Saturday, October 26, 2024

ಗೌಡ ಸಂಸ್ಕೃತಿ-ಶವ ಸಂಸ್ಕಾರ

 ಮನುಷ್ಯನಿಗೆ ಹುಟ್ಟು ಮತ್ತು ಸಾವು ಇವೆರಡು ಜೀವನದ ಸಹಜ ಕ್ರಿಯೆಗಳೆಂದು ಹೇಳಬಹುದು. ಹುಟ್ಟಿನಿಂದ ಆರಂಭಿಸಿ ಬದುಕಿನುದ್ದಕ್ಕೂ ಆತ ಪಡುವ ಸುಖದಃಖಗಳ ಮಧ್ಯೆ ತನ್ನ ಬದುಕನ್ನು ಗಟ್ಟಿಗೊಳಿಸಿ ಒಬ್ಬ ವ್ಯಕ್ತಿಯಾಗಿ ಸಮಾಜದ ಮಧ್ಯೆ ಬೆಳೆಯುತ್ತಾನೆ. ಬಾಲ್ಯ, ವಿದ್ಯಾಭ್ಯಾಸ, ಯೌವನ, ಉದ್ಯೋಗ, ಮದುವೆ, ಮಕ್ಕಳು ಇವುಗಳ ಮಧ್ಯೆ ಬದುಕುತ್ತಾ ಕೊನೆಗೊಂದು ದಿನ ಮರಣ ಹೊಂದುತ್ತಾನೆ. ಬದುಕಿನ ಸಂಸ್ಕೃತಿಯಲ್ಲಿ ಮರಣದೊಂದಿಗೆ ವ್ಯಕ್ತಿ ಜಗತ್ತಿನ ಎಲ್ಲಾ ಸಂಬಂಧಗಳನ್ನು ಕಳೆದುಕೊಳ್ಳುತ್ತಾನೆ. ಮರಣದ ನಂತರದ ಸಂಸ್ಕಾರ, ಸೂತಕಗಳ ಬಗ್ಗೆ ನಡೆಸುವ ಕ್ರಿಯೆಗಳಿರುತ್ತವೆ. ವಿಭಿನ್ನ ಕಾಲ ಘಟ್ಟಗಳಲ್ಲಿ ಮರಣವಾಗುವ ವ್ಯಕ್ತಿಗಳಿಗೆ ಭಿನ್ನ ಭಿನ್ನ ಬಗೆಯ ಸಂಸ್ಕಾರ ಕ್ರಿಯೆಗಳಿರುತ್ತವೆ. ಬಾಲ್ಯ ಶವ ಸಂಸ್ಕಾರ, ಅವಿವಾಹಿತ ಶವ ಸಂಸ್ಕಾರ, ವಿವಾಹಿತ ಅಥವಾ ಆಯುಷ್ಯ ಮುಗಿದು ತೀರಿಕೊಂಡವರಿಗೆ ಸಂಬಂಧಿಸಿದ ಸಂಸ್ಕಾರ ಕ್ರಿಯೆಗಳನ್ನು ಇಲ್ಲಿ ಪ್ರತ್ಯೇಕವಾಗಿ ದಾಖಲಿಸಲಾಗಿದೆ. ಎಲ್ಲಾ ಸಂಸ್ಕಾರ ಕ್ರಿಯೆಗಳು ಊರಗೌಡರ ನೇತೃತ್ವದಲ್ಲಿ ನಡೆಯುವುದು

ಬಾಲ್ಯ ಶವ ಸಂಸ್ಕಾರ ಕ್ರಿಯೆ : ಅಪ್ರಾಪ್ತ ಮಕ್ಕಳು ಮೃತರಾದರೆ ಅವರಿಗೆ ಮಾಡುವ ಸಂಸ್ಕಾರದಲ್ಲಿ ಭಿನ್ನತೆ ಇರುತ್ತದೆ. ಶವವನ್ನು ದಫನ ಮಾಡುತ್ತಾರೆ ಸುಡುವುದಿಲ್ಲ. ಮೃತ ಮಗುವನ್ನು ಸ್ನಾನ ಮಾಡಿಸಿ ದಕ್ಷಿಣ ದಿಕ್ಕಿಗೆ ತಲೆ ಬರುವಂತೆ ಮಲಗಿಸುವುದು, ಸ್ನಾನ ಮಾಡಿಸಿದ ನಂತರ ಮಡಿಬಟ್ಟೆಯನ್ನು ತೊಡಿಸಿ ಬಿಳಿ ಬಟ್ಟೆಯನ್ನು ಹೊದಿಸಿ ಚಾಪೆ ಹಾಸಿ ಮಲಗಿಸಬೇಕು. ಗಂಧದ ತಿಲಕವಿಡಬೇಕು (ಬೊಟ್ಟು), ಹಾಲು ನೀರು ಮಿಶ್ರ ಮಾಡಿ ಸ್ವಲ್ಪ ಬೆಳ್ಳಿಗೆ ಅಕ್ಕಿ ಹಾಕಿ ಒಟ್ಟಿಗೆ ತುಳಸಿ ಕೊಡಿಯನ್ನು ಕಂಚಿನ ಬಟ್ಟಲಲ್ಲಿ ಇಡಬೇಕು. ದೀಪ ಹಚ್ಚಿ ಅಗರಬತ್ತಿ ಹಚ್ಚಿಡಬೇಕು. ನಂತರ ಪ್ರತಿಯೊಬ್ಬರ ಶವದ ಬಾಯಿಗೆ ನೀರು ಕೊಡಬೇಕು. ಈ ಎಲ್ಲಾ ಕ್ರಮ ಮುಗಿದ ನಂತರ ಮಗುವನ್ನು ದಫನ ಸ್ಥಳಕ್ಕೆ ಬಿಳಿ ಬಟ್ಟೆಯಲ್ಲಿ ಸುತ್ತಿ ಕೈಯಲ್ಲಿ ಎತ್ತಿಕೊಂಡು ಹೋಗಬೇಕು (ಚಟ್ಟ ಉಪಯೋಗಿಸುವಂತಿಲ್ಲ) ದಫನ ಮಾಡುವ ಸ್ಥಳದಲ್ಲಿ ಉತ್ತರ-ದಕ್ಷಿಣವಾಗಿ ಕನಿಷ್ಠ 5 ಅಡಿ ಆಳದ ಹೊಂಡ ಮಾಡಿರಬೇಕು. ಮಗುವಿನ ತಂದೆಯೂ, ಹತ್ತಿರದ ಸಂಬಂಧಿಕರು ಮಗುವನ್ನು ದಕ್ಷಿಣಕ್ಕೆ ತಲೆ ಬರುವಂತೆ ತೋಡಿದ ಹೊಂಡದಲ್ಲಿ ಮಲಗಿಸಬೇಕು. ನಂತರ ಸ್ವಲ್ಪ ಹಾಲು ಹೊಯ್ದು ಹೂ ಹಾಕಿ ಪ್ರತಿಯೊಬ್ಬರೂ 3 ಹಿಡಿಯಷ್ಟು ಮಣ್ಣನ್ನು ಶವದ ಮೇಲೆ ಹಾಕಬೇಕು. ಪೂರ್ತಿ ಮಣ್ಣು ಹಾಕಿ ಹೊಂಡ ಮುಚ್ಚಿ ನೆಲದಿಂದ ಎತ್ತರ ಬರುವಂತೆ ಮಣ್ಣು ಹಾಕಿ ದಫನ ಕಾರ ಮುಗಿಸಬೇಕು. ಇದರ ಮೇಲೆ 3 ಕಲ್ಲುಗಳನ್ನಿಡಬೇಕು. (ತಲೆ ಮಧ್ಯ ಕಾಲು ಭಾಗಕ್ಕೆ ಬರುವಂತೆ). ನಂತರ ಎಲ್ಲರೂ ಸ್ನಾನ ಮಾಡಬೇಕು. 3ನೇ ದಿನದಲ್ಲಿ ದೂಪೆ ಇದ್ದಲ್ಲಿಗೆ ಹೋಗಿ ಇಟ್ಟಂತಹ ಕಲ್ಲುಗಳನ್ನು ತೆಗೆದು ಹಾಲು ಹೊಯ್ದು, ಸುತ್ತು ಬಂದು, ಸರಳಿ ಸೊಪ್ಪಿನ ಕಣೆಯನ್ನು ಕುತ್ತಿ ಹಾಲು-ಅನ್ನವನ್ನು ಗೆರಟೆಯಲ್ಲಿಡಬೇಕು. ಒಂದು ಎಳನೀರು ಕೆತ್ತಿ ಇಡಬೇಕು. ನಂತರ ಸ್ನಾನ ಮಾಡಿ ಮನೆಗೆ ಬಂದ ಮೇಲೆ ದೇವಸ್ಥಾನದಿಂದ ತಂದ ಪುಣ್ಯಾರ್ಚನೆಯನ್ನು ಹಾಕಿ ಶುದ್ಧ ಮಾಡಿಕೊಳ್ಳಬೇಕು. 10 ದಿನದವರೆಗೆ ಸೂತಕ ಆಚರಣೆ ಮಾಡಬೇಕು. 11ನೇ ದಿನದಲ್ಲಿ ದೂಫೆ ಇದ್ದಲ್ಲಿಗೆ ಹೋಗಿ ನೆನೆಬತ್ತಿ ಹಾಗೂ ಅಗರಬತ್ತಿ ಹೊತ್ತಿಸಿ ಇಟ್ಟು ಹುರುಳಿ, ಬಾಳೆಕಾಯಿ, ಕುಂಬಳಕಾಯಿ ಪದಾರ್ಥ ಮಾಡಿ ಜೊತೆಗೆ ಅನ್ನ ಮತ್ತು ಅಕ್ಕಿ ಪಾಯಸ, ಸಿಹಿ ತಿಂಡಿಗಳು, ಹಾಲು, ಎಳನೀರು ಇಟ್ಟು ಬರಬೇಕು.

ಅವಿವಾಹಿತ ಶವಸಂಸ್ಕಾರ ಕ್ರಿಯೆ:ಅವಿವಾಹಿತರಾಗಿದ್ದು ಮೃತರಾದರೆ ಶವ ಸಂಸ್ಕಾರದ ಎಲ್ಲಾ ಸಂಪ್ರದಾಯಗಳನ್ನು ಮಾಡುವುದು. (ಆದರೆ ಕಾಟದ ಅಡಿಯಲ್ಲಿ ಚಿಕ್ಕ ಹೊಂಡವನ್ನು ಮಾಡಿಕೊಳ್ಳಬೇಕು).

ಮರಣಕ್ಕೆ ನಡೆಸುವ ಸಂಸ್ಕಾರ ಕ್ರಿಯೆಗಳು:
ಸಹಜವಾಗಿ ವ್ಯಕ್ತಿ ಮರಣವಾದಾಗ ಕುಟುಂಬದ ಸದಸ್ಯರಿಗೆ, ಮೃತನ ಆಪ್ತರಿಗೆ ಮತ್ತು ಊರಿನ ಪ್ರಮುಖರಿಗೆ ಸುದ್ದಿ ತಿಳಿಸಬೇಕು. (ಆಕಾಶಕ್ಕೆ 2 ಗುಂಡುಗಳನ್ನು ಹಾರಿಸುವುದರ ಮೂಲಕ ಕೂಡಾ ನೆರೆ-ಕರೆಯವರಿಗೆ ಸತ್ತ ಸೂಚನೆಯನ್ನು ನೀಡುವುದುಂಟು.) ಮರಣವಾದಾಗ ಚಾಪೆಯ ಮೇಲೆ ಶವವನ್ನು ದಕ್ಷಿಣಕ್ಕೆ ತಲೆ ಇರುವಂತೆ ಮಲಗಿಸಿ ಬಿಳಿ ಬಟ್ಟೆಯನ್ನು ಹೊದಿಸಬೇಕು. ಕಂಚಿನ ಬಟ್ಟಲಲ್ಲಿ ಬೆಳ್ತಿಗೆ ಅಕ್ಕಿ, ತುಳಸಿಯ ತುದಿ, ನೀರನ್ನು ಹಾಕಿಡಬೇಕು. ಶವದ ಎಡಭಾಗದಲ್ಲಿ ತಲೆಯಪಕ್ಕ ಕಾಲುದೀಪ ಹಚ್ಚಿಡಬೇಕು. ಶವದ ಬಾಯಿಗೆ ಕಂಚಿನ ಬಟ್ಟಲಲ್ಲಿದ್ದ ತುಳಸಿ ತುದಿಯಿಂದ ನೀರು ಬಿಡಬೇಕು. ಒಂದು ಮಣ್ಣಿನ ಮಡಕೆಯಲ್ಲಿ ಕೆಂಡಹಾಕಿ ಒಡೆದ ಕೊಬ್ಬರಿ ಹಾಗೂ ಗಂಧಧೂಪ ಹಾಕಿ ಹೊಗೆಬರುವಂತೆ ಮಾಡಬೇಕು. ಮನೆಯವರು ತೆಂಗಿನಕಾಯಿ ಒಡೆದು ತಲೆಯ ಹತ್ತಿರ ಹಾಗೂ ಕಾಲಿನ ಹತ್ತಿರ ಇಟ್ಟು ಅದಕ್ಕೆ ಎಣ್ಣೆ ಹಾಕಿ ನೆನೆಬತ್ತಿ ಹಚ್ಚಿಡಬೇಕು. ಪೂರ್ವಪದ್ಧತಿ ಪ್ರಕಾರ ಮಾಡು (ಛಾವಣಿ) ತೂತು ಮಾಡಿ ಒಂದು ದೊಣ್ಣೆಯನ್ನು ಆ ತೂತಿನಲ್ಲಿ ದಾಟಿಸುವುದು ಕ್ರಮ. [ಈ ತೂತಿನ ಮೂಲಕ ಸತ್ತವನ ಆತ್ಮ ಆಕಾಶ ಮಾರ್ಗವಾಗಿ ಹೋಗುವುದೆನ್ನುವ ನಂಬಿಕೆ]. ಹತ್ತಿರದ ಬಂಧುಗಳು ಹಣೆಗೆ ನಾಣ್ಯ (ಪಾವಲಿ) ವನ್ನಿಟ್ಟು ತುಳಸಿ ತುದಿಯಿಂದ ಬಲಗೈ ಸೇರಿಸಿ, ಎಡಗೈಯಲ್ಲಿ ಸ್ವರ್ಗಕ್ಕೆ ಹೋಗು ಎಂದು 3 ಸಲ ನೀರು ಬಿಡುವರು. ತೀರಿಕೊಂಡವರು ಹಿರಿಯರಾದರೆ ಕಾಲುಮುಟ್ಟಿ ನಮಸ್ಕರಿಸುವರು, ಕಿರಿಯರಾದರೆ ತಲೆಮುಟ್ಟಿ ನಮಸ್ಕರಿಸುವುದು ಪೂರ್ವಪದ್ಧತಿ. ನೀರು ಕೊಟ್ಟ ಮೇಲೆ ಅಪ್ರದಕ್ಷಿಣೆಯಾಗಿ ಸುತ್ತು ಬರುವರು. (ಹಣೆಗೆ ನಾಣ್ಯ ಇಡುವುದು, ಹೆಣಕ್ಕೆ ಬಟ್ಟೆ ಹಾಕುವುದು ಸತ್ತವನ ಋಣಮುಕ್ತನಾಗುವ ಉದ್ದೇಶದಿಂದ ಎಂಬ ನಂಬಿಕೆಯಿದೆ). ಕುಟುಂಬಸ್ಥರು ಹಾಗೂ ಹತ್ತಿರದ ಸಂಬಂಧಿಕರು ಬಂದ ಮೇಲೆ ಹೆಣವನ್ನು ಸ್ನಾನ ಮಾಡಿಸಲು ತಯಾರಿ ನಡೆಸುವರು. ಮನೆ ಒಳಗೆ ಮಣ್ಣಿನ ಮಡಕೆಯಲ್ಲಿ ಸ್ನಾನಕ್ಕೆ ಬೇಕಾದಷ್ಟು ನೀರನ್ನು ಉಗುರು ಬಿಸಿಯಾಗುವಂತೆ ಕಾಯಿಸುವರು. ಸ್ನಾನ ಮಾಡುವ ಜಾಗವನ್ನು ಗುರುತಿಸಿ ಹಲಗೆಯನ್ನು ಉತ್ತರ-ದಕ್ಷಿಣವಾಗಿ ಇಡುವರು. ಒಂದು ಗೆರಟೆಯಲ್ಲಿ ಎಣ್ಣೆ ಅರಿಶಿನದ ಮಿಶ್ರಣದೊಂದಿಗೆ ತುದಿ ಗರಿಕೆ, ನೀರು ಹಾಕುವುದಕ್ಕೆ ತೂತು ಇದ್ದ ಗೆರಟೆ, ಸೀಗೆ, ಬಾಗೆಗಳನ್ನು ಜೋಡಿಸಿಡಬೇಕು. ಕುಟುಂಬಸ್ಥರು ಹೆಣವನ್ನು ಕೈಯಲ್ಲಿ ಎತ್ತಿಕೊಂಡು ಕಾಲು ಮುಂದಾಗಿ ಹೊರಬರುವಂತೆ ಸ್ನಾನ ಮಾಡಿಸುವ ಜಾಗಕ್ಕೆ ತರುತ್ತಾರೆ. ದಕ್ಷಿಣಕ್ಕೆ ತಲೆ ಬರುವಂತೆ ಹಲಗೆಯಲ್ಲಿ ಹೆಣವನ್ನು ಮಲಗಿಸುವರು. ಪುರುಷರಾದರೆ ಕ್ಷೌರ ತೆಗೆಯುವ ಕ್ರಮವಿದೆ

ಸ್ನಾನ ಮಾಡಿಸುವ ಕ್ರಮ ಹಾಗೂ ಶವಶೃಂಗಾರ
ಸತ್ತ ವ್ಯಕ್ತಿಯನ್ನು ಸ್ನಾನ ಮಾಡಿಸುವಾಗ ಮೊದಲು ಹಿರಿಯರು ನಂತರ ಉಳಿದವರು ಸ್ನಾನ ಮಾಡಿಸುತ್ತಾರೆ. ಸ್ನಾನ ಮಾಡಿಸುವುದಕ್ಕೂ ಒಂದು ಕ್ರಮವಿದೆ ಅಪ್ರದಕ್ಷಿಣೆ ನೀರು ಹಾಕಿ ಎಡಗೈಯಲ್ಲಿ ಸ್ನಾನ ಮಾಡಿಸಬೇಕು. ಸ್ನಾನ ಮಾಡಿಸಿ ಮುಗಿದ ನಂತರ ಅವನು ಉಟ್ಟುಕೊಂಡಿರುವ ಬಟ್ಟೆ ಹಾಗೂ ಉಡಿದಾರವನ್ನು ಅಲ್ಲೇ ಬಿಚ್ಚಿಡಬೇಕು. ನಂತರ ಮೈ ಒರೆಸಿ ಶುದ್ಧ ವಸ್ತ್ರಗಳನ್ನು ತೊಡಿಸಿ ತಲೆಗೆ ಮುಂಡಾಸು ಕಟ್ಟಿ ಶಾಲು ಹಾಕಿ, ಗಂಧದ ತಿಲಕವನ್ನಿಡಬೇಕು. (ಮದುಮಗನಿಗೆ ಯಾವ ರೀತಿ ಸಿಂಗಾರ ಮಾಡುತ್ತಾರೋ ಅದೇ ರೀತಿ.) ಆದರೆ ಅಂಗಿಯನ್ನು ತಿರುಗಿಸಿ ಹಾಕಬೇಕು. ಮುತ್ತೈದೆ ಹೆಂಗಸರು ತೀರಿ ಹೋದರೆ ಸ್ನಾನ ಮಾಡಿಸಿದ ನಂತರ ಧಾರೆ ಸೀರೆ ಉಡಿಸಿ ಹೂ-ಹಿಂಗಾರ ಇಟ್ಟು ಕುಂಕುಮ ಇಟ್ಟು ಮದುಮಗಳಿಗೆ ಯಾವ ರೀತಿ ಸಿಂಗಾರ ಮಾಡುತ್ತಾರೋ ಅದೇ ರೀತಿ ಸಿಂಗರಿಸುವರು. ವಿಧವೆಯಾಗಿದ್ದರೆ ಬಿಳಿ ಸೀರೆ ಉಡಿಸಿ ಹಣೆಗೆ ಗಂಧ ಹಚ್ಚುವರು. ಉಳಿದಂತೆ ಮೇಲಿನ ಕ್ರಮದ ಹಾಗೆ ಸ್ನಾನ ಮಾಡಿಸಿದ ನಂತರ ಮಡಿಕೆಯನ್ನು ಮಗುಚಿ ಹಾಕಿ ಬರಬೇಕು.(ಸ್ನಾನ ಮಾಡಿಸಿದ ಜಾಗವನ್ನು ನಂತರ ಯಾರೂ ದಾಟಬಾರದು). ಮನೆ ಒಳಗೆ ಚೌಕಿ (ಪಡಸಾಲೆ) ಯಲ್ಲಿ ಚಾಪೆ ಹಾಸಿ ಶವವನ್ನುುತ್ತರ ದಕ್ಷಿಣವಾಗಿ ಮಲಗಿಸುವರು. ಬಿಳಿ ಬಟ್ಟೆ ಹಾಕಿದ ನಂತರ ಗಂಡ ತೀರಿಕೊಂಡರೆ ಹೆಂಡತಿಯ ಧಾರೆ ಸೀರೆಯ ಅರ್ಧ ಭಾಗವನ್ನು ಮೊದಲು ಶವಕ್ಕೆ ಹೊದಿಸಬೇಕು. ನಂತರ 3 ಮೀಟರ್ ಉದ್ದದ ಬಿಳಿ ಬಟ್ಟೆಯನ್ನು ಶವದ ಮೇಲೆ ಹಾಕಬೇಕು. (ಈ ಬಟ್ಟೆ ಅಕ್ಕಿ ಭತ್ತ ಕಟ್ಟಲು ಉಪಯೋಗಿಸಬೇಕು). ಆ ನಂತರ ಬಂಧುಗಳು ತಂದಿರುವ ಬಿಳಿ ಬಟ್ಟೆಗಳನ್ನು ಶವದ ಮೇಲೆ ಹಾಕಬೇಕು.

ಕಾಟದ ತಯಾರಿ :
ಗೊತ್ತುಪಡಿಸಿದ ಜಾಗವನ್ನು ಸಮತಟ್ಟು ಮಾಡಿ ಸೌದೆಯನ್ನು ಜೋಡಿಸಿಡುವರು. ಮೂಲದವರಿಗೆ ಹೇಳಿಕೆಕೊಟ್ಟ ಪ್ರಕಾರ ಕಾಟ ಸಿದ್ದಪಡಿಸುವರು, ಸೌದೆಯ ಗಾತ್ರ, ಹೆಣದ ಅಳತೆಗಿಂತ 2 ಅಡಿಯಷ್ಟು ಉದ್ದವಿರಬೇಕು. ಪೂರ್ವ ಪಶ್ಚಿಮವಾಗಿ ದಪ್ಪದ ಎರಡು ಮರದ ದಂಡುಗಳನ್ನು (ಅಡಿಮರ) ಕೆಳಗಡೆ ಹಾಕಿ ಮೇಲೆ ಉತ್ತರ ದಕ್ಷಿಣವಾಗಿ ಸೌದೆ ಇರಿಸುವರು. (ಕಾಟಕ್ಕೆ ಸೌದೆ ಒಟ್ಟುವಾಗ - 2ಮಂದಿ ಸೌದೆಹಿಡಿದು ಒಟ್ಟತಕ್ಕದ್ದು)

ಚಟ್ಟದ ತಯಾರಿ :
ನೆರೆಹೊರೆಯವರು ಬಿದಿರು ಜೋಡಣೆಯಿಂದ ಚಟ್ಟ ತಯಾರು ಮಾಡುತ್ತಾರೆ. 2 ಬಿದಿರು (ಅಂದಾಜು 10 ಅಡಿ ಉದ್ದವಿರಬೇಕು)ಗಳನ್ನು ಸಮಾನಾಂತರವಾಗಿಟ್ಟು ತಟ್ಟೆಗಳನ್ನು (ಭಾಗ ಮಾಡಿದ ಬಿದಿರು) ಕತ್ತರಿ ಆಕಾರದಲ್ಲಿಟ್ಟು ಒಂದು ತುದಿ ಕೆಳಗಿನಿಂದ ಒಂದು ತುದಿ ಮೇಲಿನಿಂದ ಕಟ್ಟಬೇಕು. ಚಾಳೆ ಪಾಂದಾಳ ಕೊತ್ತಳಿಗೆಯ ಮೇಲಾಗಿದ ಬಳ್ಳಿ ಅಥವಾ ನಾರಣೆ ಬಳ್ಳಿಯಲ್ಲಿ ಕಟ್ಟುವರು.) ಚಟ್ಟ ಕಟ್ಟಿ ಆದ ಮೇಲೆ ಮನೆ ಎದುರುಗಡೆ ಮೆಟ್ಟಿಲ ಹತ್ತಿರ ಉತ್ತರ ದಕ್ಷಿಣವಾಗಿ ಇಡುವರು.

ಸೂಕರ - ತೆಂಗಿನ ಕೊತ್ತಳಿಗೆ ಅಥವಾ ಬಿದಿರನ್ನು ಭಾಗ ಮಾಡಿ ಅದರಲ್ಲಿ ಮಣ್ಣಿನ ಮಡಿಕೆಯನ್ನಿಟ್ಟು ಕಟ್ಟುವುದು

ಶವ ತೆಗೆಯುವ ಕ್ರಮ :
ಶವ ತೆಗೆಯುವ ಮೊದಲು ತೆಂಗಿನ ಗರಿಯ ಕಡ್ಡಿಗೆ 5 ವೀಳ್ಯದೆಲೆಯನ್ನು (ಪಂಚೋಲಿ ) ಪೋಣಿಸಿ ಶವದ ಎದೆ ಮೇಲೆ (ಬಟ್ಟೆ ಒಳಗಡೆ) ಇಡುವರು. (ಪೂರ್ವ ಪದ್ಧತಿ ಪ್ರಕಾರ ಪುರುಷರಿಗೆ ಸಾಂಕೇತಿಕವಾಗಿ ಹಾಲೆ ಮರದ ನೇಗಿಲ ಆಕೃತಿಯನ್ನು ಕುತ್ತಿಗೆಗೆ ನೇತು ಹಾಕುವರು). ಶವ ನೋಡಲು ಬಂದ ಜನರು ಶವದ ಮೇಲೆ ಬಟ್ಟೆ ಹೊದಿಸಿ ಬಾಯಿಗೆ ನೀರು ಕೊಡುವರು. ಕರ್ಮಕ್ಕೆ ನಿಂತವನು ಮೊದಲು 3 ಮೀಟರ್ ಉದ್ದದ ಬಟ್ಟೆಯಲ್ಲಿ ತಲೆ ಭಾಗಕ್ಕೆ 5 ಕುಡ್ತೆ ಅಕ್ಕಿಯನ್ನು ಕಾಲಿನ ಭಾಗಕ್ಕೆ 5 ಕುಡ್ತೆ  ಭತ್ತವನ್ನು ಹಾಕಬೇಕು. ನಂತರ ಸುಲಿದ ತೆಂಗಿನ ಕಾಯಿಯನ್ನು ಎಡ ಕೈಯಲ್ಲಿ ಹಿಡಿದು ಅಡಿಕೆ ಮತ್ತು ವೀಳ್ಯದೆಲೆಯನ್ನು  ಮೆಟ್ಟಿಲಲ್ಲಿ ಇಟ್ಟು ಗುದ್ದಿ ಪುಡಿ (ಹುಡಿ ಸಣ್ಣದಾಗಿ) ಮಾಡಬೇಕು. ಆದಾದ ನಂತರ ತೆಂಗಿನ ಕಾಯಿಯನ್ನು ಮೆಟ್ಟಲಿಗೆ ಎಡಗೈಯಲ್ಲಿ ಗುದ್ದಿ 2 ಭಾಗ ಮಾಡಬೇಕು. (ಎಲೆ ಅಡಿಕೆ ಹುಡಿಯನ್ನು ಪ್ರತ್ಯೇಕ ವೀಳ್ಯದ ಎಲೆಯಲ್ಲಿ ಸುತ್ತಿಟ್ಟುಕೊಳ್ಳಬೇಕು.) ಒಡೆದ ತೆಂಗಿನಕಾಯಿಯ ಗಂಡು ಗಡಿಯನ್ನು ಭತ್ತದ ಮೇಲೆ ಹೆಣ್ಣು ಗಡಿಯನ್ನು ಅಕ್ಕಿ ಮೇಲೆ ಇಡಬೇಕು. ಅದರಲ್ಲಿ ಎಣ್ಣೆ ಹಾಕಿ ಬತ್ತಿಯನ್ನು ಹಚ್ಚಿಡಬೇಕು. ಹಿರಿಯರು ಎಡಕೈಯಿಂದ ತಲೆಭಾಗ ಮಟ್ಟಿ ಹಾಗೂ ಕಿರಿಯರು ಎಡಗೈಯಿಂದ ಕಾಲಿನ ಭಾಗವನ್ನು ಮುಟ್ಟಿ ನಮಸ್ಕರಿಸುತ್ತಾ ನಾರಾಯಣ...... ನಾರಾಯಣ ನಾರಾಯಣ ಎಂದು ಹೇಳುತ್ತಾ ಅಪ್ರದಕ್ಷಿಣೆಯಾಗಿ ಸುತ್ತು ಬರುವರು. ಅಕ್ಕಿ ಮೇಲೆ ಇದ್ದ ತೆಂಗಿನ ಗಡಿಯಲ್ಲಿರುವ ನೆನೆ ಬತ್ತಿಯನ್ನು ನಂದಿಸಿ ಗಂಧದ ದೂಪದ ಮಡಿಕೆಗೆ ಹಾಕಬೇಕು. ಆ ತೆಂಗಿನ ಕಾಯಿ ಗಡಿಯನ್ನು ಪೂರ್ವ ಬಾಗಿಲಿನ ಮಾಡಿನ ಸೆರೆಯಲ್ಲಿಡಬೇಕು. (ಈಗ ತಾರಸಿ ಮನೆಗಳಿರುವ ಕಾರಣ ಅನುಕೂಲವಾದ ಜಾಗದಲ್ಲಿ ಜಾಗ್ರತೆಯಾಗಿ ತೆಗೆದಿಡುವುದು ಸೂಕ್ತ) ನಂತರ ಕರ್ಮಕ್ಕೆ ನಿಂತವನು ಮೊಣಕಾಲೂರಿ ಅಕ್ಕಿ ಮತ್ತು ಭತ್ತವನ್ನು ಪ್ರತ್ಯೇಕ ಪ್ರತ್ಯೇಕವಾಗಿ ಕಟ್ಟಬೇಕು. ಚಾಪೆ ಸಮೇತ ಶವವನ್ನು ಎತ್ತಿ ಹೊರಗೆ ತಂದು (ಕಾಲು ಮೊದಲು ಹೊರಗೆ ಬರುವಂತೆ) ಚಟ್ಟದ ಮೇಲೆ ತಲೆ ದಕ್ಷಿಣ ಭಾಗಕ್ಕೆ ಬರುವಂತೆ ಮಲಗಿಸಬೇಕು. ಒಳಗಡೆ ಹೆಣ ಮಲಗಿಸಿದ್ದಲ್ಲಿ ಹಾಲೆ ಮರ ತೊಗಟೆ (ಕೆತ್ತೆಯಿಂದ) ಸೆಗಣಿ ಹಾಕಿ ಸಾರಿಸಬೇಕು. (ಸೊಸೆ ಅಥವಾ ಯಾರಾದರೂ ಹತ್ತಿರದ ಸಂಬಂಧಿಗಳು). ಹೊದಿಸಿದ ಬಟ್ಟೆಯನ್ನು ಹರಿದು ಕಾಲಿನ ಹಾಗೂ ಕೈ ಹೆಬ್ಬೆರಳಗಳನ್ನು ಜೋಡಿಸಿ ಕಟ್ಟಬೇಕು. ಆಮೇಲೆ ಶವವನ್ನು ಚಟ್ಟದಲ್ಲಿ ಭದ್ರವಾಗಿ ಕಟ್ಟುವರು. ಒಳಗೆ ಇದ್ದ ಗಂಧ ದೂಪದ ಬೆಂಕಿಯನ್ನು ಅಂಗಳದಲ್ಲಿಟ್ಟ ಸೂಕರದಲ್ಲಿ ಹಾಕುವರು. ಆ ನಂತರ ಕಾಲಿನ ಕಡೆಯಿಂದ ಕುಟುಂಬಸ್ಥರು ತಲೆ ಕಡೆಯಿಂದ ಊರವರು ಚಟ್ಟ ಎತ್ತಿ ನಾರಾಯಣ. ನಾರಾಯಣ ನಾರಾಯಣ ಹೇಳುತ್ತಾ ಹೋಗುವರು. [ಹೋಗುವಾಗ ಸೂಕರವನ್ನು ಊರವರು ಮುಂದೆ ಹಿಡಿದು ಹೋಗುವರು]. ಅಲ್ಲದೇ ಬಾಯಿಗೆ ನೀರು ಕೊಟ್ಟ ಕಂಚಿನ ಬಟ್ಟಲು, 5 ವೀಳ್ಯದೆಲೆ, 1 ಅಡಿಕೆ, ಗುದ್ದಿ ಹುಡಿ ಮಾಡಿದ ಎಲೆ ಅಡಿಕೆ, ಒಂದು ಎಳನೀರು, ಒಂದು ಬಟ್ಟಲಲ್ಲಿ ಗಂಜಿನೀರು, ಹೆಣಕ್ಕೆ ಹಾಕಿದ ನಾಣ್ಯ, ಒಣಗಿದ ಗೋಟು ಕಾಯಿ ಇತ್ಯಾದಿಗಳನ್ನು ಕೂಡ ಕೊಂಡೊಯ್ಯಬೇಕು. ಅರ್ಧ ದಾರಿಗೆ ಬಂದಾಗ ಚಟ್ಟ ಕೆಳಗಿಳಿಸಿ ತಂದ 5 ವೀಳ್ಯದೆಲೆ 1 ಅಡಿಕೆಯನ್ನು ಕರ್ಮಕ್ಕೆ ನಿಂತವನು ಮೊಣಕಾಲೂರಿ ಒಂದು ಕಲ್ಲಿನ ಅಡಿಗೆ ಇಡಬೇಕು. (ಕ್ರಮ : ಹೋಗುವ ದಾರಿಗೆ ವಿಮುಖವಾಗಿ ಮಂಡಿಯೂರಿ ಕುಳಿತು ಹಿಂಬಾಗದಲ್ಲಿರುವ ಕಲ್ಲಿನಡಿಗೆ ಕೈಯನ್ನು ಬೆನ್ನಹಿಂದೆ ತಂದು ಇಡಬೇಕು) ಅಲ್ಲಿಂದ ನಂತರ ಚಟ್ಟವನ್ನು ತಿರುಗಿಸಿ ತಲೆ ಮುಂದಾಗಿಕೊಂಡು ಹೋಗುವರು. (ತಲೆಮುಂದಾಗಿ ಕೊಂಡು ಹೋಗುವ ಉದ್ದೇಶ ದೇಹಕ್ಕೆ ಮತ್ತೆ ಜೀವ ಬರುವ ಸಂಭವವಿರುತ್ತದೆನ್ನುವ
ಹಿಂದಿನವರ ನಂಬಿಕೆಗಾಗಿ ಈ ಕ್ರಮವನ್ನು ಅನುಸರಿಸುತ್ತಾರೆ. ಆದರೆ ಕೆಲ ಭಾಗಗಳಲ್ಲಿ ಈ
ಕ್ರಮವಿರುವುದಿಲ್ಲ) ಸೂಕರ ಸಮೇತವಾಗಿ ಕಾಟಕ್ಕೆ 3 ಸುತ್ತು ಅಪ್ರದಕ್ಷಿಣೆಯಾಗಿ ಬಂದು
ಚಟ್ಟವನ್ನು ಕೆಳಗಿಡಬೇಕು. ಹಲಸಿನ ಸೊಪ್ಪು, ಮಾವಿನ ಸೊಪ್ಪು, ಇಡಿ ಬೂದಿ ಬಾಳೆಲೆಯನ್ನು
ದಂಡು ಸಮೇತ ಕಾಟದ ಮೇಲಿಡಬೇಕು. ಬಾಳೆಲೆ ಕೆಳಮುಖವಾಗಿದ್ದು ಎಲೆಯ ತುದಿ ಭಾಗ ತಲೆಯ ಕಡೆಗಿರಬೇಕು. (ಊರುಗೌಡರು ಮಾವಿನಸೊಪ್ಪಿನಿಂದ ಎಳನೀರನ್ನು ಕಾಟದ
ಮೇಲೆ ಚಿಮುಕಿಸಿ ಶುದ್ಧ ಮಾಡಿದ ನಂತರ ಶವ ಇಡಬೇಕು). ಚಟ್ಟದಲ್ಲಿ ಚಾಪೆಯನ್ನು
ಉಳಿಸಿ ಶವವನ್ನು ದಕ್ಷಿಣಕ್ಕೆ ತಲೆ ಮಾಡಿ ಕಾಟದ ಮೇಲೆ ಮಲಗಿಸಬೇಕು. ಶವ ತಂದ
ಚಾಪೆ ಮತ್ತು ಚಟ್ಟವನ್ನು ತುಂಡು ಮಾಡಿ ಎಸೆಯಬೇಕು. ಮನೆಯವರು ಕೊನೆಯದಾಗಿ
ಶವದ ಬಾಯಿಗೆ ತುಳಸಿ ನೀರು ಬಿಡುವರು. (ಇಲ್ಲಿ ನೀರು ಕೊಡುವ ಬಟ್ಟಲಿಗೆ ಸ್ವಲ್ಪ
ಎಳನೀರು ಹಾಕಬೇಕು. ತಡವಾಗಿ ಬಂದವರಿಗೆ ಶವದ ಬಾಯಿಗೆ ನೀರು ಕೊಡಲು ಅವಕಾಶ
ಕೊಡಬೇಕು). ನಂತರ ಮನೆಯವರು ಗಂಜಿ ತೆಳಿಯನ್ನು ಕೊಡಬೇಕು. ಎಳ ನೀರಿನಿಂದ
ಮುಖ ತೊಳೆದು ಗುದ್ದಿ ತಂದ ತಾಂಬೂಲವನ್ನು (ಮನೆಯ ಹೆಂಗಸರು) ಬಾಯಿಗಿಡುವರು.
ನಂತರ ಎಳನೀರಿನಿಂದ ಮುಖ ತೊಳೆದು ಬಾಯಿ ಸ್ವಚ್ಛ ಮಾಡಬೇಕು.
ಮೃತರು ಗಂಡಸಾದರೆ ಮೃತರ ಹೆಂಡತಿಯ ಸಹೋದರರು (ಅವರು ಇಲ್ಲದಿದ್ದಲ್ಲಿ ಗೋತ್ರದವರು) ಬಂದು (ಪೂರ್ವ ಪದ್ಧತಿ ಪ್ರಕಾರ) ತಾಳಿ, ಬಳೆ, ಮೂಗುತಿ, ಬೆಂಡು, ಕಾಲುಂಗುರವನ್ನು ತೆಗೆದು ಕಂಚಿನ ಬಟ್ಟಲಿಗೆ (ಹೆಣಕ್ಕೆ ನೀರು ಕೊಟ್ಟ ಕಂಚಿನ ಬಟ್ಟಲು) ಹಾಕುವರು. (ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆ ಸ್ವಇಚ್ಛೆಯಿಂದ ಮನೆಯಲ್ಲೆ ಈ ಶಾಸ್ತ್ರವನ್ನು ಮಾಡುವುದೆಂಬ ಸಮಾಜದ ಅಭಿಪ್ರಾಯವಾಗಿದೆ. ನಂತರ ತೆಗೆದುಕೊಂಡು ಹೋಗಿ ಸ್ನಾನ ಮಾಡಿಸಿದ ಮಡಕೆಯ ಅಡಿಯಲ್ಲಿಡಬೇಕು. ಇದನ್ನು 3ರ ಶುದ್ಧ ದಿನ ತೆಗೆಯುವುದು ಕ್ರಮ). ಸೋದರದವರು ತಾಳಿಯ ತುದಿಯಿಂದ ಸಣ್ಣ ತುಂಡನ್ನು ತೆಗೆದು ತುಳಸಿ ಕೊಡಿಯಲ್ಲಿಟ್ಟು ಮೃತನ ನಾಲಗೆಯ ಅಡಿಯಲ್ಲಿ ಇಡುವುದು. ಕೊನೆಯದಾಗಿ ಮೃತನ ಹೆಂಡತಿ ಹೆಣದ ಬಾಯಿಗೆ ನೀರು ಕೊಡಬೇಕು. ನಂತರ ಕುಂಠಿ ಹರಿಯುವುದು ಮಾಡಬೇಕು. [ಮೃತಳು ಹೆಂಗಸಾಗಿದ್ದರೆ ಶವ ಸ್ನಾನದ ನಂತರ ಶೃಂಗಾರ ಆಗಿ ಮನೆ ಒಳಗೆ ಉತ್ತರ ದಕ್ಷಿಣವಾಗಿ ಮಲಗಿಸಿ ಬಿಳಿ ಬಟ್ಟೆಯನ್ನು ಹೊದಿಸಿ, ಮುತ್ತೈದೆಯಾಗಿದ್ದರೆ ಬಿಚ್ಚಿದ ತಾಳಿಕಂಠಿಯನ್ನು ಎದೆಮೇಲೆ ಇಡಬೇಕು (ಸ್ನಾನ ಮಾಡಿಸುವಾಗ ಚಿನ್ನಾಭರಣ, ಉಡಿದಾರ ಬಿಚ್ಚಿಡಬೇಕು) ನಂತರ ಅರ್ಧ ದಾರೆ ಸೀರೆಯನ್ನು ಹೊದಿಸಬೇಕು. ಕಾಟದಲ್ಲಿ ಮನೆಯ ಕೊನೆಯ ವ್ಯಕ್ತಿ ನೀರು ಕೊಟ್ಟಮೇಲೆ ತಾಳಿ ಕಂಠಿಯನ್ನು ಬಟ್ಟಲಿಗೆ ತೆಗೆದು ಹಾಕಿ, ಬರುವಾಗ ಮನೆಗೆ ತರುವರು

ಕುಂಠಿ ಹರಿಯುವ ಕ್ರಮ:
ಊರುಗೌಡರು ಅಕ್ಕಿ ಭತ್ತ ಕಟ್ಟಿದ ಬಟ್ಟೆಯನ್ನು ಬಿಚ್ಚಿ ಬಟ್ಟೆಯ ಒಂದು ತುದಿಯಿಂದ ಕುಂಠಿಹರಿಯಬೇಕು. ಕುಂಠಿ ಹರಿಯುವಾಗ 2 ಕುಂಠಿ ಹರಿಯಬೇಕು. ಒಂದು ಕುಂಠಿ ಕರ್ಮಕ್ಕೆ ನಿಂತವರಿಗೆ ಹಾಗೂ ಒಂದು ಊರು ಗೌಡರಿಗೆ. (ಊರುಗೌಡರು ಸ್ನಾನ ಮಾಡಿದ ಮೇಲೆ ಮನೆಯ ಛಾವಣಿಗೆಗೆ (ಮಾಡು) ಎಸೆದು ಬೂದಿ ಮುಚ್ಚುವ ದಿನ ತೆಗೆದುಕೊಂಡು ಕೈಯಲ್ಲಿಟ್ಟುಕೊಳ್ಳುತ್ತಾರೆ. ಸ್ನಾನ ಮಾಡಿದ ಮೇಲೆ ಪುನಃ ತೆಗೆದುಕೊಂಡು ದೂಪೆ ಕೆಲಸ ಮುಗಿದ ಮೇಲೆ ಮನೆಯ ಛಾವಣಿಗೆಗೆ ಹಾಕುತ್ತಾರೆ- ಸೂತಕದ ಮನೆಯೆಂದು ತಿಳಿಯಲು) ಕರ್ಮಕ್ಕೆ ನಿಂತವನಿಗೆ ಹಾಗೂ ಸತ್ತವನಿಗೆ ಪತ್ನಿ ಇದ್ದರೆ ಅವರಿಗೆ ಎರಡೆರಡು ಬಟ್ಟೆಗಳನ್ನು ಶವದ ಮೇಲಿನಿಂದ ತೆಗೆದುಕೊಡಬೇಕು. ಇದಾದ ನಂತರ ಅಕ್ಕಿ ಭತ್ತವನ್ನು ಕಾಲು ಕಡೆಯಿಂದ ಕರ್ಮಕ್ಕೆ ನಿಂತವನು ತಲೆ ಕಡೆಯಿಂದ ಊರವರು ಒಟ್ಟಿಗೆ ಶವದ ಮೇಲೆ ಬರುವಂತೆ (ಮಿಶ್ರವಾಗಿ) ಸೇರಿಸಬೇಕು. ಹಲಸಿನ ಸೊಪ್ಪು, ಮಾವಿನ ಸೊಪ್ಪ ಶವದ ಮೇಲೆ ಇಟ್ಟು ಉಳಿದ 5 ಬಟ್ಟೆ ಶವದ ಮೇಲೆ ಬಿಟ್ಟು ಉಳಿದ ಬಟ್ಟೆಯನ್ನು ಸೌದೆ ತಯಾರು ಮಾಡಿದ ಹಾಗೂ ಪರಿಕಂತಂದ ಮೂಲದವನಿಗೆ ಕೊಡುವುದು ಪೂರ್ವಪದ್ಧತಿ.) ಮೊದಲೆ ಸಿದ್ಧಪಡಿಸಿದ 2. ಸೂಟೆಗಳಿಗೆ ಸೂಕರದಿಂದ ಬೆಂಕಿ ಹಚ್ಚಿ ಒಂದು ಸೂಟೆಯನ್ನು ಊರವರೂ, ಇನ್ನೊಂದನ್ನು ಕರ್ಮಕ್ಕೆ ನಿಂತವನ ಕೈಯಲ್ಲಿ ಕೊಟ್ಟು ಸೂಕರ ಹಿಡಿದವರು ಮುಂದೆ ಅವನ ಹಿಂದಿನಿಂದ ಊರಗೌಡರು, ಮೃತನ ಕುಟುಂಬದವರು, ನಾರಾಯಣ....ನಾರಾಯಣ.ನಾರಾಯಣ ಹೇಳುತ್ತಾ ಅಪ್ರದಕ್ಷಿಣೆಯಾಗಿ ಸುತ್ತು ಬರುವಾಗ ಕಾಟದ 4 ಮೂಲೆಗಳಿಗೆ ಮುಟ್ಟಿಸಿಕೊಂಡು ಬರಬೇಕು. ಹೀಗೆ 3 ಸುತ್ತು ಬಂದ ಮೇಲೆ ತಲೆ ಕಡೆಯಿಂದ ಊರವರು, ಕಾಲಿನ ಕಡೆಯಿಂದ ಕರ್ಮಕ್ಕೆ ನಿಂತವರು ಹಾಗೂ ಸಹೋದರರು ಬೆಂಕಿ ಕೊಡುವರು. ಎರಡೂ ಕಡೆಯಿಂದ ಬೆಂಕಿ ಕೂಡಿದ ಮೇಲೆ ಕತ್ತರಿ ಕುಂಟೆ ಜೋಡಿಸಿಡುವರು. (ಉದ್ದವಾದ ಮರದ ತುಂಡುಗಳು). ಇದಾದ ನಂತರ ಪೂರ್ವ ದಿಕ್ಕಿನಿಂದ ಊರವರು ಕತ್ತಿಯನ್ನು ಹಾಗೂ ಪಶ್ಚಿಮ ದಿಕ್ಕಿನಿಂದ ಮೂಲದವರು ಮಚ್ಚನ್ನು ಕಾಟದ ಮೇಲಿನಿಂದ ಎಸೆಯಬೇಕು. ಕುಟುಂಬದವರು ಈ ಮಚ್ಚನ್ನು ಹೆಕ್ಕಿ ತಂದು ಶವ ಸ್ನಾನ ಮಾಡಿಸಿದಲ್ಲಿ ಇಡುವರು(ಅಲ್ಲಿಗೆ ಸೌದೆ ಕಡಿಯಲು ಉಪಯೋಗಿಸಿದ ಎಲ್ಲಾ ಪರಿಕರಗಳನ್ನು ಒಂದು ಕಡೆ ಇಡುವರು. ಮೂರರ ಶುದ್ಧ ದಿನ ಪುಣ್ಯಾರ್ಚನೆ ಹಾಕಿ ಉಪಯೋಗಕ್ಕೆ ತೆಗೆದುಕೊಳ್ಳುವರು.) ನಂತರ ಎಲ್ಲರೂ ಸ್ನಾನಕ್ಕೆ ಹೋಗುವರು. ಮೊದಲು ಸರಳಿಸೊಪ್ಪಿನಿಂದ ಮೂರುಸಲ ತಲೆಗೆ ನೀರು ಚುಮುಕಿಸಿಕೊಂಡು ಸ್ನಾನ ಮಾಡುವರು. ಆ ದಿನ ರಾತ್ರಿಯಿಂದ ಶವ ಮಲಗಿಸಿದ ಸ್ಥಳದಲ್ಲಿ ಮಣೆ ಇಟ್ಟು ದಕ್ಷಿಣಾಭಿಮುಖವಾಗಿ ದೀಪ ಹಚ್ಚಿ ಒಂದು ತಂಬಿಗೆ ನೀರನ್ನು 10ರ ರಾತ್ರಿಯವರೆಗೆ ಕರ್ಮಕ್ಕೆ ನಿಂತವನು ಇಡಬೇಕು.

ಪಾಳಿಗೆ (ಕರ್ಮಕ್ಕೆ) ನಿಲ್ಲುವುದು :
ಮೃತರ ಮಗ ಅಥವಾ ಮಗನ ಸಮಾನರಾದವರು ಸತ್ತವರಿಗೆ ಗಂಡು ಸಂತತಿ ಇಲ್ಲದ ಪಕ್ಷದಲ್ಲಿ ಕುಟುಂಬದ ಸಹೋದರನ ಮಕ್ಕಳು, ಅವಿವಾಹಿತರು ತೀರಿ ಹೋದಲ್ಲಿ ಸಹೋದರನ ಮಕ್ಕಳು ಸತ್ತವನ ಕ್ರಮಕ್ಕೆ ನಿಲ್ಲುವುದು.

ಪಾಳಿಗೆ (ಕರ್ಮಕ್ಕೆ) ನಿಂತವರು ಆಚರಿಸುವ ಕ್ರಮಗಳು:
ಶುದ್ಧ ಕಾರ್ಯವಾಗುವವರೆಗೆ ಕರ್ಮಕ್ಕೆ ನಿಂತ ವ್ಯಕ್ತಿಯು ಪ್ರತಿದಿನ ತಣ್ಣೀರಿನಲ್ಲಿ ಬೆಳಿಗ್ಗೆ ಮತ್ತು ರಾತ್ರಿ ಸ್ನಾನ ಮಾಡಬೇಕು. ಸ್ನಾನ ಮಾಡದೇ ಊಟ ಮಾಡುವಂತಿಲ್ಲ. ಮಧ್ಯಾಹ್ನ ಗಂಜಿ ಮತ್ತು ತೆಂಗಿನಕಾಯಿ, ಎಣ್ಣೆ ಹಾಕದ ಉಪ್ಪು ಇಲ್ಲದ ಪದಾರ್ಥ ತೆಗೆದುಕೊಳ್ಳಬಹುದು ಬೆಳಿಗ್ಗೆ ಮತ್ತು ರಾತ್ರಿ ರಾಗಿ ಮಣ್ಣಿ ತಿನ್ನಬೇಕು. ಹಾಲು ಹಾಕಿದ ಕಾಫಿ, ಚಹಾ ಕುಡಿಯುವಂತಿಲ್ಲ.ವೀಳ್ಯಕ್ಕೆ ಸುಣ್ಣ ಬಳಸಬಾರದು, ಚಾಪೆಯಲ್ಲಿ ಮಲಗಬೇಕು. ಸಾಮಾನ್ಯ ಮನೆ ಬಿಡುವ ಹಾಗಿಲ್ಲ. ಗಡ್ಡ ಮೀಸೆ ತೆಗೆಯುವಂತಿಲ್ಲ, ಮೈಗೆ ಅಂಗಿ ಹಾಕುವಂತಿಲ್ಲ, ಸ್ನಾನ ಮಾಡುವಾಗ ಸಾಬೂನು ಕೂಡ ಹಾಕುವಂತಿಲ್ಲ. ಶವ ಸಂಸ್ಕಾರದ ದಿನ ಕೊಟ್ಟಂತಹ ಮಡಿಗಳನ್ನು ಉಟ್ಟುಕೊಳ್ಳಬೇಕು. ಹೆಗಲಲ್ಲಿ ಒದ್ದೆ ಕುಂಠಿ ಇರಬೇಕು.

