸಲು ಮರದಿಂದ ಒಂದು ಅಡಿಯಷ್ಟು ಎದುರು 2 ಸಣ್ಣ ಕಂಬ ಹಾಕಿ ಅದರ ಮೇಲೆ ಹಲಗೆ ಇಡಬೇಕು. (ಅಗಲು ನೆಲದಲ್ಲಿ ಕೂಡ ಹಾಕಬಹುದು) ಕೃಷಿ ಸಾಮಾಗ್ರಿ ಹಾಗೂ ಕೋವಿಯನ್ನು ಕೂಡ ತಂದಿಡಬೇಕು. ಹಲಗೆಯ ಮೇಲೆ ಅಥವಾ ನೆಲದಲ್ಲಿ ತುದಿ ಬಾಳೆಲೆಯಲ್ಲಿ 3 ಅಗೇಲು ಹಾಕಬೇಕು. ಅದರ ಮೇಲೆ ಅವಲಕ್ಕಿ, ಹೊದುಳು ಬಡಿಸಬೇಕು. ಬಾಳೆ ಹಣ್ಣು ಸುಲಿದು ಇಡಬೇಕು. 1 ವೀಳ್ಯದೆಲೆ, 1 ಅಡಿಕೆ ಹೋಳು ಬಾಳೆಲೆ ತುದಿಯಲ್ಲಿಡಬೇಕು. ಅದಕ್ಕೆ ತೇದ ಗಂಧ ಹಚ್ಚಬೇಕು.. ಊದುಬತ್ತಿ ಹಚ್ಚಿಡಬೇಕು. 2 ತೆಂಗಿನಕಾಯಿ ಒಡೆದು ಬಲಿಯೇಂದ್ರ ಮರಕ್ಕೆ ಆರತಿ ಮಾಡಬೇಕು. ಕೃಷಿ ಸಾಮಾಗ್ರಿಗಳನ್ನಿಟ್ಟ ಸ್ಥಳದಲ್ಲಿ ಕೂಡ ಒಂದು ಅಗೇಲು ಹಾಕಿ ಅದಕ್ಕೂ ತೆಂಗಿನಕಾಯಿ ಒಡೆದು ಆರತಿ ಮಾಡಬೇಕು. ಕೊನೆಯದಾಗಿ ದೀಪದಾರತಿ ಮಾಡಬೇಕು

ಬಲಿಯೇಂದ್ರ ಪೂಜೆ ಮಾಡುವಾಗ ಹೇಳುವ ಕ್ರಮಗಳು : ಪ್ರತೀಯೊಬ್ಬರಿಗೂ ಅವಲಕ್ಕಿ ಹೊದುಳು ಕೊಡಬೇಕು, ನಂತರ 
ಹರ ಹರ ಬಲಿಯೇಂದ್ರ 
ಸಿರಿ ಸಿರಿ ಬಲಿಯೇಂದ್ರ 
ಕೂ ಬಲಿಯೇಂದ್ರ ಕೂ ಬಲಿಯೇಂದ್ರ 
ಈ ಊರ ಕಲಿ ಕೊಂಡು ಪೋ ಬಲೀಂದ್ರ 
ಆ ಊರ ಪೊಲಿ ಕೊಂಡು ಬಾ ಬಲೀಂದ್ರ
ಕೂ....... ಕೂ...... ಕೂ.......ಎಂದು ಹೇಳಬೇಕು

ನಂತರ ಎಲ್ಲರಿಗೂ ತೇದ ಗಂಧ ವಿತರಿಸಬೇಕು. ಬರುವ ಹುಣ್ಣಿಮೆ ದಿನ ಹಾಲೆಮರವನ್ನು ಕಿತ್ತು ಹರಿಯುವ ನೀರಿನ ಬದಿಯಲ್ಲಿಡಬೇಕು. ಕೆಲವು ಭಾಗಗಳಲ್ಲಿ 3 ದಿನಗಳ ನಂತರ ಮರ ತೆಗೆಯುತ್ತಾರೆ. ದೀಪಾವಳಿಯಲ್ಲಿ ಸೂತಕ ಬಂದರೆ ಬರುವ ಹುಣ್ಣಿಮೆಗೆ ದೀಪಾವಳಿ ಆಚರಣೆ ಮಾಡಬಹುದು

                               ******************************



Saturday, February 15, 2025

ಗೌಡ ಸಂಸ್ಕೃತಿ- ಮದುವೆ(ಹುಡುಗಿ ನೋಡುವ ಕ್ರಮ)

 ಹುಡುಗಿ ನೋಡುವ ಕ್ರಮ : 

ಹುಡುಗ/ಹುಡುಗಿ ಪ್ರಾಪ್ತ ವಯಸ್ಸಿಗೆ ಬಂದಾಗ ಹಿರಿಯರು ಅವರಿಗೆ ಮದುವೆ ಮಾಡಲು ಆಲೋಚಿಸುತ್ತಾರೆ. ನೆಂಟರಿಷ್ಟರಲ್ಲಿ ಗಂಡು-ಹೆಣ್ಣನ್ನು ಹುಡುಕಲು ಹಿರಿಯರು ಸೂಚಿಸುತ್ತಾರೆ. ಶಕ್ತ ಮನೆತನದ ಸೂಕ್ತ ಬಳಿಯ ಕನ್ಯ ಗೊತ್ತಾದ ನಂತರ ಹುಡುಗಿ ನೋಡುವ ಶಾಸ್ತ್ರಕ್ಕೆ ದಿನ ನಿಗದಿ ಮಾಡುತ್ತಾರೆ.

ಹಿಂದಿನ ಕಾಲದಲ್ಲಿ ಹುಡುಗಿ ನೋಡಲು ಹುಡುಗ ಹೋಗುವ ಕ್ರಮವಿರಲಿಲ್ಲ. ಇಂದು ಹುಡುಗನೇ ನೋಡಿದ ಹುಡುಗಿಯನ್ನು ನೋಡಲು ಹಿರಿಯರು ಹೋಗುವುದು ಬಂದುಬಿಟ್ಟಿದೆ. ಮೊದಲಿನಿಂದಲೂ ಹುಡುಗ ಹುಡುಗಿಯರನ್ನು ನಿಶ್ಚಯಿಸುವಲ್ಲಿ ಉಭಯ ಕಡೆಯ ಪರಿಚಯಸ್ಥರೊಬ್ಬರು ಮಧ್ಯವರ್ತಿಯಾಗಿ ಸಹಕರಿಸುತ್ತಿದ್ದರು.

ಹುಡುಗಿ ನೋಡುವ ಶಾಸ್ತ್ರ ನಿಗದಿಯಾದ ಶುಭದಿನ ಹೇಳಿಕೆಯಾದ ಪ್ರಕಾರ ಕುಟುಂಬದ ಮತ್ತು ಬಂಧುಗಳಲ್ಲಿ 5ರಿಂದ 7ಜನ ಹಿರಿಯರು ಪೂರ್ವಾಹ್ನದ ಹೊತ್ತಿಗೆ ಹುಡುಗಿ ಮನೆ ತಲುಪಲೇಬೇಕೆನ್ನುವ ಹಿನ್ನೆಲೆಯಲ್ಲಿ ತಲುಪುತ್ತಾರೆ. (ಅಪರಾಹ್ನ ಹುಡುಗಿ ನೋಡುವ ಶಾಸ್ತ್ರ ಮಾಡಬಾರದೆನ್ನುವ ನಂಬಿಕೆ ಇದೆ.) ಹುಡುಗಿ ನೋಡುವ ಶಾಸ್ತ್ರದ ದಿನ ಹುಡುಗಿ ಮನೆಯಲ್ಲೂ ಕುಟುಂಬದ ಹಿರಿಯ ಪ್ರಮುಖರು ಸೇರುತ್ತಾರೆ. ಹುಡುಗನ ಕಡೆಯವರು ಹುಡುಗಿ ಮನೆಗೆ ಬಂದಾಗ ಕೈಕಾಲು ತೊಳೆಯಲು ನೀರು ಕೊಡುವುದು ಪದ್ಧತಿ. ಬಂದ ನೆಂಟರನ್ನು ಮನೆ ಚಾವಡಿಯಲ್ಲಿ ಕುಳ್ಳಿರಿಸಿ ಬೆಲ್ಲ-ನೀರು ಕೊಟ್ಟು ಸತ್ಕರಿಸಬೇಕು. ಮುತ್ತೈದೆಯರಿಗೆ ನೆತ್ತಿಗೆಣ್ಣೆ, ಹಣೆಗೆ ಕುಂಕುಮ, ಮುಡಿಗೆ ಹೂವು ಕೊಡಬೇಕು. ಬಂದ ಹಿರಿಯರೊಬ್ಬರಿಗೆ ಹರಿವಾಣದಲ್ಲಿ ಕವಳೆ ವೀಳ್ಯದೊಂದಿಗೆ ಅಡಿಕೆಗಳನ್ನಿಟ್ಟು ಗೌರವಿಸುವುದು ನಡೆದು ಬಂದ ಸಂಗತಿ. ಉಪಾಹಾರವನ್ನಿತ್ತು ಬಂದ ಹುಡುಗನ ಕಡೆಯವರಿಗೆ ಸತ್ಕರಿಸುವುದು

ಪರಸ್ಪರ ಕುಶಲೋಪರಿ ಬಳಿಕ ಹುಡುಗಿ ನೋಡುವ ಕ್ರಮ ಜರಗುತ್ತದೆ. ಹುಡುಗನ ಕಡೆಯಿಂದ ಬಂದ ಸ್ತ್ರೀಯರು ಮನೆಯೊಳಗೆ ಹೋಗಿ ಹುಡುಗಿಯನ್ನು ನೋಡುತ್ತಾರೆ. ಹುಡುಗಿಯನ್ನು ಮಾತಾಡಿಸುತ್ತಾರೆ. ಇದರ ಹೊರತಾಗಿಯೂ ಬಂದ ನೆಂಟರಿಗೆ ಹುಡುಗಿಯೇ ಬಾಯಾರಿಕೆ ಕೊಡುವ ನೆಪದಲ್ಲಿ ಹುಡುಗಿಯನ್ನು ನೋಡುವ ಶಾಸ್ತ್ರ ಮಾಡುವುದುಂಟು. ಪುರುಷರು ಹುಡುಗಿಯನ್ನು ನೋಡಬೇಕೆನ್ನುವ ಹಿನ್ನೆಲೆಯಲ್ಲಿ ಜೊತೆಗೆ ಹುಡುಗಿಯಲ್ಲಿ ಏನಾದರೂ ಊನ ಇದೆಯಾ ಎಂದು ಪರೀಕ್ಷಿಸುವ ದ್ರಷ್ಟಿಯಲ್ಲಿ ಹುಡುಗಿಯ ಕೈಯಲ್ಲಿ ಕೊಡಪಾನ ಕೊಟ್ಟು ನೀರು ತರ ಹೇಳುವುದೂ ಇದೆ. ಹಾಗೆಯೇ ಮನೆ ನೋಡುವೆ ನೆಪದಲ್ಲಿ ಒಳ ಹೋಗಿ ಹುಡುಗಿಯನ್ನು ಮಾತಾಡಿಸುತ್ತಾರೆ.