ಪಾಸ ಹಿಡಿಯುವುದು :
ಶವ ಸಂಸ್ಕಾರ ಮಾಡಿ ಸ್ನಾನ ಮಾಡಿದ ಬಳಿಕ ಕುತ್ತಿಗೆಗೆ ಕುಂಠಿಯನ್ನು ಹಾಕಿ ಮನೆಯ ಮೆಟ್ಟಲಲ್ಲಿ ಅಂಗಳಕ್ಕೆ ಮುಖ ಮಾಡಿ ಕುಳಿತು ಹಲಸಿನ ಎಲೆಯನ್ನು ಗೊಂಡೆಯ ಹಾಗೆ ಮಾಡಿ ಅದರಲ್ಲಿ ಗಂಜಿಯ ತೆಲಿಯನ್ನು 3 ಸಲ ಕುಡಿಯಬೇಕು

ಕೊಳ್ಳಿ ಕೂಡಿಸುವುದು:
ಮಾರನೆಯ ದಿನ ಊರು ಗೌಡರು, ಮನೆಯವರು ಹಾಗೂ ಕುಟುಂಬಸ್ಥರು ಪ್ರಾತಃಕಾಲ ಸೇರಿ ಕೊಳ್ಳಿ ಕೂಡಿಸುವರು. ಹೊತ್ತದೆ ಇರುವ ಕೊಳ್ಳಿಗಳನ್ನು ಸೇರಿಸಿ ಬೆಂಕಿ ಕೊಡುವರು. ಹಾಲು ತುಪ್ಪ ಹೊಯ್ಯುವರು. ಆಮೇಲೆ ಸ್ನಾನ ಮಾಡಿ ಮನೆಗೆ ಹೋಗುವರು.

ಮೂರರ ಶುದ್ಧ:
ಶವ ಸಂಸ್ಕಾರದ ಮೂರನೇ ದಿನ ಊರುಗೌಡರು, ಕುಟುಂಬಸ್ಥರು ಮತ್ತು ಬಂಧು ಬಳಗದವರು ಮೃತನ ಮನೆಯಲ್ಲಿ ಸೇರುತ್ತಾರೆ. ಈ ಮೊದಲೇ ಹೇಳಿಕೆ ಕೊಟ್ಟ ಪ್ರಕಾರ ಕ್ಷೌರಿಕ ಅಥವಾ ಮಡಿವಾಳರು ಈ ದಿನ ಬರುತ್ತಾರೆ. ಇವರು ಎಳನೀರನ್ನು ಚಿತಾ ಭಸಕ್ಕೆ ಸಿಂಪಡಿಸುತ್ತಾರೆ. ಚಿತೆಯ ಮಧ್ಯಭಾಗಕ್ಕೆ ಸಾಕಷ್ಟು ನೀರು ಹಾಕಿ ಬಿಸಿಯನ್ನು ತಣ್ಣಗೆ ಮಾಡುತ್ತಾರೆ. ನಂತರ ಕರ್ಮಕ್ಕೆ ನಿಂತವನು ಎಡ ಕೈಯಲ್ಲಿ ಹಾರೆ ಹಿಡಿದು ಚಿತಾಭಸ್ಮವನ್ನು ಕಾಲು, ಮಧ್ಯ ಹಾಗೂ ತಲೆ ಇವುಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ ಗುರುತು ಮಾಡುತ್ತಾನೆ. ಕುಟುಂಬಸ್ಥರು ಕಾಲು, ಮಧ್ಯ ಹಾಗೂ ತಲೆ ಭಾಗದ ಬೂದಿಯನ್ನು ಪ್ರತ್ಯ ಪ್ರತ್ಯೇಕವಾಗಿ ರಾಶಿ ಮಾಡುತ್ತಾರೆ. ಮಧ್ಯದಲ್ಲಿ ಒಂದು ಹೊಂಡವನ್ನು ತೆಗೆಯುತ್ತಾರೆ. (ಸಾಕಷ್ಟು ದೊಡ್ಡದು ಇರಬೇಕು). ಕರ್ಮಕ್ಕೆ ನಿಂತವನು ಎಡಗೈಯಲ್ಲಿ ಹಾರೆ ಹಿಡಿದು ಮೊದಲು ಕಾಲಿನ ಭಾಗದ ಬೂದಿಯನ್ನು ತೆಗೆದು ಹೊಂಡಕ್ಕೆ ಹಾಕಿ ನೀರು ಹಾಕಬೇಕು. ನಂತರ ಮಧ್ಯಭಾಗ, ಕೋನೆಗೆ ತಲೆಭಾಗದ ಬೂದಿಯನ್ನು ಹಾಕಿ ಕುಟುಂಬದವರೆಲ್ಲರೂ ಹಾಲು-ತುಪ್ಪ ಹೊಯ್ಯುವರು. ಇದಾದ ನಂತರ ಸುತ್ತಲೂ ಇದ್ದ ಮಣ್ಣನ್ನು ಕೆರೆದು ತೆಗೆದು ಸಾಕಷ್ಟು ನೀರು ಹಾಕಿ ಎತ್ತರವಾಗಿ ಧೂಪೆ ಮೆತ್ತುವರು. ಉತ್ತರ ಭಾಗಕ್ಕೆ ಒಂದು ಸಣ್ಣ ಮೆಟ್ಟಿಲು ಮಾಡಬೇಕು. ಸೋದರದವರು ಮೊದಲು ಸರಳಿ ಕಣೆಯನ್ನು ಧೂಪೆಯ ಮುಂಬಾಗದಲ್ಲಿ ಕುತ್ತಬೇಕು. ನಂತರ ಕರ್ಮ ಹಿಡಿದವ ಹಾಗೂ ಕುಟುಂಬದವರು ಮತ್ತು ನೆಂಟರಿಷ್ಟರು ಧೂಪೆಯ ಸುತ್ತ ಸರಳಿ ಕಣೆ ಕುತ್ತುವರು. (ಇದನ್ನು ಹಗ್ಗದಿಂದ ಭದ್ರವಾಗಿ ಕಟ್ಟಬೇಕು.) ಎಳನೀರು ತೂತು ಮಾಡಿ ಇಡುವರು. ಸ್ನಾನ ಮಾಡಿ ಬಂದು ದೇವಸ್ಥಾನದಿಂದ ಊರವರು ತಂದ ಪುಣ್ಯಾರ್ಚನೆಯನ್ನು ಹಾಕಿಕೊಳ್ಳುವರು. ಶವ ಸ್ನಾನ ಮಾಡಿಸಿದಲ್ಲಿಗೆ, ಸೌದೆ ಮಾಡಿದ ಪರಿಕರಗಳಿಗೆ, ಕೊಟ್ಟು ಪಿಕ್ಕಾಸುಗಳಿಗೆ ಹಾಗೂ ಮನೆಗೂ ಪುಣ್ಯಾರ್ಚನೆ ಹಾಕಬೇಕು. ಊರವರು ಮಾಡಿದ ಫಲಾಹಾರ ಮುಗಿಸಿದ ನಂತರ ತಿಥಿ ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆಸುವರು.

ಸರಕು ಪದ್ಧತಿ (ತಾಯಿ/ತಂದೆ ಸತ್ತಾಗ ಕೊಟ್ಟ ಹೆಣ್ಣು ಮಕ್ಕಳು ಸರಕು ಕಳುಹಿಸುವುದು) :
ಮುಡಿ ಅಕ್ಕಿ, ಒಂದು ಕುಂಬಳಕಾಯಿ, ಬೂದಿ ಬಾಳೆಗೊನೆ, ತೆಂಗಿನಕಾಯಿ, ಅಡಿಗೆಗೆ ಬೇಕಾಗುವ ಎಲ್ಲಾ ಸಾಮಾನುಗಳನ್ನು (ಬೆಳ್ಳುಳ್ಳಿ ಮತ್ತು ಸಾಸಿವೆಯನ್ನು ಹೊರತುಪಡಿಸಿ). ಅಲ್ಲದೇ ಅಡಿಕೆ, ವೀಳ್ಯದೆಲೆ, ಸುಣ್ಣ, ಹೊಗೆಸೊಪ್ಪು, ಬಾಳೆಲೆ ಎಲ್ಲವನ್ನು ಒಂದು ಬುಟ್ಟಿಯಲ್ಲಿ ಇರಿಸಿ ಮೂಲದವರನ್ನು ಕರೆದು ಆತನಿಗೆ ತಲೆಗೆ ಎಣ್ಣೆ ಕೊಟ್ಟು, ಹೊಟ್ಟೆ ತುಂಬಾ ಊಟ ಕೊಟ್ಟು, ಖರ್ಚಿಗೆ ಹಣ ಕೊಟ್ಟು ವಾಲಗದೊಂದಿಗೆ ತವರು ಮನೆಗೆ ಕಳುಹಿಸುವರು. (ಮಗಳು ಒಂದು ತಂಬಿಗೆಯಲ್ಲಿ ಎಣ್ಣೆ ಹಿಡಿದುಕೊಂಡು ಬಿಳಿ ಸೀರೆ ಉಟ್ಟು ಸರಕಿನೊಟ್ಟಿಗೆ ತವರು ಮನೆಗೆ ತರುವುದು ಪದ್ಧತಿ.) ತವರು ಮನೆಯ ಚಪ್ಪರದಡಿಯಲ್ಲಿ ಸರಕನ್ನು ಇಡಬೇಕು. ತವರು ಮನೆಯಲ್ಲಿ ಕೂಡ ವಾಲಗ ಗರ್ನಾಲುನೊಂದಿಗೆ ಸ್ವಾಗತಿಸುವುದು ಪದ್ಧತಿ. ಸರಕನ್ನು ಹೊತ್ತುತಂದ ಮೂಲದವನಿಗೆ ಇಲ್ಲಿ ಕೂಡ ತಲೆಗೆ ಎಣ್ಣೆ ಕೊಟ್ಟು ಅರ್ಧ ಸೇರು ಅಕ್ಕಿ, ಎಲೆ, ಅಡಿಕೆ, ಖರ್ಚಿಗೆ ಹಣ ಕೊಟ್ಟು ಸತ್ಕರಿಸಿ ಕಳುಹಿಸುತ್ತಾರೆ. ಪೂರ್ವ ಪದ್ಧತಿಯಂತೆ ಊರಿನವರು ಕೂಡ ಸರಕು ಕಳುಹಿಸುವ ಕ್ರಮವಿರುತ್ತಿತ್ತು. ಇಲ್ಲಿ ಕೂಡ 5 ಸೇರು ಕುಚುಲು ಅಕ್ಕಿ, 2 ಸೇರು ಬೆಳ್ಳಿಗೆ,(ಶಕ್ತಾನುಸಾರ) 7 ತೆಂಗಿನಕಾಯಿ, ಕುಂಬಳಕಾಯಿ, ಬಾಳೆಗೊನೆ, ಬಾಳೆಲೆ, ವೀಳ್ಯದೆಲೆ, ಅಡಿಕೆ ಹಾಗೂ ಅಡುಗೆಗೆ ಬೇಕಾದ ಎಲ್ಲಾ ಸಾಮಾನುಗಳನ್ನು ಕಳುಹಿಸುವುದು ವಾಡಿಕೆ.

ಹತ್ತರ ಕ್ರಮ (ನೀರು ನೆರಳು) :
ಬಂದು ಬಳಗದವರು ಕುಟುಂಬಸ್ಥರು 10ರ ರಾತ್ರಿ ಬಂದು ಸೇರುವರು. ಕರ್ಮಕ್ಕೆ ನಿಂತವನು ಸ್ನಾನ ಮಾಡಿ ಬರಬೇಕು ಊಟವಾದ ನಂತರ ಚಪ್ಪರದಡಿಯಲ್ಲಿ ಊರುಗೌಡ ದಕ್ಷಿಣಾಭಿಮುಖವಾಗಿ ಕುಟುಂಬಸ್ಥರು ಅವರ ಎದುರಾಗಿ ಊರುಗೌಡರು, ಸೋದರದವರು, ಊರವರು ಹಾಗೂ ನೆಂಟರಿಷ್ಟರು ನಿಲ್ಲುವರು. ಈಗ ಕರ್ಮಕ್ಕೆ ನಿಂತವನು ಎಡಗೈ ನೀಡಿ ಬಲಗೈಯಿಂದ ಎಡಗೈಯನ್ನು ಮುಟ್ಟಿ 3 ಸಲ ಕೈಯನ್ನು ಆರತಿ ಎತ್ತಿದ ಹಾಗೆ ಮಾಡಿ ನೀರು ನೆರಳು ಇಡಲು ಹಾಗೂ ನಾಳೆ ನಡೆಯುವ ಶುದ್ಧ ಕಾಠ್ಯಕ್ರಮಗಳಿಗೆ ಅನುವು ಕೊಡಬೇಕು ಎಂದು ಊರವರಲ್ಲಿ ಕೇಳಿಕೊಳ್ಳಬೇಕು. ನೀರು ನೆರಳು ಇಡುವಲ್ಲಿ ಸರಕು ತಂದ ಎಲ್ಲಾ ವಸ್ತುಗಳನ್ನು ಸ್ವಲ್ಪ ಸ್ವಲ್ಪ ತಂದಿಡಬೇಕು. ಅಲ್ಲದೇ ಒಂದು ಎಳನೀರು, ಒಂದು ತಂಬಿಗೆ ನೀರು, ಎರಡು ಮಣೆ, ಕಾಲುದೀಪ, ಅರಿಶಿನ ಕೊಂಬು, ನೂಲು ಉಂಡೆ, ಮಸಿ ತುಂಡು. ಅಕ್ಕಿ ಹುಡಿ ಅಥವಾ ಬೂದಿ, 1 ಜರಡಿ ಇಷ್ಟೆಲ್ಲವನ್ನು ತಂದಿಟ್ಟುಕೊಳ್ಳಬೇಕು. ಒಂದು ಮಣೆಯಲ್ಲಿ ಕಾಲುದೀಪ ಹಚ್ಚಿಡಬೇಕು. ಇನ್ನೊಂದು ಮಣೆಯಲ್ಲಿ ನೀರು ಹಾಗೂ ಕೆತ್ತಿ ತೂತು ಮಾಡಿದ ಎಳನೀರು ಇಡಬೇಕು. ಇದಕ್ಕೆ ಮೇಲಿನಿಂದ ದಾರವನ್ನು ಇಳಿ ಬಿಟ್ಟು ಒಂದು ತುದಿಗೆ ಅರಿಶಿನ ಕೊಂಬು ಇನ್ನೊಂದು ತುದಿಗೆ ಮಸಿ ತುಂಡನ್ನು (ಎಳನೀರಿಗೆ ಅರಿಶಿನ ತುಂಡು, ತಂಬಿಗೆಗೆ ಮಸಿ ತುಂಡು) ನೀರಿನ ಸಮಾನಾಂತರ ನಿಲ್ಲುವಂತೆ ಕಟ್ಟಿ ಬಿಡಬೇಕು. ತದನಂತರ ದೀಪದ ಎದುರುಗಡೆಯಲ್ಲಿ ದೊಡ್ಡದೊಂದು ಬಾಳೆಲೆಯನ್ನು ಹಾಕಿ ಸರಕಿನ ಎಲ್ಲಾ ಸಾಮಾನುಗಳನ್ನು ಅದರ ಮೇಲೆ ಇಡುವರು. ಮನೆಯ ಮುಂಭಾಗಕ್ಕೆ ಬಂದು ಮೆಟ್ಟಿಲ ಮುಂದೆ ಮೊಣಕಾಲೂರಿ ಕುಂಬಳಕಾಯಿ ಇಟ್ಟು ಎಡಗೈಯಲ್ಲಿ ಕತ್ತಿ ಹಿಡಿದು ಸತ್ತವರ ಸಂಬಂಧ ಹೇಳಿ ಕುಂಬಳಕಾಯಿ ಕಡಿಯುತ್ತೇನೆ ಎಂದು 3 ಸಲ ಹೇಳಿ ತುಂಡು ಮಾಡಬೇಕು. ನಂತರ ಕುಂಬಳಕಾಯಿ ತುಂಡುಗಳನ್ನು ಸರಕು ಸಾಮಾನು ಬಳಸುವುದರ ಜೊತೆ ಇರಿಸಬೇಕು.
[ಪ್ರಸ್ತುತ ಹತ್ತಿರ ನೀರು ನೆರಳು ಇಡುವ ದಿನ ರಾತ್ರಿ ಕುಂಬಳಕಾಯಿ ಕಡಿಯಬಹುದು ಅಥವಾ ಮಾರನೇ ದಿನ ಕೂಡ (ಶುದ್ಧದ ದಿನ) ಕುಂಬಳಕಾಯಿ ಕಡಿಯುವುದನ್ನು ಮಾಡಬಹುದೆಂದು ಊರುಗೌಡರ ಸಭೆಯಲ್ಲಿ ಒಮ್ಮತಕ್ಕೆ ಬರಲಾಗಿದೆ.)

ಇದರ ಜೊತೆ ಒಂದು ಪಾಡ ಬಾಳೆಕಾಯಿಯನ್ನು ಬಾಳೆಲೆಯಲ್ಲಿಡುವರು. (ಇದರಲ್ಲಿ ಒಂದು ತುಂಡು ಕುಂಬಳಕಾಯಿ, ಒಂದು ಪಾಡ ಬಾಳೆಕಾಯಿಯನ್ನು, ಹನ್ನೊಂದನೆ ದಿನದ ಕ್ರಮಕ್ಕೆ ಕ್ಷೌರಿಕ, ಮಡಿವಾಳರಿಗೆ ತೆಗೆದಿಡುವರು.) ಅಕ್ಕಿ ಅಥವಾ ಬೂದಿಯನ್ನು ನೀರು ನೆರಳಿನ ಸ್ಥಳದ ಸುತ್ತ ಜರಡಿಗೆ ಹಾಕಿ ಚೆಲ್ಲಬೇಕು. (ಸತ್ತವನ ಆತ್ಮ ನೀರು ಕುಡಿಯಲು ಬಂದಿದೆ ಎಂಬ ಸಂಕೇತವನ್ನು ತಿಳಿಯುವ ಉದ್ದೇಶಕ್ಕಾಗಿ ಹಾಕುವ ಕ್ರಮ). ಎಲ್ಲರೂ ಹೊರಗೆ ಬಂದ ನಂತರ ಕರ್ಮ ಹಿಡಿದವರು ಹೊರಗೆ ಬಂದು ಮನೆಯ ಎದುರು ಭಾಗದ ಮಾಡಿನ ಅಡಿಯಲ್ಲಿ (ಸೂರಡಿ) ಒಂದು ತಂಬಿಗೆ ನೀರನ್ನು ಇಟ್ಟು ಒಂಟಿ ಕಾಲಲ್ಲಿ ನಿಂತು ತಲೆಗೆ ಎರಡು ಕೈ (ಅಂಗೈ ಮೇಲೆ) ಇಟ್ಟು ತೀರಿ ಹೋದವರ ಸಂಬಂಧ ಹೇಳುವು ನೀರು ನೆರಳಿಗೆ ಇಟ್ಟಿದ್ದೇವೆ ನೀವು ಬಂದು ನೀರು ಕುಡಿದು ಹೋಗಿ ಅಂತ ಮೂರು ಸಲ ಕರೆದು ಹೇಳಬೇಕು. (ಈ ಹೊತ್ತಿನಲ್ಲಿ ಗರ್ನಾಲು ಹೊಡೆಯುವರು). ಸತ್ತವರ ಉಳಿದ ಮಕ್ಕಳು ಕೂಡ ಇದೇ ರೀತಿ ಮಾಡಬೇಕು. ನಂತರ ಎಲ್ಲರೂ ನಿಶ್ಯಬ್ದವಾಗಿರುವುದು. ಕಾಲುದೀಪ ಹೊರತುಪಡಿಸಿ ಉಳಿದೆಲ್ಲ ಬೆಳಕುಗಳನ್ನು ಆರಿಸಬೇಕು (ಸುಮಾರು 5ರಿಂದ 10 ನಿಮಿಷದ ಸಮಯ). ನಂತರ ಒಳಗೆ ಹೊರಗೆ ಇರುವ ಎಲ್ಲಾ ಸರಕು ಸಾಮಾನುಗಳನ್ನು ಅಡುಗೆಗೆ ಉಪಯೋಗಿಸುವರೇ ಅಲ್ಲಿಂದ ಅಡುಗೆ ಕೋಣೆಗೆ ಕಳುಹಿಸುವರು. (ನೀರುನೆರಳು ಇರಿಸಿದಲ್ಲಿಟ್ಟ ಅರ್ಧ ಕುಂಬಳಕಾಯಿ ಹಾಗೂ ಒಂದು ಪಾಡ ಬಾಳೆಕಾಯಿ ಕ್ಷೌರಿಕ ಹಾಗೂ ಮಡಿವಾಳರಿಗಾಗಿ ತೆಗೆದಿರಿಸುವರು) ಊರವರು ಹಾಗೂ ನೆಂಟರಿಷ್ಟರು 11ರ ತಿಥಿಯೂಟಕ್ಕೆ ತಯಾರಿ ನಡೆಸುವರು. (ಮನೆಯವರು ಮತ್ತು ಕುಟುಂಬಸ್ಥರು ಅಡುಗೆ ಮಾಡುವುದು ನಿಷಿದ್ಧ. ಕರ್ಮಕ್ಕೆ ನಿಂತವನು ಈಗ ಫಲಾಹಾರ ಮಾಡಬೇಕು).

11ರ ದಿನದ ತಿಥಿ/ಬೊಜ್ಜ :

ಎಲ್ಲಾ ಕಾಠ್ಯಕ್ರಮಗಳು ಊರುಗೌಡರ ನೇತೃತ್ವದಲ್ಲಿ ನಡೆಯುತ್ತವೆ. ಹೇಳಿ ಕಳುಹಿಸಿದಂತೆ ಮಡಿವಾಳರು ಮತ್ತು ಕ್ಷೌರಿಕರು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಬರುತ್ತಾರೆ. ಕುಟುಂಬಸ್ಥರೆಲ್ಲ ಬಂದ ಮೇಲೆ ಗಣಪತಿಗೆ ಸ್ವಸ್ತಿಕ ಇಟ್ಟು ಕ್ಷೌರಿಕರು ಕ್ಷೌರ ಮಾಡಲು ಆರಂಭಿಸುತ್ತಾರೆ. ಕುಟುಂಬಸ್ಥರು ಹೆಣ್ಣು ತೆಗೆದುಕೊಂಡು ಹೋದ ಅಳಿಯಂದಿರು ಹಾಗೂ ಸೋದರ ಅಳಿಯಂದಿರು ಇವರೆಲ್ಲ ಮೀಸೆ ಸಹಿತ ಮುಖ ಕ್ಷೌರ ಮಾಡಿಸಿಕೊಳ್ಳುತ್ತಾರೆ. ಇವರೆಲ್ಲರ ಕ್ಷೌರ ಆದ ನಂತರ ಮನೆಯ ಎದುರು ಮೆಟ್ಟಿಲ ಹತ್ತಿರ ಕ್ಷೌರಿಕನು ಬಂದು ಮಣೆಯ ಮೇಲೆ ಕಾಲುದೀಪ ಹಚ್ಚಿ ಬೆಂಡು ಕುಕ್ಕೆಯಲ್ಲಿ ಒಂದು ಸೇರು ಕುಚ್ಚಲು ಅಕ್ಕಿ, ಒಂದು ತೆಂಗಿನಕಾಯಿ, 5 ವೀಳ್ಯದೆಲೆ, 1 ಅಡಿಕೆ, 1 ಪಾವಲಿ ಮತ್ತು ಒಂದು ತಂಬಿಗೆ ನೀರು ಇಡುತ್ತಾನೆ. ದೀಪ ದಕ್ಷಿಣಾಭಿಮುಖವಾಗಿ ಹಚ್ಚಿಡಬೇಕು. ಕರ್ಮಕ್ಕೆ ನಿಂತವರು ಮತ್ತು ಮನೆಯವರು ದೀಪಕ್ಕೆ ಎದುರು ನಿಲ್ಲುತ್ತಾರೆ. ಅವರೆದುರಾಗಿ ಊರುಗೌಡರು ಮತ್ತು ಊರವರು ಹಾಗೂ ಕ್ಷೌರಿಕ ನಿಲ್ಲುತ್ತಾರೆ. ಈ ಮೊದಲೇ ಕತ್ತಿ, ಕೊಡಪಾನ ಮತ್ತು ಹಾರೆ ತಂದಿಡಬೇಕು. ಕರ್ಮಕ್ಕೆ ನಿಂತವನು ಎಡಗೈ ಮುಂದೆ ಮಾಡಿ ಬಲಗೈ ಮುಟ್ಟಿಕೊಂಡು ಅಪ್ರದಕ್ಷಿಣೆಯಾಗಿ ದೀಪಕ್ಕೆ ಆರತಿ ಎತ್ತಿ ದೂಪೆ ಕೆಲಸ ಹಾಗೂ ಪಾಳಿ  ತೆಗೆಯಲು ಊರವರೊಟ್ಟಿಗೆ ಅನುವು ಕೇಳುವನು. ನಂತರ ದೀಪದ ಎದುರು ಕುಂಠಿಯನ್ನು ನೆಲದಲ್ಲಿ ಹಾಕಿ ಅದರ ಮೇಲೆ ಮೊಣಕಾಲೂರಿ (ಮಂಡಿಯೂರಿ) ಕುಳಿತುಕೊಳ್ಳುವನು. ಕ್ಷೌರಿಕ ಕೂಡ ಪೌಳಿ ತೆಗೆಯಲು ಊರವರೊಟ್ಟಿಗೆ ಅನುವು (ಒಪ್ಪಿಗೆ) ಕೇಳುತ್ತಾನೆ. ಒಪ್ಪಿಗೆ ಪಡೆದ ನಂತರ ಶಾಸ್ತ್ರಕ್ಕಾಗಿ ಸ್ವಲ್ಪ ತಲೆಕೂದಲನ್ನು ತುದಿ ಬಾಳೆಲೆ ಇಟ್ಟು ಅದಕ್ಕೆ ಬೀಳುವಂತೆ ತೆಗೆಯುತ್ತಾನೆ. ನಂತರ ಅದನ್ನು ಮುದ್ದೆ ಮಾಡಿ ಕೂದಲು ತೆಗೆಯುವ ಸ್ಥಳಕ್ಕೆ ಕೊಂಡು ಹೋಗುತ್ತಾನೆ. (ಬಾಳೆಲೆಯನ್ನು ನೀರಲ್ಲಿ ಬಿಡಬೇಕು). ಪೂರ್ತಿ ತಲೆಕೂದಲು ಮತ್ತು ಗಡ್ಡ-ಮೀಸೆಗಳನ್ನು ತೆಗೆಯುತ್ತಾನೆ. ಈ ಮೊದಲೇ ಊರುಗೌಡರ ಸಮೇತ ಕುಟುಂಬಸ್ಥರು ಧೂಪೆ ಕೆಲಸಕ್ಕೆ ಹೋಗಿರುತ್ತಾರೆ. ಕರ್ಮಕ್ಕೆ ನಿಂತವನು ಕ್ಷೌರ ಆದ ತಕ್ಷಣ ಒಂದು ಕೊಡ ನೀರನ್ನು ತಲೆಗೆ ಹೊಯ್ದುಕೊಂಡು ಇನ್ನೊಂದು ಕೊಡ ನೀರನ್ನು ತೆಗೆದುಕೊಂಡು ಧೂಪೆ ಕೆಲಸಕ್ಕೆ ಹೋಗಬೇಕು. ಮೂರರ ಶುದ್ಧದಂದು ದೂಪೆ ಸುತ್ತ ಕುತ್ತಿದ ಸರಳಿ ಕಣೆಗಳನ್ನು ತೆರವುಗೊಳಿಸಬೇಕು. ನಂತರ ಸರಳಿ ಕಣೆ ಅಟ್ಟಳಿಕೆ ಹಾಕಬೇಕು. ಅಟ್ಟಳಿಗೆಗೆ ಹಾಕಿದ ತೋಳುಗಳ ಮೇಲ್ಬಾಗದ ಅಡ್ಡಗಳು ಪೂರ್ವ-ಪಶ್ಚಿಮವಾಗಿರಬೇಕು. ಊರುಗೌಡರು ಹಾಗೂ ಸೋದರದವರು ಮೊದಲು ಸರಳಿಕಣೆ ಕುತ್ತಬೇಕು. ಅನುಕೂಲಸ್ಥರಾದರೆ ಜಾಲಗೂಡು ಅಥವಾ ಗುರ್ಜಿ ಮಾಡುತ್ತಾರೆ. (ಜಾಲಗೂಡು ವಿವರಣೆ ಮುಂದೆ ನೀಡಲಾಗಿದೆ).  ಮೇಲೆ ಅಲಂಕಾರದ ಚಪ್ಪರ ಹಾಕಬೇಕು. ಮಾವಿನ ಸೊಪ್ಪು ತಳಿರುತೋರಣ, ಎರಡು ಗೊನೆ ಹಾಕಿದ ಬೂದಿಯ ಅಥವಾ ಗಾಳಿ ಬಾಳೆ ಗಿಡವನ್ನು ಎದುರಿಗೆ ಕಟ್ಟಬೇಕು. ಚಪ್ಪರದ ಸುತ್ತಲೂ ಬಿದಿರಿನ ತಟ್ಟೆ ಕಟ್ಟುವುದು, ತುದಿ (ಕೊಡಿ) ಬಿದಿರಿನ ಕೆಳಭಾಗವನ್ನು 3 ಸೀಳಾಗಿ ಮಾಡಿ ಧೂಪೆಗೆ ಕುತ್ತಬೇಕು. ಅದರ ಮೇಲೆ ತೆಂಗಿನ ಹಿಂಗಾರವನ್ನು ಅರಳಿಸಿಡಬೇಕು. ಧೂಪೆ ಕೆಲಸ ಮುಗಿದ ಮೇಲೆ ಪ್ರತಿಯೊಬ್ಬರೂ ಸ್ನಾನ ಮಾಡಬೇಕು. ಊರಗೌಡರು ಧೂಪೆ ಕೆಲಸಕ್ಕೆ ಹೋಗುವಾಗ 3ರ ಶುದ್ಧದ ದಿನ ಇಟ್ಟ ಕುಂಠಿಯನ್ನು ಮಾಡಿನಿಂದ ತೆಗೆದು ಕೈಯಲ್ಲಿ ಹಿಡಿದುಕೊಂಡು ಇರುತ್ತಾರೆ. ಸ್ನಾನ ಮಾಡಿದ ನಂತರ ಅದನ್ನು ನೀರಿನಲ್ಲಿ ಬಿಡಬೇಕು. ಪ್ರತಿಯೊಬ್ಬರೂ ಸ್ನಾನವಾದ ನಂತರ ಅಂಗಳಕ್ಕೆ ಬರುವಲ್ಲಿ ಅಂಗಳದ ಬದಿಯಲ್ಲಿ 2 ಮಣ್ಣಿನ ಮಡಿಕೆಯಲ್ಲಿ ನೀರು ತುಂಬಿಸಿ ಬೈಹುಲ್ಲಿನ ಸಿಂಬೆಯ ಮೇಲೆ ಇಟ್ಟಿರುತ್ತಾರೆ. ಧೂಪೆ ಕೆಲಸಕ್ಕೆ ಹೋದ ಪ್ರತಿಯೊಬ್ಬರೂ ಮಡಕೆಯಲ್ಲಿಟ್ಟ ನೀರನ್ನು ಎಡಕೈಯಿಂದ 3 ಸಲ ತಲೆಗೆ ಚಿಮುಕಿಸಿಕೊಳ್ಳಬೇಕು. (ಮಾವಿನ ಸೊಪ್ಪನಿಟ್ಟ ಮಡಕೆಯಲ್ಲಿದ್ದ ನೀರನ್ನು ಊರವರು ಹಾಗು ನೆಂಟರು, ಹಲಸಿನ ಸೊಪ್ಪನ್ನಿಟ್ಟ ಮಡಕೆಯಲ್ಲಿದ್ದ ನೀರನ್ನು ಕುಟುಂಬಸ್ಥರು ಚಿಮುಕಿಸಿಕೊಳ್ಳುವರು.) ಇದಾದ ನಂತರ ಮೊದಲೇ ತಯಾರಿಸಿದ ಅನ್ನದ 3 ಮುದ್ದೆಗಳಲ್ಲಿ ಒಂದರಲ್ಲಿ ಅರಿಶಿನ ಹುಡಿ ಮಿಶ್ರಿತ, ಇನ್ನೊಂದರಲ್ಲಿ ಮಸಿ ಹುಡಿ ಮಿಶ್ರಿತವಾಗಿರಬೇಕು.
ಇದನ್ನು ಕರ್ಮಕ್ಕೆ ನಿಂತವನ ಹೆಂಡತಿ ಅಥವಾ ತಾಯಿಗೆ ಸಮಾನರಾದವರು ಬಿಳಿ ಸೀರೆ ಉಟ್ಟು ಮುಡಿ ಬಿಚ್ಚಿಸಿಕೊಂಡು ತರಬೇಕು. ಕರ್ಮಕ್ಕೆ ನಿಂತವನ್ನು ಮಸಿಹುಡಿ ಮಿಶ್ರಿತ ಮುದ್ದೆಯನ್ನು ಎಡಕೈಯಲ್ಲಿ ಹಿಡಿದು ಅಪ್ರದಕ್ಷಿಣೆಯಾಗಿ (ಅವನು ಉತ್ತರ ದಕ್ಷಿಣವಾಗಿ ನಿಂತಿರಬೇಕು) 3 ಸುತ್ತು ತಂದು ಹಿಂಬದಿಗೆ ಎಸೆಯಬೇಕು. ಆಗ ಆತನ ಕೈಗೆ ಮಡಿವಾಳ ನೀರು ಹಾಕಿ ಶುದ್ಧಮಾಡುತ್ತಾನೆ. ಅದೇ ರೀತಿ ಊರಿನವನು ಅರಿಶಿನ ಹುಡಿ ಮಿಶ್ರಿತ ಮುದ್ದೆಯನ್ನು ಮಾಡಬೇಕು. ಕೊನೆಗೆ ಮುದ್ದೆ ತಂದ ಹೆಂಗಸು ಉಳಿದ ಬಿಳಿ ಮುದ್ದೆಯನ್ನು ಕರ್ಮಕ್ಕೆ ನಿಂತವನ ಸ್ಥಳದಲ್ಲೇ ನಿಂತು ಬಾಳೆ ಎಲೆ ಸಮೇತ ಅಪ್ರದಕ್ಷಿಣೆಯಾಗಿ 3 ಸುತ್ತು ತಂದು ಎಡಕೈಯಲ್ಲೇ ಹಿಂಬದಿಗೆ ಎಸೆಯಬೇಕು. ಆಗ ಅವಳ ತಲೆಗೆ ಒಂದು ಕೊಡಪಾನ ನೀರನ್ನು ಮನೆಯವರು ಹೊಯ್ಯುವರು. ನಂತರ ಕರ್ಮಕ್ಕೆ ನಿಂತವನು ಬೆಂಡು ಕುಕ್ಕೆಯಲ್ಲಿ 1ಸೇರು ಕುಚ್ಚಲು ಅಕ್ಕಿ ಹಾಕಿ ತಲೆ ಮೇಲೆ ಹಿಡಿದು ಮೆಟ್ಟಲಿನ (ಮಾಡಿನ ಅಡಿಯಲ್ಲಿ) ಹತ್ತಿರ ಬಾಗಿ ನಿಲ್ಲಬೇಕು. ಮುದ್ದೆ ದಾಟಿಸಿದ ಹೆಂಗಸು ಒದ್ದೆ ಬಟ್ಟೆಯಲ್ಲಿ 1 ತಂಬಿಗೆ ನೀರನ್ನು ಆತನ ತಲೆಯ ಮೇಲೆ ಇದ್ದ ಅಕ್ಕಿಗೆ ಹೊಯ್ಯುತ್ತಾಳೆ. ನೀರು ಬಿದ್ದ ಕೂಡಲೇ ಬೆಂಡು ಕುಕ್ಕೆಯನ್ನು ಕೆಳಗೆ ಹಿಡಿಯಬೇಕು. ತಲೆಗೆ ನೀರು ಹೊಯ್ಯಬೇಕು. ತಲೆಯಿಂದ ಬಿದ್ದ ನೀರು ಬೆಂಡು ಕುಕ್ಕೆಗೆ ಬೀಳುವ ಹಾಗೆ ಮಾಡಿ ಅಕ್ಕಿ ಪೂರ್ತಿ ಒದ್ದೆಯಾಗುವಂತೆ ಮಾಡಬೇಕು. ಮೊದಲೇ ಮಡಿವಾಳ ನೀರು ನೆರಳಿಟ್ಟ ಸ್ಥಳದಲ್ಲಿ ಒಂದು ಮಣೆಯಲ್ಲಿ ದೀಪ ಹಚ್ಚಿಟ್ಟು ಇನ್ನೊಂದು ಮಣೆಯ ಮೇಲೆ ಬಿಳಿ ವಸ್ತ್ರ ಹಾಕಿ ಅದರ ಮೇಲೆ ಕಂಚಿನ ಬಟ್ಟಲು ಇಟ್ಟಿರುತ್ತಾರೆ. ಕರ್ಮಕ್ಕೆ ನಿಂತವನು ನೆಲದಲ್ಲಿ ಕುಂಠಿ ಹಾಕಿ ಮಂಡಿಯೂರಿ ಬಟ್ಟಲಿಗೆ ಕುಕ್ಕೆಯಿಂದ ಸಂಪೂರ್ಣ ಅಕ್ಕಿಯನ್ನು ಸುರಿಯುತ್ತಾನೆ. ಅದಕ್ಕೆ ಮಡಿವಾಳನು ಎರಡು ಬಾಳೆಲೆ, ಅರಿಶಿನ ಹುಡಿ, ಊದುಬತ್ತಿ, ನೆನೆಬತ್ತಿ, ಬೆಂಕಿ ಪೊಟ್ಟಣ, 5 ವೀಳ್ಯದೆಲೆ, 1ಅಡಿಕೆ ಇಡಬೇಕು. ಈ ಬಟ್ಟಲನ್ನು ಕರ್ಮಕ್ಕೆ ನಿಂತವನು ಮಡಿವಾಳ ಹಾಕಿದ ಬಟ್ಟೆಯಿಂದ ಕಟ್ಟುತ್ತಾನೆ. ಕುಂಠಿಯನ್ನು ಎಡ ಹೆಗಲಿಗೆ ಹಾಕಿ ಏಳಬೇಕು ನಂತರ ಕರ್ಮಕ್ಕೆ ನಿಂತವನ ಸಮೇತ ಕುಟುಂಬಸ್ಥರೆಲ್ಲಾ ನಾರಾಯಣ....ನಾರಾಯಣ. ನಾರಾಯಣ ಹೇಳುತ್ತಾ ಅದಕ್ಕೆ ಅಪ್ರದಕ್ಷಿಣೆಯಾಗಿ 3 ಸುತ್ತು ಬರುತ್ತಾರೆ. ನಂತರ ಅಕ್ಕಿ ಕಟ್ಟಿದ ಕಂಚಿನ ಬಟ್ಟಲನ್ನು ಕುಟುಂಬದ ಯಜಮಾನ ಕರ್ಮಕ್ಕೆ ನಿಂತವನ ಎಡ ಹೆಗಲಿಗೆ ಇಡುತ್ತಾರೆ. ಈಗ ಎಲ್ಲರೂ ಧೂಪೆಯ ಹತ್ತಿರ ಹೊರಡುವರು. ಮಡಿವಾಳ ಮಾಡಿದ ನಿಶಾನೆಯನ್ನು ಹಿಡಿದು ಊರವರು ಮುಂದಿನಿಂದ ಹೋಗಬೇಕು. ಕರ್ಮಕ್ಕೆ ನಿಂತವನ ತಲೆ ಮೇಲೆ ಬರುವಂತೆ ಕುಟುಂಬಸ್ಥರು ಹಿಡಿದುಕೊಂಡು ಅವರ ಹಿಂದಿನಿಂದ ಹೋಗುತ್ತಾರೆ. (ನಿಶಾನೆ ಎಂದರೆ ಬಿದಿರು ತಟ್ಟಿಗಳಿಗೆ ಮಡಿ ಬಟ್ಟೆಯನ್ನು ಕಟ್ಟಿ ಅಗಲವಾಗಿ ಹರವಿ ಬರುವಂತೆ ಕಟ್ಟಬೇಕು ಕಡ್ಡಿಗೆ ಬಾಳೆಕಾಯಿ ಕುಂಬಳ  ಕಾಯಿಗಳ ತುಂಡು, ವೀಳ್ಯದೆಲೆ, ಅಡಿಕೆ ಇವನ್ನು ಪೋಣಿಸಿ ಕಟ್ಟಬೇಕು). ಅಷ್ಟರಲ್ಲಿ ಬಂಧು ಬಳಗದವರು ತಂದಿರುವ ಸಿಹಿತಿಂಡಿಗಳನ್ನು ಅಲ್ಲದೆ ಮೂರು ಬಗೆಯ ಅಕ್ಕಿ ಹಿಟ್ಟು(ಚಪ್ಪೆ, ಖಾರ, ಉಪ್ಪು ಸೇರಿಸಿರಬೇಕು ). ಭೋಜನಕ್ಕೆ ತಯಾರಿಸಿದ ಎಲ್ಲ ಭಕ್ಷ್ಯಗಳನ್ನು  
 ಹೆಣ್ಣು ಗೆರಟೆಯಲ್ಲಿ ತೆಗೆದುಕೊಂಡು ಹೋಗುವರು. ದಾರಿಯಲ್ಲಿ ಮೊದಲಿಟ್ಟ ಎಲೆ ಅಡಿಕೆಯನ್ನು 
 ಕುಂಠಿಗೆ ನಿಂತವ ಬದಲಿಸುವುದು. (ಹೆಣ ಕೊಂಡುಹೋದಾಗ ಇಟ್ಟ ಎಲೆ ಅಡಿಕೆ) ಧೂಪೆಗೆ ಅಪ್ರದಕ್ಷಿಣೆಯಾಗಿ ಎಲ್ಲರೂ ನಾರಾಯಣ ನಾರಾಯಣ ಎಂದು ಹೇಳುತ್ತಾ ಮೂರು ಸುತ್ತು ಬಂದು ನಿಶಾನೆಯನ್ನು ಮುರಿದು ಬಿಸಾಡಬೇಕು. ತಂದ ತಿಂಡಿ, ಎಳನೀರು, ಭಕ್ಷ್ಯಗಳನ್ನು ಧೂಪೆಯ ಸುತ್ತಲೂ ಇಡುತ್ತಾರೆ. ಮಡಿವಾಳರು ಬಿಳಿ ವಸ್ತ್ರವನ್ನು ಧೂಪೆಯ ಮೇಲೆ ಹಾಕುವರು. ಕರ್ಮಕ್ಕೆ ನಿಂತವನು ಧೂಪೆಯ ಎದುರಿಗೆ ಕುಂಠಿಯನ್ನು ಹಾಕಿ ಅದರ ಮೇಲೆ ಮೊಣಕಾಲೂರಿ ಕುಳಿತು ಕಟ್ಟಿ ತಂದ ಕಂಚಿನ ಬಟ್ಟಲನ್ನು ಇಟ್ಟು ಕಟ್ಟು ಬಿಚ್ಚಬೇಕು. ತಂದಿರುವ 2 ಬಾಳೆಲೆಗಳನ್ನು ಅಟ್ಟಳಿಗೆಯ ಮೇಲೆ ಹಾಸಿ ಹಿಮ್ಮುಖ ಕೈ ಹಿಡಿದಾಗ (ಬೆನ್ನ ಹಿಂದೆ) ಮಡಿವಾಳ ನೀರು ಹಾಕುತ್ತಾರೆ. ಬೊಗಸೆ ತುಂಬಾ ಅಕ್ಕಿಯನ್ನು ಹಿಡಿದು ಹಾಸಿದ ಬಾಳೆಲೆಗೆ ಬಡಿಸಬೇಕು. ಪುನಃ ಮೊದಲಿನ ಹಾಗೆ ಕೈ ತೊಳೆದು ಹಿಂಗೈಯಲ್ಲಿ (ಬೊಗಸೆ ಮಗುಚಿ ಹಿಡಿದ ಹಾಗೆ) ಅಕ್ಕಿ ಹಾಕಬೇಕು. ಪುನಃ ಕೈತೊಳೆದು ಬೊಗಸೆಯಲ್ಲಿ ಹಾಕಬೇಕು. 1 ಎಳನೀರು, 5 ವೀಳ್ಯದೆಲೆ, 1ಅಡಿಕೆ ಹಾಗೂ ನೆನೆಬತ್ತಿ ಹಚ್ಚಿಡುತ್ತಾರೆ. ಉಳಿದ ಅಕ್ಕಿಗೆ ಕಟ್ಟಿ ತಂದ ಅರಿಶಿನ ಹುಡಿ ಹಾಕಿ ಮಿಶ್ರಣ ಮಾಡುತ್ತಾರೆ. ಈ ಹೊತ್ತಿನಲ್ಲಿ ಒಡೆದ ಗೆರಟೆಗಳಲ್ಲಿ ನೆನೆಬತ್ತಿಯನ್ನು ಸುತ್ತಲೂ ಇಡುತ್ತಾರೆ. ಕರ್ಮಕ್ಕೆ ನಿಂತವನು ಕುಂಠಿಯನ್ನು ಬಲದ ಹೆಗಲಿಗೆ ಹಾಕಿ ಎದ್ದು ಬಟ್ಟಲನ್ನು ಬಲದ ಹೆಗಲಿನಲ್ಲಿ ಇಟ್ಟು ಕುಟುಂಬಸ್ಥರೆಲ್ಲರೂ ಅದರಿಂದ ಅಕ್ಕಿಯನ್ನು ತೆಗೆದುಕೊಂಡು ನಾರಾಯಣ... ನಾರಾಯಣ...... ನಾರಾಯಣ ಹೇಳುತ್ತಾ ದೂಪೆಗೆ ಎಡಕೈಯಲ್ಲಿ ಅಕ್ಕಿಯನ್ನು ಹಾಕುತ್ತಾ 3 ಸುತ್ತು ಅಪ್ರದಕ್ಷಿಣೆಯಾಗಿ ಬರುತ್ತಾರೆ. ಕರ್ಮಕ್ಕೆ ನಿಂತವನು ಖಾಲಿ ಬಟ್ಟಲನ್ನು ಧೂಪೆಯ ಎದುರು ನೆಲಕ್ಕೆ ಕವುಚಿ ಹಾಕಿ, ಕುಂಠಿಯನ್ನು ಅಡ್ಡ ಹಾಕಿ ಮೊಣಕಾಲೂರಿ ತಲೆಮೇಲೆ ಕೈ ಹೆಣೆದು ಅಂಗೈ ಮೇಲೆ ಬರುವಂತೆ ಕುಳಿತುಕೊಳ್ಳಬೇಕು. ಮಡಿವಾಳರು ಊರ ಗೌಡರಿಗೆ, ನೆಂಟರಿಷ್ಟರಿಗೆ ಕೈಗೆ ನೀರು ಕೊಟ್ಟು ಬೆಳ್ತಿಗೆ ಅಕ್ಕಿ ಕೊಡುತ್ತಾನೆ. ಈಗ ಊರಗೌಡರು ಅಥವಾ ತಿಳಿದವರು ಸ್ವರ್ಗಕ್ಕೆ ಸಂದಾಯ ಮಾಡುವ ಮಾತುಗಳನ್ನು ಹೇಳುತ್ತಾರೆ. ಕೊನೆಗೆ ಎಲ್ಲರೂ ಸ್ವರ್ಗಕ್ಕೆ ಹೋಗಿ ಎಂದು 3 ಸಲ ಹೇಳುತ್ತಾ ಅಕ್ಕಿಯನ್ನು ದೂಪೆಯ ಮೇಲೆ ಹಾಕುತ್ತಾರೆ. ಕರ್ಮಕ್ಕೆ ನಿಂತವನು ಸಂಬಂಧ ಹೇಳಿ 3 ಬಾರಿ ನೆಲಕ್ಕೆ ಕೈ ಬಡಿದು ಸ್ವರ್ಗಕ್ಕೆ ಹೋಗಿ ಎಂದು ಹೇಳಬೇಕು. ಉಳಿದ ಮಕ್ಕಳೂ ಕೂಡಾ ಅದೇ ರೀತಿ ಮಾಡುಬೇಕು. ನಂತರ ಅವರನ್ನು ಎಬ್ಬಿಸಬೇಕು. ಹರಿವಾಣ ಹಾಗು ದೂಪೆಯ ಮೇಲೆ ಹಾಕಿದ ಬಟ್ಟೆಯನ್ನು ನುಡಿವಾಳ ತೆಗೆದುಕೊಳ್ಳುತ್ತಾನೆ. ನಂತರ ಎಲ್ಲರೂ ಸ್ನಾನಕ್ಕೆ ತೆರಳುತ್ತಾರೆ. ಸ್ನಾನ ಮಾಡುವಾಗಿ ಸರಳಿ ಸೊಪ್ಪು ಹಿಡಿದು 3 ಸಲ ತಲೆಗೆ ಚಿಮುಕಿಸಿಕೊಂಡು ನೀರಲ್ಲಿ ಮುಳುಗುವುದು ಕ್ರಮ ಸ್ನಾನದ ನಂತರ ಎಲ್ಲರೂ ಅಂಗಳಕ್ಕೆ ಬಂದು ಮನೆಯವರು ಮತ್ತು ಕುಟುಂಬಸ್ಥರು ಮನೆಗೆ ಎದುರಾಗಿ, ನೆಂಟರು ಮತ್ತು ಊರವರು ಅವರ ಎದುರು ಮುಖಮಾಡಿ ನಿಲ್ಲಬೇಕು. ಮಧ್ಯದಲ್ಲಿ ಮಡಿವಾಳನು ಒಂದು ಮಣೆ, ಒಂದು ತಂಬಿಗೆ ನೀರು, ದಲ್ಯ (ಮಡಿಬಟ್ಟೆ) ಇಡುತ್ತಾನೆ. ಮೊದಲು ಊರವರಿಗೆ ಕಾಲು ಮತ್ತು ತಲೆ ಭಾಗಕ್ಕೆ ನೀರು ಮತ್ತು ಅಕ್ಕಿಯನ್ನು ಚಿಮುಕಿಸುತ್ತಾರೆ. ಕೊನೆಯ ಸುತ್ತು ಅವರ ಹಿಂದಿನಿಂದ ಬಂದು ಅದೇ ರೀತಿ ಮಾಡುತ್ತಾನೆ. ಮಡಿವಾಳ ಊರುಗೌಡರಿಗೆ ದಲ್ಯವನ್ನು ನೀಡುತ್ತಾನೆ. ನಂತರ ಮನೆಯವರನ್ನು ಶುದ್ಧಮಾಡುತ್ತಾನೆ. ದಲ್ಯವನ್ನು ತಲೆಯ ಮೇಲೆ ಹೊದಿಸುತ್ತಾ ಬರುತ್ತಾನೆ. ಅಷ್ಟರಲ್ಲಿ ಊರ ಗೌಡರು ಪುಣ್ಯಾರ್ಚನೆ ಚಿಮುಕಿಸುತ್ತಾರೆ. ಇನ್ನೊಬ್ಬರು ಗಂಧ ದೂಪ ಮತ್ತು ತೇದ ಗಂಧವನ್ನು ಕೊಡುತ್ತಾ ಬರುತ್ತಾರೆ. ಇವರಂತೆ ಮನೆಯವರಿಗೂ ಮಾಡಬೇಕು. ಪುಣ್ಯಾರ್ಚನೆಯನ್ನು ಮನೆಯ ಒಳಗಡೆ, ಅಡಿಗೆ ಮನೆ, ಬಾವಿಗೆ ಚಿಮುಕಿಸಿ, ಪ್ರಸ್ತುತ ಕಾರ್ಯಕ್ರಮದ ಅಡುಗೆ ಮನೆಗೆ ಚಿಮುಕಿಸಬೇಕು. ಈಗ ಮಡಿವಾಳ ದಲ್ಯವನ್ನು ಮೆಟ್ಟಿಲಿಗೆ ಹಾಕುತ್ತಾರೆ. ಮನೆಯವರೆಲ್ಲರೂ ಒಳಗೆ ಹೋಗುವಾಗ ದಲ್ಯ ಮೆಟ್ಟಿಕೊಂಡು ಹೋಗುತ್ತಾರೆ. ಬಳಿಕ ನೀರು ನೆರಳಿಗೆ ಇಟ್ಟ ಜಾಗದಲ್ಲಿ ಮಣೆ ಇಟ್ಟು ದೀಪ ಹಚ್ಚಿಡುತ್ತಾರೆ. ಒಂದು ಸಣ್ಣ ಪಾತ್ರೆಯಲ್ಲಿ (ಗಿಣ್ಣಾಲು) ತೆಂಗಿನೆಣ್ಣೆ ಇರಬೇಕು. 3 ಸೇರು ಕುಚ್ಚಲಕ್ಕಿ, 10 ವೀಳ್ಯದೆಲೆ, 2 ಅಡಿಕೆ, 2 ಪಾವಲಿ ಕೂಡಾ ಇರಬೇಕು.

ಸಲಾಯಿ ಅಳೆಯುವ ಕ್ರಮ
ಕರ್ಮಕ್ಕೆ ನಿಂತವನು ಕುಂಠಿಯನ್ನು ಅಡ್ಡಹಾಕಿ ದಕ್ಷಿಣಾಭಿಮುಖವಾಗಿ ಮೊಣಕಾಲೂರಿ ಕುಳಿತುಕೊಳ್ಳುತ್ತಾನೆ. ಅವನ ಎದುರಿಗೆ ಸೇರು ತಂದಿಡುತ್ತಾರೆ. ಅದಕ್ಕೆ ಬಂದ ನೆಂಟರಿಷ್ಟರು ಊರಿನವರು ದುಡ್ಡನ್ನು ಹಾಕುತ್ತಾರೆ. ನಂತರ ಸೇರಿನಿಂದ ಹಣವನ್ನು ನೆಲಕ್ಕೆ ಸುರಿದು ಎರಡು ಕೈ ಜೋಡಿಸಿ ಮಧ್ಯದಿಂದ ಹಣವನ್ನು ಪಾಲು ಮಾಡಬೇಕು. ಎಡಗಡೆಯ ಭಾಗವನ್ನು ಮನೆಗೂ, ಬಲಗಡೆಯ ಪಾಲನ್ನು ಮತ್ತೂ ಎರಡು ಭಾಗ ಮಾಡಿ ಒಂದು ಪಾಲನ್ನು ಮಡಿವಾಳನಿಗೂ ಮತ್ತೊಂದು ಪಾಲನ್ನು ಕ್ಷೌರಿಕನಿಗೂ ಕೊಡಬೇಕು. ಎಡಗಡೆ ಪಾಲನ್ನು 2 ವಿಭಾಗ ಮಾಡಿ ಒಂದನ್ನು ಮೂಲದವನಿಗೂ ಉಳಿದ ಪಾಲನ್ನು ಮನೆಯವರಿಗೆ ನೀಡುವುದು ಪದ್ಧತಿ.

ಇನ್ನೊಂದು ಪದ್ಧತಿ ಪ್ರಕಾರ: ಅಕ್ಕಿಯನ್ನು ದೀಪದ ಎದುರು ನೆಲಕ್ಕೆ ಸುರಿಯುತ್ತಾರೆ

ಅಕ್ಕಿಯನ್ನು ಎಡಬಲಗಳಿಗೆ ಒಂದೊಂದು ಸೇರು ಅಳೆದು ಹಾಕಬೇಕು. ನಂತರ ಸೇರು ಕವಚಿ ಹಾಕಿ ಹಿಂಬದಿಯಲ್ಲಿ ಕೂಡಾ ಅದೇ ರೀತಿ ಹಾಕಬೇಕು (ಎಡಬಲಗಳಿಗೆ). ಉಳಿದ ಅಕ್ಕಿಯನ್ನು ಪೂರ್ತಿಯಾಗಿ ರಾಶಿ ಮಾಡಿ ಎಡದ ಕೈಯಿಂದ 2 ಪಾಲು ಮಾಡಿ ನಂತರ ಎಡ ಬಲಕ್ಕೆ ಸಮವಾಗಿ ಹಾಕಬೇಕು. 2 ರಾಶಿಗೂ 5 ವೀಳ್ಯದೆಲೆ, 1 ಅಡಿಕೆ, 1 ನಾಣ್ಯ ಇಡಬೇಕು. ಈಗ ಕೊಟ್ಟಹೆಣ್ಣು ಮಕ್ಕಳು ಈ ರಾಶಿ ಮೇಲೆ ಕಾಣಿಕೆ ಇಡುವ ಪದ್ಧತಿ. ಇದನ್ನು ಸಲಾಯಿ ಅಳೆಯುವುದು ಎನ್ನುವರು. ಇದಾದ ನಂತರ ಕ್ಷೌರಿಕನು ಊರ ಗೌಡರ ಅನುಮತಿ ಕೇಳಿ ಕರ್ಮಕ್ಕೆ ನಿಂತವನಿಗೆ ಗರಿಕೆ ಹುಲ್ಲಿನಿಂದ ಮೊಣಕಾಲಿನಿಂದ ತಲೆವರೆಗೆ ಎಣ್ಣೆ ಸವರಿ ಮಡಿವಾಳ ಕೊಟ್ಟ ಬೈರಾಸನ್ನು ಮುಂಡಾಸು ಕಟ್ಟುತ್ತಾನೆ. ಈಗ ಮಡಿವಾಳ ಕರ್ಮಕ್ಕೆ ನಿಂತವನನ್ನು ಕೈ ಮುಟ್ಟಿ ಎಬ್ಬಿಸುತ್ತಾನೆ. (ಏಳುವಾಗ ಕುಂಠಿಯನ್ನು ನೆಲದಲ್ಲಿ ಬಿಡಬೇಕು.) ಮಡಿವಾಳ ಕೊಡುವ ಬಿಳಿ ಬಟ್ಟೆಯನ್ನು ಉಟ್ಟು, ಉಟ್ಟುಕೊಂಡಿದ್ದ ಒದ್ದೆ ಬಟ್ಟೆಯನ್ನು ಅಲ್ಲಿಯೇ ಬಿಚ್ಚಿ ಬಿಡಬೇಕು. ಈಗ ಎರಡು ರಾಶಿಗಳಿಂದ ಚಿಟಿಕೆ ಅಕ್ಕಿಯನ್ನು ಸೇರಿಗೆ ಹಾಕಿ ಕೈ ಮುಗಿಯುತ್ತಾನೆ. ಸೇರು ಮಣೆ, ದೀಪವನ್ನು ಕನ್ನಿಕಂಬದ ಬುಡದಲ್ಲಿಡಬೇಕು. (ಅಥವಾ ಅನುಕೂಲ ಸ್ಥಳದಲ್ಲಿ ಇಡಬೇಕು)

ಇದಾದ ಬಳಿಕ ತಿಥಿ ಊಟದ ಕಾರ್ಯಕ್ರಮ ನಡೆಯುತ್ತದೆ. ಈಗ ಮನೆಯವರು ಪೂರ್ವಾಭಿಮುಖವಾಗಿ ಮೊದಲನೇ ಪಂಕ್ತಿಯಲ್ಲಿ ಕುಳಿತು ಊಟ ಮಾಡುತ್ತಾರೆ. ಊಟ ಮಾಡುವಾಗ ಕೊಟ್ಟ ಹೆಣ್ಣು ಮಕ್ಕಳು ಎಲ್ಲರಿಗೂ ವೀಳ್ಯದೆಲೆ, ಅಡ್ಡ ಒಡೆದ ಅಡಿಕೆ ಹೋಳು ಮತ್ತು ತಲೆಗೆ ಎಣ್ಣೆ ಕೊಡುವುದು ಪದ್ಧತಿ. ಊಟದಲ್ಲಿ ಮುಖ್ಯವಾಗಿ ಹುರುಳಿ ಬಾಳೆಕಾಯಿಪಲ್ಯ, ಹುರುಳಿ ಕುಂಬಳಕಾಯಿ ಸಾಂಬಾರು, ಅಕ್ಕಿ ಪಾಯಸ ಇತ್ಯಾದಿ ಇರಬೇಕು. ಇದು ಪದ್ದತಿ.

1ರ ಅಗೇಲು/ಮಿಂಚಿಲ್ ಊಟ :

ಕರ್ಮಕ್ಕೆ ನಿಂತವನು ಸಂಜೆ ಹೊತ್ತು ಸ್ನಾನ ಮಾಡಿ ಹೆಂಟೆ ಲಾಕಿಯನ್ನು ಕೊಂದು ಅಡಿಗೆ ತಯಾರಿಸಬೇಕು. (ಕೊಟ್ಟ ಹೆಣ್ಣು ಮಕ್ಕಳಲ್ಲಿ ಹಿರಿಮಗಳು ಒಂದು ಕೋಳಿ ತಂದರೆ - ಸಾಕು. ಒಂದೇ ಅಗೇಲು ಹಾಕುವ ಪದ್ಧತಿ), ಕುಟುಂಬದವರು ಮತ್ತು ಕೊಟ್ಟ ಹೆಣ್ಣು ಮಕ್ಕಳು ಕಡುಬು ತಯಾರಿಸುತ್ತಾರೆ. (ಉದ್ದಕ್ಕೆ ಕಡುಬು ಮಾಡುವುದು ಕ್ರಮ). ರಾತ್ರಿ ಹೊತ್ತಿಗೆ ಅಗೇಲು ಹಾಕಬೇಕು. ಕನ್ನಿಕಂಬದ ಹತ್ತಿರ ಅಥವಾ ಅನುಕೂಲ ಸ್ಥಳದಲ್ಲಿ (ನಡುಮನೆ) ಸಾಮಾನ್ಯವಾಗಿ ಅಗೇಲು (ಎಡೆ) ಹಾಕುವುದು. ಚಾಪೆ ಹಾಸಿ ಅದರ ಮೇಲೆ ಮಡಿವಾಳ ಕೊಟ್ಟ ಮಡಿಬಟ್ಟೆ ಹಾಸಿ ಮಣೆ ಇಟ್ಟು ದೀಪ ಹಚ್ಚಿ ಊದು ಬತಿ ಹಚ್ಚಿಡಬೇಕು. ತೇದ ಗಂಧವಿರಬೇಕು. ಅದರಲ್ಲಿ ಜೋಡು ಬಾಳೆಲೆ ಹಾಕಿ ಕಡುಬು ಹಚ್ಚಿಸುವುದು. ಕರ್ಮಕ್ಕೆ ನಿಂತವನು ಎಲೆ ಸುತ್ತಲೂ 11 ಕಡುಬು ಹಾಗು ಕೋಳಿ ಪದಾಥ ಮುಖ್ಯಭಾಗಗಳನ್ನು ಬಡಿಸಬೇಕು. ಮಣೆಯ ಮೇಲೆ 5 ವೀಳ್ಯದೆಲೆ, 1 ಅಡಿಕೆ, ಎಳನೀರು, ಅಮಲು ಪದಾರ್ಥ ಇಡಬೇಕು. ನೆಂಟರಿಷ್ಟರಿಗೆ ನೀರು ಕೊಡಬೇಕು. ಪ್ರತಿಯೊಬ್ಬರಿಗು ನಮಕೊಟ್ಟು ಪ್ರಾರ್ಥನೆ ಮಾಡಲು ಕೇಳಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಬೆಳೆಗೆ ಅಕ್ಕಿ ನೀಡಬೇಕು. ಪ್ರಾರ್ಥನೆ ಸಲ್ಲಿಸಿ ನಂತರ ಎಲ್ಲರೂ ಹೊರಗೆ ಬರಬೇಕು. ಸ್ವಲ್ಪ ಹೊತ್ತಿನೆ ಬಳಿಕ ಅಗೇಲಿಗೆ ನೀರು ಚಿಮುಕಿಸಿ ಅಗೇಲು ಎಳೆಯಬೇಕು. ಇದರ ಅರ್ಧಭಾಗವನ್ನು ಮಡಿವಾಳನಿಗೂ ಉಳಿದರ್ಧ ಬಾಗವನ್ನು ಕೊಟ್ಟ ಹೆಣ್ಣುಮಗಳಿಗೂ ಕೊಡಬೇಕು.

ಕೈಪೆ ಕಳೆಯುವುದು (ಬಾಯಿ ಚಪ್ಪೆ ತೆಗೆಯುವುದು) :

ಹಾಕಿದ ಅಗೇಲಿನಿಂದ ಕರ್ಮಕ್ಕೆ ನಿಂತವನ ಹೆಂಡತಿ ಕೋಳಿಯ ಮುಖ್ಯ ಭಾಗ (ಕರಿಯಡ)ವನ್ನು ತೆಗೆದು ಒಂದು ಎಲೆಯಲ್ಲಿ ಹಾಕಬೇಕು. ಕರ್ಮಕ್ಕೆ ನಿಂತವನು ಅಂಗಳದ ಒಂದು ಬದಿಯಲ್ಲಿ ನಿಂತು ಅದರ ಸಣ್ಣ ತುಂಡನ್ನು ಬಾಯಿಗೆ ಹಾಕಿ ಜಗಿದು ಉಗುಳಬೇಕು. ನಂತರ ಬಾಯಿ ಮುಕ್ಕಳಿಸಬೇಕು. ಹೀಗೆ 3 ಸಲ ಮಾಡಬೇಕು. ಇದಾದ ನಂತರ ಸೇರಿದವರಿಗೆ ಭೋಜನ ವ್ಯವಸ್ಥೆ ಇರುತ್ತದೆ.

16 ರ ಅಗೇಲು :

ಈ ದಿನ ನೆಂಟರಿಷ್ಟರು, ಊರು ಗೌಡರು, ಬಂಧು ಬಳಗದವರು ಬರುತ್ತಾರೆ. ಸತ್ತು 16 ನೇ ದಿನದಲ್ಲಿ ರಾತ್ರಿ ಕೊಲೆಗೆ ಸೇರಿಸುವ ಕ್ರಮವಿದೆ. ಸಂಜೆ ಹೊತ್ತು ಹೆಂಟೆ ಲಾಕಿಯನ್ನು ಕೊಂದು, ನೀರು ದೋಸೆ ಮಾಡಿ ಅಗಲು ಹಾಕಿ ಗಂಧ ಚಿಮುಕಿಸಬೇಕು. (ಗುರು ಕಾರ್ನೋರಿಗೆ)

ಅಗೇಲು ಬಡಿಸುವ ಕ್ರಮ :

ಅಗೇಲಿಗೆ ಕೊಟ್ಟ ಹೆಣ್ಣು ಮಕ್ಕಳೆಲ್ಲಾ ಸೇರಿ ಒಂದು ಹೇಂಟೆ ಲಾಕಿ ತರುವುದು ಪದ್ಧತಿ. ಒಂದು ಮಣೆಯ ಮೇಲೆ ಕಾಲು ದೀಪ ಉರಿಸಿರಬೇಕು. ಮತ್ತೊಂದು ಮಣೆಯ ಮೇಲೆ ಮೃತರು ಉಪಯೋಗಿಸುತ್ತಿದ್ದ ಪ್ರಮುಖ ವಸ್ತುಗಳನ್ನಿಡಬೇಕು. ದೀಪದ ಎದುರು ಬಿಳಿ ಬಟ್ಟೆ ಹಾಸಿ ಜೋಡು ಬಾಳೆಲೆ ಹಾಕಬೇಕು. ಕರ್ಮಕ್ಕೆ ನಿಂತವನು ಒಂದರ ಮೇಲೆ ಒಂದರಂತೆ 5 ನೀರು ದೋಸೆ ಬಡಿಸಬೇಕು. ಅದರ ಮೇಲೆ ಕೋಳಿ ಪದಾರ್ಥದ ಮುಖ್ಯ ಭಾಗಗಳನ್ನು ಬಡಿಸಬೇಕು. 5 ಎಲೆ 1 ಅಡಿಕೆ ಇರಿಸಿರಬೇಕು. ಎಳನೀರು, ಅಮಲು ಪದಾರ್ಥಗಳನ್ನಿಡಬೇಕು. ಸಣ್ಣ ಸಣ್ಣ ಹದಿನಾರು ಕೊಡಿ ಬಾಳೆಲೆಗಳನ್ನು ಕೆಳ ಪಕ್ಕದಲ್ಲಿ ಸಾಲಿಗೆ ಹಾಕಿ ಇನ್ನೊಂದು ಸಣ್ಣಕೊಡಿ ಬಾಳೆಯನ್ನು, ಪ್ರತ್ಯೇಕವಾಗಿ ಎದುರಿಗೆ ಅಡ್ಡಸಾಲಿನಲ್ಲಿ ಹಾಕಬೇಕು. ಈ ಎಲ್ಲಾ ಎಲೆಗಳಿಗೆ ದೋಸೆಯ ಚಿಕ್ಕ ಚಿಕ್ಕ ತುಂಡುಗಳನ್ನು ಹಾಗೂ ಕೋಳಿ ಸಾರನ್ನು ಬಡಿಸಬೇಕು. ಪ್ರತಿ ಅಗೇಲಿಗೆ 1ಎಲೆ, 1ಅಡಿಕೆ ಹೋಳು ಇಡಬೇಕು. ಆಮೇಲೆ ಬಾಳೆಲೆಗೆ ನೆನೆಬತ್ತಿಗಳನ್ನಿಡಬೇಕು. ಗಂಧ ಸಿಂಪಡಿಸಬೇಕು. ಕಾರ್ನೂರಿಗೆ ಬಡಿಸಿದೆ ಎಲೆಗಳಿಗೂ ನೆನೆಬತ್ತಿಗಳನ್ನು ಹಚ್ಚಿ ಗಂಧ ಸಿಂಪಡಿಸಬೇಕು. ಸೇರಿದ ಎಲ್ಲರಿಗೂ ಬೆಳ್ಳಿಗೆ ಅಕ್ಕಿ ಕೊಡಬೇಕು. ತಿಳಿದವರು ಪ್ರಾರ್ಥನೆ ಮಾಡಿದ ನಂತರ ಕರ್ಮಕ್ಕೆ ನಿಂತವನು 16ರ ಅಗೇಲಿನಲ್ಲಿ 1 ಅಗೇಲನ್ನು ಸಾಲಿನಿಂದ ಎಳೆದು ಹೊರಗಿದ್ದ ಅಗೇಲನ್ನು ಎಳೆದ ಜಾಗಕ್ಕೆ 3 ಸಲ ಸಂಬಂದ ಹೇಳಿ ಸೇರಿಸಬೇಕು. ಈಗ ಎಲ್ಲರೂ ಅಕ್ಕಿ ಹಾಕಿ ಕೈಮುಗಿಯಬೇಕು. ಬಳಿಕ ಸೇರಿದವರೆಲ್ಲರಿಗೂ ಭೋಜನವನ್ನು ವಿತರಿಸುವರು.

ಮನೆ ಬದಲಿಸುವ ಕ್ರಮ :

ಮೃತನ 16 ಕ್ರಮ ಆದ ಮೂರನೇ ದಿನಕ್ಕೆ ಕರ್ಮಕ್ಕೆ ನಿಂತವನನ್ನು ಸೋದರ ಮಾವಂದಿರ ಕಡೆಯವರು ಕರೆದುಕೊಂಡು ಹೋಗುವುದು ಕ್ರಮ.

ದೇಲಗೂಡು :

ವಿಶ್ವಕರ್ಮರಿಂದ ಅಥವಾ ಕಬ್ಬಿಣ ಕೆಲಸ ಮಾಡುವವರಿಂದ ಮಾಡಿಸುತ್ತಾರೆ.

ಮೊದಲೇ ತಿಳಿಸಿದಂತೆ ಒಂದು ಆಳು ಕೈ ಎತ್ತರದ (6-7 ಅಡಿ) 4 ಬಿದಿರು ಅಥವಾ ಅಡಿಕೆ ಮರದ ಕಂಬಗಳಿಗೆ ಸುಮಾರು ಮೇಲಿನಿಂದ 2 ಅಡಿ ಬರುವಷ್ಟು ಕತ್ತರಿ ಚೌಕವನ್ನು ಬಿದಿರಿನ ತಟ್ಟೆಯಿಂದ ಜೋಡಿಸಿ 4 ಕಂಬಗಳ ತುದಿ ಒಂದು ಮುಗುಳಿಯಲ್ಲಿ ಜೋಡಿಸಿ ಪೊಂಗಾರೆ ಮರದಿಂದ ಮಾಡಿದ ತೆಳು ಹಲಗೆಗಳನ್ನು ಕಾರೆಮುಳ್ಳು, ಅಬ್ಬಳಿಗೆ ಮುಳ್ಳುಗಳಿಂದ ಹೊಡೆದು ಜೋಡಿಸುತ್ತಾರೆ. (ಕಬ್ಬಿಣದ ಆಣಿ ಉಪಯೋಗಿಸುವಂತಿಲ್ಲ) ಅದಕ್ಕೆ ಸುಣ್ಣ ಮಿಶ್ರಿತ ಅರೆದ ಅರಿಶಿಣವನ್ನು ಲೇಪಿಸಿ ಬಂಗಾರದ ಬಣ್ಣ ಬರುವಂತೆ ಮಾಡುತ್ತಾರೆ. 4 ಕಂಬಗಳಿಗೆ ಬಾಳೆಕಾಯಿ ಹೋಳು, ಕುಂಬಳಕಾಯಿ ಹೋಳು, ಒಗ್ಗಿಹಾಕಿದ ಕೆಳಗಿನ ದೂಪೆಗೆ ಸರಳಿ ಕಣೆ ಕುತ್ತಿ ಮಡಿವಾಳರು ಬಿಳಿ ಬಟ್ಟೆಯನ್ನು ಹೊದಿಸಿ ಸಿಂಗಾರ ಮಾಡುತ್ತಾರೆ.

ದಂಡಿಗೆ : ಇದು ಕೂಳು ಅಕ್ಕಿ ಕೊಂಡು ಹೋಗಲು ಗುರ್ಜಿ ಅಥವಾ ದೇಲಗೂಡು ಮಾಡಿಸಿದವರು ಮಾಡುವ ಕ್ರಮ. 6 ಅಡಿ ಉದ್ದ ಬರುವಷ್ಟು ಉದ್ದದ ಒಂದು ಬಿದಿರು ಅದರ ಮಧ್ಯಕ್ಕೆ ಸುಮಾರು ಒಂದೂವರೆ ಅಡಿಯಷ್ಟು ಚೌಕ ಅಗಲ ಬರುವಂತೆ ಬಿದಿರು ತಟ್ಟೆಯಿಂದ ಮಾಡಿದ ಒಂದು ಚೌಕವನ್ನು ಜೋಡಿಸುತ್ತಾರೆ. ಮೇಲಿನಿಂದ ಕಮಾನು ಬರುವಂತೆ ಬಿದಿರಿನ ತಟ್ಟೆ ಬಗ್ಗಿಸಿ ಕಟ್ಟಿ ಅದಕ್ಕೆ ಬಿಳಿ ಬಟ್ಟೆ ಹೊದಿಸಿ (ಮಡಿವಾಳ) ತೆಂಗಿನ ಹಿಂಗಾರದಿಂದ ಸಿಂಗರಿಸುತ್ತಾರೆ. ಅವರ ಸಂಭಾವನೆಯಾಗಿ 2 ಸೇರು ಅಕ್ಕಿ, ಒಂದು ತೆಂಗಿನಕಾಯಿ, 5 ಎಲೆ, ಒಂದು ಅಡಿಕೆ, ಒಂದು ಪಾವಲಿ ಹಣ ಇಟ್ಟು ಬೆಂಡುಕುಕ್ಕೆಯಲ್ಲಿ ಕೊಡುವುದು.

ತೀರಿಕೊಂಡವರಿಗೆ ಸ್ವರ್ಗಕ್ಕೆ ಸಂದಿಸುವುದು :

ಇಂದು. ತಿಂಗಳಲ್ಲಿ .ಇವರ 11ನೇ ತಿಥಿ ದಿನ. 9 ತಿಂಗಳು ಹೊಟ್ಟೆಯಲ್ಲಿದ್ದು 10ನೇ ತಿಂಗಳಲ್ಲಿ ..ಇವರ ಮಗನಾಗಿ/ಮಗಳಾಗಿ ಹುಟ್ಟಿ 16ನೇ ದಿನದಂದು ತೆಂಗಿನಕಾಯಿಯನ್ನು ಕಟ್ಟುತ್ತಾರೆ. ತೆಂಗಿನ ಹೊಂಬಾಳೆಯಿಂದ ಸಾಧ್ಯವಾದಷ್ಟು ಸಿಂಗರಿಸಿ ಹೆಸರು ಪಡೆದೆ. ಬಾಲ್ಯದಲ್ಲಿ ತನ್ನ ಆಟೋಟದಲ್ಲಿ ಹಿರಿಯರನ್ನು ತಂದೆ ತಾಯಿಯರನ್ನು ಸಂತೋಷಗೊಳಿಸಿಕೊಂಡು ಗುರುಗುಂಡನ್ನೇ ವಲಂತ ವಿದ್ಯಾಭ್ಯಾಸ ಪಡೆದು ತಾರುಣ್ಯದಲ್ಲಿ ಹೆಣ್ಣನ್ನು/ಗಂಡನ್ನು ವರಿಸಿ ಗೃಹಸ್ಥಾಶ್ರಮವನ್ನು ಸ್ವೀಕರಿಸಿ ಮಕ್ಕಳನ್ನು ಪಡೆದು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಿ. ಮೈಗೂಡಿಸಿಕೊಳ್ಳುವಂತೆ ಮಾಡಿ ಸಂಸಾರಿಕ ಜೀವನದಲ್ಲಿಯೂ ಸಾರ್ವಜನಿಕ ಕ್ಷೇತ್ರದಲ್ಲಿಯೂ ಒಬ್ಬ ಸಭ್ಯರಾಗಿ ಮೆರೆದು ಹಸಿದವನಿಗೆ ಅನ್ನಕೊಟ್ಟು ಬರಿ ಮೈಯಲ್ಲಿ ಬಂದವನಿಗೆ ತೊಡಲು ಬಟ್ಟೆ ಕೊಟ್ಟು ತಲೆಗೆ ಎಣ್ಣೆ ಕೊಟ್ಟು ಒಬ್ಬ ಸಜ್ಜನ ಗೃಹಸ್ಥರಾಗಿ ಬಾಳಿ ಬದುಕಿದಿರಿ."ಮರ ಹುಟ್ಟಿದಲ್ಲಿ ಮನುಷ್ಯ ಹೋದಲ್ಲಿ" ಎಂಬ ಮಾತಿನಂತೆ ಚಿಗುರೆಲೆ ಕಾಯಿ ಎಲೆಯಾಗಬೇಕು. ಕಾಯಿ ಎಲೆ ಹಣ್ಣೆಲೆ ಆಗಬೇಕು, ಹಣ್ಣೆಲೆ ಉದುರಲೇಬೇಕು ಎಂಬ ಪ್ರಕೃತಿ ನಿಯಮದಂತೆ ನೀವು ಮೊನ್ನೆಯ ದಿನ ಇಹಲೋಕವನ್ನು ತ್ಯಜಿಸಿ ಪರಲೋಕ ವಾಸಿಯಾದಿರಿ. ಆ ಸಮಯದಲ್ಲಿ ನಿಮ್ಮ ಮನೆಯವರು ಕೊನೆಯ ಕೈ ನೀರೆಂಬಂತೆ ಕಂಚಿನ ಬಟ್ಟಲಲ್ಲಿ ಅಕ್ಕಿ ನೀರು ಹಾಕಿ ತುಳಸಿ ಕೊಡಿಯಿಂದ ನೀರು ಕೊಟ್ಟು ಬಿಳಿ ಬಟ್ಟೆ ಹೊದಿಸಿ ಕಾಯಿ ಒಡೆದು ತಲೆ ಕಾಲು ಕಡೆಯಲ್ಲಿ ದೀಪ ಹಚ್ಚಿ ಇಟ್ಟು ಊರಿಗೆ ತಿಳಿಯಲೆಂದು ಜೋಡು ಗುಂಡು ಹಾರಿಸಿದ ವಿಷಯ ತಿಳಿದ ಊರ ಪ್ರಮುಖರು ಮೂಲದವನನ್ನು ಕರೆದು ಕತ್ತಿ ಮಚ್ಚಿ ಕೊಟ್ಟು ನೆರೆಕರೆಯವರನ್ನು ಕರೆದು ಆಚೆ ಗುಡ್ಡೆಯಿಂದ ಮಾವು ಈಚೆ ಗುಡ್ಡೆಯಿಂದ ಹಲಸು ಕಾಷ್ಟಗಳನ್ನು ತಂದು ಚಿತೆಯನ್ನು ಮಾಡಿಸಿದರು. ಸ್ನಾನ ಮಾಡಿಸಿ, ಮನೆಯ ಒಳಗೆ ಮಲಗಿಸಿ ಅಕ್ಕಿ ಭತ್ತ ಕಟ್ಟಿ ತಲೆ ಕಡೆಯಿಂದ ಊರವರು ಕಾಲಿನ ಕಡೆಯಿಂದ ಮನೆಯವರು ಚಟ್ಟದಲ್ಲಿ ಹೊತ್ತು ತಂದು ಚಿತೆಯಲ್ಲಿಟ್ಟು ಸಂಸ್ಕಾರಗಳನ್ನು ಮುಗಿಸಿ ಕಾಲು ಕಡೆಯಿಂದ ಮನೆಯರು ತಲೆ ಕಡೆಯಿಂದ ಊರವರು ಅಗ್ನಿ ಸ್ಪರ್ಶ ಮಾಡಿದರು. ಕಳೇಬರಹ ಅಗ್ನಿಗೆ ಆಹುತಿಯಾಗಿ ಬೂದಿಯಲ್ಲಿ ಮಣ್ಣಿಗೆ ಮಣ್ಣಾಯಿತು. ಉರಿದ ಹೊಗೆ ಮೋಡವಾಗಿ ಆತ್ಮವು ಪರಮಾತ್ಮನಲ್ಲಿ ಲೀನವಾಯಿತು. ಮಾರನೇ ದಿನ ಕೊಳ್ಳಿ ಕೂಡಿ ಹಾಲು ತುಪ್ಪ ಎರೆದು 3ನೇ ದಿನ ಊರ ಪದ್ದತಿಯಂತೆ ಕ್ಷೌರಿಕನನ್ನು ಅಥವಾ ಮಡಿವಾಳನನ್ನು ಕರೆದು ಬೂದಿ ಶುದ್ಧ ಮಾಡಿ ದೂಫೆ ಮೆತ್ತಿ ಸೋದರ ಮನೆಯವರು ನೆರಳಿಗಾಗಿ ಸರಳಿ ಕಣೆ ಕುತ್ತಿ ತಂಪು ಮಾಡಿದೆವು. ಪಾಳಿಗೆ ನಿಂತವ ಕುಂಬಳಕಾಯಿ ಕಡಿದು ನೀರು ನೆರಳಿಗಿಟ್ಟು ನಿಮ್ಮನ್ನು ಆಹ್ವಾನಿಸಿದೆವು. ನಾವು ಕಂಡ ಕುರುಹುಗಳಲ್ಲಿ ನೀವು ಬಂದು ಬಾಯಾರಿಕೆಯನ್ನು ಸ್ವೀಕರಿಸಿದ್ದೀರಿ ಅಂತ ನಂಬಿದೆವು. ಇಂದು 11ನೇ ದಿನ ನಿಮ್ಮ ಇಷ್ಟ ಮಿತ್ರರು, ಬಂಧು ಬಳಗದವರು ಬಂದು ಸೇರಿ ನಿಮಗೆ ಇಷ್ಟವಾದ ತಿಂಡಿ ತಿನಿಸಿಗಳನ್ನು ತಂದು ಇಟ್ಟಿದ್ದೇವೆ. ನೀವು ಇದರ ಹವಿರ್ ಭಾಗಗಳನ್ನು ಸ್ವೀಕರಿಸಿಕೊಂಡು ಇಹ ಲೋಕದ ಎಲ್ಲಾ ಆಸೆಗಳನ್ನು ತ್ಯಜಿಸಿ ನಿಮ್ಮ ಜೀವನದಲ್ಲಿ ಏನಾದರೂ ಗೊತ್ತು ಗುರಿ ಇಲ್ಲದೆ ಮಾಡಿದ ತಪ್ಪುಗಳು ಇದ್ದಲ್ಲಿ ಕುಂಠಿಗೆ ನಿಂತವನು 10 ದಿನ ವೃತಸ್ಥನಾಗಿ ನಿಂತು, ಪಾಳಿ ತೆಗೆದು ಮಾಡಿದ ಕರ್ಮ ಸೇವೆಯಲ್ಲಿಯೂ ಮುಂದೆ ಶ್ರೀ ಸನ್ನಿಧಿಯಲ್ಲಿ ಮಾಡುವ ಪಿಂಡ ಪ್ರಧಾನ ಕಾರ್ಯದಲ್ಲಿಯೂ ಪರಿಹಾರವಾಗಿ ಯಾವುದೇ ಎಡ ಶಕ್ತಿಗಳ ಕೊಪವಾಗದೇ, ಅಗಸನ ಕಲ್ಲಾಗದೇ, ಗಾಣದ ಎತ್ತಾಗದೇ, ಕ್ಷೌರಿಕನ ಮುಟ್ಟಾಗದೇ, ಹಾರವನ ಆಳಾಗದೇ, ದಾರಿಯ ಮುಳ್ಳಾಗದೆ ಬಾಳೇ ಪಾಲದಲ್ಲಿ ನೂಲಿನ ಕೈತಾಂಗದಲ್ಲಿ, ಶ್ರೀ ಮನ್ನಾರಾಯಣನ ಪಾದದಡಿಯಲ್ಲಿ ಸ್ವರ್ಗ ಸೇರಿ ಎಂದು ನಾವೆಲ್ಲಾ ಹೇಳುವುದು ನೀವು ಸ್ವರ್ಗಕ್ಕೆ ಹೋಗಿ... ಸ್ವರ್ಗಕ್ಕೆ ಹೋಗಿ... ಎಂದು ಎಲ್ಲರು 3 ಸಲ ಹೇಳುವುದು.

ಅವಲಕ್ಕಿ ಹಾಕುವುದು

ದೀಪಾವಳಿ ಹಬ್ಬದ ದಿನ ಆಚರಿಸುವ ಕ್ರಮ. ಹೆಂಗಸರು ಮೃತರಾದರೆ ಅಮವಾಸ್ಯೆಯ ದಿನ ಹಾಗು ಗಂಡಸರು ಮೃತರಾದರೆ ಬಲಿಪಾಡ್ಯದ ದಿನ ಮುಂಜಾನೆ ಅಂದಾಜು 4 ಗಂಟೆಯ ಹೊತ್ತಿಗೆ ಅವಲಕ್ಕಿ ಹಾಕುವ ಕ್ರಮವಿದೆ. ಹತ್ತಿರದ ಸಂಬಂಧಿಗಳು, ಕುಟುಂಬಸ್ಥರು, ಊರುಗೌಡರು ಇವರೆಲ್ಲ ಬಂದು ಸೇರುತ್ತಾರೆ. ಹೇಂಟೆ ಲಾಕಿ ಕೋಳಿ ಕೊಂದು ಪದಾರ್ಥ ಮಾಡಬೇಕು. ನಂತರ ಕಾರ್ನೂರಿಗೆ ಬಡಿಸುವ ಕ್ರಮವಿದೆ. ಮಣೆ ಮೇಲೆ ಕಾಲು ದೀಪ ಹಚ್ಚಿ ಊದುಬತ್ತಿ ಹಚ್ಚಿಡಬೇಕು. ಮಣೆಯ ಮೇಲೆ ಮೃತರು ಉಪಯೋಗಿಸುತ್ತಿದ್ದ ಅಗತ್ಯ ವಸ್ತುಗಳನ್ನು ಇಡಬೇಕು. ಚಾಪೆ ಹಾಕಿ ಮಡಿವಾಳ ಕೊಟ್ಟ ದಲ್ಯವನ್ನು ಹಾಕಬೇಕು. ಅದರ ಮೇಲೆ ಜೋಡಿ ಬಾಳೆಎಲೆ ಹಾಕಿ ಅದರ ಮೇಲೆ 5 ಹುಳಿ ದೋಸೆ, ಕೋಳಿಯ ಮುಖ್ಯ ಭಾಗಗಳನ್ನು ಬಡಿಸಬೇಕು. 5 ವೀಳ್ಯದೆಲೆ, ಅಡಿಕೆ, 1 ಎಳೆನೀರು ಇಡಬೇಕು ಹೊಸ ಚಾಪೆ ಮೇಲೆ ಮಡಿವಾಳ ಕೊಟ್ಟ ಮಡಿ ಬಟ್ಟೆ ಹಾಸಿ ಸ್ವಲ್ಪ ದೊಡ್ಡದಾದ ಜೋಡು ತುದಿ ಬಾಳೆಲೆಯಲ್ಲಿ ಅವಲಕ್ಕಿ ಬಡಿಸಿ ತೆಂಗಿನ ಕಾಯಿ ಹಾಲನ್ನು ಬಡಿಸಿ ಅದರ ಸುತ್ತಲೂ 5 ಬಾಳೆ ಹಣ್ಣನ್ನು ಸುಲಿದು ಇಡಬೇಕು. ಒಟ್ಟಿಗೆ ಒಂದು ತುಂಡು ಬೆಲ್ಲ ಇರಿಸಬೇಕು. ಕುಟುಂಬಸ್ಥರು ಅಲ್ಲೇ ಇರಿಸಿದ ಅವಲಕ್ಕಿ ಬೆಲ್ಲ ಕಾಯಿ ಹಾಲನ್ನು ಅಗೆಲಿಗೆ ಬಡಿಸುವರು. ತದ ನಂತರ ನೆಂಟರಿಷ್ಟರು ಅವರವರೇ ತಂದ ಅವಲಕ್ಕಿ ಬೆಲ್ಲ ಬಾಳೆಹಣ್ಣನ್ನು ಬಡಿಸುವರು. (ಸಾಮಾನ್ಯವಾಗಿ ನೆಂಟರಿಷ್ಟರು ಬರುವಾಗ 1 ಸೇರು ಅವಲಕ್ಕಿ, 1 ಅಚ್ಚು ಬೆಲ್ಲ, 1 ಪಾಡ ಬಾಳೆಹಣ್ಯ, 1 ತೆಂಗಿನಕಾಯಿ ತರುವುದು. ಕುಟುಂಬಸ್ಥರು ತರುವ ಕ್ರಮವಿಲ್ಲ) ತಿಳಿದವರು ಪ್ರಾರ್ಥನೆ ಮಾಡಿಕೊಳ್ಳಬೇಕು. ಮಧ್ಯಾಹ್ನಕ್ಕೆ ಮೊದಲು ಅಗೇಲು ಜಾರಿಸಬೇಕು.

ಅಗೇಲು ಎಳೆಯುವುದು: ಅಗೇಲು ಬಡಿಸಿದವರೇ ಅಗೇಲಿಗೆ ನೀರು ಹಾಕಿ ಜಾರಿಸುವುದು
ಮಾಡಬೇಕು. ಬಂದವರಿಗೆಲ್ಲ ಯಥೋಪಚಾರ ಮಾಡಿ ಕಳುಹಿಸುವುದು ಕ್ರಮ (ಬಡಿಸಿದ ಅರ್ಧ ಭಾಗವನ್ನು ಮಡಿವಾಳನಿಗೆ ಕೊಡುವ ಕ್ರಮವಿದೆ.)

ಕಾವೇರಿ ಸಂಕ್ರಮಣದ ಹಿಂದೆ ಮೃತಪಟ್ಟವರಿಗೆ ಇದೇ ವರ್ಷದಲ್ಲಿಯೂ ತದನಂತರ ಮೃತಪಟ್ಟವರಿಗೆ ಮುಂದಿನ ದೀಪಾವಳಿಯಲ್ಲಿ ಅವಲಕ್ಕಿ ಹಾಕುವ ಕ್ರಮವಿದೆ. (16 ಕಳೆದಿರಬೇಕು.)















Monday, October 14, 2024

ಗೌಡ ಸಂಸ್ಕೃತಿ-ಬಯಕೆ ಮದುವೆ (ಸೀಮಂತ)

 ಕನ್ಯ ಗರ್ಭವತಿಯಾದಾಗ ವರನ ಮನೆಯವರು ಹೆಣ್ಣಿನ ಮನೆಗೆ ಸಮಾಚಾರ ಮುಟ್ಟಿಸುತ್ತಾರೆ. ಮಗಳು ಗರ್ಭವತಿಯಾದ ವಿಚಾರವನ್ನು ತಿಳಿದ ತವರು ಮನೆಯವರು ಮಗಳನ್ನು ಏಳನೇ ತಿಂಗಳಲ್ಲಿ ಬಂದು ಕರೆದುಕೊಂಡು ಹೋಗುವರು. ದೇವರ ದೀಪ ಹಚ್ಚಿ ಹಿರಿಯರ ಆಶೀರ್ವಾದ ಪಡೆದು ಹೊರಡುವ ಪದ್ಧತಿ. ನಂತರ ತವರು ಮನೆಯಲ್ಲಿ ಬಯಕೆ ಮದುವೆ ಮಾಡುವ ಕ್ರಮವಿದೆ. ನಿಶ್ಚಿತ ಶುಭದಿನದಂದು ಬಯಕೆ ಮದುವೆಯನ್ನು ಮಾಡುವರು. ಚೊಚ್ಚಲ ಹೆರಿಗೆಯಲ್ಲಿ ಗರ್ಭಿಣಿಗೆ ಬಹಳಷ್ಟು ಬಯಕೆಗಳಿರುತ್ತವೆ. ಬಯಕೆ ಮದುವೆ ಮಾಡುವ ಸಮಯಕ್ಕೆ ಮುಂಚೆ ಕದಳಿ ಬಾಳೆಹಣ್ಣು, ಹೊದಳು, ಅವಲಕ್ಕಿ, ಬೆಲ್ಲ, ತೆಂಗಿನಕಾಯಿ, ಬಾಳೆಎಲೆ, ಎಲೆಅಡಿಕೆ. ಏಳನೇ ತಿಂಗಳಾದರೆ ಏಳು ಬಗೆಯ ಸಿಹಿತಿಂಡಿ ಹಾಗೇನೆ ಏಳು ಬಗೆಯ ಹೂಗಳನ್ನು ಶೇಖರಿಸಿಡಬೇಕು. ನೆರೆಹೊರೆಯವರನ್ನು, ನೆಂಟರಿಷ್ಟರನ್ನು ಹಾಗೂ ಗಂಡ ಮತ್ತು ಅವನ ಮನೆಯವರನ್ನು ಆಹ್ವಾನಿಸಬೇಕು. ಪತಿಯ ಮನೆಯಿಂದ ಬರುವಾಗ ಹೊಸ ಹಸಿರು ಸೀರೆ, ರವಿಕೆ, ಹಸಿರು ಬಲೆ, ಆಭರಣ, ಹೂ, ಹಿಂಗಾರ ಸಿಹಿತಿಂಡಿಗಳನ್ನು ತರುವರು.

ಗಂಡಿನ ಕಡೆಯಿಂದ ತಂದ ವಸ್ತಾಭರಣಗಳಿಂದ ಗರ್ಭಿಣಿಯನ್ನು ಶೃಂಗರಿಸುತ್ತಾರೆ. ನಂತರ ಗರ್ಭಿಣಿಯನ್ನು ಮತ್ತು ಅವರ ಪತಿಯನ್ನು ತುಳಸಿಕಟ್ಟೆಯ ಹತ್ತಿರ ಕರೆದುಕೊಂಡು ಹೋಗಿ ಗರ್ಭಿಣಿಯ ತಂದೆ ತಾಯಿ ಅವಳ ಕೈಯಲ್ಲಿ 5 ವೀಳ್ಯದೆಲೆ, 1 ಅಡಿಕೆ ಕೊಟ್ಟು ಕುಲದೇವರ ಹೆಸರು ಹೇಳಿ 5 ಸಲ ಭೂಮಿಗೆ ನೀರು ಬಿಡುವರು. (ಪಂಚಭೂತಗಳಿಗೆ ಅರ್ಪಣೆಮಾಡುವ ಕ್ರಮ) ಇಲ್ಲಿ ಕೋಳಿ(ಹೆಂಟೆ ಲಾಕಿ) ಮರಿಯನ್ನು ಗರ್ಭಿಣಿಯ ತಂದೆ ಅಥವಾ ಹಿರಿಯರು ಕೈಯಲ್ಲಿ ಹಿಡಿದು ಗರ್ಭಿಣಿಯ ತಲೆಸುತ್ತ ತಂದು ಬೆಳ್ಳಿಗೆ ಅಕ್ಕಿಯನ್ನು ಅದಕ್ಕೆ ತಿನ್ನಿಸಿ ನೀರು ಕುಡಿಸಿ ಬಿಟ್ಟುಬಿಡುವರು. ಒಳಗೆ ಬಂದು ನಡುಮನೆಯಲ್ಲಿ (ಕನ್ನಿಕಂಬದ ಹತ್ತಿರ) ಜಾಜಿ ಹಾಸಿ ಗರ್ಭಿಣಿಯನ್ನು ಮತ್ತು ಅವಳ ಪತಿಯನ್ನು ಹತ್ತಿರ ಕುಳ್ಳಿರಿಸುವರು. ಕಾಲುದೀಪ ಹಚ್ಚಿಡಬೇಕು. ಗಂಧ, ಅರಸಿನ, ಕುಂಕುಮ ಒಂದು ಮಣೆಯ ಮೇಲಿಡಬೇಕು. ಹರಿವಾಣದಲ್ಲಿ ಅಕ್ಕಿ ಹಾಗೂ ತಂಬಿಗೆ ನೀರು ಇಟ್ಟಿರಬೇಕು. ಮುತ್ತೈದೆಯರು ಗರ್ಭಿಣಿಗೆ ಉಡಿ ಅಕ್ಕಿ ತುಂಬಿಸುವರು. (ಒಂದು ಸೇರು ಬೆಳ್ತಿಗೆ ಅಕ್ಕಿ, 1 ತೆಂಗಿನಕಾಯಿ, 5 ವೀಳ್ಯದೆಲೆ, 1 ಅಡಿಕೆ, 1 ಅಚ್ಚುಬೆಲ್ಲ) ಇವೆಲ್ಲವನ್ನು ಮೊರದಿಂದ (ತಡೆ) ಮಡಿಲಿಗೆ ಹಾಕುವುದು ಕ್ರಮ. ಹಿರಿಯರು ಅರಿಶಿನ ಕುಂಕುಮ ಹಚ್ಚಿ ಅಕ್ಷತೆ ಹಾಕಿ ಹರಸುವರು ಗರ್ಭಿಣಿ ಪಕ್ಕದಲ್ಲಿ 1 ಗಂಡು ಮಗುವನ್ನು ಗಂಡನ ಪಕ್ಕದಲ್ಲಿ 1 ಹೆಣ್ಣು ಮಗುವನ್ನು ಕುಳ್ಳಿರಿಸಿ ಅವರೆಲ್ಲರ ಎದುರಿಗೆ ಬಾಳೆಲೆ ಹಾಕುವರು. ಗರ್ಭಿಣಿಯ ತಾಯಿ ಮೊದಲು ಹೊದುಳು ಅವಲಕ್ಕಿ, ಬಾಳೆಹಣ್ಣು, ಕಾಯಿಹಾಲು ಬಡಿಸುವರು, ಇದನ್ನು ಕಲಸಿ ಒಂದು ಉಂಡೆಯನ್ನು ಗರ್ಭಿಣಿ ತನ್ನ ಪಕ್ಕದಲ್ಲಿರುವ ಗಂಡುಮಗುವಿಗೂ ಪತಿಯು ಹೆಣ್ಣು ಮಗುವಿಗೂ ಕೊಡುತ್ತಾರೆ. ತಂದಂತಹ ಸಿಹಿತಿಂಡಿ ಮುಂತಾದ ಪದಾರ್ಥಗಳನ್ನು ಅವರಿಗೆ ಬಡಿಸುವರು. ಊಟವಾದ ನಂತರ ಗರ್ಭಿಣಿಯನ್ನು ಗಂಡನ ಮನೆಗೆ ಕರೆದುಕೊಂಡು ಹೋಗುವರು. ಪುನಃ ನಿಗದಿಪಡಿಸಿದ ದಿನದಂದು ತಾಯಿ ಮನೆಗೆ ಕರೆತರುವರು.

ಪರಿಕರಗಳು : ಕದಳಿ ಬಾಳೆಹಣ್ಣು, ಹೊದುಳು, ಅವಲಕ್ಕಿ, ಬೆಲ್ಲ, ತೆಂಗಿನಕಾಯಿ 1, ಬೆಳ್ತಿಗೆ ಅಕ್ಕಿ 1 ಸೇರು, ಬಾಳೆಲೆ 5, ವೀಳ್ಯದೆಲೆ 5, ಅಡಿಕೆ 1, 7 ಬಗೆಯ ಹೂಗಳು ಹಾಗೂ ಸಿಹಿತಿಂಡಿಗಳು, ಕಾಯಿ ಹಾಲು

ಪತಿಮನೆಯಿಂದ ತರುವ ವಸ್ತುಗಳು : ಹೊಸ ಹಸಿರು ಸೀರೆ, ರವಿಕೆ, ಆಭರಣ, ಹೂ ಹಿಂಗಾರ, ಸಿಹಿತಿಂಡಿಗಳು



Thursday, October 10, 2024

ಗೌಡ ಸಂಸ್ಕೃತಿ- ಮದುವೆ.

 ಗೌಡ ಸಮುದಾಯದಲ್ಲಿ ಮದುವೆಯೆನ್ನುವುದು ಬಹುಮುಖ್ಯ ಘಟ್ಟ. ಕುಟುಂಬ/ವಂಶವಾಹಿನಿ ಬೆಳೆದು ಬರಲು 'ಮದುವೆ' ಎನ್ನುವ ನಿಯೋಜಿತ ವ್ಯವಸ್ಥೆ ನಡೆಯಲೇ ಬೇಕು ಎನ್ನುವ ಕಟ್ಟಳೆ ನಮ್ಮ ಹಿರಿಯರಿಂದ ನಿರ್ಮಿತವಾದುದಾಗಿದೆ. ಈ ಮದುವೆ ಎನ್ನುವ ವ್ಯವಸ್ಥೆ ಗೌಡರಲ್ಲಿ ಬಳಿ ನೋಡುವಲ್ಲಿಂದ ಆರಂಭವಾಗುತ್ತದೆ. ಮದುವೆಯಲ್ಲಿ ಹುಡುಗಿ ನೋಡುವ ಶಾಸ್ತ್ರ, ವೀಳ್ಯ ಶಾಸ್ತ್ರ, ಮದುವೆ ದಿನದ ಕ್ರಮಗಳಲ್ಲಿ ಹಾಗೆಯೇ ನಂತರದ ಕ್ರಮಗಳಲ್ಲಿ ಹಲವು ಕಟ್ಟಳೆಗಳಿರುತ್ತವೆ. ಗೌಡರಲ್ಲಿ 'ಬಳಿ' ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. 'ಬಳಿ' ಗೌಡರಲ್ಲಿ ಸ್ವಕುಟುಂಬಿಕ ನೆಲೆಯನ್ನು ಪ್ರತಿನಿಧಿಸುತ್ತದೆಯಾದ್ದರಿಂದ ಒಂದೇ 'ಬಳಿ'ಯಲ್ಲಿ 'ಮದುವೆ' ನಡೆಯಬಾರದೆನ್ನುವ ನಿಷೇಧವನ್ನು ಇಟ್ಟುಕೊಳ್ಳಲಾಗಿದೆ. ರಕ್ತ ಸಂಬಂಧಿಗಳಲ್ಲಿ ಮದುವೆ ನಡೆಯುವುದು ಯಾವ ದೃಷ್ಟಿಯಿಂದಲೂ ಯೋಗ್ಯವಲ್ಲ ಎನ್ನುವುದನ್ನು ನಮ್ಮ ಹಿರಿಯರು ಕಂಡುಕೊಂಡಿದ್ದಾರೆನ್ನುವುದನ್ನು ಇದು ಸೂಚಿಸುತ್ತದೆ. ಹೀಗಿದ್ದೂ ತಂದೆಯ ಸಹೋದರಿ ಅಥವಾ ತಾಯಿಯ ಸಹೋದರರ ಕಡೆ 'ಬಳಿ'ಗಳಲ್ಲಿ ಮದುವೆ ನಡೆಯಬಹುದು. ಗೌಡರಲ್ಲಿ ಇರುವ ವಿಭಿನ್ನ 'ಬಳಿ'ಗಳಲ್ಲಿ 'ಮದುವೆ' ನಡೆಯುವುದು ಸಂಪ್ರದಾಯ. ಜಾತಿ ಪದ್ಧತಿ ಪ್ರಕಾರ ಅಲ್ಲದೇ ವೈದಿಕ ಕ್ರಮಗಳಲ್ಲಿ ಕೂಡಾ ಮದುವೆ ನಡೆಸಬಹುದು.