ಹುಡುಗಿಯ ರೂಪ ಗುಣ ನಡತೆ ಒಪ್ಪಿಗೆಯಾದರೆ, ಸತ್ಕಾರ ಸ್ವೀಕರಿಸಿ ಹೊರಟು ಬರುವ ಹುಡುಗನ ಕಡೆಯವರು ಇನ್ನು ಜಾತಕ ಕೂಡಿ ಬಂದರೆ ಹೇಳಿ ಕಳುಹಿಸುತ್ತೇವೆಂದು ಹೇಳುವುದು ವಾಡಿಕೆ ಅಥವಾ ಉಭಯಸ್ಥರು ಪಕ್ಕದ ಜೋಯಿಸರಲ್ಲಿ ಹೋಗಿ ಹುಡುಗ- ಹುಡುಗಿಯ ಜಾತಕ ತೋರಿಸುವುದುಂಟು. ಜಾತಕ ಕೂಡಿ ಬಾರದೇ ಹೋದರೆ ನೆಂಟಸ್ಥಿಗೆಮುಂದುವರಿಯುವುದಿಲ್ಲ. ಹುಡುಗಿ ನೋಡುವ ಕ್ರಮದಲ್ಲಿ ಜಾತಕ ಇಲ್ಲದಿದ್ದರೆ ಇತ್ತಂಡಗಳು ದೇವಸ್ಥಾನದಲ್ಲಿ ಅರ್ಚಕರ ಮೂಲಕ ತುಂಬೆ ಹೂವಿನಲ್ಲಿ ಪುಷ್ಪ ಪರೀಕ್ಷೆ ನಡೆಸುತ್ತಾರೆ. ಹುಡುಗನ ಕಡೆಯವರಿಗೆ ಸಂಬಂಧ ಕೂಡಿ ಬಂದರೆ ಹುಡುಗಿ ಮನೆಯವರನ್ನು ಆಹ್ವಾನಿಸುತ್ತಾರೆ. ನಿಗದಿತ ದಿನ ಹುಡುಗನ ಮನೆಗೆ ಬರುವ ಹುಡುಗಿ ಕಡೆಯವರಿಗೆ ಸಮ್ಮಾನದೂಟ ಮಾಡಿಸಿ ಕಳುಹಿಸಿ ಕೊಡಲಾಗುತ್ತದೆ. ವೀಳ್ಯಶಾಸ್ತ್ರ ನಡೆಸುವ ದಿನವನ್ನು ಪರಸ್ಪರರು ಸಂವಾದಿಸಿ ಈ ದಿನ ನಿಗದಿಪಡಿಸುತ್ತಾರೆ.

ಗೌಡ ಸಂಸ್ಕೃತಿ- ಮದುವೆ (ಸೋದರ ಮಾತನಾಡಿಸುವುದು)

 ಸೋದರ ಮಾತನಾಡಿಸುವುದು:

ಗೊತ್ತುಪಡಿಸಿದ ದಿನದಂದು ಹುಡುಗಿಯ ಕಡೆಯಿಂದ ಅವಳ ತಂದೆ-ತಾಯಿಯರು ಮತ್ತು ಹುಡುಗನ ಕಡೆಯಿಂದ ಕನಿಷ್ಟ ಒಬ್ಬರು ಹುಡುಗಿ ಸಮೇತ ಸೋದರ ಮಾವನಲ್ಲಿಗೆ ಹೋಗಿ ನಾವು ಒಂದು ಶುಭಕಾರವನ್ನು ತೆಗೆಯುವವರಿದ್ದೇವೆ. ನಿಮ್ಮಗಳ ಒಪ್ಪಿಗೆ ಕೇಳಲು ಬಂದಿದ್ದೇವೆ ಅಂತ ಹೇಳುವರು. (ಪೂರ್ವ ಪದ್ಧತಿ ಪ್ರಕಾರ ಹುಡುಗಿ ಮನೆಯಿಂದ ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿ, ಒಂದು ಹೇಂಟೆ ಲಾಕಿ, ಮದ್ಯದ ಬಾಟಲಿ, ಒಂದು ಕುಡ್ತ ತೆಂಗಿನೆಣ್ಣೆ, ಸೂಡಿ ವೀಳ್ಯದೆಲೆ, ಐದು ಅಡಿಕೆಯೊಂದಿಗೆ ಸೋದರ ಮಾವನಲ್ಲಿಗೆ ಹೋಗುತ್ತಿದ್ದರು.) ತೆಗೆದುಕೊಂಡು ಹೋದ ಕೋಳಿಯನ್ನು ಅಡುಗೆ ಮಾಡಿ ರಾತ್ರಿ ಗುರು ಕಾರಣರಿಗೆ ಬಡಿಸಿ ಹಿರಿಯರ ಆಶೀರ್ವಾದ ಪಡೆಯುವುದು ರೂಢಿ. (ಪೂರ್ವ ಪದ್ಧತಿ ಪ್ರಕಾರ ಎಲ್ಲಾ ವಸ್ತುಗಳನ್ನು ಕೊಂಡು ಹೋಗುವುದು ಮಾಡದಿದ್ದರೆ ಈಗಿನ ಕಾಲ ಘಟ್ಟಕ್ಕೆ ಅನುಕೂಲವಾಗುವಂತೆ ಸೋದರ ಮಾವನಲ್ಲಿಯೇ ಸಮ್ಮಾನದ ಊಟ ಮಾಡಿ ಕಳುಹಿಸುವುದು ಮಾಡುವುದು.) ಹೀಗೆ ಸೋದರ ಮಾವನ ಒಪ್ಪಿಗೆ ಪಡೆದು ಮಾರನೇ ದಿನ ಬೆಳಿಗ್ಗೆ ವೀಳ್ಯಶಾಸ್ತ್ರಕ್ಕೆ ನಿಗದಿಪಡಿಸಿದ ದಿನದಂದು ಬರಬೇಕೆಂದು ಆಹ್ವಾನಿಸಿ ಹಿಂತಿರುಗುವುದು

Tuesday, January 14, 2025

ಗೌಡ ಸಂಸ್ಕೃತಿ- ಸಾಮಾಜಿಕ ಆಚರಣೆಗಳು

ಪಂಚ ಪರ್ವಗಳು : ಒಂದು ಕಾಲದಲ್ಲಿ ಕೂಡು ಕುಟುಂಬವಿದ್ದ ಗೌಡರ ತರವಾಡು ಮನೆಯಲ್ಲಿ ಪಂಚಪರ್ವಗಳನ್ನು ಕುಟುಂಬದ ಹಿರಿಯರು ಮಾಡುತ್ತಿದ್ದರು


1. ಸೋಣ ಶನಿವಾರ : ಸೋಣ ತಿಂಗಳ ಒಂದು ಶನಿವಾರ ವೆಂಕಟ್ರಮಣ ದೇವರ ಮುಡಿಪು ಶುದ್ದೀಕರಿಸಿ ಕಾಣಿಕೆ ಹಾಕಿ ಕೈಮುಗಿದ ನಂತರ ಮಧ್ಯಾಹ್ನದ ಊಟ ಮಾಡುವ ಸಂಪ್ರದಾಯ

2. ಹೊಸ್ತು ಕಾರ್ಯಕ್ರಮ : ನಿರ್ನಾಲ ತಿಂಗಳಿನ ಮೊದಲ ಅಮವಾಸ್ಯೆ ಕಳೆದ ಬಳಿಕ ಹೊಸ್ತು ಊಟಮಾಡುವುದು.

3. ಕಾವೇರಿ ಸಂಕ್ರಮಣ : ಕನ್ಯಾ ಸಂಕ್ರಮಣದ ಮುಂದಿನ ನಿಶ್ಚಿತ ದಿನಮಾನದಲ್ಲಿ ತಲಕಾವೇರಿಯ ಜಾತ್ರೋತ್ಸವದ ಪುಣ್ಯ ತೀರ್ಥ ಮಿಂದು ನಮ್ಮ ಗುರುಕಾರ್ನೋರು ಅಗೋಚರವಾಗಿ ಬರುವುದರಿಂದ ಅದರ ಮಾರನೇ ದಿನ ತಡ್ಡೆಯಲ್ಲಿ 32 ಎಲೆ ತುಂಡಿನಲ್ಲಿ ಅನ್ನ ನೈವೇದ್ಯ ದೀಪವಿರಿಸಿ (ಅನ್ನ, ಅಲಸಂಡೆ ಪದಾರ್ಥ, ಗದ್ದೆ ಮೀನು ಸಾರು ಮಾಡಿ ಬಡಿಸಿ) ಬೈಹುಲ್ಲಿನ ರಾಶಿ ಮೇಲೆ ಇಡುವುದು.

4. ವಿಷು ಸಂಕ್ರಮಣ : ( ಕಣಿ ಇಡುವುದು)

5. ಬೇಷ ಪತ್ತನಾಜೆ : ದೈವ ಕಾರ್ಯಗಳ ಬಳಿಕ ಗುರು ಕಾರ್ನೋರಿಗೆ ಎಡೆ ಹಾಕುವುದು


ಮನೆ ತುಂಬಿಸುವುದು :
ಆಟಿ ತಿಂಗಳಿನಲ್ಲಿ ಮನೆಯ ಅಟ್ಟ ಗುಡಿಸಿ, ಧೂಳು ತೆಗೆದು ಕಳೆದ ವರ್ಷ ಕಟ್ಟಿದ ಕದಿರನ್ನು ತೆಗೆದು ಮನೆ ಸ್ವಚ್ಛ ಮಾಡಬೇಕು. ಚೌತಿಯಿಂದ ಹಿಡಿದು ತಲಕಾವೇರಿ ಸಂಕ್ರಮಣದವರೆಗೆ ಯಾವಾಗ ಬೇಕಾದರೂ ಮನೆ ತುಂಬಿಸುವುದು ಮಾಡಬಹುದು.