Sunday, September 15, 2024

ಬಾಗಿಲ ತಡೆಯುವ ಹಾಡುಗಳು-3

 ಮಾವಿನ ತೋರಣಕಾಗಿ ಬಂದ-ಗಂಡನ ತಂಗಿ।
ತೆಂಗು ಬಾಳೆ-ಯಾ ಅಡಕೇಯಾ॥
ವನಕಾಗಿ ಬಂದು ಬಾಗಿಲನು ತಡೆದಾಳು||
ಜಗಲೀಲಿ ನಿಂದು ಹತ್ತು ಬೆರಳು ನೊಂದಾವು 
ನೆತ್ತೀಯಾ ದಂಡೆ-ಜರಿದಾವು| ತಂಗ್ಯಮ್ಮಾ ನೀ 
ತಡೆದಾ ಬಾಗಿಲನು ಬಿಡು ನಮಗೆ||
ಆನೆಗಾನೆ ಕೊಡುವೆ ಆನೆ ಮರಿಗಳ-ಕೊಡುವೇ
 ಕಂಠೀಸರ ಕೊಡುವೆ ಜೊರಳಿಗೆ|| ತಂಗ್ಯಮ್ಮ ನೀ 
ತಡೆದಾ ಬಾಗಿಲನು ಬಿಡು ನಮಗೆ||
ಆನೆಗಳು ನಮಗುಂಟು ಆನೆಮರಿಗಳು ಉಂಟು 
ಕಂಠೀಸರವುಂಟು-ಕೊರಳಿಗೆ ಅಣ್ಣಯ್ಯ ನಾ 
ತಡೆದಾ-ಬಾಗಿಲ ಬಿಡಲಾರೆ||
ಕಲ್ಮೇಲೆ ಕಲ್ಲೊಡ್ಡಿ-ಹೂವ ಬಿಡಿಸುವ ಜಾಣೆ! 
ತಂಗ್ಯಮ್ಮ ಬಾಗಿಲ ಬಿಡಲಾರ-ಳು|| ಅವಳೊಂದು 
ಮಾತಿಗೆ ಬಾಗಿಲ ತಡೆದವಳೆ||
ಅತ್ತಿಗೆ-ಅತ್ತಿಗೆ ಅಡಿಕೆ ಜೂಜಾಡೊವೆರಡು 
ಮುತ್ತೀನ ಜೂಜು ಸರಜೂಜು॥ ಅತ್ತಿಗೆ
 ಹೆತ್ತಹೆಣ್ಣಾ ಜೂಜು ಮಗನೀಗೆ||
ನಾನು ಹೆಣ್ಣೆತ್ತಾಗ ನೀನು ಗಂಡ್ಡೆತ್ತಾಗ 
ಸಣ್ಣಕ್ಕಿ ಬಯಲು ಬೆಳೆದಾಗ-ನಾದುನಿ- 
ಮಾಡಿಕೊಳ್ಳೋಣಾ-ಮದುವೇಯಾ॥
ಶ್ರೀ ಗಿರಿ ಪರ್ವತಕೆ ಹೋದೋದೊಂದುಂಟಾದ್ರೆ
 ಶಿವ-ನ ದಯದಿಂದಾ ಮಗನಾದ್ರೆ|| 
ನಾದುನಿ ಮಗನಿಗೆ ಧಾರೆ ಎರೆವೇನು||
ಮನೆಯಾ ಮುಂದಿರುವಾ- ಹೊನ್ನರಳಿಮರವೆ
ಅಣ್ಣಾನ ಮನೆಗೆ ಹೆಣ್ಣಿಗೆ ಬರುತ್ತೇನೆ–ಅತ್ತಿಗಮ್ಮಾ- 
ನಿನ್ನ ಸಾಕ್ಷಿಯಾಗಿ ಬಾಗೀಲ ಬಿಡುತೇನೆ-ಅತ್ತಿಗಮ್ಮಾ 
ಬಾಗಿ-ದಾಟಿ-ಒಳಗೋಗು||

Saturday, September 14, 2024

ಬಾಗಿಲ ತಡೆಯುವ ಹಾಡುಗಳು-2

 ಅಂಗನ ಮಣಿಯೆ ರಂಗ ಬಂದಾ। 
ಬಿಡಿರೆ ಬಾಗಿಲಾ- ತೆಗೆಯಿರಿ ಕದಗಳಾ| 
ರಂಗ ರುಕ್ಕಿಣಿ ಬಂದಾಗಾಯ್ತು! 
ಬಿಡಿರೆ ಬಾಗಿಲಾ ತೆಗೆಯಿರಿ ಕದಗಳಾ|
ತಂದೆ ತಾಯರ ಬಿಟ್ಟು ಬಂದೆ. 
ಅಣ್ಣ ತಮ್ಮಂದಿರಾ ಆಟ ಬಿಟ್ಟು-ಬಂದೆ  ನಾ ಬಿಡಿರೆ ಬಾಗಿಲಾ- 
ಅಕ್ಕತಂಗಿಯರ ಕೂಟ ಬಿಟ್ಟು-ಬಂದೆ-II 
ಬಂದೆ ನಾ ಬಿಡಿರಿ ಬಾಗಿಲಾ-ತೆಗೆಯಿರಿ ಕದಗಳಾ-1

ರಂಗ ರುಕ್ಕಿಣಿ ಬಂದಾಗಾಯ್ತು-ಬಿಡಿರಿ ಬಾಗಿಲಾ|| 
ಅತ್ತೆ ಮಾವರ ಗುಣ ಕಂಡು| 
ಬಾವ ಮೈದುನರ ಆಟ ಕಂಡು|
 ಅತ್ತಿಗೆ ನಾದಿನಿಯರ ಹಿತ ಕಂಡು!
 ಬಂದೆ ನಾ ಬಿಡಿರಿ ಬಾಗಿಲಾ-ತೆಗೆಯಿರಿ ಕದಗಳಾ||

ಬಾಗಿಲ ತಡೆಯುವ ಹಾಡುಗಳು-1

 ಅಂದು ಗೋಕುಲದಿಂದಾ-ಬಂದ-ನಾರಾಯಣ ಕೃಷ್ಣಾ-1
ಮಂಟಪದ ನಡುಗಾಗಿ-ಬರುವ ಹಾಗೆನಣ್ಣಯ್ಯಾ!
 ಮಡದಿ ಬೆಡಗೆಂದು ಬರುತಾರೆ||
 ಮಡದಿ ಬೆಡಗೆಂದು ಬರುವಾಗ ಅಣ್ಣಯ್ಯಾ-I
 ತಂಗಿಯ ಕದಗಳಾ ತಡೆದಾಳು-–ತಂಗ್ಯಮ್ಮ
ನೀ-ತಡೆದಾ ಕದವಾ-ಬಿಡುಬೇಗಾ॥ ನಾ ತಡೆ ಕದಾ ಬಿಡಲಾರೆ! ಪ್ರತಿಯೊಂದು-ಮಾತು ನುಡಿಬೇಗಾ|| 
ದೇಶ ಉಂಬಳಿ ಕೊಡುವೆ! ಶೇಷ-ಉಪ್ಪರಿಗೆ ಕೊಡುವೆ- 
ನೀ ತಡೆದ ಕದಗಳಾ-ಬಿಡು ಬೇಗಾ||
ದೇಶ ಉಂಬಳಿ ನನಗುಂಟು! ಶೇಷ ಉಪ್ಪರಿಗೆ
 ನನಗುಂಟು! ಎನ್ನುವ ನೀನ ನನಗೆ-ಕೊಡುವೆನ್ನಮ್ಮಾ
 ಪ್ರೀತಿಗೊಂದು ಮಾತು ನುಡಿಬೇಗಾ||

Thursday, September 12, 2024

ತುಪ್ಪ ತೆಗೆದುಕೊಂಡು ಬರುವಾಗ (ಶೋಭಾನೆ ಹಾಡು) -2

 ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದ ಶ್ರೀಗಂಧ ಪರಿಮಳವು 
ಲೇಸಾಗಿ ಪದ್ಮ ಹಾವಿಗೆಯನ್ನು ಧರಿಸಿದ ವಾಸುದೇವನಿಗೂ
ಕಾಲಲ್ಲಿ ಕಿರುಗೆಜ್ಜೆ ನೀಲದ ಬಾವುಲಿ ನೀಲವರ್ಣದ 
ನಾಟಕಳ್ಹಾಕುವ ನಮ್ಮ ಭಾವಜನಯ್ಯ ಬಾಲ ಗೋಪಾಗೆ 
ನೀಲವರ್ಣನಿಗೆ ವನಿತೆ ಶ್ರೀಲಕ್ಷ್ಮೀಗೂ ನೀಲದಾರತೀಯಾ ಬೆಳಗೀರೆ ಶೋಭಾನೆ 
ಕುಂಕುಮ ಕಸ್ತೂರಿ ಪರಿ ಪರಿ ನಾಮ ಶಂಕ ಚಕ್ರವನ್ನೇ ಧರಿಸಿದ
 ನಮ್ಮ ಬಿಂಕದಿಂದಲಿ ನಾಟ್ಯವ ನಾಡುತಾಡುವ 
ಪಂಕಜ ನಾಭಗೆ ವನಿತೆ ಶ್ರೀಲಕ್ಷ್ಮೀಗೆ ಕುಂಕುಮಧಾರತೀಯಾ ಬೆಳಗೀರೆ ಶೋಭಾನೆ.
 ಹದಿನಾರು ಸಾವಿರ ಸ್ತ್ರೀಯರನೊಡಗೊಂಡು 
ಚದುರಂಗ ಪಗಡೆಯ ನಾಡಿದ ನಮ್ಮ ಮದನ ಮೋಹನ 
ದೇವ ಎಡೆಯಲಿ ಕೌಸ್ತುಭ ಮಧುಸೂದನನಿಗೆ 
ವನಿತೆ ಶ್ರೀಲಕ್ಷ್ಮೀ ಸುದತಿಯಾರತಿಯಾ ಬೆಳಗೀರೆ ಶೋಭಾನೆ 
ತೆತ್ತಿಸಕೋಟ ದೇವರ್ಕಳ ನೋಡಗೊಂಡು ಹಸ್ತವ 
ತಾರದೊಳಾಡಿದ ನಮ್ಮ ಸತ್ಯಭಾಮೆ ಪ್ರಿಯ ಪುರಂಧರ ವಿಠಲಗೆ 
ನಿತ್ಯೋತಮನಿಗೆ ವನಿತೆ ಶ್ರೀಲಕ್ಷ್ಮೀಗೆ ಮುತ್ತಿನಾರತಿಯಾ ಬೆಳಗೀರೆ ಶೋಭಾನೆ.
 ವನಿತೆ ಶ್ರೀಲಕ್ಷ್ಮೀಗೂ ಬಾಸಿಂಗದಾರತಿಯಾ ಬೆಳಗೀರೆ ಶೋಭಾನೆ 


Tuesday, September 10, 2024

ತುಪ್ಪ ತೆಗೆದುಕೊಂಡು ಬರುವಾಗ (ಶೋಭಾನೆ ಹಾಡು) -1

ಅರತಿ ಎತ್ತುವೆ ನಂದಗೋಕುಲದೊಳಗೆ ಆಡುವ ನಂದ ಗೋಪಿಯ
 ಕಂದನಿಗೆ ಬಂದು ಮಧುರೆಯಲ್ಲಿ ಮಾವನ ಕೊಂದು ಮಂಧರ ದರ ಗೋಪಾಲಗೆ 
ಕಂಕಣದಾರತಿಯಾ ಬೆಳಗೀರೆ ಶೋಭಾನೆ.
 ಚೆನ್ನಯ ಮನೆ ಮನೆ ಹಾಲು ಮೊಸರನು
 ಕದ್ದು ಕಣ್ಣ ಸನ್ನೆಯ ಮಾಡಿ ಕರೆದ ಕೃಷ್ಣಯ್ಯಗೆ 
ಹೊನ್ನಿನಾರತಿಯಾ ಬೆಳಗೀರೆ ಶೋಭಾನೆ
 ಜಲಜಾಕ್ಷಿಯರೆಲ್ಲರೂ ಜಲಕ್ರೀಡೆಯಾಡುವ ಸಮಯದೊಳು 
ಉಡುವ ಸೀರೆಯ ಕದ್ದು ಕಡಹದ ಮರವೇರಿ ಹುಡುಕು ಮಾಡುವ
 ನಮ್ಮ ಒಡೆಯ ಶ್ರೀಕೃಷ್ಣಯ್ಯಂಗೆ ಜಡಜದಾರತಿಯಾ ಬೆಳಗೀರೆ ಶೋಭಾನೆ.

ಹೆಣ್ಣನ್ನು ಮನೆಗೆ ಹತ್ತಿಸುವಾಗ ಹೇಳುವ ಹಾಡು

ಶುಕ್ರವಾರದ ದಿವಸ -ಹೂವ ತೋರಣ ಕಟ್ಟಿ ದೇವರ 
ಅರಮನೆಗೆ-ತಾಯವ್ವಾ। ಹನ್ನೆರಡು ದೀವಿಗೆ ಉರಿಯಾಲಿ।।
ಮುಂದೆ ಗುಡಿಹೊಯ್ದು ಕಲ್ಯಾಣ ಮಾಡಿ| ದೇವಿ ಬರುತಾಳೆ 







ಶನಿವಾರದ ದಿವಸ ಹೂವ ತೋರಣ ಕಟ್ಟಿ ದೇವರ 
ಮುಂದೆ ಗುಡಿ ಹೊಯ್ದು ಕಲ್ಯಾಣಮಾಡಿ| ದೇವಿ ಬರುತಾಳೆ 
ಅರಮನೆಗೆ-ತಾಯವ್ವಾ। ನೂರೊಂದು ದೀವಿಗೆ ಉರಿಯಾಳಿ|







ನೂರೊಂದು ದೀವಿಗೆ ಉರಿಯಲಿ ತಾಯವ್ವಾ| ನಿಮ್ಮ ಮಗ- 
ಬರುತಾನೆ ಹೊಳೆದಾಟಿ! ಸುತ್ತೇಳು ಸಮುದ್ರವ ಸುತ್ತಿ- 
ರಾಣೆ ರಾಯರೊಳಗೊಂಡು ಬರುವಾಗ ದೃಷ್ಟಿಗಾರತಿಯಾ ಬೆಳ-ಗೀರೆ






ಅಕ್ಕಯ್ಯ ತರುತಾಳೆ ಆಯುಳ್ಳದಾರತಿಯಾ- ಆರಲಿ 
ಕೇದಿಗೆ ಗೆರೆಮುಚ್ಚಿ ಹರಿವಾಣದೊಳಗೆ 
ದೃಷ್ಟಿಗಾರತಿಯಾ ಬೆಳಗ್ಯಾರು||





ಅತ್ತಿಗೆ ತಂದಾರು ಚಿತ್ತರದಾರತಿಯಾ-I 
ಏಳು ಕೇದಿಗೆ ಗೆರೆಮುಚ್ಚಿ ಹರಿವಾಣದೊಳಗೆ 
ಹೂವಿನಾರತಿಯಾ ಬೆಳಾಗಿರೆ||





ಅಪ್ಪನ-ಅರಮನೆಲಿ-ತುಪ್ಪ ಬೀಜನವನುಂಡ ಮಡಿವಾಳ
ಪಟ್ಟೆ ತಂದ್ಲಾಸು ನಡೆ-ಮಡಿ-ಯಾ|| ರಾಣಿ ರಾಯರೊಳಗೊಂಡು 
ಬರುವಾಗ ನಡೆವ ಕಾಲಡಿಗೆ ಮಡಿಹಾಸು॥






ಅಣ್ಣನ ಅರಮನೆಲಿ ಹಾಲುಂಡ-ಮಡಿವಾಳ 
ಪಟ್ಟೆ ತಂದ್ದಾಸು ನಡೆ-ಮಡಿ-ಯಾ-1ರಾಣಿ ರಾಯರೊಳಗೊಂಡು
ಬರುವಾಗ ನಡೆಮಡಿ-ತಂದ್ಲಾಸು ಮಡಿವಾಳ||





ಒಳಗಿರುವ ತಾಯವ್ವಾ। ಒಳಗೇನು ಗೈದೀರಿ? ನಿಮ್ಮ 
ಸೊಸೆ ಬರುತಾಳೆ ಮನೆಯೊಳಗೆ ನಿಮ್ಮ ಸೊಸೆ ಬರುತಾಳೆ- 
ನೆಲ್ಲಕ್ಕಿ ನಡುಬಾಡೆಗೆ ಹನ್ನೆರಡು ದೀವಿಗೆ ಉರಿಯಾಲಿ...!


Saturday, September 7, 2024

ದಿಬ್ಬಣದ ಮುಖ್ಯಸ್ಥರಿಗೆ ಹೆಣ್ಣನ್ನು ವಹಿಸಿ ಕೊಡುವುದು(ಹೆಣ್ಣು-ಗಂಡು ವಹಿಸಿಕೊಡುವುದು)

 ಪರಮ ವೈಭವದಿಂದ ತಮ್ಮ ಇಷ್ಟ ಮಿತ್ರರಿಂದೊಡಗೂಡಿ ಪುರುಷನ ಕಡೆಯಿಂದ ಆಗಮಿಸಲ್ಪಟ್ಟ ದಿಬ್ಬಣದ ಮುಖ್ಯಸ್ಥರಾದ ಮಹನೀಯರು ಯಾರಯ್ಯ?

ನಾವಯ್ಯ

ಹಾಗಾದರೆ ನಾವು ನಮ್ಮ ಪೂರ್ವ ಪದ್ಧತಿಯಂತೆ ವಿಜ್ಞಾಪನೆ ಯನ್ನು ಸ್ವೀಕರಿಸಿ, ಚಂದ್ರರಾಜನೆಂಬ ಪುರುಷನಿಗೆ ಪದ್ಮಾವತಿಯೆಂಬ ಕನ್ನಿಕೆಯನ್ನು ವಧು-ವರರನ್ನಾಗಿ ಮಾಡುವುದೆಂದು ಈ ಮೊದಲು
ಮನದತ್ತ ಮಾಡಿ, ಆ ಮೇಲೆ ವಾಗ್ದಾತ್ತ ಮಾಡೋಣಾಯ್ತು ಅಲ್ಲವೊ? 

ಹೌದು 

ವಾಗ್ದಾನದ ಮೇರೆಗೆ ನಾವು ಉಭಯ ಸಮಸ್ತರು ಕೂಡಿ, ಆಕಾಶದಷ್ಟು ದೊಡ್ಡ ಚಪ್ಪರವನ್ನು ಹಾಕಿ, ಭೂಮಿಯಷ್ಟು ದೊಡ್ಡ ಹಸೆಯನ್ನು ಬರೆದು, ರತ್ನ ಖಚಿತವಾದ ಮಂಟಪದಡಿಯಲ್ಲಿ ಸಮಸ್ತ ಬಂಧು ಬಾಂಧವರ ಸಮಕ್ಷಮದಲ್ಲಿ-ಅಗ್ನಿಸಾಕ್ಷಿಯಾಗಿ ನಮ್ಮ ಕನ್ಯಾರತ್ನವನ್ನು ಧಾರೆಯೆರೆದು ಕೊಟ್ಟಿದ್ದೇವಷ್ಟೆ?

ಹೌದು 

ಹಾಗಾದರೆ ನಿನ್ನೆಯ ದಿವಸ ಪುರುಷನನ್ನು ಮನ್ಮಥ- ನಂತೆಯೂ, ಕನ್ನಿಕೆಯನ್ನು ರತಿದೇವಿಯಂತೆಯೂ- ಶೃಂಗರಿಸಿ-ದಲ್ಲಾಗಲಿ, ರೂಪು ಲಾವಣ್ಯದಲ್ಲಾಗಲೀ ಏನೊಂದು-ಕುಂದು ಕೊರತೆಯಿಲ್ಲದೆ ಕಾಮ ಚಕ್ರೇಶ್ವರ ನನ್ನು ಹೋಲುವ ಪುರುಷನ ದಿವ್ಯ ಹಸ್ತಗಳಿಗೆ- ಚಾರುಹಸ್ತಗಳನ್ನಾಗಿ ಮಾಡಿದ್ದರಲ್ಲಾಗಲೀ ಯಾವ ಲೋಪ-ದೋಷಗಳು ಕಂಡಿಲ್ಲವಷ್ಟೆ?

ಹೌದು 

ಹಾಗಾದರೆ ನಮ್ಮ ಮುದ್ದು ಬಾಲಕಿಯನ್ನು ನಿಮ್ಮ ಸ್ವಾಧೀನಕ್ಕೆ ಒಪ್ಪಿಸಿ ಕೊಡುತ್ತೇವೆ. ಹಾಗೆ ಒಪ್ಪಿಸಿ ಕೊಡುವಾಗ ಬಾಲಕಿಗೆ ಹನ್ನೆರಡು, ಹನ್ನೆರಡು ಇಪ್ಪತ್ತನಾಲ್ಕು ವರಹಗಳನ್ನೂ-ಉಡಲು ವಸ್ತ್ರವನ್ನೂ ತೊಡಲು ಚಿನ್ನಾಭರಣಗಳನ್ನೂ ಊಟ ಮಾಡಲು ಬೆಳ್ಳಿ ಬಟ್ಟಲನ್ನು, ಕೈ ತೊಳೆಯಲು-ಬೆಳ್ಳಿಗಿಂಡಿಯನ್ನೂ ಕರೆದುಣ್ಣಲು ಗೋವಿನ ಹಿಂಡನ್ನೂ, ಬಳುವಳಿಯಾಗಿ ಕೊಟ್ಟಿರುತ್ತೇವೆ.
ಹೀಗೆ ನಾವು ಕೊಟ್ಟ ಅಲ್ಪ ಐಶ್ವರವನ್ನು ಒಂದಕ್ಕೆ ಹತ್ತು ಹತ್ತಕ್ಕೆ ನೂರು ನೂರಕ್ಕೆ ಸಾವಿರಗಟ್ಟೆ ಅಭಿವೃದ್ಧಿ ಮಾಡಿ ಕೀರ್ತಿ ಗಳಿಸುವಂತೆ ಮಾಡುವವರು ಯಾರಯ್ಯ?

ವರನಯ್ಯ

ನಮ್ಮ ಬಾಲಕಿಗೆ ಕಡೆ ಬಾಯಿ ಹಲ್ಲು ಬರಲಿಲ್ಲ-ನೆತ್ತಿ ಎಣ್ಣೆ ಆರಲಿಲ್ಲ-ಅಂಗೈ ಗೆರೆ ಮಾಸಲಿಲ್ಲ-ಬುದ್ಧಿ ಜ್ಞಾನ ಬರಲಿಲ್ಲ- ಹೆತ್ತ ತಂದೆ ತಾಯಿಯರ ನೆನಪು ಮರೆಯಲಿಲ್ಲ. ಹಸಿ ಕಡಿಯಲರಿಯಳು ಒಣಗಿಲು ಮುರಿಯಲರಿಯಲು ಅಂಗಳದಲ್ಲಿ ಆಡಿ ಹಾಲನ್ನವನ್ನು ಉಂಡು ಮೆಟ್ಟಲಲ್ಲಿ ಓಡಿ ತೊಟ್ಟಿಲಲ್ಲಿ ಮಲಗಬೇಕೆಂದು ಇಚ್ಛಿಸುವ ಬಾಲಕಿಗೆ ತಕ್ಕ ಬುದ್ಧಿವಾದವನ್ನು ಬೋಧಿಸುವಂತಹ ಬೋಧಕರು ಯಾರಯ್ಯ?

ವರನಯ್ಯ

ನಮ್ಮ ಬಾಲಕಿಯು ಚಿಕ್ಕದಾಗಿರುವ ಕಾಲದಿಂದಲೂ ಮಾವನ ಮನಗುಣವನ್ನರಿಯಳು; ಅತ್ತೆಯ ಅತಿ ಕೆಲಸವನ್ನು ತಿಳಿಯಳು. ಭಾವ ಮೈದುನರ ಭಾವನೆ ಗೊತ್ತಿಲ್ಲ. ಕುಟುಂಬದ ಕೂಟ ಕೂಡಿದವಳಲ್ಲಾ- ಹೀಗಿರುವಲ್ಲಿ ಏನಾದರೂ ಮಾತಿನಲ್ಲಿ ಕಲಹಗಳು ಉಂಟಾದರೆ ಇಂತಹ ಕಲಹಗಳನ್ನು ಉಪಶಮನ ಮಾಡು ವಂತಹ ಉಪಶಯಕರು ಯಾರಯ್ಯಾ?

ವರನಯ್ಯ

ಹಾಗಾದರೆ ದಿಬ್ಬಣದ ಮಹಾಶಯರೇ ನಾವು ಹೇಳಿದ ಮಾತಿಗೆ ಎರಡೆನ್ನದೆ ನಾವು ಕೊಡುವ ಕನ್ಯಾರತ್ನವನ್ನು ಭಕ್ತವತ್ಸಲನು ಭಕ್ತರನ್ನು ಪ್ರೀತಿಸುವಂತೆಯೂ ನರಹರಿಯು ಕೂರ್ಮೇಶನನ್ನು ಕಾಯುವಂತೆಯೂ ಹಸು ತನ್ನ ಎಳೆಗರುವನ್ನು ಪ್ರೀತಿಸುವಂತೆಯೂ ಪ್ರೀತಿಸುವಿರಾಗಿ ನಂಬುತ್ತೇವೆ.

ಹೌದು 


ಇನ್ನು ಮುಂದೆ ಈ ನವ-ದಂಪತಿಗಳನ್ನು ಭಕ್ತವತ್ಸಲನು ನಾಭಿ ಕಮಲದಲ್ಲಿ ಬ್ರಹ್ಮನಿಗೆ ಸ್ಥಾನವಿತ್ತವನಾದ ಆ ಕ್ಷೀರ ಶಯನ ಶ್ರೀಮನ್ನಾರಾಯಣನೇ ಕಾಪಾಡಲೆಂದು ನಾವೆಲ್ಲರೂ ವಂದಿಸೋಣಾ।

ಹತ್ತು ಕುಟುಂಬ ಹದಿನೆಂಟು ಗೋತ್ರ ದೇವ ಸಭೆ-ಸಂಸಾರ ಸಂಗಡ ಕೇಳಿ ಮದುಮಕ್ಕಳನ್ನು ದಿಬ್ಬಣದ ಮುಖ್ಯಸ್ಥರಿಗೆ ವಹಿಸಿ ಕೊಡುವಂತೆಯೇ. ವಾದ್ಯ.



Friday, September 6, 2024

ಹೆಣ್ಣು ವಹಿಸಿ ಕೊಡುವ ಹಾಡು (ಶೋಭಾನೆ ಹಾಡು)

ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು | 
ನಿಮ್ಮ ಮುಡಿಯೊಳಗಿಡಲು ತಂದಿರುವೆವು ॥.
ಕೊಳ್ಳಿರಿ ಮಗುವನ್ನು ಎಮ್ಮ ಮನೆ ಬೆಳಕನ್ನು|
ನಿಮ್ಮ ಮನೆಯನ್ನು ತುಂಬಿಸಲೊಪ್ಪಿಸುವೆವು||
ಮರೆ ಮೋಸ ಕೊಂಕುಗಳನ್ನರಿಯಳಿವಳು |
ಇನಿತು ವಿಶ್ವಾಸವನು ಕಂಡರಿಯಳಿವಳು||
ಕಷ್ಟಗಳ ಸಹಿಸದೆಯೆ ಕಾಣದೆಯೆ ಬೆಳೆದವಳು!
ಸಹಿಸಿಕೊಳ್ಳಿರಿ ಮಗುವನ್ನು ನೊಪ್ಪಿಸುವೆವು. ॥

ಕಠಿಣಗಳ ನೆಳಲ್ ಸುಳಿಯಲದುರಿ ಬಾಡುವಳು
ಹಿರಿಮಂಜು ಬಳಲಿದ ಹೂವಿನಂತೆ||
ಸುಖದಲಿ ದುಖಃದಲ್ಲಿ ಎಲ್ಲ ದೆಸೆವಿನರಲಿ! 
ನಿಮ್ಮ ಪಾಲಿಗೆ ನಿಲ್ಲುವ ಕುವರಿಯಿವಳು॥
ನಿಮಗಿವಳು ನೀಡುತಿಹ ಹಾಲು ಹಣ್ಣುಗಳೂ ಸವಿ।
ಎಂದೆಂದಿಗೂ ಇವಳ ನಡೆ ನಿಮ್ಮ ಪರವಾಗಿ!
ನಿಮ್ಮ ಕೀರುತಿ ಬೆಳೆಯುವಳಿವಳು ಸೌಜನ್ಯದಲಿ|
ನಿಮ್ಮ ಕುಲಶೀಲಗಳು ಮರುಕಳಿಸಲಿ 
ನಿನ್ನ ಮಡದಿಯ ಕೊ೦ಡು ಸುಖವಾಗಿರು ಮಗುವೇ। 
ನಿಮ್ಮ ಸೊಸೆ ಸೋದರಿಯಾ ಕೊಳ್ಳಿರಿವಳಾ||

ಜೀವನದಿ ಸಾಗರದಿ ಸಂಸಾರ ನೌಕೆಯನು 
ಆಧರಿಪ ಹುಟ್ಟಿದಂತಹ ಜೀವಿಯಿವಳೂ॥ 
ಕೈ ಬಿಡದೇ ಕಾವುದೈಪ್ರೇಮದಿಂದನುದಿನವೂ | 
ಇಂದಿನಿಂದೆಂದಿಗೂ ನಿಮ್ಮವಳೂ ಇವಳು|| 
ಅತ್ತೆ ಮಾವಂದಿರನು ತಾಯಿ ತಂದೆಯೆಂದರಿತು! 
ನಿತ್ಯ ನಿರ್ಮಲೆಯಾಗಿಸೇವೆಯನು ಮಾಡು || 
ಪತಿಯೇ ದೇವರು ನಿನಗೆ ಬೇರೆ ದೇವರು ಇಲ್ಲ! 
ಪತಿಯೆಗತಿ ನಿನಗೆ ಪತಿಯೇ ಸರ್ವಸ್ವವೂ॥ 
ಪಾದಸೇವೆಯ ಮಾಡು ದಾಸಿಯಂತಿರು 
ನೀನು ಪತಿ ಗೃಹಕೃತ್ಯದೊಳು ಮಂತ್ರಿ ನೀನವಗೆ ||
ಊಣಿಸುಗಳ ನೀಡಲಾತನಮಾತೆಯೆ 
ನೀನು ಪ್ರೀತಿಯಿಂದೊಡಗೂಡಿ ಸಂತಸದಿ ಬಾಳು||

ಹೆತ್ತವರ ಮನೆಗಿಂದು ಹೊರಗಾದೆ ನೀ ಮಗಳೇ।
ಆ ಮನೆಯ ಅವರು ನಿನ್ನವರು ಮುಂದೆ 
ಅವರೇ ತಾಯ್ಗಳು ಸುಖರು ಭಾಗ್ಯವನ್ನು ಬೆಳೆಸುವವರು ॥ 
ಅವರೇ ದೇವರು ನಿನ್ನ ದೇವರುಗಳು |
ಆವ ಬಳುವಳಿ ಕೊಡಲಿ ಮಗಳೇ ನಾ ನಿನಗೆ||
ಆವ ವಸ್ತುವನಿತ್ತು ಕಳುಹಿಸಲಿ ಮನಗೇ।
ದೇವರಿತಹ ವಸ್ತು ವಾಹನವೇ ಕೊಡಲೇ
ಬಡತನದಿ ಬೆಂದು ಬಡವಾಗಿರುತಿರ್ದುI
ತೊಡರುಗಳ ಸಹಿಸ ಬಡತನದ ಕಡಲಿನಲಿ ದಡ ಸೇರುತಿದೆ|

ಮಗಳೇ ನಾನೇನು ಕೊಡಲಿ ನಿನಗೇ।
ಹೋಗುವಾಗ ಅಗಲಿಕೆಯ ಉಪದೇಶ ನಿನಗೆ||
ಪತಿಗೆ ಸತಿಯೆಂಬ ಶೃತ ವಚನವನ್ನು!
ಮತಿಯವಳೇ ನೀ ನಡೆಸುತ್ತಾ ಬಾಳು!
ಪತಿಯ ಮಾತುಗಳ ಅಲ್ಲಗಳೆಯದಿರು ನೀನು|
ಪತಿಯೇ ಪರದೈವವವೆಂದು ನಂಬು ವಧುವೇ।
 ನಿಲ್ಲು ಕಣ್ಮರೊಸಿಕೊ ಮುದ್ದು ನೀನಳದಿರು||
ತಾಯಿಯಿರಾ ತಂದೆಯಿರಾ ಪಡೆಯಿರಿವಳಾ ಎರಡು ಮನೆಗಳು
ಹೆಸರು ಖ್ಯಾತಿಗಳು ಉಳಿವಂತೆ ತುಂಬಿದಾಯುಷ್ಯದಲಿ ಬಾಳಿ ಬದುಕು ನೀ ಮಗಳೇ||

ಶೇಷೋಪಚಾರದಿಂದ ಎಬ್ಬಿಸುವಾಗಿನ ಸೋಭಾನೆ

ರಾಜಿಪ ಮಣಿಮಯ ರತ್ನಪೀಠದಲ್ಲಿ ರಾಜಾಧಿರಾಜ ಶ್ರೀರಾಮ ಕುಳ್ಳಿರಲೂ 




ರಾಜೀವಾಂಬಕಿ ಸೀತೆಯಡದೊಪ್ಪಿರಲೂ

ರಾಜವದನೆಯರು ಹರಿವಾಣದಲ್ಲಿ ರಾಜೀಸುವಾರತಿಯ ಬೆಳಗೀರೆ ಶೋಭಾನೆ

ಕನಕ ಕುಂಡಲ ಕುಂಡಲಾ ಲಂಕೃತೆಗೆ ಕನಕಧರಣಾದಿ 

ಕಮಲ ನಯನನಿಗೆ ಕನಕದಾರಿತಿಯ ಬೆಳಗೀರೆ ಶೋಭಾನೆ

ಮುತ್ತಿನೋಲೆಯ ಹಾರ ಪಾದಕವಿಟ್ಟವಳೂ

ಮುತ್ತಿನ ಬೊಟ್ಟು ಮೂಗುತಿ ಇಟ್ಟವಳೂ

ಮುತ್ತಿನ ಕಡಗ ಮುಂಗೈಯೊಪ್ಪಿರಲೂ 

ಮುತ್ತೈದೆಯರು ರಘುತ್ತಮ ಸೀತೆಗೆ ಮುತ್ತಿನಾರತಿಯ 

ಬೆಳಗಿರೆ ಶೋಬಾನೇ


ದಶರಥರಾಯನ ಶಿಶುವೆನಿಸಿದಗೆ ದಶಶಿರನ ಕೊರಳನೂ ಕತ್ತರಿಸದವಗೆ
ಚತುರ್ದಶ ಭುವನವಾಳಿದಾತಗೆ ದಶ ವಿಧದಲಿ ಸೀತಾರಾಮನ
ಚರಣಕೆ ಕಳಸದಾರತಿಯಾ ಬೆಳಗೀರೆ ಶೋಭಾನೆ
ನಾರದ ವಂದ್ಯಗೆ ನಂದನ ಕಂದನಿಗೆ ನಾರಿ ದೌಪದಿ ದಕ್ಷಯನಿತವಗೆ
ನಾರದ ಮುಖ ಜಾಮಿಳನ ರಕ್ಷಿಸಿದವಗೆ
ನಾರಾಯಣ ನಮೋ ನಮೋ ಸ್ತುತಿಸಿದ
ನಾರಿಯರು ಆರತಿಯ ಬೆಳಗೀರೆ ಶೋಭಾ







Thursday, September 5, 2024

ಸೇಸೆ ಅಕ್ಕಿ ಹಾಕುವಾಗ ಸೋಬಾನೆ

 ಮೂಡಂದ ಬಂದಾವು ಮೂರು ಸಾವಿರ ಗಿಳಿಗಳು
 ಅವರ ಪುಕ್ಕನ್ನೆ-ನೋಡಿ ಹುಸಿನಗೆ ಆಡುವ 
 ರಾಯಗು ರಂಭೆಗು ಹಸೆ ಒಂದೇ- ರಾಯಗು
 ರಂಭೆಗೂ ಹಸೆ ಒಂದೆನಾದರೆ ಪದ್ಮಾ-ದ ಸೇಸೆ 
ತಳಿಯಾ-ಬನ್ನಿ|| ಸೋಬಾನವೇ।।

ಪಡುವಂದ ಬಂದಾವು ಆರು ಸಾವಿರ ಗಿಳಿಗಳು
 ಅವರ ರೆಕ್ಕೆನ್ನೆ ಹೂಯಿಸಿ ಹುಸಿ ನಗೆ ಆಡುವ 
ಅಕ್ಕಾಗು ಭಾವಗು ಹಸೆ ಒಂದೇ-ನಾದರೆ ಮುತ್ತೀನ
 ಸೇಸೆ ತಳಿಯ ಬನ್ನಿ||

ಹಣ್ಣು-ತಿನ್ನುವ ಗಿಳಿ ಹಾಲು ಕುಡಿಯುವಗಿಳಿ|
ಹಾಲೇರಿ ನಾಡಿಗೆ ಹೋದ ಗಿಳಿಗಳು ಜಿಲ್ಲೆಯ 
ಭಾಗಕ್ಕೆ ನಡೆದಾವು-II ಹಾಲು ಕುಡಿಯುವ 
ಗಿಳಿ ಹಣ್ಣು ತಿನ್ನು ಗಿಳಿ-ಹಾಲೇರಿ ಸೀಮೆಗೆ
ಹೋದ-ಗಿಳಿಗಳು ಕೊಪ್ಪಿನ ಭಾಗಕ್ಕೆ ನಡೆದಾವು

ಬಾಳೆ ಹಣ್ಣಿನ ಮೇಲೆ ದಾಯನಾಡುತ 
ಬಂದಾ-ದಾಯ ಕಾಣತ್ತೆ ನಿಮ್ಮಳಿಯಾ।
 ಮದು ಮಕ್ಕಳಿಬ್ಬರು ಕಿತ್ತಳೆ-ಹಣ್ಣಿನ-ಮೇಲೆ
ಚಂಡನಾಡುತ ಬಂದಾ-ಚಂದ್ರ 
ಕಾಣತ್ತೆ-ನಿಮ್ಮಳಿಯಾ॥ ನಿಂಬೆ ಹಣ್ಣಿನ ಮೇಲೆ
 ಸರಸವಾಡುತ ಬಂದಾ-ಚಂದ್ರ ಕಾಣತ್ತ 
ನಿಮ್ಮಳಿಯಾ|| ಸೋಬಾನವೇ।

ದಾಯ-ದಾಯವ ತನ್ನಿ। ದಾಯಾ-ದೋಲೆಯ ತನ್ನಿ
 ಭಾವ-ತಂಗೀನ ಕರೆತನ್ನಿ||
ದೊಡ್ಡ-ಬಟ್ಟಲಲ್ಲಿ ದೊಡ್ಡಕ್ಕಿ ತಂದಿರಿಸಿ। 
ರಾಯಾಗು ರಂಭೆಗು ಕೈಯಿರಿಸಿ ವಜ್ರ-ದುಂಗುರಾ-ಗಿಲಿರೆಂದೂ

ಮಾವನವರ ಮನೇಲಿ ಮುತ್ತೀನ ದಾರಂದ-ಮುಟ್ಟಿ
 ಹೋದರೆ ಮಗಳನ್ನು-
ಕೊಡಲಾರೆ ಮದುವಣ್ಣಾ॥ ಸೋಬಾನವೇ|| 
ಮುಟ್ಟಿ ಹೋದರೆ ಮಗಳನ್ನು ಕೊಡದಿದ್ದರೆ ಬೇರೊಬ್ಬರ ಮಗಳನ್ನು
ಕೊಡ-ಬೇಕು||
ಬಾವನವರ ಮನೆಲಿ ಚಿನ್ನಾದ-ದಾರಂದ-ಮುಟ್ಟಾದೆ 
ಹೋಗು ಮದುವಣ್ಣಾ

ಉಪ್ಪರಿಗೆ ಒಳಗೆ ಹತ್ತಡಿಕೆ ಹೋಳೆಣ್ಣೆ 
ಮಾವನ ಕಂಡಲ್ಲಿ ಅತಿರಂಭ
ಮೂಡಣ ಜಗುಲಲ್ಲಿ ಮುತ್ತೈದೆನಾಡುವ ಗಿಳಿಗಳು-
ಪುರುಷನಾ ಕಂಡಲ್ಲಿ ಅತಿರಂಬೆ|| ಸೋಬಾನವೇ|

Tuesday, September 3, 2024

ಧಾರೆ ಎರೆವಾಗ ಹೇಳುವ ಸೋಬಾನೆ


ಜನಕರಾಯನ ಮಗಳು ಜಾನಕಿಯ ಮದುವೆಯೆಂದು! 
ದಶರಥನಲ್ಲಿಗೆ ತೆರಳಿ-ಬರಾ-ಹೇಳಿ||
ಮದುವೆಯ ಸುದ್ದಿಯ ಲಿಖಿಯವನೆ ಬರೆದು-ಕಳುಹಿದ
ಪಟ್ಟಣದ ಪುರಜನರು ವಿಸ್ತಾರದ ಬಂಧುಗಳು ರಾಯವಣ್ಣಯ್ಯನಾ
ಮದು-ವೇಗೆ-
ಆರು ಜೋಡಿನ ಕೊಳಲು ಮೂರು ಜೋಡಿನ ವಾದ್ಯಗಳು 
ರಾಯವಣ್ಣಯ್ಯನಾ ಮದು-ವೇಗೆ-||
ಸೂರ್ಯ ಮಂಡಲದ ಕೊಡೆಯು ಹೊಳೆಯುವಂತೆಯುಳ್ಳ-ಬಂಡಿಯ 
ಮೇಲೇರಿ| ಹೆಬ್ಬಾಗಿಲ ಮುಂದೆ ಗುಬ್ಬಿ ಓಲೆಯಾ-ಬರೆದು 
ಜೋಜೋಂತ ಹಾರಾಡುತ ಬರುತದೆ ನಮ ದಿಬ್ಬಣ ಚಂದದಲಿ
ನೀನು ಇರು ಗೊಂಬೆ

ಚಪ್ಪರದ ಮುಂದುಗಡೆ ಗುಬ್ಬಿ ಓಲೆಯಾ-ಬರೆದಿರುಸಿ
ಜೋಜೋಂತಾ ಹಾರಾಡುತ ಬರುತದೆ ನಮ್ಮ ದಿಬ್ಬಣ-ಚಂದದಲಿ 
ನೀನು ಇರುಗೊಂಬೆ|

ಚಿಕ್ಕ-ಚಿಕ್ಕ-ಕೈಯಲ್ಲಿ-ಚಿಕ್ಕ ವರಹವನಿರಿಸಿ ಚಿಕ್ಕ ಶ್ರೀ ತುಳಸೀ 
ಬಳಲೂಡಿ-ಮಾವಯ್ಯಾ ಸೊಸೆ ಮುದ್ದಿಗೆ ಧಾರೆ ಎರೆಯಾ ಬನ್ನಿ!
ಸಣ್ಣಾ ಸಣ್ಣಾ ಕೈಯಲ್ಲಿ-ಸಣ್ಣ ವರಹವನಿರಿಸಿ ಸಣ್ಣ ಶ್ರೀ ತುಳಸಿ 
ದಳಲೂಡಿ ಅಪ್ಪಯ್ಯ ಮಗಳಿಗೆ-ಧಾರೆ ಎರೆಯಾ-ಬನ್ನಿ||
ಸಣ್ಣಾ ಸಣ್ಣಾ ಕೈಯಲ್ಲಿ-ಸಣ್ಣ ವರಹವನಿರಿಸಿ ಸಣ್ಣ ಶ್ರೀ ತುಳಸಿ 
ದಳಲೂಡಿ ಅಣ್ಣಯ್ಯ-ಧಾರೆ ಎರೆಯುವಾಗ-ಅಣ್ಣಯ್ಯನ 
ಅತ್ರಾವು ನಡುಗಿದೋ-ತಂಗ್ಯಮ್ಮನ-ಕಣ್ಣಾ ಜಲಕಂಡು|| 
ಮೂಗುತಿ ಇಟ್ಟೋನು ಬಿಡೋನಲ್ಲಾ-ಇನ್ನೇನು ತಂಗ್ಯಮ್ಮ
ನಿಮ್ಮೂರಿಗೋಗನಾ||

ತಾಳಿ ಕಟ್ಟಿದವನು ಬಿಡೋನಲ್ಲಾ-ಇನ್ನೇನು ಏಳೀ-ಪರದೇಶಕ್ಕೆ-1
 ಆರು ಜೋಡಿನ ಕೊಳಲು-ಮೂರು ಜೋಡಿನ
 ವಾದ್ಯಗಳೊಂದಿಗೆ-ಏಳೀ-ಪರದೇಶ-ಕೆ||

ಹಾಲು ತುಪ್ಪ ಕುಡಿಸುವ ಸೋಬಾನೆ ಹಾಡುಗಳು-3

 ಚೆಲ್ಲೀರೆ ಮಲ್ಲಿಗೆಯಾ-ನೀವೆಲ್ಲರೂ ಸೇರಿ ಚೆಲ್ಲಿ-ರೆ-ಮಲ್ಲಿಗೆಯ 
ಮದುಮಕ್ಕಳ ತುಂಬಾ ಚೆಲ್ಲಿರೆ ಮಲ್ಲಿಗೆಯಾ॥
ವಲ್ಲಾಕ್ಷಿಯರೆಲ್ಲರೂ ಸೇರಿ-ಉಲ್ಲಾಸನ ಮೇಲೆ ಚೆಲ್ಲಿ-ರೆ ಮಲ್ಲಿಗೆಯ
 ಕಡಗ ಕಂಕಣದಿಂದ ಬಂದಾ- ಉಡುಪಿ ಕೃಷ್ಣನಾ-ಮೇಲೆ ಚೆಲ್ಲಿರೆ
 ಮಲ್ಲಿಗೆಯಾ||
ಗಂಧ ಪರಿಮಳದಿಂದ ತುಂಬಿದ ಸುಂದರ ಬಾಲಯ್ಯನ 
ಮೇಲೆ ಚೆಲ್ಲಿರೆ ಮಲ್ಲಿಗೆಯಾ। ನೀವೆಲ್ಲರೂ ಸೇರಿ ಚೆಲ್ಲಿ-ರೆ 
ಮಲ್ಲಿಗೆಯಾ|

ಹಾಲು ತುಪ್ಪ ಕುಡಿಸುವ ಸೋಬಾನೆ ಹಾಡುಗಳು-2

 ಹಾಲಾ-ಕೊ-ಡಮ್ಮಾ| ಬಾಲಾ-ಕೃಷ್ಣಗೆ ಬೇಗಾ। ತಂದು
 ಕೊ-ಡಮ್ಮಾ ಮುದ್ದುರಂಗಗೆ ಬೇಗಾ|ಹಾಲಾ ಕುಡಿದನೆ ರಂಗಾ। 
 ಹೇಳ-ಬಾರದೆ ಗೋಪೀ-॥

ಮೂರಡಿ ಭೂಮಿಯ ಬೇಡಿ ನಿಂದ-ನೆ ಕೃಷ್ಣಾ-1 ಹಾಲಾ 
ಕೊ-ಡಮ್ಮಾ-ಮುದ್ದು ರಂಗಗೆ ಬೇಗಾ-1
ಐದಡಿ ಭೂಮಿಯ ಬೇಡಿ-ನಿಂದ-ನೆ ಕೃಷ್ಣಾ-1 
ಹಾಲಾ ಕೊ-ಡಮ್ಮ| ಬಾಲಾ-ಕೃಷ್ಣಗೆ ಬೇಗಾ। ತಂದು 
ಕೊ-ಡಮ್ಮ ಮುದ್ದು ರಂಗಗೆ ಬೇಗಾ-11


Sunday, September 1, 2024

ಹಾಲು ತುಪ್ಪ ಕುಡಿಸುವ ಸೋಬಾನೆ ಹಾಡುಗಳು-1

ಗುರು ಗಣಪತಿಗಾಗಿ ನಮಿಸಿ ಶಾರದೆಯ ಕರುಣಾಜನಾಭವ 
ಮಾಡುವೆ ಗೊತ್ತಾಗಿ ಹರುಷದಿ ಸತಿಯವರು ಸಮೇತದಲಿ 
ಕೌಶಲ್ಯ ಸುತೆಯವರು ವರವಾ ರಚಿಸಿದರು 

ಕ್ಷೀರ ಸಮುದ್ರದೊಳಗಿರುವ ಬಾಲೆಯರುಗಾರುಣಿಯೊಳಗು 
ಅತಿ ಚೆಲುವೆಯರು ರಾಯರಿಗೂ ಮಹಾಲಕ್ಷ್ಮಿಗೂ ಹಸ್ತದಿ
 ಹಾಲು ತುಪ್ಪಾ ಎರೆದಾರು

ಮುತ್ತಿನದನ್ನೆಯರು ರಚಿಸಿದರಂದು! ನಿಸ್ತೆಯವರೆಲ್ಲರೂ ಸೇರಿ
ಎದ್ದು ಬಂದು ಸತ್ಯಲೋಕದ ಸ್ತ್ರೀಯರು ಬರಲಾಗ
 ಅಚ್ಯುತ ಸ್ವಾಮಿಗೂ-ನಿಸ್ತ್ರೆ-ಮಹಾಲಕ್ಷ್ಮಿಗೂ ಹಸ್ತದಿ
 ಹಾಲು ತುಪ್ಪಾ-ಎರೆದಾರು

ಮಡದಿಯರೆಲ್ಲರೂ ಸೇರಿ ಸಡಗರದಿಂದಲಿ ಕಡಗವನ್ನಿಟ್ಟಿದ್ದ 
ಕೈಗಳ ಚಂದದಿ ಬಡನಡು ಬಳುಕು
ಬಿಡಿಸಿದರಂದು ಉಡುಪಿ ಶ್ರೀಕೃಷ್ಣಗು-ಮಡದಿ ಮಹಾಲಕ್ಷ್ಮಿಗೂ ಮಡದಿಯರು 
ಹಾಲುತುಪ್ಪಾ-ಎರೆದಾರು॥

ಮುತ್ತಿನ ಉರುಳಿಯ ತಂದಿರುಸಿ|ನವರತ್ನದ ಸೇವಂಟುಗಳಾ 
ಹಿಡಿ ಎನ್ನುತಾ-ತೊಡಿಗೆಯ ತಿನ್ನುತಾ-ಪ್ರಾಜ್ವಲವು ಸರಸನ್ನ
 ಮೂರುತಿ-ರಾಮಂಗೂ-ಸೀತೆಗೂ ಬಾಲೆಯರು 
ಹಾಲುತುಪ್ಪಾ-ಎರೆದಾರು॥

ಚಿನ್ನದ ಮಣೆಗಳ ತಂದಿರುಸಿ। ನಿಸ್ತೇವರು ಮಗನಾ 
ಕುಳ್ಳಿರಿಸಿ ಮುತ್ತಿನ ಜನ್ನೆಯರ ರಚಿಸಿದಾಗ ಕನ್ಯಾ 
 ಮಹಾಲಕ್ಷ್ಮಿಗೂ ನಾರಾಯಣ ಕೃಷ್ಣಗೂ ಪ್ರೇಮದಿಂದಲಿ
 ಹಾಲು ತುಪ್ಪಾ-ಎರೆದಾರು|


Saturday, August 31, 2024

ಆರತಿ ಹಾಡುಗಳು-2

 4. ಶ್ರೀ ತುಳಸಿ ಮಧ್ಯದೊಳಗಿರುವ ಕೃಷ್ಣ 
    ನಾ-ಬಳಸಿ ನೋಡುವ ಬನ್ನಿರೇ-1 
   ಮಂಗಳಾರತಿ ತಂದಿ ಬೆಳಗಿರೆ ರಂಗನಾಥನ ಪ್ರಿಯೆಗೆ! 
   ಸ್ವಾಮೀ ರಂಗನಾಥನ ಪ್ರಿಯೆಗೆ॥ 
   ಕಡಲಸುತ ಪಿಡಿದು ಬಲು ಬೆಡಗಿನಿಂದಲೆ ಬಂದಿರೆ! 
   ಸ್ವಾಮೀ ಬಲು ಬೆಡಗಿನಿಂದಲೇ ಬಂದಿರೆ|| ಮಂಗಳಾರತಿ॥ 
   ಬಿಲ್ಲ ಹಬ್ಬಕೆ ಅಲ್ಲಿ ಪೋಗಿ ಮಾವ ಕಂಸನಾ ಕೊಂದನಾ।
   ಹಾಸು ಮಂಚವ ಲೇಸು ತಲೆದಿಂಬು| 
   ಅಕ್ಕಿ ಹಸಿಗೆ ಹಾಸಲೇ॥ ||ಮಂಗಳಾರತಿ॥

5.ಮಂಗಳಾರತಿ ಎತ್ತು ಬೆಳಗುವೆ! 
   ರಂಗ ರುಕ್ಕಿಣಿ ದೇವಿಗೆ ಮಂಗಳಾಂಗಿಯರೊಡನೆ ಕೂಡಿ ಕ್ರಿಯೆಯಾಡಿದ ದೇವಗೆ 
   ಮರುಪಿನೊಳು ಕಾಳಿಂಗನ ಹೆಡೆ ಪಿಡಿದು ಸೆಳೆದಾ ಸ್ವಾಮಿಗೆ 
   ಒಡನೆ ಬೇಡಿದ ಅಕ್ಯ ಪಾತ್ರೆ|ಸಲಹಿದ ಸ್ವಾಮಿಗೆ ಮಂಗಳಾರತಿ ಎತ್ತಿ ಬೆಳಗುವೆ॥
  ಬಾಯೊಳು ಬ್ರಹ್ಮಾಂಡ ಬೀರಿದ ಮಾಯಗಾರ ಕೃಷ್ಣಗೆ 
  ರಾಮ ಪಾರ್ವತಿಗೆ ದೇವತೆಯಾದ ದೇವತೆಯ ಪುತ್ರಗೆ| 
  ನಂದಗೋಕುಲದೊಳು ಬೃಂದಾವನದೊಳು ಆಡುತ್ತಿರುವ ಕೃಷ್ಣಗೆ
  ಇಂದು ಬೇಡಿದ ವರಗಳನ್ನೆಲ್ಲಾ ಕೊಟ್ಟುರಕ್ಷಿಪ ದೇವಗೆ 
  ಎತ್ತಿ ಬೆಳಗಿರೆ ರಂಗ ರುಕ್ಕಿಣಿ ದೇವಿಗೆ||

6.ರಾಜಾಧಿರಾಜ ಪಾಂಡವರಿಗೆ ತೇಜದಿ ಬೆಳಗುವ ಧರ್ಮದ ರೂಪಗೆ
   ಮೂಜಗದೊಳು ಕೃತಿಕ ಲೋಪಗೆ
   ರಾಜವದನೆಯರು ಐಗೋವದಿಂದಲಿ ರಚಿಸಿದರಾರತಿಯಾ ಬೆಳಗೀರೆ....!!
   ಐವರು ಸತಿಯವರು ತೋಳು ಮುತ್ತಿನ ಸೈರವಗೆ ಮೈದೊಳೆದಿಟ್ಟು!
   ದೀವಿಗೆ ಬೆಳಕಿನಲಿ ಕುಶಲದಾರತಿಯಾ ಬೆಳಾಗಿರೆ....!
   ಸೀರೆ ಸೀರೆಯ ಸೆಳೆದು| ಜಾಯ ಮುತ್ತಿನ ಸೇಸೆಯ ತಳೆದು ಕಾಲಮದಿಗೆ ಗೆಜ್ಜೆಯ ಗಲಿ ಗಲಿ| 
   ಎಂದೆನಿಸುತ್ತಾ ಮೇಲಾಗ್ರದಲಿ ಪಾಡುತ ಕಮಲದಾರತಿಯಾ ಬೆಳಾಗಿರೇ....|

ಆರತಿ ಹಾಡುಗಳು-1

 1. ಮಂಗಳಾರತಿ ಎತ್ತಿದರು ರಂಗೆಯರು ರಂಗನಾಥನಿಗೆ
    ಸಂಭ್ರಮದಿಂದಲಿ| ಮೂರು ಲೋಕವನು ಒಲಿದು ಪಾಲಿಸುವವಗೆ 
   ನೀಲಮೇಘ ಶ್ಯಾಮಗೆ ಕರುಣಪಾಲ ಕಮಲನಾಭನಿಗೆ
   ಸುರಚಿರ ಗಂಭೀರ ಹರಿಗೆ ರಂಗನಾಥನಿಗೆ 
   ಮಂಗಳಾರತಿ ಎತ್ತಿದರು ನಾರಿಯರು||

2.ನೀರಜಭವೆಗೆ ಆರತಿಯ ಸೇರಿ ಬೆಳಗೀರೆ!
 ಕ್ಷೀರವಾರಿಧಿ ಸುತೆಗೆ ಸಾರಸಾಕ್ಷಿಗೆ 
ನಾರದಾದಿ ಮುನಿಗಳಿಗೆ ಮಾರಜನಕನ ರಾಣಿಗೆ ಉರಗವೇಣಿ!
 ಮಧುರವಾಣಿಗೆ ಅಂಗಜಾತೆ ಜನನಿಗೆ ವರಭಂಗ 
ಕುಂತಳಿಗೆ ನಿತ್ಯ ಮಂಗಳಾಂಗಿಗೆ 
ಆರತಿಯ ಸೇರಿ ಬೆಳಗಿದರು ನಾರಿಯರು||

3. ಆಲದೆಲೆಯ ಮೇಲೆ ಲೋಲನಾಡುತ ಬಂದಾ| 
ಲೋಲಾಕ್ಷನು ಪತಿಯಾಗಬೇಕೆಂದು ಎತ್ತಿದಳಾರತಿಯಾ
 ಶ್ರೀ ಶಿವನಿಗೆ ಶ್ರೀ ಸತ್ಯಭಾಮೆಯು ಬೆಳಗಿದಳಾರತಿಯಾ
ಮಾವ ಕಂಸನ ಕೊಂದಾ-ಶ್ರೀ ಕೃಷ್ಣ ಪತಿಯಾಗಬೇಕೆಂದು ಎತ್ತಿದಳಾರತಿಯಾ 
ಶ್ರೀ ಶಿವನಿಗೆ ಬೆಳಗಿದ ಳಾರತಿಯಾ॥ 
ಸುರರೆಲ್ಲಾ ಕೂಡಿ ಸಂಗೀತವ ಹಾಡಿ ಸಂಗಳ ಶಿವನಿಗೆ! ಎತ್ತಿದ ರಾರತಿಯಾ॥
 ಮುತ್ತೈದೆಯರೆಲ್ಲರು ಸೇರಿ ಮುತ್ತಿನ ಆರತಿಯ
ಮುತ್ತಾಕ್ಷಿ ಶಿವನಿಗೆ ಪತಿಯಾಗಬೇಕೆಂದು ಎತ್ತಿದರಾರತಿಯಾ




Friday, August 30, 2024

ಗೋಡೆಯಲ್ಲಿ ಹಸೆ ಬರೆಯುವಾಗ ಶೋಭಾನೆಗಳು

ಅಪ್ಪಾ-ಮಕ್ಕಳು ಕೂಡಿ| ತುಪ್ಪಾ ಬೋನವನುಂಡು..!
ಉಕ್ಕಿನುಳಿಬಾಜು ಹೆಗಲೇರಿ॥ 
ಹೊರಟಾರು ಒಳೊಳ್ಳೆ ಮರ ಕಡಿವಾ ಕೆಲ-ಸಕ್ಕೆ|| 
ಅಣ್ಣಾ ತಮ್ಮಂದಿರು ಕೂಡಿ। ಹಾಲು ಬೋನವನುಂಡು| 
ಚಿನ್ನಾದುಳಿಬಾಜು ಹೆಗಲೇರಿ ಹೊರಟಾರು! 
ಒಳೊಳ್ಳೆ ಮಣೆ ಕಡಿವಾ ಕೆಲ-ಸಕ್ಕೆ|| 
ಆಲದ ಮಣೆಗೇಳೀ-ಆರೇಳು ದಿನವಾದೊ
1 ಆಲದ ಮಣೆ ಯಾಕೆ ಬರಲಿಲ್ಲಾ? 
ಬೆಡಗಿನ ಮಣೆಯು ಊರಿಗೆ ಬಿಟ್ಟ ಹೋರಿನ ಹೊಡ-ಕೊಡೀ-|| 
ಊರಿಗೆ ಬಿಟ್ಟ-ಹೋರಿನ ನಾವೇಗೆ ಹೊಡಕೊಡಲೊ? 
ಜಾಮದಲೆದ್ದು ಕೆಲ-ಸಕ್ಕೆ ಹೊರಟಾಗ ಊರಿನ-ತುಂಬಾ ಬೆಳಕಾಯ್ತು|| 
ಹಲಸಿನ ಮಣೆಗೇಳಿ ಹತ್ತೆಂಟು ದಿನವಾದೋಹಲಸಿನ ಮಣೆಯಾಕೆ ಬರ-ಲಿಲ್ಲಾ? 
ಬೆಡಗಿನ ಮಣೆಯು ಊರಿಗೆ ಬಿಟ್ಟೆಮೈನ ಹೊಡ-ಕೊಡೀ॥ 
ಊರಿಗೆ ಬಿಟ್ಟೆಮ್ಮನ ನಾವೇಗೆ ಹೊಡಕೊಡಲೊ? 
ಜಾಮದಲೆದ್ದು... ಮಲ್ಲಿಗೆ ಮುಡಿವಾಗ ಬೆಳ-ಗಾದೋ।। 
ಹಸೆ ಬರೆವಾ-ಜಗುಲಲ್ಲಿ! ಏನುಂಟು ಏನಿಲ್ಲ... ಆ... ಹಣ್ಣಡಿಕೆ ಸಿಪ್ಪೆ ಮೊದಲಿಲ್ಲಾ| 
ಹಣ್ಣಡಿಕೆ ಸಿಪ್ಪೆ ಮೊದಲಿಲ್ಲದ ಕೋಣೆಯಲೀ ಹೆಸೆ ಬರೆವಾ ಕೋಣೆ ಬಲೂ-ಇಂಬು|| 
ಹಸೆ ಬರೆವಾ ಜಗುಲಲ್ಲಿ ಏನುಂಟು ಏನಿಲ್ಲಾ- ಆ... ಯಾಲಕ್ಕಿ ಸಿಪ್ಪೆ ಮೊದಲಿಲ್ಲಾ। 
ಯಾಲಕ್ಕಿ ಸಿಪ್ಪೆ ಮೊದಲಿಲ್ಲದ ಜಗಿಲಲ್ಲೀ ಹಸೆ ಬರೆವಾ ಜಗುಲಿ ಬಲೂ-ಇಂಬು|| 
ಹಸೆಯಾ ಮೇಲೆರಡು ಕಳಸವಾ ತಂದಿಡಿರಿ| 
ಮಗಳಿಗು ಮಹಾದೇವಂಗು ಕುಂಡಲದಾ ಬಣ್ಣಾ ಬರೀರಣ್ಣಾ
 ಹಸೆಯಾ ಬರೆಯಲಿಕೆ ಋಷಿಗಳು ನಾವು ಬಂದೇವು ಚಂದಾಗಿ ಬರೆಯಿರಿ ಚೌಕವಾ|| 
ಹಸೆಯಾ ಬರೆಯಲಿಕೆ ಇನ್ಯಾರು ಬರಬೇಕು? 
ತಾಯಿ ಸೋದರದ ಹಿರಿಭಾವ ತಾಯಿ
ಸೋದರದ ಹಿರಿಭಾವ ಬರಬೇಕೆಂದು ಚಂದಾಗಿ ಬರೆಯಿರಿ ಚೌಕವಾ||
ಸೂರದೇವರ ಅಕ್ಕ ಬರುತ್ತಾಳೆಂದು ಚಂದಾಗಿ ಬರೆಯಿರಿ ಚೌಕವಾ||
 ಚಂದ್ರದೇವರ ತಂಗಿ ಬರುತಾಳೆಂದು ಚಂದಾಗಿ ಬರೆಯಿರಿ-ಚೌಕಾಗಿ|

ಆ ಬಣ್ಣಾ... ಬರಿರಣ್ಣಾ ಈ ಬಣ್ಣಾ... ಬರಿರಣ್ಣಾ ಸೂರ್ಯದೇವರ ಬಣ್ಣಾ....ಬರೀರಣ್ಣಾ||
ಆ ಬಣ್ಣಾ... ಬರಿರಣ್ಣಾ... ಈ ಬಾ... ಬರಿರಣ್ಣಾ ಚಂದ್ರದೇವರ ಬಣ್ಣಾ ಬರೀರಣ್ಣಾ||
ಆ ಬಣ್ಣ ಬರೀರಣ್ಣಾ- ಈ ಬಣ್ಣಾ... ಬರಿರಣ್ಣಾ ಗಿಳಿರಾಮರ ಬಣ್ಣಾ ಬರೀರಣ್ಣಾ||
ಮಾವನವರ ಮನೇಲಿ ಬಾವ ಮಕ್ಕಳು ಹೆಚ್ಚು! ಹಸೆನೋಡಿ -ನಿಮ್ಮ-ಜರೆದಾರು| 
ಹಸೆ ಬರೆದವರಿಗೆ ಏನೇನು ಉಂಬಳಿ?-ಸಣ್ಣಕ್ಕಿ ನಯಲು
ಸಮಾ ಉಂಬಳಿ....
ಹಸೆ ಬರೆದವರಿಗೆ ಏನೆಲ್ಲಾ ಉಡುಗೊರೆ?-ಸಾಲು ಪಟ್ಟೆಗಳು ಸಮಾ-ಉಡಿಗೊರೆ....|
ಹಸೆ ಬರೆದವರಿಗೆ ಯಾವ್ಯಾವ ವೀಳ್ಯಗಳು- ತಟ್ಟೇಲಿ ವೀಳ್ಯವ ಮಡಗೀ

Thursday, August 29, 2024

ಗಂಗೆ ಪೂಜೆ ಶೋಭಾನೆಗಳು-2

 ಒಂದೆಲೆ ಒಂದಡಿಕೆ ಒಂದೊಂದು ಗಂಧದ ಬೊಟ್ಟು!
 ಗಂಗೆ ಗೌರಮ್ಮನಾ ಶಿವಪೂಜೆಗೆ! ಗಂಗೆ ಗೌರಮ್ಮರು 
ಶಿವಪೂಜೆ ಮಾಡುವಾಗ ಆಕಾಶದ ಘಂಟೆ ಘಣಿರೆಂದು ಕೇಳಲು 
ಗಂಧದಾ-ಹೊಗೆಯೂ ಘಮ-ಘಮಾ॥

ಎರಡೆಲೆ ಎರಡಡಿಕೆ! ಒಂದೊಂದು ಗಂಧದ ಬೊಟ್ಟು 
ಗಂಗೆ ಗೌರಮ್ಮನಾ ಶಿವಪೂಜೆಗೆ ಗಂಗೆ ಗೌರಮ್ಮನ 
ಶಿವಪೂಜೆ ಮಾಡುವಾಗ ಆಕಾಶದ ಘಂಟೆ ಫಣಿರೆಂದು ಕೇಳಲೂ। 
ಕರ್ಪೂರದ ಹೊಗೆಯೂ ಘಮ-ಘಮಾ

ಒಂದಚ್ಚು-ಬೆಲ್ಲಾ! ಒಂದು ತೆಂಗಿನ ಕಾಯಿ! ಎಳ್ಳು ಬಾಳೆ ಹಣ್ಣು 
ಗಂಗೆ ಗೌರಮ್ಮರಾ ಶಿವಪೂಜೆಗೆ ಗಂಗೆ ಗೌರಮ್ಮರು 
ಶಿವಪೂಜೆ ಮಾಡುವಾಗ-ಆಕಾಶದ ಘಂಟೆ ಘಣಿರೆಂದು ಕೇಳಲು 
ಸಾಂಬ್ರಾಣಿ ಹೊಗೆಯೂ ಘಮ-ಘಮಾ

Wednesday, August 28, 2024

ಗಂಗೆ ಪೂಜೆ ಶೋಭಾನೆಗಳು

 ಒಂದಲೆ ಒಂದಡಿಕೆ ಒಂದೊಂದು ಗಂಧದ ಬೊಟ್ಟು, 
ಗಂಗೆ ಗೌರಮ್ಮನ ಗುಂಭಕ್ಕೆ ಶಿವಪೂಜೆ ಶಿವಪೂಜೆ ಶಿವಗಿರಲಿ 
ಜೀವ ಪೂಜೆ ದೇವಗಿರಲಿ ಗಂಗಮ್ಮನ ಗುಂಭಕೇ-ದೇವ-ಪೂಜೆ। 
ಕಾಗೆ ಮುಟ್ಟದ ನೀರು! ಜೋಗಿ...ಸುಳಿಯದ ನೀರು! 
ಪಕ್ಷ ಪಾತಾಳದ ಪನ್ನೀರು (ಎರಡಲೆ, ಮೂರೆಲೆ, ನಾಲ್ಕೆಲೆ, ಐದೆಲೆ ಇಷ್ಟರ ತನಕ ಹೇಳುತ್ತಾ, ಗುಂಬಕ್ಕೆ ಸುತ್ತು ಬರುವುದು)
ಅಜ್ಜಯ್ಯ ಕಟ್ಟಿಸಿದ ಅಶ್ವಥದ ಕಟ್ಟೆಯುಂಟೆ ಅದಕೊಂದು ಸುತ್ತು ಬಾರೆ
 ಗಿರಿದೂರ ಮಠದೂರ ದೂರದಿಂದಲೆ ಸ್ವಾಮಿಯವರ 
ಪಾದಕೆ ಶರಣೆಂದೆನು|| ಸ್ವಾಮಿಯವರ ಪಾದಕೆ ಶರಣೆಂದೆನು 
ಅಪ್ಪಯ್ಯ ಕಟ್ಟಿಸಿ ಹಲಸಿನ ಕಟ್ಟೆಯುಂಟೆ ಅದಕೊದು ಸುತ್ತು ಬಾರೆ
 ಗಿರಿದೂರ ಮಠದೂರ ದೂರದಿಂದಲೆ ಸ್ವಾಮಿಯವರ
 ಪಾದಕೆ ಶರಣೆಂದೆನು ಸ್ವಾಮಿಯವರ ಪಾದಕೆ ಶರಣೆಂದೆನು!
 ಅಣ್ಣಯ್ಯ ಕಟ್ಟಿಸಿದ ತೆಂಗಿನ ಕಟ್ಟೆಯುಂಟೆ! ಅದಕೊಂದು ಸುತ್ತು ಬಾರೆ! 
ಬಾವಯ್ಯ ಕಟ್ಟಿಸಿದ ಬಾವಿಯ ಕಟ್ಟೆಯುಂಟೆ! ಅದಕೊಂದು ಸುತ್ತು ಬಾರೆ! 
ಗಿರಿದೂರ ಮಠದೂರ ದೂರದಿಂದಲೆ ಸ್ವಾಮಿಯವರ 
ಪಾದಕೆ ಶರಣೆಂದೆನು! ಸ್ವಾಮಿಯವರ ಪಾದಕೆ ಶರಣೆಂದೆನು|

Tuesday, August 27, 2024

ಆರತಿಯ ಶೋಭಾನೆಗಳು

 ಆರತಿಯ ಶೋಭಾನೆಗಳು

(ಆರತಿ ಎತ್ತುವಾಗ ಹೇಳುವ ಶೋಭಾನೆಗಳು)

ಚಪ್ಪರದಡಿ ಬರುವಾಗ ಅಥವಾ ಅಥಿತಿ ಸತ್ಕಾರ ಆದ ಮೇಲೆ ಹೇಳುವ ಶೋಬಾನೆಗಳು

ರಾಜಿಪ ಮಣಿಮಯ ರತ್ನ ಪೀಠದಲಿ ರಾಜಾಧಿರಾಜ ಶ್ರೀರಾಮ ಕುಳ್ಳಿರಲೂ 
ರಾಜೀವಾಂಬಕಿ ಸೀತೆಯಚದೊಪ್ಪಿರಲೂ
 ರಾಜವದನೆಯರು ಹರಿವಾಣದಲಿ ರಾಜೀಸುವಾರತಿಯ ಬೆಳಗೀರೆ ಶೋಭಾನೆ 
ಕನಕ ಮಂಡಲ ಕುಂಡಲಾ ಲಂಕೃತೆಗೆ ಕನಕಧರಣಾದಿ 
ಕಮಲನಯನನಿಗೆ ಕನಕದಾರತಿಯ ಬೆಳಗೀರೆ ಶೋಭಾನೆ 
ಮುತ್ತಿನೋಲೆಯ ಹಾರಪದಕವನ್ನಿಟ್ಟವಳೂ
 ಮುತ್ತಿನ ಬೊಟ್ಟು ಮೂಗುತಿ ಇಟ್ಟವಳೂ 
ಮುತ್ತಿನಾ ಕಡಗ ಮುಂಗೈಯೊಪ್ಪಿರಲೂ 
ಮುತ್ತೈದೆಯರೂ ರಥೋತ್ತಮ ಸೀತೆಗೆ ಮುತ್ತಿನಾರತಿ

ಬೆಳಗೀರೆ ಶೋಭಾನೆ.
ಆರತಿಯೆತ್ತರೆ ನಾರಿಯರೆಲ್ಲರೂ ಮಾರ ಸುಂದರಗೆ
ಸುರ ನಾರಿಯಲ್ಲೆರೂ ಹರುಷವ ತಾಳುತ ಕರುಣಾಕರನಿಗೆ 
ನೀರೊಳು ಮುಳುಗಿ ಭಾರವ ಪುತ್ತಿಹ ಧಾರಣಿಯಮತಂತೆ 
ಘೋರ ನರಸಿಂಹ ರೂಪವ ತಾಳಿದ ಬಾಲಕನನ್ನು ಪೊರೆದ
ಆರತಿ ಎತ್ತುವೆ ಬಾಲಕನಾಗಿ ಬಲಿಯದಾನವತೆಯ ಶಿರತದಿಂದ 
ಸೇತುವೆ ಬಂದಿಸಿ ಸೀತೆಯ ಕೂಡಿದ ಶ್ರಿ ರಘುರಾಮನಿಗೆ
 ಆರತಿ ಎತ್ತುವೆ ತ್ರಿಪುರ ಸತಿಯರ ವೃತವನ್ನೆ ಕೆಡಿಸಿ 
ಚಪಲನೆಂದೆನಿಸಿ ವಾಜಿನೇರಿ ರಾಜಿಪ ವೀರರಿಗೆ ರಾಜೀವ 
ನೇತ್ರತೆಯರು ಆರತಿ ಎತ್ತುವೆವು 
ಆರತಿಯೆತ್ತಿರೆ ವಾರಿಜಮುಖಿ ಸೀತಾದೇವಿಗೆ
 ಹದಿನಾಲ್ಕು ಲೋಕವಾಳುವ ಶ್ರೀರಾಮಚಂದ್ರಗೆ
 ಹರಡಿ ಕಂಕಣ ಕಮಲದೊರೆಸರಿಗೆ 
ಸರಗಳ ವಂಕಿಬಾಪುರಿ ತೊಟ್ಟ ಸೀರೆ 
ಖೈಠಣಿ ಕುಪ್ಪಸ ಗೋಡೆ ರಾಕಟ ಚಂದ್ರಕತ್ತಿಗೆ
 ಹದಳು ಭಮಗಾರ ದುಂಡು ಮಲ್ಲಿಗೆ ಸಂಪಿಗೆ ಸಂಪಿಗೆ 
ಅರಳು ಶೃಂಗಾರ ಭೋಮಿಯಾಳ್ವ ರಾಜದೊರೆ 
ರಾಮಚಂದ್ರಗೆ ಭೂಮಿದೇವಿ ಮಗಳು ಸೀತೆ ನಾರಿ ಜಾನಕಿ ಆರತಿ

ಸೋಬಾನೆ ಹಾಡುಗಳು-ಆರತಿಯ ಹಾಡುಗಳು

 ಬೆಳಗುವೆ ನಾ ಮಂಗಳಾದಾರತಿಯಾ ಬೆಳಗೂವೆನಾರತಿ
ಕಪಿವರ್ಯ ಮಾರುತಿ ಬಲವಂತ ಶ್ರೀರಾಮನದೂತನಿಗೆ
ಪೂರ್ಣಮಯ ಬೆಲಗಿನಲಿ ಪುಟ್ಟಿದಾಕ್ಷಣದಲ್ಲಿ
ಸೂರ್ಯನ ಪಿಡಿಯಲು ಮೋದವಗೆ ತ್ರೇತಾಯುಗದಲ್ಲಿ
ನೀ ಕಲಿತನ ತೋರುತ ಲೋಕ ಪ್ರಸಿದ್ದಿಯ ಪಡೆದವಗೆ 
ಶರಧಿಯ ದಾಟುತ ಧರಣಿಯ ನಗಳಿಗೆ ರಾಮ ಮುದ್ರಿಕೆಯನ್ನು
 ತೋರಿಸಿದೆ, ದಶಮುಖನೆದುರು ದಶಬಲ ತೋರುತ 
ಲಂಕೆಗೆ ಬೆಂಕಿಯನ್ನಿಟ್ಟವಗೆ ಕಷ್ಟವ ಸಹಿಸುತ
ರಾಮ ಸೇವೆಯ ಸಲಿಸಿದ ಗಾಂಗೇಯ ವರಪ್ರಭೂಗೆ
ಭಕುತರ ಇಷ್ಟಾರ್ಥವನ್ನೇ ನಿತ್ಯ ನೀಡುವ 
ಚಿರಂಜೀವಿಯಾಗಿರುವ ಹನುಮಂತನಿಗೆ ಆರತಿ.


Monday, August 26, 2024

ಸೋಬಾನೆ ಹಾಡುಗಳು - ಎಣ್ಣೆ ಅರಿಶಿನ ಆಗಿ ಸ್ನಾನ ಮಾಡಿ ಬರುವಾಗ ( (ವಧುವಿಗೆ)

 ಆರತಿಯೆತ್ತಿರೆ ವಾರಿಜಮುಖಿ ಸೀತಾದೇವಿಗೆ 
ಹದಿನಾಲ್ಕು ಲೋಕವಾಳುವ ಶ್ರೀರಾಮಚಂದ್ರಗೆ 
ಹರಡಿ ಕಂಕಣ ಕಮಲದೊರೆಸರಿಗೆ 
ಸರಗಳ ವಂಕಿಬಾಪುರಿ ತೊಟ್ಟ ಸೀರೆ 
ಪೈಠಣೀ ಕುಪ್ಪಸ ಗೊಂಡೆ ರಾಕಟ ಚಂದ್ರಕತ್ತಿಗೆ
 ಹದಳು ಭಮಗಾರ ದುಂಡುಮಲ್ಲಿಗೆ ಸಂಪಿಗೆ 
ಅರಳು ಶೃಂಗಾರ ಭೋಮಿಯಾಳುವಾ ರಾಜದೊರೆ
ರಾಮಚಂದ್ರಗೆ ಭೂಮಿದೇವಿ ಮಗಳ ಸೀತೆ ನಾರಿ ಜಾನಕಿ ಆರತಿ 

Saturday, August 24, 2024

ಸೋಬಾನೆ ಹಾಡುಗಳು - ಎಣ್ಣೆ ಅರಿಶಿನ ಆಗಿ ಸ್ನಾನ ಮಾಡಿ ಬರುವಾಗ (ವರನಿಗೆ)

 ಆರತಿಯೆತ್ತಿರೆ ನಾರಿಯರೆಲ್ಲರೂ ಮಾರಸುಂದರಗೆ
ಸುರ ನಾರಿಯರೆಲ್ಲರೂ ಹರುಷವ ತಾಳುತ ಕರುಣಾಕರನಿಗೆ
ನೀರೊಳು ಮುಳುಗಿ ಭಾರವ ಪುತ್ತಿಹ ಧಾರಣಿಯನ್ಮತಂತೆ
ಘೋರ ನರಸಿಂಹ ರೂಪವ ತಾಳಿದ ಬಾಲಕನನ್ನು ಪೊರೆವ
ಆರತಿ ಎತ್ತುವೆ ಬಾಲಕನಾಗಿ ಬಲಿಯದಾನವತೆಯ ಶಿರತದಿಂದ 
ಸೇತುವೆ ಬಂಧಿಸಿ ಸೀತೆಯ ಕೂಡಿದ ಶ್ರೀ ರಘುರಾಮನಿಗೆ
ಆರತಿ ಎತ್ತುವೆ ತ್ರಿಪುರ ಸತಿಯರ ವೃತವನ್ನೇ ಕೆಡಿಸಿ
ಚಪಲನೆಂದೆನಿಸಿ ವಾಜಿನೇರಿ ರಾಜಿಪ ವೀರರಿಗೆ ರಾಜೀವ
ನೇತ್ರತೆಯರು ಆರತಿ ಎತ್ತುವೆವು.


ಸೋಬಾನೆ ಹಾಡುಗಳು - ಅರಸಿನೆಣ್ಣೆ ಶೋಭಾನೆ

 ಜಯ ಜಯ ಲಕ್ಷ್ಮಿ ಪ್ರಿಯ 
ಎನ್ನರಸ ಘನ್ನರಸ ಎನ್ನ ಪ್ರಾಣದ ಅರಸಾ
ನಿಮ್ಮ ಮುಖವ ತನ್ನೀ ಅರಸಿನ ಹಚ್ಚುವೆನು 
ಉಣ್ಣದೆ ಮೆಲ್ಲನೆ ಪೋಗಿ ಕಣ್ಣಿಗೆ ಬೀಳದೆ ಕದ್ದು 
ಬೆಣ್ಣೆ ತಿನ್ನುವ ಮುಖಕ್ಕೆ ಅರಸಿನ ಹಚ್ಚುವೆನು 
ಅಂಜದೆ ಹೇಸಿಗೆಯಾದ ಕಂಜನಾಭನ ಶಬರೀ ಎಂಜಲ ಕೊಳ್ಳುವ ಕೈಗೆ
ಅರಸಿನ ಹಚ್ಚುವೆನು  ವಲ್ಲಭ ನೀನವನ ಕೈಲಿ ಕಲ್ಲಲಿ ತಾಡಿತವಾದ 
ಬಲ್ಲಿದ ನಿಮ್ಮಯ ಹಣೆಗೆ ಕುಂಕುಮ ಹಚ್ಚುವೆನು 

ಎದೆ ಮೇಲೊಬ್ಬಳು ಇರಲು ಹದಿನಾರು ಸಾವಿರದ ಸುದತಿಯರಪ್ಪಿದ
ಎದೆಗೆ ಪರಿಮಳ ಹಚ್ಚುವೆನು ಹಗಲೆಲ್ಲಾ ಗೋಪಿಯರ
ಹೆಗಲ ಮೇಲಿಟ್ಟಿರುವ ಸುಗುಣ ನಿಮ್ಮಯ ಕೈಗೆ ಗಂಧವ 
ಹಚ್ಚುವೆನು ಗಂಧ ಪರಿಮಳ ಮಾಲೆಯಿಂದಲಂಕರಿಸುತಲಿ ವಂದನೆಯ
ಮಾಡಿದಳು ಒಂದೇ ಮನಸಿನಲಿ ಇಂಥ ಮಾತುಗಳೆಲ್ಲಾ ಅಂತಕರಣದಿಂದ
ನುಡಿದೆ ಸ್ವಾಂತಕ್ಕೆ ತರಬೇಡ ನಂತಾಗಾಧಿಶನೇ ಅರಸಿನ ಹಚ್ಚುವೆನು.

Saturday, August 17, 2024

ಸೋಬಾನೆ ಹಾಡುಗಳು - ಹಸೆಗೆ ಕರೆಯುವ ಸೋಭಾನೆಗಳು

ಹಸೆಗೆ ಕರೆಯುವ ಸೋಭಾನೆಗಳು
ಬಾರೋ ಹಸೆಗೆ ಈಗ ಸುಂದರಾಂಗನೆ ಬೇಗ 
ಬಾರೋ ಹಸೆಗೆ ಈಗ ಬಾರೋ ಬಂಗಾರ 
ಮಂಟಪವಾ ಶೃಂಗಾರ ಮಾಡಿ ಸಂಗೀತವಾ 
ಮಾಡಿ ಶೃಂಗ ನಾಯಕಿಯರು ಬಾರೋ ಹಸೆಗೆ 
ಸುರ ಚರಭರಣಂಗಳೂ ಲಾಲಿಸು ದೇವಾ 
ಸುರಪುರ ಮಂದಿರ ಹಿರಿಯ ಹಸೆಗೆ ಬಾರೋ 
ಈಗ ಮುತ್ತೈದೆಯರು ಸುತ್ತುಮುತ್ತಲು ಕೂಡಿ 
ಮುತ್ತಿನಾರತಿ ಕೈಯಲೆತ್ತಿ ಕಾದಿರುವರು ಬಾರೋ 
ಹಸೆಗೆ ಈಗ ಸುಂದರಾಂಗನೆ

ಬಾರೋ ಹಸೆಗೆ ಜನಕ ಸುತೆಯ ಪ್ರೀತಿ
 ರಾಮನೆ ಬಾ ಹಸೆಗೆ ಜನಕಸುತೆಯ ಪ್ರೀತ 
ಮಂದಗಮನೆಯರು ಚಂದದಿ ಕರೆದರು
 ಇಂದಿರೇಶನ ನೀನು ಇಂದು ನೀ ಬಾ 
ವಾರಿಜವದನೆಯರು ಲೀಲೆಯಿದಂ ಕರೆವರು
ಸಾರಿ ಶೃಂಗಾರ ತೀರ್ಪ ಸಾರಸಾಕ್ಷನೆ ಬಾ ಬಾ 
ಕೆತ್ತಿದ ಪದಕವು ಚಿತ್ತದ ರಂಗಕಳೆಲ್ಲ ಧರಿಸಿ ಮೆರೆವ 
ನಮ್ಮ ವಿಠಲ ಬಾ ಬಾ ಹಸೆಗೆ ಜನಕ ಸುತೆ ಪ್ರೀತ 
ಸುಂದರಾಂಗ ಬಾರೋ ಹಸೆಗೆ ಇಂದಿರೇಶ ಬಾ 

Friday, August 16, 2024

ಗೌಡ ಸಂಸ್ಕೃತಿ- ಮದುವೆ ಕರಾರು ಪತ್ರ(ಮಾದರಿ ಲಗ್ನಪತ್ರಿಕೆ)

 ವೀಳ್ಯ ಶಾಸ್ತ್ರ ದಿನ ಎರಡು ಕಡೆಯವರು ಬರೆದು ರುಜು ಹಾಕಲಾದ ಪತ್ರ (ಇದನ್ನು ಲಗ್ನ ಪತ್ರಿಕೆ ವೀಳ್ಯದಲ್ಲಿ ಇಟ್ಟು ಉಭಯ ಕಡೆಯವರಿಗೆ ಕೊಡುವುದು).

                                                       (ಮಾದರಿ ಲಗ್ನಪತ್ರಿಕೆ)
                                                    ||ಶ್ರೀ ಕುಲದೇವತಾ ಪ್ರಸನ್ನ||

ಸನ್ ಎರಡು ಸಾವಿರದ........ಇಸವಿ.......ತಿಂಗಳು ........ತಾರೀಕು
..............ಜಿಲ್ಲಾ............ತಾಲೂಕು.............ಗ್ರಾಮದ ........ಮನೆ .........ರವರ ಅನುಮತಿ ಮೇರೆಗೆ.........
ಪುತ್ರಿ ಸೌಭಾಗ್ಯವತಿ...............ಎಂಬ ವಧುವನ್ನು.............ಜಿಲ್ಲಾ............ತಾಲೂಕು.............ಗ್ರಾಮದ ........ಮನೆ .........ರವರ ಅನುಮತಿ ಮೇರೆಗೆ.........ರವರ ಪುತ್ರ ಚಿರಂಜೀವಿ ..................ಎಂಬ ವರನಿಗೆ ಪಾಣಿಗ್ರಹಣ ಮಾಡಿ ಕೊಡುವುದಾಗಿ ಗುರುಹಿರಿಯರಿದ್ದು ನಿಶ್ಚಯಿಸಿರುತ್ತೇವೆ ಸದ್ರಿ ವಿವಾಹ ಕಾರ್ಯವನ್ನು ಇದೇ ತಿಂಗಳು.......ನೇ ತಾರೀಕು......................ವಾರ  ರಾತ್ರಿ/ಬೆಳಿಗ್ಗೆ.................ಸಮಯಕ್ಕೆ ಸರಿಯಾಗಿ ಸಲ್ಲುವ ಶುಭ..................ಲಗ್ನದಲ್ಲಿ  ಧಾರಾಕಾರ್ಯವನ್ನು ವಧುವಿನ ಮನೆಯಲ್ಲಿ/ಕಲ್ಯಾಣ ಮಂಟಪದಲ್ಲಿ ನೆರವೇರಿಸುವಂತೆಯೂ ಗೌಡ ಸಮಾಜದ ಪದ್ಧತಿಯಂತೆ ವಿವಾಹ ಕಾರ್ಯವನ್ನು ಉಭಯಸ್ಥರು ಕೂಡಿ ಸಾಂಗವಾಗಿ ನೆರವೇರಿಸಿಕೊಳ್ಳುವಂತೆ ಈ ಕೆಳಗೆ ಸಹಿ ಮಾಡಿದವರ ಸಮಕ್ಷಮ ಒಪ್ಪಿ ಬರೆದ ಲಗ್ನ ಪತ್ರಿಕೆಗೆ ಶುಭಮಸ್ತು.

ಗೃಹಸ್ಥರ ರುಜು                                                                           ಕುಟುಂಬಸ್ಥರ ರುಜು

1.                                                                                                 1.

2.                                                                                                 2.

3.                                                                                                 3.


ಬರೆದವರ ರುಜು   


3.

Thursday, May 9, 2024

ಗೌಡ ಸಂಸ್ಕೃತಿ- ಮದುವೆ

ಗೌಡ ಸಮುದಾಯದಲ್ಲಿ ಮದುವೆಯೆನ್ನುವುದು ಬಹುಮುಖ್ಯ ಘಟ್ಟ. ಕುಟುಂಬ/ವಂಶವಾಹಿನಿ ಬೆಳೆದು ಬರಲು 'ಮದುವೆ' ಎನ್ನುವ ನಿಯೋಜಿತ ವ್ಯವಸ್ಥೆ ನಡೆಯಲೇ ಬೇಕು ಎನ್ನುವ ಕಟ್ಟಳೆ ನಮ್ಮ ಹಿರಿಯರಿಂದ ನಿರ್ಮಿತವಾದುದಾಗಿದೆ. ಈ ಮದುವೆ ಎನ್ನುವ ವ್ಯವಸ್ಥೆ ಗೌಡರಲ್ಲಿ ಬಳಿ ನೋಡುವಲ್ಲಿಂದ ಆರಂಭವಾಗುತ್ತದೆ. ಮದುವೆಯಲ್ಲಿ ಹುಡುಗಿ ನೋಡುವ ಶಾಸ್ತ್ರ, ವೀಳ್ಯ ಶಾಸ್ತ್ರ, ಮದುವೆ ದಿನದ ಕ್ರಮಗಳಲ್ಲಿ ಹಾಗೆಯೇ ನಂತರದ ಕ್ರಮಗಳಲ್ಲಿ ಹಲವು ಕಟ್ಟಳೆಗಳಿರುತ್ತವೆ. ಗೌಡರಲ್ಲಿ 'ಬಳಿ' ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. 'ಬಳಿ' ಗೌಡರಲ್ಲಿ ಸ್ವಕುಟುಂಬಿಕ ನೆಲೆಯನ್ನು ಪ್ರತಿನಿಧಿಸುತ್ತದೆಯಾದ್ದರಿಂದ ಒಂದೇ 'ಬಳಿ'ಯಲ್ಲಿ 'ಮದುವೆ' ನಡೆಯಬಾರದೆನ್ನುವ ನಿಷೇಧವನ್ನು ಇಟ್ಟುಕೊಳ್ಳಲಾಗಿದೆ. ರಕ್ತ ಸಂಬಂಧಿಗಳಲ್ಲಿ ಮದುವೆ ನಡೆಯುವುದು ಯಾವ ದೃಷ್ಟಿಯಿಂದಲೂ ಯೋಗ್ಯವಲ್ಲ ಎನ್ನುವುದನ್ನು ನಮ್ಮ ಹಿರಿಯರು ಕಂಡುಕೊಂಡಿದ್ದಾರೆನ್ನುವುದನ್ನು ಇದು ಸೂಚಿಸುತ್ತದೆ. ಹೀಗಿದ್ದೂ ತಂದೆಯ ಸಹೋದರಿ ಅಥವಾ ತಾಯಿಯ ಸಹೋದರರ ಕಡೆ 'ಬಳಿ'ಗಳಲ್ಲಿ ಮದುವೆ ನಡೆಯಬಹುದು. ಗೌಡರಲ್ಲಿ ಇರುವ ವಿಭಿನ್ನ 'ಬಳಿ'ಗಳಲ್ಲಿ 'ಮದುವೆ' ನಡೆಯುವುದು ಸಂಪ್ರದಾಯ. ಜಾತಿ ಪದ್ಧತಿ ಪ್ರಕಾರ ಅಲ್ಲದೇ ವೈದಿಕ ಕ್ರಮಗಳಲ್ಲಿ ಕೂಡಾ ಮದುವೆ ನಡೆಸಬಹುದು.

ಹುಡುಗಿ ನೋಡುವ ಕ್ರಮ : ಹುಡುಗ/ಹುಡುಗಿ ಪ್ರಾಪ್ತ ವಯಸ್ಸಿಗೆ ಬಂದಾಗ ಹಿರಿಯರು ಅವರಿಗೆ ಮದುವೆ ಮಾಡಲು ಆಲೋಚಿಸುತ್ತಾರೆ. ನೆಂಟರಿಷ್ಟರಲ್ಲಿ ಗಂಡು-ಹೆಣ್ಣನ್ನು ಹುಡುಕಲು ಹಿರಿಯರು ಸೂಚಿಸುತ್ತಾರೆ. ಶಕ್ತ ಮನೆತನದ ಸೂಕ್ತ ಬಳಿಯ ಕನ್ಯ ಗೊತ್ತಾದ ನಂತರ ಹುಡುಗಿ ನೋಡುವ ಶಾಸ್ತ್ರಕ್ಕೆ ದಿನ ನಿಗದಿ ಮಾಡುತ್ತಾರೆ.

ಹಿಂದಿನ ಕಾಲದಲ್ಲಿ ಹುಡುಗಿ ನೋಡಲು ಹುಡುಗ ಹೋಗುವ ಕ್ರಮವಿರಲಿಲ್ಲ. ಇಂದು ಹುಡುಗನೇ ನೋಡಿದ ಹುಡುಗಿಯನ್ನು ನೋಡಲು ಹಿರಿಯರು ಹೋಗುವುದು ಬಂದುಬಿಟ್ಟಿದೆ. ಮೊದಲಿನಿಂದಲೂ ಹುಡುಗ ಹುಡುಗಿಯರನ್ನು ನಿಶ್ಚಯಿಸುವಲ್ಲಿ ಉಭಯ ಕಡೆಯ ಪರಿಚಯಸ್ಥರೊಬ್ಬರು ಮಧ್ಯವರ್ತಿಯಾಗಿ ಸಹಕರಿಸುತ್ತಿದ್ದರು.

ಹುಡುಗಿ ನೋಡುವ ಶಾಸ್ತ್ರ ನಿಗದಿಯಾದ ಶುಭದಿನ ಹೇಳಿಕೆಯಾದ ಪ್ರಕಾರ ಕುಟುಂಬದ ಮತ್ತು ಬಂಧುಗಳಲ್ಲಿ 5ರಿಂದ 7ಜನ ಹಿರಿಯರು ಪೂರ್ವಾಹ್ನದ ಹೊತ್ತಿಗೆ ಹುಡುಗಿ ಮನೆ ತಲುಪಲೇಬೇಕೆನ್ನುವ ಹಿನ್ನೆಲೆಯಲ್ಲಿ ತಲುಪುತ್ತಾರೆ. (ಅಪರಾಹ್ನ ಹುಡುಗಿ ನೋಡುವ ಶಾಸ್ತ್ರ ಮಾಡಬಾರದೆನ್ನುವ ನಂಬಿಕೆ ಇದೆ.) ಹುಡುಗಿ ನೋಡುವ ಶಾಸ್ತ್ರದ ದಿನ ಹುಡುಗಿ ಮನೆಯಲ್ಲೂ ಕುಟುಂಬದ ಹಿರಿಯ ಪ್ರಮುಖರು ಸೇರುತ್ತಾರೆ. ಹುಡುಗನ ಕಡೆಯವರು ಹುಡುಗಿ ಮನೆಗೆ ಬಂದಾಗ ಕೈಕಾಲು ತೊಳೆಯಲು ನೀರು ಕೊಡುವುದು ಪದ್ಧತಿ. ಬಂದ ನೆಂಟರನ್ನು ಮನೆ ಚಾವಡಿಯಲ್ಲಿ ಕುಳ್ಳಿರಿಸಿ ಬೆಲ್ಲ-ನೀರು ಕೊಟ್ಟು ಸತ್ಕರಿಸಬೇಕು. ಮುತ್ತೈದೆಯರಿಗೆ ನೆತ್ತಿಗೆಣ್ಣೆ, ಹಣೆಗೆ ಕುಂಕುಮ, ಮುಡಿಗೆ ಹೂವು ಕೊಡಬೇಕು. ಬಂದ ಹಿರಿಯರೊಬ್ಬರಿಗೆ ಹರಿವಾಣದಲ್ಲಿ ಕವಳೆ ವೀಳ್ಯದೊಂದಿಗೆ ಅಡಿಕೆಗಳನ್ನಿಟ್ಟು ಗೌರವಿಸುವುದು ನಡೆದು ಬಂದ ಸಂಗತಿ. ಉಪಾಹಾರವನ್ನಿತ್ತು ಬಂದ ಹುಡುಗನ ಕಡೆಯವರಿಗೆ ಸತ್ಕರಿಸುವುದು

ಪರಸ್ಪರ ಕುಶಲೋಪರಿ ಬಳಿಕ ಹುಡುಗಿ ನೋಡುವ ಕ್ರಮ ಜರಗುತ್ತದೆ. ಹುಡುಗನ ಕಡೆಯಿಂದ ಬಂದ ಸ್ತ್ರೀಯರು ಮನೆಯೊಳಗೆ ಹೋಗಿ ಹುಡುಗಿಯನ್ನು ನೋಡುತ್ತಾರೆ. ಹುಡುಗಿಯನ್ನು ಮಾತಾಡಿಸುತ್ತಾರೆ. ಇದರ ಹೊರತಾಗಿಯೂ ಬಂದ ನೆಂಟರಿಗೆ ಹುಡುಗಿಯೇ ಬಾಯಾರಿಕೆ ಕೊಡುವ ನೆಪದಲ್ಲಿ ಹುಡುಗಿಯನ್ನು ನೋಡುವ ಶಾಸ್ತ್ರ ಮಾಡುವುದುಂಟು. ಪುರುಷರು ಹುಡುಗಿಯನ್ನು ನೋಡಬೇಕೆನ್ನುವ ಹಿನ್ನೆಲೆಯಲ್ಲಿ ಜೊತೆಗೆ ಹುಡುಗಿಯಲ್ಲಿ ಏನಾದರೂ ಊನ ಇದೆಯಾ ಎಂದು ಪರೀಕ್ಷಿಸುವ ದ್ರಷ್ಟಿಯಲ್ಲಿ ಹುಡುಗಿಯ ಕೈಯಲ್ಲಿ ಕೊಡಪಾನ ಕೊಟ್ಟು ನೀರು ತರ ಹೇಳುವುದೂ ಇದೆ. ಹಾಗೆಯೇ ಮನೆ ನೋಡುವೆ ನೆಪದಲ್ಲಿ ಒಳ ಹೋಗಿ ಹುಡುಗಿಯನ್ನು ಮಾತಾಡಿಸುತ್ತಾರೆ.

ಹುಡುಗಿಯ ರೂಪ ಗುಣ ನಡತೆ ಒಪ್ಪಿಗೆಯಾದರೆ, ಸತ್ಕಾರ ಸ್ವೀಕರಿಸಿ ಹೊರಟು ಬರುವ ಹುಡುಗನ ಕಡೆಯವರು ಇನ್ನು ಜಾತಕ ಕೂಡಿ ಬಂದರೆ ಹೇಳಿ ಕಳುಹಿಸುತ್ತೇವೆಂದು ಹೇಳುವುದು ವಾಡಿಕೆ ಅಥವಾ ಉಭಯಸ್ಥರು ಪಕ್ಕದ ಜೋಯಿಸರಲ್ಲಿ ಹೋಗಿ ಹುಡುಗ- ಹುಡುಗಿಯ ಜಾತಕ ತೋರಿಸುವುದುಂಟು. ಜಾತಕ ಕೂಡಿ ಬಾರದೇ ಹೋದರೆ ನೆಂಟಸ್ಥಿಗೆಮುಂದುವರಿಯುವುದಿಲ್ಲ. ಹುಡುಗಿ ನೋಡುವ ಕ್ರಮದಲ್ಲಿ ಜಾತಕ ಇಲ್ಲದಿದ್ದರೆ ಇತ್ತಂಡಗಳು ದೇವಸ್ಥಾನದಲ್ಲಿ ಅರ್ಚಕರ ಮೂಲಕ ತುಂಬೆ ಹೂವಿನಲ್ಲಿ ಪುಷ್ಪ ಪರೀಕ್ಷೆ ನಡೆಸುತ್ತಾರೆ. ಹುಡುಗನ ಕಡೆಯವರಿಗೆ ಸಂಬಂಧ ಕೂಡಿ ಬಂದರೆ ಹುಡುಗಿ ಮನೆಯವರನ್ನು ಆಹ್ವಾನಿಸುತ್ತಾರೆ. ನಿಗದಿತ ದಿನ ಹುಡುಗನ ಮನೆಗೆ ಬರುವ ಹುಡುಗಿ ಕಡೆಯವರಿಗೆ ಸಮ್ಮಾನದೂಟ ಮಾಡಿಸಿ ಕಳುಹಿಸಿ ಕೊಡಲಾಗುತ್ತದೆ. ವೀಳ್ಯಶಾಸ್ತ್ರ ನಡೆಸುವ ದಿನವನ್ನು ಪರಸ್ಪರರು ಸಂವಾದಿಸಿ ಈ ದಿನ ನಿಗದಿಪಡಿಸುತ್ತಾರೆ.