ಮನೆ ತುಂಬಿಸುವ ವಸ್ತುಗಳು : ನಕ್ಷತ್ರಕ್ಕೆ ಅನುಗುಣವಾಗಿ ವಸ್ತುಗಳಿರಬೇಕು. ಆಶ್ವತ್ತ, ಮಾವು ಹಲಸು, ಬಿದಿರು, ಗೊಳಿ (ದೊಡ್ಡ ಗೋಳಿ, ಸಣ್ಣ ಗೋಳಿ) ನಾಯಿ ಕರುಂಬು, ಪೊಲಿ ಬಳ್ಳಿ, ಇಟ್ಟೋ ಸೊಪ್ಪು, ಗಬ್ಬಲ ಮರದ ಬಳ್ಳಿ, ಕವುಂತೆ ಬಳ್ಳಿ ಸೊಪ್ಪು ಇವುಗಳು ಮುಖ್ಯವಾದವುಗಳು. ಮನೆ ತುಂಬಿಸುವ ಮೊದಲಿನ ದಿನ ಮೇಲಿನ ವಸ್ತುಗಳನ್ನು ಸಂಗ್ರಹಿಸಿ ಯಾರೂ ಮುಟ್ಟದ ಜಾಗದಲ್ಲಿ ತಂದಿಡಬೇಕು. ಮಾರನೇ ದಿನ ಮನೆಯ ಯಜಮಾನ ಸ್ನಾನ ಮಾಡಿ ಮಡಿಯುಟ್ಟು ಕದಿರು ತೆಗೆಯಲು ಗದ್ದೆಗೆ ಹೋಗುತ್ತಾರೆ. ಹೋಗುವಾಗ ಮನೆಯ ಇತರ ಸದಸ್ಯರು ವಿಷಮ ಸಂಖ್ಯೆಯಲ್ಲಿ ಒಟ್ಟಿಗೆ ಹೋಗುತ್ತಾರೆ. ಹೋಗುವಾಗ 5 ಎಲೆ 1 ಅಡಿಕೆ 1 ತುದಿಬಾಳೆ ಎಲೆ ತೆಗೆದುಕೊಂಡು ಗದ್ದೆಗೆ ಹೋಗಿ ಇಡುವರು. ತೆನೆ ತೆಗೆಯುವಾಗ ಮೊದಲು ಕೈ ಮುಗಿಯಬೇಕು. ಅನಂತರ ಪೊಲಿಯೇ. ಬರುವಾಗ ಪೊಲಿ.. ಪೊಲಿ.. ಹೇಳುತ್ತಾ ಕದಿರು ತೆಗೆಯುತ್ತಾರೆ. ತೆಗೆದುಕೊಂಡು ಬರುವಾಗ  ಪೊಲಿ.ಹೇಳುತ್ತಾ ಕದಿರು ತರಬೇಕು. ಅಂಗಳಕ್ಕೆ ಬಂದ ಮೇಲೆ ಮುಂದಿನ ದಿನ ಸಂಗ್ರಹಿಸಿದ್ದ ಎಲ್ಲಾ ವಸ್ತುಗಳನ್ನು ಮನೆಯಲ್ಲಿದ್ದವರು 1 ಗೆರಸೆ (ತಡಪೆ)ಯಲ್ಲಿಟ್ಟಿರುತ್ತಾರೆ.
ತಡಪೆಯಲ್ಲಿದ್ದ ವಸ್ತುಗಳು  ಮತ್ತು ಕದಿರನ್ನು ಹಿಡಿದುಕೊಂಡು ತುಳಸಿ ಕಟ್ಟೆಗೆ ಸುತ್ತು ಬರುತ್ತಾ ಪೊಲಿ ಪೊಲಿ ಹೇಳಬೇಕು. ಮನೆ ಒಳಗೆ ಹೋಗುವ ಮೊದಲು ಮುತ್ತೈದೆಯರು ಕಾಲಿಗೆ ನೀರು ಹಾಕುವರು. ಮತ್ತು ಕುಡಿಯಲು ಹಾಲು ಕೊಡುವರು. ದೇವರ ಕೋಣೆ ಅಥವಾ ಕನ್ನಿ ಕಂಬದ ಹತ್ತಿರ ಮನೆಯ ಯಜಮಾನ ಮೊದಲೇ ದೀಪ ಹಚ್ಚಿ ಗಣಪತಿಗೆ ಇಟ್ಟಿರುತ್ತಾರೆ. (5 ಎಲೆ 1 ಅಡಿಕೆ) ತಂದ ಕದಿರ ಸಮೇತ ಎಲ್ಲಾ ವಸ್ತುಗಳನ್ನು ಅಲ್ಲಿಡುತ್ತಾರೆ. ತಂದ ಕದಿರಿನಿಂದ ಭತ್ತ ತೆಗೆದು ಮನೆಯ ಯಜಮಾನ ನಂತರ ಎಲ್ಲರೂ ದೀಪಕ್ಕೆ ಹಾಕಿ ಕೈ ಮುಗಿಯುತ್ತಾರೆ. ಇದಾದ ನಂತರ ಕಿರಿಯರು ಹಿರಿಯರ ಕಾಲು ಹಿಡಿದು ಆರ್ಶಿವಾದ ಪಡೆಯುತ್ತಾರೆ. ಸಂಗ್ರಹಿಸಿದ ಎಲ್ಲಾ ಎಲೆಗಳನ್ನು ಒಂದರ ಮೇಲೊಂದು ಜೋಡಿಸಿ ಅದರೊಳಗೆ 2 ಕದಿರನ್ನು ಇಟ್ಟು ಮೇಲೆ ಗಬ್ಬಳ ಬಳ್ಳಿಯಿಂದ ಸುತ್ತುತ್ತಾರೆ. ಮೊದಲು ದೇವರ ಕೋಣೆಗೆ ಕಟ್ಟಿದ ನಂತರ ದೈವಸ್ಥಾನಕ್ಕೆ ಕಟ್ಟಬೇಕು. ನಂತರ ಮನೆಯ ಮುಖ್ಯ ಭಾಗಗಳಿಗೆ ಕಟ್ಟಬೇಕು. ಮನೆಯ ಎದುರಿನ (ದಾರಂದಕ್ಕೆ ಮಾವಿನಎಲೆ, ಆಶ್ವಥ ಎಲೆ, ಮಾಲೆ ಮಾಡಿ ಮಧ್ಯೆ ಮಧ್ಯೆ ಕದಿರನ್ನು ಕಟ್ಟಿರಬೇಕು.) ನೊಗ, ನೇಗಿಲು, ಅಡಿಕೆ ಮರ, ತೆಂಗಿನ ಮರ, ಹಟ್ಟಿ, ವಾಹನ ಇತ್ಯಾದಿಗಳಿಗೆ ಕದಿರು ಕಟ್ಟುತ್ತಾರೆ.

ಹೊಸ ಅಕ್ಕಿ ಊಟ : (ಐನ್ ಮನೆಯಲ್ಲಿ ಆಚರಣೆ ಮಾಡುವ ಕ್ರಮ) ಸಂಕ್ರಮಣಕ್ಕೆ ಮೊದಲು ಹೊಸ ಅಕ್ಕಿ ಊಟ ಮಾಡುವ ಕ್ರಮವಿದೆ. ಮುತೈದೆಯರು ಸ್ನಾನ ಮಾಡಿ ಮಡಿಯುಟ್ಟು ಗಂಗೆ ಪೂಜೆ ಮಾಡಿ ನೀರು ತಂದು ಹೊಸ ಅನ್ನಕ್ಕೆ ನೀರು ಇಡುವರು.ಅಟ್ಟದಿಂದ ಮಣ್ಣಿನ ಮಡಕೆಯನ್ನು ತೆಗೆದು ಚೆನ್ನಾಗಿ ತೊಳೆದು ಮಡಕೆಗೆ ಗಂಧ ಹಚ್ಚಿ ನೀರು ಸೌತೆಯ ಬಳ್ಳಿಯನ್ನು ಸುತ್ತಲೂ ಕಟ್ಟುತ್ತಾರೆ. (ಪೂರ್ವ ಕಾಲದ ಮನೆ ಒಳಗೆ ಸೆಗಣಿ ಸಾರಿಸಿ ಶುದ್ಧ ಮಾಡುವ ಕ್ರಮವಿತ್ತು) ಹಿರಿಯರೊಡನೆ ಹೊಸ ಅಕ್ಕಿಗೆ ನೀರು ಇಡುತ್ತೇವೆಂದು 3 ಸಲ ಹೇಳಿ ನೀರಿಡುತ್ತಾರೆ. ಹೊಸ ಅಕ್ಕಿ ಬೆಳ್ಳಿಗೆಯನ್ನು ಚೆನ್ನಾಗಿ ತೊಳೆದು ಹಾಕಬೇಕು. ಅಕ್ಕಿ ಬೆಂದಾಗ ತುರಿದ ತೆಂಗಿನ ಕಾಯಿಯನ್ನು ಕಡೆದು (ಆರೆದು) ಹಾಕಬೇಕು. ಒಟ್ಟಿಗೆ 3. 4 ಅರಿಶಿನ ಸೊಪ್ಪಿನ ಎಲೆ ಹಾಕಬೇಕು. ಬೆಂದ ನಂತರ ಹೊಸ ಅಕ್ಕಿ ಇಳಿಸುತ್ತೇವೆಂದು 3 ಸಲ ಹೇಳಿ ಇಳಿಸಬೇಕು. ಊಟಕ್ಕೆ ಸಾಮಾನ್ಯವಾಗಿ ಗುದ್ದಿದ ಉಪ್ಪು ಶುಂಠಿ, ನೀರು ಸೌತೆಕಾಯಿ ಪಚ್ಚೆಡಿ, ಕೆಸು ಮತ್ತು ಹರಿವೆ ದಂಟಿನ ಸಾಂಬಾರು ಈ 3 ಮುಖ್ಯ ಪದಾರ್ಥಗಳು ಅಲ್ಲದೆ ತರಕಾರಿ ಪಲ್ಯ ಗೇರು ಬೀಜ ಬೆಂಡಿನ ಪಲ್ಯ ಒಟ್ಟಿನಲ್ಲಿ ವಿಷಮ ಸಂಖ್ಯೆಯ ಪದಾರ್ಥಗಳಿರಬೇಕು.

ನೆನೆ ಅಕ್ಕಿ : ಬೆಳ್ತಿಗೆ ಅಕ್ಕಿಯನ್ನು ನೆನೆಸಿ ನೀರು ಬಸಿದು ರುಚಿಗೆ ತಕ್ಕ ಬೆಲ್ಲ, ಎಳ್ಳು, ಸುಟ್ಟ ಗೇರು ಬೀಜದ ಬೆಂಡು ಇವುಗಳನ್ನು ಪಾಕ ಮಾಡಿ ಬಳಸುವರು.

ಬಳಸುವ ಕ್ರಮ : ನಡುಮನೆ ಅಥವಾ ಕನ್ನಿ ಕಂಬದ ಹತ್ತಿರ ಗಣಪತಿಗೆ ಇಡಬೇಕು ಮಣೆ ಮೇಲೆ ಜೊಡು ಬಾಳೆ ಎಲೆ ಹಾಕಿ ಮೊದಲು ನೆನೆ ಅಕ್ಕಿ ಬಡಿಸಬೇಕು. ನಂತರ ತೆಂಗಿನಕಾಯಿ ಹಾಕಿದ ಗಂಜಿ ಮತ್ತು ಎಲ್ಲಾ ಪದಾರ್ಥಗಳನ್ನು ಬಡಿಸುವುದು ಕ್ರಮ. ಕೈ ಮುಗಿದು ಕುಲದೇವರಿಗೆ ಪ್ರಾರ್ಥನೆ ಮಾಡಿಕೊಳ್ಳಬೇಕು. (ತಟ್ಟೆಯಲ್ಲಿ 16 ಚಿಕ್ಕ ತುದಿ ಬಾಳೆಲೆಗಳನ್ನು ಇಟ್ಟು ಎಲ್ಲಾ ಬಾಳೆಲೆಗೆ ಸ್ವಲ್ಪ ಸ್ವಲ್ಪ ಮಾಡಿದ ಪದಾರ್ಥಗಳನ್ನು ಬಡಿಸಿ ನೆನೆಬತ್ತಿ ಹಚ್ಚಿಟ್ಟು ಅಟ್ಟದಲ್ಲಿ ಕೊಲೆಗೆ ಇಡುವ ಕ್ರಮವಿದೆ.