ಸೋದರ ಮಾತನಾಡಿಸುವುದು:
ಗೊತ್ತುಪಡಿಸಿದ ದಿನದಂದು ಹುಡುಗಿಯ ಕಡೆಯಿಂದ ಅವಳ ತಂದೆ-ತಾಯಿಯರು ಮತ್ತು ಹುಡುಗನ ಕಡೆಯಿಂದ ಕನಿಷ್ಟ ಒಬ್ಬರು ಹುಡುಗಿ ಸಮೇತ ಸೋದರ ಮಾವನಲ್ಲಿಗೆ ಹೋಗಿ ನಾವು ಒಂದು ಶುಭಕಾರವನ್ನು ತೆಗೆಯುವವರಿದ್ದೇವೆ. ನಿಮ್ಮಗಳ ಒಪ್ಪಿಗೆ ಕೇಳಲು ಬಂದಿದ್ದೇವೆ ಅಂತ ಹೇಳುವರು. (ಪೂರ್ವ ಪದ್ಧತಿ ಪ್ರಕಾರ ಹುಡುಗಿ ಮನೆಯಿಂದ ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿ, ಒಂದು ಹೇಂಟೆ ಲಾಕಿ, ಮದ್ಯದ ಬಾಟಲಿ, ಒಂದು ಕುಡ್ತ ತೆಂಗಿನೆಣ್ಣೆ, ಸೂಡಿ ವೀಳ್ಯದೆಲೆ, ಐದು ಅಡಿಕೆಯೊಂದಿಗೆ ಸೋದರ ಮಾವನಲ್ಲಿಗೆ ಹೋಗುತ್ತಿದ್ದರು.) ತೆಗೆದುಕೊಂಡು ಹೋದ ಕೋಳಿಯನ್ನು ಅಡುಗೆ ಮಾಡಿ ರಾತ್ರಿ ಗುರು ಕಾರಣರಿಗೆ ಬಡಿಸಿ ಹಿರಿಯರ ಆಶೀರ್ವಾದ ಪಡೆಯುವುದು ರೂಢಿ. (ಪೂರ್ವ ಪದ್ಧತಿ ಪ್ರಕಾರ ಎಲ್ಲಾ ವಸ್ತುಗಳನ್ನು ಕೊಂಡು ಹೋಗುವುದು ಮಾಡದಿದ್ದರೆ ಈಗಿನ ಕಾಲ ಘಟ್ಟಕ್ಕೆ ಅನುಕೂಲವಾಗುವಂತೆ ಸೋದರ ಮಾವನಲ್ಲಿಯೇ ಸಮ್ಮಾನದ ಊಟ ಮಾಡಿ ಕಳುಹಿಸುವುದು ಮಾಡುವುದು.) ಹೀಗೆ ಸೋದರ ಮಾವನ ಒಪ್ಪಿಗೆ ಪಡೆದು ಮಾರನೇ ದಿನ ಬೆಳಿಗ್ಗೆ ವೀಳ್ಯಶಾಸ್ತ್ರಕ್ಕೆ ನಿಗದಿಪಡಿಸಿದ ದಿನದಂದು ಬರಬೇಕೆಂದು ಆಹ್ವಾನಿಸಿ ಹಿಂತಿರುಗುವುದು

ವೀಳ್ಯಶಾಸ್ತ್ರ (ವಧುವಿನ ಮನೆಯಲ್ಲಿ)

ಪರಿಕರಗಳು : ಕಾಲುದೀಪ,ಎಳ್ಳೆಣ್ಣೆ, ನೆಣೆಬತ್ತಿ, ಅಗರಬತ್ತಿ. ಚಾಪೆ 4, ಮಣೆ 2, ತಂಬಿಗೆ ನೀರು, ಹರಿವಾಣ 1, ವೀಳ್ಯದೆಲೆ 5, ಅಡಿಕೆ 1, ಹಿಡಿ ಬೆಳ್ಳಿಗೆ ಅಕ್ಕಿ, ತೇದ ಗಂಧ ಹಾಗೂ ತುಂಬೆ ಹೂ, ತುದಿ ಬಾಳೆಲ, ಉದ್ದಕ್ಕೆ ಒಡೆದ ಸ್ವಲ್ಪ ಅಡಿಕೆಹೋಳು

ಮದುವೆಗೆ ಸುಮಾರು ಒಂದು ವಾರ ಅಥವಾ ಹದಿನೈದು ದಿನಗಳ ಒಳಗೆ ವೀಳ್ಯಶಾಸ್ತ್ರವನ್ನು ಊರು ಗೌಡರ ಗಮನಕ್ಕೆ ತಂದು ನಿಶ್ಚಯ ಮಾಡಿಕೊಳ್ಳಬೇಕು. (ಅನಿವಾರ್ಯ ಕಾರಣಗಳಲ್ಲಿ ಮದರಂಗಿ ಶಾಸ್ತ್ರದ ದಿನ ವೀಳ್ಯಶಾಸ್ತ್ರ ಇಟ್ಟುಕೊಳ್ಳಬಹುದು. ವೀಳ್ಯಶಾಸ್ತ್ರವನ್ನು ಬೆಳಗಿನ ಸಮಯ ಮಾಡುವುದು ಸೂಕ್ತ)

ಉಭಯಸ್ತರು ನಿಶ್ಚಯಿಸಿದ ದಿನ ವಧುವಿನ ಮನೆಯಲ್ಲಿ ವೀಳ್ಯ ಶಾಸ್ತ್ರಕ್ಕೆ ಏರ್ಪಾಡು ಮಾಡಬೇಕು. ವಧುವಿನ ಮನೆಯವರು ಬಂಧು-ಬಾಂಧವರಿಗೆ, ಊರುಗೌಡರಿಗೆ 1 ಸೂಡಿ ವೀಳ್ಯದೆಲೆ, 5 ಅಡಿಕೆ ಹರಿವಾಣದಲ್ಲಿಟ್ಟು ವೀಳ್ಯಶಾಸ್ತ್ರಕ್ಕೆ ಕೇಳಿಕೊಳ್ಳಬೇಕು. ಅದರಂತೆ ವರನ ಕಡೆಯಿಂದಲೂ ಅವರ ಬಂಧು-ಬಾಂಧವರಿಗೆ, ಊರು ಗೌಡರಿಗೆ ವೀಳ್ಯ ಕೊಟ್ಟು ವೀಳ್ಯ ಶಾಸ್ತ್ರಕ್ಕೆ ಬರುವಂತೆ ಹೇಳಬೇಕು. (ವೀಳ್ಯಶಾಸ್ತ್ರಕ್ಕೆ ಹುಡುಗ ಹೋಗುವ ಕ್ರಮವಿರಲಿಲ್ಲ)

ವೀಳ್ಯಶಾಸ್ತ್ರದ ದಿನ ಸೋದರಮಾವ, ಊರು ಗೌಡರು, ಕುಟುಂಬಸ್ಥರು, ನೆಂಟರು ಇವರೆಲ್ಲ ಸಮಯಕ್ಕೆ ಮುಂಚಿತವಾಗಿ ಬಂದು ವರನ ಮನೆಯಲ್ಲಿ ಸೇರುತ್ತಾರೆ. ವೀಳ್ಯ ಕಟ್ಟಲು ಒಂದು ಕೈ ಚೀಲದಲ್ಲಿ ವೀಳ್ಯದೆಲೆ ಅದಕ್ಕೆ ನೀಟವಾಗಿ ಒಡೆದ ಅಡಕೆ ಹೋಳು, 2 ಹರಿವಾಣಗಳಿರಬೇಕು. ಹೊರಡುವ ಮೊದಲು ಮನೆಯ ಹಿರಿಯರು ದೇವರಿಗೆ ದೀಪ ಹಚ್ಚಿ ಕೈ ಮುಗಿದು ಮನೆಯಿಂದ ಹೊರಡಬೇಕು.

ವಧುವಿನ ಮನೆಯಲ್ಲಿ ಆಗಮಿಸಿದ ನೆಂಟರಿಗೆ ಕೈಕಾಲು ಮುಖ ತೊಳೆಯಲು ನೀರುಕೊಟ್ಟು ಸತ್ಕರಿಸುತ್ತಾರೆ. ನಂತರ ವೀಳ್ಯ ಶಾಸ್ತ್ರಕ್ಕೆ ತಯಾರಿ ಮಾಡುತ್ತಾರೆ. ವಧುವಿನ ಕಡೆಯ ಊರುಗೌಡರ ಉಸ್ತುವಾರಿಯಲ್ಲಿ ಚೌಕಿ ಹಾಸಿ (ಚೌಕಾಕಾರವಾಗಿ ನಾಲ್ಕು ದಿಕ್ಕಿನಿಂದ ನಾಲ್ಕು ಚಾಪೆ ಹಾಸುವುದು) ಮಧ್ಯೆ 2 ಮಣೆ, ತಂಬಿಗೆ ನೀರು, 1 ಹರಿವಾಣದಲ್ಲಿ 5 ವೀಳ್ಯದೆಲೆ 1 ಅಡಿಕೆ ಒಂದು ಹಿಡಿ ಬೆಳ್ತಿಗೆ ಅಕ್ಕಿ ಹಾಕಿಡಬೇಕು. ಕಾಲುದೀಪವನ್ನು ಪೂರ್ವಾಭಿಮುಖವಾಗಿ ಒಂದು ಹಿಡಿ ಬೆಳಗಿಸಬೇಕು. ತೇದ ಗಂಧ ಮತ್ತು ತುಂಬೆ ಹೂ ಕೊಡಿ (ತುದಿ) ಬಾಳೆ ಎಲೆಯಲ್ಲಿಡಬೇಕು. ಇದಾದ ನಂತರ ವಧುವಿನ ಮನೆಯ ಹಿರಿಯರು ಮತ್ತು ಊರುಗೌಡರು ತಂಬಿಗೆ ನೀರು ಹಿಡಿದು ವರನ ಕಡೆಯವರನ್ನು ಚೌಕಿಗೆ ಕುಳಿತುಕೊಳ್ಳಲು ಆಹ್ವಾನಿಸಿ ವಧುವಿನ ಕಡೆಯ ಊರು ಗೌಡರ ಸಮೇತ ಪೂರ್ವಾಭಿಮುಖವಾಗಿ ಕುಳಿತುಕೊಳ್ಳುವರು. ವರನ ಕಡೆಯ ಊರುಗೌಡರು ಚೌಕಿ ಬಳಿ ಬಂದು ಸೀಮೆ, ಗ್ರಾಮ ಮತ್ತು ಊರು, ಮನೆ ಹಾಗೂ ಮನೆ ಯಜಮಾನನ ಹೆಸರು ಹೇಳಿ ಇತ್ತಂಡದವರ ಒಪ್ಪಿಗೆ ಮೇರೆಗೆ ನಾವು ವೀಳ್ಯಶಾಸ್ತ್ರಕ್ಕಾಗಿ ಬಂದಿರುತ್ತೇವೆ, ಚೌಕಿಗೆ ಬರಲು ಮತ್ತು ಕುಳಿತುಕೊಳ್ಳಲು ಅನುಮತಿ ಕೊಡಿ ಎಂದು ಕೇಳುತ್ತಾರೆ. ಒಪ್ಪಿಗೆ ಪಡೆದು ತಂಬಿಗೆ ನೀರು ಮುಟ್ಟಿ ದೀಪಕ್ಕೆ ನಮಸ್ಕರಿಸಿ ಪಶ್ಚಿಮ ಭಾಗಕ್ಕೆ ಮುಖ ಮಾಡಿ ಕುಳಿತುಕೊಳ್ಳುವರು. ಉಳಿದವರು ಅವರವರ ಭಾಗಕ್ಕೆ ತಕ್ಕಂತೆ ಚೌಕಿ ಸುತ್ತ ಕುಳಿತುಕೊಳ್ಳುವರು. (ಉಭಯ ಕಡೆಗಳಿಂದ ಕನಿಷ್ಠ 5 ಜನರಿರಬೇಕು; ಮತ್ತು ಎಲ್ಲರೂ ತಲೆಗೆ ರುಮಾಲು ಸುತ್ತಬೇಕು. ತೇದ ಗಂಧವನ್ನು ಹಾಕಿಕೊಳ್ಳಬೇಕು).

1) ಕುಟುಂಬದ ಯಜಮಾನ, 2) ಸೋದರ ಮಾವ, 3) ಊರುಗೌಡರು 4) ಒತ್ತುಗೌಡರು ಇಲ್ಲದ ಪಕ್ಷದಲ್ಲಿ ಯಾರಾದರು. 5) ಊರಿನವರು. 

ಊರು ಗೌಡರ ಉಡುಗೆ ತೊಡುಗೆಗಳು :

ಬಿಳಿ ಶರ್ಟ್, ಬಿಳಿ ಮುಂಡು, ಬಿಳಿ ಶಾಲು ಧರಿಸಿರಬೇಕು. ಕಾರ್ಯಕ್ರಮ ನಡೆಸಿಕೊಡುವಾಗ ಮುಂಡಾಸು ಕಟ್ಟಿರಲೇಬೇಕು. (ಪ್ರತೀ ಬೈಲಿಗೊಬ್ಬ ಊರುಗೌಡ, ಒತ್ತು ಗೌಡ ಇರುತ್ತಾರೆ. ಊರು ಗೌಡರ ನಂತರ ಅವರ ಮಕ್ಕಳ ಕಾಲಕ್ಕಾಗುವಾಗ ಊರುಗೌಡತ್ತಿಗೆ ಮಾಡಲು ಸಾಧ್ಯವಾಗದ ಪಕ್ಷದಲ್ಲಿ ಸಂಪ್ರದಾಯ ರೀತಿ ರಿವಾಜುಗಳ ಬಗ್ಗೆ ತಿಳಿದವರನ್ನು ಆಯಾ ಊರಿನ ಹಿರಿಯರು ಚರ್ಚಿಸಿ ನೇಮಕ ಮಾಡಬಹುದು.)

ಮದುವೆ ಕಾರ್ಯಕ್ಕೆ ಸಂಬಂದಪಟ್ಟಂತೆ ಊರು ಗೌಡರಿಗೆ ಅವರ ಮನೆಗೆ ಹೋಗಿ ! ಸೂಡಿ ವೀಳ್ಯದೆಲೆ, 5 ಅಡಿಕೆ, ಅಡಿಕೆಹೋಳು ಹರಿವಾಣದಲ್ಲಿ ಇಟ್ಟು ಮದುವೆ ಕಾರ್ಯವನ್ನುಬಂದು ಸುಧಾರಿಸಿಕೊಡಲು ಕೇಳಿಕೊಳ್ಳಬೇಕು.

ವೀಳ್ಯ ಕೊಡುವ ಕ್ರಮ :
ಹರಿವಾಣದಲ್ಲಿ ವೀಳ್ಯ ಕೊಡುವಾಗ ವೀಳ್ಯದೆಲೆಯ ತುದಿ ಹಾಗು ಅಡಿಕೆ ತೊಟ್ಟು ತೆಗೆದುಕೊಳ್ಳುವ ಭಾಗಕ್ಕಿರಬೇಕು. ತೆಗೆದುಕೊಂಡ ಮೇಲೆ ಅದರಲ್ಲಿ ವೀಳ್ಯದೆಲೆ ಹಾಗೂ ಅಡಿಕೆ ಹೋಳು ಶಾಸ್ತ್ರಕ್ಕೆ ತೆಗೆದುಕೊಂಡು ಮತ್ತೆ ಅವರು ಕೂಡಾ ತಿರುಗಿಸಿ ಕೊಡಬೇಕು

ವೀಳ್ಯ ಶಾಸ್ತ್ರ ದಿನದ ವೀಳ್ಯಗಳು

1. ಚೌಕಿ ವೀಳ್ಯ

2. ದೇವರ ವೀಳ್ಯ

3. ಗುರು ವೀಳ್ಯ

4. ಸಲಾವಳಿ ವೀಳ್ಯ

5. ಮಾತು ಕರಾರು ವೀಳ್ಯ

6. ವೀಳ್ಯ ಶಾಸ್ತ್ರದ ವೀಳ್ಯ

7. ಲಗ್ನ ವೀಳ್ಯ

8. ತಾಯಿ ವೀಳ್ಯ

9 ತಂದೆ ವೀಳ್ಯ
ಪರಿಚಯಾತ್ಮಾಕ ವೀಳ್ಯ:

ಚೌಕಿ ವೀಳ್ಯ

ಚೌಕಿಯಲ್ಲಿ ಕುಳಿತವರೆಲ್ಲ ಗಂಧವನ್ನು ಹಚ್ಚಿಕೊಳ್ಳಬೇಕು. ವರನ ಕಡೆಯ ಊರುಗೌಡರು. ಒಂದು ಹರಿವಾಣದಲ್ಲಿ ಸೂಡಿ ಎಲೆ, 5 ಅಡಿಕೆ ಇಟ್ಟು ವಧುವಿನ ಕಡೆಯ ಊರುಗೌಡರಿಗೆ ಅವರು ಬಂದ ಜಿಲ್ಲೆ, ತಾಲೂಕು, ನಾಡು, ಗ್ರಾಮ ಮತ್ತು ಇಂತವರ ಅನುಮತಿ ಮೇರೆಗೆ ಹುಡುಗನ ಮನೆಯ ಯಜಮಾನನ ಹೆಸರು ಹೇಳುವುದು.. ..ಹುಡುಗಿಯ ಕಡೆಯ ಪೂರ್ಣ ವಿವರ ಮತ್ತು ಯಜಮಾನನ ಹೆಸರು ಹೇಳಿ ಅವರ ಅನುಮತಿ ಮೇರೆಗೆ ವೀಳ್ಯಶಾಸ್ತ್ರ ನಡೆಸುವುದಕ್ಕೆ ಬಂದ ನೆಂಟರು ನಾವು. ನಮ್ಮ ಸಂಸ್ಕೃತಿ, ಪದ್ಧತಿ, ಕಟ್ಟಳೆಗಳಿಗೆ ಸರಿಯಾಗಿ ನಮ್ಮ ಇಂದಿನ ವೀಳ್ಯಶಾಸ್ತ್ರವನ್ನು ಮುಂದಿನ ದಿಬ್ಬಣ, ಮದುವೆ ಕಾಠ್ಯಕ್ರಮವನ್ನೆಲ್ಲಾ ಮನೆಯವರ ಒಪ್ಪಿಗೆ ಮೇರೆಗೆ ಸುಧಾರಿಸಿ ಕೊಡಬೇಕು ಅಂತ ಕೇಳಿಕೊಳ್ಳುತ್ತಾರೆ. ಊರು ಗೌಡರು ಮನೆಯ ಯಜಮಾನರ ಒಪ್ಪಿಗೆ ಪಡೆದು ಕಾರ್ಯಕ್ರಮ ಮುಂದುವರಿಸುತ್ತಾರೆ. ಕುಟುಂಬದ ಸರ್ವರಲ್ಲಿಯೂ, ಸೋದರದವರಲ್ಲಿಯೂ ಒಪ್ಪಿಗೆ ಇದೆಯೋ ಎಂದು ಕೇಳುವರು. ಎಲ್ಲರೂ ಒಪ್ಪಿಗೆ ಸೂಚಿಸುವರು.

1. ಚೌಕಿ ವೀಳ್ಯ ಜೋಡಿಸಿಡುವ ಕ್ರಮ : ವಧುವಿನ ಕಡೆಯವರು ಮಣೆಯ ಮೇಲೆ ಇರಿಸಿದ ಹರಿವಾಣದಲ್ಲಿ-ವರನ ಕಡೆಯವರು ಹರಿವಾಣದ ಸುತ್ತಲೂ ವೀಳ್ಯದ ಎಲೆಯ ಕವಳೆಯ ತುದಿ ಹೊರಗೆ ಬರುವಂತೆ ಇಡಬೇಕು. (ಸಾಮಾನ್ಯವಾಗಿ 5 ಕವಳೆ ಅಥವಾ ಕವಳೆ ವಿಷಮ ಸಂಖ್ಯೆಯಲ್ಲಿರಬೇಕು) ಮಧ್ಯದಲ್ಲಿ ಕವಳೆ ಸಂಖ್ಯೆಯಷ್ಟೆ ಅಡಿಕೆಯಿರಬೇಕು ಹಾಗೂ ಅಡಿಕೆ ಹೋಳು ಹಾಗೂ ಸ್ವಲ್ಪ ಬೆಳ್ತಿಗೆ ಅಕ್ಕಿ ಇರಬೇಕು.

ಚೌಕಿ ವೀಳ್ಯ ಕೊಡುವ ಕ್ರಮ : ವರನ ಕಡೆಯ ಗುರುಮನೆ, ಕಟ್ಟೆಮನೆ, ಸೀಮೆಮನೆ, ಮಾಗಣೆಮನೆ ಊರುಗೌಡರು ಎದ್ದು ನಿಂತು ಗೋತ್ರದ ಹೆಸರಿನ ವರನಿಂದ ಸ್ವಜಾತಿ ಬಾಂಧವರ ಸಮ್ಮುಖದಲ್ಲಿ ಚೌಕಿ ವೀಳ್ಯ ಎತ್ತಿ ಕೊಡುತ್ತೇವೆ ಎಂದು ಹೇಳಿ ವಧುವಿನ ಕಡೆಯ ಊರುಗೌಡರಿಗೆ ಕೊಟ್ಟಾಗ ಅವರು ಕೂಡ ಹಾಗೇನೆ ಎದ್ದು ನಿಂತು ಒಕ್ಕಣೆಯೊಂದಿಗೆ ಸ್ವೀಕಾರ ಮಾಡುತ್ತಾರೆ. (ಪ್ರತಿಯೊಬ್ಬರು ವೀಳ್ಯ ಬದಲಾಯಿಸಿಕೊಳ್ಳುವಾಗ ಇತ್ತಂಡದವರು ತಂಬಿಗೆಯಲ್ಲಿರುವ ನೀರನ್ನು ಮುಟ್ಟಿಕೊಳ್ಳಬೇಕು) ನಂತರ ಇದನ್ನು ಬಳಿಯಲ್ಲಿ ಕುಳಿತವರಿಗೆ ಪ್ರದಕ್ಷಿಣೆ ಬರುವಂತೆ ಕೊಡಬೇಕು. ಎಲ್ಲರೂ ಗೌರವಸೂಚಕವಾಗಿ ನಮಸ್ಕರಿಸಿ ವಧುವಿನ ಕಡೆಯ ಊರುಗೌಡರು ಮಣೆಯ ಮೇಲಿಡುತ್ತಾರೆ.

2) ದೇವರ ವೀಳ್ಯ : 5 ಕವಳೆ ವೀಳ್ಯದೆಲೆ 5 ಅಡಿಕೆ, ಸ್ವಲ್ಪ ಅಡಿಕೆ ಹೋಳು ಹಾಕಿ ವರನ ಕಡೆಯ ಊರುಗೌಡರು, ನೀರಿನ ತಂಬಿಗೆ ಮುಟ್ಟಿ ಎದ್ದು ನಿಂತು ವೀಳ್ಯದ ತಟ್ಟೆಯನ್ನು ಕೈಯಲ್ಲಿ ಹಿಡಿದು ಹತ್ತು ಕುಟುಂಬ ಹದಿನೆಂಟು ಗೋತ್ರದ ಬಂಧು-ಬಾಂಧವರು, ನೆಂಟರಿಷ್ಟರು, ಗುರುಮನೆ, ಕಟ್ಟೆಮನೆ, ಸೀಮೆಮನೆ, ಮಾಗಣೆಮನೆ.........ಗೋತ್ರದ..............ಹೆಸರಿನ  ವರನಿಂದ ಸ್ವಜಾತಿ ಬಾಂಧವರ ಸಮ್ಮುಖದಲ್ಲಿ .......ಗೋತ್ರದ ........ವಧುವಿಗೆ ದೇವರ ವೀಳ್ಯವನ್ನು ಎತ್ತಿ ಕೊಡುತ್ತೇವೆ ಎಂದು ಹೆಣ್ಣಿನ ಕಡೆಯ ಊರುಗೌಡರಿಗೆ ಒಪ್ಪಿಸುವರು. ಅದೇ ರೀತಿಯ ಒಕ್ಕಣೆಯೊಂದಿಗೆ ವಧುವಿನ ಕಡೆಯ ಊರುಗೌಡರು ಸ್ವೀಕರಿಸುವರು (3 ಸಲ ಒಕ್ಕಣೆ ಹೇಳಬೇಕು). ಆಗ ಸಭೆಯಲ್ಲಿದ್ದವರು ಒಪ್ಪಿಗೆಯಾಗಿ ಒಳ್ಳೆ ಕಾರ್ಯಂತ ಗಟ್ಟಿಯಾಗಿ ಹೇಳಬೇಕು.

3) ಗುರು ವೀಳ್ಯ: 7 ಕವಳೆ ವೀಳ್ಯದೆಲೆ, 7 ಅಡಿಕೆ, ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ವೀಳ್ಯ ಬದಲಾಯಿಸಿಕೊಳ್ಳಬೇಕು. (ಒಕ್ಕಣೆಯೊಂದಿಗೆ ಹೇಳಿ ವೀಳ್ಯ ಬದಲಾಯಿಸಿಕೊಳ್ಳಬೇಕು).

4) ಸಲಾವಳಿ ವೀಳ್ಯ : 9 ಕವಳೆ ವೀಳ್ಯದೆಲೆ, 9 ಅಡಿಕೆ ಹಾಗೂ ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ಒಕ್ಕಣೆಯೊಂದಿಗೆ ವೀಳ್ಯ ಬದಲಾಯಿಸಿಕೊಳ್ಳಬೇಕು. (ಸಲಾವಳಿ ಎಂದರೆ ವಧು ವರರ ಜಾತಕಾದಿಗಳು, ಗೋತ್ರಗಳು, ನಕ್ಷತ್ರಗಳು, ದಶಕೂಟಗಳು, ಸಂಖ್ಯಾಶಾಸ್ತ್ರ ಮುಂತಾದುವುಗಳು ಒಳಗೊಂಡಿರುತ್ತವೆ.)

5) ಮಾತು ಕರಾರು ವೀಳ್ಯ : 9 ಕವಳೆ ವೀಳ್ಯದೆಲೆ, 9 ಅಡಿಕೆ ಹಾಗೂ ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ಒಕ್ಕಣೆಯೊಂದಿಗೆ ವೀಳ್ಯ ಬದಲಾಯಿಸಿಕೊಳ್ಳಬೇಕು. (ಕರಾರು ಪತ್ರ ಮಾಡಿಕೊಳ್ಳಬೇಕು. )

6) ವೀಳ್ಯ ಶಾಸ್ತ್ರದ ವೀಳ್ಯ: 9 ಅಡಿಕೆ 9ಕವಳೆ ವೀಳ್ಯದೆಲೆ ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ಒಕ್ಕಣೆಯೊಂದಿಗೆ ವೀಳ್ಯ ಬದಲಾಯಿಸಿಕೊಳ್ಳಬೇಕು. 5 ವೀಳ್ಯದೆಲೆ 1 ಅಡಿಕೆ ವರನಿಗಾಗಿ, ವರನ ಮನೆಯವರಿಗೂ, 5 ವೀಳ್ಯದೆಲೆ 1 ಅಡಿಕೆ ವಧುವಿಗಾಗಿ ವಧುವಿನ ಕಡೆಯವರಿಗೂ ಹರಿವಾಣದಲ್ಲಿಟ್ಟು ಕೊಡಬೇಕು.

7) ಲಗ್ನ ವೀಳ್ಯ : 9 ಕವಳೆ ವೀಳ್ಯದೆಲೆ, 9 ಅಡಿಕೆಯೊಂದಿಗೆ ಮಾತು ಕರಾರು ಪತ್ರ ಇಟ್ಟು ಒಕ್ಕಣೆಯೊಂದಿಗೆ ಮೇಲಿನಂತೆ ವೀಳ್ಯ ಬದಲಿಸಿಕೊಳ್ಳಬೇಕು.

8,9) ತಾಯಿ ತಂದೆ ವೀಳ್ಯ (2 ಹರಿವಾಣಗಳಿರಬೇಕು) : 9 ಕವಳೆ ವೀಳ್ಯದೆಲೆ, 9 ಅಡಿಕೆ ಹಾಗೂ ಅಡಿಕೆ ಹೋಳು ಇಟ್ಟಿರಬೇಕು. ಉಭಯ ಕಡೆಯಿಂದಲೂ ಊರುಗೌಡರ ಜೊತೆ ಒಬ್ಬರು ಎದ್ದು ಒಕ್ಕಣೆಯೊಂದಿಗೆ ವೀಳ್ಯ ಕೊಡುವುದು ಹಾಗೂ ತೆಗೆದುಕೊಳ್ಳುವುದು ಮಾಡಬೇಕು. ತಂದೆಯ ವೀಳ್ಯದಿಂದ ತಂದೆಯ ಕುಟುಂಬದವರಿಗೂ, ತಾಯಿ ವೀಳ್ಯದಿಂದ ತಾಯಿ ಕುಟುಂಬದವರಿಗೂ ಹಂಚಬೇಕು. ಹಿಂದಿನ ಕಾಲದಲ್ಲಿ ಉಭಯ ಕಡೆಯ ಕುಟುಂಬಸ್ಥರಿಗೆ ಹೀಗೆ ವೀಳ್ಯ ಕೊಟ್ಟು ಆಹ್ವಾನಿಸುತ್ತಿದ್ದರು.

ಚೌಕಿ ವೀಳ್ಯ : ಚೌಕಿ ವೀಳ್ಯವನ್ನು ಎತ್ತಿ ವಧುವಿನ ಕಡೆಯ ಊರುಗೌಡರಿಗೆ ಕಾರ್ಯಕ್ರಮ
ಚೆನ್ನಾಗಿ ಸುಧಾರಿಸಿಕೊಟ್ಟಿದ್ದೀರಿ ಎಂದು ಹೇಳಿ ವರನ ಕಡೆಯ ಊರುಗೌಡರು ನೀಡುವರು. ಹರಿವಾಣವನ್ನು ಆರಂಭದಲ್ಲಿ ಚೌಕಿ ವೀಳ್ಯದಂತೆ ಪ್ರದಕ್ಷಿಣೆ ತಂದು (ಸಾಂಕೇತಿಕವಾಗಿ ಚೌಕಿಯಲ್ಲಿರುವವರು 1 ವೀಳ್ಯದೆಲೆ, 1 ಅಡಿಕೆ ಹೋಳನ್ನು ತೆಗೆದುಕೊಳ್ಳುವರು) ವಧುವಿನ ಕಡೆಯ ಊರು ಗೌಡರು ಮಣೆಯ ಮೇಲಿಡಬೇಕು. (ಈಗ ಊರುಗೌಡರು ಸ್ಥಳ ಬದಲಾವಣೆ ಮಾಡಿಕೊಳ್ಳುವರು). ವೀಳ್ಯ ತಿನ್ನುತ್ತಾ ಮದುವೆಯ ಮುಂದಿನ ವ್ಯವಸ್ಥೆಯ ಬಗ್ಗೆ ಮಾತುಕತೆಯಾಗುತ್ತದೆ. ಮಾತುಕತೆ ಮುಗಿದ ನಂತರ ಕೈಮುಗಿದು ಎಲ್ಲರೂ ಚೌಕಿಯಿಂದ ಏಳುತ್ತಾರೆ. ಭೋಜನ ವ್ಯವಸ್ಥೆಯಾದ ನಂತರ ಹುಡುಗಿ ಮನೆಯವರ ಒಪ್ಪಿಗೆ ಪಡೆದು ವರನ ಮನೆಯವರು ತೆರಳುವರು.

ಚಪ್ಪರ ಹಾಕುವ ಕ್ರಮ : ಮದುವೆಗೆ 4 ಅಥವಾ 5 ದಿನಗಳಿಗೆ ಮುಂಚಿತವಾಗಿ ಕುಟುಂಬಸ್ಥರಿಗೆ,
ನೆರೆಕರೆಯವರಿಗೆ ಹೇಳಿಕೆ ಕೊಟ್ಟು ಚಪ್ಪರ ಹಾಕಲು ಕೇಳಿಕೊಳ್ಳುವುದು. ಊರುಗೌಡರ ನೇತೃತ್ವದಲ್ಲಿ ಮನೆಯ ಮುಂಭಾಗದಲ್ಲಿ ಚಪ್ಪರ ಹಾಕುವುದು. ಚಪ್ಪರದ ಕಂಬಗಳು ಸಮ ಸಂಖ್ಯೆಯಲ್ಲಿರಬೇಕು. ಮದುವೆಯ ಹಿಂದಿನ ದಿನ, ಮದರಂಗಿಯಂದು ವಿಶ್ವಕರ್ಮರು ನಿರ್ಮಿಸಿಕೊಟ್ಟ ಹಾಲೆಮರದ ಪಾದುಕೆಗಳನ್ನು ಪ್ರವೇಶ ದ್ವಾರದ ಅಡಿಯಲ್ಲಿ ನೆಲಕ್ಕೆ ಮರದ ಮೊಳೆಯಿಂದ ಅಳವಡಿಸುವುದು. ಚಪ್ಪರದ ಮುಖ ತೋರಣವನ್ನು ವಿಶ್ವಕರ್ಮರಿಂದ ಮಾಡಿಸಬೇಕು. ಪೂರ್ವ ಈಶಾನ್ಯದಲ್ಲಿ ದ್ವಾರ ನಿರ್ಮಿಸಿ, ಗೊನೆ ಹಾಕಿದ 2 ಕದಳಿ ಬಾಳೆ ಕಟ್ಟಿ ತಳಿರು ತೋರಣಗಳಿಂದ ಶೃಂಗರಿಸಬೇಕು. (ಚಪ್ಪರದ ನಾಲ್ಕು ಮೂಲೆಗಳಿಗೆ ಊರುಗೌಡರು ನಾನೇಲು ಸೊಪ್ಪು ಸುತ್ತಿ ಮನೆಯವರಿಗೆ ಚಪ್ಪರವನ್ನು ಒಪ್ಪಿಸುವುದು ಕ್ರಮ)

ಧಾರಾ ಮಂಟಪ : ಮನೆಯ ಮುಂಭಾಗದಲ್ಲಿ ಪೂರ್ವಾಭಿಮುಖವಾಗಿ ನಾಲ್ಕು ಅಡಿಕೆ ಮರದ ಕಂಬಗಳನ್ನು ಉಪಯೋಗಿಸಿ ಧಾರಾ ಮಂಟಪ ರಚಿಸುವುದು. ಮಡಿವಾಳ ಮಣೆಯಿಟ್ಟ ದೀಪ ಹಚ್ಚಿ  ಬೆಂಡು ಕುಕ್ಕೆಯಲ್ಲಿ 1 ಸೇರು ಅಕ್ಕಿ, 1 ತೆಂಗಿನ ಕಾಯಿ, 5 ವೀಳ್ಯದೆಲೆ, ಅಡಿಕೆ 1 ಪಾವಲಿ ಇಟ್ಟು ಕೈ ಮುಗಿದು ಮೇಲ್ಕಟ್ಟು ಕಟ್ಟುತ್ತಾನೆ. ಮೇಲ್ಕಟ್ಟು ಕಟ್ಟಿದ ಮಧ್ಯಭಾಗಕ್ಕೆ 5 ವೀಳ್ಯದೆಲೆ, 1 ಅಡಿಕೆಯಲ್ಲಿ ನಿಯಮನುಸಾರವಾಗಿ ಒಗ್ಗಿ ಹಾಕಿದ ಜೋಡು ತೆಂಗಿನ ಕಾಯಿಯೊಂದಿಗೆ ಪೋಣಿಸಿ ಕಟ್ಟುವನು. ನಾಲ್ಕು ಕಂಬಗಳಿಗೆ ಬಿಳಿ ವಸ್ತ್ರವನ್ನು ಕಟ್ಟುವನು (ಎಣ್ಣೆ ಅರಿಶಿನ ಮಾಡಿದ ಕೈ ಉಜ್ಜಲು)

ಮದುಮಗಳಿಗೆ ಬಳೆ ತೊಡಿಸುವ ಶಾಸ್ತ್ರ (ಮದರಂಗಿ ಶಾಸ್ತ್ರದ ಮೊದಲ ದಿನ) : ವಧುವಿನ
ಮನೆಯಲ್ಲಿ ಬಳೆ ತೊಡಿಸುವ ಪದ್ಧತಿಯಿರುತ್ತದೆ. ಈ ಮೊದಲೇ ಹೇಳಿಕೆ ಕೊಟ್ಟಂತೆ ಬಂದಿರುವ ಬಳೆಗಾರ್ತಿ ಚಪ್ಪರದಡಿಯಲ್ಲಿ ಹಸಿರು ಮತ್ತು ಕೆಂಪು ಬಳೆಗಳನ್ನು ತಂದು ಮದುಮಗಳಿಗೆ ತೊಡಿಸುವುದು. ಸೇರಿದ ಇಷ್ಟಪಟ್ಟ ಎಲ್ಲಾ ಹೆಂಗಳೆಯರಿಗೂ ಬಳೆ ತೊಡಿಸುವುದು ಪದ್ಧತಿ.

ಗುರುಕಾರಣರಿಗೆ ಬಡಿಸುವುದು : ವೀಳ್ಯ ಶಾಸ್ತ್ರದ ನಂತರ ನಿಶ್ಚಯಿಸಿದ ದಿನದಂದು ವಧು/ವರರ ತಳಮನೆಯಲ್ಲಿ ಗುರು ಕಾರಣರಿಗೆ ಬಡಿಸುವ ಕ್ರಮವಿದೆ.

ಮದುಮಗನ ಮುಖ ಕ್ಷೌರ : ಮದರಂಗಿ ಶಾಸ್ತ್ರದ ಮೊದಲು ಕ್ಷೌರ ಮಾಡಿಸುವುದು ಕ್ರಮ. ಕ್ಷೌರಿಕನಿಗೆ ಹೇಳಿಕೆ ಕೊಟ್ಟು ಮದರಂಗಿ ಶಾಸ್ತ್ರ ದಿನ ಬರಲು ಹೇಳುವುದು ಪದ್ಧತಿ. ಮುಖ ಕ್ಷೌರ ಮಾಡಿದ ಮೇಲೆ ಕ್ಷೌರಿಕನಿಗೆ ಕೊಡುವ ಮರ್ಯಾದೆ ಕೊಟ್ಟು ಕಳುಹಿಸುವುದು ಪದ್ಧತಿ.

ಎಣ್ಣೆ ಅರಶಿನ ಮತ್ತು ಮದರಂಗಿ ಶಾಸ್ತ್ರ (ಮೇಲ್ಕಟ್ಟಿನ ಅಡಿಯಲ್ಲಿ) :

ಪರಿಕರಗಳು : ಕಾಲುದೀಪ, ತೂಗುದೀಪ, ಹರಿವಾಣ 2. ಬೆಳ್ಳಿಗೆ ಅಕ್ಕಿ. ವೀಳ್ಯದೆಲೆ 5 ಅಡಿಕೆ 1. ತೆಂಗಿನ ಕಾಯಿಯ ಹಾಲು, ಎಣ್ಣೆ, ಅರಶಿನ, ಗರಿಕೆ.

ಊರುಗೌಡರು ಬಂದಾಗ ಮನೆಯ ಯಜಮಾನ ತಂಬಿಗೆ ನೀರು ಕೊಟ್ಟು ಕುಳ್ಳಿರಿ ಉಪಚರಿಸಿ ನಂತರ ಸೂಡಿ ಎಲೆ, 5 ಅಡಿಕೆಯೊಂದಿಗೆ ಕಾರಕ್ರಮ ನಡೆಸಿಕೊಡು ಕೇಳಿಕೊಳ್ಳಬೇಕು. (ವಧುವಿನ ಮನೆಯಲ್ಲಿ ವರನ ಮನೆಯ ಕೊಡಿಯಾಳು ಬಂದುದನ ಖಾತರಿಪಡಿಸಿಕೊಳ್ಳುತ್ತಾರೆ.)

ವಧು/ವರರು ಭೋಜನ ಸ್ವೀಕರಿಸಿದ ನಂತರ ಮದರಂಗಿ ಶಾಸ್ತ್ರ ಮಾಡಬೇಕು. ಆಮೇಲೆ ಫಲಾಹಾರ ಮಾತ್ರ ಮಾಡಬಹುದು. (ಶೇಷೋಪಚಾರ) ಪಟ್ಟ ಭಾಸಿಂಗ ತೆಗೆದ ಮೇಲೆನೇ ಭೋಜನ ಮಾಡಬೇಕು.

ಭೂಮಿ ಹೆಸೆ ಬರೆಯುವುದು :

5 ಜನ ಮುತ್ತೈದೆಯರು ಭೂಮಿ ಹಸೆ ಬರೆಯುತ್ತೇವೆಂದು ಹೇಳಿ ಅಕ್ಕಿಯಿಂದ ಗೆರೆಹಾಕಿ ಚೌಕಟ್ಟು ಮಾಡಿ ಅದನ್ನು ಒಟ್ಟು ಸೇರಿಸಬೇಕು. ಎಡದ ಪ್ರಥಮ ಚೌಕಟ್ಟಿನೊಳಗೆ (ಮದುಮಗ ಕುಳಿತುಕೊಳ್ಳುವ ಬಲಭಾಗ) ಸೂರ್ಯ ಚಿತ್ರ, ಕೊನೆಯ ಚೌಕಟ್ಟಿನೊಳಗೆ ಚಂದ್ರ ಚಿತ್ರ ಬರೆದು ಮಣೆ ಇಡಬೇಕು. ಆ ನಂತರ ವಧು/ವರರನ್ನು ಎಣ್ಣೆ ಅರಶಿನ ಮಾಡುವುದಕ್ಕೆ ಊರು ಗೌಡರು ಒಕ್ಕಣೆಯೊಂದಿಗೆ ಕುಳ್ಳಿರಿಸುವರು.

ಮಣೆಯ ಮೇಲೆ ಒಂದು ಹರಿವಾಣದಲ್ಲಿ ಬೆಳ್ತಿಗೆ ಅಕ್ಕಿ, 5 ವೀಳ್ಯದೆಲೆ, 1 ಅಡಿಕೆ ಇನ್ನೊಂದು ಹರಿವಾಣದಲ್ಲಿ ತೆಂಗಿನ ಹಾಲು ಮತ್ತು ತೆಂಗಿನ ಎಣ್ಣೆ ಮಿಶ್ರಣದಲ್ಲಿ ಅರಿಶಿನ ಹಾಗೂ ಗರಿಕೆ (5 ಅಥವಾ 10 ತುದಿ) ತುದಿ ಇರಬೇಕು. ಮೇಲ್ಕಟ್ಟಿನಡಿಯಲ್ಲಿ ಪೂರ್ವಾಭಿಮುಖವಾಗಿ ತೂಗುದೀಪ ಉರಿಸಿ ಇಟ್ಟಿರಬೇಕು.

ವಧು/ವರರ ಸ್ನಾನದ ನಂತರ ಬಿಳಿ ವಸ್ತ್ರ ಧರಿಸಿ ದೇವರ ಕೋಣೆಗೆ ಬರುವರು. ಹಿರಿಯರು ಹಚ್ಚಿದ ದೀಪದ ಎದುರು ಮನೆಯವರು ಬಂಧುಗಳೆಲ್ಲ ಸೇರಿ ಪ್ರಾರ್ಥಿಸಿಕೊಳ್ಳುವರು. ವಧು/ವರರು ದೀಪಕ್ಕೆ ಅಕ್ಕಿ ಕಾಳು ಹಾಕಿ ನಮಸ್ಕರಿಸಿ ಹಿರಿಯರ ಪಾದಗಳಿಗೆರಗಿ ಆಶೀರ್ವಾದ ಪಡೆಯುವರು. ನಂತರ ಸೋದರ ಮಾವನಿಗೆ ತಂಬಿಗೆ ನೀರು ಕೊಟ್ಟು ಮುಹೂರ್ತದ ಮಣಿ ಕಟ್ಟಲು ಕೇಳಿಕೊಳ್ಳುವರು.

ತದನಂತರ ಒಳಗಿನಿಂದ ತಂದೆಯು ವಧು/ವರನನ್ನು ಮೇಲ್ಕಟ್ಟಿನಡಿಗೆ ಕರೆದುಕೊಂಡು ಬರುವರು. ಒಕ್ಕಣೆಯೊಂದಿಗೆ ಸೋದರಮಾವ ಅಥವಾ ಊರು ಗೌಡರು ಮುಹೂರ್ತದ ಮಣಿಯನ್ನು ಕಟ್ಟಬೇಕು. ನಂತರ ಒಕ್ಕಣೆಯೊಂದಿಗೆ ಊರು ಗೌಡರು ಎಣ್ಣೆ ಅರಿಶಿನಕ್ಕೆ ಮಣೆಯ ಮೇಲೆ ಪೂರ್ವಾಭಿಮುಖವಾಗಿ ಕುಳ್ಳಿರಿಸಿ ಹರಿವಾಣದಲ್ಲಿಟ್ಟಂತಹ 5 ವೀಳ್ಯದೆಲೆ 1 ಅಡಿಕೆಯನ್ನು ವಧು/ವರನ ಕೈಯಲ್ಲಿ ಇರಿಸುವರು. ಕನಿಷ್ಠ 5 ಜನ ಮುತ್ತೈದೆಯರು ಒಬ್ಬೊಬ್ಬರಾಗಿ ಬಂದು ದೇವರ ದೀಪಕ್ಕೆ ಅಕ್ಕಿ ಕಾಳು ಹಾಕಿ ಕೈಮುಗಿದು ವಧು/ವರನಿಗೆ ಅಕ್ಷತೆ ಹಾಕಿ ಅವರ ಕೈಯಲ್ಲಿದ್ದ ವೀಳ್ಯವನ್ನು ಪಡೆದು ಅಕ್ಕಿ ಹರಿವಾಣದಲ್ಲಿಟ್ಟು ನಂತರ ಅರಿಶಿಣವನ್ನು ಪಾದದಿಂದ ಮುಖದವರೆಗೆ ಗರಿಕೆ ತುದಿಯಿಂದ 3 ಸಲ ಸವರಿ ನಂತರ ಎರಡು ಅಂಗೈಗಳಿಂದ ಅರಿಶಿನವನ್ನು ಸಂಪೂರ್ಣ ಮೈಗೆ ಹಚ್ಚಬೇಕು. ಹರಿವಾಣದಲ್ಲಿರುವ 5 ವೀಳ್ಯದೆಲೆ 1 ಅಡಿಕೆಯನ್ನು ಮತ್ತೆ ಕೈಯಲ್ಲಿಟ್ಟು ಪರಸ್ಪರ ನಮಸ್ಕರಿಸಿಕೊಳ್ಳುವರು. ಇದೇ ಕ್ರಮವನ್ನು ಉಳಿದ ಮುತ್ತೈದೆಯರು ಅನುಸರಿಸುವರು. ಈ ಸಂಧರ್ಭದಲ್ಲಿ ಮದುಮಗನಿಗೆ ಕಾಲುಂಗುರವಿಡುವ ಕ್ರಮವಿದೆ. ಸಂಪ್ರದಾಯದಂತೆ ಕಾಲುಂಗುರವನ್ನು ಕ್ಷೌರಿಕ ಇಡಬೇಕು. (ಈಗಿನ ಕಾಲಘಟ್ಟದಲ್ಲಿ ಅದು ಆಗದೇ ಇರುವ ಕಾರಣ ಅಡೋಳಿ ಕಾಲುಂಗುರ ಇಡಬಹುದು.) ಅರಿಶಿನೆಣ್ಣೆ ಸಂಪೂರ್ಣ ಆದ ನಂತರ ಊರುಗೌಡರು ಕೈಯಲ್ಲಿದ್ದ ವೀಳ್ಯವನ್ನು ಹರಿವಾಣದಲ್ಲಿರಿಸಿ ಒಕ್ಕಣೆಯೊಂದಿಗೆ. ಅರಿಶಿನೆಣ್ಣೆಯಿಂದ ಎಬ್ಬಿಸುವರು. ಈಗ ಒಂದು ಸೂಡಿ ವೀಳ್ಯದೆಲೆ 5 ಅಡಿಕೆ ಹರಿವಾಣದಲ್ಲಿರಿಸಿ ಮೊದಲೇ ನಿರ್ಧರಿಸಿದ ಅಡೋಳಿ, ಕಂಚಿಮೆ, ಸೋಬಾನೆಯವರಿಗೆ ವೀಳ್ಯ ಕೊಡುವುದು. ನಂತರ ಅಡೋಳಿ ಸ್ನಾನಕ್ಕೆ ಕರೆದುಕೊಂಡು ಹೋಗುವರು. ಸೀಗೆ, ಮೈಸೂರು ಬಾಳೆಹಣ್ಣು ಹಚ್ಚಿ ವಧುವಿನ ಅತ್ತಿಗೆ ನಾದಿನಿಯರು ಅಥವಾ ಹುಡುಗನ ಭಾವ ಮೈದುನರು ಸ್ನಾನ ಮಾಡಿಸುವರು.

ಮದರಂಗಿ ಕೊಯ್ಯುವುದು :

ಪರಿಕರಗಳು :

1) ತಂಬಿಗೆ ನೀರು.

2) ತುದಿ ಬಾಳೆಲೆ

3) ಹರಿವಾಣ

4) ವೀಳ್ಯದೆಲೆ 5.

5) ಅಡಿಕೆ 1

6) ಪಾವಲಿ 1

ವಧು/ವರರು ಸ್ನಾನಕ್ಕೆ ಹೋದ ನಂತರ ಮದರಂಗಿ ಕೊಯ್ಯಲು ಗಿಡದ ಹತ್ತಿರ ಹೋಗುವರು. 5 ಜನ ಮುತ್ತೈದೆಯರು ಒಂದು ತಂಬಿಗೆ ನೀರು, ಒಂದು ಕೊಡಿ ಬಾಳೆಲೆ, ಹರಿವಾಣದಲ್ಲಿ 5 ವೀಳ್ಯದೆಲೆ, ಒಂದು ಅಡಿಕೆ, ಒಂದು ಪಾವಲಿಯನ್ನಿಟ್ಟುಕೊಂಡು ಮದರಂಗಿ ಗಿಡಕ್ಕೆ ನೀರನ್ನು ಎರೆದು ಕನಿಷ್ಠ 3 ಸುತ್ತು ಬಂದು ನಂತರ ವೀಳ್ಯವನ್ನು ಬುಡದಲ್ಲಿರಿಸಿ, ಸರ್ವರೂ ದೇವರನ್ನು ಪ್ರಾರ್ಥಿಸಿಕೊಂಡು ಕೈಮುಗಿದು ಹರಿವಾಣವನ್ನು ಎತ್ತಿಕೊಂಡು ಶೋಭಾನೆ ಹೇಳುತ್ತಾ ಮದರಂಗಿ ಸೊಪ್ಪುಗಳನ್ನು ಕೊಯ್ದು ಹರಿವಾಣದಲ್ಲಿ ಇರಿಸಿದ ಬಾಳೆಲೆಗೆ ಹಾಕಿ ತರುವರು. ಮನೆಗೆ ಬಂದಮೇಲೆ ಮದರಂಗಿ ಸೊಪ್ಪುಗಳನ್ನು ಅರೆಯುವ ಕಲ್ಲಿನಲ್ಲಿ ಹಾಕಿ ಅರೆಯುವರು. ಇದೇ ಸಮಯದಲ್ಲಿ ವಧು/ವರನು ಬಿಳಿವಸ್ತ್ರ ಧರಿಸಿ ಶ್ವೇತ ವರ್ಣದ ಛತ್ರಿಯೊಂದಿಗೆ ಕಂಚಿಮೆ ಸಮೇತ ಬಾವಿಕಟ್ಟೆಗೆ ಹೋಗಿ ಗಂಗೆ ಪೂಜೆ ಮಾಡಬೇಕು. ಗಂಗೆಪೂಜೆ ಮಾಡಿ ಚಪ್ಪರದ ಮುಖದ್ವಾರಕ್ಕೆ ಬಂದಾಗ 5 ಜನ ಮುತ್ತೈದೆಯರು ಆರತಿಯೊಂದಿಗೆ ಕುರ್ದಿನೀರಿನಾರತಿಯೊಂದಿಗೆ ನೆನೆಬತ್ತಿಯಲ್ಲಿ ದೃಷ್ಟಿ ತೆಗೆಯುವುದು, ಶೋಭಾನೆ ಹೇಳಬೇಕು. ಕಿರಿಯರು ಕಾಲು ತೊಳೆಯುವ ಕ್ರಮ ಮಾಡಬೇಕು. ಆಗ ವಧು-ವರರು 5 ವೀಳ್ಯದೆಲೆ, 1 ಅಡಿಕೆಯೊಂದಿಗೆ ಹಣವನ್ನು ಕಾಣಿಕೆಯಾಗಿ ತಂಬಿಗೆಗೆ ಹಾಗೂ ಹರಿವಾಣಕ್ಕೆ ಪ್ರತ್ಯೇಕ ಪ್ರತ್ಯೇಕವಾಗಿ ಹಾಕಬೇಕು. ನಂತರ ದೃಷ್ಟಿ ತೆಗೆಯುವ ಕ್ರಮ ಮಾಡಬೇಕು. 4 ವೀಳ್ಯದೆಲೆ, 4 ಅಡಿಕೆ ಹೋಳನ್ನು ಊರುಗೌಡರು ವಧು-ವರರ ತಲೆಯ ಸುತ್ತ 3 ಸಲ ತಂದು 4 ದಿಕ್ಕುಗಳಿಗೆ ಎಸೆಯುವರು. ನಂತರ ತೆಂಗಿನ ಕಾಯಿಯನ್ನು ತಲೆ ಸುತ್ತ ತಂದು ಭೂಮಿಗೆ ಒಡೆಯುವರು. ನಂತರ ಮೇಲ್ಕಟ್ಟಿನಡಿಯಲ್ಲಿ ಮದರಂಗಿ ಇಡಲು ಊರುಗೌಡರು ಒಕ್ಕಣೆಯೊಂದಿಗೆ ಕುಳ್ಳಿರಿಸುವರು. ಈ ಮೊದಲೇ ಕಡೆದು ಇಟ್ಟ ಮದರಂಗಿಯನ್ನು ಮಣೆಯ ಮೇಲೆ ಹರಿವಾಣದಲ್ಲಿ ಕೊಡಿ ಬಾಳೆಲೆಯಲ್ಲಿ ಹಾಕಿಡಬೇಕು, ಮೊದಲು ಸೋದರದವರು ಕೈಗೆ 5 ಬೊಟ್ಟು ಇಡಬೇಕು. ನಂತರ ಅಕ್ಕ-ತಂಗಿಯರು, ಅತ್ತಿಗೆ-ನಾದಿನಿಯರು, ಮದರಂಗಿ ಇಡುತ್ತಾರೆ. ಬಲಕೈಗೆ ಸೂರ್ಯ, ಎಡಕೈಗೆ ಚಂದ್ರ ಚಿತ್ರವನ್ನು ಬಿಡಿಸುವರು. ಮದರಂಗಿ ಇಡುವಾಗ ಸೋಬಾನೆ ಹಾಡುವರು.