ಮಗುವಿಗೆ ನವಾನ್ನ ಬೋಜನ, ಅನ್ನ ಪ್ರಾಶನ :- ಮಗುವಿಗೆ ಹೊಸತು ಕೊಡುವುದು. ಅನ್ನ ಪ್ರಾಶನಕ್ಕೆ ತಾಯಿಯ ಮಡಿಲ ಮೇಲೆ ಮಗುವನ್ನು ಕುಳ್ಳಿರಿಸಿಕೊಳ್ಳುತ್ತಾರೆ. ಹೊಸ ಅಕ್ಕಿ ಅನ್ನವನ್ನು ತುದಿ ಬಾಳೆಲೆಯಲ್ಲಿ ತಂದು ಇಡುತ್ತಾರೆ. ಸ್ವಲ್ಪ ಹಾಲು ಹಾಕಿ ತೆಳ್ಳಗೆ ಮಾಡಿಕೊಳ್ಳಬೇಕು. ಮಗುವಿಗೆ ಹಿರಿಯರಿಂದ ಮೊದಲ್ಗೊಂಡು ಎಲ್ಲರೂ ಬೆರಳಿನಿಂದ ಹನಿ ಹನಿ ಬಾಯಿಗೆ ನೆಕ್ಕಿಸುತ್ತಾರೆ.)
ಇದಾದ ನಂತರ ಎಲ್ಲರೂ ಊಟಕ್ಕೆ ಕುಳಿತುಕೊಳ್ಳುತ್ತಾರೆ. ಎಲ್ಲರೂ ಸಂಬಂಧ ಹೇಳುತ್ತಾ ಹೊಸ ಅಕ್ಕಿ ಊಟ ಮಾಡುತ್ತೇವೆ ಎಂದು ಕೇಳುತ್ತಾ ಊಟ ಮಾಡುವರು. ಆಮೇಲೆ ಎಲ್ಲರೂ ಎಲೆ ಅಡಿಕೆ ಮೆಲ್ಲುವ ಕ್ರಮವಿದೆ. ಹೊಸತು ಗಂಜಿಯನ್ನು ಮಾರನೇ ದಿನ ಅಂಗಾರ ಕಲ್ಲಿಗೆ ಬಡಿಸುವ ಪದ್ಧತಿ. ಕಾಯಿ ಒಡೆದು ನೆನೆ ಬತ್ತಿ ಹಚ್ಚಿಡಬೇಕು. ಅಂಗಾರನಿಗೆ ಮುಡಿಸಿದ ಮೇಲೆ ಅರ್ಧ ಗಂಜಿಯನ್ನು ದನಕರುಗಳಿಗೆ ಕೊಟ್ಟು ಉಳಿದವನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸುತ್ತಾರೆ.

ಗುರು ಕಾರ್ನೂರಿಗೆ ಬಡಿಸುವ ಕ್ರಮ :- ನಮ್ಮ ಪೂರ್ವಜರು ಶೃಂಗೇರಿಯಿಂದ ಬರುವಾಗ ತಮ್ಮ ಮಾರ್ಗ ದರ್ಶನಕ್ಕಾಗಿ ಅಲ್ಲಿಂದ ಕಳುಹಿಸಿಕೊಟ್ಟ ಪ್ರಮುಖರೆ ಗುರುಕಾನೂರು 2 ಮಣೆ ಇಟ್ಟು ಬಲಗಡೆಯಿರುವ ಮಣೆಯಲ್ಲಿ ದೀಪ ಹಚ್ಚಿ ಗಂಧದ ಕಡ್ಡಿ ಉರಿಸಿಟ್ಟು ತೇದ ಗಂದವನ್ನು ತುದಿ ಬಾಳೆಲೆಯಲ್ಲಿಡಬೇಕು. ಇನ್ನೊಂದು ಮಣೆಯಲ್ಲಿ ಬಾಳೆಲೆಯನ್ನು ಒಂದರ ಮೇಲೊಂದು ಇಟ್ಟು ನೀರು ಹಾಕಿ ಬಾಳೆಲೆ ಉಜ್ಜಿ 5 ನೀರು ದೋಸೆ ಮತ್ತು ಹೆಂಟೆ ಕೋಳಿ ಸಾಂಬಾರಿನ ಮುಖ್ಯ ಭಾಗಗಳನ್ನು ಬಳಸಬೇಕು. ಅದಕ್ಕೆ 5 ಎಲೆ ಅಡಿಕೆ, ನೆನೆಬತ್ತಿ ಹಚ್ಚಿಡಬೇಕು. ಪ್ರಾರ್ಥನೆ ಮಾಡಿಕೋಳ್ಳಬೇಕು.
ಭಿನ್ನಃ ಮಾಡಿಕೊಳ್ಳುವುದು : ಸ್ವಾಮಿ ಇಂದು ಕೋಳಿ ಕೊಂದು ಅಡಿಗೆ ಮಾಡಿ ಅಗೇಲು ಹಾಕಿದ್ದೇವೆ. ಸ್ವಲ್ಪ ದಿನ ಹಿಂದು ಮುಂದಾದರೂ ಇಂದು ದಿನ ಕೂಡಿ ಬಂದಿದ್ದು ಎಲ್ಲಿಯಾದರೂ ವಿಷ ಘಳಿಗೆ ಇದ್ದಲ್ಲಿ ಅದನ್ನು ಅಮೃತ ಘಳಿಗೆ ಎಂದು ತಿಳಿದು ಮಿಂದ ನೀರಲ್ಲಿ ಕೊಂದ ಕೋಳಿಯಲ್ಲಿ ಮಾಡಿದ ಅಡುಗೆಯಲ್ಲಿ ಸಾವಿರ ತಪ್ಪುಗಳಿದ್ದರೂ ಅದನ್ನು ಒಪ್ಪು ಮಾಡಿಕೊಂಡು ಈ ಒಂದು ಸಂಸಾರವನ್ನಾಗಲಿ, ಬಿತ್ತಿದ ಬೆಳೆಗಾಗಲಿ, ದನ ಕರುಗಳಿಗಾಲಿ ಬೆಳೆ ಭಾಗ್ಯಕ್ಕಾಗಲಿ ಏನೊಂದು ತೊಂದರೆ ಬಾರದ ಹಾಗೆ ಬಂದ ವಿಘ್ನಗಳನ್ನು ಪರಿಹರಿಸಿಕೊಂಡು ಬರುವ ಕೀರ್ತಿ ನಾವು ನಂಬಿದ ಗುರು ಕಾರ್ನರಿಗೆ ಸೇರಿದ್ದು ಎಂತ ನಾವೆಲ್ಲ ಇದ್ದು ಕೈ ಮುಗಿಯುತ್ತಿದ್ದೇವೆ.

ಪಾಷಾಣ ಮೂರ್ತಿಗೆ ಬಡಿಸುವ ಕ್ರಮ : ಸಾಮಾನ್ಯವಾಗಿ ಬೆಸ ತಿಂಗಳಲ್ಲಿ ಅಥವಾ
ವರ್ಷದ ಇತರ ದಿನಗಳಲ್ಲಿಯೂ ಪಾಷಾಣ ಮೂರ್ತಿಗೆ ಬಡಿಸುವುದು ಮಾಡಬಹುದು. ಹೇಂಟೆ ಕೋಳಿ ಕೊಂದು ಮನೆಯ ಯಜಮಾನ ಸ್ನಾನ ಮಾಡಿ ಅನ್ನದ ಅಡುಗೆ ಮಾಡಬೇಕು. (ಕೆಲವು ಭಾಗಗಳಲ್ಲಿ ರೊಟ್ಟಿ, ದೋಸೆ ಮಾಡುವ ಪದ್ಧತಿ ಇದೆ.).
ಕ್ರಮ : 2 ಅಥವಾ 5 ಅಥವಾ 7 ಅಗೇಲು ಹಾಕುತ್ತಾರೆ. ಕಾಲು ದೀಪ ಹಚ್ಚಿ ಊದು ಬತ್ತಿ ಹಚ್ಚಿಡಬೇಕು ಅಗೇಲು ಹಾಕುವಾಗ ಅನ್ನ ಅಥವಾ ರೊಟ್ಟಿ ಬಡಿಸಿ ಒಂದರಲ್ಲಿ ಕೋಳಿಯ ಮುಖ್ಯ ಭಾಗಗಳು ಉಳಿದವುಗಳಲ್ಲಿ ಕೋಳಿಯ ತುಂಡುಗಳನ್ನು ಬಡಿಸುತ್ತಾರೆ. ಎಲೆಗೆ ನೆನೆ ಬತ್ತಿ ಹಚ್ಚಿಡಬೇಕು. ಅರಶಿನ ಕುರ್ದಿ ಬೆಲ್ಲದ ಕುರ್ದಿ (ಹೆಂಡದ ಕುರ್ದಿ ಮಸಿ ಕುರ್ದಿ) ತೇದ ಗಂಧ 5 ಎಲೆ 1 ಅಡಿಕೆ ಮಣೆ ಮೇಲೆ ಇಡಬೇಕು. ಧೂಪದ ಆರತಿ ಮಾಡಬೇಕು ಪ್ರಾರ್ಥನೆ ಮಾಡುವಾಗ ಬೆಳ್ತಿಗೆ ಅಕ್ಕಿ ಉಪಯೋಗಿಸಬೇಕು.

ಪಾಷಾಣ ಮೂರ್ತಿಗೆ ಭಿನ್ನ ಮಾಡಿಕೊಳ್ಳುವುದು :

ಸ್ವಾಮಿ ಅಂತ ಹೇಳಿಕೊಳ್ಳುವುದೇನೆಂದರೆ ನಾವು ನಮ್ಮ ಹಿರಿಯರು ನಂಬಿಕೊಂಡ ಬಂದ ಈ ಪಾಷಾಣ ಮೂರ್ತಿಗೆ ವರ್ಷಕ್ಕೊಮ್ಮೆ ಅಗೇಲು ಇಕ್ಕಿ ಕೈ ಮುಗಿಯುವ ಕ್ರಮ, ಹಾಗೆ ಏನೋ ಒಂದು ತೊಂದರೆಯಿಂದ ಸ್ವಲ್ಪ ದಿನ ಹಿಂದು ಮುಂದಾದರೂ, ಇಂದು ದಿನ ಕೂಡಿ ಬಂದಿದ್ದು ಎಲ್ಲಿಯಾದರೂ ವಿಷ ಘಳಿಗೆ ಇದ್ದಲ್ಲಿ ಅದನ್ನು ಅಮೃತ ಘಳಿಗೆ ಎಂದು ತಿಳಿದುಕೊಂಡು ಮಿಂದ ನೀರಿನಲ್ಲಿ, ಕೊಂದ ಕೋಳಿಯಲ್ಲಿ, ಮಾಡಿದ ಅಡುಗೆಯಲ್ಲಿ ಮಾಡಿದ ಬಿನ್ನದಲ್ಲಿ, ಸಾವಿರ ತಪ್ಪು ಇದ್ದರೂ ಅದನ್ನು ಒಪ್ಪು ಮಾಡಿಕೊಂಡು ಬಿತ್ತಿನ ಬೆಳೆಗಾಗಲಿ, ಮಾಡುವ ವ್ಯವಹಾರಕ್ಕಾಗಲಿ, ದನಕರುಗಳಿಗಾಗಲಿ, ಬೆಳೆ ಭಾಗ್ಯಕ್ಕಾಗಲಿ ಏನೊಂದು ತೊಂದರೆ ಬಾರದ ಹಾಗೆ, ಬಂದ ವಿಘ್ನಗಳನ್ನು ಪರಿಹರಿಸಿಕೊಂಡು ಉತ್ತರೋತ್ತರ ಅಭಿವೃದ್ಧಿಪಡಿಸಿಕೊಂಡು ಬರುವ ಕೀರ್ತಿ ನಾವು ನಂಬಿದ ಪಾಷಾಣ ಮೂರ್ತಿಗೂ ಈ ಭೂಮಿಯಲ್ಲಿರುವ ಇರುವ ಗುಳಿಗ ಬಂಟನಿಗೂ ಗ್ರಾಮ ದೇವತೆಯಾದ............ ಸೀಮೆ ದೇವತೆಯಾದ....... ಹಾಗೂ ಈ ಗುರು ಕಾರಣರಿಗೆ ಸೇರಿದ್ದು ಅಂತ ನಾವೆಲ್ಲ ಇದ್ದು ಕೈ ಮುಗಿಯುವುದು. 

ಆಗಿನ(ಕಟ್ಟು): ಆಯಾ ಊರಿನ ದೇವಸ್ಥಾನಗಳಲ್ಲಿ ಕೊಡಿಮರ ಏರಿದ ಮೇಲೆ ಆಗಿನ ಬರುವುದು ಕ್ರಮ. ಪ್ರಾಣಿ ಹತ್ಯೆ ಮಾಡಬಾರದು, ಮಧು ಮಾಂಸ ಸೇವಿಸಬಾರದು, ಶುಭಕಾರ್ಯ ಮಾಡುವ ಹಾಗಿಲ್ಲ. ತಿಥಿ ಆಚರಿಸಬಹುದು. 11 ಮತ್ತು 16ಕ್ಕೆ ಅವಕಾಶವಿರುವುದಿಲ್ಲ.

ಖೆಡ್ಡಾಸ ಆಚರಣೆ

ಖೆಡ್ಡಾಸ ಅಂದರೆ ಭೂಮಿ ರಜಸ್ವಲೆಯಾಗುವುದು ಎಂಬರ್ಥವಿದೆ. ಖೆಡ್ಡಾಸ ಆಚರಣೆ ಮೂರು ದಿನ ನಡೆಯುತ್ತದೆ. ಸುರು ಖೆಡ್ಡಾಸ, ನಡು ಖೆಡ್ಡಾಸ, ಕಡೆ ಖೆಡ್ಡಾಸ ಎಂದು ಮೂರು ದಿನ ಆಚರಿಸಲ್ಪಡುತ್ತದೆ.

ಸುರು ಅಂದರೆ ಆರಂಭದ ದಿನ ಅಂಗಳದ ಒಂದು ಭಾಗದಲ್ಲಿ ಸೆಗಣಿ ಸಾರಿಸಿ ಭಸ್ಮದಿಂದ ಚೌಕ ಬರೆಯಬೇಕು. ಚೌಕ ಬರೆದ ಆವರಣದಲ್ಲಿ ಹುರಿದ ಅಕ್ಕಿ ಹುಡಿ, ಬೆಲ್ಲ ಇತ್ಯಾದಿ ಇಡುತ್ತಾರೆ.

ಎರಡನೆಯ ದಿನ ನಡು ಖೆಡ್ಡಾಸ ದಿನದಂದು ಬೇಟೆಯಾಡುವುದು. ಬೇಟೆ ಮಾಡುವ ವಿಚಾರವನ್ನು ಹಾಗೂ ಖೆಡ್ಡಾಸ ಆಚರಣೆಯ ದಿನವನ್ನು ನಲಿಕೆಯವ (ಅಜಿಲಾಯ) ತನ್ನ ಹೆಗಲ ಮೆಲೆ ತೆಂಬರೆಯುನ್ನು ಹಾಕಿಕೊಂಡು ಅದನ್ನು ಬಡಿಯುತ್ತಾ ಮನೆ ಮನೆಗೆ ಮುಟ್ಟಿಸುತ್ತಾನೆ. ಹೀಗಾಗಿ ಈ ದಿನ ಬೇಟೆಯಾಡಲು ಕಾಡಿಗೆ ಹೋಗುತ್ತಾರೆ. ಬೇಟೆಯಾಡುವುದರ ಜೊತೆಗೆ ಮನರಂಜನೆಯ ಉದ್ದೇಶವೂ ಇದೆ.

ಮೂರನೇ ದಿನ ಕಡೇ ಖೆಡ್ಡಾಸ ವಾಗಿರುತ್ತದೆ. ಮುತೈದೆ ಹೆಂಗಸರು ಸ್ನಾನ ಮಾಡಿ ಶುಚಿಯಾಗಿ ಚೌಕ ಬರೆದ ಜಾಗದಲ್ಲಿ ಏಳು ಸರೋಳಿ ಎಲೆ, ಏಳು ಮಾವಿನ ಎಲೆಗಳನ್ನು ಪಶ್ಚಿಮದ ಕಡೆ ತುದಿಭಾಗ ಬರುವ ಹಾಗೆ ಜೋಡಿಸಿಡುತ್ತಾರೆ. ಗೆರಟೆಯಲ್ಲಿ ಸೀಗೆ ಕುರ್ದಿ (ಅರಿಶಿನ ನೀರು ಮುಶ್ರಿತ) ತೆಂಗಿನ ಕಾಯಿಯಿಂದ ಹಿಂಡಿದ ಹಾಲು, ಮೂರು ಗರಿಕೆ ಹುಲ್ಲು, ತೆಂಗಿನ ಅಥವಾ ಅಡಿಕೆಯ ಸೋಗೆಯ ಚೆರಿಯೆ ಮೇಲೆ ಒಂದು ತಂಬಿಗೆ ನೀರು ಅಲ್ಲದೆ ಕುಂಕುಮ, ಕನ್ನಡಿ ಇವನ್ನೆಲ್ಲ ಜೋಡಿಸಿ ಇಡಬೇಕು.

ಕ್ರಮ: ಸೀಗೆ ಹಾಗೂ ಹಾಲನ್ನು ಭೂಮಿಗೆ ಗರಿಕೆ ಹುಲ್ಲಿನ ಸಹಾಯದಿಂದ ಸವರುತ್ತಾರೆ. ನೀರಿನಿಂದ ಭೂಮಿಯನ್ನು ಸ್ನಾನ ಮಾಡಿಸುತ್ತಾರೆ. ಅನಂತರ ಭೂಮಿಗೆ ಎಣ್ಣೆ ಬಿಡುತ್ತಾರೆ. ಹೀಗೆ ಭೂಮಿಯನ್ನು ಪರಿಶುದ್ಧ ಮಾಡಬೇಕು. ಋತುಮತಿಯಾದ ಹೆಣ್ಣನ್ನು ಮಡಿವಾಳ ಶುದ್ಧ ಮಾಡಿದ ಹಾಗೆ ಮುತೈದೆಯಾದ ಮನೆಯೊಡತಿ ಈ ಕಾರ್ಯ ನಿರ್ವಹಿಸುತ್ತಾರೆ

ವಿಶು ಸಂಕ್ರಮಣ (ಸೌರಮಾನ ಯುಗಾದಿ)

ಹಿಂದೂ ಸಂಸ್ಕೃತಿ ಪ್ರಕಾರ ಯುಗಾದಿ ನಮ್ಮ ಮೊದಲ; ಹಬ್ಬ. ಈ ದಿನ ನಮಗೆ ಹೊಸ ವರ್ಷ ಆಚರಣೆಯ ಸಂಭ್ರಮ. ಬೆಳಿಗ್ಗೆ ಮನೆ ಒಳಗಡೆ ದೇವರ ಕೋಣೆ ಅಥವಾ ನಡುಮನೆಯಲ್ಲಿ ಹಾಸು ಮಣೆಯ ಮೇಲೆ ಮಡಿ ಬಟ್ಟೆ ಹಾಕಿ ಗಣಪತಿಗೆ ಇಡಬೇಕು

ಕಾಲು ದೀಪ ಹಚ್ಚಿಟ್ಟು 2 ತುದಿ ಬಾಳೆಲೆಯಲ್ಲಿ 1ಸೇರು ಅಕ್ಕಿ, 5ಎಲೆ, Iಅಡಿಕೆ, 1ಪಾವಲಿ, ಗಂಧದ ಕಡ್ಡಿ ಉರಿಸಿ ತೇದ ಗಂಧವನ್ನು ಅರೆದು ಇಡಬೇಕು. ಗಣಪತಿಗೆ ಕಜ್ಜಾಯ ತಿಂಡಿ ಇಡಬೇಕು. ಇದರ ಮುಂಭಾಗದಲ್ಲಿ ಬೆಳೆದ ತರಕಾರಿ ಹೂ, ಹಿಂಗಾರಗಳನ್ನಿಟ್ಟು ದೇವರಿಗೆ ನಮಸ್ಕರಿಸುವುದು. ನಂತರ ಮನೆಯವರೆಲ್ಲಾ ಕೈ ಮುಗಿಯಬೇಕು.