ಹಸೆ ಬರೆಯುವುದು : ಮದರಂಗಿ ಶಾಸ್ತ್ರಕ್ಕೆ ಕುಳ್ಳಿರಿಸಿದ ನಂತರ ಮನೆಯ ಯಜಮಾನ ತಂಬಿಗೆ ನೀರು ಕೊಟ್ಟು ಹಸೆ ಬರೆಯಲು ಕೇಳಿಕೊಳ್ಳುವರು ಊರುಗೌಡರ ಜವಾಬ್ದಾರಿಯ (ಸೋದರದವರು ಹಸೆ ಬರೆಯಬೇಕು.) ನಡುಮನೆಯ ಗೋಡೆಯಲ್ಲಿ ಪೂರ್ವಾಭಿಮುಖವಾಗಿ  ಬರೆಯುವರು. ಬಲಬದಿಗೆ ಸೂರ್ಯ, ಎಡಬದಿಗೆ ಚಂದ್ರನ ಚಿತ್ರ ಬರುವಂತೆ ಚಿತ್ರಿಸುವುದು. ಬಲ ಬದಿಯ ಚಿತ್ರದ ಕೆಳಗೆ ವರನ ಹೆಸರು ಎಡಬದಿಯ ಚಿತ್ರದ ಕೆಳಗೆ ವಧುವಿನ ಹೆಸರು ಬರೆಯಬೇಕು. ಹಸೆ ಬರೆದು ಮುಗಿದ ನಂತರ ಹಸೆ ಬರೆದವರಿಗೆ ಮನೆಯೊಡತಿ ಅವಲಕ್ಕಿ, ಬಾಳೆಹಣ್ಣು, ಬೆಲ್ಲ ಇವುಗಳಿಂದ ಯಥೋಪಚಾರವಾಗಿ
ಉಪಚರಿಸಬೇಕು.

ಹಸೆ ಚಾಪೆ ಹಾಕುವುದು : ಹಸೆ ಬರೆದ ನಂತರ ಅದರಡಿಯಲ್ಲಿ 5 ಜನ ಮುತ್ತೈದೆಯರು
ಸೋಭಾನೆಯೊಂದಿಗೆ 5 ಕುಡ್ತೆ ಕುಚುಲು ಅಕ್ಕಿಯನ್ನು 5 ಸಾಲುಗಳಾಗಿ ಹಾಕುವರು. ನಂತರ ಎರಡು ಬದಿಯಲ್ಲಿ 5 ಎಲೆ, 1 ಅಡಿಕೆ ಇಡುವರು. ಸೋಭಾನೆಯೊಂದಿಗೆ ಅದರ ಮೇಲೆ ಹಸೆ ಚಾಪೆ ಹಾಕಿ ಅದರ ಮೇಲೆ ಕುಳಿತುಕೊಳ್ಳುವರು. ಇವರಿಗೆ ಮನೆಯ ಮುತ್ತೈದೆಯರು ತಲೆಗೆ ಎಣ್ಣೆ ಕೊಟ್ಟು ಹಸೆ ಚಾಪೆಯನ್ನು ಬಿಟ್ಟು ಕೊಡುವಂತೆ ವಿನಂತಿಸಿಕೊಳ್ಳುವರು. ಅವರು ಹಸೆ ಚಾಪೆಯಿಂದ ಏಳುವ ಮೊದಲು ಒಗ್ಗಿ ಹಾಕಿದ ತೆಂಗಿನಕಾಯಿಯನ್ನು ಚಾಪೆಯಲ್ಲಿಟ್ಟು ಏಳುವರು. (ತುಪ್ಪದ ಕ್ರಮ ಮುಗಿದ ನಂತರ ಹಸೆ ಚಾಪೆ ಹಾಗೂ ಅಕ್ಕಿ, ಎಣ್ಣೆ, ಅರಿಶಿನಕ್ಕೆ ಸಂಬಂಧಪಟ್ಟ ವಸ್ತ್ರವನ್ನು ಮಡಿವಾಳರು ತೆಗೆದುಕೊಂಡು ಹೋಗುವರು) ಕೈಯಲ್ಲಿಟ್ಟ ಮದರಂಗಿ ಚಿತ್ತಾರವು ಒಣಗಿದ ನಂತರ ವಧು/ವರರು ಕುಳಿತಲ್ಲಿಗೆ, ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ಕೈ ತೊಳೆಯುವರು. (ನೀರನ್ನು ಫಲ ಬರುವ ಮರದ ಬುಡಕ್ಕೆ ಹೊಯ್ಯುವರು) ಊರುಗೌಡರು ಒಕ್ಕಣೆಯೊಂದಿಗೆ ವಧು-ವರರನ್ನು ಎಬ್ಬಿಸುವರು.ನಂತರ ವಧು-ವರರನ್ನು ಒಳಗೆ ಕರೆದುಕೊಂಡು ಹಸೆ ಚಾಪೆಯಲ್ಲಿ ಒಕ್ಕಣೆಯೊಂದಿಗೆ ಕುಳ್ಳಿರಿಸುವರು. ಊರುಗೌಡರು 5 ಎಲೆ 1 ಅಡಿಕೆ ಅವರ ಕೈಯಲ್ಲಿಡಬೇಕು. ಒಂದು ಮಣೆ ಒಂದು ಚೆಂಬು, ಒಂದು ಕಾಲುದೀಪ ಇರಬೇಕು. ಒಂದು ಹರಿವಾಣದಲ್ಲಿ ಅಕ್ಕಿ, 5 ವೀಳ್ಯದೆಲೆ, 1 ಅಡಿಕೆ. ಇನ್ನೊಂದು ಹರಿವಾಣದಲ್ಲಿ ಹಾಲು ತುಪ್ಪ ಮಿಶ್ರಿತ ಬಳೆಗಳನ್ನು ಹಾಕಿಡಬೇಕು). ಕಾಲುದೀಪ ಹಚ್ಚಿರಬೇಕು. 5 ಜನ ಮುತ್ತೈದೆಯರು ಅಕ್ಕಿ ದೇಸೆ ಮಾಡಿ ಹಾಲು ತುಪ್ಪ ಶಾಸ್ತ್ರ ಮಾಡಬೇಕು.

ಕುಲದೇವರಿಗೆ ಹರಿಕೆ ಹಣ ಕಟ್ಟುವುದು :
ಪರಿಕರಗಳು : ಕಂಚಿನಕ್ಕಿ. ಬೆಂಡು ಕುಕ್ಕೆ. ಬಾಳೆಲೆ2 ಹೊದುಳು 1 ಸೇರು, ತೆಂಗಿನಕಾಯಿ 1. ತಂಬಿಗೆ ನೀರು. ಬಾಳೆಹಣ್ಣು 1ಪಾಡ, ಅಚ್ಚು ಬೆಲ್ಲ 1.ಬಿದಿರಿನ ಗುತ್ತಿ 2. ಮುಷ್ಠಿ ಕರಿಮೆಣಸು, ಪಾವಲಿ 1. ಧೂಪದ ಆರತಿ ಮಾಡಲು ಸಣ್ಣ ಬಾಲೆ ಪಂಬೆ. ಗಂಧಧೂಪ, ಎಲೆ ಅಡಿಕೆ. ಮದರಂಗಿ ಶಾಸ್ತ್ರದ ಮಾರನೇ ದಿನ ದಿಬ್ಬಣ ಹೊರಡುವ ಮೊದಲು ಶೃಂಗಾರ ಆದ ನಂತರ ಕುಲದೇವರಿಗೆ ಹರಿಕೆ ಹಣ ಕಟ್ಟುವುದು ಮಾಡಬೇಕು. ಮೊದಲು ಕಾಲುದೀಪ ಹಚ್ಚಿಡಬೇಕು. ಒಂದು ಮಣೆಯ ಮೇಲೆ ಬೆಂಡು ಕುಕ್ಕೆ ಇಟ್ಟು ಅದರೊಳಗೆ ಜೋಡು ಬಾಳೆಲೆ ಇಡಬೇಕು. ವಧು/ವರರು 3 ಬೊಗಸೆ ಹೊದುಳು ಬಡಿಸಿ ಒಂದು ಪಾಡ ಬಾಳೆಹಣ್ಣು, ಬೆಲ್ಲ ಹಾಗೂ 5 ವೀಳ್ಯದೆಲೆ, 1 ಅಡಿಕೆ ಇಡಬೇಕು. ಆ ನಂತರ ಊರುಗೌಡರು ಒಕ್ಕಣೆಯೊಂದಿಗೆ ವಧು/ವರನ ಕೈಯಿಂದ ಒಂದು ಗೊಟ್ಟದಲ್ಲಿ ಮೊದಲು ಮಾವಿನಸೊಪ್ಪು, ಕರಿಮೆಣಸು ಹಾಕಿ ಒಂದು ಪಾವಲಿಯನ್ನು ಇಟ್ಟು ಭದ್ರಪಡಿಸುವುದು (ಈ ಹಣ ತಿರುಪತಿಗೆ ಸಲ್ಲಿಕೆಯಾಗಬೇಕು). ಇನ್ನೊಂದು ಗೊಟ್ಟದಲ್ಲಿ ಮಾವಿನ ಸೊಪ್ಪು ಹಾಗೂ ಕರಿಮೆಣಸು ಹಾಕಿ ಭದ್ರಪಡಿಸಬೇಕು. ಭದ್ರಪಡಿಸಿದ ಗೊಟ್ಟಗಳನ್ನು ಬೆಂಡು ಕುಕ್ಕೆಯಲ್ಲಿಇಡಬೇಕು. ನಂತರ ತೆಂಗಿನ ಕಾಯಿ ಒಡೆದು ನೀರು ಚೆಲ್ಲುತ್ತಾ ಬೆಂಡು ಕುಕ್ಕೆಗೆ 3 ಸುತ್ತುತಂದು ಉಳಿದ ನೀರನ್ನು ಚೆಂಬುಗೆ ಹೊಯ್ದು ಬೆಂಡು ಕುಕ್ಕೆಯ ಒಳಗಡೆ ಇಡಬೇಕು.ಬಾಳೆಪಂಬೆಯಲ್ಲಿ ತಂಬಿಗೆ ಸಮೇತ ಕೈಯಲ್ಲಿಡಿದು ದೂಪದ ಆರತಿ ಮಾಡಬೇಕು.
ಊರುಗೌಡರ ಒಕ್ಕಣೆಯೊಂದಿಗೆ ವೆಂಕಟರಮಣ ದೇವರ ಹರಕೆಯ ಹಣವನ್ನು ವಧು/ವರನ ತಲೆಯ ಮೇಲೆ ಇರಿಸಿದ್ದನ್ನು ಅಟ್ಟದವರೆಗೆ ಕೊಂಡೊಯ್ದು ಬೆಂಡು ಕುಕ್ಕೆಯನ್ನು ಮನೆಯ ಹಿರಿಯರು ಅಟ್ಟದ ಈಶಾನ್ಯ ಮೂಲೆಯಲ್ಲಿ ಇಡುವರು. (ಈಗ ಅಟ್ಟ ಇಲ್ಲದ ಕಾರಣ ದೇವರ ಕೋಣೆಯಲ್ಲಿಡಬಹುದು), ವಧು-ವರರು ಎಣಿಗೆ ಕೈ ಮುಗಿದು ಹೊಸ ಬರುವರು.
ದಿಬ್ಬಣ ಹೊರಡುವುದು : ನಿಗದಿತ ಸಮಯಕ್ಕೆ ಸರಿಯಾಗಿ ಧಾರಾ ಚಪ್ಪರಕ್ಕೆ ಮದುಮಗನ ಕಡೆಯ ದಿಬ್ಬಣ ಹೊರಡುವುದು. ದಿಬ್ಬಣ ಹೊರಡುವ ಮೊದಲು ಹಸೆಮಣೆಯ ಎದುರು ಕಾಲುದೀಪ ಹಚ್ಚಿ ಮದುಮಗನನ್ನು ಹಸೆಚಾಪೆಯಲ್ಲಿ ಕುಳ್ಳರಿಸಿ ಹಾಲುತುಪ್ಪ ಶಾಸ್ತ್ರ ಮಾಡುವುದು. ನಂತರ ಕುಡಿಯಲು ಹಾಲು ಕೊಡಬೇಕು. ಹಾಲು ಕುಡಿದ ಲೋಟಕ್ಕೆ ಎಲೆ ಅಡಿಕೆ ಹಾಕುವರು. ಇದಾದ ನಂತರ ಸೋದರ ಮಾವ ಊರು ಗೌಡರೆ ಒಕ್ಕಣೆಯೊಂದಿಗೆ ಮುಸುಕಿನ ಬಟ್ಟೆಯ ಬಲದ ಬದಿಯ ತುದಿಗೆ ಪಾವಲಿಯನ್ನು ಕಟ್ಟಬೇಕು. ಊರುಗೌಡರು ಒಕ್ಕಣೆಯೊಂದಿಗೆ ವರರನ್ನು ಎಬ್ಬಿಸುವರು. ನಂತರ ಹಿರಿಯರ ಪಾದ ಮುಟ್ಟಿ ಆಶೀರ್ವಾದ ಪಡೆಯಬೇಕು. ಮನೆಯ ಯಜಮಾನ ವರರನ್ನು ಮೆಟ್ಟಿಲಿಳಿಸಿ ದೇವ ಸಭೆಯ ಮೇಲ್ಕಟ್ಟಿನಡಿಯಲ್ಲಿ ಊರುಗೌಡರಿಗೆ ಹಸ್ತಾಂತರಿಸುವರು. ಬಣ್ಣ ಬಂಗಾರದ ಸಹಿತವಾಗಿ ಮದುವೆ ಕಾರ್ಯವನ್ನು ಸಂಪೂರ್ಣ ಯಶಸ್ವಿಗೊಳಿಸಲು ಅಧಿಕಾರ ವಹಿಸಿ ಕೊಡುತ್ತಾರೆ. ವಾಲಗ ಗರ್ನಾಲುನೊಂದಿಗೆ ದಿಬ್ಬಣ ಹೊರಡುವುದು.
ದಿಬ್ಬಣ ಚಪ್ಪರಕ್ಕೆ ಬಂದು ತಲುಪಿದಾಗ ವಧುವಿನ ಮನೆಯವರು ವಾಲಗದೊಂದಿಗೆ ಸ್ವಾಗತಿಸುತ್ತಾರೆ. ದಿಬ್ಬಣ ಚಪ್ಪರದ ಮುಖ ತೋರಣಕ್ಕೆ ಬಂದಾಗ ಮುತ್ತೈದೆಯರು ಸೋಬಾನೆಯೊಂದಿಗೆ ಕುರ್ದಿ ಆರತಿ ಮಾಡಬೇಕು. ಕಾಲಿಗೆ ನೀರು ಎರೆದು ದೃಷ್ಟಿ ತೆಗೆಯಬೇಕು. (ಆರತಿ ಎತ್ತಿದ ಹರಿವಾಣಕ್ಕೂ ನೀರು ಎರೆದ ತಂಬಿಗೆಗೂ ಎಲೆ, ಅಡಿಕೆ, ಪಾವಲಿಯನ್ನು ಹಾಕಬೇಕು ಮದುಮಗಳ ದಿಬ್ಬಣವಾದರೆ ಮನೆ ಒಳಗೆ ಹಸೆ ಚಾಪೆಯಲ್ಲಿ ಕುಳ್ಳಿರಿಸಬೇಕು. ಮದುಮಗನದಾದರೆ ಚಪ್ಪರದ ಬದಿಯಲ್ಲಿ ಪ್ರತ್ಯೇಕ ಆಸನ ಇರಿಸಿ ಕುಳ್ಳಿರಿಸುವರು.) (ಮದುಮಗನ ಮನೆಯಲ್ಲಿ ಮದುವೆಯಾದರೆ ಮದುಮಗ ಹೊರಗೆ ಹೋಗಿ ಪ್ರತ್ಯೇಕ ಸ್ಥಳದಲ್ಲಿ ಕುಳಿತುಕೊಳ್ಳಬೇಕು.)

ಮದುವೆಗೆ ಮುಂಚೆ ಕಟ್ಟುವ ವೀಳ್ಯ

ಪರಿಕರಗಳು : ಕಾಲು ದೀಪ, ನೆನೆಬತ್ತಿ, ಎಳ್ಳೆಣ್ಣೆ, ಅಗರಬತಿ, ಮಣೆ 2., ಚಾಪೆ 4. ಹರಿವಾಣ 2. ಬೆಳ್ತಿಗೆ ಅಕ್ಕಿ., ತುಂಬೆಹೂ, ತೇದ ಗಂಧ, ತುದಿ ಬಾಳೆಲೆ., ಅಡಿಕೆ1, ವೀಳ್ಯದೆಲೆ 5

ಚೌಕಿ ವೀಳ್ಯ : ಚೌಕಿ ವೀಳ್ಯವನ್ನು ಎತ್ತಿ ಹುಡುಗಿ ಕಡೆಯ ಊರುಗೌಡರಿಗೆ ಒಕ್ಕಣೆಯೊಂದಿಗೆ ಕಾರ್ಯಕ್ರಮ ಸುಧಾರಿಸಿ ಕೊಡಬೇಕೆಂದು ಹೇಳಿ ಮದುಮಗನ ಕಡೆಯ ಊರುಗೌಡರು ನೀಡುವರು. ಹರಿವಾಣವನ್ನು ಎಲ್ಲರೂ ಪ್ರದಕ್ಷಿಣೆ ತಂದು ಹುಡುಗಿ ಕಡೆಯವರು ಮಣೆಯ ಮೇಲಿಡಬೇಕು.

1) ದೇವರ ವೀಳ್ಯ : 9 ಕವಳೆ ವೀಳ್ಯದೆಲೆ, 9 ಅಡಿಕೆ ಇಟ್ಟು ಒಕ್ಕಣೆಯೊಂದಿಗೆ... ವೀಳ್ಯ ಕೊಡಬೇಕು. (ಒಕ್ಕಣೆ ಹಿಂದೆ ವಿವರಿಸಿದೆ)

2) ತೆರವಿನ ವೀಳ್ಯ : 7 ಕವಳೆ ವೀಳ್ಯದೆಲೆ ಸ್ವಲ್ಪ ಅಡಿಕೆ ಹೋಳುವಿನೊಂದಿಗೆ 10.50 ರೂಪಾಯಿಯನ್ನು ಚೌಕಿಯಲ್ಲಿ ಕುಳಿತವರ ಸಮಕ್ಷಮದಲ್ಲಿ ಹರಿವಾಣದಲ್ಲಿಟ್ಟು ಹುಡುಗನ ಕಡೆಯ ಊರುಗೌಡರ ಒಕ್ಕಣೆಯೊಂದಿಗೆ ಹುಡುಗಿ ಕಡೆಯ ಊರುಗೌಡರಿಗೆ ಹಸ್ತಾಂತರಿಸುತ್ತಾರೆ. ಹುಡುಗಿ ಕಡೆಯ ಊರುಗೌಡರು 5 ವೀಳ್ಯದೆಲೆ 1 ಅಡಿಕೆ, 10.50 ರೂಪಾಯಿಯನ್ನು ಮನೆಯ ಯಜಮಾನನಿಗೆ ಕೊಡುತ್ತಾರೆ. ಮನೆಯ ಯಜಮಾನ ಈ 10.50 ರೂಪಾಯಿಯನ್ನು ತಲೆಯ ರುಮಾಲಿನಲ್ಲಿ ಮದುವೆ ಕಾರ್ಯ ಮುಗಿಯುವವರೆಗೆ ಕಟ್ಟಿಕೊಂಡಿರುತ್ತಾರೆ.

ತೆರವಿನ ಹಣದ ವಿವರಣೆ :
ಅ) ಶೃಂಗೇರಿ ಮಠಕ್ಕೆ :-   ರೂ 6.25
ಆ) ಎಲೆ ಅಡಿಕೆ ಬಾಬ್ತು : ರೂ 0.50
ಇ) ಹಾಲೆ ಮರದ ಪಾದ ಕಂಬ ಬಾಬ್ತು : ರೂ 1.25
ಈ) ಆರತಿಗಳ ಬಾಬ್ತು : ರೂ 1.25
ಉ) ಸ್ಥಳ ಕಾಣಿಕೆ : ರೂ 1.25
ಒಟ್ಟು : ರೂ 10.50

3) ಬಣ್ಣ ಬಂಗಾರ ವೀಳ್ಯ : ಬಣ್ಣ ಬಂಗಾರಕ್ಕೆ ಇರಿಸುವ ಎಲ್ಲಾ ವಸ್ತುಗಳನ್ನು ಚೌಕಿಯಲ್ಲಿರುವವರೆಲ್ಲರೂ ಪರೀಕ್ಷಿಸಿ ದೊಡ್ಡ ಹರಿವಾಣದಲ್ಲಿಡಬೇಕು. (5 ವೀಳ್ಯದೆಲೆ, 1 ಅಡಿಕೆ, ಧಾರೆಸೀರೆ, ರವಿಕೆ, ಮುಸುಕಿನ ಬಟ್ಟೆ, ಕರವಸ್ತ್ರ, ಓಲೆ, ಕಡಗ, ಮೂಗುತಿ, ಕಾಲುಂಗುರ, ಡಾಬು, ಪಟ್ಟೆ ಬಾಸಿಂಗ, ಕುಂಕುಮ ಕರಡಿಗೆ, ಕೆಂಪು ಹಾಗೂ ಹಸಿರು ಬಳೆ, ಕನ್ನಡಿ, ಬಾಚಣಿಗೆ, ತುಂಬೆ ಹೂವು, ಮಲ್ಲಿಗೆ ಹೂವು. ಹಿಂಗಾರ ಇತ್ಯಾದಿ) ಇನ್ನೊಂದು ಹರಿವಾಣದಲ್ಲಿ 5 ಕವಳೆ ವೀಳ್ಯದೆಲೆ, 5 ಅಡಿಕೆ, ಸ್ವಲ್ಪ ಅಡಿಕೆ ಹೋಳು ಇರಬೇಕು. ಇತ್ತಂಡದ ಐದು ಜನ ಮುತ್ತೈದೆಯರು ಹೆಗಲಿಗೆ ಶಾಲು ಹಾಕಿ (ಬಿಳಿಯ ವಸ್ತ್ರ) ಊರುಗೌಡರ ಒಕ್ಕಣೆಯೊಂದಿಗೆ ಹರಿವಾಣಕ್ಕೆ ಕೈಮುಗಿಯುತ್ತಾ ಹೆಣ್ಣಿನ ಕಡೆಯವರು 3 ಸಲ ಗಂಡಿನ ಕಡೆಯವರು 3 ಸಲ ಅದಲು-ಬದಲು ಮಾಡಿಕೊಳ್ಳಬೇಕು. ಇದಾದ ನಂತರ ಗಂಡಿನ ಕಡೆಯವರು ಬಣ್ಣ ಬಂಗಾರ ಸಹಿತ ಹೆಣ್ಣಿನ ಕಡೆಯ ಮುತ್ತೈದೆಯರೊಂದಿಗೆ ಮದುಮಗಳನ್ನು ಶೃಂಗರಿಸಲು ತೆರಳುವರು
4) ದೇಶಮಾನ್ಯ ವೀಳ್ಯ : ಹತ್ತು ಕುಟುಂಬ ಹದಿನೆಂಟು ಗೋತ್ರದ ಬಂಧುಗಳಿಗೆ ಕೊಡುವ ಮಯ್ಯಾದೆ (ಸಮಸ್ತ ಬಂಧುಗಳಿಗೆ) ಹರಿವಾಣ ತುಂಬ ವೀಳ್ಯದೆಲೆ ಕವಳೆ, ಸಾಕಷ್ಟು ಅಡಿಕೆ ಮತ್ತು ಅಡಿಕೆ ಹೋಳು ಇರಬೇಕು. ಒಕ್ಕಣೆಯೊಂದಿಗೆ ದೇಶಮಾನ್ಯ ವೀಳ್ಯ ಕೊಡುತ್ತೇವೆಂದು ಹೇಳಿ ಕೊಡಬೇಕು. (ಯಾರಿಗಾದರೂ ಬಿಟ್ಟು ಹೋಗಿದ್ದರೆ ಈ ಬಗ್ಗೆ ಕೊಡುವ ವೀಳ್ಯ)
ವಧುವಿನ ಕಡೆಯವರು ಶೃಂಗಾರ ಆಗಿದೆಯೆಂಬುದನ್ನು ಚೌಕಿಯಲ್ಲಿ ಕುಳಿತವರಿಗೆ ತಿಳಿಸಬೇಕು. ನಂತರ ಚೌಕಿಯಲ್ಲಿ ಕುಳಿತ ಊರುಗೌಡರು ಸ್ಥಳ ಬದಲಾವಣೆ ಮಾಡಿಕೊಳ್ಳಬೇಕು. ಕೊನೆಗೆ ಚೌಕಿ ವೀಳ್ಯದೊಂದಿಗೆ ವೀಳ್ಯ ಶಾಸ್ತ್ರ ಕ್ರಮ ಮುಗಿಯುವುದು. ವಧು/ವರನಿಗೆ ಶೃಂಗಾರದ ನಂತರ ಊರುಗೌಡರು ಪಟ್ಟ-ಬಾಸಿಂಗವನ್ನು ಕಟ್ಟುವರು. ತದ ನಂತರ ಧಾರಾ ಮುಹೂರ್ತಕ್ಕೆ ಮುಂಚಿತವಾಗಿ ವಧು/ವರನನ್ನು ಸೋದರಮಾವ ಧಾರಾ ಮಂಟಪಕ್ಕೆ ಕರೆತರುವರು.
ಧಾರಾಕಾರ್ಯ
ಪರಿಕರಗಳು : ಕಾಲುದೀಪ, ಮಣೆ 2, ತಂಬಿಗೆ ನೀರು, ತೆರೆ ಹಿಡಿಯಲು ಶುಭ್ರ ಬಟ್ಟೆ, 10 ವೀಳ್ಯದೆಲೆ, 2 ಅಡಿಕೆ, ಕಂಚಿನಕ್ಕಿ, ಕೊಂಬು ಗಿಂಡಿ, ಹಿಂಗಾರದ ಮಾಲೆ 2. ದಾರೆ ಎರೆಯಲು ಕಂಚಿನ ಬಟ್ಟಲು 1, ತಾಳಿ ಕಂಠಿ,
ಕಂಚಿಮೆಯೊಂದಿಗೆ ಸೋದರ ಮಾವ ಮದುಮಗಳನ್ನು ಧಾರಾಮಂಟಪಕ್ಕೆ ಮೊದಲು ಕರೆತರಬೇಕು. (ಧಾರಾಮಂಟಪಕ್ಕೆ ಮದುಮಗ ಯಾ ಮದುಮಗಳನ್ನು ಕರೆದುಕೊಂಡು ಬರುವಾಗ ಮಡಿವಾಳರು ಮಡಿ ಬಟ್ಟೆ ಹಾಕುವ ಕ್ರಮವಿದೆ.) ಹಾಗೇ ಬರುವ ಮೊದಲು ಸೋದರ ಕಡೆಯ ಬಾವ ಮೈದುನರು ಶುಭ್ರ ಬಟ್ಟೆಯಿಂದ ತೆರೆಹಿಡಿಯಬೇಕು. ಆನಂತರ ಮದುಮಗನನ್ನು ಕರೆದುಕೊಂಡು ಬರಬೇಕು. ಮದುಮಗ ಮತ್ತು ಮದುಮಗಳು ಧಾರಾ ಮಣೆಯ ಮೇಲೆ ನಿಂತಿರಬೇಕು. ಇತ್ತಂಡದ 5 ಜನ ಮುತ್ತೈದೆಯರು ಕಂಚಿಮೆಗೆ ಅಕ್ಕಿ ಹಾಕಿ ಕೈ ಮುಗಿಯಬೇಕು. (ಹುಡುಗಿ ಕಡೆಯ ಕಂಚಿಮೆಗೆ ಹುಡುಗನ ಕಡೆಯವರು, ಹುಡುಗನ ಕಡೆಯ ಕಂಚಿಮೆಗೆ ಹುಡುಗಿ ಕಡೆಯವರು ಪರಸ್ಪರ ಕೈ ಮುಗಿಯುವರು) ಇತ್ತಂಡದ ಊರುಗೌಡರುಗಳು ಕೊಂಬುಗಿಂಡಿಯಲ್ಲಿದ್ದ ಹಾಲನ್ನು ವರನ ಕಡೆಯ ಕೊಂಬು ಗಿಂಡಿಯಿಂದ ಹಾಗೂ ವಧುವಿನ ಕಡೆಯ ಕೊಂಬು ಗಿಂಡಿಯಿಂದ ಮೂರು ಮೂರು  ಸಲ ಹೊಯ್ದುಕೊಳ್ಳಬೇಕು. (ಆದಲು-ಬದಲು ಮಾಡಿಕೊಳ್ಳುವುದು) ಕಂಚಿನಕ್ಕಿ (ಕಂಚಮೆ) ಮೇಲಿದ್ದ ತೆಂಗಿನ ಕಾಯಿಯನ್ನು ತೆಗೆದು ಅದನ್ನು ಕೂಡ ಅದಲು ಬದಲು ಮಾಡಿಕೊಳ್ಳಬೇಕು. ನಂತರ ಧಾರಾ  ಸಮಯಕ್ಕೆ ಸರಿಯಾಗಿ ವಧುವಿನ ತಂದೆ ಇತ್ತಂಡದ ಕೊಂಬುಗಿಂಡಿಯಲ್ಲಿದ್ದ ಹಾಲನ್ನು ಧಾರೆ ಎರೆಯುವ ತಂಬಿಗೆಗೆ ಹಾಕಿಸಿಕೊಂಡು ಕಾಳಿಕಂಠಿಯನ್ನು ಇಟ್ಟು ಸಭೆಯಲ್ಲಿ ಹೋಗುವರು. ಇದನ್ನು ಸಭಿಕರೆಲ್ಲರೂ ಶುಭ ಹಾರೈಕೆಯೊಂದಿಗೆ ಮುಟ್ಟಿ ನಮಸ್ಕರಿಸುವರು. ಊರುಗೌಡರ ಒಕ್ಕಣೆಯೊಂದಿಗೆ (ಒಕ್ಕಣೆ 3 ಸಲ) ಮೊದಲು ಮದುಮಗಳು ಹಿಂಗಾರದ ಮಾಲೆಯನ್ನು ಮಧುಮಗನ ಕೊರಳಿಗೆ ಹಾಕಬೇಕು. ಮದುಮಗ ಕೂಡ ಹಾಗೇನೆ ಅವಳ ಕೊರಳಿಗೆ ಹಾಕುವನು. ಈ ಎಲ್ಲಾ ಕಾರ್ಯಗಳು  ಆದ ನಂತರ ವರನ ತಂದೆ ಧಾರಾ ಬಟ್ಟಲಿನೊಂದಿಗೆ (ಕಂಚಿನಬಟ್ಟಲು, ತಯಾರಿರಬೇಕು. ವರನ ಕೈಯಲ್ಲಿ 5 ವೀಳ್ಯದೆಲೆ, 1 ಅಡಿಕೆ ವಧುವಿನ ಕೈಯಲ್ಲಿ ಕೂಡ ಅದೇ ರೀತಿ ಕೊಟ್ಟು ವರನ ಹಸ್ತದ ಮೇಲೆ ವಧುವಿನ ಹಸ್ತವನ್ನಿಟ್ಟು ಊರುಗೌಡರು ಹತ್ತು ಕುಟುಂಬ ಹದಿನೆಂಟು ಗೋತ್ರದ ಬಂಧು-ಬಾಂಧವರು, ನೆಂಟರಿಷ್ಟರು, ಗುರುಮನೆ, ಕಟ್ಟೆಮನೆ, ಸೀಮೆಮನೆ, ಮಾಗಣಮನೆ ಗೋತ್ರದ .... ಹೆಸರಿನ ವರನಿಗೆ..... ಗೋತ್ರದ ಹೆಸರಿನ ವಧುವಿನ ಕೈ ಮುಟ್ಟಿ ಕನ್ಯಾಧಾರೆ ಎರೆದು ಕೊಡುತ್ತೇವೆಂದು 3 ಸಲ ಹೇಳಬೇಕು (ವಧುವಿನ ತಂದೆ ಧಾರೆಯೆರೆಯುವರು ಅಥವಾ ಅವರು ಇಲ್ಲದಿದ್ದ ಪಕ್ಷದಲ್ಲಿ ಚಿಕ್ಕಪ್ಪ ಅಥವಾ ಸೋದರಮಾವ). ಸಭಿಕರು ಒಳ್ಳೆ ಕಾರ್ಯಂತ  ಹೇಳಬೇಕು.
ಕು. ಮೊದಲು ಹುಡುಗಿ ಕೈ ಮೇಲೆ, 2ನೇ ಸಲ ಹುಡುಗಿ ಕೈ ಕೆಳಗಿರಬೇಕು. 3ನೇ ಸಲ ಹುಡುಗಿ ಕೈ ಮೇಲಿಟ್ಟು ಧಾರೆ ನೀರಿನೊಂದಿಗೆ ಎಲೆ ಅಡಿಕೆಯನ್ನು ಮದುಮಕ್ಕಳು ಧಾರಾ ಬಟ್ಟಲಿಗೆ ಬಿಡಬೇಕು. (ಧಾರೆ ನೀರನ್ನು ಫಲ ಬರುವ ಮರದ ಬುಡಕ್ಕೆ ವರನ ಕಡೆಯವರು ಹಾಕುವರು) ನಂತರ ಊರುಗೌಡರ ಒಕ್ಕಣೆಯೊಂದಿಗೆ ಮದುಮಗ-ಮದುಮಗಳ ಕುತ್ತಿಗೆಗೆ ಮಾಂಗಲ್ಯ ಕಟ್ಟಬೇಕು. (ಒಕ್ಕಣೆ 3 ಸಲ ಹೇಳುವುದು). ವರನ ಕಡೆಯ ಕಂಚಿನಕ್ಕೆ ಬಟ್ಟಲಿನಲ್ಲಿಟ್ಟ (ಕಂಚಿಮೆ) ಕುಂಕುಮ ಕರಡಿಗೆಯಿಂದ ಕುಂಕುಮ ತೆಗೆದು ವಧುವಿನ ಹಣೆಗೆ ವರನು ತಿಲಕವಿಡಬೇಕು. ಆನಂತರ ವರನ ಶಲ್ಯಕ್ಕೆ ವಧುವಿನ ಸೀರೆ ಸೆರಗನ್ನು ಕಟ್ಟಬೇಕು. ವಧುವಿನ ತಂದೆ ವರನ ಕೈ ಹಿಡಿದು ಧಾರಾ ಮಂಟಪದಲ್ಲಿ 3 ಸುತ್ತು ಬರಬೇಕು. (ವಧುವಿನ ತಂದೆತಾಯಿ, ವರನ ತಂದೆತಾಯಿ ಧಾರಾ ಮಂಟಪಕ್ಕೆ ಇತ್ತಂಡದ ಕಂಚಿಮೆ ಸಹಿತ ಸುತ್ತು ಬರಬೇಕು.) ಕಲ್ಯಾಣಮಂಟಪದಲ್ಲಿ ಮದುವೆಯಾದರೆ ವಧುವಿನ ಕೋಣೆಗೆ ವಧು-ವರನನ್ನು ಕರೆದುಕೊಂಡು ಹೋಗಬೇಕು. ವಧುವಿನ ಮನೆಯಲ್ಲಿ ಮದುವೆಯಾದರೆ ವಧುವಿನ ಮನೆಯೊಳಗೆ ಕರಕೊಂಡು ಹೋಗುವರು.
ವಧುವಿನ ಮನೆಗೆ ಗೃಹ ಪ್ರವೇಶ:
ಧಾರಾಕಾರ್ಯ ಮುಗಿದ ನಂತರ ವಧು-ವರರನ್ನು ತಾಯಿ ತಂದೆಯವರು ಬಲ ಕಾಲು ಮುಂದಿಟ್ಟು ಒಳ ಕರೆದುಕೊಂಡು ಹೋಗಿ ಹಸೆ ಚಾಪೆಯ ಹತ್ತಿರ ನಿಲ್ಲಿಸುವರು. ಊರುಗೌಡರು ಒಕ್ಕಣೆಯೊಂದಿಗೆ ಹಸೆ ಚಾಪೆಯಲ್ಲಿ ಕುಳ್ಳಿರಿಸುವರು. ಕನಿಷ್ಠ 5 ಜನ ಮುತ್ತೈದೆಯರು ವಧು-ವರರಿಗೆ ಹಾಲು ತುಪ್ಪ ಕುಡಿಸುವರು. ತದನಂತರ ವಧುವಿನ ತಾಯಿ ಅಥವಾ ಮನೆಯ ಹಿರಿಯ ಮುತ್ತೈದೆಯರು ಕುಡಿಯಲು ಹಾಲು ಕೊಡುವರು. ಹಾಲು ಕೊಟ್ಟ ಪಾತ್ರೆಗೆ 5 ವೀಳ್ಯದೆಲೆ. 1 ಅಡಿಕೆಯೊಂದಿಗೆ ಮರ್ಯಾದೆ ಹಾಕಿ ಹಿಂತಿರುಗಿಸುವರು. ಒಕ್ಕಣೆಯೊಂದಿಗೆ ವಧು-ವರರನ್ನು ಊರುಗೌಡರು ಹಸೆ ಚಾಪೆಯಿಂದ ಏಳಿಸುವರು. ವಧು-ವರರು ಹಿರಿಯರ ಪಾದ ಮುಟ್ಟಿ ಆಶೀರ್ವಾದ ಪಡೆಯುವರು.
ಶೇಷೋಪಚಾರ: 
ಪರಿಕರಗಳು : ಕಾಲುದೀಪ 1, ನೆನೆಬತ್ತಿ, ಎಳ್ಳೆಣ್ಣೆ, ಹರಿವಾಣ 2, ಬೆಳ್ತಿಗೆ ಅಕ್ಕಿ, ವೀಳ್ಯದೆಲೆ 20, ಅಡಿಕೆ 4, ತಂಬಿಗೆ ನೀರು.(ಶೇಷೋಪಚಾರಕ್ಕೆ ಬೆಳ್ತಿಗೆ ಅಕ್ಕಿಯನ್ನು ಉಪಯೋಗಿಸಬೇಕು)
ಈಗ ವಧು-ವರರು ವಸ್ತ್ರ ಬದಲಿಸಿ ಶೇಷೋಪಚಾರಕ್ಕೆ ಅಡೋಳಿಯ ಜೊತೆ ಮೇಲ್ಕಟ್ಟಿನಡಿಯಲ್ಲಿ ಬರಬೇಕು. ಹಾಕಿದ ಚಪ್ಪರದ ಮೇಲ್ಕಟ್ಟಿನಡಿಯಲ್ಲಿ ಪೂರ್ವಾಭಿಮುಖವಾಗಿ ಇರಿಸಿದ ಆಸನಗಳಿಗೆ ಮಡಿವಾಳನು ಮೇಲ್ವಸ್ತ್ರವನ್ನು ಹೊದಿಸುತ್ತಾರೆ. ಆಸನದ ಎದುರು ಬಲಬದಿಯಲ್ಲಿ ಸರಮಾಲೆ ದೀಪ ಹಚ್ಚಿಟ್ಟಿರಬೇಕು. ಹಾಗೇನೆ ಆಸನದ ಮುಂಭಾಗದಲ್ಲಿ ಮಣೆಗಳ ಮೇಲೆ ಒಂದು ಹರಿವಾಣದಲ್ಲಿ ಬೆಳ್ಳಿಗೆ ಅಕ್ಕಿ ಹಾಗೂ 5 ವೀಳ್ಯದೆಲೆ, 1 ಅಡಿಕೆ (ಶೇಷೆ ಹಾಕಲು) ಇನ್ನೊಂದು ಹರಿವಾಣದಲ್ಲಿ ಒಂದು ಮುಷ್ಟಿ ಬೆಳ್ತಿಗೆ ಅಕ್ಕಿ (ನಗದು ರೂಪದ ಉಡುಗೊರೆ ಇಡಲು) ಹಾಗೂ 5 ವೀಳ್ಯದೆಲೆ. 1 ಅಡಿಕೆಯನ್ನು ಜೋಡಿಸಿಟ್ಟಿರಬೇಕು. ಒಕ್ಕಣೆಯೊಂದಿಗೆ – ಊರುಗೌಡರು ಶೇಷೋಪಚಾರಕ್ಕೆ ಕುಳ್ಳಿರಿಸಿ ವಧು-ವರರ ಕೈಯಲ್ಲಿ 5 ವೀಳ್ಯದೆಲೆ 1 ಅಡಿಕೆಯನ್ನು ಕೊಟ್ಟು ಶೇಷೆ ಹಾಕುವರು. ಮನೆಯ ಯಜಮಾನ ನೆಂಟರಿಷ್ಟರನ್ನು ಒಂದು ತಂಬಿಗೆ ನೀರಿನೊಂದಿಗೆ ಶೇಷೋಪಚಾರಕ್ಕೆ ಆಹ್ವಾನಿಸುತ್ತಾರೆ.

ವಧುವಿನ ತಾಯಿ-ತಂದೆ ಮೊದಲು ಶೇಷೆ (ಅಕ್ಷತೆ) ಹಾಕಿ ಆಶೀರ್ವದಿಸುವರು.ನಂತರ ವರನ ತಂದೆ ತಾಯಿ, ತದನಂತರ ನೆಂಟರಿಷ್ಠರು ಶೇಷೆ ಹಾಕಿ ಆಶೀರ್ವಾದ ಮಾಡುವರು ಹಾಗೂ ಉಡುಗೊರೆ ಇದ್ದಲ್ಲಿ ವಧು-ವರರಿಗೆ ನೀಡಿ, ಅಲ್ಲದೇ ನಗದು ರೂಪದ ಉಡುಗೊರೆಯನ್ನು ಎದುರು ಇರಿಸಿದ ಬಟ್ಟಲಿಗೆ ಹಾಕುವರು.
ಶೇಷೋಪಚಾರ ಮುಗಿದ ತಕ್ಷಣ ಕನಿಷ್ಠ 5 ಜನ ಮುತ್ತೈದೆಯರು ಸೋಬಾನೆಯೊಂದಿಗೆ ಶೇಷೋಪಚಾರಕ್ಕೆ ಕುಳಿತಲ್ಲಿಯೇ ಶೇಷೆಗೆ ಉಪಯೋಗಿಸಿದ ಅಕ್ಕಿಯಲ್ಲಿ ಆರತಿ (5 ನೆನಬತ್ತಿ ಮಾವಿನ ಸೊಪ್ಪಲ್ಲಿಟ್ಟು) ಮಾಡಿ ಹರಿವಾಣದಲ್ಲಿದ್ದ ಅಕ್ಕಿಯನ್ನು ಪೂರ್ತಿ ಮುಗಿಸಬೇಕು. ಮದುಮಕ್ಕಳ ಕೈಯಲ್ಲಿದ್ದ ವೀಳ್ಯದೆಲೆ, ಅಡಿಕೆಯನ್ನು ಆರತಿ ತಟ್ಟೆಗೆ ಹಾಕುವರು.
(ಶೇಷೋಪಚಾರ ಹಾಕುವ ಸಂದರ್ಭದಲ್ಲಿ ಪಾದರಕ್ಷೆಗಳನ್ನು ನಿಷೇದಿಸಬೇಕು)
ಅನಂತರ ಊರುಗೌಡರ ಒಕ್ಕಣೆಯೊಂದಿಗೆ ವಧು-ವರರನ್ನು ಶೇಷೋಪಚಾರದಿಂದ ಏಳಿಸುವರು. ಹರಿವಾಣದಲ್ಲಿರುವ ನಗದು ಉಡುಗೊರೆಯನ್ನು ಊರುಗೌಡರು ಒಕ್ಕಣೆಯೊಂದಿಗೆ ಮನೆಯ ಯಜಮಾನನ ತಲೆ ಮೇಲೆ ಇರಿಸುವರು. (ಹರಿವಾಣವನ್ನು ಬಿಳಿ ವಸ್ತ್ರದಿಂದ ಕಟ್ಟುವುದು). ಪಟ್ಟಬಾಸಿಂಗ ಬಿಚ್ಚಿದ ನಂತರ ವಧು-ವರರು ಊರುಗೌಡರು, ಅಡೋಳಿ, ಕಂಚಿಮೆ ಇವರೆಲ್ಲ ಒಟ್ಟಾಗಿ ಕುಳಿತು ಊಟ ಮಾಡಬೇಕು.

ಹೆಣ್ಣು ಇಳಿಸಿ ಕೊಡುವ ಕ್ರಮ : ವಧುವಿಗೆ ಕೊಡುವ ಬಳುವಳಿಯೊಂದಿಗೆ ತಾಯಿ- ತಂದೆಯರು ವಧು-ವರರು ಹಾಗೂ ಕುಟುಂಬಸ್ಥರು ಮೇಲ್ಕಟ್ಟಿನಡಿಯಲ್ಲಿ ಪೂರ್ವಾಭಿಮುಖವಾಗಿ ನಿಲ್ಲುವರು. ವಧುವಿನ ಬಲ ಹೆಗಲಲ್ಲಿ ಧಾರಾ ಸೀರೆ ಇರಬೇಕು. ಪರಿಣಿತರು ಹೆಣ್ಣು ಇಳಿಸಿ ಕೊಡುವ ಸೋಬಾನೆಯನ್ನು ಹೇಳುವರು. ಒಕ್ಕಣೆಯೊಂದಿಗೆ ವಧುವಿನ ತಂದೆ ವಧು-ವರರ ಕೈಯೆತ್ತಿ ವರನ ತಂದೆ ಅಥವಾ ಊರುಗೌಡರಿಗೆ ವಧು- ವರರನ್ನು ಒಪ್ಪಿಸುವರು. ತದನಂತರ ವಧುವರರು ವಧುವಿನ ತಾಯಿ-ತಂದೆಗೆ ಸೀರೆ ಹಾಗೂ ದೋತಿಯನ್ನು ಉಡುಗೊರೆಯಾಗಿ ನೀಡುವರು. (ಉಡುಗೊರೆಗಳನ್ನು ವರನ ಮನೆಯವರೇ ವ್ಯವಸ್ಥೆ ಮಾಡುವುದು. ವಧು ತಾಯಿಗೂ ವರನು ಮಾವನಿಗೂ ಕೊಡಬೇಕು). ನಂತರ ವಧು-ವರರು ತಾಯಿ-ತಂದೆ ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುವರು.