ಬಿಸು ಹಬ್ಬ ಆಚರಣೆ

ಗದ್ದೆಗೆ ಬರೆ ಹಾಕುವುದು:

ಬೇಕಾದ ಪರಿಕರಗಳು : ಗಣಪತಿಗೆ ಇಡಲು ಅಕ್ಕಿ, ತೆಂಗಿನಕಾಯಿ, ಬಾಳೆ ಎಲೆ, 5 ವೀಳ್ಯದೆಲೆ, 1 ಅಡಿಕೆ, ತೇದ ಗಂಧ, ಎತ್ತುಗಳಿಗೆ ಹೂಮಾಲೆ, ಒಂದು ಕೊಡ ನೀರು, ಗುಂಡ್ಲಕ್ಕಿ (ಬೆಲ್ಲ, ತೆಂಗಿನಕಾಯಿ ಹಾಕಿ ಕರಿದ ಅಕ್ಕಿ ಹಿಟ್ಟಿನ ತಿಂಡಿ)

ಪಗ್ಗು ತಿಂಗಳ ಮೊದಲ ದಿನ ಬೆಳಿಗ್ಗೆ ಎತ್ತುಗಳೊಂದಿಗೆ ನೊಗನೇಗಿಲು ಸಮೇತ ಗದ್ದೆಗೆ ಹೋಗಿ ಗದ್ದೆಯ ಪೂರ್ವಭಾಗದ ಬದಿಯಲ್ಲಿ ದೀಪ ಹಚ್ಚಿ ಗಣಪತಿಗೆ ಇಟ್ಟು ಗುಂಡ್ಲಕ್ಕೆ ಎಡೆ ಇಟ್ಟು, ಎತ್ತುಗಳ ಕಾಲಿಗೆ ನೀರು ಹಾಕಿ ಗಂಧ ತಿಲಕ ಇಟ್ಟು ಹೂಹಾರ ಹಾಕಿ ನೊಗವಿಟ್ಟು (ನೊಗ ನೇಗಿಲಿಗೆ ಗಂಧ ಹಚ್ಚಬೇಕು) ನೇಗಿಲು ಕಟ್ಟುವುದು. ಗುಂಡ್ಲಕ್ಕಿ ಎಡೆಗೆ ತೆಂಗಿನಕಾಯಿ ಒಡೆದು ಎರಡು ಗಡಿಯನ್ನು ಎಡೆಯಲ್ಲಿ ಇಟ್ಟು ಕೈ ಮುಗಿದು ಪೂರ್ವ ಅಭಿಮುಖವಾಗಿ ನೆಕ್ಕಿ ಕೋಲು ಹಿಡಿದುಕೊಂಡು 5-ಅಥವಾ 7 ಸುತ್ತು ಉಳುಮೆ ಮಾಡಿ ನೊಗ ತೆಗೆದು ಬಳಸಿದ ಗುಂಡ್ಲಕ್ಕಿ ಮತ್ತು ಕಾಯಿ ಹೋಳನ್ನು ಎತ್ತುಗಳಿಗೆ ಕೊಟ್ಟು ಎಲ್ಲರಿಗೂ ಹಂಚುವುದು.

ಪಗ್ಗು 18 ಕ್ಕೆ ಕೈ ಬಿತ್ತು ಹಾಕುವುದು:- (ಬೀಜ ಬಿತ್ತುವ ಕ್ರಮ)

ಈ ಮೊದಲೇ ಕಾವೇರಿ ಸಂಕ್ರಮಣದ ಸಂದರ್ಭದಲ್ಲಿ ಬೇಸಾಯಕ್ಕೆ ಬೇಕಾಗುವ ಬತ್ತದ ಬೀಜವನ್ನು ಮುಡಿಕಟ್ಟಿ ಅಟ್ಟದಲ್ಲಿಟ್ಟಿರುತ್ತಾರೆ. ಪಗ್ಗು 18ನೇ ದಿನ ಕೈಕುಕ್ಕೆಯಲ್ಲಿ ಸ್ವಲ್ಪ ಭತ್ತ ತೆಗೆದು 5ಎಲೆ, 1 ಅಡಿಕೆ, 5ಸರಳಿ ಸೊಪ್ಪುಗಳನ್ನು ತೆಗೆದುಕೊಂಡು ಯಜಮಾನ ಗದ್ದೆಗೆ ಹೋಗುತ್ತಾರೆ. ಗದ್ದೆಯ ಒಂದು ಮೂಲೆಯಲ್ಲಿ ಹಾರೆಯಿಂದ ಕೊಚ್ಚಿ ಹದ ಮಾಡಿ ಪೂರ್ವಾಭಿಮುಖವಾಗಿ ನಿಂತು 5 ಸರಳಿ ಸೊಪ್ಪುಗಳನ್ನು ನೇರವಾಗಿಟ್ಟು 5ಎಲೆ, 1ಅಡಿಕೆ ಇಟ್ಟು ಆ ಸರಳಿ ಸೊಪ್ಪಿಗೆ ದೈವ ದೇವರುಗಳನ್ನು ಮನಸ್ಸಿನಲ್ಲಿ ಪ್ರಾರ್ಥಿಸಿ ಭತ್ತವನ್ನು ಎಲೆಗಳಿಗೆ ಹಾಕುವರು. ಮಣ್ಣನ್ನು ಹದ ಮಾಡಿ ಏರಿಯಂತೆ ಮಾಡಬೇಕು. ಅದರ ಮೇಲೆ 3 ಸಲ ಭತ್ತವನ್ನು ಹರಡಿ ಕೈ ಮುಗಿದು ಗದ್ದೆಯಿಂದ ಮನೆಗೆ ಬರುವರು.

ಬೇಶ ಪತ್ತನಾಜೆ

ತುಳು ತಿಂಗಳ 10ನೇ ದಿನ. ವರ್ಷದ ಕೊನೆಯ ನಡಾವಳಿಗಳು ಕೊನೆಗೊಳ್ಳುತ್ತದೆ. ಧರ್ಮದೈವದ ತಂಬಿಲಗಳೂ ಮುಗಿಯುತ್ತದೆ

ಕಾರ್ತಿಂಗಳ ಹರಕೆ (ಇದು ಕಾರ್ತಿಂಗಳ ಮಾಸದಲ್ಲಿ ಐನ್ ಮನೆಗಳಲ್ಲಿ ಮಾಡುವ ಪದ್ಧತಿ) :

ಹೆಂಟೆ  ಕೋಳಿ ಕೊಂದು ಅಡುಗೆ ಮಾಡಿ ಹಲಸಿನ ಮೂಡೆ ಹಿಟ್ಟು (ಅಥವಾ ಕೊಟ್ಟಿಗೆ ಹಿಟ್ಟು, ಹಲಸಿನ ದೋಸೆ) ಮಾಡಿ ಕೊಲೆಗಳಿಗೆ ಬಳಸುವ ಕ್ರಮವಿದೆ. ಮಣೆಯ ಮೇಲೆ ದೀಪ ಹಚ್ಚಿಟ್ಟು ತೇದ ಗಂಧ ಊದು ಬತ್ತಿ ಹಚ್ಚಿಡಬೇಕು. ಪಕ್ಕದಲ್ಲಿ ಇನ್ನೊಂದು ಮಣೆ ಹಾಕಿ 2 ಕೊಡಿ ಬಾಳೆ ಎಲೆಯಲ್ಲಿ ಮೂಡೆ ಹಿಟ್ಟು ಹಾಗೂ ಕೋಳಿಯ ಮುಖ್ಯ ಭಾಗಗಳನ್ನು ಅದರ ಮೇಲೆ ಬಡಿಸಬೇಕು. ಪ್ರಾರ್ಥಿಸಿ ಕೈ ಮುಗಿಯತ್ತಾರೆ.

ಗದ್ದೆ ಕೊಯ್ಯುವ ಮೊದಲು (ಬೆಳೆ ಕೊಯ್ಯುವ ಹಾಲಕ್ಕಿ ಇಡುವ ಕ್ರಮ) :

ಹಸುವಿನ ಹಾಲು ಅಥವಾ ತೆಂಗಿನಕಾಯಿ ಹಾಲು 5 ಎಲೆ, 1 ಅಡಿಕೆ, ಹಲಸಿನ ಎಲೆಯ ತುದಿ ಭಾಗವನ್ನು ಕುತ್ತಿ ಮಾಡಿದ ಜೊನ್ನೆ, ಚಿಕ್ಕದೊಂದು ತುದಿಬಾಳೆಲೆ ಬೇಕು. ಗದ್ದೆಗೆ ಹೋಗುವಾಗ ಈ ಎಲ್ಲಾ ಪರಿಕರಗಳಲ್ಲದೆ ಹಲ್ಲು ಕತ್ತಿ ಬೇಕು.

ಗದ್ದೆಯ ಒಂದು ಮೂಲೆಯಲ್ಲಿ 4 ನಾಟಿಯ ಮಧ್ಯಕ್ಕೆ ಪೂರ್ವಾಭಿಮುಖವಾಗಿ ತುದಿ ಎಲೆ ಇಟ್ಟು ಅದರಲ್ಲಿ 5 ಎಲೆ, 1ಅಡಿಕೆ ಇಡಬೇಕು. 4 ಮೂಲೆಗೂ ಜೊನ್ನೆಯನ್ನು ಇಟ್ಟು ಒಂದು ಜೊನ್ನೆಯನ್ನು ಕಟ್ಟಿದ ತೆನೆಯ ಮಧ್ಯಕ್ಕೆ ಇಟ್ಟು ಎಲ್ಲದಕ್ಕೆ ಹಾಲು ಎರೆದು ಎಲ್ಲಾ ದೇವರ ನೆನೆಸಿ ಕೈ ಮುಗಿದು 2 ಸೂಡಿ ಕೊಯ್ದು ಇಟ್ಟು ಬರಬೇಕು.

ಗುಳಿಗನ ಹರಿಕೆ :
ಕುಟುಂಬದ ಪೂಜಾರಿ ಹೂಂಜ ಕೋಳಿ ಕೊಂದು ಕೊಟ್ಟಿಗೆ ಅಥವಾ ಹೊರಗಿನ ಪ್ರದೇಶದಲ್ಲಿ ಅನ್ನದ ಅಡಿಗೆ ಮಾಡಬೇಕು.

ಪರಿಕರಗಳು : ತೇದ ಗಂಧ, 1 ತೆಂಗಿನಕಾಯಿ, 1ಬೊಂಡ, 2 ಕೋಲ್ತಿರಿ, ಅರಶಿನ ಕೊಂಬು ಅಥವಾ ಕುರ್ದಿ, (ಅಮಲು ಪದಾರ್ಥ) 5 ವೀಳ್ಯದೆಲೆ, 1 ಅಡಿಕೆ, ಬಾಳೆಲೆ, ಬಾಳೆಲೆ ಜೊನ್ನೆ, ನೆನೆಬತ್ತಿ, ಊದುಬತ್ತಿ

ಬಳಸುವ ಕ್ರಮ : ಕಟ್ಟೆಯಲ್ಲಿದ್ದ ಕಲ್ಲನ್ನು ನೀರು ಹಾಕಿ ಶುದ್ಧಮಾಡಿ ಬೊಂಡ ನೀರನ್ನು
ಚಿಮುಕಿಸಬೇಕು. ಮೊದಲು ದೀಪ ಹಚ್ಚಿ ಊದುಬತ್ತಿ ಹಚ್ಚಿಡಬೇಕು. ತೆಂಗಿನಕಾಯಿ ಒಡೆದು ಕಟ್ಟೆಯ ಮೇಲಿಡಬೇಕು. ಕಟ್ಟೆಯಿಂದ ಕೆಳಗೆ 2 ಬಾಳೆಲೆಯಲ್ಲಿ ಅನ್ನದ ಅಗೇಲು ಹಾಕಿ 1 ಅಗೇಲಿನಲ್ಲಿ ಕೋಳಿಯ ಮುಖ್ಯ ಭಾಗಗಳನ್ನು ಇನ್ನೊಂದರಲ್ಲಿ ಕೋಳಿಯ ತುಂಡುಗಳನ್ನು ಬಡಿಸಬೇಕು. ಕೋಲ್ತಿರಿ ಕುತ್ತಬೇಕು. ಜೊನ್ನೆಯಲ್ಲಿ ಅರಶಿನ ಕೊಂಬು ಅಥವಾ ಕುರ್ದಿ, ಅಮಲು ಪದಾರ್ಥ ಇಡಬೇಕು, ಪ್ರಾರ್ಥನೆ ಮಾಡಿಕೊಳ್ಳಬೇಕು. (ಪ್ರಾರ್ಥನೆಗೆ ಅನ್ನವನ್ನು ಉಪಯೋಗಿಸಬೇಕು) ನೀರು ಚಿಮುಕಿಸಿ ಅಗೇಲು ಜಾರಿಸಿ ಕಲ್ಲಿಗೆ ನೀರು ಹಾಕಿ ಶುದ್ದ ಮಾಡಿ ಅಲ್ಲೇ ಊಟ ಮಾಡಬೇಕು ಅಥವಾ ಕೊಟ್ಟಿಗೆಗೆ ತಂದು ಊಟ ಮಾಡಬಹುದು. (ಅಪ್ರಾಪ್ತ ಬಾಲಕಿಯರು ಹಾಗೂ ವೃದ್ಧ ಹೆಂಗಸರು ಊಟ ಮಾಡಬಹುದು).

ಬಯಲು ಮಾರಿ ಹೊರಗಟ್ಟುವುದು (ಆಟಿ ತಿಂಗಳು) :

ಊರ ಗೌಡರ ನೇತೃತ್ವದಲ್ಲಿ ಬಯಲು ಮಾರಿ ನಡೆಯುತ್ತದೆ. ಆ ಸಂಬಂಧ ಪಟ್ಟಂತೆ ಗೊತ್ತುಪಡಿಸಿದ ದಿನದಂದು ಪ್ರತಿಯೊಂದು ಮನೆಯವರು ಒಂದೊಂದು ಕೋಳಿಯನ್ನು ಮತ್ತು ಅದಕ್ಕೆ ಬೇಕಾಗುವ ಅರೆದು ತಂದ ಸಾಂಬಾರು ಪದಾರ್ಥ ಹಾಗೂ ಅಕ್ಕಿಯನ್ನು ತೆಗೆದುಕೊಂಡು ಬಯಲಿನ ಒಂದು ಭಾಗದಲ್ಲಿ ಮುಸ್ಸಂಜೆಯ ಹೊತ್ತಿನಲ್ಲಿ ಎಲ್ಲರೂ ಸೇರುತ್ತಾರೆ. ಪ್ರತಿಯೊಬ್ಬರೂ 1 ಕೋಳಿ ಹಾಗೂ ಸೂಟೆಯನ್ನು ಹಿಡಿದುಕೊಳ್ಳುತ್ತಾರೆ. ಬಾಳೆಯ ರೆಂಬೆಗಳನ್ನು ತ್ರಿಕೋನಾಕಾರದಲ್ಲಿ ಮಾಡಿ ಅದಕ್ಕೆ ತೆಂಗಿನ ಚಿರಿಯನ್ನು ಕುತ್ತಿ ಸಿಂಗಾರ ಮಾಡಿದ ಬಲಿ ಪೀಠ ಮಾಡಬೇಕು. ಬಯಲಿನಲ್ಲಿ ಪೂಜಾರಿ ಈ ಬಲಿ ಪೀಠಕ್ಕೆ ಬಾಳೆ ಎಲೆಯಲ್ಲಿ ಹೊದುಲು ಹಾಗೂ ಕೋಲ್ತಿರಿಯನ್ನು ಇಡುತ್ತಾರೆ. ಉಳಿದವರು ಹಿಂದಿನಿಂದೆ ಕೋಳಿ ಹಾಗೂ ಸೂಟೆಯನ್ನು ಹಿಡಿದುಕೊಂಡು ಕೋಳಿಯನ್ನು ಕೂಗಿಸುತ್ತಾ ಕೂಕುಳು ಹಾಕಿಕೊಂಡು ಹೋಗಬೇಕು. ಬಯಲು ಸುತ್ತ ಬಂದು ನಿರ್ದಿಷ್ಟಪಡಿಸಿದ ವಿಸರ್ಜನಾ ಪ್ರದೇಶಕ್ಕೆ ಎಲ್ಲರೂ ಬರುತ್ತಾರೆ. (ಸಾಮಾನ್ಯವಾಗಿ ಮೂರು ದಾರಿ ಸೇರುವ ಸಾರ್ವಜನಿಕ ರಸ್ತೆ) ಅಲ್ಲಿ ಬಲಿಪೀಠವನ್ನಿಟ್ಟು ಕುರ್ದಿ ಹಾಕಿ ಶುದ್ದ ಮಾಡಿ ಹೊದುಳಿನ 5 ಅಗೇಲುಗಳನ್ನು ಹಾಕಬೇಕು. ಕೊಯ್ದ ಕೋಳಿಗಳನ್ನು ನಿಗದಿಪಡಿಸಿದ ಸ್ಥಳದಲ್ಲಿ ಅಡುಗೆ ಮಾಡಿ ಭೋಜನ ಮಾಡುತ್ತಾರೆ. ಊರಿನ ಬಯಲಿಗೆ ಪದ ಆರತಿ ಮಾಡಬೇಕು. ಪ್ರಾರ್ಥನೆ ಮಾಡಿಕೊಳ್ಳುವಾಗ ಹೊದುಳು ಉಪಯೋಗಿಸಬೇಕು.

ಮುಡಿಪು:
ಗೌಡ ಜನಾಂಗದವರು ಕುಲದೇವರಾಗಿ ಪೂರ್ವದಿಂದಲೂ ಶ್ರೀ ವೆಂಕಟರಮಣ ದೇವರನ್ನು ಆರಾಧಿಸಿಕೊಂಡು ಬರುತ್ತಿದ್ದರೆಂದು ಐತಿಹ್ಯದಿಂದ ತಿಳಿದು ಬರುತ್ತದೆ. ಕೌಟುಂಬಿಕ ಭದ್ರತೆಗಾಗಿ ಪ್ರತಿ ಕುಟುಂಬದಲ್ಲಿ ದೇವರ ಮುಡಿಪು ಕಟ್ಟಿ ಆರಾಧನೆ ಮಾಡುತ್ತಿದ್ದರು. ಮುಡಿಪನ್ನು ಬೆತ್ತದ ಕುಕ್ಕೆ ಮಣ್ಣಿನ ಮಡಿಕೆ ಅಥವಾ ತಾಮ್ರದ ಕರಡಿಗೆಯಲ್ಲಿ ಕಟ್ಟುತ್ತಿದ್ದರು. ಮುಡಿಪುಗೆ ಬೆಳ್ಳಿ, ಚಿನ್ನ, ಒಳ್ಳೆಮೆಣಸು (ಕರಿಮೆಣಸು) ಮತ್ತು ನಾಣ್ಯವನ್ನು ಹಾಕುವ ಪದ್ಧತಿ.
ಸಾಮಾನ್ಯವಾಗಿ ದೀಪಾವಳಿ ಹಬ್ಬ ಅಥವಾ ಸೋಣ ಶನಿವಾರ ಊಟ ಮಾಡುವ ದಿನಗಳಲ್ಲಿ ವರ್ಷಕ್ಕೊಂದು ಸಾರಿ ಮುಡಿಪು ಬಿಚ್ಚಿ ಶುದ್ಧಮಾಡುವ ಕ್ರಮವಿದೆ. ದಾಸಯ್ಯನ ಮೂಲಕ ಮುಡಿಪು ಪೂಜೆ ಮಾಡಿ ಅಥವಾ ಬ್ರಾಹ್ಮಣರ ಮೂಲಕ ಪಾನಕ ಪೂಜೆ ಮಾಡಿ ಹಣ ಹಾಕಿ ಮುಡಿಪು ಕಟ್ಟುತ್ತಾರೆ. ದೇವರ ಕೋಣೆ ಅಥವಾ ಒಂದು ನಿಗದಿತ ಸ್ಥಳದಲ್ಲಿ ಮುಡಿಪು ಇಡಲಾಗುತ್ತದೆ.

ಮುಡಿಪು ಬಿಚ್ಚುವ ಕ್ರಮ :
ಮನೆಯ ನಿಗದಿತ ಸ್ಥಳದಲ್ಲಿ ಅಥವಾ ಕನ್ನಿಕಂಬದ ಹತ್ತಿರ ಒಂದು ತುದಿ ಬಾಳೆಲೆ ಹಾಕಿ ಅದರ ಮೇಲೆ ಮುಡಿಪು ಇಟ್ಟು ಬಿಚ್ಚಬೇಕು. ಗಣಪತಿಗೆ ಸ್ವಸ್ತಿಕ ಇಡುವ ಕ್ರಮವಿದೆ. ಮುಡಿಪುಗೆ ಧೂಪದಾರತಿ ಮಾಡಿ ತೆಂಗಿನ ಕಾಯಿ ಒಡೆದು ಆರತಿ ಮಾಡಬೇಕು. ನಂತರ ಪ್ರಾರ್ಥನೆ ಮಾಡಿ ಕುಟುಂಬದ ಪ್ರತಿಯೊಬ್ಬರೂ ಮುಡಿಪುಗೆ ಹಣ ಹಾಕಬೇಕು. ನಂತರ ಮಡಿಪು ಕಟ್ಟಿ ಸ್ವಸ್ಥಾನದಲ್ಲಿಡುವುದು.

ಬೇಡಿ : ಯಾವುದೇ ದೋಷ ಪರಿಹಾರಕ್ಕೆ ಶ್ರೀ ವೆಂಕಟರಮಣನಿಗೆ ಹರಕೆ ಒಪ್ಪಿಸುವುದಾಗಿ ಬೇಡಿ ತೊಟ್ಟುಕೊಳ್ಳುತ್ತಿದ್ದರು/ ತೊಡಿಸುತ್ತಿದ್ದರು.

ಹರಿಸೇವೆ (ದಾಸಯ್ಯನ ಮೂಲಕ ಮಾಡುವ ಕ್ರಮ) : ತಿರುಪತಿಗೆ ಹೋಗುವ ಮೊದಲು ದಾಸಯ್ಯನ ಕರೆದು ಮುಡಿಪು ಪೂಜೆ ಮಾಡಬೇಕು. ಪೂಜೆ ಆದ ನಂತರ ಮುಡಿಪುವಿನಲ್ಲಿರುವ ಹಣವನ್ನು ಒಂದು ಬಿಳಿ ಬಟ್ಟೆ ಚೀಲದಲ್ಲಿ ಹಾಕಿ ತಿರುಪತಿಗೆ ಕೊಂಡು ಹೋಗುವುದು. ದಾಸಯ್ಯ ಕುಟುಂಬದ ಹಿರಿಯ ಯಜಮಾನನ ತಲೆ ಮೇಲೆ ಕಟ್ಟಿದ ಹಣವನ್ನಿಟ್ಟು ಕಳಿಸಿ ಕೊಡುತ್ತಾರೆ. ತಿರುಪತಿಗೆ ಮುಡಿಪು ಹಣ ಸಮರ್ಪಣೆ ಮಾಡಿ ಬರಬೇಕು. ತಿರುಪತಿಯಿಂದ ಬಂದ ಮೇಲೆ ಒಂದು ವಾರದೊಳಗೆ ದಾಸಯ್ಯನನ್ನು ಬರಮಾಡಿ ಹರಿಸೇವೆ ಮಾಡಬೇಕು.