ಸೇರು ತುಪ್ಪ ತರುವ ಕ್ರಮ : ವಧು-ವರರೊಂದಿಗೆ ವರನ ಕಡೆಯ ನೆಂಟರಿಷ್ಟರು ಚಪ್ಪರದಡಿಯಿಂದ ಹೊರಗೆ ಬರುವರು. [ಚಪ್ಪರದ ಹೊರಗೆ ವಧು-ವರರು ಹಾಗೂ ನೆಂಟರಿಷ್ಟರಿಗೆ ಆಸನದ ವ್ಯವಸ್ಥೆ ಮಾಡಿರುತ್ತಾರೆ.] ಇಲ್ಲಿ ವಿಶ್ರಮಿಸಿದ ನಂತರ ನೆಂಟರಿಷ್ಟರು, ವಧು-ವರರು ವಧುವಿನ ಬಲಕೈಯಲ್ಲಿ ಸೇರು ತುಪ್ಪ, ಎಡ ಕೈಯಲ್ಲಿ ಒಗ್ಗಿ ಹಾಕಿದ ಜೋಡಿ ತೆಂಗಿನಕಾಯಿ, ಬಲ ಹೆಗಲಲ್ಲಿ ಧಾರೆ ಸೀರೆಯೊಂದಿಗೆ ಚಪ್ಪರದ ಮೂಡಣ ತೋರಣದಡಿಗೆ ಬರುವರು. ಇವರನ್ನು ವಧುವಿನ ಕಡೆಯ ಮುತ್ತೈದೆಯರು ಕುರ್ದಿ ಆರತಿ ಎತ್ತಿ ಎಡಕೈಯಿಂದ ವಧು-ವರರ ಹಣೆಗೆ ಕುರ್ದಿ ಬೊಟ್ಟನ್ನಿಟ್ಟು ಕಾಲಿನ ಪಕ್ಕಕ್ಕೆ ಕುರ್ದಿ ನೀರನ್ನು ಚೆಲ್ಲುವರು. ಈ ಹರಿವಾಣಕ್ಕೆ ವರನು ಹಣದೊಂದಿಗೆ 5 ವೀಳ್ಯದೆಲೆ, 1 ಅಡಿಕೆಯೊಂದಿಗೆ ಗೌರವ ಸೂಚಿಸುವರು. ಈಗ ಹುಡುಗಿಯ ಕಿರಿಯ ಸಹೋದರ ಅಥವಾ ಕಿರಿಯರು ಯಾರಾದರೂ ಒಂದು ತಂಬಿಗೆ ನೀರನ್ನು ಕಾಲಿಗೆ ಹೊಯ್ಯುವರು. ಈ ತಂಬಿಗೆಗೂ ವರನು ಹಣದೊಂದಿಗೆ 5 ವೀಳ್ಯದೆಲೆ ಒಂದು ಅಡಿಕೆಯೊಂದಿಗೆ ಗೌರವ ನೀಡಬೇಕು. ವಧುವಿನ ಮನೆಯ ಹಿರಿಯ ಮುತ್ತೈದೆಯರು ವಧು-ವರರನ್ನು ಕೈಹಿಡಿದು ಪದ್ಧತಿಯಂತೆ ಮನೆ ಒಳಗೆ ಕರೆದುಕೊಂಡು ಹೋಗಿ, ಹಸೆ ಚಾಪೆಯ ಪಕ್ಕ ಇರಿಸಿದ ಮಣೆಯ ಮೇಲೆ ಉರಿಯುತ್ತಿರುವ ನಂದಾದೀಪದ ಎಡಬಲದಲ್ಲಿ ತುಪ್ಪದ ತಂಬಿಗೆ ಹಾಗೂ ತೆಂಗಿನಕಾಯಿ ಇರಿಸುವರು. ಒಕ್ಕಣೆಯೊಂದಿಗೆ ಊರು ಗೌಡರು ಹಸೆ ಚಾಪೆಯಲ್ಲಿ ಕುಳ್ಳಿರಿಸಿದ ನಂತರ ವಧು-ವರರ ಕೈಗೆ 5 ಎಲೆ, 1 ಅಡಿಕೆ ಕೊಡಬೇಕು. ವಧು-ವರರಿಗೆ ಕನಿಷ್ಟ 5 ಜನ ಮುತ್ತದೆಯರು ಹಾಲು ತುಪ್ಪ ಕುಡಿಸಿದ ನಂತರ ವಧುವಿನ ತಾಯಿ ಅಥವಾ ಮನೆಯ ಹಿರಿಯ ಮುತ್ತೈದೆ ಅವರಿಗೆ ಕುಡಿಯಲು ಹಾಲನ್ನು ನೀಡುವರು. ಈ ಪಾತ್ರೆಗೆ ವಧು- ವರರು 5 ವೀಳ್ಯದೆಲೆ ಅಡಿಕೆ ಹಾಕಿ ಗೌರವದೊಂದಿಗೆ ಹಿಂತಿರುಗಿಸುವರು. ಕುಳಿತಲ್ಲಿಂದಲೇ ಪಾದ ಮುಟ್ಟಿ ನಮಸ್ಕರಿಸುವರು. ಈಗ ಊರುಗೌಡರ ಒಕ್ಕಣೆಯೊಂದಿಗೆ ಎಬ್ಬಿಸುವರು. ನಂತರ ವಧುವಿನ ಕಡೆಯ ಊರುಗೌಡರು ವರನ ಕಡೆಯ ಊರುಗೌಡರಿಗೆ ಮನೆಯ ಯಜಮನರಿಂದ ನೀರು ಕೊಡಿಸಿ ತುಪ್ಪದ ತಂಬಿಗೆ ಬಿಚ್ಚಲು ಕರೆಯುವರು. ಇಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಕಟ್ಟಿದ ತುಪ್ಪದ ತಂಬಿಗೆಯನ್ನು ಬಿಚ್ಚುವರು. (ತಂಬಿಗೆ ಕಟ್ಟಿದ ರೀತಿ ತಪ್ಪಿದಲ್ಲಿ ತಪ್ಪು ಕೇಳಿಸುತ್ತಾರೆ) ಬಿಚ್ಚಿದ ತುಪ್ಪವನ್ನು ವಧು/ವರರು ನಂದಾದೀಪಕ್ಕೆ ಹಾಕಿ ಕೈ ಮುಗಿಯುವರು.ಉಳಿದ ತುಪ್ಪವನ್ನು ಮನೆಯ ಒಡತಿ ಖಾಲಿ ಮಾಡಿ ಹೊದುಳು ಬಾಳೆಹಣ್ಣು, ಬೆಲ್ಲ, ವೀಳ್ಯದೆಲೆ, 1ಅಡಿಕೆ ಹಾಕಿ ಯಥಾ ಪ್ರಕಾರ ತಂಬಿಗೆಯ ಬಾಯಿ ಕಟ್ಟಿ ಮಣೆಯ ಮೇಲಿಡುತ್ತಾರೆ. ಹೊರಡುವ ಮೊದಲು ವರನ ಮನೆಯಲ್ಲಿ ನಡೆಯುವ ನಾಗೋಳಿಶಾಸ್ತ್ರಕ್ಕೆ ವಧುವಿನ ಕಡೆಯ ನಂಟರಿಷ್ಟರಿಗೆ ವರನ ಕಡೆಯವರು ಹರಿವಾಣದಲ್ಲಿ ಸೂಡಿ ವೀಳ್ಯದೆಲೆ, 10 ಅಡಿಕೆ ಇಟ್ಟು ಹೇಳಿಕೆ ಕೊಡಬೇಕು. ವಧು-ವರರು ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ, ತಾಯಿ ಎತ್ತಿ ಕೊಟ್ಟ ತುಪ್ಪದ ತಂಬಿಗೆಯನ್ನು ಬಲಕೈಯಲ್ಲಿ ಪಡಕೊಂಡು ಹೆಗಲಲ್ಲಿ ಧಾರೆ ಸೀರೆ ಹಾಕಿಕೊಂಡು ವರನೊಂದಿಗೆ ಮನೆಯಿಂದ ಹೊರಡುವರು. ಮನೆಯವರು ಸೂಚಿಸಿದ ಕುರುಂಟುವನ್ನು ಊರುಗೌಡರು ವರನ ಕಡೆಯ ಊರುಗೌಡರಿಗೆ ಹಸ್ತಾಂತರಿಸುವರು. ಈಗ ಊರುಗೌಡರ ನೇತೃತ್ವದಲ್ಲಿ ವರನ ದಿಬ್ಬಣ ಹಿಂತಿರುಗುವುದು (ದಿಬ್ಬಣ ಹೊರಡುವಾಗ ತಿಂಡಿ ತಿನಿಸುಗಳಿರುವ ಬುತ್ತಿ ಕೊಟ್ಟು ಕಳಿಸುವರು)

ಕುರುಂಟು (ಸಂಗಾತಿ) ಕಳುಹಿಸುವುದು
ವರನ ಮನೆಗೆ ದಿಬ್ಬಣ ಹೊರಡುವಾಗ ವಧುವಿನೊಂದಿಗೆ ಕಳುಹಿಸಿ ಕೊಡುವ ಪ್ರಾಯದ ಹೆಂಗಸು ಅಥವಾ ಸಣ್ಣ ವಯಸ್ಸಿನ ಹುಡುಗಿಯನ್ನು ಕುರುಂಟು ಎಂದು ಕರೆಯುವರು.

ವರನ ಮನೆ ಪ್ರವೇಶ :
ವಧುವಿನ ಮನೆಯಿಂದ ವರನ ಮನೆಯ ಚಪ್ಪರದಡಿಗೆ ಬಂದಾಗ (ವಧುವಿನ ಕೈಯಲ್ಲಿ ಒಗ್ಗಿ ಹಾಕಿದ ಜೋಡು ತೆಂಗಿನಕಾಯಿ ಹಾಗೂ ಧಾರಾ ಸೀರೆ ಹೆಗಲಲ್ಲಿ ಇರಬೇಕು) ಮುತ್ತೈದೆಯರು ಸೋಬಾನೆಯೊಂದಿಗೆ ಕುರ್ದಿ ಆರತಿ ಎತ್ತಿ ದೃಷ್ಟಿ ತೆಗೆಯುವರು. ಕಿರಿಯರು ಕಾಲಿಗೆ ನೀರು ಹೊಯ್ದು ಕಾಲು ತೊಳೆಯುವುದು ಕ್ರಮ. ಈ ಸಂದರ್ಭದಲ್ಲಿ ಮದುಮಗ 5 ವೀಳ್ಯದೆಲೆ, 1 ಅಡಿಕೆ ಹಾಗೂ ಪಾವಲಿಯನ್ನು ಇಬ್ಬರಿಗೂ ಕಾಣಿಕೆ ಕೊಡಬೇಕು. ಅಲ್ಲಿಂದ ಮೇಲ್ಕಟ್ಟಿನಡಿಗೆ ಬಂದು ಊರುಗೌಡರು ವಧು-ವರರನ್ನು ಹಾಗೂ ಕುರುಂಟುವನ್ನು ಮನೆಯ ಯಜಮಾನರಿಗೆ ಒಪ್ಪಿಸುವರು. ಮನೆಯ ಹಿರಿಯ ಮುತ್ತೈದೆಯರು ವಧು- ವರರನ್ನು ಸಾಂಪ್ರದಾಯಿಕವಾಗಿ ಮನೆಯ ಒಳಗೆ ಬರಮಾಡಿಕೊಂಡು ಊರುಗೌಡರು ಒಕ್ಕಣೆಯೊಂದಿಗೆ ಹಸೆ ಚಾಪೆ ಮೇಲೆ ಕುಳ್ಳಿರಿಸುವರು. 5 ಜನ ಮುತ್ತೈದೆಯರಿಂದ ಹಾಲು ತುಪ್ಪದ ಶಾಸ್ತ್ರ ಮುಗಿಸಿ ಮನೆಯ ಹಿರಿಯ ಮುತ್ತೈದೆ ಕೊಟ್ಟಂತ ಹಾಲನ್ನು ಕುಡಿದು ವಧು-ವರರು 5 ವೀಳ್ಯದೆಲೆ, 1 ಅಡಿಕೆಯ ಗೌರವದೊಂದಿಗೆ ಲೋಟವನ್ನು ಹಿಂತಿರುಗಿಸುವರು. ನಂತರ ಊರುಗೌಡರು ಒಕ್ಕಣೆಯೊಂದಿಗೆ ವಧು-ವರರನ್ನು ಎಬ್ಬಿಸುವರು. ತದನಂತರ ವಧು-ವರರು ಹಿರಿಯರ ಆಶೀರ್ವಾದ ಪಡೆಯುವರು.
ನಾಗೋಳಿ ಶಾಸ್ತ್ರ : ಕುರ್ದಿ ನೀರಿನಿಂದ ತುಂಬಿಸಿದ ಹಂಡೆಯೊಳಗೆ ಹಾಕಿದ ಉಂಗುರವನ್ನು ವಧು-ವರರು ಅನ್ವೇಷಿಸಿ ಮೊದಲು ಪಡೆದವರು ಗೆದ್ದಂತೆ ಎಂದು ಭಾವಿಸುವುದು. ಆ ನಂತರ ಕುರ್ದಿ ನೀರನ್ನು ಪರಸ್ಪರ ಎರಚಿಕೊಳ್ಳುವರು. ಇದಾದ ನಂತರ ಮನೆಯ ಪಕ್ಕದಲ್ಲಿರುವ ಹಟ್ಟಿಗೆ ತೆರಳಿ ಗೊಬ್ಬರದ ಬುಟ್ಟಿಯನ್ನು ವರನು ತುಂಬಿಸಿ ವಧುವಿನ ತಲೆಯ ಮೇಲೆ ಇಡುವರು. ಅಲ್ಲೇ ಇಟ್ಟಂತ ಹಾಲೆ ಮರದ ಅಥವಾ ಮಾವಿನ ಮರದ ಗೆಲ್ಲನ್ನು ಹುಡುಗ ಹೆಗಲ ಮೇಲಿರಿಸಿಕೊಂಡು ಮುಂದೆ ಸಾಗುವರು ಹಿಂಬಾಲಿಸಿ ಬಂದಂತಹ ವಧುವು, ವರನು ಗದ್ದೆಯಲ್ಲಿ ಹಾಕಿದಂತಹ ಸೊಪ್ಪು ಗೆಲ್ಲಿನ ಮೇಲೆ ಗೊಬ್ಬರವನ್ನು ಹಾಕುವಳು.ಬರುವಾಗ ಬಾವಿಯಿಂದ ನೀರುಸೇದಿ ವಧು ತಲೆಯ ಮೇಲೆ ಹೊತ್ತುಕೊಂಡು ಬರುವಳು. ದಾರಿಯುದ್ದಕ್ಕೂ ನೆಂಟರಿಷ್ಟರು ಸೇರಿ ವಧು ತಡೆಯೊಡ್ಡಲ್ಪಟ್ಟಲ್ಲಿ ಅದನ್ನು ಬೇಧಿಸುತ್ತಾ ವರನು ವಧುವನ್ನು ಮನೆಗೆ ಕರೆತರುವನು. ವಧುವು ತಂದ ನೀರನ್ನು ಅಂದಿನ ಭೋಜನಕ್ಕೆ ಉಪಯೋಗಿಸುವರು.

ಪೆಟ್ಟಿಗೆ ತೆರೆಯುವ ಕ್ರಮ : ಮನೆಯವರು ಹತ್ತಿರದ ನೆಂಟರಿಷ್ಟರೆಲ್ಲ ಸೇರಿ ಪೆಟ್ಟಿಗೆ ತೆರೆದು ವಧುವಿನ ಮನೆಯಿಂದ ಏನೇನು ಕೊಟ್ಟಿರುತ್ತಾರೆಂಬ ಬಗ್ಗೆ ವೀಕ್ಷಿಸುವುದು ಕ್ರಮ.


ಮರು(ಮರಿ)ದಿಬ್ಬಣ : ಮದುವೆ ಶಾಸ್ತ್ರ ಮಗಿದ ಬಳಿಕ ವರನ ಕಡೆಯವರ ಆಹ್ವಾನದ ಮೇರೆಗೆ ವಧುವಿನ ಕಡೆಯ ನೆಂಟರಿಷ್ಟರು ಸೇರಿಕೊಂಡು ವರನ ಮನೆಗೆ ಸಮ್ಮಾನಕ್ಕೆಂದು ದಿಬ್ಬಣದಲ್ಲಿ ತೆರೆಳುವರು. ಹೀಗೆ ಬಂದ ದಿಬ್ಬಣವು ಮನೆ ಸಮೀಪ ತಲುವ ಸೂಚನೆ ದೊರೆತ ಕೂಡಲೇ ವರನ ಕಡೆಯ ಊರು ಗೌಡರ ಸಮೇತ ವರನ ಕಡೆಯವರು ಹೋಗಿ ದಿಬ್ಬಣವನ್ನು ಎದುರ್ಗೊಂಡು ಮನೆಗೆ ಬರಮಾಡಿಕೊಂಡು ಚಪ್ಪರದಡಿಯಲ್ಲಿ ಕುಳ್ಳಿರಿಸಿ ಸಿಯಾಳ, ಬೆಲ್ಲ-ನೀರು ಕೊಟ್ಟು ಸತ್ಕರಿಸುತ್ತಾರೆ. ನಂತರ ಸಮ್ಮಾನದ ಊಟ ನಡೆಯುತ್ತದೆ.

ತುಪ್ಪದ ಕಾರ್ಯಕ್ರಮ (ವಧುವಿನ ಮನೆಯಲ್ಲಿ) : 8ನೇ ದಿನದಲ್ಲಿ ಊರುಗೌಡರೊಂದಿಗೆ ವಧು-ವರರು ಪದ್ಧತಿಯಂತೆ ತುಪ್ಪದ ತಂಬಿಗೆ, ಒಗ್ಗಿ ಹಾಕಿದ 2 ತೆಂಗಿನಕಾಯಿ ಕನಿಷ್ಠ 5 ಜನ ಹಾಗೂ ಕುರುಂಟು, ನಿಶ್ಚಯಿಸಿದ ದಿನದಂದು ಮಧ್ಯಾಹ್ನದ ನಂತರ ವಧುವಿನ ಮನೆಗೆ ತೆರಳುವರು (ಕುರುಂಟುವಿಗೆ ಸಾಮಾನ್ಯವಾಗಿ ಬಟ್ಟೆ ಉಡುಗೊರೆಯನ್ನು ನೀಡುತ್ತಾರೆ) ವಧುವಿನ ಮನೆ ತಲುಪಿದ ತಕ್ಷಣ ಕುರ್ದಿ ಆರತಿಯೊಂದಿಗೆ ವಧುವಿನ ಮನೆಯವರು ಬರಮಾಡಿಕೊಳ್ಳುತ್ತಾರೆ. ಮನೆಯ ಹಿರಿಯ ಮುತ್ತೈದೆಯರು ಒಳ ಕರೆದುಕೊಂಡು ಹೋಗುತ್ತಾರೆ. ಹಸೆ ಚಾಪೆಯ ಬಲಬದಿಯಲ್ಲಿ ಇರಿಸಿದ ಮಣೆಯ ಮೇಲೆ ತುಪ್ಪದ ಚೆಂಬು, ತೆಂಗಿನಕಾಯಿ ಇರಿಸುವರು. ನಂತರ ಒಕ್ಕಣೆಯೊಂದಿಗೆ ಊರುಗೌಡರು ಹಸೆ ಚಾಪೆಯಲ್ಲಿ ಕುಳ್ಳಿರಿಸಿ ಇಬ್ಬರಿಗೂ 5 ವೀಳ್ಯದೆಲೆ, 1 ಅಡಿಕೆ ಕೊಡುವರು. ಕನಿಷ್ಠ 5 ಜನ ಮುತ್ತೈದೆಯರಿಂದ ಶೇಷ ಹಾಕಿಸಿ ಹಾಲು ತುಪ್ಪ ಕ್ರಮ ಮಾಡುತ್ತಾರೆ. ಮನೆಯ ಹಿರಿಯ ಯಜಮಾನಿ ಕುಡಿಯಲು ಹಾಲು ಕೊಡುವರು. ಹಾಲು ಕುಡಿದ ನಂತರ ಕೈಯಲ್ಲಿದ್ದ ವೀಳ್ಯದೆಲೆ, ಅಡಿಕೆಯನ್ನು ಹಾಲಿನ ಲೋಟಕ್ಕೆ ಹಾಕಿ ಹಿಂತಿರುಗಿಸಿ ಕುಳಿತಲ್ಲಿಂದಲೇ ಪಾದ ಮುಟ್ಟಿ ನಮಸ್ಕರಿಸುವರು. ಊರುಗೌಡರ ಒಕ್ಕಣೆಯೊಂದಿಗೆ ಹಸೆ ಚಾಪೆಯಿಂದ ಏಳಿಸುವರು. ನಂತರ ವಧುವಿಗೆ ಕಟ್ಟಿದ ಮುಹೂರ್ತದ ಮಣಿಯನ್ನು ಕಟ್ಟಿದವರು ಬಿಚ್ಚುವರು. ಹಿರಿಯರ ಕಾಲುಮುಟ್ಟಿ ನಮಸ್ಕರಿಸುವರು.
ಬಾಗಿಲು ತಡೆಯುವ ಕ್ರಮ:
ಹೊರಗೆ ಬರುವಾಗ ಮದುಮಗನ ಭಾವ ಮೈದುನರು ಬಾಗಿಲು ತಡೆಯುವ ಕ್ರಮವಿದೆ. ಇಲ್ಲಿ ಸೋಬಾನೆಯೊಂದಿಗೆ ಇತ್ತಂಡದಲ್ಲಿ ಪೈಪೋಟಿ ನಡೆಯುತ್ತದೆ. ಇಲ್ಲಿ ಮದುಮಗ, ಹೆಣ್ಣು ಹುಟ್ಟಿದರೆ ನಾನು ನಿಮಗೆ ಕೊಡುತ್ತೇನೆ. ಗಂಡು ಹುಟ್ಟಿದರೆ ನಿಮ್ಮ ಹುಡುಗಿಯನ್ನು ಮನೆ ತುಂಬಿಸಿಕೊಳ್ಳುತ್ತೇವೆ ಎಂದು ವಾಗ್ದಾನ ಕೊಡುವನು. ಬಾಗಿಲು ತಡೆಯುವ ಕ್ರಮ ಮುಗಿಸಿ ಹೊರಗೆ ಬಂದ ನಂತರ ಔಪಚಾರಿಕವಾಗಿ ಬಾಯಾರಿಕೆಯ ವ್ಯವಸ್ಥೆ ನಡೆಯುತ್ತದೆ.
ಕುರುಂಟು ಒಪ್ಪಿಸುವುದು:
ಕುರುಂಟುವನ್ನು ವಧುವಿನ ಊರುಗೌಡರಿಗೆ ವರನ ಕಡೆಯ ಊರುಗೌಡರು ಒಪ್ಪಿಸುವರು.ಆ ನಂತರ ಮನೆ ಯಜಮಾನ ವರನ ಕಡೆಯ ಊರುಗೌಡರಿಗೆ ತುಪ್ಪದ ತಂಬಿಗೆ ಬಿಚ್ಚಲು ಆಹ್ವಾನಿಸುತ್ತಾರೆ. ಕ್ರಮಬದ್ಧವಾಗಿ ಕಟ್ಟಿದ ತುಪ್ಪದ ತಂಬಿಗೆಯನ್ನು ವಧುವಿನ ಕಡೆಯ ಊರುಗೌಡರು ಬಿಚ್ಚಿ ವಧು-ವರರಿಂದ ನಂದಾದೀಪಕ್ಕೆ ತುಪ್ಪ ಹಾಕಿಸುವರು (ತುಪ್ಪದ ಬಾಯಿ ಕಟ್ಟಿದ್ದು ತಪ್ಪಿದಲ್ಲಿ ವರನ ಕಡೆಯಿಂದ ತಪ್ಪು ಕೇಳುವರು) ಉಳಿದ ತುಪ್ಪವನ್ನು ಆ ದಿವಸದ ಊಟಕ್ಕೆ ಬಡಿಸುವುದು ಕ್ರಮ.
ಊಟಕ್ಕೆ ವಧು-ವರರು ಹಾಗೂ ವರನ ಕಡೆಯ ಊರುಗೌಡರು, ಅಡೋಳಿ, ಕಂಚಿಮಿ ಸಹಿತ ಪೂರ್ವಾಭಿಮುಖವಾಗಿ ಚಪ್ಪರದಡಿಯಲ್ಲಿ ಕುಳಿತುಕೊಳ್ಳುವರು. ಊಟಕ್ಕೆ ಇವರಿಗೆ ವಿಶೇಷವಾಗಿ ತುದಿ ಬಾಳೆಲೆಯನ್ನು ಕೊಡಬೇಕು. ಇವರ ಎಲೆಯ ತುದಿ ಭಾಗಕ್ಕೆ ಆ ದಿನ ತಯಾರಿಸಿದ ವಿಶೇಷ ಚಟ್ನಿಯನ್ನು ಬಡಿಸಿ, ವಧುವಿನ ಸಹೋದರರು ಹಾಗೂ ಬಳಗದವರು ಒಂದು ತಂಬಿಗೆ ನೀರನ್ನು ಇಟ್ಟು ಚಟ್ನಿಯ ಹೆಸರು ಹೇಳಿ ಊಟದಿಂದ ಏಳಬೇಕು ಎಂದು ಹೇಳುವರು. ಭೋಜನವಾಗುತ್ತಿರುವಾಗಲೇ ವರನ ಕಡೆಯವರು ಚಟ್ನಿಗೆ ಬಳಕೆ ಮಾಡಿದ ಹೆಚ್ಚುವರಿ ವಸ್ತುವಿನ ಹೆಸರು ಹೇಳುವುದು ಸಾಗುತ್ತದೆ. ಹೆಸರು ಹೇಳದಿದ್ದಲ್ಲಿ ವರನ ಕಡೆಯವರು ತಪ್ರೊಪ್ಪಿಕೊಂಡು ಬೋಜನದಿಂದ ಏಳುವರು. ಹಿಂದಿನ ಕಾಲದಲ್ಲಿ ಆ ದಿನ ರಾತ್ರಿ ಅಲ್ಲೇ ತಂಗಿದ್ದು ಮರುದಿನ ಹೊರಡುವುದು ಕ್ರಮ.
ವರನ ಮನೆಗೆ ಹೊರಡುವ ಮೊದಲು ಊರುಗೌಡರು ವಧು-ವರರನ್ನು ಮನೆಯ ಒಳಗಡೆ ಹಸೆ ಚಾಪೆಯ ಮೇಲೆ ಕುಳ್ಳಿರಿಸುತ್ತಾರೆ. [ತುಪ್ಪದ ತಂಬಿಗೆಗೆ ಕಲಸಿದ ಸಿಹಿ ಅವಲಕ್ಕಿ (ಅವಲಕ್ಕಿ+ಬಾಳೆಹಣ್ಣು+ಬೆಲ್ಲ) ಮತ್ತು 5 ವೀಳ್ಯದೆಲೆ, 1 ಅಡಿಕೆ ಹಾಕಿ ಬಾಯಿ ಕಟ್ಟಬೇಕು. (ತುಪ್ಪದ ತಂಬಿಗೆ ಕಟ್ಟುವುದು ತಾಯಿ ಅಥವಾ ಹಿರಿಯ ಮುತ್ತೈದೆ) ] ಊರುಗೌಡ ಮನೆ ದೈವ ದೇವರುಗಳಿಗೆ ಬಿನ್ನಹ ಮಾಡಿಯಾದ ಮೇಲೆ ವಧು-ವರರು ದೀಪಕ್ಕೆ ಕೈಮುಗಿದು ಹಿರಿಯರ ಆಶೀರ್ವಾದ ಪಡೆಯುವರು. ತಾಯಿ (ಹಿರಿಯ ಮುತ್ತೈದೆಯರು) ತಂಬಿಗೆ ಎತ್ತಿ ಕೊಡುವರು. ಆನಂತರ ವಧು-ವರರನ್ನು ಮನೆಯಿಂದ ಬೀಳ್ಕೊಡುವರು ಮನೆಗೆ ಬಂದ ಮೇಲೆ ವಧು-ವರರನ್ನು ಹಸೆ ಚಾಪೆಯಲ್ಲಿ ಕುಳ್ಳಿರಿಸಿ ವರನ ಮುಹೂರ್ತದ ಮಣಿಯನ್ನು ಕಟ್ಟಿದವರು ಬಿಚ್ಚುವರು. ವರನ ಕಾಲುಂಗುರವನ್ನು ಅಡೋಳಿ ತೆಗೆಯಬೇಕು.

ಎಂಟು ಉಳಿಯುವುದು (ಕಾಲು ಬಚ್ಚೇಲು) (ಪೂರ್ವ ಪದ್ಧತಿ ಪ್ರಕಾರ ಮದುಮಗಳು ತವರು ಮನೆಯಲ್ಲಿ ಉಳಿಯುವುದು) : ವಧುವಿನ ಬಂಧು-ಬಳಗದವರು ನಿಶ್ಚಸಿದ ದಿನ ವರನ ಮನೆಗೆ ಹೋಗಿ ಅಂದು ರಾತ್ರಿ ಉಳಿದು ಮಾರನೆ ದಿನ ಮದುಮಗಳನ್ನು ಕರೆದುಕೊಂಡು ಬರುವರು. 7ನೇ ದಿನದ ನಂತರ ವರ ಮತ್ತು ವರನ ಕಡೆಯ ಸಂಬಂಧಿಕರು ಹುಡುಗಿ ಮನೆಗೆ ಬಂದು ಒಂದು ರಾತ್ರಿ ಉಳಿದುಕೊಂಡು ಹುಡುಗಿಯನ್ನು ಕರೆದುಕೊಂಡು ಹೋಗುವರು. ಉಳಿದು ಹೋಗುವಾಗ ವಧು-ವರರು ದೀಪಹಚ್ಚಿ ಕೈಮುಗಿದು ಅನುಗ್ರಹ ಬೇಡಿ ಹೋಗುವುದು ವಾಡಿಕೆ.

ಆಟಿ ಕುಳಿತುಕೊಳ್ಳುವ ಕ್ರಮ (ಕರ್ಕಾಟಕ ಮಾಸ) : ನಿಗದಿಪಡಿಸಿದ ದಿನ ವಧುವಿನ ಮನೆಯವರು ವರನ ಮನೆಗೆ ಬಂದು ಅಂದು ರಾತ್ರಿ ಉಳಿದುಕೊಂಡು ಮಾರನೇ ದಿನ ವಧುವನ್ನು ಕಳುಹಿಸಿಕೊಡುವರು. ಹೊರಡುವಾಗ ದೇವರಿಗೆ ಕೈ ಮುಗಿದು ಹಿರಿಯರ ಆಶೀರ್ವಾದ ಪಡೆಯಬೇಕು. ಮತ್ತೆ ಆಟಿ ತಿಂಗಳು ಕಳೆದ ನಂತರ ವರನ ಕಡೆಯವರು ವರನ ಸಮೇತ ದಿನ ಮುಂಚಿತವಾಗಿ ಬಂದು ಉಳಿದು ಮಾರನೇ ದಿನ ಹುಡುಗಿಯನ್ನು ಕರೆದುಕೊಂಡು ಹೋಗುವರು. (ಪೂರ್ವ ಪದ್ಧತಿ ಪ್ರಕಾರ ಈ ಮಾಸದಲ್ಲಿ ಹುಡುಗ ಹುಡುಗಿ ಮುಖ ನೋಡಬಾರದು ಎಂಬ ನಂಬಿಕೆಯಿದೆ).

ಹೊಸ ಅಕ್ಕಿ ಊಟದ ಕ್ರಮ : ವಧುವಿನ ಮನೆಯಲ್ಲಿ ಹೊಸ ಅಕ್ಕಿ ಊಟದ ಆಹ್ವಾನದ ಮೇರೆಗೆ ವಧು-ವರರು ತುಪ್ಪದ ತಂಬಿಗೆಯೊಂದಿಗೆ ವಧುವಿನ ಮನೆಗೆ ಹೋಗುವರು. ಆ ರಾತ್ರಿ ಅಲ್ಲೇ ಉಳಿದು ಹೊಸ ಅಕ್ಕಿ (ಕಾಯಿಗಂಜಿ) ಊಟದ ಕ್ರಮ ಮಾಡುತ್ತಾರೆ. ಮಾರನೇ ದಿನ ಬೆಳಿಗ್ಗೆ ಕೋಳಿ ಪದಾರ್ಥ, ನೀರು ದೋಸೆಯ ಸಮ್ಮಾನ ಉಂಡು 5 ವೀಳ್ಯದೆಲೆ. ಒಂದು ಅಡಿಕೆ ಹಾಕಿ ಇರಿಸಿದ ತುಪ್ಪದ ತಂಬಿಗೆಯೊಂದಿಗೆ ಹಿರಿಯರ ಆಶೀರ್ವಾದ ಪಡೆದು ವರನ ಮನೆಗೆ ಹಿಂತಿರುಗುವರು.

ದೀಪಾವಳಿ ಹಬ್ಬಕ್ಕೆ ಬರುವುದು :
ವಧುವಿನ ಮನೆಯಲ್ಲಿ ನಡೆಯುವ ದೀಪಾವಳಿ ಹಬ್ಬದ ಆಹ್ವಾನದ ಪ್ರಕಾರ ವಧು- ವರರು ತುಪ್ಪದ ತಂಬಿಗೆಯೊಂದಿಗೆ ವಧುವಿನ ಮನೆಗೆ ಹೋಗುವರು. ದೀಪಾವಳಿ ಹಬ್ಬದ ಆಚರಣೆಯಲ್ಲಿ ಭಾಗವಹಿಸಿ ಮಾರನೇ ದಿನ ಬೆಳಿಗ್ಗೆ 5 ವೀಳ್ಯದೆಲೆ, 1 ಅಡಿಕೆ ಹಾಕಿ ಇರಿಸಿ ತುಪ್ಪದ ತಂಬಿಗೆಯೊಂದಿಗೆ ಹಿರಿಯರ ಆಶೀರ್ವಾದ ಪಡೆದು ವರನ ಮನೆಗೆ ಹಿಂತಿರುಗುವರು. (ವಧುವರರಿಗೆ ಉಡುಗೊರೆ ನೀಡುವರು)

ಮದುವೆಗೆ ಸಂಬಂದಿಸಿದ ವಿವರಗಳು

ಹಾಲುತುಪ್ಪ ಕುಡಿಸುವ ಕ್ರಮ : (ಹಾಲು ತುಪ್ಪ ಕುಡಿಸುವವರ ಸಂಖ್ಯೆ ಬೆಸವಾಗಿರಬೇಕು) ಮೊದಲು ದೀಪಕ್ಕೆ ಅಕ್ಕಿ ಹಾಕಿ ಕೈಮುಗಿಯುವರು. ವಧು/ವರರಿಗೆ ಅಕ್ಕಿ ಶೇಷೆ ಹಾಕಿ ಅವರ ಕೈಯಲ್ಲಿದ್ದ ವೀಳ್ಯವನ್ನು ಅಕ್ಕಿ ಹರಿವಾಣದಲ್ಲಿಡಬೇಕು. ಬಲಗೈ ಉಂಗುರ ಬೆರಳನ್ನು ಒಂದು ಸಲ ನೀರಿಗೆ ಮತ್ತೊಂದು ಸಲ ಹಾಲಿಗೆ ಮುಟ್ಟಿಸಬೇಕು. (5 ಬಾರಿ ಹೀಗೆ ಮಾಡಬೇಕು) ಆಮೇಲೆ ವೀಳ್ಯವನ್ನು ತೆಗೆದು ಕೈಯಲ್ಲಿ ಕೊಡುವರು. ಹೀಗೆ ಉಳಿದ ಮುತ್ತೈದೆಯರು ಮಾಡಬೇಕು. ತಾಯಿ ಅಥವಾ ಹಿರಿಯ ಮುತ್ತೈದೆಯರು ಕುಡಿಯಲು ಹಾಲು ಕೊಡಬೇಕು. ಹಾಲು ಕುಡಿದ ಲೋಟಕ್ಕೆ ವಧುವರರು ಕೈಯಲ್ಲಿದ್ದ ಎಲೆ ಅಡಿಕೆಯನ್ನು ಎಲೆಯ ತುದಿ ಮೇಲಿರುವಂತೆ ಹಾಕಬೇಕು. ನಂತರ ಊರುಗೌಡರು ಒಕ್ಕಣೆಯೊಂದಿಗೆ...... ಹಸೆ ಚಾಪೆಯಿಂದ ಎಬ್ಬಿಸುವರು.
ಕಂಚಿನ ಅಕ್ಕಿ (ಕಲಶಗನ್ನಡಿ) : ಕಂಚಿನ ಬಟ್ಟಲಲ್ಲಿ 5 ಕುಡ್ಲೆ ಬೆಳ್ತಿಗೆ ಅಕ್ಕಿ, ಕೊಂಬಿನಗಿಂಡಿ, 5 ವೀಳ್ಯದೆಲೆ, ಒಂದು ಅಡಿಕೆ ಒಂದು ನಾಣ್ಯ, ಸುಲಿದ ಜುಟ್ಟು ಇದ್ದ ತೆಂಗಿನಕಾಯಿ, ಮರದ ಬಾಚಣಿಗೆ, ಬಿಟ್ಟೋಲೆ (ತಾಳೆಮರದ ಓಲೆಯ ಸುರುಳಿ), ಕರಿಮಣಿ, ಕನ್ನಡಿ ಇದ್ದ ಕುಂಕುಮ ಸಹಿತ ಕರಡಿಗೆ, ಸಣ್ಣ ಹಣತೆ (ದೀಪ ಉರಿಸಿರಬೇಕು) ಹಿಂಗಾರ, ಹೂ, ಮಾವಿನ ತುದಿಯನ್ನು ಇರಿಸಬೇಕು
ಕೊಂಬಿನಗಿಂಡಿ (ಕಲಶ) : ಗಿಂಡಿ ಒಳಗಡೆ ಹಾಲು, ನೀರು, ತುಪ್ಪ ಇರಬೇಕು. ಮಾವಿನ ಎಲೆ ತುದಿಯ ಮೇಲೆ ಬರುವಂತೆ ಹಿಂಗಾರ ಮತ್ತು ತೆಂಗಿನ ಕಾಯಿಯೊಂದಿಗೆ ಗಿಂಡಿಯಲ್ಲಿಡುವುದು.
ಕಂಚಿಮೆ :- ವಧು-ವರನ ಸಹೋದರಿಯರು ಕಂಚಿಮೆಯಾಗಿರುತ್ತಾರೆ. ಕೈ ತುಂಬಾ ಬಳೆ ತೊಟ್ಟು ಹಣೆಗೆ ತಿಲಕವಿಟ್ಟು, ಹೂ ಮುಡಿದು ಸಿಂಗಾರದೊಂದಿಗೆ ಹಿಂದೂ ಸಂಸ್ಕೃತಿಯ ಉಡುಗೆ ತೊಡುಗೆಯೊಂದಿಗೆ ಕಂಚಿಮೆ ಇರಬೇಕು. ಕಂಚಿನ ಅಕ್ಕಿಯನ್ನು (ಕಳಶಕನ್ನಡಿ) ಬಹಳ ಜಾಗೃತೆಯಿಂದ ಹಿಡಿದುಕೊಳ್ಳಬೇಕು, ಉರಿಸಿದ ದೀಪ ನಂದದಂತೆ ನೋಡಿಕೊಳ್ಳಬೇಕು.
ಮುಹೂರ್ತದ ಮಣಿ (ಚಿನ್ನದ ಸರ) : ಮುಹೂರ್ತದ ಮಣಿಯನ್ನು ಎಣ್ಣೆ ಅರಶಿನಕ್ಕೆ ಮೊದಲು ಊರುಗೌಡರು/ ಸೋದರಮಾವ ಕಟ್ಟಬೇಕು. ಮುಹೂರ್ತದ ಮಣಿಯನ್ನುಗುರುಹಿರಿಯರ ನೆನಪಿಸಿಕೊಂಡು ಮೇಲ್ಕಟ್ಟಿನಡಿಯಲ್ಲಿ ಕಟ್ಟಬೇಕು. ಮುಹೂರ್ತದ ಮಣಿಯನ್ನು ಕಟ್ಟುವುದು ಮದುವೆ ಕಾರ್ಯದ  ಆರಂಭದ ಸಂಕೇತವಾಗಿರುತ್ತದೆ. ಮಣಿಕಟ್ಟಿದ ಮೇಲೆ ವಧು-ವರರು ಮದ್ದುಮಾಂಸಾದಿಗಳನ್ನು ಸೇವನೆ ಮಾಡಬಾರದು. ಪೂರ್ವ ಪದ್ಧತಿ ಪ್ರಕಾರ ಮದುವೆಯ ನಂತರ 8 ದಿನಕ್ಕೆ ಸರಿಯಾಗಿ ವಧುವಿನ ಮನೆಗೆ ತುಪ್ಪ ತೆಗೆದುಕೊಂಡು ಹೋಗಿ  ಹಸೆ ಚಾಪೆಯಲ್ಲಿ ಕುಳ್ಳಿರಿಸಿ ಹಾಲು ತುಪ್ಪ ಶಾಸ್ತ್ರ ಮುಗಿಸಿ ಹಸೆ ಚಾಪೆಯಿಂದ ಏಳುವ ಮೊದಲು ವಧುವಿನ ಮುಹೂರ್ತದ ಮಣಿಯನ್ನು ಬಿಚ್ಚಿಸುವರು. ವರನ ಮುಹೂರ್ತದ ಮಣಿಯನ್ನು ವಧುವಿನ ಮನೆಯ ತುಪ್ಪ ಶಾಸ್ತ್ರ ಮುಗಿಸಿ ವರನ ಮನೆಗೆ ಬಂದ ಮೇಲೆ ಹಸೆ ಚಾಪೆಯಲ್ಲಿ ಕುಳ್ಳಿರಿಸಿ ಮುಹೂರ್ತದ ಮಣಿಯನ್ನು ಮತ್ತು ವರನ ಕಾಲುಂಗುರವನ್ನು ಅಡೋಳಿ ತೆಗೆಯಬೇಕು. ಅಲ್ಲಿವರೆಗೆ ವಧು-ವರರ ಪ್ರಥಮ ಸಮಾಗಮ ಆಗುವಂತಿಲ್ಲ.

ಬಾಸಿಂಗ :

1 ಎಸಳು ಪಿಂಗಾರವನ್ನು 8ರ ಆಕೃತಿಯಲ್ಲಿ ಮಡಚಿ ನೂಲಿನಿಂದ ಸುತ್ತಿ ಕಟ್ಟಿ ಸುವುದು.

ಪಟ್ಟ : (ತೆಂಗಿನ ಅಥವಾ ತಾಳೆಯ ಒಂದು ಗರಿ) ಒಲಿಯ 8 ರ ಆಕೃತಿಯಲ್ಲಿ ನೂಲಿನ ಎರಡೂ ಬದಿಗೆ ಕಟ್ಟಬೇಕು .ಬಲ ಬದಿಯಲ್ಲಿ ಸೂರ್ಯ, ಎಡಬದಿಯಲ್ಲಿ ಚಂದ್ರನ ಚಿತ್ರವಿರಬೇಕು.

ಕುರುಂಟು:
ಹೆಣ್ಣು ಒಪ್ಪಿಸಿ ಕಳಿಸುವಾಗ ಮದುಮಗಳ ಜೊತೆ ತುಪ್ಪ ತರುವಲ್ಲಿವರೆಗೆ ಇರುವ ಸಂಗಾತಿ. (ಮದುಮಗಳ ಕಿರಿಯ ಸಹೋದರಿ ಅಥವಾ ಸಹೋದರ, ಯಾರೂ ಇಲ್ಲದ ಪಕ್ಷದಲ್ಲಿ ಪ್ರಾಯದ ಹೆಂಗಸರು ಹೋಗಬಹುದು) ಕುರುಂಟುವಿಗೆ ವರನ ಮನೆಯಲ್ಲಿ ಸಾಮನ್ಯವಾಗಿ ಹೊಸಬಟ್ಟೆ ಉಡುಗೊರೆ ನೀಡಬೇಕು.

ಕೊಡಿಯಾಳು : ವರನ ಕಡೆಯ ಪ್ರತಿನಿಧಿ

ಗಂಗೆ ಪೂಜೆ ಕ್ರಮ : ಒಲಿಯ ಹೊಸ ಚಾಪೆ, 5 ತುದಿ ಬಾಳೆ ಎಲೆ, ಒಂದು ತೆಂಗಿನಕಾಯಿ, ಒಂದು ಚಿಪ್ಪು ಬಾಳೆಹಣ್ಣು, ಒಂದು ಅಚ್ಚು ಬೆಲ್ಲ, ಅವಲಕ್ಕಿ. ಕತ್ತಿ, 5 ಕಲಶದ ಚೆಂಬು, ಒಂದು ಬಿಂದಿಗೆ, ನೀರು, ಸಿದ್ಧಪಡಿಸಿದ ಕಂಚಿನಕ್ಕಿ, ಊದುಬತ್ತಿ.

ಕಲಶ : ಕಲಶದ ಒಳಗೆ ನೀರಿರಬೇಕು. 3 ಎಲೆಯಿರುವ ಹಲಸು ಹಾಗೂ ಮಾವಿನ ತುದಿಗಳು ಮತ್ತು ಅದರೊಳಗೆ 5 ವೀಳ್ಯದೆಲೆ, 1 ಅಡಿಕೆ ಇರಬೇಕು.

ಮದುಮಗ (ಳು) ಎಣ್ಣೆ ಅರಸಿನ ನಂತರ ಸ್ನಾನ ಮಾಡಿ ಸಿಂಗರಿಸಿಕೊಂಡು ಕಂಚಿನಕ್ಕಿ ಸಮೇತ ಮೊದಲೇ ಗೊತ್ತುಪಡಿಸಿದ ಬಾವಿಕಟ್ಟೆ ಅಥವಾ ತೆಂಗಿನಮರ (ಫಲಬರುವ ಮರ)ಕ್ಕೆ ಪೂರ್ವಾಭಿಮುಖವಾಗಿ ಚಾಪೆ ಹಾಸಿ ಅದರ ಮೇಲೆ ಕಂಚಿನಕ್ಕಿ ಇಟ್ಟು ಕೊಡಿ ಬಾಳೆ ಎಲೆ ಹಾಕಿ ಅವಲಕ್ಕಿಯನ್ನು ಸಿದ್ಧಪಡಿಸಿ ನಂತರ ಮದುಮಗ(ಳು) 5 ಎಲೆ ಹಾಕಿ ಸಿದ್ಧಪಡಿಸಿದೆ ಅವಲಕ್ಕಿ, ಬೆಲ್ಲವನ್ನು ಬಡಿಸಿ. ಬಾಳೆಹಣ್ಣು ಇಟ್ಟು, ಕಾಯಿ ಒಡೆದು ಎರಡು ಎಲೆಗೂ ಕಾಯಿ ಗಡಿ ಇಟ್ಟು ಊದುಬತ್ತಿಯಿಂದ ಆರತಿ ಮಾಡಿ ಕೈಮುಗಿದು ಎಲ್ಲರೂ ಮೂರು ಅಥವಾ ಐದು ಸುತ್ತು ಬಂದು ಮದುಮಗ(ಳು) ಕಾಯಿ ಗಡಿ ಇದ್ದ ಎಲೆಯನ್ನು ಗಂಡು ಮಗುವಿಗೂ ಇನ್ನೊಂದನ್ನು ಹೆಣ್ಣುಮಗುವಿಗೆ ಕೊಡುವುದು ಮತ್ತೆ ಎಲ್ಲರೂ ಪ್ರಸಾದ ಹಂಚಿ ತೆಂಗಿನ ಮರಕ್ಕೆ ನೀರು ಹೊಯ್ದು ಚಪ್ಪರದ ಅಡಿಗೆ ಬರುವುದು. (ಸೋಬಾನೆ ಹೇಳಬೇಕು)

ವೀಳ್ಯ ಶಾಸ್ತ್ರದ ಕಾರ್ಯದಲ್ಲಿ ಸಮಸ್ತರಲ್ಲಿ ಕೇಳಿ ವೀಳ್ಯ ಕಟ್ಟುವಾಗ ಹೇಳುವ ಕ್ರಮ

ಹತ್ತು ಕುಟುಂಬ ಹದಿನೆಂಟು ಗೋತ್ರದ ಬಂಧು, ಬಾಂಧವರು, ನೆಂಟರಿಷ್ಟರು, ಗುರುಮನೆ ಕಟ್ಟೆಮನೆ, ಸೀಮೆಮನೆ, ಮಾಗಣೆಮನೆ ಸಮಸ್ತರಲ್ಲಿ ಕೇಳಿ ...... ಗೋತ್ರದ ಹೆಸರಿನ ವರನಿಂದ------ ಗೋತ್ರದ----- ಹೆಸರಿನ ವಧುವಿಗೆ ಸ್ವಜಾತಿ ಬಾಂಧವರ ಸಮ್ಮುಖದಲ್ಲಿ ವೀಳ್ಯ ಎತ್ತಿ ಕೊಡುತ್ತೇವೆ (ಕಟ್ಟುತ್ತೇವೆ)) ಎಂದು ಹೇಳುವರು. ಆಗ ಉಳಿದವರು ಒಳ್ಳೆ ಕಾರ್ಯ ಎಂದು ಗಟ್ಟಿಯಾಗಿ ಹೇಳುವರು.

{ಅರಮನೆತಕಲ್, ಕಿರುಮನೆತಕ್‌ಲ್ ಶೃಂಗೇರಿ ಗುರುಮಠತಕುಲೆಡ ಪಡ್ಡಾಯಿ ಒರುಂಬೊ ಮಾಗಣೆ ಮೂಡಾಯಿ ಒರುಂಬೊ ಮಾಗಣೆ ಪತ್ತಪ್ಪೆ ಬಾಲೆಲು ಪದಿನೆಣ್ಣ ಬರಿ ಬಂದಿಲೆಡಲ ಇತ್ತಿ ದಿಬ್ಬಣೆರೆಡಲ ಬತ್ತಿ ದಿಬ್ಬಣೆರೆಡಲ ಸಕಲ ಸಮಸ್ತರೆಡಲ ಆಣ್‌ಗ್ಲ- ಪೊಣ್ಣಗ್‌ಲ ವೀಳ್ಯ ಕಟ್ಟಿಪೆ ಪನ್ಸೆ‌ರ್ ಆಗ ಉಳಿದವರು ಎಡ್ಡೆ ಪನ್ನೆರೆ ಎಂದು ತುಳುವಿನಲ್ಲಿ ಹೇಳುವರು.}

ಗುರು ಕಾರಣಕ್ಕೆ ಬಡಿಸುವ ಕ್ರಮ

ಮದುವೆಗೆ ಮೊದಲು ಗುರು ಕಾರಣಕ್ಕೆ ಬಡಿಸುವ ಕ್ರಮವಿದೆ. ತರವಾಡು ಮನೆಗಳಲ್ಲಿ ಕಾರಣಕ್ಕೆ ವಾರ ಮುಂಚಿತವಾಗಿ ಮಾಡಬಹುದು.

ಮಣೆ ಮೇಲೆ ದೀಪ ಹಚ್ಚಿಡಬೇಕು. ಕಡ್ಡಿ ಉರಿಸಿಟ್ಟು ತೇದ ಗಂಧವನ್ನು ಬಾಳೆಲೆಯಲ್ಲಿಡಬೇಕು. ಬಾಳೆಲೆಯನ್ನು ಒಂದರ ಮೇಲೊಂದು ಇಟ್ಟು ನೀರು ಹಾಕಿ ಬಾಳೆಲೆ ಉಜ್ಜಿ 5 ನೀರು ದೋಸೆ ಮತ್ತು ಹೆಂಟೆ ಕೋಳಿ ಸಾಂಬಾರಿನ ಮುಖ್ಯ ಭಾಗಗಳನ್ನು ಬಡಿಸಬೇಕು. ಅದಕ್ಕೆ 5 ವೀಳ್ಯದೆಲೆ 1 ಅಡಿಕೆ ನೆನೆಬತ್ತಿ ಉರಿಸಿ ಗಂಧ ಸಿಂಪಡಿಸಿ ಬಳಿಕ ಪ್ರಾರ್ಥನೆ ಮಾಡಿಕೊಳ್ಳಬೇಕು ಭಿನ್ನ ಮಾಡುವುದು.

"ನಾವು ಮದುವೆ ಕಾರ್ಯದಲ್ಲಿ ಇದ್ದೇವೆ. ಈ ಶುಭ ಕಾರ್ಯ ಮಾಡುವಂತಹ ಸಂದರ್ಭದಲ್ಲಿ ನಾವು ನಮ್ಮ ಹಿರಿಯರು ನಂಬಿಕೊಂಡು ಬಂದ ಪದ್ಧತಿ ಪ್ರಕಾರ ಮದುವೆ ಕಾರ್ಯಕ್ಕೆ ಮೊದಲು ಗುರು ಕಾರಣರನ್ನು ನಂಬಿ ಅಗೇಲು ಹಾಕಿ ಕೈ ಮುಗಿದು ಬೇಡಿಕೊಳ್ಳುವ ಪದ್ದತಿ


"ನಾವು ಮದುವೆ ಕಾರ್ಯದಲ್ಲಿ ಇದ್ದೇವೆ. ಈ ಶುಭ ಕಾರ್ಯ ಮಾಡುವಂತಹ ಸಂದರ್ಭದಲ್ಲಿ ನಾವು ನಮ್ಮ ಹಿರಿಯರು ನಂಬಿಕೊಂಡು ಬಂದ ಪದ್ಧತಿ ಪ್ರಕಾರ ಮದುವೆ ಮೊದಲು ಗುರು ಕಾರ್ನೂರನ್ನು ನಂಬಿ ಅಗೇಲು ಹಾಕಿ ಕೈ ಮುಗಿದು ಬೇಡಿಕೊಳ್ಳುವ ಪದ್ದತಿ

ಹಾಗೆ ಇಂದು ಮಿಂದು, ಕೋಳಿ ಕೊಂದು ಅಡಿಗೆ ಮಾಡಿ ಅಗೇಲು ಹಾಕಿದ್ದೇವೆ. ಮಿಂದ ನೀರಿನಲ್ಲಿ ಕೊಂದ ಕೋಳಿಯಲ್ಲಾಗಲಿ ಮಾಡಿದ ಅಡಿಗೆಯಲ್ಲಿ ಹಾಕಿದ ಅಗೇಲಿನಲ್ಲಿ ಸಾವಿರ ತಪ್ಪುಗಳಿದ್ದರೂ ಅದನ್ನೆಲ್ಲ ಒಪ್ಪು ಮಾಡಿಕೊಂಡು ಈ ಮದುವೆ ಕಾರ್ಯದಲ್ಲಿ ಏನೊಂದು ಕುಂದು ಕೊರತೆಗಳು ಬಾರದಂತೆ ಈ ಮದುಮಕ್ಕಳ ಮುಂದಿನ ದಾಂಪತ್ಯ ಜೀವನವು ಸುಖಮಯವಾಗಿಯೂ ಬಂದಂತಹ ಕನ್ಯೆ ನಮ್ಮ ಹಿರಿಯರ ಉತ್ತಮ ಆಚಾರ ವಿಚಾರಳಿಗೆ ಹೊಂದಿಕೊಂಡು ಉತ್ತಮ ಗಂಡು ಹೆಣ್ಣು ಮಕ್ಕಳನ್ನು ಪಡೆದು ಮನೆಯ ಶ್ರೇಯಸ್ಸಿಗಾಗಿ ಎಲ್ಲರೊಂದಿಗೆ ಸಹಕರಿಸಿಕೊಂಡು ಈ ಸಂಸಾರ ಉತ್ತರೋತ್ತರ ಅಭಿವೃದ್ಧಿಗೆ ಕಾರಣವಾಗಿರುವ ಸತ್ಯ ಕೀರ್ತಿ ನಾವು ನಂಬಿ ಬ೦ದ ಗುರು ಕಾರಣರಿಗೂ 
ಮನೆದೇವರಿಗೂ ಗ್ರಾಮದೇವತೆಗೂ ಸೇರಿದ್ದು ಅಂತ ನಾವೆಲ್ಲ ಇದ್ದುಬೇಡಿಕೊಳ್ಳುವುದು

ಕುರ್ದಿನೀರು: ನೀರಿಗೆ ಸುಣ್ಣ ಮತ್ತು ಅರಸಿನ ಹುಡಿ ಹಾಕಿ ಬೆರೆಸಿದ ನೀರು