ಕ್ರಮ: ಬಾಳೆ ಪಂಬೆ (ರೆಂಬೆ)ಯಲ್ಲಿ ಗುಂಡಕಟ್ಟಿ ದೀಪ ಹಚ್ಚಿ ಸ್ವಸ್ತಿಕ ಇಟ್ಟು ದೇವರ ಮೂರ್ತಿಯನ್ನು ಗುಂಡದೊಳಗೆ ಇಟ್ಟು ಪೂಜೆ ಮಾಡುತ್ತಾರೆ. ಪಂಚಕಜ್ಜಾಯ ಮತ್ತು ಪಾನಕ ಇರುತ್ತದೆ. ನಂತರ ಮುಡಿಪು ಕಟ್ಟುವ ಕ್ರಮವಿದೆ. ಪ್ರಾರ್ಥನೆ ಮಾಡಿದ ನಂತರ ಕುಟುಂಬದ ಪ್ರತಿಯೊಬ್ಬರೂ ಮುಡಿಪುಗೆ ಹಣ ಹಾಕಬೇಕು. ನಂತರ ಮಂಗಳಾರತಿ, ಪಾನಕ ಪೂಜೆ ಮಾಡಿ ಮುಡಿಪು ಕಟ್ಟುವುದು. ಆನಂತರ ಪ್ರಸಾದ ವಿತರಣೆಯಾಗುತ್ತದೆ. ನಂತರ ಭೋಜನದ ವ್ಯವಸ್ಥೆಯಾಗುತ್ತದೆ. ರಾತ್ರಿ ಹೊತ್ತಿಗೆ ಕೆಂಚಿರಾಯನ ಪೂಜೆ ನಡೆಯುತ್ತದೆ.

ಕೆಂಚಿರಾಯ ಪೂಜೆ (ಮುಡಿಪು ಭದ್ರತೆಗಾಗಿ ಮುಡಿಪನ್ನು ಕಾಯುವವ ಕೆಂಚಿರಾಯ): (ಕೆಂಚಿರಾಯ ಪೂಜೆಯನ್ನು ಕೆಲವು ಭಾಗಗಳಲ್ಲಿ ಹಂದಿ ತಲೆ ಕಡಿಯುವುದರ ಮೂಲಕ ಅಥವಾ ಇನ್ನೂ ಕೆಲವು ಭಾಗಗಳಲ್ಲಿ ಕೋಳಿ ತಲೆ ಕೊಯ್ಯುವುದರ ಮೂಲಕ ನಡೆಯುತ್ತದೆ.)
ಸಂಜೆ ಹೊತ್ತು ಕೋಳಿ ಅಥವಾ ಹಂದಿಯನ್ನು ತಲೆ ಕೊಯ್ದು ನಂತರ ಅಡುಗೆ ಮಾಡಬೇಕು. 5 ಸೇರು ಬೆಳ್ತಿಗೆ ಅಕ್ಕಿಯ ಕಡುಬು ತಯಾರಿಸುತ್ತಾರೆ. 1 ಸೇರು ಬೆಳ್ಳಿಗೆ ಅಕ್ಕಿಯನ್ನು ನೈವೇದ್ಯ ಮಾಡಬೇಕು. ನಂತರ ಗುಂಡದ ಎದುರು 3 ಬಾಳೆಲೆ ಹಾಕಿ ನೈವೇದ್ಯ ಬಡಿಸಿ, ಅದರ ಮೇಲೆ ಕಡುಬನ್ನು ಇಟ್ಟು ಹಂದಿ ಅಥವಾ ಕೋಳಿ ಪದಾರ್ಥ ಬಡಿಸಬೇಕು. 16 ಚೌಡಿ (ಬಾಲೆ ಎಲೆಯಿಂದ ಮಾಡಿದ ದೊಣ್ಣೆ) ಅಗೆಲಿನ ಸುತ್ತ ಇಟ್ಟು
ಚೌಡಿಗೆ ಹಂದಿ ಅಥವಾ ಕೋಳಿ ಪದಾರ್ಥ ಹಾಕಬೇಕು. ದಾಸಯ್ಯ ಪೂಜೆ ಮಾಡಿದ ನಂತರ ಪ್ರಸಾದ ವಿತರಣೆಯಾಗುತ್ತದೆ. ಬಳಿಕ ಭೋಜನದ ವ್ಯವಸ್ಥೆ ಇರುತ್ತದೆ.

ಆಟಿ ಅಮವಾಸ್ಯೆ
ಅತ್ಯಂತ ಪವಿತ್ರ ಮತ್ತು ಔಷಧೀಯ ಗುಣಯುಕ್ತವೆಂದು ಪರಿಗಣಿಸುವ ಹಾಲೆಮರ (ಪಾಲೆ ಮರ)ದ ತೊಗಟೆಯ ರಸವು ರೋಗ ನಿರೋಧಕ ಔಷಧೀಯ ರೂಪದಲ್ಲಿ ಆಟ ಅಮವಾಸ್ಯೆ ದಿನದಂದು ಸೇವನೆ ಮಾಡುತ್ತಾರೆ. ಸೂರೋದಯಕ್ಕಿಂತ ಮುಂಚಿತವಾಗಿ ಎದ್ದು (ಪೂರ್ವ ಪದ್ಧತಿ ಪ್ರಕಾರ ಬೆತ್ತಲೆಯಾಗಿ) ಮರದ ಬುಡಕ್ಕೆ ಹೋಗಿ ಕಲ್ಲಿನಿಂದ ಕಾಂಡವನ್ನು ಜಜ್ಜಿ ತೊಗಟೆಯನ್ನು ತೆಗೆಯುತ್ತಾರೆ. ಅದನ್ನು ತಂದು ಕಲ್ಲಿನಲ್ಲಿ ಗುದ್ದಿ ರಸ ತೆಗೆದು ಅದಕ್ಕೆ ಶುಂಠಿ, ಕಾಳುಮೆಣಸು ಸೇರಿಸಿ ಸೋಸಿ ಎಲ್ಲರೂ ಒಂದೆರಡು ಚಮಚದಷ್ಟು ಕುಡಿಯಬೇಕು. (ಅಮಾವಾಸ್ಯೆಯ ರಾತ್ರಿ ಬೇರೆ ಬೇರೆ ಕಡೆಗಳಿಂದ ನಾನಾ ಜಾತಿಯ ಹಾವು, ಪಕ್ಷಿಗಳು ಬಂದು ಮರದಲ್ಲಿ ನೆಲೆಸಿ ಹಲವು ರೀತಿಯ ಔಷಧದ ಶಕ್ತಿಯನ್ನು ಮರಕ್ಕೆ ನೀಡುತ್ತವೆ ಎಂಬ ನಂಬಿಕೆ ಇದೆ)

ಆಟಿ ಅಮಾವಾಸ್ಯೆ ದಿನದಂದು ದಾನ ಬಿಡುವುದು :
ಐತಿಹ್ಯ ಪ್ರಕಾರ ತಿರುಪತಿ ತಿಮ್ಮಪ್ಪ ದೇವರು-ಪದ್ಮಾವತಿ ದೇವಿಯರನ್ನು ವಿವಾಹವಾಗುವಾಗ ಆರ್ಥಿಕ ಮುಗ್ಗಟ್ಟು ಉಂಟಾಯಿತು ಎನ್ನಲಾಗಿ ಸಮುದ್ರ ರಾಜನಿಂದ ಆರ್ಥಿಕ ಸಾಲ ಪಡೆದುದರಿಂದ ಸಾಲ ನಿವೃತ್ತಿಗಾಗಿ ನಾವು ನಾಣ್ಯವಿಟ್ಟು ದಾನ ಮಾಡುವುದು ವಾಡಿಕೆ. ದಾನ ಬಿಡುವುದು ಕೊಡಿ ಬಾಳೆಲೆಯಲ್ಲಿ ಹೂವುಹಾಗೂ ನವಧಾನ್ಯ ಇಟ್ಟು ಗಂಧ ಹಾಗೂ ವೀಳ್ಯದೆಲೆ ಮತ್ತು ನಾಣ್ಯ ಇಡಬೇಕು. ದಾನ ಬಿಡುವವರು ಮದ್ಯದಲ್ಲಿ ನಿಂತು ಅದರ ಸುತ್ತಲೂ ಎಲ್ಲರೂ ನಿಂತಿರಬೇಕು. ಅವರೆಲ್ಲರ ತಲೆಗೆ ಸುತ್ತು ತಂದು ನೀರಲ್ಲಿ ಬಿಟ್ಟು ಕೈಮುಗಿದು ಬರಬೇಕು

ನಾಗರಪಂಚಮಿ :
ಆಟಿ ತಿಂಗಳಿನಲ್ಲಿ ನಾಗನಿಗೆ ಹಾಲೆರೆಯುವುದು ಕ್ರಮ. ನಾಗ ಕೃಷಿಕಾರಕ, ಸಂತಾನಕಾರಕ, ಸಂಪತ್ತು, ಸಂತಾನ ವೃದ್ಧಿಗಾಗಿ ಅಲ್ಲದೆ ಚರ್ಮ ವ್ಯಾಧಿಗಾಗಿ ಮುಂತಾದ ಪಂಚೇಂದ್ರೀಯಗಳ ಉಪಶಮನಕ್ಕಾಗಿ ಆಚರಣೆ ಮಾಡಬೇಕು. ಪುರೋಹಿತರ ಮೂಲಕ ವೈದಿಕ ಕಾರ್ಯಕ್ರಮ ಮಾಡುವುದು ಸೂಕ್ತ ಪದ್ದತಿ.

ಸೋಣ ಶನಿವಾರ :
ಸೋಣ ತಿಂಗಳು ಹೊಸ ವರ್ಷದ ಆಚರಣೆಯಂತೆ ಸೋಣ ಶನಿವಾರ ಊಟ ಮಾಡುವ ಕ್ರಮವಿದೆ. ಈ ದಿನ ವ್ರತಾಚರಣೆ ಮಾಡಬೇಕು. ಊಟಕ್ಕೆ ಮೊದಲು ಮುಡಿಪು ತೆಗೆದು ಶುದ್ದಿಗೊಳಿಸಿ ಎಲ್ಲರೂ ಮುಡಿಪುಗೆ ಹಣ ಹಾಕಬೇಕು. ನಂತರ ಮುಡಿಪು ಕಟ್ಟಿ ಯಥಾ ಸ್ಥಾನದಲ್ಲಿಟ್ಟು ಶನಿವಾರ ಊಟ ಮಾಡುವ ಕ್ರಮವಿದೆ